Pages

Ads 468x60px

Saturday, 2 July 2016

ಬೇಸಿಗೆಯ ಧಗೆ





ಇಂದೂ ಒಂದು ಔತಣಕೂಟಕ್ಕೆ ಹೋಗುವುದಿತ್ತು.   ಮೊನ್ನೆಯೂ ಹೋಗಲಿದ್ದಿತು,  ಆದರೆ ಹೋಗಿರಲಿಲ್ಲ.   ದಿನವೂ ಪಾಯಸ ಹೋಳಿಗೆ ಲಡ್ಡುಗಳ ಔತಣದೂಟಕ್ಕೆ ಹೋಗುವುದೆಂದರೇನು?,  ದೇಹಾಲಸ್ಯವಾದೀತು.

ಇಂದಿನದು ತಪ್ಪಿಸುವಂತಿಲ್ಲ,  ಐಪ್ಯಾಡ್ ನಲ್ಲಿ ರಿಮೈಂಡರ್ ಆ್ಯಪ್ಸ್ ಇರುವಂತೆ ಸಂಬಂಧಿತರು ಮರೆಯದ ಹಾಗೆ ಎರಡು ದಿನ ಮುಂಚಿತವಾಗಿ ಫೋನ್ ಕಾಲ್ ಮಾಡಿ  " ಕಾಗದ ತಲುಪಿದೆಯಾ..."  ಎಂದೂ ವಿಚಾರಿಸಿದ್ದರು.

" ಇವತ್ತು ಬಾಯಾರು ದೇವಸ್ಥಾನದಲ್ಲಿಯೂ ಒಂದು ಉಪನಯನ ಇದೆ,  ಅಲ್ಲಿಗೆ ಹಾಜರಿ ಹಾಕಿ ಬರ್ತೇನೆ,  ನೀನು ಹೊರಟು ಕುಳಿತಿರು.."  ನಮ್ಮೆಜಮಾನ್ರು ಅಂದಿದ್ದು.

ನಾವು ಹೋಗಬೇಕಾಗಿದ್ದ ವೇಣೂರು,  ದೀರ್ಘಪ್ರಯಾಣವಾಗಿದ್ದರಿಂದ ಬೇಗನೇ ಎದ್ದು,  ಲಘು ಉಪಹಾರವಾದ ಸಜ್ಜಿಗೆ ಉಪ್ಪಿಟ್ಟು ಮಾಡಿಟ್ಟು,  ಜರತಾರೀ ಸೀರೆಯುಟ್ಟು ಸಿದ್ಧಳಾಗಿದ್ದೂ ಆಯ್ತು.

ಕಾಫಿ ಹೀರುತ್ತ,   ತಿಂಡಿ ತಿನ್ನುತ್ತ   " ನಿನ್ನದು ಆಗ್ಲೇ ಹೊರಟಾಯ್ತಾ,  ಹಾಗಿದ್ರೆ ದೇವಸ್ಥಾನದ ಉಪನಯನಕ್ಕೂ ಒಟ್ಟಿಗೆ ಹೋಗ್ಬಿಟ್ಟು ಬರೋಣ. "  ಅಂದಾಗ,  ವ್ಯಾನಿಟಿ ಬ್ಯಾಗ್ ಹೆಗಲಿಗೇರಿಸಿ,  ಚಪ್ಪಲಿ ಎಲ್ಲಿದೆಯೆಂದು ಹುಡುಕಾಡಿ ಧರಿಸಿದ್ದೂ ಆಯ್ತು.

ಬೆಳಗಿನ ಜಾವ ಅಲ್ವೇ,  ದೇವಸ್ಥಾನದ ಸಮಾರಂಭ ಜನಸಂದಣಿ ಏನೂ ಇಲ್ಲದೆ ಬಿಕೋ ಅನ್ನುತ್ತಿತ್ತು.   

ಒಂದು ಕಡೆ ಕಾಫಿ ತಿಂಡಿ ವ್ಯವಸ್ಥೆ,  ಅಚ್ಚುಕಟ್ಟಾಗಿ ಇಡ್ಲಿ ವಡೆ, ಸಾಂಬಾರ್ ಚಟ್ಣಿ,  ಮೊಸರು ಉಪ್ಪಿನಕಾಯಿಗಳ ಸಂಗಮ,  ಚಹಾ ಕಾಫಿಗಳ ಮಿಲನ,  ಶಿರಾ ಎಂಬ ಸಿಹಿ!  ಆಹಹ...

ಸುಮ್ನೇ ಮನೆಯಲ್ಲಿ ತಿಂಡಿ ಮಾಡಿದ್ದು... ಅನ್ನಿಸದಿರದೇ,  ಆದರೂ ಹೇಳುವಂತಿಲ್ಲ,  ಈ ಭರ್ಜರಿ ಉಪಹಾರ ತಪ್ಪಿಸುವಂತಿಲ್ಲ.   ಇನ್ನೊಂದು ದೂರ ಪ್ರಯಾಣದ ಔತಣಕೂಟಕ್ಕೆ ಹೋಗಲಿದೆಯೆಂದು ಹೇಳಿ ಅಲ್ಲಿಂದ ಹೊರಟೆವು.   ವಿಟ್ಲ,  ಪುತ್ತೂರು, ಉಪ್ಪಿನಂಗಡಿ, ಗುರುವಾಯನಕೆರೆ ರಸ್ತೆಯಲ್ಲಿ ನಾವು ವೇಣೂರು ತಲಪಿದಾಗ ಮಧ್ಯಾಹ್ನ ಗಂಟೆ ಹನ್ನೆರಡಾಗಿತ್ತು.

ಮಟಮಟ ಬಿಸಿಲು,  ಶಾಮಿಯಾನ ಹಾಕಿದ್ದರು,  ಅದರೊಳಗೆ ಮತ್ತೂ ಸೆಕೆ.   ಉಪನಯನದ ಧಾರ್ಮಿಕ ವಿಧಿಗಳೆಲ್ಲ ಮುಗಿದಿವೆ,  ವಟುವಿಗೆ ಆರತಿಯೆತ್ತುವುದೊಂದೇ ಬಾಕಿ.

ಒಂದು ಆಸರಿಗೆ ಕೇಳೋರು ಇಲ್ವೇ...,  ಎಂದು ಚಡಪಡಿಸುತ್ತ ಕುಳಿತಿದ್ದಾಗ ಉಷಕ್ಕ ಓಡಿ ಬಂದು,  " ಆಸರಿಗೆ ವ್ಯವಸ್ಥೆ ಎಲ್ಲ ಆ ಕಡೆ ಇದೆ,  ಬೊಂಡ ನೀರಿನ ಶರಬತ್ತು,  ಕಬ್ಬಿನಹಾಲು... ಯಾವ್ದು ಬೇಕೋ ಅದನ್ನು ಕುಡೀ... "

ಬಿಸಿಲಿಗೆ ಎಳನೀರು ಅತ್ಯುತ್ತಮ ಅಂದ್ಬಿಟ್ಟು ಮೊದಲು ಬೊಂಡ ಜ್ಯೂಸ್ ಕುಡಿದಾಯ್ತು.   ನಿಂಬೆ ಹಣ್ಣು ಹಾಕಿದಂತಿತ್ತು,  ಬೊಂಡದ ತಿರುಳನ್ನೂ ಅರೆದು ಸೇರಿಸಿದ ಹಾಗೂ ಇದ್ದಿತು,  ಅಂತೂ ಚೆನ್ನಾಗಿಯೇ ಇತ್ತು,  ಸಕ್ಕರೆಯನ್ನೂ ಹಾಕಿರಲೇಬೇಕು,  ಐಸ್ ಕೂಡಾ ಬಿದ್ದಿತ್ತು.

ಇನ್ನು ಕಬ್ಬಿನಹಾಲಿನ ಸರದಿ,  ಕಬ್ಬಿನ ರಸ ತೆಗೆಯುವ ಗಾಣವೇ ಬಂದಿತ್ತು.   ಬೇಕೆನಿಸಿದಾಗ ಕಬ್ಬಿನಹಾಲು ಕುಡಿಯುವ ಯೋಗ.   ಸುಧರಿಕೆಯವನು ಲೋಟಗಳನ್ನು ಅಚ್ಚುಕಟ್ಟಾಗಿ ತಟ್ಟೆಯಲ್ಲಿಡುತ್ತಿದ್ದಂತೆ,  ಕಬ್ಬಿನಹಾಲು ಲೋಟಗಳಿಗೆ ತುಂಬುತ್ತಿದ್ದಂತೆ ನನ್ನ ಐಫೋನ್6 ಕ್ಲಿಕ್ಕೆಂದಿತು!



Saturday, 25 June 2016

ಬನ್ನಂಗಾಯಿ ದೋಸೆ




                                           



ಚೆನ್ನಪ್ಪ ಕೆಲಸಕ್ಕೆ ಬಾರದೇ ವಾರವಾಗಿತ್ತು.   ತೋಟದಿಂದ ಅವನೇ ಹೆಕ್ಕಿ ತಂದ ತೆಂಗಿನಕಾಯಿಗಳು ದಿನನಿತ್ಯದ ಅಡುಗೆಗೆ ಬಳಸಿ ಮುಗಿದಿವೆ.   ನೀರಾಡದ ಗೋಟುಕಾಯಿಗಳಿಂದ ಏನೂ ಉಪಯೋಗವಿಲ್ಲ.  ಹೌದೂ,  ನಮ್ಮೆಜಮಾನ್ರು ದಿನಾ ತೋಟ ಸುತ್ತುತ್ತಿರುತ್ತಾರೆ.

" ಅಡಿಕೆ ಹೆಕ್ಕೂದೂಂತ ತೋಟಕ್ಕೆ ದಿನ ಬೆಳಗಾದ್ರೆ ಹೋಗ್ತೀರಲ್ಲ,  ಬಿದ್ದಿರೋ ತೆಂಗಿನಕಾಯಿ ಕಾಣಿಸಲ್ವ? "
" ನಾಳೆ ಚೆನ್ನಪ್ಪ ಬರ್ತಾನಲ್ಲ,  ಅವನ್ಹತ್ರ ಹೇಳೂ ಕಾಯಿ ಕೊಯ್ಯಲಿಕ್ಕೆ.   ಎಲ್ಲವನ್ನೂ ನಾನೇ ನೆನಪಿಟ್ಟುಕೊಳ್ಳಲಿಕ್ಕೂ,  ಆರ್ಡರು ಮಾಡಲಿಕ್ಕೂ ಆಗುತ್ತ..? "  ಸಿಡಿಗುಟ್ಟಿದ್ರು.

ಅಂತೂ ಚೆನ್ನಪ್ಪ ಬಂದ,  ತೆಂಗಿನಕಾೖ ತೆಗೆದೂ ಕೊಟ್ಟ,  ಅವನೇ ತೋಟದಿಂದ ಹೊತ್ತೂ ತಂದ.   ನನಗೆಂದು ಬೊಂಡ ಕೆತ್ತಿಯೂ ಇಟ್ಟ.   ನಮ್ಮೆಜಮಾನ್ರು ಶೀತ ಆಗುತ್ತೇಂತ ಎಳನೀರು ಕುಡಿಯುವವರಲ್ಲ,  ಮಕ್ಕಳಿಬ್ಬರೂ ಮನೆಯಲ್ಲಿಲ್ಲ.

ಎಳನೀರು ಕುಡಿಯುತ್ತಿದ್ದಂತೆ ನಾಳೆ ಬೊಂಡ ದೋಸೆ ಮಾಡೋದು ಎಂದು ತೀರ್ಮಾನಕ್ಕೆ ಬಂದಾಯಿತು.   " ನೀವು ಕುಡಿದದ್ರಲ್ಲಿ ಬೊಂಡದ ತಿರುಳು ಏನೂ ಇಲ್ಲ ಅಕ್ಕ,  ಇಲ್ಲಿ ಬನ್ನಂಗಾಯಿ ಇದೇ.. " ಎಂದ ಚೆನ್ನಪ್ಪ ತೆಂಗಿನಕಾಯಿ ರಾಶಿಯಿಂದ ಬನ್ನಂಗಾಯಿ ಆರಿಸಿ ತೆಗೆದು ಸುಲಿದಿಟ್ಟ.


     


 ಬನ್ನಂಗಾಯಿ ಅಂದ್ರೇನೂ?
ಬನ್ನಂಗಾಯಿ ಎಂದರೆ ಅದು ಎಳನೀರೂ ಆಗಿರುವುದಿಲ್ಲ,   ತೆಂಗಿನಕಾಯಿ ಎಂದು ಹೆಸರಿಸಲೂ ಸಾಧ್ಯವಾಗದು.   ಎಳನೀರಿನಲ್ಲಿ ತಿರುಳು ಏನೂ ಇಲ್ಲವೆಂದು ಚೆನ್ನಪ್ಪ ಆಗಲೇ ಹೇಳಿದನಲ್ಲ,  ಒಂದು ಪಕ್ಷ ತಿರುಳು ಇದ್ದರೂ ಚಮಚಾದಲ್ಲಿ ತೆಗೆದು ತಿನ್ನಬಹುದಾಗಿದೆ.  ತೆಂಗಿನಕಾಯಿ ಆಗುವ ಮೊದಲ ಹಂತದ ಅರೆ ಬಲಿತ ತೆಂಗಿನಕಾಯಿ ಎಂದೂ ಅರ್ಥೈಸಬಹುದಾದ ಈ ಬನ್ನಂಗಾಯಿಯಿಂದ ಸೊಗಸಾದ ದೋಸೆ ಮಾಡೋಣ.   ಬನ್ನಂಗಾಯಿ ತುರಿಯನ್ನು ಅಕ್ಕಿಯೊಂದಿಗೆ ಅರೆದು ನೀರುದೋಸೆಯಂತೆ ಎರೆದರಾಯಿತು.

ದೋಸೆ ಮಾಡುವುದೆಂತು?
ತೆಂಗಿನತುರಿಯಂತೆ ಕಂಡರೂ ಚಟ್ಣಿಗಾಗಲೀ,  ಸಾಂಬಾರಿನ ಮಸಾಲೆ ಅರೆದರೂ ಚೆನ್ನಾಗಿರುವುದಿಲ್ಲ,  ಏನೋ ಒಂಥರಾ ಹಸಿ ವಾಸನೆ ಬಂದೀತು.  ಇದೇ ತುರಿಯಿಂದ ದೋಸೆ ಮಾಡಿದ್ರಾ,  ತೆಂಗಿನ ತಾಜಾ ಸುಗಂಧ ಹೊಂದಿದ ದೋಸೆ ನಿಮ್ಮದು.   ಅಪ್ಪಟ ತೆಂಗಿನ ಸುವಾಸನೆಯ ಈ ದೋಸೆಗೆ ಉದ್ದು, ಮೆಂತೆ ಇತ್ಯಾದಿಯಾಗಿ ಏನೂ ಹಾಕಬೇಕಾಗಿಲ್ಲ.

ಒಂದು ಬನ್ನಂಗಾಯಿಯ ತುರಿ + 2 ಪಾವು ಬೆಳ್ತಿಗೆ ಅಕ್ಕಿ,  ಇದು ಅಳತೆ.   
ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ.   ಮುಂಜಾನೆಯ ದೋಸೆಗಾಗಿ ರಾತ್ರಿ ಮಲಗುವ ಮುನ್ನ ಅರೆಯಿರಿ,  ಹುದುಗು ಬರಬೇಕೆಂದೇನೂ ಇಲ್ಲ.

ದಪ್ಪ ಹಿಟ್ಟನ್ನು ಕಾವಲಿಯಲ್ಲಿ ತೆಳ್ಳಗಾಗಿ ಹಚ್ಚುವ ಚಾಕಚಕ್ಯತೆ ಇದ್ದಲ್ಲಿ ಆ ಥರ ದೋಸೆ ಹಚ್ಚಿರಿ.
ತುಸು ನೀರುನೀರಾದ ಹಿಟ್ಟನ್ನು ನೀರುದೋಸೆಯಂತೆ ಹಾರಿಸಿ ಎರೆಯಿರಿ.
ನಮ್ಮ ಮನೆಯ ಸದಸ್ಯರು ನೀರು ದೋಸೆಯ ಹಾಗೆ ಎರೆದದ್ದನ್ನೇ ಇಷ್ಟಪಟ್ಟು ತಿನ್ನುವವರು.   ಕಾಯಿಚಟ್ಣಿ,  ಬೆಲ್ಲದ ಜೇನುಪಾಕ ಹಾಗೂ ಗಟ್ಟಿ ಮೊಸರು ಕೂಡಿ ತಿನ್ನಲು ಸ್ವರ್ಗಸುಖ!


                                      



ಪಾಲಪ್ಪಂ
ನಾವು ಕರಾವಳಿಯವರಲ್ವೇ,  ಇಲ್ಲಿ ಅಡುಗೆಗೂ ತೆಂಗಿನಕಾಯಿಯೇ ಮೂಲಾಧಾರವಾಗಿದೆ.   ಬನ್ನಂಗಾಯಿ ದೋಸೆ ತಿಂದೆವಲ್ಲ,  ಇದೇ ಮಾದರಿಯ ಪಾಲಪ್ಪಂ ಎಂಬ ದೋಸೆ ಕೇರಳೀಯರ ಮುಂಜಾನೆಯ ತಿನಿಸು.  ಪಾಲಪ್ಪಂ ಕೇರಳದ ವಿಶೇಷ ಖಾದ್ಯಗಳಲ್ಲಿ ಒಂದಾಗಿದೆ.   ಇಲ್ಲಿ ಬನ್ನಂಗಾಯಿ ಬೇಕಾಗಿಲ್ಲ,  ಹಸಿ ತೆಂಗಿನಕಾಯಿ ಹಾಗೂ ಬೆಳ್ತಿಗೆ ಅಕ್ಕಿಯಿಂದ ಪಾಲಪ್ಪಂ ತಯಾರಿಸೋಣ.

2 ಪಾವು ಅಕ್ಕಿಯನ್ನು ಅಳೆದು,  ನೀರೆರೆದು ಚೆನ್ನಾಗಿ ತೊಳೆಯಿರಿ,  ಇದು ಮೊದಲ ಸಿದ್ಧತೆ.
ಸಂಜೆಯ ಹೊತ್ತು,  ತೆಂಗಿನ ತುರಿ ಮಾಡಿದ್ರಾ,  ನೀರು ಕೂಡಿಕೊಂಡು ಅರೆದು ಕಾಯಿಹಾಲು ತೆಗೆಯಿರಿ.

ಕಾಯಿಹಾಲು ತೆಗೆಯುವುದು ಹೇಗೆ?
ಭರ್ತಿ ಒಂದು ತೆಂಗಿನಕಾಯಿ ಅರೆದಿದ್ದೀರಲ್ಲ,   ಇದನ್ನು ಶುದ್ಧವಾದ ಒಣ ಬಟ್ಟೆಯಲ್ಲಿ ಜಾಲಿಸಿ,  ಚೆನ್ನಾಗಿ ಹಿಂಡಿದಾಗ ದಪ್ಪ ಕಾಯಿಹಾಲು ಲಭ್ಯ.

ಒಂದು ಸೌಟು ಗೋಧಿಹಿಟ್ಟು ಯಾ ಮೈದಾ ಯಾ ಚಿರೋಟಿರವೆ ಅಥವಾ ಅಕ್ಕಿಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ಬಾಣಲೆಗೆರೆದು ದಪ್ಪವಾಗುವಂತೆ ಬೇಯಿಸಿ ಇಡಬೇಕಾದ್ದು ಎರಡನೇ ಸಿದ್ಧತೆ.  ಈಗ ಬೆಂದ ಹಿಟ್ಟು ದೊರೆಯಿತು.   ನಾನು ಉಪಯೋಗಿಸಿದ್ದು ಗೋಧಿಹಿಟ್ಟು.

ಇನ್ನು ತೊಳೆದಿಟ್ಟ ಅಕ್ಕಿಯನ್ನು ಅರೆಯುವುದು,  ಅರೆಯುವಾಗ ಬೆಂದ ಹಿಟ್ಟನ್ನೂ ಕೂಡಿಸಿ ಅರೆಯಿರಿ.  ರುಚಿಗೆ ಉಪ್ಪು ಹಾಗೂ ಕಾಯಿಹಾಲನ್ನೂ ಎರೆದು ರಾತ್ರಿ ಬೆಳಗಾಗುವ ತನಕ ಮುಚ್ಚಿ ಇಡಬೇಕಾಗಿದೆ.

ಹುದುಗು ಬರಬೇಕಾಗಿರುವ ಈ ದೋಸೆಯನ್ನು ದಿಢೀರನೆ ಎರೆಯಲು ಕೇರಳ ಕ್ರಿಶ್ಚಿಯನ್ನರು ಯೀಸ್ಟ್ ಬಳಸುತ್ತಾರೆ.   ನಾವು ಈಗ ಯೀಸ್ಟ್ ಹಾಕೋದೇನೂ ಬೇಡ.  

ಯೀಸ್ಟ್ ಬಳಕೆ ಹೇಗೆ?
ಏಳೆಂಟು ಯೀಸ್ಟ್ ಕಾಳುಗಳನ್ನು ಉಗುರುಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಒಂದು ಚಮಚ ಸಕ್ಕರೆಯೊಂದಿಗೆ ನೆನೆಸಿಟ್ಟು,  ಕಾಳುಗಳು ಕರಗಿದಾಗ ಹಿಟ್ಟಿಗೆ ಸೇರಿಸಿದರಾಯಿತು.

ಮುಂಜಾನೆಯ ಹೊತ್ತು ದೋಸೆ ಎರೆಯಿರಿ,  ಬೇಕಾದಂತೆ ಚಟ್ಣಿ ಅಥವಾ ಕೂಟು ತಯಾರಿಸಿ ಸವಿಯಿರಿ. ಇದು ಕೇರಳೀಯರ ಪಾಲ್+ಅಪ್ಪಂ,  ತೆಂಗಿನಕಾಯಿ ಹಾಲು ಇಲ್ಲಿ  'ಪಾಲ್' ಆಗಿದೆ.  ದೋಸೆಯ ವೈವಿಧ್ಯಗಳು ಆಪ್ಪಂ ಎಂದು ವಾಡಿಕೆಯಲ್ಲಿ ಕರೆಯಲ್ಪಡುತ್ತವೆ,  ಊತಪ್ಪಂ,  ಉಣ್ಣಿಯಪ್ಪಂ.... ಈ ಥರ.

ದೋಸೆಗಾಗಿ,  ಪಾಯಸಕ್ಕಾಗಿ  ತೆಂಗಿನಕಾಯಿ ಹಾಲು ಬಳಸಿ ಆರೋಗ್ಯ ಲಾಭ ಪಡೆಯಿರಿ.    ತೆಂಗಿನಕಾಯಿ ಹಾಲು ಹಾಗೂ ಎಳನೀರು ಒಂದೇ ಎಂದು ತಿಳಿಯಬೇಡಿ,  ಎಳನೀರು ಎಳೆಯ ತೆಂಗಿನ ನೀರು.   ಬಲಿತ ತೆಂಗಿನಕಾಯಿಯನ್ನು ತುರಿದು,  ಅರೆದು,  ರಸ ಹಿಂಡಿ ತೆಗೆದಿದ್ದು ತೆಂಗಿನಕಾಯಿ ಹಾಲು.   ತಾಜಾ ತೆಂಗಿನಕಾಯಿ ಹಾಲು ಹಸುವಿನ ಹಾಲಿನಂತೆ ದಪ್ಪವೂ,  ಸಿಹಿಯೂ ಆಗಿದ್ದು 17% ಕೊಬ್ಬಿನಂಶವನ್ನೂ ಹೊಂದಿರುತ್ತದೆ.   ಆಯುರ್ವೇದವು ತೆಂಗಿನಕಾಯಿ ಹಾಲನ್ನು ಪರಿಪೂರ್ಣ ಹಾಗೂ ಆರೋಗ್ಯದಾಯಕ ಪೇಯವಾಗಿ ಪರಿಗಣಿಸಿದೆ.  ಪ್ರೊಟೀನ್,  ಕ್ಯಾಲ್ಸಿಯಂ,  ಖನಿಜಾಂಶಗಳೂ,  ವಿಟಾಮಿನ್ ಸಿ ಇತ್ಯಾದಿಗಳಿಂದ ಸಮೃದ್ಧವಾಗಿದೆ ತೆಂಗಿನಕಾಯಿ ಹಾಲು.


ಟಿಪ್ಪಣಿ:  ಇದು ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಮೇ, 2016

Saturday, 18 June 2016

ಸೊಳೆ ಹುಳಿಬೆಂದಿ





ಹಲಸಿನ ಹಣ್ಣಿನ ಕೊಟ್ಟಿಗೆ ನಮ್ಮ ಇಂದಿನ ಮುಂಜಾನೆಯ ತಿನಿಸು,   ಚಟ್ಣಿ,  ಉಪ್ಪಿನಕಾಯಿ,  ತುಪ್ಪ ಹಾಗೂ ಕೊಟ್ಟಿಗೆ ಸಹಿತವಾದ ಅಟ್ಟಿನಳಗೆ ಟೇಬಲ್ ಮೇಲಿಟ್ಟು  " ತಿಂಡಿಗೆ ಬನ್ರೀ.. " ಕಾಲ್ ಕೊಟ್ಟಿದ್ದೂ ಆಯ್ತು.   ನಮ್ಮೆಜಮಾನ್ರು ಮುಜಾನೆಯ ದಿನಪತ್ರಿಕೆ ಉದಯವಾಣಿ ಓದುತ್ತಿದ್ದ ಐಪ್ಯಾಡ್ ಪಕ್ಕಕ್ಕಿಟ್ಟು  " ಇವತ್ತು ಕರೆಂಟ್ ಇಡೀ ದಿನ ಇಲ್ವಂತೆ,  ಈಗ್ಲೇ ತಯಾರಾಗಿರು... " ಅಂದ್ರು.

ಯಾವತ್ತೂ ಮಳೆಗಾಲ ಬಂದ್ರೆ ಕರೆಂಟಿನ ಗೋಳು ಇದ್ದಿದ್ದೇ.  " ಅಷ್ಟೇ ತಾನೇ,  ಈಗ ಕೊಟ್ಟಿಗೆ ತಿಂದ್ಬಿಟ್ಟು ಹೋಗಿ. "   ಹಲಸಿನ ಕೊಟ್ಟಿಗೆ ತಿಂದವರಿಗೆ ಹಸಿವಿನ ಬಾಧೆ ಇಲ್ಲ,  ಮಧ್ಯಾಹ್ನದೂಟ ಹಗುರಾಗಿದ್ದರೇ ಚೆನ್ನ,  ಸಿಂಪಲ್ಲಾಗಿ ಹಲಸಿನಕಾಯಿ ಬೋಳುಹುಳಿ ಮಾಡೋಣ,  ಈ ವ್ಯಂಜನವನ್ನು ನಮ್ಮ ಕಡೆ ಸೊಳೆ ಹುಳಿಬೆಂದಿ ಅನ್ನುವ ರೂಢಿ.

ಕೊಟ್ಟಿಗೆ ತಿಂದಾಯ್ತು,   " ಇದು ಕೊಟ್ಟಿಗೆಗೆ ಹೇಳಿದಂತಹ ಹಲಸಿನಕಾಯಿ ಅಂತ ನೆನಪಿಟ್ಕೋ..."  ಘನಗಾತ್ರದ ಈ ಹಲಸಿನ ಮೊದಲ ಫಲ ಮನೆಗೆ ಬಂದಾಗ,  ಹಣ್ಣು ಸಿಹಿಯಾಗಿದೆ ಹಾಗೂ ಇದು ಬಕ್ಕೆ ಹಲಸು ಎಂದು ಸಂಭ್ರಮಪಟ್ಟಿದ್ದೂ ಆಗಿತ್ತು.   ಮೊದಲ ಫಲದ ಪಾಯಸವನ್ನೂ ಸವಿದಾಗ  " ಪಾಯಸಕ್ಕೆ ಹೇಳಿದ ಹಣ್ಣು " ಎಂಬ ಶಿಫಾರಸು ಈ ಹಣ್ಣಿನದು.   

ಪಾಯಸಕ್ಕೆ ಸೊಗಸಾದ ಹಣ್ಣು ಕೊಟ್ಟಿಗೆಗೂ ಚೆನ್ನಾಗಿದ್ದೀತು ಅಂದ್ಬಿಟ್ಟು ಮಾಡಿದ್ದು,  ಇದು ಮೂರನೇ ಬಾರಿ.    ಇಂತಿಪ್ಪ ಹಲಸಿನ ಮರವನ್ನು ನಾನು ನೋಡದಿದ್ದರೆ ಹೇಗಾದೀತು?

 "  ಹಲಸಿನ ಮರ ಕೊಳಕೆ ತೋಟದ ಆ ಮೂಲೆಯಲ್ಲಿದೇ... "  ಎಂದು ಗುಡುಗಿದ್ದೂ ಅಲ್ಲದೆ  "ಹೋಗಿ ನೋಡಿ ಗುರುತಿಟ್ಕೊಂಡು ಬಾ... " ನಮ್ಮೆಜಮಾನ್ರ ಹುಕುಂ ಆಯಿತು.

ಚೆನ್ನಪ್ಪ ಗಂಟೆ ಒಂಭತ್ತು ಆಗುತ್ತಿದ್ದಂತೆ ಬಂದ,   " ತೋಟಕ್ಕೆ ಹೋಗ್ತೀಯಾ...  ನಾನೂ ಬಂದೆ. " ಅನ್ನುತ್ತ ತೋಟದೆಡೆಗೆ ನನ್ನ ಪಯಣ ಸಾಗಿತು.   ಅವನೊಂದಿಗೆ ಹಲಸಿನ ಮರಗಳ ಸರ್ವೇ ಮಾಡುತ್ತಿದ್ದಾಗ ನೆನಪಾಗಿ,  " ಕೆರೆಯ ಆ ಬದಿಯ ರಾಗಿಮಜಲು ತೋಟದಲ್ಲಿ ಹಲಸಿನ ಮರ ಉಂಟಲ್ಲ,  ಅಲ್ಲೊಂದು ಉಂಡೆ ಹಲಸಿನ ಕಾಯಿ ಮರ... " ಅನ್ನುತ್ತಿದ್ದ ಹಾಗೆ ಚೆನ್ನಪ್ಪ ಅಂದ,  " ಅದರಲ್ಲಿ ಮೇಲಿಂದ ಕೆಳಗಿನವರೇಗೆ ಹಲಸಿನಕಾಯಿ ಉಂಟು. "
" ಅದೂ ಬೋಳು ಕಜಿಪ್ಪು ಮಾಡ್ತೀವಲ್ಲ,  ಅದಕ್ಕೆ ಫಸ್ಟಾಗ್ತದೆ,  ನೀನು ಬರುವಾಗ ಒಂದು ಕಾಯಿ ಕೊಯ್ದು ತಾ. " ಅಂದ್ಬಿಟ್ಟು ಮನೆಯ ಕಡೆ ಹೊರಟೆ.   ಅವನೂ ಬಿದ್ದ ತೆಂಗಿನಕಾಯಿಗಳನ್ನು ಹೆಕ್ಕಿ ತರಲು ಗೋಣಿಯೊಂದಿಗೆ ಮೇಲಿನ ತೋಟಕ್ಕೆ ಹತ್ತಿದ.


    


ಇವತ್ತು ಕರೆಂಟಿಲ್ಲದ ಬಾಬ್ತು ಹಲಸಿನ ಬೋಳು ಬೆಂದಿ ಯಾ ಹುಳಿ ಬೆಂದಿ ಮಾಡೋಣ.   ಚೆನ್ನಪ್ಪ ತಂದ ಉಂಡೆಹಲಸು ಮೆಟ್ಟುಗತ್ತಿಯಲ್ಲಿ ಪ್ರಹರಿಸಲ್ಪಟ್ಟು ಹೋಳು ಹೋಳಾಯಿತು,  ಹಲಸಿನ ಸೊಳೆಗಳನ್ನು ಬಿಡಿಸಿದ್ದೂ ಆಯ್ತು.   ಈ ಹಲಸಿನಲ್ಲಿ ಮಯಣವೂ ಕಡಿಮೆ,  ಗಾತ್ರದಲ್ಲೂ ಪುಟ್ಟದು,  ಬೇಳೆಯೂ ಪುಟ್ಟದಾಗಿ ಆಕರ್ಷಕವಾಗಿದ್ದಿತು.  ಆಷಾಢಮಾಸದ ಅಡುಗೆಗೆ ಬೇಕಾದೀತು ಅಂದ್ಕೊಂಡು ಬೇಳೆಗಳನ್ನೂ ಆಯ್ದು ಇಟ್ಟಾಯ್ತು.

ಹುಳಿ ಬೆಂದಿ ಮಾಡುವುದು ಹೇಗೆ?
ಬೇಳೆ, ಸಾರೆ, ಪೊದುಂಕುಳುಗಳಿಂದ ಮುಕ್ತವಾದ ಹಲಸಿನ ಸೊಳೆಗಳು,  ಅಡುಗೆಯ ತಪಲೆಯಲ್ಲಿ ಹಿಡಿಸುವಷ್ಟು.
ಹಲಸಿನ ಸೊಳೆಗಳು ಉಪ್ಪು ಕೂಡಿ ಬೇಯಲಿ.  ಕುಕರ್ ಬೇಕಾಗಿಲ್ಲ,  ಒಂದೆರಡು ಕುದಿ ಬಂದೊಡನೆ ಬೆಂದಿದೆ ಎಂದು ತಿಳಿಯಿರಿ.   
ಲಿಂಬೆ ಗಾತ್ರದ ಹುಣಸೇ ಹಣ್ಣು,  ಗಿವುಚಿ ಇಟ್ಕೊಳ್ಳಿ.
ಹತ್ತಾರು ಬೆಳ್ಳುಳ್ಳಿ ಗುದ್ದಿ ಸಿಪ್ಪೆ ತೆಗೆಯಿರಿ.
ಎರಡು ಕಣೆ ಕರಿಬೇವು ಇರಲಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ತೆಂಗಿನೆಣ್ಣೆ ತುಸು ಜಾಸ್ತಿ ಇರಲಿ,  ಬೆಳ್ಳುಳ್ಳಿ ಘಂ ಸುವಾಸನೆ ಬಂತೇ,  ಸಾಸಿವೆ ಚಟಪಟ ಅಂದಾಗ,  ಚಿಟಿಕೆ ಅರಸಿಣ,  ಕರಿಬೇವು ಬೀಳಲಿ.  ಖಾರ ಮಾಡಲಿಕ್ಕಿಲ್ಲ,  ಒಗ್ಗರಣೆಯ ಮೆಣಸು ಮಾತ್ರ ಖಾರದ ಅಂಶವಾಗಿದೆ.

ಹಲಸಿನ ಸೊಳೆಗಳು ಬೆಂದಿವೆ,  ಹುಣಸೆ ಹಣ್ಣಿನ ರಸ ಎರೆಯಿರಿ.
ಅವಶ್ಯಕತೆ ಇದ್ದಲ್ಲಿ ನೀರು ಕೂಡಿಸಿ.  ರುಚಿಗೆ ಉಪ್ಪು ಹಾಗೂ ಬೆಲ್ಲ (ಬೇಕಿದ್ದಲ್ಲಿ ಮಾತ್ರ).
ಕುದಿಸಿ, ಒಗ್ಗರಣೆ ಹಾಕುವಲ್ಲಿಗೆ ಸೊಳೆ ಹುಳಿಬೆಂದಿ ತಯಾರಾಗಿ ಬಿಟ್ಟಿತು!

ಸೊಳೆ ಹುಳಿಬೆಂದಿ ಸವಿಯುತ್ತ ಗೌರತ್ತೆಯ ಲಹರಿ ಹಿಂದಿನಕಾಲದ ಅಡುಗೆಯತ್ತ ಸರಿಯಿತು.   " ನನ್ನಮ್ಮ ಹಲಸಿನ ಹಣ್ಣಿನ ಸಾರು ಮಾಡ್ತಿದ್ರೂ.."

ನನ್ನ ಬಾಯಲ್ಲೂ ನೀರು,  "ಹೌದಾ.. ಹೀಗೆ ಹುಳಿಬೆಂದಿ ಥರಾ... ? "

" ಹಲಸಿನ  ಹಣ್ಣು ತೀರ ಸಪ್ಪೆಯಾಗಿದ್ದರೆ ಮತ್ತು ಮಳೆ ಬರುವಾಗ ಹಸಿ ಹಸಿ ಹಣ್ಣು ಬೇಡಾ ಅಂತಿದ್ರೆ ಹಣ್ಣಿನ ಸಾರು ಮಾಡೋರು ಆವಾಗ,   ನೀರು ಹಾಕಿ ಬೇಯ್ಸೋದು,  ಹುಳಿ ಗಿಳಿ ಬೇಡ,  ಬೆಲ್ಲ ಗಿಲ್ಲ ಬೇಡ,  ರುಚಿಗೆ ಉಪ್ಪು ಹಾಕ್ಬಿಟ್ಟು ಒಗ್ಗರಣೆ ಹಾಕಿದ್ರೆ ಮುಗೀತು,  ಬೆಳ್ಳುಳ್ಳಿ ಗಿಳ್ಳುಳ್ಳಿ ಏನೂ ಬೇಡಾ ತಿಳೀತಾ... "

ಅಂತೂ ಹಳೇಕಾಲದ ಹೊಸರುಚಿ ಸಿಕ್ಕಿತು.  ನಾವೂ ಮಾಡಿ ಸವಿದೂ ಆಯಿತು.  ಸಪ್ಪೆಯಾದ ಹಲಸಿನ ಸೊಳೆಗಳಿಗೂ ಸಿಹಿರುಚಿ ಬಂದಿತಲ್ಲ!

                     
   




Friday, 10 June 2016

ಮಾವಿನ ಹಣ್ಣು - ರಸಾಯಣ





                   
    

ಕಾರ್ಯನಿಮಿತ್ತ ನಮ್ಮೆಜಮಾನ್ರು ಮೈಸೂರಿಗೆ ಹೋಗಿದ್ರು.   ನಾನೂ ಹೋಗಬಹುದಿತ್ತು,   ಬೆಳ್ಳಂಬೆಳಗ್ಗೇ 4 ಗಂಟೆಗೆ ಎದ್ದು,  ಹೊರಟು,  ಕತ್ತಲಾಗುವ ಮುಂಚೆ ಮನೆ ತಲಪುವ ಸಾಹಸಕ್ಕಿಂತ ನನ್ನ ಪಾಡಿಗೆ ಮನೆಯಳಗಿರುವುದೇ ಜಾಣತನ ಅಂದ್ಬಿಟ್ಟು ಹೊರಡಲಿಲ್ಲ ಕಣ್ರೀ...

ಆಯ್ತು,  ಇವರು ಹೋದವರು ಮನೆಗೆ ವಾಪಸ್ ಆಗುವಾಗ ರಾತ್ರಿಯಾಗಿತ್ತು,   ಹೋಗಿದ್ದು ಅಕ್ಕನ ಮನೆಗೆ,  ಅಲ್ಲೇನೋ ಪೂಜೆ ಇಟ್ಕೊಂಡಿದ್ದರು.   ಪೂಜೆಯ ಪ್ರಸಾದ,   ಭೋಜನದ ಸಿಹಿ ತಿನಿಸುಗಳು ಬಂದುವು,  ಜೊತೆಗೆ ಒಂದು ಚೀಲ ತುಂಬ ಕಸಿಮಾವಿನ ಹಣ್ಣುಗಳು!

" ಇದೆಲ್ಲಿಂದ ಮಾವಿನ ಹಣ್ಣು? "
" ಅದೂ ಮೈಸೂರಿಂದ ವಾಪಸ್ ಬರೂದಕ್ಕಿಂತ ಮೊದಲು ಮಡಿಕೇರಿ ರಸ್ತೆ ಪಕ್ಕ ಗಾಡಿಗಳ ಸಾಲು ಸಾಲು...  ಗಾಡಿ ತುಂಬ ಮಾವಿನ ಹಣ್ಣು ರಾಶಿ ರಾಶಿ... "

" ಓ,  ಸರಿ..."  ಅನ್ನುತ್ತ ಮಾವಿನ ಹಣ್ಣುಗಳನ್ನು ಎತ್ತಿಟ್ಟು ,   ಎರಡ್ಮೂರು  ಹಣ್ಣುಗಳನ್ನು ಊಟದೊಂದಿಗೆ ತಿನ್ನಲು ಸಿಪ್ಪೆ ತೆಗೆದು ಹಚ್ಚಿಡಲು ಮುಂದಾಗಿದ್ದೂ ಆಯ್ತು.

ಮಾರನೇ ದಿನವೂ  ಮಾವುಗಳ ಭೋಜನ.   ನಮ್ಮವರು ಯಾವತ್ತೂ ಕಸಿಮಾವುಗಳ ಗೊಡವೆಗೇ ಹೋದವರಲ್ಲ,   ಕಾಟ್ ಮಾವಿನ ರುಚಿ ಅದಕ್ಕಿಲ್ಲ ಎಂದು ಅವರ ಅಂಬೋಣ.   ಏನು ಮಾಡೋಣಾ,  ಈ ವರ್ಷ ನಮ್ಮ ತೋಟದ ಕಾಟ್ ಹಣ್ಣುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿವೆ.  ಮರದಲ್ಲಿರುವ ಹಣ್ಣುಗಳು ತೋಟದ ಕಾಡು ಪ್ರಾಣಿಪಕ್ಷಿಗಳಿಗೆ ಬೇಡವೇ...  

ಮೂರನೇ ದಿನ,  " ಹೌದೂ,  ಹಾಗೇ ಸುಮ್ಮನೆ ತಿನ್ನುವುದಕ್ಕಿಂತ ರಸಾಯನ ಮಾಡಿದ್ರೆ ಹೇಗೆ? "  ಅನ್ನಿಸದಿರಲಿಲ್ಲ.   ಹೇಗೂ ಒಂದು ದೊಡ್ಡ ತೆಂಗಿನಕಾೖ ಸುಲಿದಿಟ್ಟಿದ್ದು ಇದೆ.   ಅದನ್ನು ಒಡೆದೇ ಸೈ.    ಸಾಂಬಾರು ಪಲ್ಯಗಳಿಗೆ ಹೆಚ್ಚೇನೂ ಕಾಯಿತುರಿ ಬೇಕಾಗುವುದಿಲ್ಲ,  ಮಿಕ್ಕುಳಿದ ಕಾಯಿತುರಿಯಿಂದ ಹಾಲು ತೆಗೆದಿಟ್ಟು ಆಯಿತು.   ಮಾವಿನ ಹಣ್ಣು ಸಿಪ್ಪೆ ತೆಗೆದು ಚಿಕ್ಕದಾಗಿ ಹಚ್ಚಿದ್ದೂ ಆಯ್ತು.  

 ರಸಾಯನಕ್ಕಾಗಿ ಮಾವಿನ ಹಣ್ಣಿನ ತುರಿ ಮಾಡೋದೂ ಒಂದು ಕಲೆ ಕಣ್ರೀ...   ಇನ್ನಿತರ ತರಕಾರಿ ಹಣ್ಣುಗಳಂತೆ ತುರಿಮಣೆಯಲ್ಲಿ ತುರಿಯಲು ಸಾಧ್ಯವಾಗದು.  ಕೈಯಲ್ಲಿ ಗಿವುಚಿ ಹಾಕೋದೂ ಕಸಿ ಮಾವಿಗೆ ಬೆಲೆ ಕೊಟ್ಟಂತಾಗದು.   ತೆಳ್ಳಗೆ ಸಿಪ್ಪೆ ಹೆರೆದು ಹರಿತವಾದ ಚಾಕುವಿನಲ್ಲಿ ಗೊರಟಿನ ಮೇಲೆ ಅಡ್ಡಡ್ಡಲಾಗಿ ,  ಉದ್ದುದ್ದವಾಗಿ ಗೆರೆ ಹಾಕಿಟ್ಟು ತುಂಡು ಮಾಡುವ ಪ್ರಾವೀಣ್ಯತೆ ಎಲ್ಲರಿಗೂ ಇರುವುದಿಲ್ಲ.  ಅಂತೂ ಮಾವಿನ ಹಣ್ಣು ಕಟ್ ಕಟ್ ಆಯ್ತು ಅನ್ನಿ,  ಕೈ ಗಾಯ ಮಾಡಿಕೊಳ್ಳದಿದ್ದರಾಯಿತು.

ಎರಡು ಚಮಚ ಎಳ್ಳು ಹುರಿದು,  ತುಸು ಗುದ್ದಿ ಹುಡಿ ಮಾಡಿದ್ರೆ ಘಂ ಪರಿಮಳ,   ಮಾವಿನ ಹಣ್ಣಿನ ತುರಿ ಕಾಯಿಹಾಲುಗಳಿಗೆ ಕೂಡಿಸಿದ್ದಾಯ್ತು.

" ಇನ್ನೇನು ಕುಡಿಯೋದಾ...? "
" ಛೆ ಎಲ್ಬಂತು,  ಸಕ್ರೆ ಹಾಕಿಲ್ಲ,   ಸಿಹಿಯಾಗುವಷ್ಟು ಸಕ್ಕರೆ ಬೀಳಲಿ ಹಾಗೂ ಕರಗಲಿ.  ಹ್ಞಾಂ,  ನೆನಪಿರಲಿ... ಕುದಿಸುವಂತಿಲ್ಲ.   ತಣ್ಣಗಾದಷ್ಟೂ ಚೆನ್ನ.   ರೆಫ್ರಿಜರೇಟರ್ ಒಳ ಗಿಟ್ಟು ಊಟದ ನಂತರ ಹಾಯಾಗಿ ಕುಡಿಯಿರಿ.

" ಹ್ಞು,  ಈ ಕಸಿಮಾವು ರಸಾಯನಕ್ಕೇ ಲಾಯಕ್ಕು. "  ಅನ್ನುತ್ತ ನಮ್ಮೆಜಮಾನ್ರು ಎರಡು ಗ್ಲಾಸ್ ತಣ್ಣನೆಯ ರಸಾಯನ ಕುಡಿದು ಮದ್ಯಾಹ್ನದ ಸವಿನಿದ್ದೆಗೆ ಅಡ್ಡಾದರು.

ತೆಂಗಿನಕಾಯಿ ಹಾಲು ಆರೋಗ್ಯಕ್ಕೆ ಉತ್ತಮ ಅಂದ್ಬಿಟ್ಟು ಹಾಗೇ ಸುಮ್ಮನೆ ಕುಡಿಯಲಾಗುವುದಿಲ್ಲ.   ಈ ಥರ ಹಣ್ಣುಗಳ ರಸಾಯನವೇ ಕಾಯಿಹಾಲಿನ ಪಾನೀಯವಾಗಿದೆ ಎಂದು ತಿಳಿದಿರಲಿ.
   



Friday, 20 May 2016

ಚಿಗುರು - ಚಟ್ಣಿ




                                     



ಹೊಸ ಸಂವತ್ಸರದ ಆಗಮನವೆಂದರೆ ಚೈತ್ರಮಾಸ,   ಎಲೆ ಉದುರಿಸಿ ಬೋಳು ಬೋಳಾದ ನಮ್ಮ ಅಂಬಟೆ ಮರದಲ್ಲೂ ಚಿಗುರು ತುಂಬಿ,  ಹೂವರಳಿ ನಳನಳಿಸುತ್ತಿರುವ ದೃಶ್ಯ.   ಪ್ರತಿ ವರ್ಷವೂ ಮಾಮೂಲಿ ಅಂತೀರಾ,   ಈ ಬಾರಿ ಮಾವಿನಕಾಯಿಗಳು ಸಾಕಷ್ಟು ಸಿಕ್ಕಿಲ್ಲ,   " ಉಪ್ಪಿನಕಾಯಿಯ ಆಸೆ ಬಿಟ್ಬಿಡು. "  ಅಂದಿದ್ದಾರೆ ನಮ್ಮೆಜಮಾನ್ರು.   ಅಂಬಟೆ ಮಿಡಿಯಾಗಿ ಸಿಗಲಿಕ್ಕೆ ಇನ್ನೂ ಒಂದೆರಡು ತಿಂಗಳಾದ್ರೂ ಬೇಕು.   ಅಲ್ಲಿಯವರೆಗೆ ಊಟದೊಂದಿಗೆ ನಂಜಿಕೊಳ್ಳಲು ಚಟ್ಣಿಯೇ ಗತಿ.   ಹೇಗೂ ದಿನನಿತ್ಯ ತೆಂಗಿನಕಾಯಿ ಒಡೆದೇ ಸಿದ್ಧವಾಗುವ ಅಡುಗೆ ನಮ್ಮದು,  ಅದರಲ್ಲೇ ಒಂದು ಚಟ್ಣಿ ಹೊಂದಿಸಲಿಕ್ಕೆ ಕಷ್ಟವೇನಿಲ್ಲ.

ಈ ದಿನ ಏನು ಚಟ್ಣಿ ಮಾಡಲೀ ಎಂಬ ಗಹನ ಚಿಂತನೆಯೊಂದಿಗೆ ತೊಂಡೆ ಚಪ್ಪರದಿಂದ ಸಿಕ್ಕಿದಷ್ಟು ತೊಂಡೆಕಾಯಿಗಳನ್ನು ಕೊಯ್ಯುತ್ತಿದ್ದಾಗ ನಾಲ್ಕಾರು ಕರಿಬೇವಿನೆಸಳು,  ಗಾಂಧಾರಿ ಮೆಣಸುಗಳೂ ಬುಟ್ಟಿಯೊಳಗೆ ಬಿದ್ದವು.   ಗಾಳಿ ಬೀಸಿದ್ರೆ ಸಾಕು,   ನೆಲ ತುಂಬ ಅಂಬಟೆ ಮರದಿಂದ ಉದುರಿದ ಹೂಗಳು!   ಚಿಕ್ಕ ಪುಟ್ಟ ಹೂಗೊಂಚಲುಗಳು...   ಒಂದು ಹೂಗೊಂಚಲನ್ನು ಆರಿಸಿ ತೆಗೆದು ಬಾಯೊಳಗಿಟ್ರೆ ಅಂಬಟೆಯ ಸಿಹಿ-ಹುಳಿ ರುಚಿ,  ವಾಹ್,  ಅಂಬಟೆಯ  ಪರಿಮಳ!   ಅಲ್ಲೊಂದು ಪುಟ್ಟ ಅಂಬಟೆ ಸಸಿ ನೆಲದಿಂದ ಮೇಲೇಳುತ್ತಿದೆ.   ಎಳೆಯ ಚಿಗುರೆಲೆಗಳು ಚಟ್ಣಿಗೆ ಲಾಯಕ್ಕು.

ತೆಂಗಿನ ತುರಿ,  ಅಂಬಟೆಯ ಚಿಗುರೆಲೆಗಳು,  ಗಾಂಧಾರಿ ಮೆಣಸು,  ರುಚಿಗೆ ಉಪ್ಪು ಸಹಿತವಾಗಿ ಅರೆಯಲಾಗಿ,  ಒಗ್ಗರಣೆಯೂ ಕೂಡಿಕೊಳ್ಳಲಾಗಿ ಚಟ್ಣಿ ಸಿದ್ಧವಾಯಿತು.


ಅಂಬಟೆಯ ಚಿಗುರೆಲೆಗಳು ತಂಬುಳಿಗೂ ಯೋಗ್ಯವಾಗಿವೆ.   ರಣ ಬೇಸಿಗೆಯಲ್ವೇ,   ಊಟದಲ್ಲಿ ವೈವಿಧ್ಯ ಇದ್ರೇನೇ ಸೊಗಸು.  

" ಹೌದೂ,  ತಂಬುಳಿಗೂ ಚಟ್ಣಿಗೂ ವ್ಯತ್ಯಾಸವೇನು? "
ತಂಬುಳಿಗೆ ಗಾಂಧಾರಿ ಮೆಣಸು  ಹಾಕುವಂತಿಲ್ಲ,  ಯಾತಕ್ಕೇಂದ್ರೆ ಇದು ತಂಪು ಹುಳಿ.  ಚಿಗುರೆಲೆಗಳನ್ನು ತುಸು ತುಪ್ಪದ ಪಸೆಯಲ್ಲಿ ಹಸಿವಾಸನೆ ಹೋಗುವಂತೆ ಬಾಡಿಸಿಕೊಳ್ಳಬೇಕಾಗುತ್ತದೆ.   ಸಿಹಿಮಜ್ಜಿಗೆ ಇಲ್ಲದೆ ತಂಬುಳಿ ಆಗದು.   ತೆಂಗಿನ ತುರಿಯೊಂದಿಗೆ ಜೀರಿಗೆ ಯಾ ಕಾಳುಮೆಣಸು ಕೂಡಿ ಅರೆಯಬೇಕಾಗುತ್ತದೆ.  ಕಾಳುಮೆಣಸು ಎಂಬ ಹೆಸರಿದ್ದರೂ ಈ ಮೆಣಸು ಶರೀರಕ್ಕೆ ತಂಪು.   ತೆಳ್ಳಗೆ ಸಾರಿನಂತೆ ನೀರು ನೀರಾದ ತಂಬುಳಿ ಸೆಕೆಗಾಲದ ಊಟಕ್ಕೆ ಸೊಗಸು.



   
 

Thursday, 12 May 2016

ಪುಟ್ಟನ ಪಾನೀಯ




          
                    



    ಅಜ್ಜನ ಮನೆಗೆ ರಜಾದಿನಗಳಲ್ಲಿ ನಲಿಯಲು ಬರುತ್ತಿದ್ದ ನಮ್ಮ ಪುಟ್ಟಣ್ಣಂದಿರೆಲ್ಲ ದೊಡ್ಡವರಾಗಿ,  ಉದ್ಯೋಗಸ್ಥರಾಗಿ ಎಲ್ಲೆಲ್ಲೋ ಬೀಡು ಬಿಟ್ಟಿದ್ದಾರೆ.  ಗೇರುಹಣ್ಣುಗಳ ಸುಗ್ಗಿಯ ಕಾಲ,  ಬೇಸಿಗೆಯ ಶಾಲಾ ರಜಾದಿನಗಳು.   ಗೇರುಹಣ್ಣುಗಳನ್ನು ಕೊಯ್ಯವವರೂ ಅವರೇ ಆಗಿದ್ದ ಕಾಲ ಅದಾಗಿತ್ತು.   ಗೇರುಮರದ ಬುಡದಲ್ಲೇ ಮಕ್ಕಳ ಆಟದ ಅಂಗಳ,  ವಸತಿ ಎಲ್ಲವೂ ಆಗಿದ್ದ ಆ ಕಾಲ ಕಳೆದೇ ಹೋಯಿತು.  

ಈಗ ನಮ್ಮ ಚೆನ್ನಪ್ಪನೇ ಗೇರುಹಣ್ಣುಗಳನ್ನು ಕೊಯ್ದು ತರುವುದು.   ಮನೆಗೆ ಇಳಿಯುವ ರಸ್ತೆ ಪಕ್ಕದಲ್ಲೇ ಒಂದು ಗೇರು ಮರ,  ಅದೂ ಚೆನ್ನಪ್ಪನೇ ನೆಟ್ಟಿದ್ದು.   " ಅಕ್ಕ,  ನೀವ್ಯಾಕೆ ಗೇರುಹಣ್ಣೂಂತ ಗುಡ್ಡೆ ಹತ್ತಿ ಸುತ್ತುವುದು?   ಇಲ್ಲಿ ಹತ್ತಿರ ಒಂದು ಮರ ಇದ್ದರೆ ಚೆಂದ. "  ಅವನ ದೂರಾಲೋಚನೆಯನ್ನು ಮೆಚ್ಚಬೇಕಾದ್ದೇ....

ಈ ದಿನ ಬುಟ್ಟಿ ತುಂಬ ಹಣ್ಣು ತಂದಿಟ್ಟಿದ್ದ.   ಒಂದೆರಡು ಹಣ್ಣು ಸಿಗಿದು ತಿನ್ನುತ್ತಿದ್ದಂತೆ ನಮ್ಮೆಜಮಾನ್ರ ನೆನಪಾಯ್ತು.    ಅವರೂ  " ಗೇರುಹಣ್ಣು ಬರೇ ಕನರು... ತಿಂದ್ರೆ ಕೆಮ್ಮು ಬರುತ್ತೆ. " ಅಂದ್ಬಿಟ್ಟು ತಿನ್ನುವ ರಗಳೆಗೇ ಬರುವವರಲ್ಲ.   ವರ್ಷಕ್ಕೊಮ್ಮೆ ಸಿಗುವ ಈ ರಸವತ್ತಾದ ಹಣ್ಣನ್ನು ಒಮ್ಮೆಯೂ ತಿನ್ನದಿದ್ದರೆ ಹೇಗೆ?

ನಾಲ್ಕಾರು ಒಳ್ಳೆಯಹಣ್ಣುಗಳನ್ನು ಆಯ್ದು,  ಬೀಜ ಬೇರ್ಪಡಿಸಿ,  ತೊಳೆದು ಒಳಗೆ ತಂದು ಮಿಕ್ಸಿಗೆ ಕೈಯಲ್ಲಿ ಸಿಗಿದು ಹಾಕಿ,   ತುಸು ನೀರೆರೆದು ಟುರ್ರೆಂದು ತಿರುಗಿಸಿ,  ಜಾಲರಿ ತಟ್ಟೆಯಲ್ಲಿ ಶೋಧಿಸಿ ಹಿಂಡಿದ್ದೂ ಆಯ್ತು.  ಸಕ್ಕರೆ ಹಾಗೂ ರುಚಿಗೆ ಉಪ್ಪು ಕೂಡಿಕೊಳ್ಳಲು ಗೇರು ಜ್ಯೂಸ್ ಸಿದ್ಧವಾಯಿತು.

" ಗೇರುಹಣ್ಣಿನ ಜ್ಯೂಸ್ ... "  ಅನ್ನುತ್ತ ಎದುರಿಟ್ಟೆ.   ಕಂಪ್ಯೂಟರ್ ಹಿಡಿದು ಕೂತಿದ್ದವರು ಏನೂ ಅನ್ನದೆ ಕುಡಿದು ಕೆಳಗಿಟ್ಟರು.   ಅಂದ ಹಾಗೆ ಗೇರು ಜ್ಯೂಸ್ ಮಾರುಕಟ್ಟೆಗೂ ಬಂದಿದೆ ಎಂದು ಓದಿದ ನೆನಪು.


                           



                            
    


ಹ್ಞಾ,  ಒಂದು ಸೂಚನೆ.   ಗೇರುಹಣ್ಣುಗಳನ್ನು ತಿನ್ನಬೇಕಾದ್ರೆ ಹಳೆಯ ಉಡುಪುಗಳನ್ನು ಧರಿಸಿರಿ.  ಯಾತಕ್ಕೇಂತ ಕೇಳ್ತೀರಾ,  ಗೇರುಹಣ್ಣಿನ ರಸದ ಕಲೆ ಬಟ್ಟೆ ಮೇಲೆ ಆಯ್ತೇ,  ಆ ಕಲೆ ಶಾಶ್ವತ ಎಂದೇ ತಿಳಿಯಿರಿ.   ಯಾವುದೇ ವಾಶಿಂಗ್ ಮೆಶಿನ್ ಅಥವಾ ಡಿಟರ್ಜೆಂಟ್ ಗೇರುಹಣ್ಣಿನ ಕಲೆ ತೆಗೆಯಲಾರದು.

ಚಿತ್ರಗಳನ್ನು ತೆಗೆದಿಟ್ಟೂ ,  ಆ ಚಿತ್ರಗಳಿಗೆ ಇನ್ನಷ್ಟು ಕಲಾತ್ಮಕ ಟಚ್ ನೀಡಿದ್ದೂ ಆಯ್ತು.   ಯಾವುದಕ್ಕೂ ಮೊದಲ ವಿಮರ್ಶಕರು ನನ್ನ ಮಕ್ಕಳು.   ಮಗನ ಬಳಿ ಮೆಸೆಂಜರ್ ಚಾಟ್ ಮಾಡ್ತಾ ನನ್ನ ಹೊಸ ಚಿತ್ರ ವಿನ್ಯಾಸದ ಬಗ್ಗೆ ಅವನ ಪ್ರಶಂಸೆಯನ್ನೂ ಗಿಟ್ಟಿಸಿದ್ದೂ ಆಯ್ತು.

Friday, 6 May 2016

ಗುಜ್ಜೆ ಪಲ್ಯ





                    



ಹಲಸಿನ ಕಾೖ ಕಾಲ ಎಂದಿನಂತೆ ಬಂದಿದೆ.   ಮೊದಲು ಸಿಗುವುದು ಗುಜ್ಜೆ ಪಲ್ಯ,  ಹತ್ತೂ ಜನ ಸೇರುವ ಸಮಾರಂಭಗಳಲ್ಲಿ ಗುಜ್ಜೆ ಪಲ್ಯಕ್ಕೆ ಆದ್ಯತೆ.  ಇದೀಗ ಏನಾಯಿತು?   ವರ್ಷಕ್ಕೊಮ್ಮೆ ಬರುವ ಹಿರಿಯರ ಶ್ರಾದ್ಧ ಎಂದಿನಂತೆ ದಿನ ನಿಗದಿಯಾಗಿ ಬಂದಿತು.   ಡಿಸೆಂಬರ್ ಕೊನೆಯ ವಾರ,  ವರ್ಷವಿಡೀ ಮನೆಯಿಂದ ಹೊರಗೆ ಇರುವ ಮನೆಯ ಮಕ್ಕಳು ಎಲ್ಲಿದ್ದರೂ ಬಂದು ಸೇರುವ ಸಂಭ್ರಮ.    ಊರಿನ ಹಿತವಾದ ವಾತಾವರಣದೊಂದಿಗೆ ಅವರವರ ಬಯಕೆಯ ತಿಂಡಿತಿನಿಸು ಇರಲೇಬೇಕು.   ಮುನ್ನಾದಿನ ರಾತ್ರಿಯೂಟಕ್ಕೂ ಗುಜ್ಜೆ ಪಲ್ಯ,  ಮಾರನೇದಿನ ತಿಥಿಯೂಟಕ್ಕೂ ಗುಜ್ಜೆ ಪಲ್ಯ.   ಅಂಗಡಿಯಿಂದ ಕೊಂಡು ತರುವ ತರಕಾರಿಗಳಲ್ಲಿ ಏನೂ ಸೊಗಸಿಲ್ಲ,  ನಮ್ಮ ಮಕ್ಕಳಿಗೆ ತೋಟದೊಳಗೆ ಬೆಳೆದ ಫಲವಸ್ತುಗಳೇ ಆಕರ್ಷಣೆ.

" ಗುಜ್ಜೆ ಅಂದ್ರೇನ್ರೀ ...? "
ಬೃಹತ್ ಫಲವಾಗಿರುವ ಹಲಸು,  ಇನ್ನೂ ಎಳೆಯದಾಗಿರುವಾಗ ಗುಜ್ಜೆ ಎಂದು ಕರೆಸಿಕೊಳ್ಳುತ್ತದೆ,  ಒಳಗೆ ಬೇಳೆ ಯಾ ಫಲದ ಯಾವುದೇ ಅಂಗಗಳು ಗೋಚರಿಸದೇ ಇರುವ ಹಂತದ ಗುಜ್ಜೆ ಕೂಡಾ ಸಾಕಷ್ಟು ದೊಡ್ಡ ಗಾತ್ರದಲ್ಲೇ ಇರುತ್ತದೆ,  ಕೇವಲ ನಾರುಯುಕ್ತವಾಗಿರುವ ಗುಜ್ಜೆ ಒಂದು ಅತ್ಯುತ್ತಮ ತರಕಾರಿಯಾಗಿದೆ.  ಕೀಟನಾಶಕದಂತಹ ರಸಾಯನಿಕಗಳ ಹಂಗು ಈ ತರಕಾರಿಗಿಲ್ಲ.   ರಸಗೊಬ್ಬರವನ್ನಾಗಲೀ,  ನೀರಾವರಿಯನ್ನೂ ಬಯಸದ ಗುಜ್ಜೆ ನಿಸರ್ಗದ ಉಚಿತ ಕೊಡುಗೆ.   ನಾರು ಪದಾರ್ಥವಾಗಿರುವ ಹಲಸಿನ ಗುಜ್ಜೆಯನ್ನು ಯಥೇಚ್ಛವಾಗಿ ತಿಂದವರೇ ಜಾಣರು.

ಅಂಗಡಿಯಿಂದ ಕೊಂಡು ತರಬೇಕಿಲ್ಲ,  ಹಲಸಿನ ಮರದಿಂದ ಗುಜ್ಜೆಯನ್ನು ತರಲು ಕಟ್ಟಾಳುಗಳೇನೂ ಆಗಬೇಕಿಲ್ಲ,  ಸಾಮಾನ್ಯ ಶ್ರಮಕ್ಕೆ ಸಿದ್ಧರಿದ್ದರೆ ಆಯಿತು.   ತೋಟದ ಬದಿಯಲ್ಲಿ ಫಲ ತುಂಬಿ ನಿಂತಿರುವ ಹಲಸಿನ ಮರದ ಬುಡಕ್ಕೆ ಹೋಗುವಾಗ ಒಂದು ಅಗಲವಾದ ಹಾಳೆ,  ಅಂದ್ರೆ ಪೇಪರ್ ಹಾಳೆಯಲ್ಲ!  ಅಡಿಕೆ ಮರದ ಹಾಳೆಯನ್ನು ಸೋಗೆಯಿಂದ ಬೇರ್ಪಡಿಸಿದ್ದು ಇರಲಿ.   ಗುಜ್ಜೆಯನ್ನು ಮರದಿಂದ ಕತ್ತರಿಸಿದಾಗ ತೊಟ್ಟಿನಿಂದ ಮಯಣ ಜಿನುಗಲು ಪ್ರಾರಂಭ,  ಅಡಿಕೆಹಾಳೆಯಲ್ಲಿಟ್ಟು ಹೊತ್ತು ತರುವುದು ಸುಲಭ ವಿಧಾನ.

ಅಡುಗೆಗೆ ಸಿದ್ಧವಾಗಿರುವ ಹಲಸು,  ready to cook ಆಗ್ಬೇಕಾದ್ರೇ ಮನೆಯಂಗಳವೇ ಗತಿ.   ಒಂದು ಮಡಲ ಚಾಪೆ,  ಅದಿಲ್ಲವಾದರೆ ಗೋಣಿ,  ನೀರು ತುಂಬಿದ ಬಕೆಟ್,  ಮೆಟ್ಟುಗತ್ತಿ ಹಾಗೂ ಕೈಗಳಿಗೆ ಸವರಿಕೊಳ್ಳಲು ತೆಂಗಿನೆಣ್ಣೆ.   ಇವಿಷ್ಟು ಕಚ್ಚಾಸಾಮಗ್ರಿಗಳು ನಮ್ಮ ಬಳಿ ಇರಬೇಕು.   ಮಯಣದೊಂದಿಗೆ ಗುದ್ದಾಟ,  ತುಸು ಶ್ರಮ ಅನಿವಾರ್ಯ.

ಸಿದ್ಧತೆ ಆಯ್ತು,   ಇನ್ನಿತರ ಘನ ತರಕಾರಿಗಳಂತೆ ನಾಲ್ಕು ಹೋಳು ಮಾಡಿದ್ರಾ,  ಹೊರಗಿನ ಸಿಪ್ಪೆ,  ಒಳಗಿನ ಮಯಣಕಾರಕ ಗೂಂಜು ತೆಗೆದ್ರಾ,  ನಾರುಯುಕ್ತ ತಿರುಳನ್ನು ಚಿಕ್ಕದಾಗಿ ಹಚ್ಚಿಕೊಳ್ಳಿ ಹಾಗೂ ನೀರು ತುಂಬಿದ ನಿರುಪಯುಕ್ತ ತಪಲೆಯಲ್ಲಿ ಹಾಕಿರಿಸಿ.   ಇದೀಗ ಅಡುಗೆಗೆ ಸಿದ್ಧವಾದ ಹಲಸು ನಮ್ಮ ಮುಂದಿದೆ.

ನಿಧಾನಗತಿಯಲ್ಲಿ ಬೇಯುವ ಹಲಸಿನ ಗುಜ್ಜೆಯನ್ನು ಕುಕ್ಕರ್ ಚೆನ್ನಾಗಿ ಬೇಯಿಸಿ ಕೊಡುತ್ತದೆ.   ಒಂದು ವಿಸಿಲ್ ಹಾಕಿದಾಗ ಗುಜ್ಜೆ ಬೆಂದಿದೆ ಎಂದು ತಿಳಿಯಿರಿ.   ಬೇಯುವಾಗ ರುಚಿಗೆ ಉಪ್ಪು ಹಾಕುವಂತೆ ಹಲಸಿನ ಯಾವುದೇ ಖಾದ್ಯವಿರಲಿ,  ಎಣ್ಣೆ ಕಡ್ಡಾಯ.   ಎಣ್ಣೆ ಮಯಣ ನಿವಾರಕ ಹಾಗೂ ಹಲಸಿನ ಮಯಣದ ಕೊಳೆ ಪಾತ್ರೆಗೆ ಅಂಟಿಕೊಳ್ಳುವುದನ್ನು ತಪ್ಪಿಸುತ್ತದೆ.  


 ಗುಜ್ಜೆ ಪಲ್ಯ ಮಾಡೋಣ. 
  
ಬಾಣಲೆಯಲ್ಲಿ ಎಣ್ಣೆ,  ತೆಂಗಿನೆಣ್ಣೆಯೇ ಆದರೆ ಉತ್ತಮ.   ಒಗ್ಗರಣೆ ಸಿಡಿಸಿ,  ಕರಿಬೇವು,  ಸಾಸಿವೆ,  ಉದ್ದಿನಬೇಳೆ,  ಒಣಮೆಣಸು ಇದೆಯಲ್ಲ,  ಚಿಟಿಕೆ ಅರಸಿಣ ಕಡ್ಡಾಯ.  ಒಗ್ಗರಣೆ ಚಟಪಟ ಎಂದಾಗ ಬೆಂದ ಗುಜ್ಜೆಯ ನೀರು ಬಸಿದು ಹಾಕಿರಿ.  ರುಚಿಗೆ ಉಪ್ಪು ಸಾಲದಿದಿದ್ದರೆ ಇನ್ನಷ್ಟು ಹಾಕಿ,   ಖಾರ ಪ್ರಿಯರಿಗೆ ಮೆಣಸಿನ ಹುಡಿ ಇದೆ.   ಬೇಕಾದ ಹಾಗೆ ರುಚಿಕಟ್ಟಾಯಿತೇ,  ಸೌಟಿನಲ್ಲಿ ಒಂದೆರಡು ಬಾರಿ ತಿರುವಿ ಉರಿ ನಂದಿಸಿ,  ಮುಚ್ಚಿ ಇಡುವುದು.

ಗುಜ್ಜೆಯಲ್ಲಿ ಎಳೆಯ ಹಲಸಿನ ಬೇಳೆ ಕಂಡಿತೇ,  ಇದೀಗ ಬೇಳೆಚಕ್ಕೆ ಎಂಬ ನಾಮಕರಣ ಹೊಂದಿದ ಹಲಸು ಆಯ್ತು.  ಬೇಳೆಚಕ್ಕೆಯ ಪಲ್ಯ ಇನ್ನೂ ರುಚಿಕರ,  ಗುಜ್ಜೆ ಪಲ್ಯ ಮಾಡಿದ ಹಾಗೇನೇ ಇದನ್ನೂ ಮಾಡುವುದು.