Thursday, 10 November 2016
Friday, 4 November 2016
Sunday, 23 October 2016
ಅವಲಕ್ಕಿ ಹಲ್ವಾ
" ಅವಲಕ್ಕೀದು ಹಲ್ವನಾ, ಬಾಳೆಹಣ್ಣಿನ ಹಾಗೆ ಕಾಣುತ್ತಪ್ಪ.. "
" ಅಲ್ಲೇ ಇರೂದು ಒಳಗುಟ್ಟು.. "
" ಹೌದಾ, ಹೇಗೆ ಮಾಡಿದ್ದೂ? "
" ಹೇಗೆ ಅಂತ ಕೇಳ್ತೀರಾ, ಯಾಕೆ ಮಾಡಿದ್ದೂ ಅನ್ನಿ. "
ಅದೇನಾಗಿತ್ತೂಂದ್ರೆ ಪತ್ತನಾಜೆ ಬಂದಿತ್ತಲ್ಲ, ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಪತ್ತನಾಜೆ ಸೇವೆ ಇದ್ದಿದ್ದರಿಂದ ಹೋಗಿದ್ದೆವು. ಪೂಜಾದಿಗಳೆಲ್ಲ ಮುಗಿದು ನಮಗೆ ಪ್ರಸಾದರೂಪವಾಗಿ ಕಲಸಿದ ಅವಲಕ್ಕಿ, ಸೀಯಾಳ, ಹಣ್ಣುಕಾಯಿ, ಹೂವು, ಗಂಧ ಎಲ್ಲ ದೊರೆಯಿತು. ಸಮಾರಾಧನೆ ಊಟವಾಗಿ ಮನೆಗೆ ಬಂದೆವು.
ಸಂಜೆವೇಳೆಗೆ ಹಿರಣ್ಯದ ಮಹಿಷಂದಾಯ ದೈವಗುಡಿಯಲ್ಲಿ ಪತ್ತನಾಜೆ ಬಾಬ್ತು ವಿಶೇಷ ಪೂಜೆ, ತಂಬಿಲಸೇವೆ, ಪ್ರಾರ್ಥನೆ ಇತ್ಯಾದಿ ಆದ ನಂತರ ಬಂದಂತಹ ಭಕ್ತಾದಿಗಳಿಗೆ ಪುನರ್ಪುಳಿ ಶರಬತ್ತು, ಕಲಸಿದ ಅವಲಕ್ಕಿ....
ದೈವಸನ್ನಿಧಿಯಲ್ಲೇ ತಿಂದು ಕಸ ಮಾಡಲಿಕ್ಕುಂಟೇ, ಪ್ರಸಾದ ಮನೆಗೆ ಬಂದಿತು.
" ನಮ್ಮ ಮನೆಯಲ್ಲಿ ಗಣಹೋಮ ಇತ್ತು. " ಅಂದ್ಬಿಟ್ಟು ಹೇಮಕ್ಕ ಬಾಳೆಲೆ ತುಂಬ ಅವಲಕ್ಕಿ ಪ್ರಸಾದ ತಂದಿಟ್ಟಿದ್ರು. ಅಷ್ಟದ್ರವ್ಯ ಎಂಬ ವಿಶೇಷಣದ ಇದನ್ನು ಅವಲಕ್ಕಿ ಕಲಸಿದ್ದು ಅನ್ನುವಂತಿಲ್ಲ, ಅಷ್ಟದ್ರವ್ಯದಲ್ಲಿ ಬೆಲ್ಲ ತೆಂಗಿನಕಾಯಿ ಅವಲಕ್ಕಿ ಮಾತ್ರವಲ್ಲ, ಒಟ್ಟಾರೆಯಾಗಿ ಎಂಟು ವಿಧ ಫಲವಸ್ತುಗಳು ಇರುತ್ತವೆ, ಅರಳು, ಎಳ್ಳು , ತುಪ್ಪ, ಕಬ್ಬು, ಬಾಳೆಹಣ್ಣು ....
ಮನೆಯಲ್ಲಿ ಮಕ್ಕಳಿದ್ದಿದ್ರೆ ಕ್ಷಣ ಮಾತ್ರದಲ್ಲಿ ತಿಂದು ಮುಗಿಸ್ತಿದ್ರು, ಈ ಅವಲಕ್ಕಿ ವೈವಿಧ್ಯಗಳನ್ನು ನಾವಿಬ್ಬರು ಎಷ್ಟು ತಿನ್ನಲಾದೀತು?
ಅದೂ ಅಲ್ಲದೆ ಸೆಕೆಗಾಲದ ಬಾಳೆಗೊನೆ ಕೂಡಾ ಹಣ್ಣಾಗಿ ಕಳಿತು, ಕುಳಿತಿದೆ. ಕೊಳೆತು ಹೋಗುವ ಮೊದಲೇ ಹಲ್ವ ಮಾಡಿ ತಿನ್ನಬೇಕಾಗಿದೆ.
ಎಂದಿನಂತೆ ಸಿಪ್ಪೆ ತೆಗೆದು ಹಣ್ಣಿನ ಒಳ್ಳೆಯ ಭಾಗ ಕಟ್ ಕಟ್ ಆಗಿ ಒಲೆಯ ಮೇಲೇರಿತು. ದಪ್ಪ ಬಾಣಲೆಗೆ ಎಳ್ಳೆಣ್ಣೆ ಸವರಿ ಒಲೆಯ ಮೇಲಿಟ್ಟರೆ ಅಡಿ ಹಿಡಿಯುವುದಿಲ್ಲ (ತಳ ಹತ್ತುವುದಿಲ್ಲ).
ಚಿಕ್ಕ ಉರಿಯಲ್ಲಿ ಆಗಾಗ ಸೌಟಾಡಿಸುತ್ತಿದ್ದ ಹಾಗೆ ತುಪ್ಪ 2 - 3 ಚಮಚ ಬಿದ್ದಿತು. ತುಪ್ಪದ ಸುವಾಸನೆಯೊಂದಿಗೆ ಬೆಂದ ಪರಿಮಳ ಬಂದಿತೇ, ಹಣ್ಣಿನ ಗಾತ್ರದಷ್ಟೇ ಬೆಲ್ಲ ಪುಡಿಪುಡಿಯಾಗಿ ಬಾಣಲೆಗೆ ಇಳಿಯಿತು.
ಬೆಲ್ಲ ಕರಗಿ ಕರಗಿ ರಸಪಾಕವಾಗುತ್ತಿದ್ದಾಗ ತಲೆಯಲ್ಲಿ ಸೂಪರ್ ಐಡಿಯಾ ಬಂದಿತು, ಮೂರು ಪ್ರತಿ ಅವಲಕ್ಕಿಗಳಿದ್ದುವಲ್ಲ, ಒಂದು ಪ್ರತಿ ಹೇಗೋ ತಿಂದು ಮುಗಿಸಿದ್ದಾಗಿತ್ತು, ಮತ್ತೊಂದು ಹಳಸಲು ಪರಿಮಳ ಬಂದಿದೆಯೆಂದು ಹೊರಗೆ ಹೋಗಿತ್ತು. ಇನ್ನೊಂದು ಉಳಿದ ಅವಲಕ್ಕಿ ಪ್ರತಿ ಚೆನ್ನಾಗಿಯೇ ಇದ್ದಿತು. ಅದನ್ನು ತಂದು ಬಾಂಡ್ಲಿಗೆ ಸುರುವಿ ಸೌಟಾಡಿಸುತ್ತಾ ಇದ್ದ ಹಾಗೆ ಗಟ್ಟಿಪಾಕ ಬಂದೇ ಬಿಟ್ಟಿತು! ಸಂಜೆಯ ಚಹಾ ಜೊತೆ ತಿನ್ನಲು ಬೇಕಾದಷ್ಟಾಯಿತು.... ನಾಲ್ಕಾರು ದಿನ ಇಟ್ಟುಕೊಳ್ಳಲೂ ತೊಂದರೆಯಿಲ್ಲ.
ಹಾಗೇ ಸುಮ್ಮನೆ ತಿನ್ನಲು ಅವಲಕ್ಕಿ ಹಾಗೂ ಬಾಳೆಹಣ್ಣು ಸೊಗಸಾಗಿಯೇ ಇರುತ್ತದೆ, ಈ ಸಂಯೋಜನೆಯ ರಸಪಾಕ ಕೂಡಾ ಚೆನ್ನಾಗಿ ಬಂದಿತ್ತು ಎಂದು ಬೇರೆ ಹೇಳಬೇಕಾಗಿಲ್ಲ. ನನ್ನದಂತೂ ಹೊಸ ಪ್ರಯೋಗ, ನೀವೂ ಮಾಡಿ ನೋಡಿ. ಹ್ಞಾಂ, ಸುಮ್ ಸುಮ್ಮನೇ ಅವಲಕ್ಕಿಗೆ ಬೆಲ್ಲ ಕಾಯಿತುರಿ ಹಾಕಿ ಕಲಸದಿರಿ. ಒಂದು ಪಾವು ಅವಲಕ್ಕಿಯನ್ನು ಹುರಿದು ಪುಡಿ ಮಾಡ್ಬಿಟ್ಟು ಬಾಳೆಹಣ್ಣಿನ ಪಾಕಕ್ಕೆ ಸೇರಿಸಿ. ದ್ರಾಕ್ಷಿ , ಗೋಡಂಬಿ, ಏಲಕ್ಕಿ ಹಾಕಿದ್ರೆ ಇನ್ನೂ ಚೆನ್ನ.
ಸಾಮಾನ್ಯ ಅಳತೆಯ ಪ್ರಮಾಣ ಹೀಗಿರಲಿ,
ಹತ್ತರಿಂದ ಹದಿನೈದು ಬಾಳೆಹಣ್ಣುಗಳು, ತೆಳ್ಳಗೆ ಕತ್ತರಿಸಿ.
ದೊಡ್ಡ ಅಚ್ಚು ಬೆಲ್ಲ, ಪುಡಿ ಮಾಡಿದ್ರಾ, ಎರಡು ಲೋಟ ತುಂಬ ಇರಲಿ.
ಎರಡರಿಂದ ಮೂರು ಚಮಚ ಸುವಾಸನೆಯುಳ್ಳ ತುಪ್ಪ.
ಒಂದು ಲೋಟ ಅವಲಕ್ಕಿ, ನಾನ್ ಸ್ಟಿಕ್ ತವಾದಲ್ಲಿ ಹುರಿದು, ಮಿಕ್ಸಿಯಲ್ಲಿ ಬೀಸಿದ್ದು.
ಮಾಡುವ ವಿಧಾನ: ಪುನಃ ಮೊದಲು ಬರೆದಿದ್ದನ್ನು ಓದಿಕೊಳ್ಳುವುದು...
Saturday, 8 October 2016
ಸೌತೇ ಕಾೖ ದೋಸೆ
" ಅಬ್ಬಾ ಏನು ಸೆಕೇ... ನೀರು ಕುಡಿದೂ ಕುಡಿದೂ ಸಾಕಾಯ್ತು."
" ಬರೇ ನೀರು ಕುಡಿದ್ರೇನು ಬಂತು, ತಂಪು ಆಹಾರ ತಿನ್ಬೇಕು..." ಅಂದ್ರು ಗೌರತ್ತೆ.
" ಬೆಳಗಾದ್ರೆ ಎದ್ದು ಐಸ್ ಕ್ರೀಂ ತಿನ್ನೂ ಅಂತೀರಾ? "
" ಹಹ... ಹಾಗಲ್ಲ ಮಾರಾಯ್ತಿ... ತಿನ್ನುವ ತರಕಾರಿ ಉಂಟಲ್ಲ, ಬದನೇಕಾಯಿ ನಂಜು, ಹಾಗಲ ಪಿತ್ತ, ಬಾಳೆಕ್ಕಾಯಿ ವಾತ ಹೀಗೆಲ್ಲ ಹೇಳ್ತಾರಲ್ಲ... ಸೌತೆಗೆ ಅಂತಹ ದೋಷ ಯಾವುದೂ ಇಲ್ಲ. ಉಷ್ಣವೂ ಅಲ್ಲ, ಶೀತವೂ ಇಲ್ಲ, ಶರೀರಕ್ಕೂ ತಂಪು ಗೊತ್ತಾ. " ಲೆಕ್ಚರ್ ಬಿಗಿದರು ಗೌರತ್ತೆ, ಮೂಲೆಯಲ್ಲಿ ಸಾಲಾಗಿ ಪೇರಿಸಿಟ್ಟಿದ್ದ ಸೌತೆಕಾಯಿಗಳನ್ನು ನೋಡುತ್ತಾ.
ಸೌತೆಕಾಯಿಗಳನ್ನು ನೆರೆಮನೆಯ ರವೀಂದ್ರನ್ ತಂದ್ಕೊಟ್ಟಿದ್ದ, ನಮ್ಮ ತೋಟದ ಕೆರೆಯಿಂದ ನೀರು ಅವನ ತರಕಾರಿ ಹಿತ್ತಿಲಿಗೆ ಹೋಗುತ್ತೆ, ಅವನೂ ಆಗಾಗ ಏನೇನೋ ತರಕಾರಿ ತಂದಿಟ್ಟಿರುತ್ತಾನೆ. ನನ್ನ ತರಕಾರಿ ಬೆಳೆ ಅಷ್ಟಕ್ಕಷ್ಟೇ, ಬದನೆಕಾಯಿ ಒಂದು ಸಾಲು ಬಿಟ್ರೆ ಮತ್ತೇನಿಲ್ಲ.
" ಹೌದೂ, ಸೌತೇದು ಹುಳಿಮೆಣಸು ಮಾಡೂ ಅಂತೀರಾ? "
" ಅಯ್ಯೋ, ಅದೆಲ್ಲ ಬೇಡ... ಪದಾರ್ಥಕ್ಕೆ ಬದನೆ ಉಂಟಲ್ಲ, ನಾಳೆ ಸೌತೆಕಾಯಿ ದೋಸೆ ಮಾಡಬಹುದಲ್ಲ. "
" ಇವತ್ತು ಉದ್ದಿನ ಕೊಟ್ಟಿಗೆ ತಿಂದಾಯ್ತು, ನಾಳೆ ಪುನಃ ಉದ್ದು ಹಾಕಿ ಸೌತೆಕಾಯಿ ದೋಸೆಯಾ... "
"ಉದ್ದು ಹಾಕ್ಬೇಡ, ಬರೇ ಅಕ್ಕಿ ಮತ್ತು ಸೌತೆ ಹಾಕಿ ಅರೆದಿಡು, ತಿಳೀತಾ... "
ಗೌರತ್ತೆ ಅಂದಂತೆ ಮೂರು ಪಾವು ಅಕ್ಕಿ ನೀರಿನಲ್ಲಿ ನೆನೆ ಹಾಕಿದ್ದಾಯ್ತು.
ಸಂಜೆಯಾಗುತ್ತಲೂ ಸೌತೆಕಾಯಿ ಸಿಪ್ಪೆ ಹಾಗೂ ಬೀಜಗಳನ್ನು ಹೊರಗೆಸೆದು ತುರಿದು ಇಟ್ಕೊಂಡಿದ್ದಾಯ್ತು.
ಬೇಸಿಗೆಯಲ್ವೇ, ಸಂಜೆಯ ವೇಳೆ ಇನ್ನೇನೋ ಕೆಲಸಗಳಿರುತ್ತವೆ. ಮುಖ್ಯವಾಗಿ ಕೈದೋಟದ ಗಿಡಗಳಿಗೆ ನೀರು ಹಾಕೋದು. ಈ ಹೊರಕೆಲಸಗಳನ್ನು ಮುಗಿಸಿ, ಒಳ ಬಂದು ಹಾಲು ಕಾಯಿಸಲಿಟ್ಟು, ಅನ್ನ ಬಿಸಿ ಮಾಡಿ, ದೇವರಿಗೊಂದು ದೀಪ ಹಚ್ಚಿಟ್ಟು, ಸ್ವಲ್ಪ ಹೊತ್ತು ಫೇಸ್ ಬುಕ್ಕು ಓದಿ, ಊಟದ ಟೇಬಲ್ ರಾತ್ರಿಯೂಟಕ್ಕೆ ತಯಾರಾಗಿ ನಿಂತಾಗ ನನ್ನ ದೋಸೆ ಅರೆಯುವ ವೇಳೆ ಬಂದಿತು.
ಅಕ್ಕಿ, ಅಂದ್ರೆ ಬೆಳ್ತಿಗೆ ಅಕ್ಕಿಯನ್ನು ಈಗ ದೋಸೆ ಅಕ್ಕಿ, ಇಡ್ಲಿ ಅಕ್ಕಿ ಎಂದು ವರ್ಗೀಕರಿಸಿ ಹೇಳುತ್ತಿರುವುದು ನನಗೂ ವಿಸ್ಮಯ ತಂದಿದೆ. ಇದೇನು ವಿಚಿತ್ರ ಅಂತಿದ್ದ ಈ ಹೊಸ ಸಬ್ಜೆಕ್ಟು, ಬೆಂಗಳೂರಿಗೆ ಹೋಗಿದ್ದಾಗ ನಿವಾರಣೆ ಆಯ್ತು. ಬೆಂಗಳೂರಿನ ನಮ್ಮದೇ ಮನೆಗೆ ಹೋಗಿದ್ದೆವು, ಪ್ರಕಾಶನ ಹೆಂಡ್ತಿ ಗೀತಾ, ಎರಡೂ ಪ್ರತಿ ಅಕ್ಕಿ ಡಬ್ಬಗಳನ್ನು ಬಿಡಿಸಿ " ಅತ್ತೇ, ಇದು ದೋಸೆ ಅಕ್ಕಿ, ಅರೆಯುವಾಗ ನೊಂಪು ನೊಂಪಾಗಿ ನುಣ್ಣಗಾಗುತ್ತೆ, ಇಡ್ಲಿ ಅಕ್ಕಿ ಉಂಟಲ್ಲ, ಎಷ್ಟೇ ಅರೆದ್ರೂ ತರಿ ತರಿ... " ಅಂದಳು.
" ಅಷ್ಟೇನಾ, ಎರಡೂ ಬೆಳ್ತಿಗೆ ಅಕ್ಕೀನೇ.... "
ಈಗ ನೆನೆ ಹಾಕಿಟ್ಟಿರುವ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಸೌತೆಕಾಯಿ ತುರಿಯೊಂದಿಗೆ ಅರೆಯಿರಿ. ಬೇರೆ ನೀರು ಕೂಡಿಸದಿರಿ, ಸೌತೆಯಲ್ಲಿ ಶೇಕಡಾವಾರು 80 ಕ್ಕೂ ಅಧಿಕ ನೀರು ಇದೆ. ನುಣ್ಣಗಾದ ಹಿಟ್ಟನ್ನು ರುಚಿಗೆ ಉಪ್ಪು ಕೂಡಿಸಿ ಮುಚ್ಚಿಟ್ಟಿರಿ. ಹುದುಗು ಬಂದ ಹಿಟ್ಟನ್ನು ಮಾರನೇ ದಿನ ದೋಸೆ ಎರೆಯಿರಿ. ತೆಂಗಿನಕಾಯಿ ಚಟ್ಣಿ, ಮೊಸರು, ಬೆಲ್ಲದ ಜೇನುಪಾಕ ಕೂಡಿಕೊಂಡು ದೋಸೆ ಸವಿಯಿರಿ. ಹಿಟ್ಟನ್ನು ಅರೆದ ಕೂಡಲೇ ದೋಸೆ ಎರೆಯಬೇಕಿದ್ದರೆ ನೀರು ದೋಸೆ ಥರ ಹಾರಿಸಿ ಎರೆದರಾಯಿತು.
ಸಸ್ಯಶಾಸ್ತ್ರೀಯವಾಗಿ Cucumis sativus ಎಂದಿರುವ ನಮ್ಮ ಊರ ಸೌತೆಗೆ ಎಷ್ಟೊಂದು ನಾಮಧೇಯಗಳಿವೆ ಎಂಬ ವಿಷಯ ಗೂಗಲ್ ರಿಸರ್ಚ್ ಮಾಡಿದಾಗಲೇ ತಿಳಿದದ್ದು.
ಬೆಂಗಳೂರಿಗರು ಇದನ್ನು ಮಂಗಳೂರು ಸೌತೆ ಅಂತಾರೇ, ಬಣ್ಣದ ಸೌತೆಯೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌತೆಯ ಬೆಳೆ ಕರಾವಳಿಯುದ್ದಕ್ಕೂ ಇರುವುದರಿಂದ ಇದು ಮಲಬಾರ್ ಸೌತೆಯೂ ಹೌದು. ಕೊಂಕಣಿಗರು ಈ ಸೌತೆಯಿಂದ ವಿಧ ವಿಧವಾದ ಖಾದ್ಯಗಳನ್ನೂ ತಯಾರಿಸುತ್ತಾರೆ.
ದೋಸೆ ಮಾಡಿದ ವಿಧಾನ ನೋಡಿದ್ರಲ್ಲ, ಕಡುಬು ಕೂಡಾ ಮಾಡಿಕೊಳ್ಳಬಹುದು. ಈಗ ಇಡ್ಲಿ ಅಕ್ಕಿ ಉಪಯೋಗಿಸಿದ್ರಾಯ್ತು. ಇಲ್ಲಿ ಹಿಟ್ಟನ್ನು ಹುಳಿ ಬರಿಸಬೇಕಾಗಿಲ್ಲ. ತೆಂಗಿನ ತುರಿ ಹಾಗೂ ಬೆಲ್ಲ ಕೂಡಿ ಅರೆದು, ಬಾಡಿಸಿದ ಬಾಳೆ ಎಲೆಯಲ್ಲಿ ಸುತ್ತಿಟ್ಟು, ಅಟ್ಟಿನಳಗೆ ಯಾ ಇಡ್ಲಿ ಪಾತ್ರೆ ಅಥವಾ ಪ್ರೆಶರ್ ಕುಕ್ಕರ್ ಒಳಗೆ ಹಬೆಯಲ್ಲಿ ಬೆಂದಂತಹ ಕಡುಬು ರುಚಿಕರ ತಿನಿಸು.
ಈ ಸೌತೆಯ ಇನ್ನೊಂದು ವಿಶೇಷ ಗುಣ ಏನಪ್ಪಾಂದ್ರೆ ಚೆನ್ನಾಗಿ ಬೆಳೆದ ಸೌತೆಕಾಯಿಗಳನ್ನು ದೀರ್ಘಕಾಲ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಕಟಾವ್ ಆಗುವಂತೆ ಬೆಳೆದರೆ ಮಳೆಗಾಲಕ್ಕೆ ತರಕಾರಿಯ ಕೊರತೆ ಬಾರದಂತೆ ಕಾಪಿಟ್ಟುಕೊಳ್ಳಬಹುದಾಗಿದೆ.
ಅಧಿಕ ನೀರಿನಂಶ ಹೊಂದಿರುವ ಈ ತರಕಾರಿ ಮೂತ್ರವರ್ಧಕ, ಮಲಬದ್ಧತೆಯನ್ನು ಹೋಗಲಾಡಿಸುತ್ತ ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು. ತರಕಾರಿ ತಿನ್ನಲೊಪ್ಪದ ಮಕ್ಕಳಿಗೆ ಈ ತೆರನಾದ ತಿಂಡಿಗಳ ಮೂಲಕ ತರಕಾರಿ ತಿನ್ನಿಸಿದ ಹಾಗೂ ಆಯಿತು.
Wednesday, 28 September 2016
ಮೈತ್ರಿಯ ಮ್ಯಾಗಿ
ಸೊಸೆ ಮನೆಗೆ ಬಂದಳು, ಇದ್ದಿದ್ದೇ ಬಿಡಿ, ಮಗನ ಮದುವೆಯ ನಂತರ ಸೊಸೆ ಮನೆಗೆ ಬರುವುದಿದ್ದೇ ಇದೆ. ಅತ್ತೇ ಪಟ್ಟಕ್ಕೇರಿದ ನಂತರ ಸೊಸೆಯೊಂದಿಗೆ ವ್ಯವಹರಿಸುವ ವಿಧಾನ ಹೇಗಪ್ಪಾ ಎಂದೂ ತಲೆ ಕೆಡಿಸಿಕೊಂಡಿದ್ದೂ ಇದೆ.
" ಈಗಿನ್ಕಾಲದ ಹುಡ್ಗೀರು... ನೀನು ಏನೂ ಹೇಳೋದು ಕೇಳೋದೂ ಮಾಡ್ಬೇಡಾ. " ಹೀಗೆಲ್ಲ ಸಲಹೆಗಳೂ,
" ಅಮ್ಮ ನೀನು ಈ ಥರ ದೊಡ್ಡ ಸ್ವರ ಏರಿಸಿ ಮಾತಾಡಿದ್ರೆ ಮೈತ್ರಿಗೆ ಹೆದರಿಕೆ ಆದೀತು " ಅನ್ನುವ ಮಗಳು.
ಹೌದೂ... ನಾವೂ ಒಂದಾನೊಂದು ಕಾಲದಲ್ಲಿ ಈಗಿನ್ಕಾಲದ ಹುಡ್ಗೀರಾಗಿಯೇ ಅತ್ತೆ ಮನೆಗೆ ಬಂದೋರಲ್ವೇ... ನನ್ನ ಚಿಂತನೆ.
ಏನೇ ಇರಲಿ, ' ವಧೂಗೃಹಪ್ರವೇಶ ' ದ ಸಭಾ ಕಾರ್ಯಕ್ರಮಗಳೆಲ್ಲ ಮುಗಿದ ನಂತರ, ಸಂಜೆವೇಳೆಗೆ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಬಾಯಾರು ಪಂಚಲಿಂಗೇಶ್ವರ ದೇವಳದ ಸಭಾಭವನದಿಂದ ಹಿರಣ್ಯಕ್ಕೆ ವಾಪಸ್ಸಾದೆವು.
ಸುಸ್ತೋ ಸುಸ್ತು, ನಾಳೆ ಪುನಃ ಇನ್ನೊಂದು ಔತಣಕೂಟ ಮೈತ್ರಿಯ ಅಪ್ಪನಮನೆ ಮರಕ್ಕಿಣಿಯಲ್ಲಿ ಇದ್ದಿತು. ಅದಕ್ಕೂ ಹೊರಡುವ ಸಿದ್ಧತೆ ಆಗಬೇಕಿದೆ. ಸೀರೆ ಉಡಲು ತಿಳಿಯದ ಈಗಿನ್ಕಾಲದ ಹುಡ್ಗೀರಾದ ಮಗಳಿಗೂ ಸೊಸೆಗೂ ಸೀರೆ ಉಡಿಸಲು ನಮ್ಮೂರ ಬ್ಯೂಟಿ ಪಾರ್ಲರು ಲೇಡಿ, ಯೋಗೀಶನ ಹೆಂಡ್ತಿಗೆ ಫೋನ್ ಮಾಡಿ ಮುಂಜಾನೆ ಒಂಭತ್ತು ಗಂಟೆಗೆ ಬರಲು ತಿಳಿಸಿದ್ದೂ ಆಯ್ತು. ಮದುವೆಯ ನಂತರ ತವರುಮನೆಗೆ ಮೊದಲ ಬಾರಿ ಹೋಗುವಾಗ ಅಪ್ಪ ಕೊಟ್ಟಂತಹ ಭರ್ಜರಿ ಜರತಾರಿ ಸೀರೆಯಲ್ಲೇ ಹೋಗಬೇಕಾದ ರೂಢಿ. ಅಂತೂ ಈ ಮಕ್ಕಳ ಸೀರೆ ಉಡುವ ಆಟದಿಂದಾಗಿ ನಾನೂ ನೆಟ್ಟಗೆ ಸೀರೆ ಉಡಲು ಕಲಿತ ಹಾಗೂ ಆಯ್ತು.
ಈ ದಿನ ನಮಗೆ ಅಂತಹ ಧಾವಂತದ ಕೆಲಸವೇನೂ ಇದ್ದಿರಲಿಲ್ಲವಾದ್ದರಿಂದ ಮರಕ್ಕಿಣಿ ಮನೆಯಲ್ಲಿ ಔತಣಕೂಟದೊಂದಿಗೆ, ಸಂಜೆಯ ತನಕ ಗಡದ್ದು ನಿದ್ದೆ ತೆಗೆದು ಹಿರಣ್ಯಕ್ಕೆ ಹಿಂತಿರುಗಿದೆವು. ದೂರವೇನಿಲ್ಲ, ಅರ್ಧ ಗಂಟೆಯ ದಾರಿ.
ತುಂಬ ಹಳೆಯ ಮನೆ, ಮನೆ ತುಂಬ ಮರದ ಕೆತ್ತನೆ ಕೆಲಸದ ಶೃಂಗಾರ, ಕಾಂಕ್ರೀಟು ಕಟ್ಟಡಗಳ ಎಡೆಯಲ್ಲಿ ವಿಭಿನ್ನವಾಗಿ ಎದ್ದು ತೋರುವ ಮನೆಯ ಒಳಾಂಗಣದ ದೃಶ್ಯಚಿತ್ರಣ ನನ್ನ ಐಫೋನ್ ಒಳಗೆ ತುಂಬಿಸಿದ್ದಾಯ್ತು.
ಮನೆಯ ಕಟ್ಟಡದ ಒಳಗೆ ಕೂಡಿದಂತಿರುವ ಸಿಹಿನೀರ ಬಾವಿ, ಮೇಲ್ನೋಟಕ್ಕೆ ಗಿಳಿಬಾಗಿಲು... ಹ್ಞಾ, ನಮ್ಮೂರ ಹವ್ಯಕ ಭಾಷಿಕರು ಕಿಟಿಕಿಯನ್ನು ಗಿಳಿಬಾಗಿಲು ಅಂತಲೇ ಅನ್ನುವುದಾಗಿದೆ. ನನಗಂತೂ ಇಷ್ಟವಾಯಿತು.
ಈ ಹಿಂದೆ " ಕಣ್ಣೆದುರಲ್ಲಿ ಕಾಷ್ಠಕಲೆ " ಎಂಬ ಬರಹವನ್ನು ನನ್ನ ಅಪ್ಪನ ಮನೆಯ ಕಲಾಸೊಗಸನ್ನು ಆಧರಿಸಿ ಬರೆದಿದ್ದೆ. ಈ ಮನೆಯ ಬಾಜಾರ ಕಂಭಗಳು ಇನ್ನೂ ವೈಭವೋಪೇತವಾಗಿವೆ.
" ಸಂಜೆ ಆಯ್ತಲ್ಲ, ಹಾಲು ಬೇಡ್ವೇನಮ್ಮಾ.. " ಅಂದ ಮಧು.
" ತಂದಿಟ್ಟಿರು, ನಾಳೆ ಮೊಸರು ಆಗ್ಬೇಡ್ವೇ.. "
" ಮಿಲ್ಮಾ ಡೈರಿ ಹಾಲಿನ ರುಚಿ ಮೈತ್ರಿ ನೋಡ್ಬೇಡ್ವೇ.. "
" ಹೌದಲ್ಲ, ಅರ್ಧ ಲೀಟರು ಜಾಸ್ತಿ ತಾ... "
ಹಾಲು ಉತ್ಪಾದಕರು ಡಿಪೋಗೆ ಹಾಲು ತಂದಪ್ಪಿಸುವ ಹೊತ್ತು, ಆ ಹೊತ್ತಿನಲ್ಲಿ ತಾಜಾ ಹಾಲನ್ನು ಡಿಪೋದಿಂದಲೇ ಕೊಂಡೊಯ್ಯಲವಕಾಶವಿದೆ. ಹ್ಞಾ, ಸಂಜೆಯ ಹಾಲು ದಪ್ಪ ಜಾಸ್ತಿ, ಕೆನೆಭರಿತ ಈ ಹಾಲಿನಿಂದ ಅಧಿಕ ಬೆಣ್ಣೆ ಹಾಗೂ ತುಪ್ಪ ಲಭ್ಯ.
ಬೆಂಗಳೂರಿನ ಬೆಡಗಿ ಕೇರಳದ ಡಿಪೋ ಹಾಲು ತಂದಳು, ಬೇಕರಿಯಿಂದ ಕುರುಕಲು ತಿಂಡಿಗಳೂ.... ಮನೆಯಲ್ಲೇ ಮಾಡಿದ ತಾಜಾತನ ನಮ್ಮೂರ ಗಾಯತ್ರಿ ಬೇಕರಿಯದ್ದು.
" ಅಮ್ಮ, ಇನ್ನು ಟೀ ... ಮೈತ್ರಿ ಮ್ಯಾಗಿ ಮಾಡ್ತಾಳಂತೆ. "
ಔತಣದೂಟ ತಿಂದು ತಿಂದೂ ಹಸಿವಿದ್ದಂತಿಲ್ಲ, ಆದರೂ ಸೊಸೆ ತಿಂಡಿ ಮಾಡ್ತಾಳೆಂದರೆ... ತಿನ್ನದಿದ್ದರಾದೀತೇ?
2 ಮಿನಿಟ್ ನೂಡಲ್ಸ್ ಕ್ಷಣಮಾತ್ರದಲ್ಲಿ ಟೇಬಲ್ ಮೇಲೇರಿತು. " ಅಯ್ಯೋ! ಅಲ್ಲಿ ಬೇಕಾದಷ್ಟು ತರ್ಕಾರಿ ಇತ್ತಲ್ಲ... ಹಾಕ್ಬೋದಿತ್ತು.. " ತುಟಿ ಮೀರಿ ಬಂದಿತು.
" ಈವಾಗ ಹೀಗೇ ತಿನ್ನೋಣ... " ತಟ್ಟೆ ಚಮಚಾ ಆಟದೊಂದಿಗೆ ಮ್ಯಾಗಿ ತಿಂದು, ಚಹಾ ಕುಡಿದು ಎದ್ದೆವು.
" ರಾತ್ರಿಯೂಟಕ್ಕೆ ಗಂಜಿ, ಉಪ್ಪಿನ್ಕಾಯಿ ಸಾಕಲ್ವ... "
" ಸಾಕೂ, ನಮಗ್ಯಾರಿಗೂ ಹಸಿವಿಲ್ಲ... "
ಮಾರನೇ ದಿನ ಮಧು ಮೈತ್ರಿ ಬೆಂಗಳೂರಿಗೆ ಹೊರಟು ನಿಂತೂ ಆಯ್ತು, ಮಗಳಂತೂ ಎರಡು ದಿನ ಮೊದಲೇ ಹೋಗಿದ್ದಳು.
ಮನೆಯೊಳಗಿನ ತೆಗೆದಿರಿಸುವ, ಹೊರಗೆ ಬಿಸಾಡುವ, ತೊಳೆದಿರಿಸುವ ವಸ್ತು ಸಾಮಗ್ರಿಗಳ ಒಪ್ಪಓರಣದಲ್ಲೇ ದಿನಗಳೆರಡು ಕಳೆಯಿತು. ಅದ್ಯಾವುದೋ ಹೊತ್ತಿನಲ್ಲಿ ಸೊಸೆಯ ಮ್ಯಾಗಿ ಪ್ಯಾಕು ಸಿಕ್ಕಿತು, ನೋಡಿದ್ರೆ ಇನ್ನೂ ಒಂದು ಬಂಡಲ್ ನೂಡಲ್ಸ್ ಹಾಗೂ ಮಸಾಲಾ ಇದೆ!
ಸರಿ, ಇವತ್ತು ಸಂಜೆಗೆ ನನ್ನದೂ ಮ್ಯಾಗಿ.... ಅಡುಗೆಗೆ ತರಕಾರಿ ಹಚ್ಚಿಡುವಾಗ ಮ್ಯಾಗಿಗೆ ಬೇಕಾದಂತಹ ಕ್ಯಾರೆಟ್, ಟೊಮ್ಯಾಟೋ, ಬಟಾಟೆ, ಕ್ಯಾಪ್ಸಿಕಂ, ಈರುಳ್ಳಿ, ಹಸಿಮೆಣಸು ತೆಗೆದಿಟ್ಟು, ಹಚ್ಚಬೇಕಾದ್ದನ್ನು ಹಚ್ಚಿಟ್ಟು, ತುರಿಯಬೇಕಾದ್ದನ್ನು ತುರಿದಿಟ್ಟು, ಎರಡು ಹಸಿಮೆಣಸು ಸಿಗಿದಿಟ್ಟು ಆಯ್ತು.
ಮ್ಯಾಗಿ ಈ ತನಕ ಮಾಡಿದ್ದೂಂತ ಇಲ್ಲ, ಯಾವಾಗ್ಲೋ ತಂಗಿ ಮನೆಗೆ ಹೋಗಿದ್ದಾಗ ಅವಳ ಮ್ಯಾಗಿ ತಿಂದಿದ್ದೆ. ಬಾಣಲೆಗೆ ತುಸು ತುಪ್ಪ ಸವರಿದ್ದಾಯಿತು. ತರಕಾರಿಗಳನ್ನು ಬಾಡಿಸಿ, ಮ್ಯಾಗಿಯ ಅಳತೆಗೆ ತಕ್ಕಷ್ಟು ಒಂದ್ಲೋಟ ನೀರು ಸುರಿದು, ಮ್ಯಾಗಿ ಮಸಾಲೆಯನ್ನು ಸುರಿದಿದ್ದಾಯ್ತು. ತರಕಾರಿಗಳೊಡನೆ ನೀರು ಕುದಿ ಕುದಿದಾಗ ಇದ್ದಬದ್ದ ಮ್ಯಾಗಿ ಗಂಟು ನೀರಿಗೆ ಬಿತ್ತು, 2 ಮಿನಿಟ್ ಅಲ್ವೇ, ಇಂಡಕ್ಷನ್ ಸ್ಟವ್ ಎರಡು ನಿಮಿಷಗಳಲ್ಲಿ ಆಫ್ ಆಗುವಂತೆ ಸೆಟ್ ಮಾಡಿ ಮುಚ್ಚಿಟ್ಟು...
ಚಹಾ ತಯಾರಾಯ್ತು, ಮ್ಯಾಗಿ "ರೆಡಿ ಟು ಈಟ್... " ಅಂದಿತು.
Wednesday, 7 September 2016
ಹಬ್ಬದ ಪಾಯಸ
ಹಬ್ಬಗಳು ಸಾಲು ಸಾಲಾಗಿ ಬರುತ್ತಲಿವೆ. ಒಂದೊಂದು ಹಬ್ಬಕ್ಕೂ ಅದಕ್ಕೆಂದೇ ವಿಶೇಷ ಹಬ್ಬದಡುಗೆ ಆಗಲೇಬೇಕು, ಹಬ್ಬದೂಟ ಉಣಲೇಬೇಕು, ಏನಿಲ್ಲಾಂದ್ರೂ ಒಂದು ಪಾಯಸ ಮಾಡಿ ಸವಿಯಲೇ ಬೇಕು.
ದವಸಧಾನ್ಯಗಳ ಬೆಲೆ ಗಗನಕ್ಕೇರಿದೆ. ಬೇಳೆಕಾಳುಗಳ ಧಾರಣೆ ಕೇಳಿದ್ರೆ ಬೆಚ್ಚಿ ಬೀಳುವಂತಾಗಿದೆ. ಚೌತಿ ಹಬ್ಬಕ್ಕೆ ನಮ್ಮ ಹಿರಿಯರ ಕಾಲದಲ್ಲಿ ಹೆಸ್ರುಬೇಳೆ ಪಾಯಸವನ್ನೇ ಮಾಡುವ ರೂಢಿ ಇಟ್ಟುಕೊಂಡಿದ್ದೆವು. ನಮ್ಮತ್ತೆ ಹೆಸ್ರುಬೇಳೆ ತರಿಸಿ, ಕೆಂಪಾಗಿ ಘಮ್ಮನೆ ಹುರಿದು ಡಬ್ಬದಲ್ಲಿ ಶೇಖರಿಸಿ ಇಡುತ್ತಿದ್ದರು. ಹಾಳಾಗದಂತೆ ಕಾಪಿಡುವ ಉದ್ಧೇಶವೂ ಆಯ್ತು, ಯಾರೇ ನೆಂಟರು ಬರಲಿ, ಮನೆ ಅಳಿಯಂದಿರೇ ಹಾಜರಾಗಲಿ, ಹೆಸ್ರುಬೇಳೆ ಪಾಯಸ ದಿಢೀರನೆ ಸಿದ್ಧಪಡಿಸುವುದಕ್ಕೂ ಆಯ್ತು. ಇದೆಲ್ಲ ವರ್ಷಗಳ ಹಿಂದಿನ ಮಾತಾಯ್ತು.
ಈಗಲೂ ಪಾಯಸ ತಿನ್ನದಿದ್ದರಾದೀತೇ, ಹಗುರಾಗಿ ಮಿತವ್ಯಯದ ಪಾಯಸ ಮಾಡುವುದು ಹೇಗೆ?
ಮೊದಲಾಗಿ ಅಡುಗೆಮನೆಯಲ್ಲಿ ಏನೇನಿದೆ ಎಂದು ನೋಡಿಟ್ಟುಕೊಳ್ಳುವುದು.
ತೆಂಗಿನಕಾಯಿ ಇದೆ.
ಬೆಲ್ಲ ಒಂದೆರಡು ಅಚ್ಚು ಇದ್ದರೆ ಸಾಕು.
ನಾಲ್ಕಾರು ಬಾಳೆಹಣ್ಣುಗಳೂ,
ಯಾರೂ ಕೇಳುವವರಿಲ್ಲದ ಕ್ಯಾರೆಟ್ಟೂ...
ಅಹಹಾ... ಪಾಯಸ ಮಾಡೇ ಬಿಡೋಣ.
ಬಾಳೆಹಣ್ಣುಗಳನ್ನು ಚೆನ್ನಾಗಿ ನುರಿದು, ಬೆಲ್ಲ ಕೂಡಿ ಬೇಯಿಸಿ.
ತೆಂಗಿನಕಾಯಿ ಸುಲಿದು, ಒಡೆದು, ಕಾಯಿ ತುರಿಯಿರಿ, ಅರೆದು ಹಾಲು ತೆಗೆದಿರಾ,
ನೀರು ಕಾಯಿಹಾಲನ್ನು ಬಾಳೆಹಣ್ಣಿನ ಪಾಕಕ್ಕೆ ಎರೆಯಿರಿ.
ಕ್ಯಾರೆಟ್ ತುರಿಯಿರಿ, ಕ್ಯಾರೆಟ್ ತುರಿಯೂ ಕೂಡಿದ ಬಾಳೆಹಣ್ಣಿನ ರಸಪಾಕ ಬೇಯಲಿ.
ಕುಕ್ಕರ್ ಉತ್ತಮ, ಒಂದು ವಿಸಿಲ್ ಸಾಕು.
ಬೆಂದ ಮಿಶ್ರಣಕ್ಕೆ ರುಚಿಗೆ ಹೊಂದುವಷ್ಟು ಬೆಲ್ಲ ಪುಡಿ ಮಾಡಿ ಹಾಕಿದ್ರಾ, ದಪ್ಪ ಕಾಯಿಹಾಲು ಎರೆದು ಕುದಿಸಿ. ಚಿಟಿಕೆ ಏಲಕ್ಕಿ ಉದುರಿಸಿ, ಘಮಘಮಿಸುವ ತುಪ್ಪ ಎರೆದರೂ ನಡೆದೀತು.
ದ್ರಾಕ್ಷಿ ಗೇರುಬೀಜ ಯಥಾನುಶಕ್ತಿ ಹಾಕುವುದು.
Sunday, 28 August 2016
ಅಜ್ಜಿಯ ಸೀರೆ
ಮಗನ ಮದುವೆಗೆ ದಿನ ನಿಗದಿಯಾಗುತ್ತಿದ್ದಂತೆ ವೈದಿಕ ಸಾಹಿತ್ಯದ ಲಿಸ್ಟ್, ಮದುಮಗನ ದಿಬ್ಬಣ ಕಲ್ಯಾಣಮಂಟಪಕ್ಕೆ ಆಗಮಿಸಬೇಕಾದರೆ ನಾವು ರೂಢಿಸಿ ಇಟ್ಟುಕೊಳ್ಳಬೇಕಾದ ಪರಿಕರಗಳ ಪಟ್ಟಿ ಪುರೋಹಿತರಾದ ಪರಕ್ಕಜೆ ಅನಂತ ಭಟ್ಟರ ವಾಟ್ಸಪ್ ಮುಖೇನ ಬಂದಿತು.
ಮದುವೆಯಂತಹ ಆಡಂಬರದ ಸಡಗರ ಇದೇ ಮೊದಲ ಬಾರಿ ನಾವು ಎದುರಿಸುವುದಾಗಿದ್ದರಿಂದ, ಎಲ್ಲವನ್ನೂ ನಿಭಾಯಿಸಲು ಹಿರಿಯರಾದ ನಮ್ಮವರ ಭಾವ, ರಾಮ ಶರ್ಮ ಸುಬ್ರಹ್ಮಣ್ಯದಿಂದ ಬಂದಿಳಿದರು.
ಕನ್ನಡಕ ಮೂಗಿಗೇರಿಸಿ ಪಟ್ಟಿ ಓದುತ್ತಾ " ಅಡಿಕೆ... ತೆಂಗಿನಕಾಯಿ, ಸಿಂಗಾರ... "
" ಅದನ್ನೆಲ್ಲ ಚೆನ್ನಪ್ಪ ರೂಢಿಸಿ ಇಟ್ಟಿದ್ದಾನೇ..."
" ಇಟ್ಟರಾಯಿತೇ, ಎಲ್ಲಿದೇ ಅಂತ ಹುಡುಕುವಂತಾಗಬಾರದು.. ಈಗಲೇ ಪ್ಯಾಕ್ ಮಾಡಬೇಕು. "
" ಸಿಂಗಾರ ಯಾತಕ್ಕೇ ಗೊತ್ತಾ.. ಮದುಮಗನ ಬಾಸಿಗ ಕಟ್ಟಲಿಕ್ಕೆ... ಈಗಲೇ ಕಟ್ಟಿ ಇಡುವುದು ಉತ್ತಮ.. "
" ಯಾಕೆ ಸುಮ್ನೇ, ಪುರೋಹಿತರೇ ಮೊನ್ನೆ ನಾಂದಿ ದಿನ ಕಟ್ಟಿದ್ಹಂಗಿತ್ತು..."
" ನಾಳೆ ಎಲ್ಲ ಕೆಲ್ಸ ಜಲ್ದಿ ಆಗ್ಬೇಕು, ಬಾಳೆಬಳ್ಳಿ ಎಲ್ಲುಂಟು? ತಂದಿಡು. " ಆ ಹೊತ್ತಿಗೆ ನಮ್ಮಕ್ಕ ಒಳ ಬಂದಳು.
" ಬಾಸಿಗ ನೀನೇ ಕಟ್ಟಿಡ್ತೀಯಾ, ಬಾಳೆಬಳ್ಳಿ ತಂದ್ಕೊಡ್ತೇನೆ. "
" ಬಾಳೆಬಳ್ಳಿ ನೀರಿನಲ್ಲಿ ನೆನೆಸಿಯೇ ತಂದ್ಕೊಡು, ಕಟ್ಟಿದ ಮಾಲೆ ತುಂಡಾಗಬಾರದು. "
ಬಾಸಿಗ ಕಟ್ಟುವ ವಿಧಾನ ಹೇಳಿಕೊಡಲು ಭಾವಯ್ಯ ಮುಂದಾದರು. " ನನಗ್ಗೊತ್ತಿದೆ, ಸಿಂಗಾರದ ಐದು ಎಸಳು ತಪ್ಪಿದ್ರೆ ಏಳು ಎಸಳು, ಮಲ್ಲಿಗೆ ನೆಯ್ದ ಹಾಗೆ ಕಟ್ಟಿದರಾಯಿತು. " ಅಂದಳು ನಮ್ಮ ಹಿರಿಯಕ್ಕ.
"ಅದೂ ಹೂವಿನೆಸಳು ಮೇಲ್ಮುಖವಾಗಿರಬೇಕು. "
ಬಾಸಿಗದ ಕೆಲಸ ಆಯ್ತು.
" ಕೆಂಪು ತೆರೆ ಸೀರೆ... " ಅನ್ನುತ್ತಾ, " ಇದೆಯಾ, ಪಟ್ಟೆ ಸೀರೆ ಕೆಂಪು ಕಲರಿಂದೂ? " ಎಂದು ನನ್ನನ್ನು ಕೂಗಿ ಕರೆದರು.
" ಓ, ಸೀರೆಯಾ, ಇದೆ ಇದೆ ನನ್ನಜ್ಜಿ ಕೊಟ್ಟಿದ್ದು. "
" ಅಜ್ಜಿಯಾ, ಯಾವಾಗ ಕೊಟ್ಟಿದ್ದೂ? ಚೆನ್ನಾಗಿದೆಯಾ, ಹರಿದದ್ದು, ತೂತು ಬಿದ್ದದ್ದು ಆಗಲಿಕ್ಕಿಲ್ಲ ನೋಡು.. "
" ಚೆನ್ನಾಗಿಯೇ ಇದೆ. ನಾನು ಕಾಲೇಜು ಓದುತ್ತಿದ್ದಾಗ ಕೊಟ್ಟಿದ್ದು, ಅದನ್ನು ಉಟ್ಕೊಂಡು ಒಂದು ಫೋಟೋ ಕೂಡಾ ತೆಗೆಸಿಟ್ಕೊಂಡಿದ್ದೇನೆ ಗೊತ್ತಾ... "
ಆ ಕಾಲದ ನಮ್ಮ ಕಾಸರಗೋಡಿನ ಸ್ಟುಡಿಯೋ ಕಲರ್ ಫೋಟೋಗ್ರಾಫಿ ಹೊಂದಿರಲಿಲ್ಲ, ಮನೆ ಪಕ್ಕದಲ್ಲೇ ಇದ್ದ ಸುಂದರರಾಯರ ಪ್ರಕಾಶ್ ಸ್ಟುಡಿಯೋ ಹಾಗೂ ಬ್ಯಾಂಕ್ ರಸ್ತೆಯಲ್ಲಿದ್ದ ಶೆಟ್ಟೀಸ್ ಸ್ಟುಡಿಯೋಗಳೆರಡರಲ್ಲೂ ಕಪ್ಪು ಬಿಳುಪಿನ ಛಾಯಾಗ್ರಹಣ ಲಭ್ಯವಿದ್ದಿತು. ಹೀಗೇ ಸುಮ್ಮನೆ ಸೀರೆ ಉಟ್ಕೊಂಡು ಕಪ್ಪು ಬಿಳುಪಿನಲ್ಲಿ ಸಮಾಧಾನ ಪಟ್ಟುಕೊಂಡಿದ್ದಷ್ಟೇ ಲಾಭ.
ಕಪಾಟಿನ ಬಾಗಿಲು ತೆರೆಯಿತು. ನಿತ್ಯೋಪಯೋಗಿ ಉಡುಪು ಅಲ್ಲವಾದ್ದರಿಂದ ಕೈಗೆಟುಕದಷ್ಟು ಎತ್ತರದಲ್ಲಿತ್ತು. ಎತ್ತರದ ಮಣೆಯಿಟ್ಟು ಹತ್ತಿದಾಗ ಸೀರೆ ಕೆಳಗಿಳಿದು ಬಂದಿತು. ಅದರೊಂದಿಗೆ ಇನ್ನೂ ಎರಡು ಕೆಂಪು ಪಟ್ಟೇವಸ್ತ್ರಗಳೂ ಇದ್ದವು.
" ಎಲ್ಲವನ್ನೂ ಬಿಡಿಸು ನೋಡೋಣಾ.. "
" ಲುಂಗಿ ಗಾತ್ರದ ಈಯೆರಡು ಬಟ್ಟೆ ಮಧೂ ಉಪನಯನದ್ದು. "
" ಇದಾಗಲಿಕ್ಕಿಲ್ಲ, ಅಂತರಪಟ ಹಿಡಿಯುವಾಗ ವರನಿಗೆ ಹುಡುಗಿ ಮುಖ ಕಾಣಿಸಬಾರದು, ಮಂಟಪದ ಅಗಲಕ್ಕೆ ಹೊಂದುವಷ್ಟು ಉದ್ದವೂ ಇರಬೇಕು. " ಅಂದರು ಭಾವಯ್ಯ.
" ಈ ಅಜ್ಜಿಯ ಸೀರೆ ಉಂಟಲ್ಲ, ನೀವು ಹೇಳಿದಂತೆ ಅಂತರಪಟ ಹಿಡಿಯಲಿಕ್ಕೆ ಹೇಳಿ ಮಾಡಿಸಿದ ಹಾಗಿದೆ. "
"ಬಿಡಿಸು ಅದನ್ನೂ..."
ಸೀರೆಯನ್ನು ಬಿಡಿಸಲಾಯಿತು, ಹತ್ತಿಯಂತೆ ಹಗುರಾದ ಕಾಶಿಪಟ್ಟೆ, ತನ್ನ ಹಳೆಯ ಸೀರೆಯನ್ನು ಮುದ್ದಿನ ಮೊಮ್ಮಗಳಿಗೆ ಅಜ್ಜಿ ಕೊಟ್ಟಿದ್ದು.
" ಹೌದೂ, ಕಾಲೇಜಿಗೆ ಹೋಗ್ತಿದ್ದಾಗ ಸಿಕ್ಕಿದ ಈ ಸೀರೆಗೆ ಈಗ ಮೂವತ್ತೇಳು ವರ್ಷ ಆಯಿತು, ಅಜ್ಜಿಗೆ ಅವರಪ್ಪ ಕೊಟ್ಟಿದ್ದಾಗಿರಬಹುದು, ಏನಿಲ್ಲಾಂದ್ರೂ ಇವತ್ತಿಗೆ ಈ ಸೀರೆ ಎಪ್ಪತೈದು ವರ್ಷ ದಾಟಿದೆ. " ಇದು ನನ್ನ ಲೆಕ್ಕಾಚಾರ.
ಕಾಶಿಪಟ್ಟೆ ಸೀರೆ ಮದುವೆಮಂಟಪದಲ್ಲಿ ಅಂತರಪಟವಾಗಿ ಮೆರೆಯಿತು. " ಅಜ್ಜಿಯ ಸೀರೆ ಮರಿಮಗನ ಮದುವೆಗೂ ಬಂತು... " ತಂಗಿ ಗಾಯತ್ರಿಯಂತೂ ಎಲ್ಲರೊಂದಿಗೂ ಹೇಳಿಕೊಂಡು ಬಂದಳು.
" ಸುಲಗ್ನಾ ಸಾವಧಾನ... ಸುಮುಹೂರ್ತೇ ... " ನಂತರ ಪೆಟ್ಟಿಗೆ ಸೇರಿದ ಸೀರೆ, ಸಂಜೆ ಮನೆ ತಲುಪಿತು. ಮೊದಲಾಗಿ ಅಜ್ಜಿಯ ಸೀರೆಗೆ ಗಾಳಿಯಾಡಲಿ ಎಂದು ನೇತು ಹಾಕಿದ್ದೂ ಆಯ್ತು.
ಎರಡು ದಿನಗಳ ಮದುವೆಯ ಸಭಾ ಕಾರ್ಯಕ್ರಮಗಳೆಲ್ಲ ಮುಗಿದುವು. ಮಧು-ಮೈತ್ರಿ ಜೋಡಿಯನ್ನು ಬೆಂಗಳೂರಿಗೆ ಕಳುಹಿಸಿ, ಮನೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆ ಬರೆ, ವಸ್ತು ಸಾಮಗ್ರಿಗಳನ್ನು ಒತ್ತರೆಯಾಗಿ ಇಡುತ್ತಿದ್ದ ಹಾಗೆ ಅಜ್ಜಿಯ ಪಟ್ಟೆ ಸೀರೆ ನೆನಪಾಯ್ತು.
ಮುಂದಿನ ತಿಂಗಳು ತಂಗಿ ಮಗಂದೂ ಮದುವೆ ಇದೆ, ಆಗಲೂ ಅಂತರಪಟವಾಗಿ ಈ ಸೀರೆಯನ್ನೇ ಬಳಸಬಹುದೆಂಬ ತೀರ್ಮಾನಕ್ಕೆ ಬಂದಿದ್ದೆವು. ಸೀರೆಯನ್ನು ಮೊದಲು ಒಳಗಿಡೋಣ, ವರಲಕ್ಷ್ಮಿ ಬಂದಾಗ ಕೊಟ್ಟರಾಯ್ತು, ಮದುವೆ ಹಾಲ್ ಗೆ ಹಿಡಿದುಕೊಂಡು ಹೋದರೂ ಸಾಕಾದೀತು... ಅಂದ್ಕೊಂಡು ನೋಡಿದ್ರೆ ಸೀರೆ ಕಾಣಿಸಲಿಲ್ಲ. ಬಟ್ಟೆಬರೆಗಳ ರಾಶಿಯಲ್ಲಿ ಅಜ್ಜಿಯ ಸೀರೆ ಎಲ್ಹೋಯ್ತು ಎಂದು ಹುಡುಕಾಡಿ ಸಾಕಾಯ್ತು. ಕುಂಬ್ಳೆಯಲ್ಲಿರುವ ತಂಗಿಗೂ ದೂರವಾಣಿ ಕರೆ ಹೋಯಿತು. " ಸೀರೆ ಏನಾದ್ರೂ ವರಲಕ್ಷ್ಮಿ ಕೈಗೆ ಕೊಟ್ಟಿದೀಯಾ.. "
" ಇಲ್ವಲ್ಲ, ನಿನ್ನ ಸೀರೆ ಇದ್ದ ಬ್ಯಾಗ್ ಒಳಗೆ ತುರುಕಿದ್ದು ನೆನಪಿದೆ. "
" ಹೌದಾ, ಇನ್ನೊಮ್ಮೆ ನೋಡ್ತೀನಿ.." ಬಟ್ಟೆಗಳನ್ನು ಅತ್ತ ಇತ್ತ ಎಳೆದಾಡಿ, ಕಪಾಟಿನೊಳಗೆ ಇಟ್ಟು ಬಿಟ್ಟಿದ್ದೀನೋ ಎಂದೂ ಹುಡುಕಾಡಿದ್ದೂ ಆಯ್ತು.
" ಅದ್ಯಾಕೆ ಹುಡುಕ್ತೀಯ, ನಾಳೆ ಬೆಳಗ್ಗೆ ನೋಡಿದ್ರಾಯ್ತು..." ಅಂದರು ನಮ್ಮೆಜಮಾನ್ರು.
" ಹ್ಞೂ, ದೇವರ ದೀಪ ಹಚ್ಚಿಟ್ಟು ಊಟಕ್ಕೆ ಅಣಿ ಮಾಡಲು ಹೊರಟೆ, ಟೇಬಲ್ ಮೇಲೆ ಊಟದ ಸಾಹಿತ್ಯಗಳನ್ನು ಇರಿಸಿ, ದೇವರಿಗೆ ಅಡ್ಡ ಬಿದ್ದು, ದೀಪವಾರಿಸಿ, ಎದ್ದಾಗ ದೇವರಮನೆಯಲ್ಲೇ ತೂಗಹಾಕಿದ್ದ ಅಜ್ಜಿಯ ಕೆಂಪು ಪಟ್ಟೆ ಸೀರೆ ಕಣ್ಣಿಗೆ ಬಿತ್ತು!
Subscribe to:
Posts (Atom)
















