Pages

Ads 468x60px

Friday, 10 July 2020

ಹಲಸಿನ ಹಣ್ಣಿನ ಮುರಬ್ಬ






ದೊಡ್ಡದೊಂದು ಹಲಸಿನ ಹಣ್ಣು.

" ಕೊಟ್ಟಿಗೆ ಮಾಡಿದ್ರೂ ಮುಗಿಯುವುದಿಲ್ಲ.. ಸುಮ್ಮನೇ ಯಾಕೆ? "

" ಮೊದಲೆಲ್ಲ ಹಣ್ಣುತುಪ್ಪ ಮಾಡ್ತಿದ್ರು.." ಗೌರತ್ತೆ.

" ನಂಗೆ ಹಣ್ಣುತುಪ್ಪ ತಿಂದು ಗೊತ್ತೇ ಇಲ್ಲ.. ಹೇಗೋ.. "

" ಉಂಟಲ್ಲ ಅಡಿಗೆ ಪುಸ್ತಕ,  ನೋಡು. "

ಗೌರತ್ತೆ ಹೇಳಿದಂತೆ ಕಡಂಬಿಲ ಸರಸ್ವತಿ ಬರೆದ ಪ್ರಸಿದ್ಧ ಅಡಿಗೆ  ಪುಸ್ತಕ ನೋಡಿ...

ಸಿಹಿಯಾದ ಬಕ್ಕೆ ಹಲಸಿನ ಹಣ್ಣು ಮತ್ತು ನೀರು.

ಇಷ್ಟೇ, ಬೇರೇನೂ ಬೇಡ.

ಮಾಡೋಣ.


ಹಣ್ಣಿನ ಸೊಳೆಗಳ ಬೇಳೆ ತೆಗೆದು ಬೇರೆ ಇಟ್ಟು,

ಅಟ್ಟಿನಳಗೆಯಲ್ಲಿ ತುಂಬಿಸಿ, 

ಮುಳುಗುವಷ್ಟು ನೀರೆರೆದು,

ಅಟ್ಟಿನಳಗೆಯೆಂದರೆ ಇಡ್ಲಿ ಪಾತ್ರೆ ಎಂದು ತಿಳಿದಿರಲಿ.

ಒಲೆಗೇರಿಸಲಾಯಿತು.


“ ಮೊದಲಿಗೆ ಕಟ್ಟಿಗೆ ಒಲೆಯಲ್ಲಿ ಮಾಡ್ತಿದ್ರು,   ಅದು ಗಳ ಗಳ ಕುದಿದು ಕುದಿದೂ.. “

“ ಹೌದ.. “

“ ಆ ಕಾಲದಲ್ಲಿ ಮಳೆಗಾಲದಲ್ಲಿ ಕೆಲಸದಾಳುಗಳಿಗೆ ಏನೋ ಒಂದು ಕೆಲ್ಸ ಅಂತ ಆಗ್ಬೇಕಲ್ಲ..  ಹೀಗೆ ಹಲಸಿನಕಾಯಿ ಕೆಲ್ಸ ಮಾಡಲುಹೇಳಿದರಾಯಿತು.. “


“ತೋಟದಿಂದ ಹಣ್ಣು ತರುವುದು,  ಆಯ್ದು ಇಡುವುದು,  ಆ ಮೇಲೆ ಮನೆಯಿಂದ ಹೊರಗೆ ಇರುವ ಕೊಟ್ಟಗೆಯಲ್ಲಿ ಒಲೆ ಉರಿಸಿ, ದೊಡ್ಡ ಕಟಾರ ಇಟ್ಟು,  ಅದರೊಳಗೆ ಹಲಸಿನ ಹಣ್ಣು ತುಂಬಿಸಿ.. "


" ಸರಿ ಸರಿ,  ಗೊತ್ತಾಯ್ತು ಬಿಡಿ.. "

" ಅದಕ್ಕೆ ಬಾವಿಯಿಂದ ನೀರೆಳೆದು ತುಂಬಿಸಿ,  ಅದು ಕುದಿದೂ ಕುದಿದು,  ಬೆಂದ ಸೊಳೆಗಳನ್ನು ತೆಗೆದೂ ತೆಗೆದು.. ಹಟ್ಟಿಯಲ್ಲಿರುವ  ದನಗಳ ಅಕ್ಕಚ್ಚಿನ ಬಾಲ್ದಿಗೆ ಹಾಕಿ ಇಡೂದು. "

" ಹ್ಞಾ.. "


" ದನಕರುಗಳೂ ಖುಷಿಯಾಗಿ ಈ ಬೇಯಿಸಿದ ಸೊಳೆ ತಿಂತಾವೇ...  ಕರೆಯುವ ದನಕ್ಕೆ ಹಾಲೂ ಜಾಸ್ತಿ ಆಗುತ್ತೆ.. "


ಇದೆಲ್ಲ ನನಗೆ ಗೊತ್ತಿಲ್ಲದಿಲ್ಲ,  ಆದರೂ ಗೌರತ್ತೆ ಹೇಳೋ ಹಳೇ ಕತೆ ಕೇಳಲು ಒಂಥರಾ ಖುಷಿ.


" ಈಗ ಏನಾಯ್ತು ನಿನ್ನ ಹಣ್ಣು? "

" ಕುದಿಯುತ್ತಾ ಇದೆ. "

" ಚೆನ್ನಾಗಿ ಬೇಯಲಿ.. ಆರಿದ ನಂತರ ನೀರು ಬಸಿಯುವುದು. "


 ಈಗಲೇ ರಾತ್ರಿ ಆಗಿ ಹೋಯಿತು.  ಸ್ಟವ್ ನಂದಿಸಿ,  ಏನಿದ್ದರೂ ನಾಳೆಗಾಯಿತು.


ಮಂಜಾನೆಯ ತಿಂಡಿತೀರ್ಥ ಆದಾಗಲೇ ಗಂಟೆ ಒಂಭತ್ತಾಗಿತ್ತು.

ಹಲಸಿನಹಣ್ಣು ತುಂಬಿದ ಅಟ್ಟಿನಳಗೆಯ ಬಾಯಿ ತೆರೆಯಿತು.

 ಹಣ್ಣಿನ ಸೊಳೆ,  ನೀರು ಎಲ್ಲವೂ ಒಂದಾಗಿ ಮುದ್ದೆಯಂತಾಗಿತ್ತು.


" ಹಾ.. ಹೀಗಾಯ್ತ?   ಇನ್ನು ನೀರು ಬಸಿಯುವುದು ಹೇಗೆ?  ಹಣ್ತುಪ್ಪದ ಆಸೆ ಹೋಯ್ತು.. " ಗೌರತ್ತೆಯೂ ಬಗ್ಗಿ ನೋಡಿ ಅಂದ್ರು.    " ನೀ ಚಿಂತೆ ಮಾಡಬೇಡ,  ಸೊಳೆ ಗಿವುಚಿ ತೆಗೆದು  ಉಳಿದ ರಸಕ್ಕೆ ಬೆಲ್ಲ  ಹಾಕಿ ಕುದಿಸಿ ಇಟ್ಕೊಳ್ಳೋಣ. "


ಗಿವುಚಿ ಗಿವುಚಿ ಸೊಳೆ ಹೊರ ಹಾಕಲಿಕ್ಕೆ ಗೌರತ್ತೆಯೂ ನೆರವು ನೀಡಿದರು.  " ಈ ಸೊಳೆ ಬಿಸಾಡೂದು ಬೇಡ,  ನಾಯಿಗೆ ಹಾಕಲಿಕ್ಕೆಇರಲಿ."


ನಮ್ಮ ನಾಯಿಗೂ ಹಲಸಿನ ಹಣ್ಣು ಅಂದ್ರೆ ಪಂಚಪ್ರಾಣ.  ಸೊಳೆಗಳನ್ನು ಇನ್ನೊಂದು ನಾನ್ ಸ್ಟಿಕ್ ಕಡಾಯಿಯಲ್ಲಿ ತುಂಬಿ,   ಒಂದುಅಚ್ಚು ಬೆಲ್ಲವನ್ನೂ ಹಾಕಿ ಒಲೆಯ ಮೇಲಿಟ್ಟೆವು.  ಅದರಲ್ಲಿರುವ ನೀರನ್ನು ಇಂಗಿಸದಿದ್ದರೆ ನಾಳೆ ಬಿಸಾಡಬೇಕಾದೀತು,  ನಾಯಿಯಾದರೂ ತಿನ್ನಲಿ.


ಇಂಡಕ್ಷನ್ ಒಲೆಯ ಮೇಲೆ ಹಲಸಿನ ಹಣ್ಣಿನ ರಸ,  ಇದು ಏನೇ ರಸಗಟ್ಟಿಯಾದರೂ ಹಣ್ಣುತುಪ್ಪ ಅನ್ನುವಂತಿಲ್ಲ,  ಹಣ್ಣಿನಲ್ಲಿರುವಹಿಟ್ಟಿನಂಶವೂ ಕೂಡಿದ ರಸ,  ಬೆಲ್ಲವನ್ನೂ ಬೆರೆಸಿಕೊಂಡು ಕುದಿಯತೊಡಗಿತು.  ಇದಕ್ಕೂ ಒಂದು ಅಚ್ಚು ಬೆಲ್ಲ ಬಿದ್ದಿತು.


ಹಣ್ಣಿನ ರಸ ಕುದಿಸುವ ವ್ಯವಹಾರವನ್ನು ಗೌರತ್ತೆಯ ಸುಪರ್ದಿಗೆ ಬಿಟ್ಟು,  ನನ್ನ ಇನ್ನಿತರ ಕೆಲಸಕಾರ್ಯಗಳೂ, ಜೊತೆಗೇ ಫೇಸ್ ಬುಕ್, ವಾಟ್ಸಾಪ್ ಗಳೂ,  ಹಾಗೂ ನನ್ನಲ್ಲಿದ್ದ ಹಳೆಯ ಅಡುಗೆ ಪುಸ್ತಕಗಳನ್ನು ತಿರುವಿ ಹಾಕಿದಾಗ...


ಜಯಾ ಶೆಣೈ ಬರೆದಂತಹ ಪುಸ್ತಕದ ಕೊನೆಯ ಪುಟಗಳಲ್ಲಿ ಹಲಸಿನ ಹಣ್ಣಿನ ಮುರಬ್ಬ ಎಂಬ ಹೆಸರು ಹೊತ್ತಂತಹ ಅಡುಗೆಯೊಂದುಕಾಣಬೇಕೇ...


ಈಗ ನಾನು  ಮಾಡಿದಂತಹ ಎಡವಟ್ಟು ರಸಪಾಕಕ್ಕೂ ಈ ಮುರಬ್ಬಕ್ಕೂ ತಾಳಮೇಳ ಸರಿ ಹೊಂದಿತು!


" ಆಯಿತು ನೋಡು,  ಎರಡೆಳೆ ಪಾಕ ಬಂತು. " ಎನ್ನುತ್ತ ಗೌರತ್ತೆ ಅಡುಗೆಮನೆಯಿಂದ ಹೊರ ಬಂದರು.


“ ನಾಯಿಗೇಂತ ಇಟ್ಟ ಸೊಳೆ ಏನಾಯ್ತು? "

" ಅದೂ ಆಯ್ತು,  ಆರಿದ ಮೇಲೆ ಜಾಡಿಯಲ್ಲಿ ತುಂಬಿಸಿ ಇಡು,  ನಾಯಿಗೆ ದಿನಕ್ಕೊಂದು ಸೌಟು ಹಾಕಿ ಮುಗಿಸುವುದು.."


ಮೊದಲಿಗೆ ಮುರಬ್ಬದಿಂದ ಸುಟ್ಟವು ಮಾಡಲಾಯಿತು.

1 ಕುಡ್ತೆ ಅಕ್ಕಿ ಹುಡಿ,

ಸ್ವಲ್ಪ ಕಾಯಿತುರಿ, ಮಿಕ್ಸಿಯಲ್ಲಿ ನೀರು ಹಾಕದೆ ಹುಡಿ ಮಾಡುವುದು.

1 ಚಮಚ ಎಳ್ಳು,  ಎಣ್ಣೆ ಹಾಕದೆ ಹುರಿದು ಜಜ್ಜಿ ಇಡುವುದು.

2 ಸೌಟು ಹಣ್ಣಿನ ಮುರಬ್ಬ

ರುಚಿಗೆ ಉಪ್ಪಿನ ಹುಡಿ

ಎಲ್ಲವನ್ನೂ ಬೆರೆಸಿ,  ಸೂಕ್ತವಾಗುವಷ್ಟು ನೀರು ಎರೆದು ಕಲಸುವುದು.

ಕಲಸಿದ ಹಿಟ್ಟು ಚಪಾತಿ ಲಟ್ಟಿಸುವಂತಿರಬಾರದು,  ಇಡ್ಲಿ ಹಿಟ್ಟಿನ ಸಾಂದ್ರತೆಯಿದ್ದರೆ ಸರಿ.

ತೆಂಗಿನೆಣ್ಣೆ ನಮ್ಮ ಆಯ್ಕೆ,  ಬಾಣಲೆಯಲ್ಲಿ ಎಣ್ಣೆ ಬಿಸಿ ಆದ ನಂತರ ಕೈಯಲ್ಲಿ ಹಿಟ್ಟು ತೆಗೆದುಕೊಂಡು ಚಿಕ್ಕ ಚಿಕ್ಕ ಗಾತ್ರದ ಉಂಡೆಯಂತೆಎಣ್ಣೆಗಿಳಿಸಿ.

ಎರಡೂ ಬದಿ ಕೆಂಪಾದೊಡನೆ ತೆಗೆಯಿರಿ.

ಚಹಾದೊಂದಿಗೆ ಸವಿಯಿರಿ.

ಸಂಜೆಯ ಹೊತ್ತು ತಿನ್ನಲು ಸೂಕ್ತ ತಿನಿಸು.


ಇದೇ ರೀತಿ ಪಾಯಸ, ಕೊಟ್ಟಿಗೆ, ಗೆಣಸಲೆ, ದೋಸೆ ತಯಾರಿಸಿ ತಿನ್ನುವುದು.

ಬಿಸಿ ಹಾಲು ಹಾಗೂ ಮುರಬ್ಬ ಬೆರೆಸಿ,  ಮಿಲ್ಕ್ ಶೇಕ್ ಆನಂದಿಸುವುದು.

ನೀರು ಎರೆದು ಶರಬತ್ ಕುಡಿಯುವುದು.

ಬೇಕಿದ್ದರೆ ಐಸ್ ಕ್ರೀಮೂ..  ಮಳೆಗಾಲ ಅಲ್ವೇ, ಅದು ಬೇಡ.


ಹಲಸಿನ ಹಣ್ಣಿನ ಮುರಬ್ಬ ದೀರ್ಘ ಕಾಲ ಇರಿಸತಕ್ಕದ್ದಲ್ಲ. ತಂಪು ಪೆಟ್ಟಿಗೆಯಲ್ಲಿಟ್ಟು ದಿನವೂ ಉಪಯೋಗಿಸಿ ಮುಗಿಸುವುದುಜಾಣತನ ಎಂಬ ಉತ್ತಮ ಸಲಹೆ ಗೌರತ್ತೆ ಕೊಟ್ಟರು. 













Saturday, 4 July 2020

ಹಲಸಿನ ಹಣ್ಣಿನ ಹಲ್ವ





" ಸುಮ್ಮನೇ ಬೆರಟಿ ಮಾಡಿ ಇಡಬೇಡ..  "

" ಮತ್ತೇನು ಮಾಡ್ಬೇಕು ಅಂತೀರಾ? "

" ಮೊನ್ನೆ ಮಾಡಿದ ಅನನಾಸ್ ಜಾಮ್ ಚೆನ್ನಾಗಿತ್ತು.  ಅದೇ ತರ ಹಲಸಿನ ಹಣ್ಣಿಂದು ಆಗೂದಿಲ್ವ? "

 ಸಕ್ಕರೆ ಹಾಕಿ ಮಾಡಿದ ಅನಾನಸ್ ಜಾಮ್,   ಕ್ರಿಸ್ಟಲ್ ತರ ಹರಳುಗಟ್ಟಿ ಹುಳಿ ರುಚಿಯೂ ಸೇರಿ ಸೊಗಸಾಗಿ ಬಂದಿತ್ತು.

ಹಲಸಿನ ಹಣ್ಣು ಧಂಡಿಯಾಗಿ ಇರೂದ್ರಿಂದ ಬೆಲ್ಲವೇ ಉತ್ತಮ ಎಂಬ ಅಭಿಪ್ರಾಯ ನನ್ನದಾಗಿತ್ತು.


" ನಿನ್ನದೇ ಅಂದಾಜಿನಲ್ಲಿ ಏನೋ ಮಾಡಿ ಇಡ್ಬೇಡ.   ಹಲ್ವ, ಜಾಮ್ ಮಾಡಲಿಕ್ಕೆ ಸಕ್ಕರೆ ಹಾಕು..   " 

ನಮ್ಮ ಮನೆಯ ಸುಪ್ರೀಂಕೋರ್ಟು ಹುಕುಂ ಬಂದಿತು.


ಹಲಸಿನ ಹಣ್ಣಿನ ಹಲ್ವ ಮಾಡುವಂತಾಯಿತು.


ಹಲ್ವ ಮಾಡಿದ್ದು ಹೇಗೆ?


20ರಿಂದ 25 ಬಿಡಿಸಿಟ್ಟ ಹಲಸಿನ ಹಣ್ಣು

ಬೇಳೆ ತೆಗೆದು ಅಡುಗೆಗಾಗಿ ಸಂಗ್ರಹಿಸಿ ಇಡುವುದು.


ನನ್ನ ಹಣ್ಣು ಸಿಹಿಯಾಗಿದ್ದರೂ ಮಳೆಗಾಲವಾದುದರಿಂದ ಮೆತ್ತಗಾಗಿ ನೀರು ಒಸರುವಂತೆ ಇದ್ದಿತು.


ಸೂಕ್ತವಾದ ಪಾತ್ರೆ ಯಾವುದು?

ಕುಕ್ಕರ್ ನನ್ನ ಆಯ್ಕೆ,  ದಪ್ಪ ತಳವೂ, ಕೈ ಬಿಸಿಯಾಗದಂತೆ ಹಿಡಿಕೆಯೂ ಇರುವ ಕುಕ್ಕರ್ ಉತ್ತಮ.

ಮರದ ಸಟ್ಟುಗವೂ ಇರಬೇಕು.

ಈ ಅಡುಗೆಗೆ ಇಂಡಕ್ಷನ್ ಸ್ಟವ್ ಅತ್ಯುತ್ತಮವಾಗಿರುತ್ತದೆ. 

ಹಾಗಾಗಿ ಕುಕ್ಕರ್ ಕೂಡಾ ಇಂಡಕ್ಷನ್ ಬೇಸ್ ಹೊಂದಿರಬೇಕು.

ಇಂಡಕ್ಷನ್ ಸ್ಟವ್ ಕೂಡಾ ವಿದ್ಯುತ್ ನಿಯಂತ್ರಕ ಬಟನ್ ಗಳಿಂದ ಸುವ್ಯವಸ್ಥೆಯಲ್ಲಿರಬೇಕು.

ಮುಖ್ಯವಾಗಿ ಅಡುಗೆ ಮಾಡುವ ನಮಗೂ ಈ ಬಟನ್ ಗಳ ಕಾರ್ಯವೈಖರಿ ತಿಳಿದಿರಬೇಕು.


ಮೆತ್ತಗೆ ಇದ್ದಂತಹ ಹಣ್ಣಿನ ಸೊಳೆಗಳನ್ನು ಮಿಕ್ಸಿಯಲ್ಲಿ ಅರೆಯುವ ಕೆಲಸ ಬಿಡಲಾಯಿತು.

ಕುಕ್ಕರ್ ಒಳಗೆ ತುಂಬಿ ಒಲೆಯ ಮೇಲಿರಿಸುವುದು.

2 ಚಮಚ ತುಪ್ಪ ಎರೆದು ಬೇಯಿಸುವುದು.

ಆಗಾಗ ಸೌಟಾಡಿಸುತ್ತ ಹಲಸಿನ ಸೊಳೆಗಳನ್ನು ತಿರುವುತ್ತಾ ಇರಬೇಕು.

ಹಲಸಿನಲ್ಲಿರುವ ನೀರಿನಂಶದಿಂದಲೇ ಹಣ್ಣು ಬೆಂದಿತು.

ಬೆಂದ ಪರಿಮಳ ಬಂದಿತು ಅನ್ನಿ.


ಒಂದು ಪಾವು ಸಕ್ಕರೆ,  ಅಂದಾಜು 250 ಗ್ರಾಂ ಆದೀತು,  ಸುರಿಯಿರಿ.

ಪುನಃ ಸೌಟಾಡಿಸುತ್ತ ಕೆದಕುತ್ತ ಇರಬೇಕು,  ಸಕ್ಕರೆ ಕರಗಿ ಪುನಃ ಘನರೂಪಕ್ಕೆ ಬರುವ ತನಕ ಹಲ್ವದ ಹದ ಬರಲಾರದು.


ಉರಿಯನ್ನು ನಿಯಂತ್ರಿಸುತ್ತ,  ಸೌಟಿನಲ್ಲಿ ತಿರುವುತ್ತ ಇದ್ದಂತೆ ಘನವಾದ ಹಲ್ವ ಎದ್ದಿತು. ಅಂದಾಜು ಹದಿನೈದು ನಿಮಿಷಗಳಲ್ಲಿ ಆಯ್ತು ಅನ್ನಿ.


ಏಲಕ್ಕಿಯೇನೋ ಇತ್ತು,  ಗುದ್ದಿ ಹುಡಿ ಮಾಡಿ ಹಾಕಲಾಯಿತು.

ಆರಿದ ನಂತರ ತುಂಬಿಸಿ ಇಡಲು ಜಾಡಿಯೂ ಸಿದ್ಧ.


ದಿನವೂ ದೋಸೆ ಇಡ್ಲಿ ತೆಳ್ಳವು ತಿನ್ನುವುದಿದೆ,  ಚಟ್ಣಿಯೊಂದಿಗೆ ಕೂಡಿ ತಿನ್ನಲು ಹಲ್ವಾ ಸಿದ್ಧವಾಗಿದೆ.


" ಹಲ್ವ ಆಯ್ತು ಬನ್ನಿ... "


ಗೌರತ್ತೆ ಮೊದಲು ಓಡಿ ಬಂದರು.  " ತಟ್ಟೆ ಗಿಟ್ಟೆ ಏನೂ ಬೇಡ,  ಹಂಗೇ ಕೈಗೆ ಕೊಡು.. "   ಅಂದರು.  

ತಿನ್ನುತ್ತ ,   " ಗೋಧಿ ಹಲ್ವದ ಪಾಕ ಬಂದಿದೆ... " ಎಂಬ ರಿಮಾರ್ಕು ದೊರೆಯಿತು.




ಹಲಸಿನ ಜಾಮ್ ಎಂಬ ಹೆಸರು ನೀಡಬೇಕಿದ್ದರೆ ತುಪ್ಪ ಏನೂ ಹಾಕದಿದ್ದರಾಯಿತು.

ಅತಿಯಾಗಿ ಮಾಡಬಾರದು,  ಒಂಂದು ಪುಟ್ಟ ಜಾಡಿಯಲ್ಲಿ ಹಿಡಿಸುವಷ್ಟೇ ಮಾಡಲು ಯಾರ ಸಹಕಾರವೂ ಬೇಡ.

ಈಗ ಅಂಗಡಿಯಿಂದ   " ಅದು ತನ್ನಿ ಇದು ತನ್ನಿ.. " ಎಂದು ಹೇಳುವ ಕಾಲವಲ್ಲ.  ದ್ರಾಕ್ಷಿ ಗೋಡಂಬಿ ಬಾದಾಮಿ ಇಲ್ಲದಿದ್ದರೂ ಹಲ್ವದ ಸ್ವಾದಕ್ಕೆ ಕೊರತೆ ಬಾರದು.

ಈ ಘನಪಾಕದಿಂದ ಹಲಸಿನ ಹಣ್ಣಿನ ಇನ್ನಿತರ ಖಾದ್ಯಗಳಾದ ಪಾಯಸ,  ಮುಳ್ಕ, ಗೆಣಸಲೆ ಇತ್ಯಾದಿಗಳನ್ನು ಜಾಣತನದಿಂದ ಮಾಡಿಕೊಳ್ಳಲೂ ಸಾಧ್ಯವಿದೆ.

ಚೆನ್ನಾಗಿ ಪಾಕ ಬಂದಂತಹ ಹಲ್ವ ಜೋಪಾನವಾಗಿ ಇರಿಸಲು ರೆಫ್ರಿಜರೇಟರ್ ಬೇಡ.  ಇರುವೆಗಳು ಮುತ್ತದಂತೆ,  ಗಾಳಿಯಾಡದಂತೆ ಮುಚ್ಚಿ ಇರಿಸಬೇಕು.  ಒದ್ದೆ ಚಮಚ ಬಳಸಬಾರದು,  ಪ್ರತಿ ಬಾರಿ ಮುಚ್ಚಳ ತೆರೆದಾಗ ಸ್ವಚ್ಛ ಚಮಚವನ್ನೇ ಬಳಸುತ್ತಿರಬೇಕು. 


ಅಡುಗೆ ಮಾಡುತ್ತಿರೋಣ

ರಸಪಾಕ ಕಲಿಯೋಣ

ಎಲ್ಲರಿಗೂ ಹಂಚೋಣ

ಎಂಬ ಸೂತ್ರದನ್ವಯ ಬ್ಲಾಗ್ ಬರಹ ಸಿದ್ಧವಾಗಿದೆ.