Pages

Ads 468x60px

Monday, 9 August 2021

ರಾತ್ರಿಯ ರೊಟ್ಟಿ

 


ಮನೆಯಲ್ಲಿ ನಮ್ಮ ಒಡನಾಡಿಯಾಗಿರುವ ತುಂಟಿ ನಾಯಿ,  ಅನ್ನ ತಿನ್ನಲೊಪ್ಪದು ಎಂದು ಹಿಂದೆಯೇ ಬರೆದಿದ್ದೇನೆ.   ತುಂಟಿ ಚಪಾತಿ ಇಷ್ಟಪಟ್ಟು ತಿನ್ನುತ್ತಾಳೆಂಬುದು ತಿಳಿಯಿತು.

ಕೊನೆಗೂ ನಾಯಿಗಾಗಿ ಚಪಾತಿ ದಿನವೂ ತಯಾರಿಸುವ ಹೊಣೆ ನನ್ನದಾಯಿತು.  ಮಧು ಮನೆಗೆ ಬಂದನೆಂದರೆ ಅವನಿಗೂ ಚಪಾತಿ ಇರಲೇಬೇಕು.  ಅವನೂ ನನ್ನ ಜೊತೆ ಸೇರಿಕೊಂಡು ಹಿಟ್ಟು ಕಲಸುವುದೂ, ನಾದುವುದೂ, ಲಟ್ಟಿಸಿ ಬೇಯಿಸುವುದೂ ಕಲಿತೇ ಬಿಟ್ಟ.  ಅಂತೂ ರಾತ್ರಿ ಎಲ್ಲರೂ ಚಪಾತಿ ತಿನ್ನುವವರಾದೆವು.   ಚಪಾತಿಗಾಗಿ ಕೂಟು ಮಧ್ಯಾಹ್ನದ ಹೊತ್ತೇ ಮಾಡಿ ಇಡುವ ರೂಢಿ ಆಯಿತು.

ಕೂಟು ಮಾಡಲು ಪ್ರತ್ಯೇಕ ಸಿದ್ಧತೆಯೇನೂ ಬೇಡ.  ಕೊದ್ದೆಲ್ ಯಾ ಸಾಂಬಾರು ಸ್ವಲ್ಪ ವಿಶಿಷ್ಟವಾಗಿದ್ದರಾಯಿತು.

ಒಂದೇ ತರಕಾರಿ ಸಾಲದು,   ಇರುವ ತರಕಾರಿಗಳಲ್ಲಿ ಎಲ್ಲವನ್ನೂ ಅಷ್ಟಿಷ್ಟು ಸೇರಿಸಿ ಹೆಚ್ಚಿ ಇಡುವುದು,  ಬಟಾಟೆ ಇರಲೇ ಬೇಕು.  ತೊಗರಿಬೇಳೆ ಯಾ ಒಂದು ಬಗೆಯ ಧಾನ್ಯ ಇರಲಿ.

ತೆಂಗಿನ ಮಸಾಲೆ ಕಡ್ಡಾಯ.  ಬೇಕಿದ್ದರೆ ದಪ್ಪ ಗಸಿಯ ಹಾಗೆ,  ರಸಭರಿತವಾಗಿ ಸಾರು ಅನ್ನುವ ಹಾಗೂ ಈ ಪದಾರ್ಥವನ್ನು ಹೊಂದಿಸಿಕೊಳ್ಳಬಹುದಾಗಿದೆ.  ಇರಲಿ,  ನಾನಂತೂ ಚಪಾತಿ,  ಪರೋಟಾ, ಪುಲ್ಕಾ ಎಲ್ಲವ್ನೂ ಒಂದೇ ಹಿಟ್ಟಿನಿಂದ ತಯಾರಿಸುವ ಪ್ರಾವೀಣ್ಯತೆ ಪಡೆದು ಕೊಂಡಿದ್ದೇನೆ.  


ಈಗ ಹಿಟ್ಟು ಕಲಸೋಣ.  ಅಂದ ಹಾಗೆ ನಮ್ಮ ರೇಷನ್ ಸಾಮಗ್ರಿಯಲ್ಲಿ 4 ಕೇಜಿ ಗೋಧಿ ಹಿಟ್ಟು ಸಿಗುತ್ತೆ,  ನಾವು ಕೊರೋನಾ ಸಂತ್ರಸ್ತರಲ್ಲವೇ,  ತಿಂಗಳಿಗೊಮ್ಮೆ ಸಿಗುವ ಉಚಿತ ರೇಷನ್ ಕಿಟ್,  ಅಡುಗೆಯ ಸಾಮಗ್ರಿಗಳೂ,  ಸಾಬೂನು ಇತ್ಯಾದಿಗಳೂ ಇವೆ.   ನಮ್ಮ ಮನೆ ಯಜಮಾನರು ಇದನ್ನೆಲ್ಲ ತರುವವರೇ ಅಲ್ಲ.   " ಏನೂ ಬಿಡಿಗಾಸು ಇಲ್ಲದವರಿಗೆ ಸರ್ಕಾರ ಕೊಡುತ್ತದೆ.  ನಮಗ್ಯಾಕೆ..."   ಹಾಗಾಗಿ ಮಧು ಊರಿಗೆ ಬಂದಿರುವಾಗ,  ಆಗ ರೇಷನ್ ಸಾಮಗ್ರಿ ವಿತರಣೆ ಆಗುತ್ತಿದ್ದರೆ ನನಗೂ ಉಚಿತ ಕಿಟ್ ಬರುತ್ತೆ.  ತಿಂಗಳಿಗೊಮ್ಮೆ ನಮ್ಮನ್ನು ವಿಚಾರಿಸಿ ಕೊಳ್ಳಲು ಹಾಗೂ ಹಿರಣ್ಯ ದುರ್ಗಾಪರಮೇಶ್ವರಿ ದೇಗುಲದ ಸಂಕ್ರಾಂತಿಯ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳಲು ಬರುತ್ತಿರುತ್ತಾನೆ,  ಅಂತೂ ಉಚಿತ ರೇಷನ್ ಕಿಟ್ ನನಗೆ ಒಮ್ಮೆಯೂ ತಪ್ಪಲಿಲ್ಲ ಅನ್ನಿ.  ಈ ಬಾರಿ ಸಂಕ್ರಾಂತಿಯೊಂದಿಗೆ ನಾಗರಪಂಚಮಿಯೂ ಬಂದಿದೆ.   ನಾಗಬನದಲ್ಲಿ ಭಕ್ತಗಡಣ ಸೇರಲಿದೆ.


ಗೋಧಿ ಹಿಟ್ಟು 3 ಲೋಟ ಅಳೆಯಿರಿ.

ಅರ್ಧ ಲೋಟ ಜೋಳದ ಹಿಟ್ಟು.   ಜೋಳದ ಹಿಟ್ಟು ಮಧು ಬೆಂಗಳೂರಿನಿಂದ ತಂದದ್ದು.   ಅದನ್ನು ವಿವಿಧ ಅಡುಗೆಗಳಲ್ಲಿ  ಬಳಸಬಹುದೆಂದು ನನ್ನ ಪ್ರಯೋಗಶೀಲತೆ ತಿಳಿಸಿಕೊಟ್ಟಿತು.   ಅದರಲ್ಲಿ ಚಪಾತಿಯೂ ಒಂದು,  ಉಳಿದ ವೈವಿಧ್ಯಗಳನ್ನು ಇನ್ನೊಮ್ಮೆ ಬರೆಯುತ್ತೇನೆ.  ಜೋಳದ ಹಿಟ್ಟು ನಮ್ಮ ಜಗ್ಗಣ್ಣನ ಅಂಗಡಿಯಲ್ಲೂ ಸಿಗುತ್ತೆ,  ಚಿಂತೆಯಿಲ್ಲ.


ಉಪ್ಪು ಸೇರಿಸಿದ ಒಂದು ಲೋಟ ಬಿಸಿ ನೀರಿನಲ್ಲಿ ಹಿಟ್ಟು ಕಲಸಿ.   ಎಣ್ಣೆ ಬೆಣ್ಣೆ ಏನೂ ಹಾಕುವುದಕ್ಕಿಲ್ಲ.

ಮೃದುವಾಗಿ ನಾದಿರಿ. ಅರ್ಧ ಗಂಟೆ ಮುಚ್ಚಿ ಇರಿಸುವುದು.


ನಂತರ ಉಂಡೆಗಳನ್ನು ಮಾಡಿ ಚಪಾತಿ ಲಟ್ಟಿಸಿ.

ಬೇಯಿಸಲಿಕ್ಕೆ ಕೈ ಹಿಡಿ ಇರುವ ತವಾ ಉತ್ತಮ,  ಉಪಯೋಗವಿಲ್ಲದ ನಾನ್ ಸ್ಟಿಕ್ ತವಾ ಕೂಡಾ ಆದೀತು.

ತವಾ ಬಿಸಿಯಾದೊಡನೆ ತುಸು ತುಪ್ಪ ಸವರುವುದು.  

ನಂತರ ಲಟ್ಟಿಸಿದ ಹಿಟ್ಟನ್ನು ಹಾಕಿರಿ.

ಬೇಯುವಾಗ ಹಿಟ್ಟು ಅಲ್ಲಲ್ಲಿ ಗುಳ್ಳೆಗಳಂತೆ ಉಬ್ಬಿ ಉಬ್ಬಿ ಬಂದಾಗ ಕವುಚಿ ಹಾಕಿರಿ.  ಪದೇ ಪದೇ ಕವುಚಿ ಮಗುಚಿ ಮಾಡಬಾರದು.

ಕವುಚಿದ ನಂತರ ಇಕ್ಕುಳದಲ್ಲಿ ಹಿಡಿದು ಗ್ಯಾಸ್ ಉರಿಯ ಮೇಲಿರಿಸಿ,  ಬಲೂನ್ ತರ ಉಬ್ಬಿಯೇ ಬಿಟ್ಟಿತು.  ಇದೀಗ ಪುಲ್ಕಾ ಆಯ್ತು.

ತವಾದಲ್ಲಿಯೂ ಬಲೂನ್ ನಂತೆ ಉಬ್ಬಿಸಲಿಕ್ಕೂ ಬರುತ್ತದೆ.

ಎಲ್ಲದಕ್ಕೂ ಕೈ ಚಳಕ ಇದ್ದರಾಯಿತು.


ಅವಶ್ಯವಿದ್ದಷ್ಟು ಪುಲ್ಕಾ ರೊಟ್ಟಿಗಳಾದ ನಂತರ ಉಳಿದ ಹಿಟ್ಟನ್ನು ಗಾಳಿಯಾಡದ ಜಾಡಿಯಲ್ಲಿ ಮುಚ್ಚಿಟ್ಟು ಫ್ರಿಜ್ ಒಳಗಿರಿಸುವುದು.   ನಾಳೆಯ ಹಿಟ್ಟು ಕಲಸುವಾಗ ನಿನ್ನೆಯ ಹಿಟ್ಟನ್ನೂ ಸೇರಿಸಿ ಕೊಳ್ಳಲು ಮರೆಯದಿರಿ.  




Friday, 23 July 2021

ಆಟಿಯ ಅಟಿಲ್

 


ನಿನ್ನೆ ಮನೆಯಿಂದ ಹೊರಡುವಂತಾಯಿತು,  ಮಗಳು ಸೀರೆ ತಂದ್ಕೊಟ್ಟಿದ್ದಳು,  ಅದಕ್ಕೊಂದು ಬ್ಲೌಸ್ ಹೊಲಿಸಬೇಕಾಗಿತ್ತು,  ಈಗ ಹೇಗೂ ಅಂಗಡಿ ಬಾಗಿಲುಗಳು ತೆರೆದಿವೆ,  ಟೈಲರಂಗಡಿಯೂ ತೆರೆದಿದ್ದೀತು.  ಮಗನೊಂದಿಗೆ ಮುಂಜಾನೆಯ ತಿಂಡಿತೀರ್ಥ ಆಗುತ್ತಲೇ ಹೊರಟೆ,  ಮಧ್ಯಾಹ್ನದ ಊಟವಾದ ನಂತರ ಅವನೂ ಬೆಂಗಳೂರಿಗೆ ಹೊರಡುವವನಿದ್ದಾನೆ.


ಅರ್ಧ ಫರ್ಲಾಂಗು ದೂರ ಕ್ರಮಿಸುತ್ತಲೇ ಇವತ್ತು ಯಾವುದೋ ಹಬ್ಬ ನಿಮಿತ್ತ ರಜೆ,  ಉಫ್..  ಟೈಲರ್ ಬಾಗಿಲೇ ತೆರೆದಿಲ್ಲ.


ಚಿಂತೆ ಮಾಡುವುದಕ್ಕಿಲ್ಲ,  ಇನ್ನೊಮ್ಮೆ ನೋಡೋಣ.   " ಮಧೂ.. ನಾನು ಬಂದಿದ್ದು ಒಳ್ಳೆಯದೇ ಆಯ್ತು...  ಹೊರಗೆ ನೋಡು,  ರಸ್ತೆಯುದ್ದಕ್ಕೂ ತಗತೆಯ ಹಸಿರು... "


" ಥೂ,  ರಸ್ತೆ ಬದಿಯಿಂದಲೋ..  ಈ ಜಾಗ ಏನೂ ಚೆನ್ನಾಗಿಲ್ಲ.."

" ಹಂಗಿದ್ರೆ ಒಳ್ಳೇ ಜಾಗ ತೋರಿಸು,  ಅಲ್ಲಿಂದಲೇ ಸ್ವಲ್ಪ ಚಿವುಟಿದ್ರಾಯ್ತು.."


ಅಂತೂ ಒಂದು ಕಡೆ ಕಾರು ನಿಂತಿತು.   ಮಾಸ್ಕ್ ಧಾರಿಯಾಗಿಯೇ ಒಂದು ಹಿಡಿ ಆಗುವಷ್ಟು ಸೊಪ್ಪನ್ನು  ಚಿವುಟಿದ್ದಾಯ್ತು.


" ಹೌದಾ,  ತಗತೆಯಿಂದ ಏನು ಅಡುಗೆ? "


ಮನೆಗೆ ವಾಪಸ್ ಬಂದ ಕೂಡಲೇ ತಗತೆ ಸೊಪ್ಪಿನ ಚಿಗುರೆಲೆಗಳನ್ನು ಸಾಂಬಾರಿಗೆ ಹಾಕಲು ತೆಗೆದಿರಿಸಿದ್ದಾಯ್ತು.


" ಅಮ್ಮ, ಚೆನ್ನಾಗಿ ತೊಳೆದಿದ್ದೀಯಲ್ಲ.. "

" ಹ್ಞೂ,  ತೊಳೆಯದೆ ಹೇಗಾದೀತು? "


 ಸಾಂಬಾರ್ ಮಾಡಿದ್ದು ಹೇಗೆ?


ಮೊದಲು 10ರಿಂದ 12 ಹಲಸಿನ ಬೇಳೆಗಳನ್ನು ಜಜ್ಜಿ ಇಡುವುದು.  ಜಜ್ಜುವಾಗಲೇ ಹೊರಸಿಪ್ಪೆಗಳು ಬಿಡಿಸಲ್ಪಡುತ್ತವೆ.   ಕುಕ್ಕರಿನಲ್ಲಿ 7 -8 ಸೀಟಿ ಕೂಗಿಸಿ.   ಹಲಸಿನ ಬೇಳೆ ಇನ್ನಿತರ ಬೇಳೆಕಾಳುಗಳಂತಲ್ಲ,  ಬೇಯದಿದ್ದರೆ ಅಜೀರ್ಣ ವ್ಯಾಧಿ ಯಾ ವಾಯುಪ್ರಕೋಪ ಶುರುವಾದೀತು.


ಬೆಂದ ನಂತರ ತರಕಾರಿ ಹೋಳುಗಳನ್ನು ಹಾಕಿ ಬೇಯಿಸಿ.  ನಾನು ಹಾಕಿದ್ದು ಸೌತೆ.   ಜತೆಗೇ ತಗತೆ ಚಿಗುರುಗಳನ್ನೂ ಹಾಕುವುದು.

ಉಪ್ಪಿನಲ್ಲಿ ಇಟ್ಟ ಅಂಬಟೆ ಇರುವುದರಿಂದ 3 ಅಂಬಟೆಗಳನ್ನು ಹೋಳು ಮಾಡಿ ಹಾಕಲಾಯಿತು.  ಇನ್ನು ಹುಣಸೆ ಹಣ್ಣು, ಟೊಮ್ಯಾಟೋ ಹಾಕಬೇಕಾಗಿಯೇ ಇಲ್ಲ.


ರುಚಿಗೆ ಉಪ್ಪು ಹಾಕಿಯೇ ತರಕಾರಿಗಳನ್ನು ಬೇಯಿಸಿ ಆಯಿತು.


ಇದೀಗ ಮಸಾಲೆ ಆಗಬೇಕಿದೆ, 

ಅರ್ಧ ತೆಂಗಿನ ತುರಿ

4 ಒಣಮೆಣಸು

ದೊಡ್ಡ ಚಮಚ ಉದ್ದಿನಬೇಳೆ

2 ಚಮಚ ಕೊತ್ತಂಬರಿ

ಜೀರಿಗೆ ಹಾಗೂ ಮೆಂತೆ  ಒಂದು ಪುಟ್ಟ ಚಮಚದಲ್ಲಿ ಸಾಕು,

ಕಡ್ಲೆ ಕಾಳಿನಷ್ಟು ಇಂಗು

ಕರಿಬೇವು 

ಇಷ್ಟನ್ನೂ ತುಸು ಎಣ್ಣೆಪಸೆಯಲ್ಲಿ ಹುರಿಯಿರಿ

ತೆಂಗಿನತುರಿಯೊಂದಿಗೆ ಅರೆಯಿರಿ.

ತೆಂಗಿನ ಅರಪ್ಪನ್ನು ಬೆಂದ ತರಕಾರಿಗೆ ಕೂಡಿ,

ಸೌಟಿನಲ್ಲಿ ತಿರುಗಿಸಿ,

ಉಪ್ಪು ಸಾಕಾಗದಿದ್ದರೆ ಹಾಕುವುದು,

ನೀರು ಸಾಲದಿದ್ದರೆ ಎರೆಯುವುದು,

ಮರೆಯದೆ ಒಂದು ತುಂಡು ಬೆಲ್ಲ ಹಾಕುವುದು,

ನಂತರ ಕುದಿಸಿ,  ಕೆಳಗಿಳಿಸಿ,  ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡುವುದು.

ಒಗ್ಗರಣೆಗೆ ಬೆಳ್ಳುಳ್ಳಿ ಹಾಕಿದರೆ ಚೆನ್ನಾಗಿರುತ್ತದೆ.

ಇದೀಗ ತಗತೆ ಬೇಳೆ ಗಸಿ  ತಯಾರಾಗಿದೆ.


" ಮಧೂ,  ಊಟಕ್ಕೆ ಬಾ.. "

 

ಇನ್ನೀಗ  ಬೆಂಗಳೂರಿಗೆ ಬೇಕಾದ ಸಾಮಗ್ರಿಗಳನ್ನು ಕಟ್ಟಿ ಕೊಡುವ ಸಮಯ.

 

ಉಳಿದ ತಗತೆ ಸೊಪ್ಪನ್ನು ಜೋಪಾನವಾಗಿ ತೆಗೆದಿರಿಸಿಯೂ ಆಯ್ತು.  ನಾಳೆ ಇನ್ನೊಂದು ಅಡುಗೆ ಆಗಲಿದೆ.  ಹೇಗೂ ಈಗ ಆಟಿ ತಿಂಗಳು,  ತಗತೆ ಸೊಪ್ಪು ಸರಿಯಾದ ಸಮಯಕ್ಕೆ ದೊರೆತಿದ್ದು ಕೂಡಾ ಸಂತಸದ ವಿಷಯ.


ನೀವೂ ತಿನ್ನಿ,  ಮಳೆಗಾಲದ ರೋಗರುಜಿನಗಳಿಂದ ಮುಕ್ತರಾಗಿ ನೆಮ್ಮದಿಯಿಂದಿರಿ.


ಸಂಸ್ಕೃತದಲ್ಲಿ ಚಕ್ರಮರ್ದ ಎನ್ನಲಾಗುವ ತಗತೆ ಆಯುರ್ವೇದ ರೀತ್ಯಾ ಒಂದು ಔಷಧೀಯ ಸಸ್ಯ.

ಅಂದ ಹಾಗೆ ಮಹಿಳೆಯರನ್ನೇ ಕಾಡುವ ಮಂಡಿನೋವು ಇದೆಯಲ್ಲ, ಅದಕ್ಕೂ ನಿವಾರಣೆ ಈ ತಗತೆಯಿಂದ ಸಾಧ್ಯವಂತೆ.  ಏನಿದ್ರೂ ತಜ್ಞರ ಸಲಹೆ ಉತ್ತಮ.

ಒಳ್ಳೆಯದೆಂದು ಅತಿ ಬಳಕೆ ಸಲ್ಲದು.

ಮಿತ ಪ್ರಮಾಣದಲ್ಲಿ ಆಡುಗೆಯಲ್ಲಿ ಬಳಸಿರಿ.

ಈ ಹಿಂದೆಯೂ ತಗತೆಯ ಹಲವು ಅಡುಗೆಗಳನ್ನು ಬರೆದಿದ್ದೇನೆ.   ಸಸ್ಯ ವಿಶೇಷತೆಯನ್ನೂ ವರ್ಣಿಸಿದ್ದೇನೆ.  ಸಾಧ್ಯವಾದರೆ ಹುಡುಕಿ ಓದಿರಿ.




 


Wednesday, 14 July 2021

ಅಂಬಟೆಯ ಅವಿಲ್

 



ಅಂಬಟೆಯ ಎಳೆ ಮಿಡಿಗಳನ್ನು ಕೊಯ್ದು ಉಪ್ಪಿನಕಾಯಿ ಹಾಕಿದ್ದಾಗಿದೆ,  ಬೆಂಗಳೂರಿಗೆ ತೆರಳುವಾಗ ಮಧು ತನಗೂ ತಂಗಿಗೂ ಕೊಂಡೊಯ್ದು ಆಯಿತು.  ಇದೆಲ್ಲ ಒಂದು ತಿಂಗಳ ಹಿಂದಿನ ಮಾತು.


ನಿನ್ನೆ ತೆಂಗಿನಕಾಯಿ ಕೊಯ್ಯಲು ತಾಳ್ತಜೆಯಿಂದ ನಾರಾಯಣ ಬಂದಿದ್ದಾಗ ತೋಟದಿಂದ ಅಂಬಟೆಯನ್ನೂ ಕೊಯ್ದು ತರಲು ಹೇಳಿದಾಗ ಬುಟ್ಟಿ ತುಂಬ ಅಂಬಟೆ ಬಂದಿತು.   ಈಗ ಅಂಬಟೆ ಗೊರಟು ಕಟ್ಟಿದೆ.  ಇದನ್ನೂ ಕತ್ತಿಯಲ್ಲಿ ಸ್ವಲ್ಪ ಶ್ರಮ ಪಟ್ಟು ಹೋಳು ಮಾಡಿ ಉಪ್ಪಿನಕಾಯಿ ಹಾಕಿಕೊಳ್ಳಬಹುದು.


ದಿನವೂ ಚಟ್ಣಿ,  ಸಾರು, ಗೊಜ್ಜು ಎಂದು ಉಣಲಡ್ಡಿಯಿಲ್ಲ.  ನಾಲ್ಕು ದಿನ ಕಳೆದಾಗ ಬುಟ್ಟಿಯಲ್ಲಿದ್ದ ಅಂಬಟೆಗಳು ಬಾಡುತ್ತಿವೆಯೇನೋ ಎಂದೆನ್ನಿಸಿ ಎಲ್ಲವನ್ನೂ ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಟ್ಟಾಯ್ತು.  ನೀರು ಹಾಕುವುದಕ್ಕಿಲ್ಲ,  ರಸಭರಿತವಾದ ಅಂಬಟೆಯಲ್ಲಿ ತಾನಾಗಿಯೇ ನೀರೆದ್ದುಕೊಳ್ಳುವುದರಿಂದ ಇದನ್ನು ದಾಸ್ತಾನು ಇಡಬಹುದಾಗಿದೆ.   ಇದೇ ತರಹ ಮಾವಿನಕಾಯಿಗಳನ್ನೂ ಹಲಸಿನಸೊಳೆಗಳನ್ನೂ ಉಪ್ಪಿನಲ್ಲಿ ದಾಸ್ತಾನು ಇಡುವ ರೂಢಿ ನಮ್ಮದು.  


 ಗ್ರಾಮೀಣ ಪ್ರದೇಶದ ಒಂದು ನಿರ್ಲಕ್ಷಿತ ಬೆಳೆ ಈ ಅಂಬಟೆ.

ಉಪ್ಪಿನ ಅಂಬಟೆಯ ಕೆಲಸ ತ್ರಾಸದಾಯಕವಲ್ಲ.  ಶುಭ್ರವಾದ ಜಾಡಿಯ ತಳದಲ್ಲಿ ಒಂದು ಹಿಡಿ ಉಪ್ಪು ಹರಡುವುದು,  

ಮೇಲಿನಿಂದ ಹತ್ತಿಪ್ಪತ್ತು ಅಂಬಟೆಗಳನ್ನು ಹಾಕುವುದು,  ಪುನಃ ಉಪ್ಪು ಮತ್ತು ಅಂಬಟೆ ಹಾಕುತ್ತ ಬರುವುದು,

ಕೊನೆಯಲ್ಲಿ ಮೇಲಿನಿಂದ ಇನ್ನಷ್ಟು ಉಪ್ಪು ಹಾಕಿಟ್ಟು ಜಾಡಿಯನ್ನು ಭದ್ರವಾಗಿ ಗಾಳಿ ಹೋಗದಂತೆ ಮುಚ್ಚಿದರಾಯಿತು.


ಅಂಬಟೆಯ ಹುಳಿಯಿಂದಾಗಿ ಉಪ್ಪಿನಲ್ಲಿ ಅದ್ದಿದ ಅಂಬಟೆ ಅಡುಗೆಯಲ್ಲಿ ಬಹಳ ಉಪಯುಕ್ತ,  ಹುಣಸೆಹುಳಿಗೆ ಪರ್ಯಾಯವಾಗಿ ಬಳಸಿರಿ.  ಸಾಂಬಾರು ಮಾಡುವಾಗ ಎರಡು ಅಂಬಟೆಗಳನ್ನು ಹಾಕಿದರಾಯಿತು,  ಹುಣಸೆ ಹುಳಿ ಬೇಕಾಗಿಲ್ಲ.  ತುಸುವೇ ಗೊರಟು ಕಟ್ಟಿರುವುದರಿಂದ ತಿನ್ನಲೂ ಹಿತವಾಗಿರುತ್ತದೆ.


ಈ ದಿನ ನಾವು ಅಂಬಟೆಯನ್ನು ಬಳಸಿ ಅವಿಲ್ ಯಾ ಅವಿಯಲ್ ಮಾಡುವವರಿದ್ದೇವೆ.

ಸಾಕಷ್ಟು ವೈವಿಧ್ಯಮಯ ತರಕಾರಿಗಳಿವೆ.

ಹಸಿ ತೆಂಗಿನಕಾಯಿಯೂ ಇದೆ.

ಈಗ ತಾನೇ ಕಡೆದ ಸಿಹಿ ಮಜ್ಜಿಗೆಯಿದೆ.   ಮಜ್ಜಿಗೆಯೂ ದಪ್ಪವಾಗಿದೆ.  ಒಂದು ಲೋಟ ಮಜ್ಜಿಗೆ ತೆಗೆದಿರಿಸುವುದು.

ಅರ್ಧ ಕಡಿ ತೆಂಗಿನ ತುರಿ ಸಾಕು.

ತರಕಾರಿಗಳನ್ನು ಇದ್ದಂತೆ ಬಳಸುವುದು.  

ಬೇಕಾದಂತಹ ತರಕಾರಿಗಳನ್ನು ಮೊದಲಾಗಿ ತೊಳೆಯುವುದು.

15 ತೊಂಡೆಕಾಯಿ,  ನಾಲ್ಕು ಹೋಳು ಮಾಡುವುದು.

10 ರಿಂದ 20 ಅಲಸಂದೆ,  ಸಮಾನ ಗಾತ್ರದಲ್ಲಿ ಕತ್ತರಿಸುವುದು.

ಒಂದು ಪಡುವಲ ಕಾಯಿ,  

ಗಡ್ಡೆ ತರಕಾರಿಯ ಬಾಬ್ತು ನಿನ್ನೆಯ ಅಡುಗೆಯಲ್ಲಿ ಬಳಸಿ ಉಳಿದ ಸಿಹಿಗೆಣಸು ಇದ್ದಿತು,  ಅದನ್ನೂ ಹೆಚ್ಚಿಡಲಾಯಿತು.  ಸಾಮಾನ್ಯವಾಗಿ ನಾವು ಹಳ್ಳಿ ಮಂದಿ ಹಿತ್ತಲ ಬೆಳೆಯಾದ ಮುಂಡಿ, ಕೇನೆ ಗೆಡ್ಡೆಗಳನ್ನು ಬಳಸುವ ರೂಢಿ.   ಯಾವುದೂ ಸಿಗದಿದ್ದರೆ ಅಂಗಡಿಯ ಕ್ಯಾರೇಟು ಇದೆ. ಹಾಗೆಂದು ಬೀಟ್ರೂಟ್ ಗೆಡ್ಡೆ ಹಾಕಲೇಬಾರದು,  ಅದು ಅವಿಲಿನ ಅಂದಗೆಡಿಸಿ ಬಿಟ್ಟೀತು.

ಉಳಿದಂತೆ ಬಾಳೆಕಾಯಿ ಕೂಡಾ ಹಾಕುವುದಿದೆ,  ಇವತ್ತು ನಾನು ಬಾಳೆಕಾಯಿ ಹಾಕಿಲ್ಲ.

ಎಲ್ಲವೂ ಸೇರಿದಾಗ ಒಂದು ಲೀಟರ್ ಅಳತೆಯ ಪಾತ್ರೆ ತುಂಬಿತು,  ಇಷ್ಟು ಸಾಕು.


ತರಕಾರಿಗಳನ್ನು ಕುಕ್ಕರಿನಲ್ಲಿ ತುಂಬಿ, 2ರಿಂದ 3 ಅಂಬಟೆಗಳೊಂದಿಗೆ ಬೇಯಿಸಿ. ಬೇಯಲು ಬೇಕಾದಷ್ಟೇ ನೀರು ಎರೆಯಿರಿ.  ರುಚಿಗೆ ಬೇಕಾದ ಉಪ್ಪು ಈಗಲೇ ಹಾಕಬೇಕು. ಅಂಬಟೆಗಳನ್ನು ಜಜ್ಜಿ ಹಾಕಿದರೆ ಉತ್ತಮ,  ಕತ್ತಿಯಲ್ಲಿ ಗೀರು ಎಳೆದರೂ ಸಾಕು.

ಒಂದು ಸೀಟಿ ಹಾಕಿದಾಗ ಸ್ಟವ್ ನಂದಿಸಿ,  ನಿಧಾನವಾಗಿ ಒತ್ತಡ ತೆಗೆಯಿರಿ.  ತರಕಾರಿಗಳು ಬೆಂದಿವೆ.


ಇದೀಗ ತೆಂಗಿನಕಾಯಿ ಅರೆಯಿರಿ.

ಅರೆಯುವಾಗ 2 ಹಸಿಮೆಣಸು,  ಪುಟ್ಟ ಚಮಚ ಜೀರಿಗೆ ಹಾಗೂ ಚಿಟಿಕೆ ಅರಸಿಣ ಹಾಕತಕ್ಕದ್ದು.

ಅತಿ ಕಡಿಮೆ ನೀರು ಬಳಸಿ, ಸಾಧ್ಯವಿದ್ದಷ್ಟು ನುಣ್ಣಗೆ ಅರೆದಷ್ಟೂ ಪದಾರ್ಥ ರುಚಿಕರವಾಗುವುದೆಂದು ತಿಳಿದಿರಲಿ.


ತೆಂಗಿನ ಅರಪ್ಪು  ತರಕಾರಿಗಳೊಂದಿಗೆ ಕೂಡುವ ಮೊದಲೇ ಬೇಯಿಸಿದ ನೀರನ್ನು ಬಸಿದು ಇಟ್ಕೊಳ್ಳಿ,  ಇದೀಗ ಕಾಯಿ ಅರಪ್ಪು ಯಾ ರುಬ್ಬಿದ  ಮಸಾಲೆ ಬೆರೆಸಿ,  ತೆಗೆದಿರಿಸಿದ ದಪ್ಪ ಮಜ್ಜಿಗೆ ಎರೆಯಿರಿ.  ಗಟ್ಟಿ ಮುದ್ದೆಯಂತೆ ಆಯಿತೇ,  ಇಟ್ಕೊಂಡಿದ್ದೀರಲ್ಲ ತರಕಾರಿ ಬೇಯಿಸಿದ ನೀರು,  ಅದನ್ನು ಸೂಕ್ತವಾಗುಮಂತೆ ಎರೆದು ಕುದಿಯಲು ಇಡುವುದು.

ರುಚಿಯ ಉಪ್ಪು ಸಾಲದಿದ್ದರೆ ಹಾಕುವುದು,  ಚಿಕ್ಕ ತುಂಡು ಬೆಲ್ಲವೂ ಬೀಳಲಿ.

ಒಂದು ಕುದಿ ಬಂದಾಗ ಕೆಳಗಿಳಿಸುವುದು.

ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಬೀಳುವಲ್ಲಿಗೆ ಅಂಬಟೆಯ ಅವಿಲ್ ಎಂಬ ಕಥಾನಕ ಪೂರ್ಣಗೊಂಡಿದೆ.


ಇನ್ನೇನು ಓಣಂ ಹಬ್ಬ ಬರಲಿದೆ.  ಓಣಂ ಭೋಜನಕೂಟ ಅವಿಲ್ ಇಲ್ಲದೆ ನಡೆಯದು.

ತೆಂಗಿನಕಾಯಿ ಹಾಕಿದ ಯಾವುದೇ ಅಡುಗೆಯಿರಲಿ,  ತೆಂಗಿನೆಣ್ಣೆಯಂದಲೇ ಒಗ್ಗರಣೆ ಬಿದ್ದರೆ ಅಡುಗೆ ಪರಿಪೂರ್ಣವಾದಂತೆ.