Pages

Ads 468x60px

Sunday, 29 April 2012

ರಾಗಿ ಬಹೂಪಯೋಗಿ

ರಾಗಿ ' ಎಂದಾಕ್ಷಣ ನೆನಪಾಗುವುದು ರಾಗಿಮುದ್ದೆ. " ಏನೋ ಬಯಲುಸೀಮೆಯವರ ತಿನಿಸು " ಅಂದ್ಕೊಂಡು ಸುಮ್ಮಗಿರ್ತೀವಿ . ಹಳೆಯ ಕನ್ನಡ ಚಲನಚಿತ್ರಗಳಲ್ಲಿ ರಾಜಕುಮಾರ್ - ಭಾರತಿ ಜೋಡಿ ರಾಗಿಮುದ್ದೆ ತಿನ್ನೋ ವೈಖರಿ ಕಣ್ಣ ಮುಂದೆ ಸುಳಿಯಲೂ ಬಹುದು . ಕರಾವಳಿಯವರಿಗೆ , ಮಲೆನಾಡಿಗರಿಗೆ ಇದು ಅಪರಿಚಿತ ದವಸಧಾನ್ಯಗಳಲ್ಲೊಂದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ . ಆಧುನಿಕತೆಯ ಆಗಮನದೊಂದಿಗೆ ಜಗತ್ತು ಕುಬ್ಜವಾಗಿಬಿಟ್ಟಿದೆ . ಎಲ್ಲಾ ವಿಧವಾದ ಸರಕುಗಳು ಎಲ್ಲೆಡೆಯೂ ಲಭ್ಯವಿವೆ . ಸುದ್ಧಿಮಾಧ್ಯಮಗಳು , ಟೀವಿ, ಇಂಟರ್ನೆಟ್ ಇತ್ಯಾದಿಗಳಿಂದ ಮಾಹಿತಿಗಳು ನಿರಂತರವಾಗಿ ದೊರೆಯುತ್ತಿವೆ . ಕ್ಷಣಮಾತ್ರದಲ್ಲಿ ' ರಾಗೀಮುದ್ದೇ ' ಮಾಡೋದನ್ನು ಕಲಿಯುವಂತಹ ಚಾಕಚಕ್ಯತೆ ಇಂದಿನ ಗೃಹಿಣಿಗಿದೆ.

ದಕ್ಷಿಣ ಭಾರತದಲ್ಲಿ ರಾಗಿಯ ಬಳಕೆ ವ್ಯಾಪಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಗಿಯ ಬೆಳೆ ಕುಂಠಿತವಾಗಿದೆಯೆಂದು ಅಧ್ಯಯನಗಳು ತಿಳಿಸುತ್ವವೆ. ಇಂದಿನ ಯುವಜನತೆ ಕೃಷಿಯೇತರ ಚಟುವಟಿಕೆಗಳಲ್ಲಿ ಆಸಕ್ತವಾಗಿರುವುದೂ , ಕೃಷಿ ಲಾಭದಾಯಕ ಉದ್ಯಮವಾಗಿಲ್ಲದಿರುವುದೂ ಇದಕ್ಕೆ ಕಾರಣವಾಗಿದೆ . ಇನ್ನಿತರ ಕೃಷ್ಯುತ್ಪನ್ನಗಳಂತೆ ರಾಗಿ ಬೇಸಾಯಕ್ಕೆ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲ . ಗೊಬ್ಬರವೂ ಬೇಕಾಗಿಲ್ಲ , ಕೀಟನಾಶಕಗಳ ಹಂಗೂ ಇದಕ್ಕಿಲ್ಲ . ವೈಜ್ಞಾನಿಕವಾಗಿ Eleusine coracana ಹೆಸರನ್ನು ಹೊಂದಿರುವ ರಾಗಿ ಇತಿಯೋಪಿಯಾ ಮೂಲದ್ದು ಎಂದು ಹೇಳಲಾಗುತ್ತಿದೆ . ಈ ವಾದವನ್ನು ಒಪ್ಪಬೇಕೆಂದೇನೂ ಇಲ್ಲ .

ಹರಿದಾಸ ಸಾಹಿತ್ಯದಲ್ಲಿ ರಾಗಿಯನ್ನು ಹಾಡಿ ಹೊಗಳುವ ಅನೇಕ ಕೀರ್ತನೆಗಳಿವೆ . ಸ್ವಯಂ ಪುರಂದರದಾಸರೇ ' ರಾಗಿಯ ತಂದೀರಾ ಬಿಕ್ಷಕೆ ರಾಗಿಯ ತಂದೀರಾ ' ಎಂದು ಹಾಡಿದ್ದಾರೆ. ಆ ಕಾಲದ ಸಾಮಾಜಿಕ ತಾರತಮ್ಯವನ್ನು ಧಾನ್ಯಗಳ ರೂಪಕದ ಮೂಲಕ ಅಪೂರ್ವ ಕಾವ್ಯವನ್ನು ಕನಕದಾಸರು ರಚಿಸಿದ್ದಾರೆ. ಶ್ರೀರಾಮನಿಂದ ರಾಗಿಗೆ ಸಂದ ಗೌರವದ ಕತೆಯೇ `ರಾಮಧಾನ್ಯ`. ರಾಗಿ ಬತ್ತಗಳ ಜಗಳದ ತೀರ್ಪಿನ ಘನತೆಯನ್ನು ಮನಗಾಣಿಸುವ ಪೂರಕ ವರ್ಣನಾವಿಶೇಷತೆಯೂ ಇದಾಗಿದೆ ರಾಗಿ ನಮ್ಮ ಜನಮಾನಸದಲ್ಲಿ ಹೀಗೆ ಬೆರೆತುಕೊಂಡಿದೆ . ಇಂತಹ ಧಾನ್ಯವನ್ನು ' ಎಲ್ಲಿಂದಲೋ ಭಾರತಕ್ಕೆ ಬಂದಿದೆ ' ಎಂದು ಹೇಗೆ ಕರೆಯೋಣ ?

ಇನ್ನಿತರ ದವಸಧಾನ್ಯಗಳು ಹುಳ ಹಿಡಿದು ಹಾಳಾಗುವಲ್ಲಿ ಈ ರಾಗಿ 50 ವರ್ಷಗಳಾದರೂ ಬಾಳಿಕೆಯ ಶಕ್ತಿಯನ್ನು ಹೊಂದಿದೆ . ಹಿಂದೆ ಕ್ಷಾಮಡಾಮರಗಳ ಕಾಲದಲ್ಲಿ ಉಪಯೋಗಿಸಲೆಂದೇ ಇದನ್ನು ದಾಸ್ತಾನು ಮಾಡಲಾಗುತ್ತಿತ್ತು . ಇದಕ್ಕೆಂದೇ ವಿಶೇಷ ' ಹಗೇವು ' ನಿರ್ಮಿಸುತ್ತಿದ್ದರು. ರಾಗಿಯ ಒಣಹುಲ್ಲು ಜಾನುವಾರುಗಳಿಗೆ ಪೌಷ್ಟಿಕ ಆಹಾರ . ಶ್ರಮಜೀವಿಗಳಾದ ರೈತಾಪಿವರ್ಗಕ್ಕೆ ಇದು ಸಂತುಲಿತ ಆಹಾರಧಾನ್ಯವಾಗಿದೆ .

ಕ್ಯಾಲ್ಸಿಯಂ , ಖನಿಜಾಂಶಗಳು , ಪ್ರೊಟೀನ್ ಹೇರಳವಾಗಿರುವ ರಾಗಿ ಪೋಷಕಾಂಶಗಳ ಆಗರ . ಅಬಾಲವೃದ್ಧರಿಗೆ ಆದರ್ಶಪ್ರಾಯ ಆಹಾರ . ವೈದ್ಯರು ಕೊಡುವ ವಿಟಮಿನ್ ಮಾತ್ರೆಗಳನ್ನು ನುಂಗುವ ಬದಲು ರಾಗೀ ಗಂಜಿಯನ್ನು ನಿಯಮಿತವಾಗಿ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ . ಬಳಲಿಕೆ ಮಾಯವಾಗಿ ಶರೀರವೂ ಹಾಯೆನಿಸುವುದು . ಇದರಲ್ಲಿರುವ ಪೋಷಕಾಂಶಗಳು ಬಹು ಬೇಗನೆ ಜೀರ್ಣವಾಗುವಂಥವು . ಹಾಗಾಗಿ ಪುಟ್ಟ ಮಗುವಿಗೆ 6 ತಿಂಗಳಾದೊಡನೆ ರಾಗೀಮಣ್ಣಿ ಕೊಡಬಹುದಾಗಿದೆ . ರಾಗಿಮುದ್ದೆ ತಯಾರಿಗೆ ಪರಿಣತಿಯ ಅವಶ್ಯಕತೆ ಇದೆ , ಹಾಗೆಯೇ ತಿನ್ನಲೂ ಸಹ . ಮಾಡುವುದನ್ನು ನೋಡಿಯೇ ಕಲಿಯಿರಿ . ಸುಲಭವಾಗಿ ತಯಾರಿಸಬಹುದಾದ ಕೆಲವು ವೈವಿಧ್ಯಗಳು ಇಲ್ಲಿವೆ .

ಚಮಚ ರಾಗಿಹುಡಿಯನ್ನು 1 ಕಪ್ ನೀರಿನೊಂದಿಗೆ ಕುದಿಸಿ ರಾಗಿ ಗಂಜಿ ತಯಾರಿಸಿ.
1 ಚಮಚ ಬಾದಾಮ್ ಹುಡಿ ಸೇರಿಸಿ.
2 ಚಮಚ ಸಕ್ಕರೆ ಸೇರಿಸಿ.
1 ಕಪ್ ಬಿಸಿ ಹಾಲು ಸೇರಿಸಿ.
ಈಗ ಬಿಸಿಬಿಸಿ ರಾಗಿ ಪೆಯ ಸಿದ್ಧ. ಇದನ್ನು ನೀವೂ ಕುಡಿಯಿರಿ. ಮುದ್ದು ಮಕ್ಕಳಿಗೂ ಕುಡಿಸಿ. ವಯಸ್ಸಾದವರಿಗೂ ಹಿತಕರ.

ರಾಗೀ ಸೂಪ್ :
ಮೇಲೆ ಹೇಳಿದಂತೆ ರಾಗಿ ಗಂಜಿ ತಯಾರಿಸಿ.
1 ಈರುಳ್ಳಿ ಸಣ್ಣಗೆ ಹಚ್ಚಿ ತುಪ್ಪದಲ್ಲಿ ಹುರಿಯಿರಿ.
ರುಚಿಗೆ ಉಪ್ಪು, ಚಿಟಿಕೆ ಕಾಳುಮೆಣಸಿನ ಹುಡಿ ಸೇರಿಸಿ ಊಟಕ್ಕೆ ಮೊದಲು ಈ ರಾಗೀ ಸೂಪ್ ಸವಿಯಿರಿ.

ರಾಗಿ ಪಾನಕ :
1 ಚಮಚ ರಾಗಿ ಹುಡಿ.
1 ಚಮಚ ಬಾದಾಮ್ ಹುಡಿ.
3 ಚಮಚ ಸಕ್ಕರೆ.
1 ಚಿಟಿಕೆ ಏಲಕ್ಕಿ ಹುಡಿ.
1ದೊಡ್ಡ ಲೋಟ ನೀರು.
ಎಲ್ಲವನ್ನೂ ಚೆನ್ನಾಗಿ ಬೆರೆಸಿ 1ತುಂಡು ಐಸ್ ಹಾಕಿ ಕುಡಿಯಿರಿ, ಅಥವಾ ಫ್ರಿಜ್ ನಲ್ಲಿ ಅರ್ಧ ಗಂಟೆ ಇಟ್ಟು ಕುಡಿಯಿರಿ.
ವೈನ್ ತಯಾರಿಕೆಗೂ ಇದನ್ನು ಬಳಸುತ್ತಾರೆ.

2 ಕಪ್ ಅಕ್ಕಿ ನುಣ್ಣಗೆ ಅರೆದು 1 ಕಪ್ ರಾಗಿ ಹುಡಿ ಸೇರಿಸಿ ನೀರುದೋಸೆ ( ತೆಳ್ಳವು ) ಹಿಟ್ಟಿನ ಹದಕ್ಕೆ ತನ್ನಿ . ರುಚಿಗೆ ಉಪ್ಪು ಸೇರಿಸಿ ದೋಸೆ ಎರೆಯಿರಿ . ಕಾಯ್ ಚಟ್ನಿಯೊಂದಿಗೆ ತಿನ್ನಿ .

1 ಕಪ್ ಉದ್ದು , 1 ಕಪ್ ಅಕ್ಕಿಯಿಂದ ಇಡ್ಲಿ ಹಿಟ್ಟು ತಯಾರಿಸಿ , 1 ಕಪ್ ರಾಗಿ ಹುಡಿ ಸೇರಿಸಿ , ರುಚಿಗೆ ಉಪ್ಪು ಹಾಕಿ 8 ಗಂಟೆ ಮುಚ್ಚಿ ಇಡಿ . ಇಡ್ಲಿ ತಯಾರಿಸಿ .

ಎಣ್ಣೆಯಲ್ಲಿ ಕರಿದ ತಿಂಡಿಗಳಾದ ಚಕ್ಕುಲಿ , ಕೋಡುಬಳೆಗಳನ್ನು ಅಕ್ಕಿಯೊಂದಿಗೆ ರಾಗಿಯನ್ನೂ ಸೇರಿಸಿ ಮಾಡಬಹುದು .

ಬೆಲೆಯೇರಿಕೆಯ ಈ ಕಾಲದಲ್ಲಿ ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುವ ಆಹಾರಧಾನ್ಯ ರಾಗಿ. ಚಿಂತೆ ಬಿಡಿ , ಇಂದೇ ರಾಗಿ ಕೊಂಡು ತನ್ನಿ , ಉಪಯೋಗಿಸಿ , ಆರೋಗ್ಯವಂತರಾಗಿ , ದೃಢಕಾಯರಾಗಿ ಬಾಳಿ .



ಟಿಪ್ಪಣಿ: ದಿನಾಂಕ 1, ಎಪ್ರಿಲ್ 2014 ರಂದು ಸೇರಿಸಿದ್ದು...


ಸೆಕೆ ಸಮಯ ಬಂದಿತೇ, ಅಡುಗೆಮನೆಯಲ್ಲಿ ರಾಗೀ ವೈಭವ. ಮುಂಜಾನೆಯ ತಿಂಡಿ ಯಾವುದೇ ಇರಲಿ, ರಾಗಿ ಸೇರಿದ್ರೇನೇ ತಂಪು ತಂಪು. ಶನಿವಾರ ಬಂತೆಂದ್ರೆ ಸಾಕು, ಧಾವಿಸಿ ಮನೆಗೆ ಓಡೋಡಿ ಬರುವ ಮಗಳು.
" ನಾಳೆ ತಿಂಡಿ ಏನ್ಮಾಡ್ಲೀ ?" ಅವಳ ಹುಕುಂ ಪ್ರಕಾರವೇ ನಡೆಯತಕ್ಕದ್ದು.
" ಉದ್ದಿನ ದೋಸೆ ಮಾಡಮ್ಮ "
ಉದ್ದಿನ ದೋಸೆ ಎಂಬ ಹಣೆಪಟ್ಟಿ ಹೊತ್ತು ಮುಂಜಾನೆ ರಾಗಿದೋಸೆ ಹೀಗೆ ಸಿದ್ಧವಾಯಿತು.
2 ಕಪ್ ಬೆಳ್ತಿಗೆ ಅಕ್ಕಿ
ಉದ್ದು, ಪಚ್ಚೆಹಸ್ರು ಕಾಳು ಜೊತೆಯಾಗಿ ಒಂದು ಕಪ್. ಪಚ್ಚೆಹಸ್ರನ್ನೇ ಜಾಸ್ತಿ ಹಾಕಿ.
ಒಂದು ಚಮಚ ಮೆಂತೆ
ಒಂದು ಕಪ್ ರಾಗಿ ಹುಡಿ
ಧಾನ್ಯಗಳನ್ನೂ ಅಕ್ಕಿಯನ್ನೂ ಪ್ರತ್ಯೇಕವಾಗಿ ನೆನೆ ಹಾಕಿಟ್ಟು, ತೊಳೆದು, ಮೊದಲು ಧಾನ್ಯಗಳನ್ನು ನುಣ್ಣಗೆ ಅರೆಯಿರಿ.
ಅಕ್ಕಿಯನ್ನೂ ನುಣ್ಣಗೆ ಅರೆದು, ಹಿಟ್ಟು ತೆಗೆಯುವ ಮುನ್ನ ರಾಗಿ ಹುಡಿ ಸೇರಿಸಿ ಅರೆಯುವ ಯಂತ್ರ ತಿರುಗಿಸಿ ತೆಗೆದ ಹಿಟ್ಟುಗಳನ್ನು ಒಟ್ಟುಗೂಡಿಸಿ, ಉಪ್ಪು ಬೆರೆಸಿ ಮುಚ್ಚಿ ಇಡಿ. ಎಂಟು ಗಂಟೆಗಳ ಕಾಲ ಹುದುಗು ಬಂದ ನಂತರ ಗರಿಗರಿಯಾದ ದೋಸೆ ಎರೆದು ಕಾಯ್ ಚಟ್ನಿ, ಗಟ್ಟಿ ಮೊಸರಿನೊಂದಿಗೆ ಸವಿಯಿರಿ.





ಅಕ್ಕಿ, ಪಚ್ಚೆಹಸ್ರು, ರಾಗಿ - ಒಂದೇ ಪ್ರಮಾಣದಲ್ಲಿ ನುಣ್ಣಗೆ ಅರೆದು ಎರೆಯಿರಿ. ಈ ಹಿಟ್ಟು ಹುಳಿ ಬರಬಾರದು.





ಯುಗಾದಿಯೂ ಬಂದಿತ್ತು. " ಗೇರುಬೀಜದ ಪಾಯಸ ಆದೀತೇ ?"
" ಬೇಡ್ವೇ ಬೇಡ, ಖರ್ಜೂರದ್ದು ಪಾಯಸ ಮಾಡಮ್ಮ"
ಮನೆಯಲ್ಲಿದ್ದವರು ನಾವು ಮೂರೇ ಮಂದಿ.
ಒಂದ್ಹತ್ತು ಖರ್ಜೂರ ಬಿಡಿಸಿ, ಬೀಜ ತೆಗೆದು, ಒಂದು ಕುದಿ ಕುದಿಸಿ ಕೆಳಗಿಟ್ಟುಕೊಳ್ಳಿ.
ಒಂದು ಚಮಚ ಗಸಗಸೆ ಹುರಿದಿಟ್ಟುಕೊಳ್ಳಿ.
ತೆಂಗಿನಕಾಯಿ ಹಾಲು ಸಿದ್ಧವಾಗಲಿ.
ನೀರು ಕಾಯಿ ಹಾಲಿಗೆ 2 ಚಮಚ ರಾಗಿ ಹುಡಿ ಹಾಕಿ ಕಲಸಿಟ್ಟುಕೊಳ್ಳಿ.
ಖರ್ಜೂರ ತಣಿಯಿತೇ, ಅರೆಯುವ ಯಂತ್ರದಲ್ಲಿ ಒಂದು ಸುತ್ತು ತಿರುಗಲಿ.
ರಾಗಿ ಬೆರೆಸಿದ ಕಾಯಿ ಹಾಲು ಒಲೆಯ ಮೇಲೇರಲಿ.
ಕುದಿಯುತ್ತಾ ಹಿಟ್ಟು ದಪ್ಪವಾಯಿತೇ, ಖರ್ಜೂರದ ಮಿಶ್ರಣವೂ ಸೇರಲಿ.
ಹುರಿದಿಟ್ಟ ಗಸಗಸೆಯೂ ಬೀಳಲಿ.
ಸಕ್ಕರೆ ಒಂದು ಕಪ್ ಹಾಕಿ, ಕರಗಲಿ.
ಸಕ್ಕರೆ ಕರಗಿತೇ, ದಪ್ಪ ಕಾಯಿಹಾಲು ಇಳಿಯಲಿ.
ಒಂದು ಕುದಿ ಬರಲಿ.
ದ್ರಾಕ್ಷಿ, ಗೋಡಂಬಿ ಬೇಕಾದೋರು ಹಾಕಿಕೊಳ್ಳಿ. ಗಸಗಸೆ ಹಾಕಿರೋದ್ರಿಂದ ಏಲಕ್ಕಿ ಬೇಡ.
ಊಟದ ಕೊನೆಯಲ್ಲಿ ಕುಡಿಯಲು ಹಿತಕರ, ಬಿರುಬಿಸಿಲಿಗೂ ಸುಖವಾದ ನಿದ್ರೆ ಬಂದೀತು.



Wednesday, 14 March 2012

ಬದುಕಿಗೆ ಸಿಹಿ , ಬೇವಿನ ಕಹಿ



ಇನ್ನೇನು ಯುಗಾದಿ ಬರಲಿದೆ. ಎಲ್ಲರಿಗೂ ಬೇವುಬೆಲ್ಲ ಹಂಚುವ ಸಮಯ. ಈ ಪರ್ವಕಾಲದಲ್ಲಿ ಕಹಿಬೇವಿನ ಮಹತ್ದದ ಬಗ್ಗೆ ನಮಗೆಷ್ಟು ತಿಳಿದಿದೆ ? ಒಂದು ವಿಶ್ಲೇಷಣೆ ಮಾಡೋಣ. ಯುಗಾದಿಯೊಂದಿಗೆ ವನಸ್ಪತಿ ಸಸ್ಯಗಳನ್ನು ಆಹಾರವಾಗಿ ಸೇವಸುವ ಕ್ರಮವನ್ನು ನಮ್ಮ ಹಬ್ಬಹರಿದಿನಗಳಲ್ಲಿ ಮಾಮೂಲಿಯಾಗಿಸಿ, ಅವುಗಳ ಮಹತ್ವ ಎಂದೆಂದಿಗೂ ಇರುವಂತೆ ಮಾಡಿದ್ದಾರೆ ನಮ್ಮ ಹಿರಿಯರು. ಅವರಿಗೆ ನಾವು ಕೃತಜ್ಞರಾಗಿರೋಣ.

ಮಲಯಾಳಂ ಭಾಷೆಯಲ್ಲಿ ' ಕೈಪ್ಪನ್ ' ಎಂದು ಹೇಳಲಾಗುವ ಈ ಮರ ನಮ್ಮ ನಾಗರಿಕ ಜಗತ್ತಿನೊಂದಿಗೆ ಬೆಳೆದು ಬಂದಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚು ವಿಮರ್ಶೆಗೊಳಗಾಗಿರುವಂಥ ಮಾರ್ಗೋಸಾ ಟ್ರೀ, ಪ್ರತೀ ಮೂರು ವರ್ಷಗಳಿಗೊಮ್ಮೆ ವಿಜ್ಞಾನಿಗಳು ಈ ಮರದ ಬಗ್ಗೆ ಸಮ್ಮೇಳನ ನಡೆಸುತ್ತಿರುವುದರಿಂದ ಇದು ಗ್ಲೋಬಲ್ ಟ್ರೀ. ಇದರ ವಿಶಿಷ್ಟ ರಾಸಾಯನಿಕ ಸಂಯೋಜನೆಗಳನ್ನು ಭಾರತೀಯ ವಿಜ್ಞಾನಿಗಳೇ ಹೊರಜಗತ್ತಿಗೆ ಪ್ರಕಟಪಡಿಸಿದ್ದಾರೆ. 15ರಿಂದ 20 ಅಡಿ ಎತ್ತರ ಬೆಳೆಯುವ ಈ ಮರ ಸಸ್ಯಶಾಸ್ತ್ರೀಯವಾಗಿ azadirachta indica ಎಂಬ ಹೆಸರನ್ನು ಹೊಂದಿದೆ. ಒಂದು ಅಧ್ಯಯನದ ಪ್ರಕಾರ 2050ರ ಇಸವಿಯ ಒಳಗಾಗಿ ಏಷ್ಯಾ ಹಾಗೂ ಆಫ್ರಿಕಾಗಳು ಕಸದ ತೊಟ್ಟಿಗಳಾಗಲಿವೆ, ಹಾಗಾಗಿ ನೈಸರ್ಗಿಕ ಕೀಟನಾಶಕವಾದ ಕಹಿಬೇವು ವಿಜ್ಞಾನಿಗಳ ದೃಷ್ಟಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ.






ನೂರಕ್ಕೂ ಹೆಚ್ಚು ಖಾಯಿಲೆಗಳನ್ನು ಗುಣಪಡಿಸುವುದು.

ಔಷಧಿಯಾಗಿ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಇಸುಬು ಅಥವಾ ಚರ್ಮದ ಉರಿಯೂತ , ಇನ್ನಿತರ ಚರ್ಮವ್ಯಾಧಿಗಳಲ್ಲಿ ಬಳಕೆ. ಅತಿ ಸೂಕ್ಷ್ಮ ಕ್ರಿಮಿನಾಶಕವಾದ ಇದರ ಹಲವಾರು ಆಯುರ್ವೇದಿಕ್ ಉತ್ಪನ್ನಗಳು ಲಭ್ಯವಿವೆ.

ನಿಯಮಿತವಾಗಿ ಕಹಿಬೇವಿನಕಡ್ಡಿಗಳಿಂದ ಹಲ್ಲುಜ್ಜಿರಿ. ಬಾಯಿಯ ದುರ್ವಾಸನೆ ತಡೆಗಟ್ಟಿರಿ. ಶೋಭಾಯಮಾನ ದಂತಪಂಕ್ತಿ ನಿಮ್ಮದಾಗುವುದು. ನಿತ್ಯವೂ ಐದಾರು ಎಲೆಗಳನ್ನು ಅಗಿಯಿರಿ. ಹಲ್ಲುಗಳ ತೊಂದರೆ ನಿವಾರಣೆಯಾಗಿ ಉತ್ತಮ ಧ್ವನಿಯನ್ನು ಪಡೆಯಿರಿ.

ಕಹಿಬೇವಿನ ಎಲೆ, ಹೂ, ಬೀಜ, ಕಾಂಡ, ತೊಗಟೆ ಎಲ್ಲವೂ ಉಪಯುಕ್ತ .

ಊಟದೊಂದಿಗೆ ಕಹಿಬೇವಿನ ಹೂವಿನ ಗೊಜ್ಜು ಉತ್ತಮ ವ್ಯಂಜನವಾಗಿದೆ. ಕಹಿಬೇವಿನ ಎಳೆಯ ಕುಡಿಗಳು, ಹೂಗಳು ಸೊಪ್ಪುತರಕಾರಿಯಾಗಿ ಉಪಯೋಗ. ಆದರೆ ಕಹಿಬೇವಿನಎಣ್ಣೆಗೆ ಅಡುಗೆಮನೆ ಪ್ರವೇಶವಿಲ್ಲ !

ಯುಗಾದಿಯ ಪ್ರಾರಂಭ ಭೇವುಬೆಲ್ಲದ ಸ್ವಾಗತ, ಧಾರ್ಮಿಕ ಸಸ್ಯವಾಗಿ ಖ್ಯಾತಿ.

ಕಹಿಬೇವಿನ ಬೀಜದ ಹುಡಿಯನ್ನು ನೀರಿನಲ್ಲಿ ಕದಡಿ ಕೃಷಿಬೆಳೆಗಳಿಗೆ ಸಿಂಪಡಿಸುವುದು ಪಾರಂಪರಿಕ ಪದ್ಧತಿ. ಇದರಿಂದ ಬೆಳೆಗಳಿಗೆ ಯಾವುದೇ ಹಾನಿಯಿಲ್ಲ. ಕಹಿಬೇವಿನಹಿಂಡಿ ಮೇಲುಗೊಬ್ಬರವಾಗಿ ಬಳಕೆಯಲ್ಲಿದೆ.

ನೀರಿನಲ್ಲಿ ತೇಯ್ದ ಕಹಿಬೇವಿನಕೊರಡಿನ ಪೇಸ್ಟ್ ಗಾಯಗಳಿಗೆ ಹಚ್ಚಲು ಯೋಗ್ಯ. ಕಹಿಬೇವಿನಸೊಪ್ಪನ್ನು ಅರೆದು ಲೇಪ ಹಚ್ಚುವುದು ಇನ್ನೊಂದು ವಿಧಾನ.

ಒಣಗಿಸಿದ ಕಹಿಬೇವಿನಸೊಪ್ಪಿನ ಹೊಗೆ ಹಾಕವುದರಿಂದ ಸೊಳ್ಳೆಗಳು ಮಾರು ದೂರ ಓಡುವುವು.

ಇದರ ಬಿಸಿನೀರಸ್ನಾನದಿಂದ ಚರ್ಮವ್ಯಾಧಿಗಳು ಗುಣವಾಗುವುವು. ತಲೆಯ ಹೇನು, ಸೀರುಗಳಿಗೆ ಕಹಿಬೇವಿನೆಣ್ಣೆ ಹಚ್ಚಿ ತಿಕ್ಕಿರಿ, ಕಹಿಬೇವಿನ ಕಷಾಯದಿಂದ ತಲೆಕೂದಲನ್ನು ತೊಳೆಯಿರಿ . ಕೂದಲುದುರುವಿಕೆಯನ್ನು ತಡೆಗಟ್ಟಿರಿ.

ಹಿಂದಿನ ತಲೆಮಾರಿನವರಲ್ಲಿ ಬಾಣಂತಿಯರಿಗೆ ಕಹಿಬೇವಿನ ಕಷಾಯ ಸೇವನೆ ಕಡ್ಡಾಯವಾಗಿತ್ತು. ಈಗ ಎಲ್ಲರೂ ಆಸ್ಪತ್ರೆಯತ್ತ ಓಡುವುದರಿಂದಾಗಿ ಇಂತಹ ನೈಸರ್ಗಿಕ ಆಂಟಿಸೆಪ್ಟಿಕ್ ಮನೆಮದ್ದುಗಳು ಮರೆತೇ ಹೋಗುವ ಸ್ಥಿತಿಗೆ ಬಂದಿವೆ.

ನೀರಿನ ಅವಶ್ಯಕತೆ ಇಲ್ಲದೆ ಬಂಜರುಭೂಮಿಯಲ್ಲೂ ಬೆಳೆಯುವುದು ಇದರ ವೈಶಿಷ್ಟ್ಯ. ಕಹಿ ಬೇವಿನ ಬೀಜಗಳಿಂದ ಸಸಿಗಳನ್ನು ತಯಾರಿಸಬಹುದು. ಮನೆಯ ಹಿಂದೆ ಅಥವಾ ಮುಂದೆ ಬೆಳೆಸಬಹುದು. ಪರಿಸರಸಂವೇದಿಯಾಗಿ ಹೆಚ್ಚು ಆಮ್ಲಜನಕದ ಉತ್ಪಾದನೆ , ತನ್ಮೂಲಕ ನೈಸರ್ಗಿಕ ವಾತಾವರಣ ಶುದ್ಧೀಕರಣ ಕ್ರಿಯೆ. ಬಿರುಬೇಸಿಗೆಯನ್ನೂ ತಾಳಿಕೊಳ್ಳುವ ಶಕ್ತಿ, ಸದಾ ಹಚ್ಚಹಸಿರು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಸವಕಳಿಯನ್ನು ತಡೆಯುವ ಅಪೂರ್ವ ವೃಕ್ಷ. ಕೀಟನಾಶಕವಾಗಿರುವ ಈ ಮರಕ್ಕೆ ಸ್ವತಃ ಕೀಟಬಾಧೆಯನ್ನು ತಾಳಿಕೊಳ್ಳುವ ಶಕ್ತಿ ಇಲ್ಲ !











Sunday, 19 February 2012

ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !




" ಅಡಿಕೆ ಸುಲಿಯಬೇಕಿತ್ತಲ್ಲ "
" ಆ ರಮೇಶ ಇದಾನಲ್ಲ, ಫೋನ್ ಮಾಡಿದ್ರಾಯ್ತು "
ಫೋನ್ ಮಾಡಿದ್ದಾಯ್ತು, ಅವನಮ್ಮ ಅಲ್ಲಿಂದ ಉತ್ತರಿಸಿದ್ದೂ ಆಯಿತು.
" ಏನಂತೆ ! "
" ಅವನೀಗ ಕಟ್ಟಡದ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದಾನಂತೆ "
" ಆಯ್ತು, ಇನ್ನು ಅವ ಸಿಕ್ಕಲಿಕ್ಕಿಲ್ಲ. ಬೇರೆ ಯಾರು ಸಿಗುತ್ತಾರೋ ನೋಡಬೇಕು "

ನೆರೆಮನೆಯ ಹಸೀನಾ ಬಂದಳು. ಕೈಯಲ್ಲಿ ಒಂದು ಬಕೇಟು, ನಮ್ಮ ಮನೆಯ ಕಲಗಚ್ಚು ಪೂರಾ ಅವಳ ಮನೆಯ ಹಸುಗಳಿಗೆ. ಅಲ್ಲಿಂದ ನಮ್ಮ ಅಗತ್ಯದ ಹಾಲು ಪೂರೈಕೆ. ಹೀಗೆ ಒಂದು ವಿಧವಾದ ವಿನಿಮಯ ಪದ್ಧತಿ ರೂಢಿಸಿಕೊಂಡಿದ್ದೇವೆ. ಅವಳೋ ಮಾತು ಬಾರದ, ಕಿವಿ ಕೇಳಿಸದ ಹುಡುಗಿ. ನಮ್ಮ ಅಡಿಕೆ ಸುಲಿಯಬೇಕಾದ ಅಗತ್ಯವನ್ನು ಅವಳಿಗೆ ಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಮೂಲಕ ತಿಳಿಸಿ, ಅವಳು ತನ್ನ ಅಣ್ಣನನ್ನು ಕಳಿಸುತ್ತೇನೆಂದು ಒಪ್ಪಿಕೊಂಡಿದ್ದೂ ಆಯಿತು.

ಮತ್ತೊಂದು ಅರ್ಧ ಗಂಟೆಯಲ್ಲಿ ಅವಳ ಇನ್ನೊಬ್ಬ ಅಣ್ಣ ಖಾದರ್ ಕೈಯಲ್ಲಿ ಕತ್ತಿ ಆಡಿಸುತ್ತಾ ಬಂದ. ತೋಟದ ಹುಲ್ಲು ಒಯ್ಯುವುದು ಅವನ ಡ್ಯೂಟಿ.
" ಏನಯ್ಯಾ ಖಾದರ್, ನಿನ್ನಣ್ಣ ಅಡಿಕೆ ಸುಲಿಯಲು ಬರುವನೋ ಹೇಗೆ ? "
" ಅವ ಈಗ ಆಸ್ಪತ್ರೆಯಲ್ಲಿ "
" ಯಾಕೆ, ಏನಾಯ್ತು ? "
" ಏನು ಹೇಳೂದು ಅವನ ಕಥೆ ....."
ಕುತೂಹಲ ಕೆರಳಿತು.
" ಆಗಿದ್ದೇನು ಹೇಳಿಬಿಡು "
" ಅವನೂ, ಅವನ ಹೆಂಡ್ತೀ, ಇಬ್ರು ಮಕ್ಕಳೂ ಹೋಗಿದ್ದು ........"
" ಎಲ್ಲಿಗೆ ? "
" ಮದುವೇಗೆ, ಇಲ್ಲೇ ಹತ್ರ, ಪೈವಳಿಕೆಯಲ್ಲಿ " ಅವನ ಶುದ್ಧ ಕನ್ನಡದಲ್ಲಿ ವಿವರಣೆ ಮುಂದುವರಿಯಿತು.
" ಅಲ್ಲಿ ಶರಬತ್ತು ಕುಡಿದದ್ದು, ಅಷ್ಟೇ, ಮತ್ತೆಂತ ಇಲ್ಲ, ಎಲ್ಲರೂ ಹೋಗಿದ್ದು ಆಸ್ಪತ್ರೆಗೆ, ಇವ ಒಬ್ಬ ಅಲ್ಲ, ನಾನ್ನೂರು ಜನ ಆಸ್ಪತ್ರೇಗೆ. ಇನ್ನೂ ಉಸಾರಾಗ್ಲಿಲ್ಲ "
" ಅದೆಂತ ಶರಬತ್ತು ? "
" ಅದಾ, ನಾನು ಹೇಳ್ತೇನೆ ಕೇಳೀ...ಉಂಟಲ್ಲ, ಡ್ರಮ್ಮು ದೊಡ್ಡದು ...." ಕೈಯಲ್ಲಿ ಡ್ರಮ್ಮಿನ ಅಗಲ ಎತ್ತರಗಳನ್ನು ಅಭಿನಯಿಸಿ ತೋರಿಸಿದ ಖಾದರ್. " ಅದನ್ನು ಸರೀ ತೊಳೀಲಿಕಿಲ್ಲ, ಏನಿಲ್ಲ, ಹಾ...ಗೇ ನೀರು ಸಕ್ಕರೆ ಹಾಕಿ ಶರಬತ್ತು ಮಾಡಿದ್ರು, ಇವರೆಲ್ಲ ಕುಡುದ್ರು ಅಷ್ಟೇಯ, "

ಇದು ಕಥೆಯಲ್ಲ, ನಮ್ಮ ನೆರೆಯಲ್ಲಿ ನಡೆದ ನೈಜ ಘಟನೆ. ಆ ಪ್ಲಾಸ್ಟಿಕ್ ಡ್ರಮ್ ಅವನು ಹೇಳಿದಂತೆ ಕೀಟನಾಶಕದ್ದೋ, ರಾಸಾಯನಿಕ ದ್ರಾವಣದ್ದೋ ಆಗಿರಲೇಬೇಕು. ಬೇಕಾಬಿಟ್ಟಿ ಸಿಗುವ ಇಂತಹ ಡ್ರಮ್ಮುಗಳಿಗೆ ತೂತು ಕೊರೆದು ಉಪಯೋಗಿಸುವ ಜಾಣತನ ತೋರಿದವರು ಯಾರು ? ಈ ಬೇಜವಾಬ್ದಾರಿತನಗಳಿಗೆ ಯಾರು ಹೊಣೆ ?
ಸದ್ಯ, ಸಿದ್ಧೀಕ್ ಗುಣಮುಖನಾಗಿ ಬಂದು ಅಡಿಕೆ ಸುಲಿಯುತ್ತಿದ್ದಾನೆ.
""ಆಗಿದ್ದೇನು ಮಾರಾಯಾ "
"ಅದು ಮಾಟ ಮಾಡಿದ್ದು ಹ್ಞೂಂ...ಸುಮ್ಮನೆಯ ಅಲ್ಲ, ಎಲ್ಲಾರೂ ಬೋಧ ತಪ್ಪಿ ಬೀಳ್ತಾರಲ್ಲ, ಆಗ ಕುತ್ತಿಗೇದು ಚಿನ್ನ ಹಾರಿಸೂ ಪ್ಲಾನು, ಮಂತ್ರ ಮಾಡಿದ್ದು ...." ಕಣ್ಣರಳಿಸಿ ಗೂಣಗಿದ.


Saturday, 18 February 2012

ಕೋಡಗನ ಕೋಳಿ ನುಂಗಿತ್ತಾ


ಆಗಿನ್ನೂ 1983-84ರ ಕಾಲಘಟ್ಟ. ಮಂಗಳೂರಿನಲ್ಲಿ ಟಿ.ವಿ. ಸಬ್ ಸ್ಟೇಶನ್ ಪ್ರಾರಂಭಿಕ ಹಂತದಲ್ಲಿತ್ತು. ಉದ್ಘಾಟನೆ ಆಗುವುದು ಬಾಕಿ ಉಳಿದಿತ್ತು. ಉಪ್ಪಳ ಪೇಟೆಯಲ್ಲಿ ರೇಡಿಯೋ ರಿಪೇರಿ ತಜ್ಞರಾಗಿದ್ದ ನಮ್ಮವರು ಒಂದು ದಿನ ದಿಢೀರನೆ ಕಣ್ಣೂರಿಗೆ ಹೋಗಿ ಒಂದು keltron ಟೀವಿ ತಂದರು. ಕಪ್ಪು ಬಿಳುಪಿನದ್ದು, ಬಹಳ ಪುಟ್ಟದು. .....

" ಅಲ್ಲ, ಮಂಗಳೂರಿನಲ್ಲಿ ಇರಲಿಲ್ಲವೇ " ಎಂದು ನೀವು ಕೇಳಬಹುದು.

ಮಂಗಳೂರಿನ ಅಂಗಡಿಗಳಲ್ಲಿ ಟೀವಿ ಸ್ಟಾಕ್ ಎಲ್ಲ ಖಾಲಿಯಾಗಿತ್ತಂತೆ. ಹಾಗಾಗಿ ಕಣ್ಣೂರಿಗೆ ಹೋಗಲೇಬೇಕಗಿತ್ತು ಎನ್ನುತ್ತಾರೆ ನಮ್ಮವರು. ಕಣ್ಣೂರಿನಿಂದ ಟೀವಿಯೊಂದಿಗೆ ಬರುತ್ತಿರಬೇಕಾದರೆ , ಕಾಸರಗೋಡು ತಲಪುವ ಹೊತ್ತಿಗೆ ಉದ್ಘಾಟನಾ ಪ್ರಸಾರ ಕಾರ್ಯಕ್ರಮ ಪ್ರಾರಂಭವಾಗಿತ್ತಂತೆ. ಆ ವೇಳೆಗೆ ಕಾಸರಗೋಡು ನಗರದಲ್ಲೂ ವಿದ್ಯತ್ ಕೈ ಕೊಟ್ಟು ಜನರೇಟರು ಉಪಯೋಗಿಸಿ ಹೇಗಾದರೂ ಉದ್ಘಾಟನೆ ನೋಡಿಯೇ ಇವರು ಮನೆಗೆ ಬಂದರು. ಟೀವಿ ಸ್ಟೇಶನ್ ಆರಂಭವಾಗುವ ಮೊದಲೇ ಇವರ ಟೀವಿ ಸರ್ವೀಸ್ ಸೆಂಟರ್ ಉಪ್ಪಳದಲ್ಲಿ ಇತ್ತು. ಹಾಗಾಗಿ ಆಂಟೆನಾ, ಬೂಸ್ಟರ್, ಕೇಬಲ್ ವಯರ್ ಇತ್ಯಾದಿ ಸ್ಟಾಕ್ ಇದ್ದಿತು. ಹಲವಾರು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ದೂರದ ಪಣಜಿ ರಿಲೇ ಸ್ಟೇಶನುಗಳಿಂದ ಸಿಗ್ನಲ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದೂ ಒಮ್ಮೊಮ್ಮೆ ಮಾತ್ರ. ಮಂಗಳೂರಿನ ಟೀವಿ ರಿಲೇ ಸ್ಟೇಶನ್ ಇಂಜಿನಿಯರ್ಸ ಇವರ ಸಂಪರ್ಕ ಪಡೆದು ಎಲ್ಲಿಯವರೆಗೆ ಟೀವಿ ಸಿಗ್ನಲ್ ಸಿಗಬಹುದು ಎಂದು ಪರಿವೀಕ್ಷಣೆ ನಡೆಸಿದ್ದರು.

ಬಾಯಾರು ಗ್ರಾಮದ ನಮ್ಮ ಹಳ್ಳಿ ಮನೆಗೆ ಟೀವಿ ಬಂದಿತು. ಅಂಗಳದಲ್ಲಿ ಕತ್ತಿ ಬೀಸಿಕೊಂಡು ತಿುಗುತ್ತಿದ್ದ ಕೆಲಸಗಾರರು ಇವರ ಕೈ ಸನ್ನೆಗೆ ಓಡಿ ಬಂದು, ಸುತ್ತಲೂ ಕೈ ಕಟ್ಟಿ ನಂತರು. ನಮ್ಮ ಮಾವ ಅವರನ್ನು ಗದ್ದೆಗೆ ಎಳಕೊಂಡು ಹೋಗಲು ಅಣಿಯಾಗುತ್ತಾ ಇದ್ದರು....... .

ಮನೆಯ ಹಿಂಭಾಗದ ದರೆಯ ಮೇಲೆ ಎತ್ತರವಾದ ಒಂದು ದಡ್ಡಾಲದ ಮರ. ಇವರ ಅಣತಿಯಂತೆ ಮರದ ರೆಂಬೆಕೊಂಬೆಗಳನ್ನು ಕತ್ತರಿಸಿ ಹಾಕಲಾಗಿ, ಮರ ಒಂದು ಪ್ರಾಕೃತಿಕ ಏಣಿಯ ರೂಪವನ್ನು ಹೊಂದಿತು. ನಮ್ಮ ಟಿಲ್ಲರ್ ಡ್ರೈವರ್ ಬಾಬು ಸ್ಕ್ರೂಡ್ರೈವರ್, ಸುತ್ತಿಗೆ, ಆಣಿ ಇತ್ಯಾದಿ ಇವರು ಕೊಟ್ಟಂತಹ ಸಲಕರಣೆಗಳನ್ನು ಹೆಗಲಿಗೇರಿಸಿಕೊಂಡು ಮರದ ತುದಿಯೇರಿದ. ಇನ್ನಿಬ್ಬರು ಸಿದ್ದಪಡಿಸಿದ್ದ ಆಂಟೆನಾವನ್ನು ಮೇಲೇರಿಸಿದರು. ಇವರು ಕೆಳಗಿನಿಂದ ನೀಡುತ್ತಿದ್ದ ತಾಂತ್ರಿಕ ನಿರ್ದೇಶನದಂತೆ ಮೇಲೆ tಹತ್ತಿದ್ದ ತಂತ್ರಜ್ಞ ಮಾಡುತ್ತಾ ಇದ್ದುದನ್ನು ಉಳಿದವರು ಕಣ್ಣು ಕಣ್ಣು ಬಿಟ್ಟುಕೊಂಡು ನೋಡ್ತಿದ್ದರು. ಅಂತೂ ಒಂದು ಹಂತದಲ್ಲಿ ಅವನು ಕೆಳಗಿಳಿದ.

ಕೇಬಲ್ ವಯರ್ ತೆವಳುತ್ತಾ ವಿಶಾಲವ್ಯಾಪ್ತಿಯ ಅಡುಗೆಮನೆಯ ಒಳಗೆ ಬಂದಿತು. ಟೀವಿಯೂ ಬಂದಿತು, ಹಿಂಬಾಲಿಸಿಕೊಂಡು ಕೈಸಾಲೆಯಲ್ಲಿದ್ದ ಟೇಬಲ್ ಸಹಾ. ಇವರು ಆ ಟೀವಿಯಲ್ಲಿ ಚಿತ್ರ ಮೂಡಿಸಲು ಹರಸಾಹಸ ಪಡುವುದು, ಪುನಃ ಬಾಬು ಮರ ಹತ್ತಿ ಆಂಟೆನಾ ದಿಕ್ಕು ತಪ್ಪಿದೆಯೋಎಂದು ಪರೀಕ್ಷಿಸುವುದು, ಇನ್ನಷ್ಟು ಮೇಲೆ ಆಂಟೆನಾ ಏರಿಸುವುದು, ಹೀಗೆಲ್ಲಾ ಮಾಡುತ್ತಿರಬೇಕಾದರೆ ತೋಟದ ಬೇರೆಬೇರೆ ಡಿಪಾರ್ಟುಮೆಂಟುಗಳಲ್ಲಿ ತೊಡಗಿಸಿಕೊಂಡಿದ್ದ ಕೆಲಸಗಾರರು ಅಲ್ಲಿ ನೆರೆದು ಸಹಕಾರ ನೀಡಲಾರಂಭಿಸಿದರು.

ಕೊನೆಗೂ ಮಿರಿಮಿರಿ ಮಿಂಚಲಾರಂಭಿಸಿತು ಟೀವಿ. ಅಷ್ಟು ಹೊತ್ತಿಗೆ ಸಂಜೆಯಾಗಿತ್ತು. ಮುಂದಿನ ಕೆಲಸ ನಾಳೆಗೆ ಮುಂದೂಡಲಾಯಿತು. ಆ ವೇಳೆಗೆ ನಮ್ಮ ಹಳ್ಳಿಪೇಟೆಯಲ್ಲಿ ಸುದ್ದಿಯಾಗಿತ್ತು. ಸ್ನೇಹಿತರು, ಇನ್ನಿತರರು ಒಬ್ಬೊಬ್ಬರಾಗಿ ಬಂದು ತನಿಖೆ ಆರಂಭಿಸಿದರು. ಎಲ್ಲರೂ ಸೇರಿ ಗಾಡ ಮಂತ್ರಾಲೋಚನೆ ಮಾಡಿದ ಫಲವೋ ಏನೋ ಮಾರನೇ ದಿನ ಮಸುಕು ಮಸುಕಾಗಿ ದೃಶ್ಯ ತೋರಿ ಬಂದಿತು. ಕ್ರಿಕೆಟ್ ಆಟ ಆಡುತ್ತಿದ್ದರು. ನಮ್ಮವರ ಅಣ್ಣ ಕ್ರಿಕೆಟ್ ಪ್ರಿಯರು. ಮಜಬೂತಾದ ಕುರ್ಚಿಯನ್ನು ಎಳೆದು ತಂದು ಕುಳಿತೇ ಬಿಟ್ಟರು, ಜೊತೆಯಲ್ಲಿ ಇಬ್ಬರು ಪುಟ್ಟ ಮಕ್ಕಳೂ ಅಪ್ಪನ ಮಡಿಲೇರಿದುವು. ಕ್ರಿಕೆಟ್ ಆಟಗಾರರು ಯಾರೆಂದು ತಿಳಿಯುವಂತಿರಲಿಲ್ಲ. ಅತ್ತ ಇತ್ತ ಓಡುವುದು ಗೊತ್ತಾಗುತ್ತಿತ್ತು. ನಮ್ಮ ಭಾವ ಕಿವಿಗೆ ಒಂದು ಪುಟ್ಟ ರೇಡಿಯೋ ಕೂಡಾ ತಗಲಿಸಿಕೊಂಡಿದ್ದರು. ಹೀಗೇ ಕೆಲವು ದಿನ ಹೋಯಿತು. ಕೆಲಸಗಾರರೂ ಆಗಾಗ ಬಂದು ಇಣುಕಿ ಹೋಗುತ್ತಿದ್ದರು.

ನಮ್ಮ ಮಾವ ಗದ್ದೆಯಿಂದ ವಾಪಾಸು ಬಂದರು. ಆಗ ಘಂಟೆ ಹನ್ನೊಂದಾಗಿತ್ತು. ಅವರಿಗೆ ಆಗಾಗ ಕಾಫಿ, ಚಹಾ ಕುಡಿಯುವ ಅಭ್ಯಾಸ ಇರಲಿಲ್ಲ. ಭಾವಿಯ ನೀರೇ ಆಗಬೇಕು. ಹಾಗಾಗಿ ಫ್ರೆಶ್ ವಾಟರ್ ತರೋಣವೆಂದು ಅಡುಗೆಮನೆಗೆ ತಗುಲಿಕೊಂಡಿದ್ದ ಭಾವಿಯ ನೀರು ಸೇದಿ ತರುತ್ತಾ ಇದ್ದೆ. ಅಷ್ಟರಲ್ಲಿ ನಮ್ಮ ಭಾವ " ಹ್ಞಾ.... ಇಂದಿರಾಗಾಂಧಿ..." ಎಂದು ಉದ್ಗರಿಸಿದರು. ಆಗ ಇಂದಿರಾಜೀ ನಮ್ಮ ಅಧಿನಾಯಕಿಯಾಗಿದ್ದ ಕಾಲ. ಸೊಂಟದಲ್ಲಿ ಕೊಡ ಇದ್ದಂತೇ ನಾನೂ ಟೀವಿ ನೋಡಿದೆ.

ಒಬ್ಬ ಮಹಿಳೆಯನ್ನು ಸ್ಟ್ರೆಚರಿನಲ್ಲಿ ಸಾಗಿಸುತ್ತಿದ್ದಂತೆ ಕಾಣಿಸಿತು. ಕ್ರಿಕೆಟ್ ನಿಂತಿತು. ಈ ವಿಷಯ ಇಂಟರ್ ನೆಟ್ ವೇಗದಲ್ಲಿ ಎಲ್ಲರನ್ನೂ ಹೇಗೆ ತಲಪಿತು ಗೊತ್ತಿಲ್ಲ. ಆಗ ಟೆಲಿಫೋನ್ ಕೂಡಾ ಇರಲಿಲ್ಲ. ಒಟ್ಟಿನಲ್ಲಿ ಜನ ಸೇರಿದರು. ಈಗ ನಿಜವಾದ ಸಮಸ್ಯೆ ಮನೆಮಂದಿಗೆ ಎದುರಾಯಿತು. ಉಪ್ಪಳದಿಂದ ಸಂಜೆ ಹೊತ್ತಿಗೆ ಕಿರಿಮಗ ಬರುತ್ತಲೇ " ಈ ಟೀವಿ ಇಲ್ಲಿದ್ದರಾಗದು, ...ಹೊರಚಾವಡಿಗೆ ಸಾಗಹಾಕಬೇಕು " ಎಂದರು ನಮ್ಮ ಮಾವ.

ಟೀವಿಯ ಪ್ರಯಾಣ ಮುಂದುವರಿಯಿತು. ಹೊರಚಾವಡಿಯ ಯಾವ ಜಾಗ ಸೂಕ್ತ ಎಂದು ಮಾವನೇ ಆಯ್ಕೆ ಮಾಡಿದರು. ಬಂದ ಅಷ್ಟೂ ಮಂದಿಗೆ ಕಾಣಿಸಬೇಕಲ್ಲ, ಹಾಗೂ ಮನೆಗೆ ಬಂದವರನ್ನು ಸುಧರಿಸುವುದರಲ್ಲಿ ನಮ್ಮ ಮಾವ ಎತ್ತಿದ ಕೈ. ಒಳಾಂಗಣದಿಂದ ಟೀವಿ ಹೊರಾಂಗಣಕ್ಕೆ ಹೋಯಿತು. ಒಳಗಿದ್ದ ಮಹಿಳೆಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಆದರೆ ಅಲ್ಲಿಗೆ ಕಥೆ ಮುಗಿಯಲಿಲ್ಲ. ಇಂದಿರಾಗಾಂಧಿಯವರೇನೋ ಹೋದರು. ಟೀವಿ ಪ್ರಸಾರ ಮುಂದುವರಿಯಿತು. ವೈಕುಂಠ ಪ್ರಾಪ್ತಿವರೆಗೆ ನೇರ ಪ್ರಸಾರ ಬರುತ್ತಾ ಇದ್ದಿತು. ಪ್ರತಿದಿನವೂ ನಮ್ಮ ಹಿರಣ್ಯಮನೆಯಲ್ಲಿ ಜನಸಾಗರ. ಇಷ್ಟು ಚಿಕ್ಕ ಹಳ್ಳಿಯಲ್ಲಿ ಇವರೆಲ್ಲ ಎಲ್ಲಿದ್ದರು ಎಂಬ ಆಶ್ಚರ್ಯ ಚಿಹ್ನೆ ಆಗ ಖಂಡಿತವಾಗಿಯೂ ನನ್ನನ್ನು ಕಾಡಿತ್ತು. ವಿಶೇಷ ಅತಿಥಿಗಳನ್ನು ಮಾವ ಒಳಗೆ ಕರೆದು ಆಸರಿಗೆ ಕೊಡಿಸುವುದೂ ಇತ್ಯಾದಿ ಉಪಚಾರಗಳನ್ನು ಮಾಡುತ್ತಿದ್ದರು. ಮಾವ ದೊಡ್ಡ ಹೀರೋ ಆಗಿ ಬಿಟ್ಟಿದ್ದರು ! ಅಲ್ಲಿ ಜಾತಿ ನೀತಿಯ ಪ್ರಶ್ನೆಯೇ ಉದ್ಭವಿಸಲಿಲ್ಲ. ಹೊರಗಿನವರು, ಒಳಗಿನವರು ಎಂಬ ತಾರತಮ್ಯ ಬರಲೇ ಇಲ್ಲ. ಹಗಲಾಯಿತು, ಇರುಳಾಯಿತು ಎನ್ನುವಂತಿರಲಿಲ್ಲ. ಯಾಕೆಂದರೆ ಜನಸಾಗರ ಕಮ್ಮಿಯಾಗುವುದು ಕಾಣಿಸುತ್ತನೇ ಇರಲಿಲ್ಲ.

ಆ ಹತ್ತೂ, ಹನ್ನೊಂದು ದಿನಗಳು ಹೇಗೆ ಕಳೆದುವೆಂದೇ ಗೊತ್ತಿಲ್ಲ. ಆದರೆ ಅದೊಂದು ಅವಿಸ್ಮರಣೀಯ ಘಟನೆಯಾಗಿ ಉಳಿದಿದೆ. ಈಗಲೂ ಆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಎಷ್ಟೋ ಜನರನ್ನು ನಮ್ಮವರು ಭೇಟಿಯಾಗುತ್ತಲೇ ಇರುತ್ತಾರೆ. " ನಾನು ಬಂದಿದ್ದೆ ಸಾರ್, ನಿಮ್ಮ ಮನೆಗೆ ಆಗ, ಅಂಗಳದಲ್ಲಿ ಬೈಹುಲ್ಲು ರಾಶಿಯಿತ್ತು, ಅದರ ಮೇಲೆ ನಿಂತ್ಕೊಂಡು ಟೀವಿ ನೋಡಿದ್ವಿ " ಅನ್ನುತ್ತಾರೆ.

ಹೌದು, ನಮ್ಮ ಎರಡಂತಸ್ತಿನ ಮನೆ ಮಾಡಿನೆತ್ತರಕ್ಕೆ ಇದ್ದ ಬೈಹುಲ್ಲ ರಾಶಿ, ಗದ್ದೆಯಿಂದ ಕಟಾವು ಮಾಡಿ ತಂದದ್ದು, ವೀಕ್ಷಕರ ಕಾಲ್ತುಳಿತಕ್ಕೆ ಸಿಕ್ಕು ಧರಾಶಾಯಿಯಾಗಿ ಮಲಗಿಯೇ. ಬಿಟ್ಟಿತ್ತು. ಈ ಘಟನೆ ನಡೆದು ದಶಕಗಳೇ ಕಳೆದಿವೆ. ' ಇಂದಿರಾಗಾಂಧಿ ಇನ್ನಿಲ್ಲ ' ವಾದ ಕೂಡಲೇ ರಾಷ್ಟ್ರವ್ಯಾಪಿ ಸ್ವಯಂಪ್ರೇರಿತ ಬಂದ್ ಆಗಿತ್ತು. ಬಂದ್ ಎಂದೊಡನೆ ವಾಹನ ಸೌಕರ್ಯ ಇಲ್ಲ. ಆದರೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಇಲ್ಲಿಗೆ ಬಂದು ಇಂದಿರಾ ಅವರ ಅಂತ್ಯಕ್ರಿಯೆಯ ದರ್ಶನ ಪಡೆದು ಹೋಗಿದ್ದಾರೆ. ಆದರೂ ಕೆಲವು ಪ್ರಶ್ನೆಗಳಿಗೆ ಈಗಲೂ ಉತ್ತರ ದೊರೆತಿಲ್ಲ. ಮಂಗಳೂರಿನಿಂದ ಮೂವತೈದು ಕಿ.ಮೀ. ದೂರದಲ್ಲಿ, ಗುಡ್ಡದ ತಪ್ಪಲಿನಲ್ಲಿರುವ ಸ್ಥಳದಲ್ಲಿ, ಆಂಟೆನಾ ಬೂಸ್ಟರುಗಳ ಜ್ಞಾನ ಏನೇನೂ ಇಲ್ಲದ ಸಮಯದಲ್ಲಿ ಸಿಗ್ನಲ್ ದೊರಕಿದ್ದು ಹೇಗೆ ? ವೀಕ್ಷಕರು ಕೃತಾರ್ಥಭಾವದಿಂದ ಮರಳಿದ್ದು ಹೇಗೆ ? ಕಣ್ಣೂರಿನಿಂದ ಹೊಸ ಟೀವಿ ತಂದರೂ ಇವರು ಉಪಯೋಗಿಸಿದ್ದು 20 ಇಂಚಿನ ಕಪ್ಪು ಬಿಳುಪು , ಸೆಕೆಂಡ್ ಹ್ಯಾಂಡ್ ಟೀವಿ. ಅದೂ 1975ರ ಮಾಡೆಲ್, ವಾಲ್ವ್ ಸೆಟ್, ಬಾಂಬೇಯಿಂದ ತರಿಸಿದ್ದು. ಇಂತಹ ಹಲವು ಪ್ರಶ್ನಾರ್ಥಕ ಚಿಹ್ನೆಗಳು ನಮ್ಮವರನ್ನು ಈಗಲೂ ಕಾಡುತ್ತಿರುತ್ತವಂತೆ.

Friday, 27 January 2012

ಬೀಂಬುಳಿ.......ಬಹಳ ಹುಳಿ ಹುಳಿ






" ಅದ್ಯಾವ ಹಣ್ಣು ಸ್ವಾಮೀ, ಅಲ್ಲಿ ಕಾಣಿಸ್ತಿರೋದು " ಮನೆಗೆ ಬಂದ ಅತಿಥಿಯ ಪ್ರಶ್ನೆ.

ಮನೆಯಂಗಳದಲ್ಲಿ ಪೊಗದಸ್ತಾಗಿ ಬೆಳೆದು ನಂತಿದ್ದ ಮರದಲ್ಲಿ ಅಡಿಯಿಂದ ಮುಡಿಯವರೆಗೆ ಹಣ್ಣುಗಳ ಅಲಂಕರಣ.

" ಓ, ಅದಾ, ಬೀಂಬುಳಿ ಹಣ್ಣು. ಬರೇ ಹುಳಿ ಹುಳಿ "

" ನಾನು ನೋಡಿಯೇ ಇಲ್ಲ " ಎನ್ನುತ್ತಾ ಆ ಆಸಾಮಿ ಮರದಿಂದ ಹೀಚುಕಾಯಿಗಳನ್ನು ಕಿತ್ತು ತಂದರು. " ಚಿಕ್ಕ ಸೌತೆಕಾಯಿಯಂತಿದೆ, ಉಪ್ಪು ಹಾಕಿ ತಿನ್ನೋಣ " ತಿಂದಿದ್ದೂ ತಿಂದಿದ್ದೇ. ಮರದಿಂದ ಉದುರಿ ಹಾಳಾದರೂ ಕೇಳುವವರಿಲ್ಲದ ಈ ಹಣ್ಣನ್ನು ಆ ಪ್ಯಾಟೇ ಮಂದಿ ಆಸೆಯಿಂದ ತಿಂದು, ಚೀಲ ತುಂಬ ಕೊಂಡೂ ಹೋದರು.

" ನಾವ್ಯಾಕೆ ಇದನ್ನು ಉಪಯೋಗಿಸ್ತಾ ಇಲ್ಲ ?"

" ಉಪ್ಪಿನಕಾಯಿ ಸ್ವಲ್ಪ ಹಾಕೋಣ "




ಹದವಾಗಿ ಬಲಿತ ಬೀಂಬ್ಳಿಗಳನ್ನು ಉದ್ದವಾಗಿ ನಾಲ್ಕು ತುಂಡು ಮಾಡಿ, ಒಂದು ಪಿಂಗಾಣಿ ಪಾತ್ರೆಯಲ್ಲಿ ಹಾಕಿಡಿ. ಸ್ಟೀಲು, ಅಲ್ಯುಮೀನಿಯಂ ಬೇಡ. ವಿಟಮಿನ್ ಸಿ ಅತ್ಯಧಿಕವಿರುವುದರಿಂದ ಪಾತ್ರೆ ಕಪ್ಪಗಾದೀತು. ಅಂದಾಜು 3 ಕಪ್ ಹೋಳುಗಳು ಸಾಕು.

3 ದೊಡ್ಡ ಚಮಚ ಸಾಸಿವೆ
1 ದೊಡ್ಡ ಚಮಚ ಕೊತ್ತಂಬರಿ ಕಾಳು
1 ಸಣ್ಣ ಚಮಚ ಜೀರಿಗೆ

ಇಷ್ಟನ್ನು ಸ್ವಲ್ಪ ಎಣ್ಣೆ ಪಸೆ ಮಾಡಿ ಹುರಿಯಿರಿ. ಸಾಸಿವೆ ಚಟಪಟ ಹೇಳುವಾಗ ಇಳಿಸಿ.

ಸ್ವಲ್ಪ ಇಂಗು
1 ಚಿಕ್ಕ ಚಮಚ ಅರಸಿನಹುಡಿ ಹಾಕಿ ಚೆನ್ನಾಗಿ ಮಗುಚಿ.
3 ದೊಡ್ಡ ಚಮಚ ಪುಡಿ ಉಪ್ಪು ಸೇರಿಸಿ.
ಇನ್ನೊಮ್ಮೆ ಒಲೆಯ ಮೇಲಿಟ್ಟು ತೆಗೆಯಿರಿ.

ಈ ಮಸಾಲೆ ಆರಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಈಗ ತಯಾರಾದ ಹುಡಿಗೆ ನಾವು ಮೆಣಸು ಹಾಕಿಲ್ಲ. ತರಾವರಿಯ ಉಪ್ಪಿನಕಾಯಿ ಮಿಕ್ಸ್ ಸಿಗುತ್ತವೆ. ಒಂದು ಪ್ಯಾಕ್ ತನ್ನಿ. ಅದರಲ್ಲಿ 4 ದೊಡ್ಡ ಚಮಚ ಅಳೆದು ಈಗ ತಯಾರಾದ ಹುಡಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮದೇ ಕೈ ರುಚಿಯ ಈ ಸ್ಪೆಶಲ್ ಮಸಾಲೆಯನ್ನು ಬೀಂಬ್ಳಿ ಹೋಳುಗಳಿಗೆ ಬೆರೆಸಿ ಗಾಜಿನ ಭರಣಿಯಲ್ಲಿ ತುಂಬಿಸಿ ಮುಚ್ಚಿ ಇಡಿ. ಬೇಕಿದ್ದರೆ ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿ ಹುರಿದು ಹಾಕಬಹುದು. ಅರ್ಧ ಗಂಟೆ ಬಿಟ್ಟು ಉಪಯೋಗಿಸಿ. ಕುಚ್ಚಿಲಕ್ಕಿ ಗಂಜಿಯೂಟಕ್ಕೆ ಈ ಉಪ್ಪಿನಕಾಯಿ ಸವಿದು ನೋಡಿ. " ವಾರೆವ್ಹಾ...... ನನ್ನಮ್ಮನಿಗಿಂತಲೂ ಚೆನ್ನಾಗಿ ನಾನು ಮಾಡಬಲ್ಲೆ " ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತೀರ. ನನಗಂತೂ ನನ್ನಮ್ಮ ಹೇಳಿಕೊಟ್ಟಿದ್ದು. ಅವರು ನೆರೆಮನೆಯ ಗೌಡಸಾರಸ್ವತ ಸ್ನೇಹಿತೆಯಿಂದ ಕಲಿತದ್ದು.

ನಮ್ಮ ಕರಾವಳಿಯ ಕೊಂಕಣಿಗರು ಬೀಂಬ್ಳಿಯ ವೈವಿಧ್ಯಮಯ ಅಡುಗೆ ಬಲ್ಲವರು. ಅವರ ಮನೆಹಿತ್ತಿಲುಗಳಲ್ಲಿ ಬೀಂಬ್ಳಿಮರ ಇದ್ದೇ ಇರುತ್ತದೆ. ನೀರಿನಾಶ್ರಯವಿದ್ದಲ್ಲಿ ಯಾವಾಗಲೂ ಫಲ ಕೊಡುತ್ತಿರುತ್ತದೆ. ಒಂದು ಬೇಳೆಸಾರು, ತೊವ್ವೆ ಮಾಡಬೇಕಾದರೂ ಮರದಿಂದ ನಾಲ್ಕು ಬೀಂಬ್ಳಿ ಕಿತ್ತು ತಂದರಾಯಿತು. ಹೇಗೆ ಅಂತೀರಾ ?

4 ಬೀಂಬ್ಳಿಗಳನ್ನು ಹೋಳು ಮಾಡಿ ನೀರಿನಲ್ಲಿ ಹಾಕಿಡಿ, ಇದು ಹುಳಿ ಕಡಿಮೆ ಮಾಡಲು.
ಅವಶ್ಯವಿದ್ದಷ್ಟು ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
2 ನೀರುಳ್ಳಿ, ತುಂಡು ಶುಂಠಿ ಸಣ್ಣದಾಗಿ ಹಚ್ಚಿಕೊಳ್ಳಿ.
2ಹಸಿಮೆಣಸು ಉದ್ದವಾಗಿ ಸಿಗಿಯಿರಿ.
ಬೆಳ್ಳುಳ್ಳಿ ಬೇಕಿದ್ದರೆ ಸಿಪ್ಪೆ ತಗೆದಿಟ್ಟುಕೊಳ್ಳಿ.

ಇಷ್ಟು ಸಾಮಗ್ರಿಗಳನ್ನು ಬೆಂದ ಬೇಳೆಗೆ ಹಾಕಿ ಪುನಃ ಬೇಯಲಿಡಿ.
ಅವಶ್ಯವಿದ್ದಷ್ಟು ನೀರು ಉಪ್ಪು ಹಾಕಿ.
ನೀರಿನಲ್ಲಿಟ್ಟ ಬೀಂಬ್ಳಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ.
ಇಂಗು, ಬೇವಿನಸೊಪ್ಪಿನ ಒಗ್ಗರಣೆ ತಯಾರಿಸಿ, ಸಾಸಿವೆ ಚಟಚಟ ಸಿಡಿಯುತ್ತಿದ್ದಂತೆ
1 ಚಿಟಿಕೆ ಅರಸಿನ ಹುಡಿ, 1 ಚಮಚ ಮೆಣಸಿನಹುಡಿ ಹಾಕಿ ಕೂಡಲೇ ತೊವ್ವೆಗೆ ಸುರಿಯಿರಿ.
ಇಷ್ಟು ರುಚಿಕರ ತೊವ್ವೆ ಇನ್ನೆಲ್ಲಾದರೂ ಕಂಡೀರಾ ಮತ್ತೆ !

ಹದವಾಗಿ ಬಲಿತ ಬೀಂಬುಳಿಗಳನ್ನು ತುಂಡು ಮಾಡಿ ಬಿಸಿಲಿನಲ್ಲಿ ಒಣಗಿಸಿ. ಡಬ್ಬದಲ್ಲಿ ತುಂಬಿಸಿ ಇಡಿ. ಮಳೆಗಾಲದಲ್ಲಿ ಕೆಸುವಿನ ಪತ್ರೊಡೆಗೆ ಧಾರಾಳ ಹುಳಿ ಬೇಕಾಗುತ್ತಲ್ಲ, ಆಗ ಉಪಯೋಗಿಸಿ.

ಹಣ್ಣಾದ ಬೀಂಬ್ಳಿಗಳನ್ನು ಉಪ್ಪಿನೊಂದಿಗೆ ಗಿವುಚಿಟ್ಟುಕೊಂಡು ದೇವರಮನೆಯ ಹಿತ್ತಾಳೆ, ಕಂಚಿನ ಸಾಮಗ್ರಿಗಳನ್ನು ತೊಳೆಯಬಹುದಾಗಿದೆ.

ಹೇಗೂ ಹುಳಿ ಹುಳಿ ಹಣ್ಣು, ತಂಪು ಪಾನೀಯವನ್ನೂ ತಯಾರಿಸಿ. ಹಣ್ಣುಗಳ ರಸ ಹಿಂಡಿ ತೆಗೆಯಿರಿ, ಬೇಕಾದಷ್ಟು ಸಕ್ಕರೆ, ನೀರು ಸೇರಿಸಿ, ಸುವಾಸನೆಗೆ ಏಲಕ್ಕಿಯನ್ನೂ ಹಾಕಿ ಫ್ರಿಜ್ ನಲ್ಲಿ ಇಡಿ. ಕುಡಿದು ನೋಡಿ.

ನಾನ್ ವೆಜ್, ಮೀನಿನ ಅಡುಗೆಯಲ್ಲೂ ಇದನ್ನು ಬಳಸುತ್ತಾರೆ. ಹೇಗೆಂದು ತಿಳಿದವರನ್ನು ಕೇಳಿ ಕಲಿಯಿರಿ.

15ರಿಂದ 30 ಅಡಿಗಳಷ್ಟು ಬೆಳೆಯುವ ಈ ಮರ ಇಂಡೋನೇಷಿಯಾದ್ದು. ದಾರೆಹುಳಿ ಜಾತಿಗೆ ಸೇರಿದ ಒಂದು ಸಸ್ಯ ಪ್ರಭೇದ. ಸಸ್ಯವಿಜ್ಞಾನಿಗಳ ಪ್ರಕಾರ ಇದು averrhoa bilimbi. ಇದರ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದು. ಚೆನ್ನಾಗಿ ಆರೈಕೆ ಮಾಡಿದಲ್ಲಿ ನೆಟ್ಟ ನಾಲ್ಕೇ ವರ್ಷಗಳಲ್ಲಿ ಫಲ ಸಿಗುವುದು.

ಟಿಪ್ಪಣಿ:  24/1/2016 ರಂದು ಮುಂದುವರಿದಿದೆ.

                                                                        ಬೀಂಬುಳಿ ಸಲಾಡ್
 

  " ಪೇಟೆಯಲ್ಲಿ ತರಕಾರಿ ಸಂತೆ ಇತ್ತು "  ಅನ್ನುತ್ತಾ ನಮ್ಮೆಜಮಾನ್ರು ಚೀಲ ತುಂಬ ತರಾ್ಕರಿ ತಂದು ಅಡುಗೆಮನೆಯಲ್ಲಿ ಸುರುವಿದರು.   

ಇತ್ತು,  ಟೊಮೇಟೋ,  ನೀರುಳ್ಳಿ,  ಹಸಿಮೆಣಸು,  ಹರಿವೇ ಸೊಪ್ಪು,  ಕೊತ್ತಂಬ್ರಿ ಸೊಪ್ಪು.... ಮತ್ತೊಂದೇನಪಾ,  ಚಿಂತಿಸಬೇಕಾಯ್ತು.  ಹ್ಞಾ,  ನೆನಪಾಯ್ತು... ನವಿಲುಕೋಸು.  ಸಂಜೆಯಾಗುತ್ತಲೂ ಇನ್ನೊಂದಾವರ್ತಿ ತರಕಾರಿ ಬಂದಿತು.  " ತರಾ್ಕರಿ ಸಂತೆ ಖಾಲಿ ಮಾಡ್ತಾ ಇದ್ರೂ,  ಸಿಕ್ಕಿದ ರೇಟಿಗೆ ಮಾರಾ್ತರೇಂತ ಗೊತ್ತಾಯ್ತು.  ಹತ್ರೂಪಾಯಿಗೆ ಇಷ್ಟೂ ಸಿಕ್ತು "

" ಅಯ್ಯೋ ಹೌದಾ!  ಇದ್ಯಾವ ತರಾ್ಕರೀ?  "
" ಯಾರಿಗ್ಗೊತ್ತೂ..."  ನಮ್ಮವರು ತಂದಿದ್ದ ಗೆಡ್ಡೆ ತರಕಾರಿಯನ್ನು ಕತ್ತರಿಸಿ ತಿಂದೂ ನೋಡಿದ್ರು.   " ಏನೂಂತ ಗೊತ್ತಾಗ್ತಾ ಇಲ್ಲ,  ಮೆಣಸಿನ ಹಾಗೆ ಖಾರ ಉಂಟಲ್ಲ! "

ಕೂವೆಗೆಡ್ಡೆ ಇರಬಹುದು ಅಂದ್ಕೊಂಡಿದ್ದೆ,  ಖಾರ ಇರೂದಾದ್ರೆ ಯಾವುದಿದು ?  " ಮೂಲಂಗಿ ಅಂತಾರಲ್ಲ,  ಅದಾಗಿರಬಹುದು "
" ಏನೋ ಒಂದು ಮಾಡು,  ಕೆಲಸದಾಳುಗಳಿಗೂ ಆಗ್ಬೇಕಲ್ಲ "
ನಮ್ಮೆಜಮಾನ್ರು ತಂದು ಹಾಕಿದ್ದನ್ನು ಏನೋ ಒಂದು ಅಡುಗೆ ಮಾಡಲು ಹೊರಟಾಗ ಸುಲಭದಲ್ಲಿ ನೆನಪಾದದ್ದು ಬೇಯಿಸದೇ ಮಾಡಬಹುದಾದ ವೆಜಿಟೆಬಲ್ ಸಲಾಡ್.   

ಹಸಿಹಸಿಯಾಗಿ ತಿನ್ನುವಂತಹ ತರಕಾರಿಗಳನ್ನು ಚೆನ್ನಾಗಿ ತೊಳೆದು ಇಟ್ಟಾಯ್ತು,  ಎಷ್ಟಾದರೂ ರಸ್ತೆಪಕ್ಕದ ಮಾಲುಗಳಲ್ವೇ,  ತೊಳೆದಷ್ಟೂ ಒಳ್ಳೆಯದು.  ಚಿಕ್ಕದಾಗಿ ಹಚ್ಚಿದ್ದೂ ಆಯಿತು.

ನಿತ್ಯಕಟ್ಟಳೆಯ ಕೊದ್ದೆಲ್ ಗೆ ತೆಂಗಿನಕಾಯಿ ತುರಿಯೊಂದಿಗೆ ಇನ್ನಿತರ ಮಸಾಲೆಗಳನ್ನು ಅರೆಯುವಾಗ ನಾಲ್ಕಾರು ಬೀಂಬುಳಿಗಳನ್ನೂ ಕೂಡಿಕೊಂಡು ಅರೆಯುವುದು ನನ್ನ ಪದ್ಧತಿ.   ಅದಕ್ಕಾಗಿ ಹತ್ತಾರು ಬೀಂಬುಳಿಗಳನ್ನೂ ಕೊಯ್ದು ಇಟ್ಕೊಂಡಿದ್ದೆ.   ಹುಣಸೇಹುಳಿ ಗಿವುಚಿ ಹಾಕುವ ಪ್ರಸಂಗ ಇಲ್ಲಿಲ್ಲ.

ಹಸಿ ತರಕಾರಿಗಳನ್ನು ಹಚ್ಚುತ್ತಿದ್ದ ಹಾಗೆ ಆಗ ತಾನೇ ಮರದಿಂದ ಕೊಯ್ದು ತಂದಿದ್ದ ತಾಜಾ ಬೀಂಬುಳಿ ಕಣ್ಣಿಗೆ ಬಿತ್ತು.   ಸರಿ,  ಬೀಬುಳಿಯೂ ಕತ್ತರಿಸಲ್ಪಟ್ಟಿತು,  ಸಲಾಡ್ ಜತೆ ಸೇರಿ ತಾಜಾ ನಗು ಬೀರಿತು.   


                                                  

Monday, 23 January 2012

ಹೊಲಿಗೆ ಯಂತ್ರ



ಇದು ಜರ್ಮನಿಯಲ್ಲಿ ತಯಾರಾದ 1890 - 1900 ರ ಮಾಡೆಲ್ Winselmann, Titan ಹೊಲಿಗೆಯ ಯಂತ್ರ. ಸುಮಾರು 110 ವರ್ಷ ಹಿಂದಿನ ಈ ಯಂತ್ರ ಈಗಲೂ ಸುಸ್ಥಿತಿಯಲ್ಲಿದೆ. ಕೈಯಲ್ಲಿ ತಿರುಗಿಸಬಹುದಾದ ಒಂದು ಹ್ಯಾಂಡಲ್ ಬಲಭಾಗದಲ್ಲಿ ಇದೆ. ಎಲ್ಲಿ ಬೇಕಾದರೂ ಇಟ್ಟು ಹೊಲಿಗೆ ಕೆಲಸ ಮಾಡಬಹುದಾಗಿದೆ. ಉಪಯೋಗವಿಲ್ಲದಿದ್ದಾಗ ಕಪಾಟಿನಲ್ಲಿ ಇಡಬಹುದು. ಮೂರು ತಲೆಮಾರುಗಳನ್ನು ಕಂಡಿರುವ ಈ ಯಂತ್ರ ಈಗ ನನ್ನ ಬಳಿಯಿದೆ.









by Subhashini Hiranya



ಟಿಪ್ಪಣಿ : ಇಲ್ಲಿನ ಬರಹದಲ್ಲಿ ದಿನಾಂಕ 11, ಮಾರ್ಚ್, 2013 ರಂದು ಸಣ್ಣ ತಿದ್ದುಪಡಿ ಮಾಡಲಾಗಿದೆ.



Updated on January 2,  2023


ಹೈಸ್ಕೂಲ್ ದಿನಗಳಲ್ಲೇ ಹೊಲಿಗೆ ಮೆಶೀನ್ ನನ್ನದಾಗಿತ್ತು,  ಆಗಿನದ್ದು ಉಷಾ ಯಂತ್ರ,  ಓಣಂ ಹಬ್ಬದ ಸಮಯದಲ್ಲಿ ಖರೀದಿಸಿದ್ದು.

ಮದುವೆಯಾದ ನಂತರ ನಮ್ಮವರು ಮೆರಿಟ್ ಹೊಲಿಗೆ ಯಂತ್ರ ತೆಗೆದು ಕೊಟ್ಟರು,  ವರ್ಷಗಳ ನಂತರ ಪ್ರಾಚೀನ ಸಂಗ್ರಹಗಳಲ್ಲಿ ಇಡಲು ಯೋಗ್ಯವಾದಂತಹ 18ನೇ ಶತಮಾನದ ಮೆಶೀನ್ ಬಂದಿತು.  

ಈಗ ಮಗ ಆಧುನಿಕ ಕಾಲಕ್ಕೆ ತಕ್ಕಂತಹ ಇನ್ನೊಂದು ಹೊಲಿಗೆ ಯಂತ್ರ ತಂದಿದ್ದಾನೆ.   ಹೊಲಿಯುತ್ತಿರೋಣ…




Sunday, 22 January 2012

ಮೈಕ್ರೋ ವೇವ್ ಕುಕ್ಕಿಂಗ್


ಮೈಕ್ರೋ ವೇವ್ ಓವೆನ್ ನನ್ನ ಅಡುಗೆ ಮನೆಗೆ ಬಂದೇ ಬಿಟ್ಟಿತು . ಈಗಲ್ಲ , 8 ವರ್ಷಗಳ ಹಿಂದೆ. ಇನ್ನಿತರ ಅಡುಗೆ ಉಪಕರಣಗಳ ಮುಂದೆ ಭೂಷಣಪ್ರಾಯವಾಗಿ ಕುಳಿತೇ ಬಿಟ್ಟಿತು .

ಮುಂದಿನ ಕೆಲಸ , ಅಡುಗೆ ತಯಾರಿ ? ಹೇಗೆ , ಏನು , ಎತ್ತ ಯಾವ ಮಾಹಿತಿಯೂ ಅದರ ಕ್ಯಾಟಲಾಗ್ ನಲ್ಲಿ ಇಲ್ಲ .

"ಗೊತ್ತಾಗದಿದ್ರೆ ಇಂಟರ್ನೆಟ್ ನೋಡಿ ಕಲಿ " ಎಂದರು ಮನೆ ಯಜಮಾನ್ರು .

ಸರಿ , ನೆಟ್ ಜಾಲಾಟ ಪ್ರಾರಂಭಿಸಿಯೇ ಬಿಟ್ಟೆ . ಏನೇನೋ ಮಾಹಿತಿಗಳು ಸಿಕ್ಕವು , ಉಪಯೋಗದ ಮಾಹಿತಿ ಬಿಟ್ಟು . ಆರೋಗ್ಯಕ್ಕೆ ಹಾನಿಕರ ಎಂಬ ಮಾಹಿತಿಯಂತೂ ನನ್ನ ತಲೆ ಚಿಟ್ಟು ಹಿಡಿಸಿ ಬಿಟ್ಟಿತು.

"ಇಲೆಕ್ಟ್ರಾನಿಕ್ ಸಾಮಗ್ರಿಗಳ ಆಯುಸ್ಸು ಒಂದರಿಂದ ಎರಡು ವರ್ಷದ ವರೆಗೆ , ಅದನ್ನು ನೆನಪಿಟ್ಟುಕೋ " ಎಂಬ ಹಿತೊಪದೇಶವೂ ನಮ್ಮವರಿಂದ ದೊರೆಯಿತು .

ಅಕ್ಕ ಪಕ್ಕದ ಮನೆಯವರಲ್ಲಿ ನೆಟ್ಟಗೆ ಅನ್ನ, ಪಲ್ಯ ಮಾಡುವುದು ಹೇಗೆ ಎಂದು ಕೇಳೋಣ ಎಂದರೆ ಅವರಾರೂ ಇಂತಹ ಪೆಟ್ಟಿಗೆಯನ್ನು ಕಂಡವರೇ ಅಲ್ಲ .

ಸರಿ, ನನ್ನ ಪಾಡಿಗೆ ಪ್ರಯೋಗ ಆರಂಭಿಸಿದೆ . ನೀರು ಕ್ಷಣದಲ್ಲಿ ಕುದಿಯಿತು. ಚಹಾ ಪುಡಿ ಹಾಕಿ ಟೀ ತಯಾರಿ ಆಯಿತು . ಈ ಚಹಾ ಕುಡಿಯಲು ನಮ್ಮ ಕೆಲಸದವನೂ ಒಪ್ಪಲಿಲ್ಲ . "ಎನ್ನ ಚಾಯ ಈರು ಗ್ಯಾಸುಟೆ ಮನ್ಪುಲೇ " ಎಂದ !

ಮುಂದಿನ ಪ್ರಯೋಗದಲ್ಲಿ ಅನ್ನ ಬೇಯಲಿಲ್ಲ ! ಬೇಳೆ ಇಟ್ಟದ್ದು ಹಾಗೇ ಇತ್ತು ! ತರಕಾರಿಗಳೂ ಸುಮ್ಮನಿದ್ದುವು ! ಹಾಗಾಗಿ ನನ್ನ ಪೆಟ್ಟಿಗೆ ಸುಮ್ಮನೆ ಬಿದ್ದುಕೊಂಡಿತ್ತು . ಒಂದು ದಿನ ನನ್ನ ಅತ್ತಿಗೆ ಬಂದವರು , "ನನ್ನ ತಮ್ಮ ತಂದು ಕೊಟ್ಟಿದ್ದನ್ನು ಉಪಯೋಗಿಸದೇ ಹಾಗೇ ಇಟ್ಟಿದ್ದಿಯಲ್ಲ " ಎಂದು ಮೂದಲಿಸಿ ಹೋದರು .

ನನ್ನ ತಂಗಿ ಬಂದಳು . ಬರುವಾಗ ಒಂದಷ್ಟು ಲಡ್ಡುಗಳನ್ನೂ ತಂದಿದ್ದಳು . ಲಡ್ಡುಗಳನ್ನು ಡಬ್ಬಿಗೆ ತುಂಬಿಸಿ ಆ ಪ್ಲಾಸ್ಟಿಕ್ ಕ್ಯಾರೀ ಬ್ಯಾಗನ್ನು ಆಚೆ ಎತ್ತಿಟ್ಟೆ . ಹಾಗೇ ಸುಮ್ಮನೆ ಅದರಲ್ಲಿ ಬರೆದಿದ್ದರ ಕಡೆ ಕಣ್ಣು ಹಾಯಿಸಿದೆ . ಬಾಸುಮತಿ ಅಕ್ಕಿಯ ಬ್ಯಾಗ್ ಅದಾಗಿತ್ತು . ಬಾಸುಮತಿ ಅನ್ನ ಒಲೆಯಲ್ಲಿ, ಕುಕ್ಕರಿನಲ್ಲಿ , ಮೈಕ್ರೋ ವೇವ್ ನಲ್ಲಿ ಮಾಡುವುದನ್ನು ಅದರಲ್ಲಿ ಬರೆದಿತ್ತು !

ಅಡುಗೆಯ ಗುಟ್ಟು ತಿಳಿದೇ ಬಿಟ್ಟಿತು . 1 ಲೋಟ ಅಕ್ಕಿಯನ್ನು 10 ನಿಮಿಷ ನೆನೆಸಿ ಓವೆನ್ ನಲ್ಲಿ 7 ನಿಮಿಷಗಳ ಕಾಲ ಮುಚ್ಚಿ 100 ಡಿಗ್ರಿ ಉಷ್ಣತೆಯಲ್ಲಿ ಅಕ್ಕಿಯ ಎರಡರಷ್ಟು ನೀರು ಹಾಕಿ ಇಟ್ಟರಾಯಿತು . ಆದ ಕೂಡಲೇ ತೆರೆಯುವಂತಿಲ್ಲ . 10 ನಿಮಿಷ ಬಿಟ್ಟೇ ತೆಗೆಯಬೇಕೆಂಬ ಸೂಚನೆಯನ್ನು ಪಾಲಿಸಿ ಅನ್ನ ತಯಾರಿಸಿಯೇ ಬಿಟ್ಟೆ ! ಅಲ್ಲಿಂದ ಮತ್ತೆ ನಾನು ಓವೆನ್ ಅಡುಗೆಯಲ್ಲಿ ಸೋತದ್ದೇ ಇಲ್ಲ .