Pages

Ads 468x60px

Saturday, 23 February 2019

ಮೊಸರನ್ನ



ತೋಟದ ತೆಂಗಿನಕಾಯಿಗಳನ್ನು ತೆಗೆಸಿಯಾಗಿದೆ, " ಅಕ್ಕ, ನೀರಾಡುವ ಕಾಯೀಲಿ ಬನ್ನಂಗಾಯಿಯೂ ಉಂಟಲ್ಲ..." ಅಂದ ಚೆನ್ನಪ್ಪ.

" ಹೌದ, ಒಣಗಿದ ಕಾಯಿ ಅಟ್ಟಕ್ಕೆ ಹಾಕು, ಬನ್ನಂಗಾಯಿ ಪ್ರತ್ಯೇಕ ತೆಗೆದಿಡು.. ದೋಸೆಗೂ, ಅವಲಕ್ಕಿ ಬೆರೆಸಿ ತಿನ್ನಲಿಕ್ಕೂ, ಮೇಲಾರಕ್ಕೂ (ಮಜ್ಜಿಗೆಹುಳಿ ) ಆದೀತು. "

" ಪಾಯಸಕ್ಕೂ ಆದೀತು. " ಎಂದರು ಗೌರತ್ತೆ.
" ಹೌದು, ದಿನಾ ಪಾಯಸ ಮಾಡೋರು ಯಾರೂ..." ನನ್ನ ರನ್ನಿಂಗ್ ಕಮೆಂಟ್ರಿ ಮುಂದುವರಿಯುತ್ತಿದ್ದಂತೆ ಎರಡು ಬನ್ನಂಗಾಯಿಗಳನ್ನು ಸುಲಿದು ಇಟ್ಟ ಚೆನ್ನಪ್ಪ.

" ಹ್ಞೂ.. ನಾಳೆ ಬನ್ನಂಗಾಯಿ ದೋಸೆ..." ಅನ್ನುತ್ತ ಎರಡು ಲೋಟ ಬೆಳ್ತಿಗೆ ಅಕ್ಕಿ ತೊಳೆದು ನೀರೆರೆದು ಇಟ್ಟಾಯ್ತು.

ಸಂಜೆಯಾಗುತ್ತಲೂ ಬನ್ನಂಗಾಯಿ ಒಡೆದು, ತುರಿದು, ತೊಳೆದಿರಿಸಿದ ಅಕ್ಕಿಯನ್ನು ಮಿಕ್ಸಿಯ ಜಾರೊಳಗೆ ತುಂಬಿಸಿ, ಬನ್ನಂಗಾಯಿ ತುರಿಯನ್ನೂ, ನೀರನ್ನೂ ಎರೆದು "ಟೊರ್ ಟೊರ್... ಅನ್ನಿಸೋಣ ಎಂದಾಗ ಜಾರು ತಿರುಗಲೊಲ್ಲದು, ಒಳಗೆರೆದ ನೀರು ಹೊರ ಹರಿಯಿತು...

" ಥತ್, ಇದೊಂದು ಗೋಳು... " ಜಾರು ಕೆಟ್ಟಿದೆಯೆಂದು ದೂರು ಮನೆಯ ಚಾವಡಿಕಟ್ಟೆಗೆ ಬಂದಿತು.

" ಹಾಳಾದ್ರೆ ತೆಗೆದಿಡು.. ನಾಳೆ ರಿಪೇರಿ ಮಾಡ್ಸೋಣ... " ತಣ್ಣಗಿನ ಉತ್ತರ ಬಂದಿತು.

ಅಕ್ಕಿಯ ಮೇಲಿದ್ದ ಕಾಯಿತುರಿಯನ್ನು ತೆಗೆದಿರಿಸಿ,
ಅಕ್ಕಿಯನ್ನೂ ಬಸಿದು ತೂತಿನ ತಟ್ಟೆಯಲ್ಲಿ ಬಿಡಿಸಿ ಹಾಕಿದ್ದಾಯ್ತು.

" ನಾಳೆಗೇನು ತಿಂಡಿ ಮಾಡ್ತೀಯ? " ಕೇಳಿದ್ದು ಜಪಸರ ಹಿಡಿದು ರಾಮಜಪ ಮಾಡ್ತಿದ್ದ ಗೌರತ್ತೆ.
" ಈ ಅಕ್ಕಿಯಿಂದಾನೇ ಏನೋ ಒಂದು ಮಾಡಿದ್ರಾಯ್ತು ಬಿಡಿ. "
" ಉಪ್ಪಿಟ್ಟು, ಚಿತ್ರಾನ್ನ... " ಹೀಗೆಲ್ಲ ಚಿಂತನೆಗಳೊಂದಿಗೆ ರಾತ್ರಿ ಕಳೆದು ಬೆಳಗಾಯ್ತು.

ದೋಸೆ ಅಕ್ಕಿಯು ಸುಮಾರಾಗಿ ಒಣಗಿದೆ. ಎರಡು ಲೋಟ ಇತ್ತಲ್ಲ, ಐದು ಲೋಟ ನೀರೆರೆದು ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ಎರಡು ಸೀಟಿ ಕೂಗಿಸಿ,
ಎರಡು ಘನಗಾತ್ರದ ನೀರುಳ್ಳಿ ಚಿಕ್ಕದಾಗಿ ಹೆಚ್ಚಿ,
ನಾಲ್ಕು ಹಸಿಮೆಣಸು ಸಿಗಿದು,
ಕರಿಬೇವು ತೋಟದಿಂದ ತಂದು,
ಫ್ರಿಜ್ಜಿನಲ್ಲಿದ್ದ ಬನ್ನಂಗಾಯಿ ತುರಿ ಹೊರ ಬಂದು,
ಅಡುಗೆಯ ಸಿದ್ಧತೆಗಾಗಿ ಇಷ್ಟೆಲ್ಲ ಮಾಡುತ್ತಿರಬೇಕಾದರೆ ಅನ್ನ ಬೆಂದಿದೆ.

ಬಾಣಲೆಗೆ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ, ತೆಂಗಿನೆಣ್ಣೆ, ಸಾಸಿವೆ, ಕಡ್ಲೇಬೇಳೆ, ಒಣಮೆಣಸಿನ ಚೂರುಗಳು...
ಚಟಪಟನೆ ಸಾಸಿವೆ ಸಿಡಿದಾಗ ಕರಿಬೇವು, ನೀರುಳ್ಳಿ, ಹಸಿಮೆಣಸು ಬೀಳಿಸಿ,
ತಟಪಟನೆ ಸೌಟಾಡಿಸಿ, ಬನ್ನಂಗಾಯಿ ತುರಿ ಹಾಕಿ, ಒಂದು ಸೌಟು ಸಕ್ಕರೆ, ಈಗಾಗಲೇ ಅನ್ನಕ್ಕೆ ಉಪ್ಪು ಬಿದ್ದಿದೆ, ನೋಡಿಕೊಂಡು ಬೇಕಿದ್ದರೆ ಮಾತ್ರ ಉಪ್ಪು ಹಾಕುವುದು.
ಸಾಕಷ್ಟು ಅನ್ನ ಸುರಿದು, ಚೆನ್ನಾಗಿ ಬೆರೆಸುವಲ್ಲಿಗೆ ಒಗ್ಗರಣೆ ಅನ್ನ ಸಿದ್ಧವಾಗಿದೆ.

ಬಾಳೆಹಣ್ಣು ಕೂಡಿಕೊಂಡು ಮುಂಜಾನೆಯ ರಸಗವಳ ತಿನ್ನೋಣ.

ಹತ್ತು ಗಂಟೆಯ ಚಹಾ ಸಮಯ, ಒಗ್ಗರಣೆ ಅನ್ನ ತಣಿದಿದೆ. ನಾಲ್ಕು ಸೌಟು ದಪ್ಪ ಮೊಸರು ಹಾಕಿ ಕಲಸಿದಾಗ ಮೊಸರನ್ನವೆಂಬ ತಿನಿಸು ಎದ್ದು ಬಂದಿತು. ಬೇಸಿಗೆಯ ಬೇಗೆಗೆ ಮೊಸರನ್ನವೇ ಹಿತವೆಂದರು ಗೌರತ್ತೆ.






Sunday, 17 February 2019

ಪಂಚಾಮೃತ




ಹಿರಣ್ಯದ ಆವರಣದಲ್ಲಿರುವ ಮಹಿಷಂದಾಯ ದೈವಗುಡಿಯಲ್ಲಿ ಸಂಜೆಯ ಹೊತ್ತು ತಂಬಿಲಸೇವೆ, ದೇವಿ ಬಾಲಾಲಯದಲ್ಲಿ ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನಪೂಜೆ, ಭಜನೆ ಕಾರ್ಯಕ್ರಮಗಳ ನಿಮಿತ್ತ ಸಂಬಂಧಿತರಿಗೆ ವಾಟ್ಸಪ್ ಮುಖೇನ ನೆನಪಿನೋಲೆ ಕಳುಹಿಸಿಯೂ ಆಯಿತು.

ಪೂಜೆಯ ಉಸ್ತುವಾರಿ ಹೊತ್ತಿರುವ ಪರಕ್ಕಜೆ ಪುರೋಹಿತರು ಸಂಜೆ ನಾಲ್ಕಕ್ಕೇ ಆಗಮಿಸಿ, ವಿಶ್ರಾಂತಿಗಾಗಿ ಜಮಖಾನ ಹಾಸಿ ತಲೆದಿಂಬಿನೊಂದಿಗೆ ಅಡ್ಡಾದರು.

ನನಗೋ ಎಲ್ಲವನ್ನೂ ಹೊಂದಿಸಿ ಇಡುವ ಆತುರ. ಏನೇನು ಆಗ್ಬೇಕಾಗಿದೆ ಎಂಬ ತಪಾಸಣೆಯೂ,
ತೋಟದಿಂದ ಬಂದ ತೆಂಗಿನಕಾಯಿಗಳನ್ನು ಸುಲಿದು ಇರಿಸಿದೆಯೋ,
ಗುಣಮಟ್ಟದ ಬೆಳ್ತಿಗೆ ಅಕ್ಕಿ - ಪಿಂಡಿ ಪಾಯಸಕ್ಕಾಗಿ,
ಅವಲಕ್ಕಿ, ಹೊದಳು, ಬೆಲ್ಲ - ಪಂಚಕಜ್ಜಾಯಕ್ಕಾಗಿ,
ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ - ಪಂಚಾಮೃತಕ್ಕಾಗಿ...

ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸುತ್ತಿರಬೇಕಾದರೆ ಪರಿಕರ್ಮಗಳ ಉಸ್ತುವಾರಿಗಾಗಿ ಮುಳಿಯಾಲು ಭಟ್ಟರು ಬಂದರು.

ಮಿಂದು ಶುಚಿರ್ಭೂತರಾಗಿ ನೈವೇದ್ಯದ ಪಿಂಡಿ ಪಾಯಸ ಮಾಡಬೇಕಲ್ಲವೇ, ಬಚ್ಚಲುಮನೆಯಲ್ಲಿ ಹಂಡೆನೀರು ಕುದಿಯಿತು.

" ಹೌದೂ, ಪಂಚಾಮೃತದ ಸಾಹಿತ್ಯ ಅಲ್ಲಿಗೆ ತೆಗೆದುಕೊಂಡು ಹೋಗುವುದೋ, ಇಲ್ಲಿಂದಲೇ ಹೊಂದಿಸಿ ಒಯ್ಯುವುದೋ ಹೇಗೆ? "

" ನೀವು ನಾನು ಹೇಳಿದಷ್ಟು ಕೊಡಿ, ಹಾಲು ಎಲ್ಲಿದೆ? "

" ಹಾಲು ಈಗ ಡೈರಿಯಿಂದ ತಂದದ್ದು.. " ಸ್ಟೀಲು ಕ್ಯಾನು ಬಾಯ್ದೆರೆಯಿತು. ಅಂದಾಜು ಅರ್ಧ ಲೀಟರು ಹಾಲು ಸ್ಟೀಲು ತಂಬಿಗೆಯ ಪಾಲಾಯ್ತು.

" ಮೊಸರು ಎಲ್ಲಿ? "
" ಪ್ರಿಜ್ ಒಳಗಿಂದ ಎರಡು ಸೌಟು ಮೊಸರು ತಂಬಿಗೆ ಸೇರಿತು.

" ಒಂದೊಂದು ಚಮಚ ಜೇನು ಹಾಗೂ ತುಪ್ಪ... "

" ಸಿಹಿಸಿಹಿ ಆಗ್ಬೇಕಲ್ಲ... " ನಾಲ್ಕು ಸೌಟು ಸಕ್ಕರೆ ಹಾಲು ಮೊಸರೊಳಗೆ ಐಕ್ಯವಾಯಿತು.

" ಪಂಚಾಮೃತ ಆಯಿತು... " ಅನ್ನುತ್ತ ತುಂಬಿದ ತಂಬಿಗೆ ಹಾಗೂ ಇನ್ನಿತರ ಪರಿಕರಗಳೊಂದಿಗೆ ಭಟ್ಟರು ದೇವಿ ಸಾನಿಧ್ಯದ ಕಡೆ ನಡೆದರು.

ತಡರಾತ್ರಿ ಹೊತ್ತಿಗೆ ಪೂಜಾ ಕೈಂಕರ್ಯಗಳೆಲ್ಲ ಮುಗಿದು, ಹೂ ಹಣ್ಣು ಕಾಯಿ ಕುಂಕುಮಗಳನ್ನು ಭಕ್ತ ಜನ ಸಮುದಾಯಕ್ಕೆ ವಿತರಿಸಿ, ನೈವೇದ್ಯ ಪ್ರಸಾದಗಳನ್ನು ಹಂಚಿದ್ದೂ ಆದ ನಂತರ ಉಳಿದ ಪಂಚಾಮೃತ ನನ್ನ ಕೈ ಸೇರಿತು.
ಪಂಚಾಮೃತವನ್ನು ಪ್ರಸಾದ ರೂಪದಲ್ಲಿ ವಿತರಿಸುವಾಗ ಅಂಗೈ ಬೊಗಸೆಯಲ್ಲಿ ಹಿಡಿಸುವಷ್ಟೇ ಪುಟ್ಟ ಸಕ್ಕಣದಲ್ಲಿ ಎರೆಯುವ ಪದ್ಧತಿ, ತಂಬಿಗೆ ಪಂಚಾಮೃತ ಮುಗಿಯದೇ ಹೋಯಿತು.

" ಇದನ್ನು ಮನೆಗೊಯ್ದು ಏನು ಮಾಡಲೀ? "
"ಪ್ರಿಜ್ ಒಳಗಿಟ್ಟು ನಾಳೆ ಐಸ್ ಕ್ರೀಂ ಥರ ಚೆನ್ನಾಗಿರುತ್ತೆ... " ಪುಕ್ಕಟೆ ಸಲಹೆಯೂ ಸಿಕ್ಕಿತು!








Saturday, 2 February 2019

ನೆಲ್ಲಿಕಾಯಿಯ ಸಿಹಿ









ನೆಲ್ಲಿಕಾಯಿ ಬಂದಿತ್ತು. " ನೆಲ್ಲಿಕಾಯಿಯ ಮುರಬ್ಬ ನಂಗೆ ಬೇಡ, ಒಣಗಿಸಿ ಹುಡಿ ಮಾಡಿಟ್ಟರೆ ನೆಲ್ಲಿಕಾಯಿ ಚೂರ್ಣ ಆಯ್ತು, ನಂಗೆ ಅದೇ ಸಾಕು... " ಮೊದಲೆಲ್ಲ ಗೌರತ್ತೆ ತೋಟದ ಗುಡ್ಡದ ಬದಿಯಲ್ಲಿರುವ ಮರದ ನೆಲ್ಲಿಕಾಯಿಗಳನ್ನು ಹೆಕ್ಕಿ ತರುತ್ತಿದ್ದರು. ಚೆನ್ನಾಗಿ ಬೆಳೆದ ನೆಲ್ಲಿಕಾಯಿಗಳು ತಾನಾಗಿಯೇ ಮರದಿಂದ ಉದುರಿ ಬೀಳಬೇಕು, ಬಿದ್ದಲ್ಲಿಯೇ ಒಣಗಿದ ಕಾಯಿಗಳನ್ನು ತಂದು ಡಬ್ಬದಲ್ಲಿ ತುಂಬಿಸಿ ಬೇಕೆನಿಸಿದಾಗ ಕಷಾಯ ಮಾಡಿ ಕುಡಿಯುವ ಪದ್ಧತಿ ಇಟ್ಕೊಂಡಿದ್ದರು ಗೌರತ್ತೆ. ಈಗ ಗುಡ್ಡದಲ್ಲಿ ರಬ್ಬರ್ ಕಾಡು ಬೆಳೆಸಿ ನೆಲ್ಲಿಕಾಯಿಯ ಮರ ನಾಪತ್ತೆಯಾಗಿದೆ.

" ಎಲ್ಲವನ್ನೂ ಒಣಗಿಸಿ ಇಡೂದು ಬೇಡ, ನಾನು ಮುರಬ್ಬ ತಿನ್ಬೇಕು.. " ಮುರಬ್ಬ ಮಾಡುವ ಹೊಸ ವಿಧಾನ ಯೂ ಟ್ಯೂಬ್ ನಲ್ಲಿ ನೋಡಿದ್ದ ನನಗೂ ಮುರಬ್ಬದ ಚಪಲ.

" ಹೌದ, ಈ ಬಾರಿ ಮುರಬ್ಬ ಹೇಗೆ ಮಾಡ್ತೀಯಾ? "
" ನೋಡ್ತಾ ಇರಿ.. "
ಈ ನೆಲ್ಲಿಕಾಯಿಗಳು ಮಾರುಕಟ್ಟೆಯಿಂದ ಬಂದದ್ದು, ಕೊಯ್ದು ದಿನವೆಷ್ಟಾಯ್ತೋ, ಕೊಳೆಕಸ ಹೋಗಲಿಕ್ಕೆ ಮುಳುಗುವಷ್ಟು ನೀರೆರೆದು ಅರ್ಧ ದಿನವಾದರೂ ಇಡಬೇಕು. ನಂತರ ನೀರು ಬಸಿದು ಚೆಲ್ಲುವುದು.

ಕುಕ್ಕರಿನಲ್ಲಿ ನೆಲ್ಲಿಕಾಯಿಗಳನ್ನು ತುಂಬಿ, ಮುಳುಗುವಷ್ಟು ನೀರು ಎರೆಯಬೇಕು. ನೀರನ್ನು ಅಳೆದೇ ಎರೆಯಿರಿ, ನಾಲ್ಕು ಲೋಟ ನೀರು ಬೇಕಾಯಿತು. ರುಚಿಗೆ ತುಸು ಉಪ್ಪು ಹಾಕಬೇಕು.

ಕುಕರ್ ಒಂದು ಸೀಟಿ ಹಾಕಿದೆ, ಕೊಡಲೇ ಇಳಿಸಿ, ಒತ್ತಡವನ್ನು ನಿಧಾನವಾಗಿ ತೆಗೆದು ಮುಚ್ಚಳ ತೆರೆಯಿರಿ.
ಬೇಯಿಸಲು ಉಪಯೋಗಿಸಿದ ನೀರನ್ನು ಬಸಿಯಿರಿ, ಚೆಲ್ಲುವಂತಿಲ್ಲ, ಆಮ್ಲಾ ವಾಟರ್ ಎಂದು ಕರೆಯಬಹುದಾದ ಈ ನೀರನ್ನು ರೆಫ್ರಿಜರೇಟರ್ ಒಳಗಿಡತಕ್ಕದ್ದು. ಸಾಂದ್ರತೆಯುಳ್ಳ ಈ ದ್ರಾವಣವನ್ನು ಸಾಕಷ್ಟು ನೀರೆರೆದು ತೆಳ್ಳಗಾಗಿಸಿ ಬೇಕೆನಿಸಿದಾಗ ಕುಡಿಯತಕ್ಕದ್ದು.

ಕುಕರ್ ಪಾತ್ರೆಯೊಳಗೆ ಇರುವ ಬಿಸಿಬಿಸಿ ನೆಲ್ಲಿಕಾಯಿಗಳಿಗೆ, ಈ ಮೊದಲು ಎರೆದ ನೀರಿನ ಅಳತೆಯಷ್ಟು, ಅಂದರೆ ನಾಲ್ಕು ಲೋಟ ಸಕ್ಕರೆ ಸುರಿಯಬೇಕು ಹಾಗೂ ಒಲೆಯ ಮೇಲೆ ಇರಿಸಬೇಕು.
ಅತಿ ಕನಿಷ್ಠ ಉರಿಯಲ್ಲಿ ಇರಿಸಿ, ಆಗಾಗ ಸೌಟು ಹಾಕಿ ಕೆದಕುತ್ತಿರಬಾರದು, ನೆಲ್ಲಿಕಾಯಿ ಮುದ್ದೆಯಾದೀತು.
ಇಂಡಕ್ಷನ್ ಸ್ಟವ್ ಉತ್ತಮ, ಅದರ ಲೆಕ್ಕಾಚಾರದ ಕನಿಷ್ಠ ಉಷ್ಣತೆಯಲ್ಲಿರಿಸಿ ಮಿಕ್ಕುಳಿದ ಅಡುಗೆ ಕೆಲಸಗಳನ್ನೆಲ್ಲ ಮಾಡಿಟ್ಟು, ಸ್ನಾನವನ್ನೂ ಮುಗಿಸಿ, ಊಟಕ್ಕೆ ಹೊರಟಾಗ ಸಕ್ಕರೆ ಕರಗಿತ್ತು.

ಸಕ್ಕರೆಯೆಲ್ಲ ಕರಗಿದ ಈ ಹಂತದಲ್ಲಿ ಕುಕ್ಕರ್ ಮುಚ್ಚಿ ಬೇಯಿಸಿ, ಇನ್ನೊಂದು ಸೀಟಿ ಕೂಗಿಸಿ, ಅದರ ಪಾಡಿಗೆ ತಣಿಯಲು ಬಿಡಬೇಕು.

ಸಂಜೆಯ ಚಹಾ ಸಮಯ, ಕುಕ್ಕರ್ ತಣಿದಿದೆ, ಸಕ್ಕರೆಯ ಪಾಕವೂ ಆಗಿದೆ, ಸುವಾಸನೆಗೆ ಏಲಕ್ಕಿಪುಡಿ ಉದುರಿಸಿ.

ನೆಲ್ಲಿಕಾಯಿ ಮುರಬ್ಬವೂ,
ಆಮ್ಲಾ ವಾಟರೂ,
ನೆಲ್ಲಿಕಾಯಿ ಚೂರ್ಣವೂ,
ಒಂದೇ ಏಟಿಗೆ ಆಗಿಬಿಟ್ಟಿತು.





Saturday, 19 January 2019

ಜೀರಕ್ಕಿ ಸಾರು





     
         
                           


“ ಬೆಳಿಗ್ಗೆ ಏಳುವಾಗಲೇ ಸೊಂಟ ಹಿಡ್ಕೊಂಡ್ಬಿಟ್ಟಿದೆ, ನಿನ್ನೆ ತಿಂದ ಬಟಾಟೆಯ ಪರೋಟ ಅರಗಲಿಲ್ಲ, ಚಳಿಯಲ್ವೇ... ಜೀರಿಗೆ ಕಷಾಯ ಕುಡಿದ್ರೆ ಸರಿಹೋದೀತು. “ ಎಂದರು ಗೌರತ್ತೆ, “ ಬಗ್ಗಲಿಕ್ಕೂ ಆಗುವುದಿಲ್ಲ, ನೆಟ್ಟಗೆ ನಿಲ್ಲಲಿಕ್ಕೂ ಆಗುವುದಿಲ್ಲ ನೋಡು.. “
“ ಈಗ ಸ್ವಲ್ಪ ಜೀರಿಗೆ ಬಾಯಿಗೆ ಹಾಕ್ಕೊಳ್ಳಿ. “
“ ಅದು ಸರಿಯೇ, ನನ್ನ ಸೆಟ್ ಹಲ್ಲಿಗೆ ಜೀರಕ್ಕಿ ಅಗಿಯಲೂ ಕಷ್ಟ. “
“ ಹಾಗಿದ್ರೆ ಕಷಾಯ ಈಗ್ಲೇ ಮಾಡೋಣ.. “
“ ತುಪ್ಪದಲ್ಲಿ ಮೂರು ಚಮಚಾ ಜೀರಿಗೆ ಪರಿಮಳ ಬರುವಷ್ಟು ಹುರಿದು, ಹುಡಿ ಮಾಡಿ, ಮೂರು ಲೋಟ ನೀರು ಒಲೆ ಮೇಲೆ ಇಡು. ಅದಕ್ಕೆ ಒಂದು ತುಂಡು ಬೆಲ್ಲ ಹಾಕಿ, ಜೀರಿಗೆ ಹುಡಿಯನ್ನೂ ಹಾಕಿ ಕುದಿಸು. ನೀರು ಚೆನ್ನಾಗಿ ಬತ್ತಬೇಕು. “
 “ ಹೌದ, ಎಷ್ಟೂ ? “
“ ಮುಕ್ಕಾಲು ಲೋಟ ಆಗುವಷ್ಟು.. “
“ ಇದಕ್ಕೆ ಕೊತ್ತಂಬರಿ ಹಾಕುವುದಕ್ಕಿಲ್ಲವೇ.. “
“ ಕೊತ್ತಂಬರಿ ಬೇಡ, ಅದು ಶೀತ. “
“ ಓ, ಹಾಗೆ ಸಂಗತಿ ಅನ್ನಿ.. “
“ ನೆಗ್ಗಿಲ ಮುಳ್ಳು ಹಾಕ್ಬೋದಿತ್ತು, ಅದು ಉಂಟೋ ನಿನ್ನ ಭಂಡಾರದಲ್ಲಿ ? “
“ ಇಲ್ಲ. “ ಅನ್ನದೆ ವಿಧಿಯಿಲ್ಲ.
ಅಂತೂ ಗೌರತ್ತೆಯ ನಿರ್ದೇಶಾನುಸಾರ ಕಷಾಯ ತಯಾರಾಯ್ತು.
ಕುದಿದು ಆರಿದ ಜೀರಿಗೆ ಕಷಾಯಕ್ಕೆ ಹಿತವಾಗುವಷ್ಟು ಹಾಲು ಎರೆದು, ಪುನಃ ಕುದಿಸಿ ನೆಲ್ಲಿಕಾಯಿ ಗಾತ್ರದ ಬೆಣ್ಣೆಮುದ್ದೆಯನ್ನು ಕಷಾಯದೊಳಗೆ ಇಳಿಸಿ ಕುಡಿಯುವ ಸಂಪ್ರದಾಯವನ್ನು ಪಾಲಿಸಿ ಫಿಲ್ಟರ್ ಕಾಫಿಯ ಬದಲು ಈ ಔಷಧೀಯ ಜೀರಿಗೆ ಕಾಫಿ ಕುಡಿದು ಸಮಾಧಾನ ಪಟ್ಟರು ಗೌರತ್ತೆ.

“ ನಮ್ಮ ಆಯುರ್ವೇದ ಡಾಕ್ಟ್ರ ಮದ್ದೂ ಬರಲಿ.. “
“ ತರಿಸೋಣ.. “ ಡಾಕ್ಟರು ನಮ್ಮ ಪಕ್ಕದ ಮನೆಯಲ್ಲೇ ಇರೂವಾಗ ಚಿಂತೆಯೇನೂ ಇಲ್ಲ.
ಜೀರಿಗೆ ಕಷಾಯದ ಘಮಲು ನನ್ನ ತಲೆಗೂ ಏರಿತು, ಜೀರಿಗೆ ಸಾರು ಮಾಡಿದ್ರೆ ಹೇಗೆ? ಚಿಂತನೆ ಮೂಡಿದ್ದೇ ತಡ, ಕಾರ್ಯರೂಪಕ್ಕೂ ಇಳಿಯಿತು.

ಮೂರು ಚಮಚ ಜೀರಿಗೆ, ಚಮಚಾ ಅಂದ್ರೆ ಪುಟ್ಟದು ಆಗಿರಬೇಕು. ನಿತ್ಯೋಪಯೋಗಿ ಮಸಾಲಾ ಸಾಮಗ್ರಿಗಳಲ್ಲಿ ಜೀರಿಗೆಯು ದುಬಾರಿ ಕ್ರಯದ್ದು ಎಂಬುದೂ ತಿಳಿದಿರಲಿ.
2 - 3 ಒಣಮೆಣಸು
ಉದ್ದಿನ ಕಾಳಿನಷ್ಟು ಇಂಗು
ಒಂದು ಎಸಳು ಕರಿಬೇವು
ತುಸು ಎಣ್ಣೆ ಯಾ ತುಪ್ಪದ ಪಸೆಯಲ್ಲಿ ಪರಿಮಳ ಬರುವಂತೆ ಹುರಿದು, ಕರಿಬೇವು ಹಾಕುವಲ್ಲಿಗೆ ಹುರಿದಾಯ್ತು.

ಎರಡು ಟೊಮ್ಯಾಟೋ, ಚೆನ್ನಾಗಿ ತೊಳೆದು ಬೇಯಿಸಿ, ಕತ್ತರಿಸುವುದೇನೂ ಬೇಡ.
ಬೆಂದ ಟೊಮ್ಯಾಟೋ ಹಾಗೂ ಮಸಾಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಅರೆಯಿರಿ, ನೀರು ಹಾಕದಿರಿ, ಟೊಮ್ಯಾಟೋದಲ್ಲಿ ಇರುವ ನೀರು ಸಾಕು.
ತಪಲೆಗೆ ವರ್ಗಾಯಿಸಿ, ಸಾರು ಎಂದು ಹೆಸರು ನೀಡಲು ಅಗತ್ಯದ ನೀರು ಕೂಡಿಸಿ,
ರುಚಿಕರವಾಗಲು ಬೇಕಾದಂತಹ ಉಪ್ಪು, ಬೆಲ್ಲ ಹಾಕಿ,
ಕುದಿಸಿ, ಗಳಗಳ ಕುದಿದಾಗ ಒಗ್ಗರಣೆ ಕೊಡಿ, ಬೇಡವೇ.. ಎರಡು ಚಮಚ ತುಪ್ಪ ಎರೆದರೂ ಸಾಕು. ಸೂಪ್ ತರಹ ಕುಡಿಯಿರಿ.
ಎರಡು ಉದ್ದಿನ ಹಪ್ಪಳ ಹುರಿದು ಅನ್ನದೊಂದಿಗೆ ಕಲಸಿ ತಿನ್ನಿ.

ಭಾರತದ ಸಾಂಬಾರ ಪದಾರ್ಥವಾದ ಜೀರ್ಣಕ್ರಿಯೆಗೆ ನೆರವಾಗುವಂತಹ ಜೀರಿಗೆಯು ಸಂಸ್ಕೃತದಲ್ಲಿ ಜೀರಕ ಎಂದೆನಿಸಿದೆ. ಪಚನಕ್ರಿಯೆ ಸರಿಯಾಗದಿದ್ದಾಗ ಹೊಟ್ಟೆ ಉಬ್ಬರಿಸುವಿಕೆ, ವಾಯುಪ್ರಕೋಪದಂತಹ ತೊಂದರೆ ಮೊದಲಾಗಿ ಕಾಣಿಸಿಕೊಂಡಾಗ ಜೀರಿಗೆಯು ಉತ್ತಮ ಮನೆಮದ್ದು.

ಪೊಂಗಲ್, ತುಪ್ಪದ ಅನ್ನ ( ಘೀರೈಸ್ ), ಉಪ್ಪಿನಕಾಯಿ, ಸಾಂಬಾರ್, ಧಾಲ್ ಇತ್ಯಾದಿಯಾಗಿ ಯಾವುದೇ ಅಡುಗೆಯಿರಲಿ, ಜೀರಿಗೆ ಇರಲೇಬೇಕು.

ಅತಿ ಹೆಚ್ಚು ಕಬ್ಬಿಣಾಂಶದಿಂದ ಕೂಡಿದ ಜೀರಿಗೆಯು ದೇಹದ ಮೆಟಾಬಾಲಿಸಂ ಅನ್ನು ಕಾಯ್ದುಕೊಳ್ಳುವಲ್ಲಿ ಶಕ್ತ. ಮಹಿಳೆಯರಲ್ಲಿ ಋತುಚಕ್ರ ಏರುಪೇರಾಗದಂತೆಯೂ ನೋಡಿಕೊಳ್ಳುವುದು, ರಕ್ತಹೀನತೆಯ ತೊಂದರೆಯೂ ಬಾರದು.

ಉಸಿರಾಟದ ಸೋಂಕು, ಅಸ್ತಮಾ ರೋಗಿಗಳೂ ಜೀರಿಗೆಯ ನೀರನ್ನು ಕುಡಿಯುತ್ತ ಬಂದಲ್ಲಿ ರೋಗಬಾಧೆಯಿಂದ ಮುಕ್ತಿ.

ಇನ್ನೇನು ಬೇಸಿಗೆ ಬರಲಿದೆ, ಬೆವರುಸಾಲೆ, ತುರಿಕಜ್ಜಿಗಳ ಬಳಲಿಕೆ ಬಾರದಂತೆ ಜೀರಾಪಾನಿ ಕುಡಿಯಿರಿ.

ವಿಟಮಿನ್ ಇ ಅನ್ನಾಂಗ ಜೀರಿಗೆಯಲ್ಲಿ ಹೇರಳವಾಗಿದೆ. ಇದು ನಿಮ್ಮ ಚರ್ಮ ಕಾಂತಿಗೆ ಆರೋಗ್ಯದ ಹೊಳಪು ನೀಡುವ ಶಕ್ತಿ. 3 : 1 ರ ಪ್ರಮಾಣದಲ್ಲಿ ಅರಸಿನ ಹುಡಿ, ಜೀರಿಗೆ ಹುಡಿ ಅಳೆದು, ಜೇನು ಯಾ ಹಾಲಿನ ಕೆನೆಯಲ್ಲಿ ಕಲಸಿ ಮುಖಕ್ಕೆ ಸವರಿ, ಗಂಟೆ ಬಿಟ್ಟು ತೊಳೆಯುತ್ತ ಬಂದಲ್ಲಿ ಮೇಕಪ್ ಇಲ್ಲದೇ ಕಂಗೊಳಿಸುವಿರಿ. ಚರ್ಮದ ವಾರ್ಧಕ್ಯವನ್ನೂ ತಡೆಯಿರಿ. ಚರ್ಮ ಸುಕ್ಕುಗಟ್ಟದು, ಕಣ್ಣ ಸುತ್ತ ಕಪ್ಪು ಕಲೆಯೂ ಕಾಣಿಸದು.

ಅಂಗಾಲುಗಳ ಉರಿಯೇ, ಜೀರಿಗೆಯೇ ಔಷಧಿ. ಮಾಡಬೇಕಾಗಿರುವುದೇನು?
ನಾಲ್ಕು ಲೀಟರ್ ನೀರನ್ನು ಒಂದು ಟೀ ಚಮಚ ಜೀರಿಗೆ ಹಾಕಿ ಕುದಿಸಿ.
ಹದವಾಗಿ ಆರಿದ ನಂತರ ಬೇಕೆನಿಸಿದಾಗ ಜೀರಿಗೆ ನೀರನ್ನು ಕುಡಿಯಿರಿ.

ಕೂದಲು ಕಾಂತಿಯಿಂದ ಕೂಡಿರಬೇಕೇ,
ಉದುರುವಿಕೆಯನ್ನು ತಡೆಗಟ್ಟಬೇಕೇ,
ಬೊಕ್ಕತಲೆ ನಮ್ಮದಲ್ಲವೆಂದಾಗಬೇಕೇ,
ಜೀರಾಪಾನಿ ಕುಡಿಯುತ್ತಲಿರಬೇಕು.

ಡಯಾಬಿಟೀಸ್ ರೋಗಿಗಳಿಗೂ ಜೀರಿಗೆನೀರು ಉತ್ತಮ, ರಕ್ತಶುದ್ಧಿಕಾರಕ.

ಜೀರಿಗೆಯಲ್ಲಿರುವ ಎನ್ ಜೈಮ್ ಜೀರ್ಣಕ್ರಿಯೆಗೆ ಪ್ರಚೋದಕ.

ಅತಿಯಾದ ತೂಕ ಹೊಂದಿದ್ದೀರಾ, ಜೀರಾಪಾನಿ ದೇಹತೂಕ ಇಳಿಸುವ ಸಾಮರ್ಥ್ಯ ಹೊಂದಿದೆ.

ಗುಣಮಟ್ಟದ ಜೀರಿಗೆಯನ್ನು ಖರೀದಿಸಿ, ಹುಡಿಯನ್ನು ಕೊಳ್ಳಬೇಡಿ, ಹೆಚ್ಚು ಸಮಯ ಇಟ್ಟುಕೊಳ್ಳಲು ಆಗದು, ಸುವಾಸನೆಯೂ ಹೋದೀತು, ಕಲಬೆರಕೆಯೂ ಇದ್ದೀತು.

ಜೀರಿಗೆಯ ಗುಣಧರ್ಮಗಳನ್ನು ಅರಿತು, ಅಡುಗೆಯಲ್ಲಿ ಹಿತವಾಗುವಂತೆ ಬಳಸಿ, ಆರೋಗ್ಯವಂತರಾಗಿ ಬಾಳೋಣ.


             

             
               

Tuesday, 8 January 2019

ಅವಲಕ್ಕಿ ಪೊಂಗಲ್





ಮಕರ ಸಂಕ್ರಾಂತಿ ಬಂದಿದೆ, ಸಿಹಿತಿನಿಸು ಸವಿಯದಿದ್ದರೆ ಹೇಗೆ?
ಬೇಗನೇ ಮಾಡಿಕೊಳ್ಳಬಹುದಾದ ಅವಲಕ್ಕಿ ಪೊಂಗಲ್ ನಮ್ಮ ಆಯ್ಕೆ. ಪೊಂಗಲ್ ಎಂದೊಡನೆ ಹೆಸ್ರುಬೇಳೆ, ಅಕ್ಕಿ, ತೆಂಗಿನತುರಿ, ಬೆಲ್ಲ, ತುಪ್ಪ ಇತ್ಯಾದಿ ಲಿಸ್ಟ್ ಬಂತೇ, ಅವಲಕ್ಕಿ ಹೇಗೆ ಹಾಗೂ ಎಲ್ಲಿ ಹಾಕೋಣ? ಚಿಂತಿಸದಿರಿ, ನಮ್ಮದು ಸರಳವಾಗಿ ಅವಲಕ್ಕಿ ಹಾಗೂ ಅಕ್ಕಿಯಿಂದ ಮಾಡಿದ ಪೊಂಗಲ್.
ಅಕ್ಕಿಯಿಂದ ಗಂಜಿ ಕೂಡಿದ ಅನ್ನ ಮಾಡಿಕೊಳ್ಳೋಣ, ಅಂದಾಜು ಒಂದು ಸೌಟು ಅನ್ನ ಆದರೆ ಸಾಕು. ಎಂದಿನಂತೆ ಮನೆಯೊಳಗೆ ನಾವಿಬ್ಬರೇ, ಬಂದರೆ ಚೆನ್ನಪ್ಪನೂ ಇದ್ದಾನೆ ಅನ್ನಿ.

ಗಂಜಿ ಸಹಿತವಾದ ಅನ್ನ ಮಾಡುವುದು ಹೇಗೆ?
ಮಾಮೂಲಿ ಅನ್ನ ಕುಕ್ಕರ್ ನಲ್ಲಿ ಮಾಡ್ತೀರಾ, ಒಂದು ಲೋಟ ಅಕ್ಕಿಗೆ ಮೂರು ಲೋಟ ನೀರು. ಮೂರು ಸೀಟಿ ಕೂಗಿಸಿದ್ರಾಯ್ತು. ನಾವು ಈಗ ಐದು ಲೋಟ ನೀರು ಹಾಕಿದಾಗ ಗಂಜಿಭರಿತ ಅನ್ನ ದೊರೆಯಿತು.
ನಮಗೆ ಬೇಕಾಗಿರುವುದು ಒಂದೇ ಸೌಟು ಅನ್ನ. ಉಳಿದ ಅನ್ನದ ಗಂಜಿನೀರು ಬಸಿದು ಊಟಕ್ಕೆ ಬಳಸಿಕೊಂಡರಾಯಿತು.

2 ಲೋಟ ಪೇಪರ್ ಅವಲಕ್ಕಿ.
ಒಂದು ಅಚ್ಚು ಬೆಲ್ಲ.
ಒಂದು ಹಿಡಿ ಹಸಿ ತೆಂಗಿನ ತುರಿ.

ಕುಕ್ಕರಿನಲ್ಲಿರುವ ಬಿಸಿ ಗಂಜಿ ಅನ್ನಕ್ಕೆ ಒಂದು ಅಚ್ಚು ಬೆಲ್ಲ ಹಾಕಿ ಕರಗಿಸಿ, ನೀರು ಹಾಕದಿರಿ. ಬೆಲ್ಲ ಕರಗಿ ಪಾಕವಾಗುವ ಹಂತ ಬಂದಾಗ, ಎರಡು ಚಮಚ ತುಪ್ಪ ಎರೆಯಿರಿ, ತೆಂಗಿನ ತುರಿ ಬೀಳಲಿ.

ಗೇರುಬೀಜ ತುಪ್ಪದಲ್ಲಿ ಹುರಿದಿರಬೇಕು, ಒಣದ್ರಾಕ್ಷಿಯೂ ಇರಬೇಕು. ಪುಡಿ ಮಾಡಿದ ಏಲಕ್ಕಿಯೂ ಇರಲೇಬೇಕು.

ತುಪ್ಪ ಎರೆದಾಯ್ತಲ್ಲ. ಪೇಪರ್ ಅವಲಕ್ಕಿಯನ್ನು ಹಾಕಿ ಸೌಟಾಡಿಸಿ, ಅವಲಕ್ಕಿಯನ್ನು ನೀರೆರದು ತೊಳೆಯುವ ಸಾಹಸವೇನೂ ಇಲ್ಲಿ ಬೇಡ. ತೆಳ್ಳಗಿನ ಅವಲಕ್ಕಿಯು ಪಿಚಿಪಿಚಿ ಮುದ್ದೆಯಂತಾದೀತು.

ಆಯ್ತು, ಅವಲಕ್ಕಿ ಹಂಗೇನೇ ಹಾಕಿದ್ದಾಯ್ತು, ಈವಾಗ ಏಲಕ್ಕಿ, ದ್ರಾಕ್ಷಿ, ಗೋಡಂಬಿಗಳನ್ನು ಉದುರಿಸಿ.

ಆಗಿಯೇ ಹೋಯ್ತು, ನಮ್ಮ ಅವಲಕ್ಕಿ ಪೊಂಗಲ್. ರುಚಿರುಚಿಯಾಗಿ ತಿನ್ನಲು ಬೆಲ್ಲ ಸಾಕಷ್ಟು ಹಾಕಲೇಬೇಕು.


               



Wednesday, 26 December 2018

ಶ್ಯಾವಿಗೆ ಪೊಂಗಲ್




ನಾಗಬನದ ಪರಿಸರದಲ್ಲಿ ಅಷ್ಟಮಂಗಲ ಸ್ವರ್ಣಪ್ರಶ್ನೆಯ ವೇಳೆ ದೈವಸಾನ್ನಿಧ್ಯದ ಕುರುಹುಗಳ ಕುರಿತು ತಿಳಿದಾಗಿನಿಂದ ಧಾರ್ಮಿಕ ವಿಧಿವಿಧಾನಗಳೂ, ಹೋಮಹವನಗಳೂ, ಭಕ್ತಾದಿಗಳ ಜನಜಾತ್ರೆಯೂ ಸೇರಿ ಆಗ್ಗಿಂದಾಗ್ಗೆ ಅನ್ನಸಂತರ್ಪಣೆಯ ಸಂಭ್ರಮಕಾಲ. ಆದಷ್ಟು ಬೇಗ ದೇವಾಲಯ ನಿರ್ಮಾಣದ ಸಂಕಲ್ಪದೊಂದಿಗೆ ದುರ್ಗಾಮಾತೆಗೆ ತಾತ್ಕಾಲಿಕ ನೆಲೆ ಒದಗಿಸಿ ಕೊಟ್ಟು ಬಾಲಾಲಯ ಪ್ರತಿಷ್ಠೆಯೂ ನಡೆಯಿತು. ವ್ಯವಸ್ಥಿತವಾಗಿ ಕಾರ್ಯಕ್ರಮಗಳು ನಡೆದ ನಂತರ ದೇವಿಯ ಆಲಯ ನಿರ್ಮಾಣ ಆಗುವ ತನಕ ಪ್ರತಿ ತಿಂಗಳೂ ಸಂಕ್ರಾಂತಿಯ ದಿವಸ, ಸಂಧ್ಯಾಕಾಲದಲ್ಲಿ ದುರ್ಗಾಪೂಜೆ, ಹೂವಿನಪೂಜೆ, ಕುಂಕುಮಾರ್ಚನೆ, ಭಜನೆಗಳನ್ನು ಭಕ್ತ ಸಮುದಾಯ ಹಮ್ಮಿಕೊಂಡಿದೆ.

ಊಟೋಪಚಾರದ ವ್ಯವಸ್ಥೆಗಾಗಿ ತಂದಿದ್ದ ಅಡುಗೆ ಸಾಮಗ್ರಿಗಳೂ, ತರಕಾರಿಗಳೂ, ಮಜ್ಜಿಗೆ, ಹಾಲು ಇತ್ಯಾದಿ ಉಳಿದಿವೆ. ಉಳಿಕೆಯಾಗಿದ್ದನ್ನು ಪುನಃ ಜಗ್ಗಣ್ಣನ ಅಂಗಡಿಗೆ ವಾಪಸ್ ಮಾಡುವ ವ್ಯವಸ್ಥೆ, ಬಾಲಕೃಷ್ಣ ಶೆಟ್ಟಿಯ ನೇತೃತ್ವದಲ್ಲಿ ನಡೆಯುತ್ತ ಇದ್ದಾಗ, ಅಡುಗೆ ಮನೆಯೊಳಗೆ ಇದ್ದಂತಹ ಪ್ಯಾಕೇಟುಗಳು, ಎಣ್ಣೆ, ಮೆಣಸಿನ ಹುಡಿ, ಅವಲಕ್ಕಿ, ಸಕ್ಕರೆ ಇತ್ಯಾದಿಗಳು ಹೊರ ನಡೆದುವು. ತರಕಾರಿ, ಮಜ್ಜಿಗೆ ವಗೈರೆ ಹಂಚಿಕೊಂಡಿದ್ದಾಯ್ತು, ನನಗೂ ಒಂದು ಕುಂಬಳಕಾಯಿ ದೊರೆಯಿತು.

“ ದಾಸಪ್ಪ, ಈ ಬಕೇಟ್ ಒಳಗೆ ನಾಲ್ಕು ಶಾವಿಗೆ ಪ್ಯಾಕೇಟು ಉಂಟಲ್ಲ… “
“ ಇದನ್ನು ಪಾಯಸ ಮಾಡದೇ ಇಟ್ಟಿದ್ದು ಯಾಕೆ? “
“ ಈ ಅಡುಗೆಯವರಿಗೆ ಶಾವಿಗೆ ಪ್ಯಾಕಟ್ಟು ಕೊಟ್ರೆ ಏನೋ ಮಾಡಿ ಹಾಕ್ತಾರೆ.. ಬಂದವರಿಗೆ ಪಾಯಸ ಸುರಿದು ಉಂಡ ಹಾಗೆ ಆಗಬೇಕಲ್ಲ. ಶಾವಿಗೆ ಪಾಯಸಕ್ಕೆ ಸಕ್ಕರೆ ಹಾಕ್ಬೇಕು. ಪಾಯಸದ ಖುಷಿ ಸಿಗಬೇಕಾದ್ರೆ ಕಡ್ಲೆಬೇಳೆಯದ್ದೇ ಆಗ್ಬೇಕು, ಅದೂ ದಪ್ಪ ದಪ್ಪ ಇರಬೇಕು, ಹೆಸ್ರುಬೇಳೆ ಆಗ್ತದೆ, ಅದನ್ನು ಹುರಿಯಬೇಕು, ಹುರಿದದ್ದು ಹೆಚ್ಚುಕಮ್ಮಿ ಆದ್ರೂ ಮೋಸವೇ... “ ಬಾಲಕೃಷ್ಣನ ವಾಗ್ಝರಿ ಮುಂದುವರಿಯುತ್ತಿದ್ದ ಹಾಗೆ, “ ಹ್ಞಾ, ಸರಿ ಸರಿ.. “ ಎಂದು ಒಪ್ಪಲೇ ಬೇಕು.

ಅಂತೂ ನಾಲ್ಕೂ ಶ್ಯಾವಿಗೆ ಪ್ಯಾಕೇಟುಗಳನ್ನು ನನ್ನ ಅಡುಗೆ ಪ್ರಯೋಗಶಾಲೆಗೆ ಒಪ್ಪಿಸಲಾಯಿತು.
“ ಏನ್ಮಾಡ್ಲೀ… “
ಏನೋ ಒಂದು ಹೊಸ ರುಚಿ ಮಾಡೋಣ.

ಶ್ಯಾವಿಗೆಯನ್ನು ಹುರಿಯಬೇಕಿಲ್ಲವೆಂಬ ಸೂಚನೆ ಪ್ಯಾಕೇಟಿನಲ್ಲಿ ಇದ್ದಿತು.
ಒಂದು ಲೋಟ ತುಂಬ ಶ್ಯಾವಿಗೆ,
ಎರಡು ಲೋಟ ನೀರು ತುಂಬಿ,
ಚಿಟಿಕೆ ಉಪ್ಪು ಹಾಕಿ ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ,
ಕೆಳಗಿಳಿಸಿ,
ಒತ್ತಡ ಇಳಿದ ನಂತರ ಮುಚ್ಚಳ ತೆರೆದು,
ಬೆಂದಿದೆ,
ಧೊಡ್ಡ ಅಚ್ಚು ಬೆಲ್ಲ ಹಾಕಿರಿಸುವುದು, ಕರಗುತ್ತಿರಲಿ. ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಎರೆದಿರಾದರೆ, ನೀರನ್ನು ಇಂಗಿಸಲು ವೃಥಾ ಶ್ರಮ ಪಡಬೇಕಾದೀತು. ಸಮಯವೂ ಹಾಳು.
2 ಚಮಚ ತುಪ್ಪ ಎರೆಯಿರಿ.
ಒಂದು ಹಿಡಿ ತೆಂಗಿನತುರಿ ಹಾಕುವುದು.
ಪುನಃ ಕುಕರ್ ಒಲೆಗೇರಲಿ, ಸಟ್ಟುಗದಲ್ಲಿ ಆಡಿಸುತ್ತ ಇದ್ದ ಹಾಗೆ ಬೆಲ್ಲ ಕರಗಿ ಶ್ಯಾವಿಗೆಯೊಂದಿಗೆ ಬೆರೆತು ಬಂದಾಗ ಹುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಹುರಿದ ಗೇರುಬೀಜ, ದ್ರಾಕ್ಷಿ ಹಾಕುವುದು.

ಬಹಳ ಬೇಗನೇ ಆಗುವ ಈ ಸಿಹಿ ತಿನಿಸನ್ನು ನಮ್ಮ ಮನೆಯವರು ಇಷ್ಟಪಟ್ಟು ತಿಂದರು.
ಸಂಜೆವೇಳೆ ಬಾಲಕೃಷ್ಣ ಬಂದ, ಖುಷಿಖುಷಿಯಾಗಿ ತಿಂದ್ಬಿಟ್ಟು, “ ಹೌದೂ, ಇದೇನು ಹಲ್ವದ ಹಂಗಾಯ್ತಲ್ಲ… “ ಅಂದ.
“ ಧನುರ್ಮಾಸ ಬಂತಲ್ಲ, ಇದೂ ಶ್ಯಾವಿಗೆ ಪೊಂಗಲ್… “

               




Saturday, 15 December 2018

ನೂಕಡ್ಡೆ ರಸಾಯಣ






             

ಮುಂಜಾನೆಯ ತಿಂಡಿ ತಟ್ಟೆಯನ್ನು ಈ ದಿನ ಒತ್ತುಶಾವಿಗೆಯಿಂದ ಅಲಂಕರಿಸಲಾಯಿತು.
“ಏನೂ, ನೆಂಟರು ಇದ್ರಾ? “
“ ಹಾಗೇನೂ ಇಲ್ಲ, ನಾವೇ ಇದ್ದಿದ್ದು, ತಿನ್ನಬೇಕು ಅನ್ನಿಸಿದಾಗ ಮಾಡಿಕೊಂಡು ತಿಂದೆವು…. ಮತ್ತೊಂದು ವಿಷಯ ಗೊತ್ತಾ, ನೆಂಟರು ಬಂದಾಗ ಒತ್ತುಶಾವಿಗೆ ತಂದು ಎದುರಿಗಿಟ್ರೆ ‘ ಗಂಟುಮೂಟೆ ಕಟ್ಟಿ ಹೊರಡು ‘ ಎಂಬ ಸಾಂಕೇತಿಕ ಅರ್ಥವೂ ಇದೆ. “
“ ಹೌದಾ, ಶಾವಿಗೆ ಪ್ಯಾಕೇಟು ಸಿಗುತ್ತೇ, ತಂದು ಒಗ್ಗರಣೆ ಮಸಾಲೆ ಹಾಕಿ ತಿನ್ನಲು ನಮಗೆ ಗೊತ್ತುಂಟು. “

ನಮ್ಮ ಮಕ್ಕಳು ಚಿಕ್ಕವರಿರಬೇಕಾದ್ರೆ ಒತ್ತುಶಾವಿಗೆ ಅಂದ್ರೆ ಪಂಚಪ್ರಾಣ. ನನ್ನ ಶಾವಿಗೆ ಒರಳು ಕೆಟ್ಹೋಗಿತ್ತು, ಮೇಲಕ್ಕೂ ಕೆಳಕ್ಕೂ ಹೋಗ್ತಾ ಇರಲಿಲ್ಲ. ತುಂಬ ಹಳೆಯದಾದ ಅಂದ್ರೆ ಓಬೀರಾಯನ ಕಾಲದ ಶಾವಿಗೆ ಒರಳು ನಿರುಪಯುಕ್ತ ವಸ್ತುಗಳೊಂದಿಗೆ ಅಟ್ಟ ಸೇರಿತ್ತು.

ಹೀಗಿರಬೇಕಾದ್ರೆ ಒಂದು ದಿನ ಬ್ಯಾಂಕ್ ವ್ಯವಹಾರಕ್ಕೆಂದು ಉಪ್ಪಳ ಪೇಟೆಗೆ ಹೋದ ಗೌರತ್ತೆ ಹೊಸ ಶಾವಿಗೆ ಒರಳು ಖರೀದಿಸಿ ತಂದರು. “ ಮಕ್ಕಳು ಆಸೆ ಪಡ್ತಾವೆ, ಮಾಡಿಕೊಡು ತಿನ್ನಲಿಕ್ಕೆ… “ ಅವರಿಗೂ ತಿನ್ನಬೇಕಾಗಿತ್ತು ಅನ್ನಿ.

ಮೊದಲೆಲ್ಲ ಮನೆಗೆ ಬರುತ್ತಿದ್ದ ನೆಂಟರು ತಿಂಗಳಾನುಗಟ್ಟಲೆ ಝಂಡಾ ಊರುತ್ತಿದ್ದರು, ಆ ಕಾಲವೇ ಹಾಗಿತ್ತು, ಒಂದೂರಿಂದ ಮತ್ತೊಂದೂರಿಗೆ ನಡೆದೇ ಪ್ರಯಾಣ, ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲ, ಇದ್ದರೂ ಕೈಯಲ್ಲಿ ದುಗ್ಗಾಣಿಯಿಲ್ಲ. ಮಕ್ಕಳುಮರಿ ಸಮೇತ ಬಂದ ನೆಂಟರು ಮಳೆಗಾಲ ಮುಗಿಯದೆ ಹೊರಡಲಿಕ್ಕಿಲ್ಲ. ಬಂದವರು ಅದೆಷ್ಟೇ ಆತ್ಮೀಯ ಬಳಗವಾಗಿದ್ದರೂ ಊಟೋಪಚಾರ, ಅತಿಥಿಸತ್ಕಾರ ಎಲ್ಲವೂ ನಾಲ್ಕಾರು ದಿನಕ್ಕೆ ಸೀಮಿತ. ‘ ಬಂದವರು ಹೋಗಲಿ ‘ ಎಂಬ ಸೂಚನೆಯನ್ನು ಸೇಮಿಗೆ ರಸಾಯನ ಮಾಡಿ ಸತ್ಕರಿಸುವುದರ ಮೂಲಕ ತಿಳಿಯಪಡಿಸುವ ರೂಢಿ ಇದ್ದಿತು. ಒತ್ತಾಯದಿಂದ ಬಂದ ಅತಿಥಿಗಳನ್ನು ಬಲವಂತವಾಗಿಯಾದರೂ ಹೊರ ತಳ್ಳುವಂತೆ ಒತ್ತುಶಾವಿಗೆಯು ಒಂದು ವಿಶೇಷವಾದ ತಿನಿಸೂ ಹೌದು. ತಯಾರಿಸಲು ಶ್ರಮವೂ ಅನಿವಾರ್ಯ ಆಗಿದ್ದ ಕಾಲ ಅದಾಗಿತ್ತು. ಸೇರಕ್ಕಿ ಅರೆದು, ಕಾಯಿಸಿ, ಹಬೆಯಲ್ಲಿ ಬೇಯಿಸಿ, ನೂಲಿನೆಳೆಯಂತೆ ಒತ್ತಿ ಹೊರ ಬಂದ ಸೇಮಿಗೆಯು ನೂಕಡ್ಡೆ ಎಂದೂ ಹೆಸರು ಪಡೆದಿದೆ.  

ನಾನೂ ಶಾವಿಗೆ ಮಾಡದೆ ತುಂಬ ಸಮಯವಾಗಿತ್ತು, ಮೊದಲು ಶಾವಿಗೆ ಒತ್ತು ಯಂತ್ರ ಎಲ್ಲಿದೆಯೆಂದು ಹುಡುಕಿ, ಹೊರತಂದು ಶುಚಿಗೊಳಿಸಿ, ಯಂತ್ರದ ನಟ್ಟು ಬೋಲ್ಟುಗಳೆಲ್ಲ ಸಮರ್ಪಕ ಸ್ಥಿತಿಯಲ್ಲಿವೆ ಎಂಬ ತೀರ್ಮಾನಕ್ಕೆ ಬಂದು…

ಗದ್ದೆ ಬೇಸಾಯ ಇದ್ದ ಕಾಲದಲ್ಲಿ ಕುಚ್ಚುಲಕ್ಕಿಯಿಂದಲೇ ಶಾವಿಗೆ ಮಾಡುವ ರೂಢಿ ಇಟ್ಕೊಂಡಿದ್ದೆವು. ಅದನ್ನು ಬೇಯಿಸಲು ಜಾಸ್ತಿ ಸಮಯ ಬೇಕು, ಕಟ್ಟಿಗೆಯ ಒಲೆಯೂ ಇದ್ದ ಕಾಲ ಅದು, ಅರೆಯಲಿಕ್ಕೂ ಗ್ರೈಂಡಿಗ್ ಮೆಶೀನ್ ಅನಿವಾರ್ಯ. ಕುಚ್ಚುಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ಸಮಪ್ರಮಾಣದಲ್ಲಿ ಹಾಕಿ ಶಾವಿಗೆಮಾಡುವುದೂ ಇದೆ. ಏನೇ ಆದರೂ ಈಗಿನ ವೇಗದ ಜೀವನಶೈಲಿಯಿಂದಾಗಿ ಹಳೆಯ ಪದ್ಧತಿಗಳು ಮೂಲೆಗುಂಪಾಗಿವೆ.

               

ಇದೆಲ್ಲ ಬೇಡ, ಬೇಗನೆ ಆಗುವಂತಹ ಬೆಳ್ತಿಗೆ ಅಕ್ಕಿಯೇ ಹಿತ, ಮಲ್ಲಿಗೆಯಂತಹ ಒತ್ತುಶಾವಿಗೆ ತಿನ್ನೋಣ.  
2 ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ತೊಳೆದು ನೆನೆಯಲು ಇರಿಸುವುದು. ಅಕ್ಕಿಯ ಗುಣಮಟ್ಟ ಚೆನ್ನಾಗಿದ್ದಷ್ಟೂ ಶಾವಿಗೆ ರುಚಿಕರವಾಗಿರುತ್ತದೆ.

ನಾಲ್ಕಾರು ಗಂಟೆ ನೆನೆದ ಅಕ್ಕಿಯ ನೀರು ಬಸಿದು ಮಿಕ್ಸಿ ಯಂತ್ರದಲ್ಲಿ ಅರೆಯಿರಿ.
2 ಲೋಟ ಅಕ್ಕಿ ಅಳೆದಿದ್ದೇವೆ, ಮೂರು ಲೋಟ ನೀರು ಅರೆಯಲಿಕ್ಕೆಂದು ಅಳೆದು ಇರಿಸಿಕೊಳ್ಳಿ.
ಮಿಕ್ಸಿಯ ಜಾರ್ ಒಳಗೆ ಅದರ ಸಾಮರ್ಥ್ಯ ಇರುವಷ್ಟೇ ಅಕ್ಕಿ ಹಾಕಿ, ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರು ಹಾಕಿ ಅರೆಯಿರಿ. ಎಲ್ಲ ಅಕ್ಕಿಯೂ ಅರೆಯಲ್ಪಟ್ಟಿತು, ರುಚಿಗೆ ತಕ್ಕಷ್ಟು ಉಪ್ವು ಬೀಳಲಿ. ಅಳೆದು ಇಟ್ಕೊಂಡ ಮೂರು ಲೋಟ ನೀರು ಮುಗಿದಿಲ್ಲ ಅಲ್ಲವೇ,

ದಪ್ಪ ತಳದ ಬಾಣಲೆಗೆ ಈ ಹಿಟ್ಟನ್ನು ಸುರಿದು, ಉಳಿಕೆಯಾಗಿರುವ ನೀರನ್ನು ಎರೆಯಿರಿ. ಇದೀಗ ನೀರು ದೋಸೆಯ ಹಿಟ್ಟಿನಂತಾಗಿದೆ. ಶಾವಿಗೆ ನೂಲೆಳೆಯಂತೆ ಬರಬೇಕಾದರೆ ನಾವು ಎರೆಯುವ ನೀರಿನ ಅಂದಾಜು ಸರಿಯಾಗಿರಬೇಕು. ನೀರು ಕಡಿಮೆಯಾದರೆ ಹಿಟ್ಟು ಸರಿಯಾಗಿ ಬೇಯದೇ ಹೋದೀತು, ಬೆಂದರೂ ಶಾವಿಗೆ ಯಂತ್ರದಿಂದ ಕೆಳಗಿಳಿಸಲು ಹರಸಾಹಸ ಪಡಬೇಕಾದೀತು. ನೀರಿನ ಅಳತೆ ಜಾಸ್ತಿ ಆದ್ರೂನೂ ಒತ್ತಿದ ಶಾವಿಗೆ ಪಿಚಿ ಪಿಚಿಯಾಗಿ ಮುದ್ದೆಯಾದೀತು. ಇವಿಷ್ಟು ಮುಂಜಾಗ್ರತೆಯ ಸಲಹೆಗಳನ್ನು ಶಾವಿಗೆ ಒತ್ತುಮಣೆಯನ್ನು ತಂದ ಗೌರತ್ತೆ ಹೇಳಿದ್ದು.

ಒಂದೇ ಹದನಾದ ಉರಿಯಲ್ಲಿ ಮರದ ಸಟ್ಟುಗದಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತ ಇದ್ದ ಹಾಗೆ ನೀರಿನಂತಿದ್ದ ಹಿಟ್ಟು ಘನ ರೂಪಕ್ಕೆ ಬಂದಿದೆ, ಕೈಗಳಿಗೆ ಹಸಿ ಹಿಟ್ಟಿನಂತೆ ಅಂಟಿಕೊಳ್ಳಬಾರದು. ಪರೀಕ್ಷಿಸಿ ಸರಿಯಾದ ಹೊತ್ತಿಗೆ ಸ್ಟವ್ ಆರಿಸಿ, ಬಾಣಲೆ ಕೆಳಗಿಳಿಸಿ. ಅಕ್ಕಿ ಹಿಟ್ಟಿನ ಮುದ್ದೆಯನ್ನು ಇನ್ನೊಂದು ತಪಲೆಗೆ ಆ ಕೂಡಲೇ ವರ್ಗಾಯಿಸಿ.

ತುಸು ಆರಿದ ನಂತರ, ಶಾವಿಗೆ ಒರಳೊಳಗೆ ಹಿಡಿಸುವಂತಹ ಉಂಡೆ ಮಾಡಿಟ್ಟು, ಅಟ್ಟಿನಳಗೆ ಯಾ ಇಡ್ಲಿಪಾತ್ರೆಯೊಳಗೆ ಜೋಡಿಸಿ ಇಡುವುದು.

ಮುಂಜಾನೆ ಎದ್ದೊಡನೆ ಅಟ್ಟಿನಳಗೆಯನ್ನು ಒಲೆಗೇರಿಸಿ, ನೀರು ಕುದಿದು, ಹದಿನೈದು ನಿಮಿಷಗಳಲ್ಲಿ ಉಂಡೆಗಳು ಬೆಂದಿರುತ್ತವೆ. ಭಾನವಾರದ ರಜಾ ದಿನ ಒತ್ತುಶಾವಿಗೆಯ ಆಟಕ್ಕೆ ಸೂಕ್ತವಾಗಿದೆ. ಮನೆಯ ಸದಸ್ಯರ ಸಹಾಯವನ್ನು ಪಡೆದುಕೊಳ್ಳಿ. ಒಂದೊಂದೇ ಉಂಡೆಯನ್ನು ಶಾವಿಗೆ ಒರಳೊಳಗೆ ತುಂಬಿಸಿ ಒತ್ತುವುದು, ನೂಕಡ್ಡೆ ಸಿದ್ಧ.

ಹಿಂದೆ ಕೂಡು ಕುಟುಂಬಗಳಿದ್ದ ಕಾಲದಲ್ಲಿ ಮನೆಯ ಸ್ಥಿತಿವಂತಿಕೆಯನ್ನೂ ಶಾವಿಗೆ ಯಂತ್ರದಿಂದಲೇ ಅಳೆಯಬಹುದಾಗಿತ್ತು. ಶಾವಿಗೆ ಒರಳನ್ನು ವೈವಿಧ್ಯಮಯ ವಿನ್ಯಾಸಗಳಲ್ಲಿ ಕಾಣಬಹುದಾಗಿತ್ತು. ಮರದ ಕುಸುರಿ ಕಲೆಗಳಿಂದ, ಕಣ್ಸೆಳೆಯುವ ವಿನ್ಯಾಸಗಳಿಂದಲೂ ಕೂಡಿದ ಪುರಾತನ ಶಾವಿಗೆ ಒತ್ತುಮಣೆಗಳು ನಮ್ಮ ಆಧುನೀಕರಣಗೊಂಡ ಜೀವನಶೈಲಿಯಿಂದಾಗಿ ಅಟ್ಟ ಸೇರಿ ಮೂಲೆಗುಂಪಾಗಿರುವ ಸಾಧ್ಯತೆ ಅಧಿಕ.

                    

      
ಸಿದ್ಧವಾದ ಒತ್ತು ಶಾವಿಗೆಯನ್ನು ತಿನ್ನುವ ಬಗೆ ಹೇಗೆ?

ಇದನ್ನು ಬರೆಯುವಾಗ ಸಹಜವಾಗಿ ನನ್ನ ಮಾವನವರ ನೆನಪಾಗದೆ ಇದ್ದೀತೆ, ವೃದ್ಧರಾಗಿದ್ದ ನನ್ನ ಮಾವ ಡಯಾಬಿಟೀಸ್ ಕಾಯಿಲೆಯನ್ನೂ ಅಂಟಿಸಿಕೊಂಡಿದ್ದರು, ಸಾಲದಿದ್ದಕ್ಕೆ ಅದೇನೋ ಕೊಲೆಸ್ಟರಾಲ್ ಭೀತಿಯೂ ಅವರದಾಗಿತ್ತು. “ ನೋಡು, ನಿನ್ನ ರಸಾಯನ, ಒಗ್ಗರಣೆ ಯಾವುದೂ ಬೇಡ, ನನಗೆ ಶಾವಿಗೆ ಇರುವ ಹಾಗೆ ತಿನ್ನಲಿಕ್ಕೆ ಇಟ್ಟಿರು… “

ಬಾಳೆಹಣ್ಣು ರಸಾಯನ ಇದಕ್ಕೆ ಸೊಗಸಾಗಿ ಹೊಂದಿಕೆಯಾಗುವಂತಹುದಾಗಿದೆ, ನನ್ನ ಬಳಿ ಇವತ್ತು ಬಾಳೆಹಣ್ಣು ಇಲ್ಲ, ಅಂಗಡಿಯಿಂದ ತಂದ ಖರ್ಜೂರದ ಪ್ಯಾಕೆಟ್ ಇದೆ, ಖರ್ಜೂರದಿಂದ ರಸಾಯನ ಮಾಡೋಣ.

ಖರ್ಜೂರ ಹತ್ತೂ ಹದಿನೈದು ಇರಲಿ.
ಬಿಡಿಸಿ ಬೀಜ ತೆಗೆದು ಕುದಿಯುವ ನೀರು ಎರೆದು ಮುಚ್ಚಿ ಇರಿಸಿ.
ಒಂದು ಕಡಿ ತೆಂಗಿನಕಾಯಿ ತುರಿದು, ಅರೆದು ಕಾಯಿಹಾಲು ಮಾಡಿರಿಸಿ, ದಪ್ಪ ಹಾಲು ಮಾತ್ರ ಸಾಕು.
ಮೆತ್ತಗಾಗಿರುವ ಖರ್ಜೂರವನ್ನು ಕೈಯಲ್ಲಿ ತುಸು ಹಿಸುಕಿ ಇಟ್ಟು,
ಒಂದು ಅಚ್ಚು ಬೆಲ್ಲ ಪುಡಿ ಮಾಡಿ ಸೇರಿಸಿ,
ಅರ್ಧ ಚಮಚ ಎಳ್ಳು ಹುರಿದು ಗುದ್ದಿ,
ದಪ್ಪ ಕಾಯಿಹಾಲು ಎರೆಯುವಲ್ಲಿಗೆ
ರಸಾಯನ ಆಯ್ತು ಅನ್ನಿ.
ದ್ರಾಕ್ಷಿ ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿದಾಗ ಇನ್ನೂ ಸ್ವಾದಿಷ್ಟ ರಸಾಯನ ನಮ್ಮದಾಯಿತು.

ಕೇವಲ ಬೆಲ್ಲ ಹಾಗೂ ತೆಂಗಿನಕಾಯಿಹಾಲುಗಳ ಮಿಶ್ರಣವೂ ಶಾವಿಗೆಯ ರಸದೂಟಕ್ಕೆ ಸಾಕಾಗುತ್ತದೆ, ಇದನ್ನು ನಮ್ಮ ಕಡೆ ಬೆಲ್ಲಕಾಯಿಹಾಲು ಅನ್ನುವ ರೂಢಿ.

ಒತ್ತು ಶಾವಿಗೆ ಇದ್ದರೆ ಸಾಕು, ಶಾವಿಗೆ ಉಪ್ಕರಿ, ಶಾವಿಗೆ ಪುಳಿಯೋಗರೆ, ಶಾವಿಗೆ ಚಿತ್ರಾನ್ನ, ಶಾವಿಗೆ ಪುಲಾವ್, ಶಾವಿಗೆ ವೆಜಿಟೆಬಲ್ ಬಾತ್…. ಹೀಗೆ ಅಡುಗೆಯ ರಸರುಚಿಗಳನ್ನು ಜೋಡಿಸುತ್ತ ಹೋಗಬಹುದು.