ನಾಗಬನ ಹಾಗೂ ಹಿರಣ್ಯ ದೇಗುಲ, ಒಂದನ್ನು ಬಿಟ್ಟು ಇನ್ನೊಂದಿಲ್ಲ. ದೇಗುಲದಲ್ಲಿ ಏನೇ ಪೂಜಾವಿಧಿ ಜರುಗಲಿ, ನಾಗನಿಗೂ ತಂಬಿಲ ಸೇವೆ ಇದ್ದೇ ಇದೆ. ನಾಗಬನದ ಜೀರ್ಣೋದ್ಧಾರ ಕ್ರಿಯೆಗಳ ಸಂಕಲ್ಪವೋ ಎಂಬಂತೆ ದೇವೀ ಸಾನ್ನಿಧ್ಯವೂ ಇದೆಯೆಂದು ತಿಳಿದು ಬಂದಾಗ ಎದ್ದು ಬಂದಳು ದುರ್ಗಾಪರಮೇಶ್ವರಿ.
ವರ್ಷವೂ ದೇಗುಲದಲ್ಲಿ ನಡೆಯುವ ಪೂಜಾ ಮಹೋತ್ಸವಗಳನ್ನು ನೋಡುತ್ತಾ ಬಂದಿರುವ ನನಗೆ ವೈದಿಕ ವಿಧಿಯ ಮಂಡಲಗಳು ಬೆರಗು ಹುಟ್ಟಿಸಿವೆ. ನನ್ನ ಐ ಫೋನ್ ಅದೆಷ್ಟೋ ಮಂಡಲ ರಚನೆಗಳನ್ನು ಸಂಗ್ರಹಿಸಿ ಇಟ್ಟಿದೆ.
ನಮ್ಮ ಕರಾವಳಿ ಮತ್ತು ಮಲೆನಾಡಿನ ನಾಗಬನಗಳಲ್ಲಿ ನಡೆಯುವ ಆಶ್ಲೇಷ ಬಲಿ ಪೂಜೆ ಕೇವಲ ಭಕ್ತಿಯ ಪ್ರತೀಕವಲ್ಲ, ಅದೊಂದು ಅದ್ಭುತ ಕಲೆಯೂ ಹೌದು. ಇತ್ತೀಚೆಗೆ ನೋಡಿದ ಆಶ್ಲೇಷ ಬಲಿ ಮಂಡಲ ನನ್ನ ಗಮನ ಸೆಳೆಯಿತು. ಬಣ್ಣದ ಪುಡಿಗಳಿಂದ ಬಿಡಿಸಿದ ಹೆಡೆ ಬಿಚ್ಚಿದ ಸರ್ಪಗಳ ಆಕಾರ, ಅದರ ಸುತ್ತಲೂ ಶ್ರದ್ಧೆಯಿಂದ ಜೋಡಿಸಿಟ್ಟ ಹಿತ್ತಾಳೆಯ ಕಳಶ, ದೀಪ, ನೈವೇದ್ಯ – ಇವೆಲ್ಲವೂ ಮನಸ್ಸಿಗೆ ಒಮ್ಮೆಲೆ ಭಕ್ತಿಭಾವ ಮೂಡಿಸುವ ದೃಶ್ಯ.
ಆದರೆ ಈ ಮಂಡಲವನ್ನು ನೋಡುತ್ತಿದ್ದಂತೆ ಹೊಳೆದದ್ದು ಮತ್ತೊಂದು ವಿಚಾರ. ಒಂದಕ್ಕೊಂದು ಹೆಣೆದುಕೊಂಡಿರುವ ನಾಗನ ಆಕಾರಗಳನ್ನು ಅದೆಷ್ಟು ನಿಖರವಾಗಿ, ಕರಾರುವಾಕ್ಕಾಗಿ ರಚಿಸಿರುತ್ತಾರೆ! ಇಂಜಿನಿಯರಿಂಗ್ ಡ್ರಾಯಿಂಗ್ ಅಥವಾ ಆಧುನಿಕ ರೇಖಾಗಣಿತ ಕಲಿತವರಿಗೂ ಇದು ಸವಾಲೇ ಸರಿ. ಮಂಡಲ ರಚಿಸುವ ನಮ್ಮ ವೈದಿಕರು ಯಾವ ಶಾಲಾ-ಕಾಲೇಜುಗಳಲ್ಲೂ ಆಧುನಿಕ ಗಣಿತ ಶಾಸ್ತ್ರ ಓದಿದವರಲ್ಲ. ಆದರೂ ಅವರ ಬೆರಳುಗಳಲ್ಲಿ, ಅವರು ಹಿಡಿಯುವ ದಾರ ಮತ್ತು ಅಳತೆಗೋಲಿನಲ್ಲಿ ಅದೆಂಥದ್ದೋ ಜಾದೂ ಇದೆ.
ಪುಸ್ತಕದಲ್ಲಿ ಓದಿದ್ದಕ್ಕಿಂತ, ತಲೆತಲಾಂತರಗಳಿಂದ ಗುರು-ಶಿಷ್ಯ ಪರಂಪರೆಯಲ್ಲಿ ಹರಿದುಬಂದ ಪ್ರಾಯೋಗಿಕ ಜ್ಞಾನವಿದು. ವರ್ಷಗಳ ಕಠಿಣ ಅಭ್ಯಾಸ, ಧ್ಯಾನ ಮತ್ತು ಏಕಾಗ್ರತೆಯಿಂದ ಒಲಿದ ಸಿದ್ಧಿ. ಬಣ್ಣದ ಹುಡಿಗಳನ್ನು ಬೆರಳುಗಳ ಸಂದಿಯಿಂದ ಸಲೀಸಾಗಿ ಬಿಡುತ್ತಾ, ಕಣ್ಮುಚ್ಚಿ ಲೆಕ್ಕಾಚಾರ ಹಾಕುತ್ತಾ ಅವರು ಸೃಷ್ಟಿಸುವ ಆ ಮಂಡಲಗಳು ನಮ್ಮ ಪರಂಪರೆಯಲ್ಲಿ ಅಡಗಿರುವ ವಿಜ್ಞಾನಕ್ಕೆ ಜ್ವಲಂತ ಸಾಕ್ಷಿ.
ಆಧುನಿಕ ಶಿಕ್ಷಣವೊಂದೇ ಜ್ಞಾನದ ಅಳತೆಗೋಲಲ್ಲ ಎಂಬುದನ್ನು ಈ ಮಂಡಲಗಳು ಮೌನವಾಗಿಯೇ ಸಾರುತ್ತವೆ. ನಮ್ಮ ಹಿರಿಯರ ಈ ಕಲೆ, ಶ್ರದ್ಧೆ ಮತ್ತು ಗಣಿತದ ನಿಖರತೆಗೆ ನಾವೆಲ್ಲರೂ ತಲೆಬಾಗಲೇಬೇಕು.

