Pages

Ads 468x60px

Tuesday, 22 January 2013

ಧರೆ ಹೊತ್ತಿ ಉರಿದಾಗ.....







ಸಂಜೆಯ ಟೀ ಕುಡಿದು ನಮ್ಮವರು ಎಂದಿನಂತೆ ಕೈಯ್ಯಲೊಂದು ಬೀಸುಗತ್ತಿ ಹಿಡಿದು ಅಡಿಕೆ ತೋಟಕ್ಕೆ ಹೋದರು.  ನಾನು ಯಥಾಪ್ರಕಾರ ನನ್ನ ಬ್ಲಾಗು ಪ್ರಪಂಚದಲ್ಲಿ ವಿಹರಿಸುತ್ತಾ,  ಐ ಪ್ಯಾಡ್ ಧಾರಿಣಿಯಾಗಿ ಹೊತ್ತಿನ ಪರಿವೆಯೇ ಇಲ್ಲದೆ ಕುಳಿತಿದ್ದಂತೆ ಮನೆಯ ಮುಂದೆ ಸ್ಕೂಟರು ನಿಂತ ಸದ್ದಾಯಿತು.   ಈ ಹೊತ್ತಿಗೆ ಬಂದವರ್ಯಾರು ಎಂದು ಕುಳಿತಲ್ಲಿಂದ ಎದ್ದು ವಿಚಾರಿಸುವ ಮೊದಲೇ  ಖಾದರ್ ಒಳ ನುಗ್ಗಿದ.  

" ಅಕ್ಕಾ,  ನೀವು ಒಳಗೆ ಕೂತುಕೊಂಡು ಮಾಡುವುದು ಎಂಥದು ?  ....ಅಲ್ಲಿ ತೋಟಕ್ಕೆ ಬೆಂಕಿ ಬಿದ್ದಿದೆ, ಬನ್ನಿ ಹೊರಗೆ "

ಹ್ಞಾ,  ಏನ್ ಹೇಳ್ತಿದಾನೆ... ನನಗಂತೂ ತಲೆಬಾಲ ಒಂದೂ ಅರ್ಥವಾಗದೆ ಹೋಯಿತು.

" ನಾನು ಪೈವಳಿಕೆಯಲ್ಲಿದ್ದೆ,  ಅಣ್ಣೇರ ಫೋನ್ ಬರುವಾಗ...ಕೂಡ್ಲೇ ಬಂದದ್ದು,  ಅಲ್ಲ ಹೀಗೆ ಮಾಡ್ಬೌದಾ,  ಯಾರೂ ಇಲ್ಲದಿರೂವಾಗ ತೋಟಕ್ಕೆ ಹೋಗೂದಂತೆ,  ಕಿಚ್ಚು ಕೊಡೂದಂತೆ,  ನಾವ್ಯಾರೂ ಇಲ್ವಾ .. ಯಾಕೆ ಒಬ್ರೇ ಹೋಗಿ ಕಾರ್ಬಾರು ಮಾಡೂದು...." 

ಅವನ ವಾಕ್ ಪ್ರವಾಹ ಮುಂದುವರಿಯುತ್ತಿದ್ದಂತೆ ನಾನು ಥಟ್ಟನೆದ್ದು ಸೀದಾ ಅಡುಗೆಮನೆಗೆ ಹೋದೆ.  ಅಗತ್ಯ ಬಿದ್ದರೆ ಇರಲಿ ಎಂದು ಇಟ್ಟಿದ್ದ ಬೆಂಕಿಪೆಟ್ಟಿಗೆ ಜಾಗದಲ್ಲಿ ಇಲ್ಲ !   ಯಾವುದೇ ವಸ್ತು ಬೇಕಾಗಿದ್ದರೂ ನನ್ನ ಬಳಿ ಕೇಳಿ ಇಸ್ಕೊಳ್ಳುತ್ತಿದ್ದವರು ಇವತ್ತು ತಾವೇ ತೆಗೆದುಕೊಂಡು ಹೋಗಿದ್ದಾರೆ.

  " ಇವರೆಲ್ಲಿದ್ದಾರೆ ?"

"  ಅವರು ತೋಟದಲ್ಲಿದ್ದಾರೆ...ನಾನೂ ಅಲ್ಲಿಗೇ ಹೋಗೂದು.  ನೀವು ಮನೆಯಲ್ಲೇ ಕೂತ್ಕೊಳ್ಳೀ...." ಹೇಳುತ್ತಾ ಖಾದರ್ ತೋಟಕ್ಕೆ ದೌಡಾಯಿಸಿದ.

ನನ್ನ ಮನೋಸ್ಥಿತಿಯೇ ಕೆಟ್ಟು ಹೋಗಿರಬೇಕಾದರೆ  ಒಳಗೆ  ಕುಳಿತಿರುವುದೇ,  ಅಂಗಳಕ್ಕಿಳಿದೆ.   ಎದುರುಗಡೆಯ ರಸ್ತೆಯಲ್ಲಿ ಜನ ನರೆದಿದ್ದರು.  ಪಕ್ಕದಮನೆಯ ಗೋಡೆ ಹಾರಿ ಇನ್ನೂ ಹಲವರು ತೋಟದ ಕಡೆ ಓಟ.  ಮನೆಯಂಗಳದಿಂದ ತೋಟದ ಹಿಂದೆ ಇದ್ದ ಎತ್ತರದ ಬೋಳುಗುಡ್ಡದ ರಬ್ಬರು ತೋಟ ಕಾಣಲೊಲ್ಲದು.  ರಸ್ತೆಗೆ ಹೋದರೆ ಕಾಣಬಹುದಿತ್ತು.  

ಆಗಲೇ ಸಂಜೆ ಐದೂವರೆಯಾಗಿತ್ತು.  ಈಗ ಬೆಂಕಿಯ ಕೆನ್ನಾಲಿಗೆ ನನಗೂ ಕಾಣಲಾರಂಭಿಸಿತು.  ಊರಿನ ಜನಸಂದಣಿ ತೋಟದ ಕಡೆ ಹೋಗುತ್ತಿರಬೇಕಾದರೆ ಒಬ್ಬೊಬ್ಬರಾಗಿ ತಮ್ಮ ತಮ್ಮ ಹೆಲ್ಮೆಟ್,  ಕೀ ಇತ್ಯಾದಿಗಳನ್ನು ನನ್ನ ಸುಪರ್ದಿಗೆ ಒಪ್ಪಿಸಿ ಕತ್ತಲಲ್ಲಿ ಮರೆಯಾದರು.  ಅಂತೂ ಏಳೂವರೆ ಗಂಟೆ ಹೊತ್ತಿಗೆ ಬೆಂಕಿ ಆರಿತು,  ಇವರೂ ಮನೆಗೆ ಬಂದರು.

ಅಷ್ಟಕ್ಕೂ ಆಗಿದ್ದೇನು ?  

ಅಡಿಕೆ ತೋಟದ ಹಿಂಬಾಗದ ಬೋಳುಗುಡ್ಡದಲ್ಲಿ ನಮ್ಮ ಶ್ಯಾಮಸೂರ್ಯಂದು ರಬ್ಬರು ತೋಟ.  ನೆಟ್ಟು 3 - 4 ವರ್ಷಗಳಾಗಿವೆ.   ಗಿಡಗಳ ರಕ್ಷಣೆಗೆಂದು ನೆಟ್ಟ ಒಂದು ಬಳ್ಳಿ ಸಸ್ಯ ರಬ್ಬರ್ ಗಿಡಗಳಿಗೆ ಹಸಿರು ಹೊದಿಕೆ ನೀಡಿದ್ದಷ್ಟೇ ಅಲ್ಲದೆ ನೆರೆಯ ಅಡಿಕೆ ತೋಟಕ್ಕೂ ವ್ಯಾಪಿಸಿ ತೋಟವೇ ಮುಚ್ಚಿಹೋದಂತೆ...   ಇದಕ್ಕಾಗಿಯೇ ನಮ್ಮವರು ಕತ್ತೀ ಪ್ರಯೋಗ ಮಾಡುತ್ತಿದ್ದದ್ದು,   ಕಡಿದ ಬಳ್ಳೀರಾಶಿಗೆ  ಕಿಚ್ಚು ಕೊಡುವ ಹೊತ್ತಿಗೆ  ಬೀಡಾಡಿ ದನಗಳು ತೋಟದೊಳಗೆ ಬಂದಿವೆ,  ದನಗಳನ್ನು ಅಟ್ಟಿ ಈಚೆ ಬಂದಾಗ ಕಿಚ್ಚು ತಾನೇ ತಾನಾಗಿ ಮುಂದುವರಿದಿದೆ,   ' ತನ್ನ ಕೈ ಮೀರಿತು '  ಎಂದಾಕ್ಷಣ ಜೇಬಿನಲ್ಲಿದ್ದ ಮೊಬೈಲು ಹೊರ ಬಂದಿದೆ,  ನೆರೆಯ ಖಾದರನಿಗೆ ಮೊದಲ ಕರೆ ಹೋಗಿದೆ.  ಪೋಲಿಸ್ ವ್ಯಾನ್, ಅಗ್ನಿಶಾಮಕ ದಳವೂ ಬಂದಿದೆ.   ಖಾದರ್ ಹಾಗೂ ಊರ ಮಂದಿ ಶ್ರಮಿಸಿ ಬೆಂಕಿಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.











Mucuna Bracteata ಎಂಬ ಹೆಸರಿನ ಈ ನೆಲ ಮುಚ್ಚಲ ಬಳ್ಳಿಯ ಬೆಳವಣಿಗೆಗೆ ನೀರು ಬೇಕಿಲ್ಲ, ಗೊಬ್ಬರವೂ ಬೇಡ.  ಎಂತಹ ಕಠಿಣ ಬರಗಾಲವನ್ನೂ ಎದುರಿಸುವ ಶಕ್ತಿ ಇದಕ್ಕಿದೆ.  ಜಾನುವಾರುಗಳೂ ಇದನ್ನು ಮೂಸಿ ಕೂಡಾ ನೋಡುವುದಿಲ್ಲ. ರೋಗ ಬಾಧೆಯೂ ಇದಕ್ಕಿಲ್ಲ,  ಕ್ರಿಮಿಕೀಟಗಳ ತೊಂದರೆಯೂ ಇಲ್ಲ.    ನೆಟ್ಟು ಬೆಳೆಸಲು ಯಾವ ಶ್ರಮವೂ ಇಲ್ಲ,  ಕಾರ್ಮಿಕರ ಅವಶ್ಯಕತೆ ಬೇಕಾಗುವುದೇ ಇಲ್ಲ.   ಹಾಗಾಗಿಯೇ ರಬ್ಬರ್ ಕೃಷಿಕರು ಇದನ್ನು ನೆಚ್ಚಿಕೊಂಡಿದ್ದಾರೆ.   ಸುತ್ತಮುತ್ತಲಿನ ಪರಿಸರವನ್ನು ಆಕ್ರಮಿಸಿ,  ಇನ್ನಿತರ ಸಸ್ಯವರ್ಗಗಳ ಬೆಳವಣಿಗೆಗಳನ್ನು ಕುಂಠಿತಗೊಳಿಸಿ ಮೆರೆಯುವ ಈ ಬಳ್ಳಿಯ ಒಣಗಿದ ಎಲೆಗಳು ನೆಲದಲ್ಲಿ ದಪ್ಪ ಪದರವಾಗಿ ಉಳಿದು ಸಣ್ಣಪುಟ್ಟ ಗಿಡಗಂಟಿಗಳನ್ನು ನೆಲದಿಂದ ಮೇಲೇಳಲು ಬಿಡುವುದೇ ಇಲ್ಲ.  

Posted via DraftCraft app

Tuesday, 15 January 2013

ವರ್ಣಗಾನ






ಇದು ಯಕ್ಷಗಾನದ ವೇಷಭೂಷಣ
ಈ ನೋಟವೋ ರುದ್ರ ವಿಲಕ್ಷಣ
ಯಾರದೋ ಛಾಯಾಗ್ರಹಣ 
ಯಾವುದೋ ಹಳೆಯ ಪತ್ರಿಕೆಯ ವಿಶೇಷಾಂಕಣ 
ತಿಳಿಯದಿದೆ ಯಾರದೀ ಪಾತ್ರಧಾರಣ |

ಕುಂಚದಲ್ಲಿ ಬಣ್ಣಗಳ ಮಿಶ್ರಣ
ಮೂಡಿಹುದು ಜಲವರ್ಣ ಚಿತ್ರಣ
ಯಕ್ಷನರ್ತನ ತಧಿಂಗಿಣ
ಬಂದಿಹುದು ಕಲೆಗೆ ಬೆರಗಿನ ಕಿರಣ
ತಳೆದಿಹುದು ಈಗ ಹೊಸ ಮುದ್ರಣ |

Posted via DraftCraft app

Wednesday, 9 January 2013

ಪಪ್ಪಾಯ ಹಲ್ವಾ





ಮರದಲ್ಲಿರುವ ಹಣ್ಣುಗಳನ್ನು ತಿನ್ನುವ ಉಪಾಯ ತಿಳಿದಾಯಿತು.   ಎಲ್ಲವನ್ನೂ ಹಣ್ಣು ಮಾಡಿ ತಿನ್ನಬೇಕಾಗಿಲ್ಲ.   ರುಚಿಕರವಾದ ಇನ್ನಷ್ಟು ಖಾದ್ಯಗಳನ್ನು ಮಾಡೋಣ.  ಸುಲಭವಾಗಿ, ವೇಗವಾಗಿ ಮಾಡಬಹುದಾದ ಹಲ್ವಾ ತಯಾರಿಸೋಣ.

ಚೆನ್ನಾಗಿ ಬಲಿತ,  ಇನ್ನೂ ಹಣ್ಣಾಗಿರದ ಪಪ್ಪಾಯವನ್ನು ಆಯ್ಕೆ ಮಾಡಿ ಕತ್ತರಿಸಿಡಿ.




ಮಿಕ್ಸೀ ಇದೆಯಲ್ಲ, ಹೀಗೆ ತುರಿ ಮಾಡಿಕೊಳ್ಳಿ.




ಬೇಯಿಸಿ.   ದಪ್ಪ ತಳದ ಬಾಣಲೆಗೆ ಹಾಕಿ,  ಸಿಹಿಗೆ ಬೇಕಾದಷ್ಟೇ ಸಕ್ಕರೆ ಸಾಕು.
ಸಕ್ಕರೆ ಕರಗಿತೇ,  ಎರಡು ಚಮಚಾ ತುಪ್ಪ ಎರೆದು ಮುದ್ದೆ ಆಗುವ ತನಕ ಸೌಟಿನಲ್ಲಿ ಕೈಯಾಡಿಸಿ.
ಏಲಕ್ಕಿ,  ದ್ರಾಕ್ಷೀ,  ಗೋಡಂಬಿ ಬೇಕಿದ್ರೆ ಹಾಕಿ ಬಿಡಿ.





.


ಸಂಜೆಯ ಟೀ ಜೊತೆ ಬಿಸಿ ಬಿಸಿಯಾಗಿರುವಾಗಲೇ ತಿಂದು ಮುಗಿಸಿ ಬಿಡಿ.

Posted via DraftCraft app

Tuesday, 1 January 2013

ಎತ್ತಣ ಮಾಮರ ಎತ್ತಣ ಗಜಲಿಂಬೇ....



ಆಗ ಸಂಜೆಯಾಗಿತ್ತು. ಅನಿರೀಕ್ಷಿತವಾಗಿ ಮಾಣಿಪ್ಪಾಡಿಯಿಂದ ನಾರಾಯಣ ಮಾವ ಬಂದರು. ಅವರ ಟೀವಿ ಕೆಟ್ಹೋಗಿತ್ತು. ಕೆಲಸದವನ ಜೊತೆ ಹೊರಿಸಿಕೊಂಡೇ ಬಂದರು.

" ಆಸರಿಗೆ ಏನು ತರಲೀ "

" ತಣ್ಣಗೆ ಜ್ಯೂಸ್ ಕೊಟ್ಬಿಡು, ಅಬ್ಬ, ಏನು ಖಾರ ಈ ಬಿಸಿಲು "

ಒಳಗೆ ಹೋದೆ. ತೋಟದಿಂದ ಚೆನ್ನಪ್ಪ ತಂದ್ಕೊಟ್ಟಿದ್ದ ಗಜಲಿಂಬೆ ಇತ್ತು. ಅದನ್ನೇ ರಸ ಹಿಂಡಿ ಶರಬತ್ತು ಮಾಡಿ, ಬಂದೋರ ಜೊತೆ ಮನೆಮಂದಿಯೆಲ್ಲ ಕುಡಿದೂ ಆಯ್ತು.

ಕೆಲಸದವನಿಗೂ ಒಂದು ಲೋಟ ಕೊಟ್ಟು, " ಇನ್ನೂ ಇದೆಯಾ ಗಜಲಿಂಬೆ ಗಿಡದಲ್ಲಿ ? " ಕೇಳದಿದ್ದರಾಗುತ್ತದೆಯ,

" ಎಲ್ಲಿಂದ, ಒಂದೇ ಇದ್ದಿದ್ದು "

ಚೆನ್ನಪ್ಪ ಹಾಗೆ ಹೇಳ್ತಿರೂದು ಹೊರ ಚಾವಡಿಗೂ ಪ್ರತಿಧ್ವನಿಸಿ, ಮಾವ ಅಲ್ಲಿಂದಾನೇ ಪ್ರತ್ಯುತ್ತರ ಕೊಟ್ಟರು

" ನಮ್ಮ ಮನೆಯಲ್ಲಿದೆ, ಎಷ್ಟು ಬೇಕಾದ್ರೂ ನಿಂಬೆಹಣ್ಣು ಆಗ್ತದೆ. ನಾನೇ ಗಿಡ ತಂದ್ಕೊಡ್ತೇನೆ. ಅದೂ ತೋಟದೊಳಗೆ ಎಲ್ಲಿಯೋ ಮೂಲೆಯಲ್ಲಿ ಇದ್ದರಾಗದು. ಮನೆಯ ಹಿಂದೆ ಬಚ್ಚಲುಮನೆಯ ನೀರು ಹೋಗುವಲ್ಲಿ ನೆಟ್ಟಿರು ಆಯ್ತಾ, ಚೆನ್ನಾಗಿ ಬಿಸಿಲೂ ಬೀಳಬೇಕು "

" ಹಂಗಿದ್ರೆ ಹೀಗೆ ಮಾಡುವಾ...ನಮ್ಮದೇ ಗಿಡದ ಬುಡದಲ್ಲಿ ಬೇರಿನಿಂದಾನೇ ಎರಡ್ಮೂರು ಸಸಿ ಮೇಲೆ ಬಂದಿದೆ, ಅದನ್ನೇ ಕಿತ್ತು ನೆಡುವಾ..." ಚೆನ್ನಪ್ಪನ ಮಾರುತ್ತರ ಹೋಯಿತು.

ಮಾರನೇ ದಿನವೇ ಚೆನ್ನಪ್ಪ ತೋಟದೊಳಗಿದ್ದ ಪುಟ್ಟ ಸಸಿಯನ್ನು ಬೇರುಸಮೇತವಾಗಿ ಕಿತ್ತು ಮನೆಯ ಹಿಂದೆ ಆಯಕಟ್ಟಿನ ಜಾಗ ಆಯ್ಕೆ ಮಾಡಿ ನೆಟ್ಟ.

ಗಿಡವೇನೋ ದೊಡ್ಡದಾಯಿತು. ಗೆಲ್ಲುಗಳೂ ಬೇಕಾದಷ್ಟು ಬಂದವು. ಆದರೆ ಫಲವೇನೂ ಕಾಣದೆ ಹೋಯಿತು.

" ನೆಟ್ಟು ವರ್ಷ ಎರಡಾದರೂ ಹಾಗೇ ಸುಮ್ಮನಿದೆ, ಏನು ಕರ್ಮವೋ..." ಗೊಣಗುಟ್ಟುವಿಕೆಗೆ ಗೌರತ್ತೆ ಪುಕ್ಕಟೆ ಸಲಹೆ ನೀಡಿದರು,

" ದಿನಾ ಮಜ್ಜಿಗೆ ಎರೆದು ನೋಡು ಗಿಡದ ಬುಡಕ್ಕೆ " ಸದಾ ಏನಾದರೊಂದು ಪುಸ್ತಕ ಕೈಲಿ ಹಿಡಿದು ಓದುತ್ತಲೇ ಇರುವ ಗೌರತ್ತೆ ತಾವು ಎಲ್ಲೋ ಓದಿಕೊಂಡಿದ್ದನ್ನು ಹೇಳಿಯೇ ಬಿಟ್ಟರು.

" ಮಜ್ಜಿಗೆ ಹಾಗೆಲ್ಲ ಚೆಲ್ಲೋದಿಕ್ಕಾಗುತ್ಯೇ "




ಮಾವಿನ ಹಣ್ಣಿನ ಕಾಲವೂ ಆರಂಭವಾಯಿತು. ದಿನಾ ಕಾಟ್ ಮಾವು ಹೆಕ್ಕಿ ತರೂದು, ಗೊಜ್ಜು, ಸಾಸಿವೆ ಇತ್ಯಾದಿ ಮಾಡೂದು, ಊಟದ ತಟ್ಟೆ ತುಂಬಾ ಗೊರಟುಗಳೂ, ಸಿಪ್ಪೆಗಳೂ....

" ಇದನ್ನೆಲ್ಲ ಎಲ್ಲಿ ಎಸಿಯೋದು..." ಗೌರತ್ತೆ ಕೇಳಿದ್ದು,

ಐಡಿಯಾ... ಸಿಕ್ಕೇಬಿಡ್ತು.

" ಹಾಕೋಣ ಗಜಲಿಂಬೆ ಬುಡಕ್ಕೆ "

ಅಂತೂ ಮಾವಿನ ಋತು ಮುಗಿಯುವಷ್ಟರಲ್ಲಿ ಲಿಂಬೇ ಬುಡದಲ್ಲಿ ಗೊರಟುಗಳ ರಾಶಿಯೇ ಬಿದ್ದಿತು. ಕಸಿ ಕಟ್ಟುವ ತಜ್ಞರು ಮನೆಗೆ ಬಂದವರೇ ಈ ಗೊರಟುಗಳ ರಾಶಿ ನೋಡಿ " ಮಳೆಗಾಲದಲ್ಲಿ ಈ ಕಾಟ್ ಮಾವಿನ ಸಸಿ ಹುಟ್ಟಲಿ, ಆಗ ಬರ್ತೇನೆ " ಅಂದರು. ಕಾಟ್ ಮಾವಿನ ಸಸಿಯಿಂದಲೇ ಹೊಸ ಕಸಿಮಾವಿನ ಗಿಡ ಮಾಡುವುದು ಹೇಗೆಂಬುದನ್ನು ಅವರೂ ಒಂದಷ್ಟು ಹೊತ್ತು ಕೊರೆದು, ಚಹಾ ಕುಡಿದು ಹೋದರು.

ವರ್ಷಋತು ಪ್ರಾರಂಭ ಆಯ್ತು. ಇನ್ನೇನು ಈ ಮಾವಿನ ಗೊರಟುಗಳು ಹುಟ್ಟುತ್ತವೋ ಎಂದು ತಪಾಸಣೆ ಮಾಡುವ ವೇಳೆಗೆ ಗಜಲಿಂಬೇ ಗಿಡ ಹೂವರಳಿಸಿ ನಗುತಲಿದೆ !

ಸಿಟ್ರಸ್ ಜಾತಿಯ ಲೆಮೆನ್ ಎಂದು ವರ್ಗೀಕೃತವಾಗಿರುವ ಸಸ್ಯಪ್ರಭೇದಗಳು ನಿಸರ್ಗದಲ್ಲಿ ಧಾರಾಳವಾಗಿ ಇವೆ. ಲೈಮ್ ಹಾಗೂ ಲೆಮೆನ್ ಶಬ್ದಗಳೂ ನಮ್ಮ ಸಂಸ್ಕೃತದ ' ಲಿಂಬಾ ' ದಿಂದಲೇ ಉಗಮವಾಗಿವೆ ಎಂಬುದೂ ಗಮನಾರ್ಹ. ಸಸ್ಯಶಾಸ್ತ್ರೀಯವಾಗಿ Rutaceae ಕುಟುಂಬಕ್ಕೆ ಸೇರಿದ ಗಿಡ. ಆಂಗ್ಲ ಭಾಷೆಯಲ್ಲಿ ಲೆಮೆನ್ ಎಂದಾಗಿರುವ ಇದು ಸಸ್ಯಶಾಸ್ತ್ರಜ್ಞರ ಪ್ರಕಾರ citrus limon.

ಲಿಂಬೇಹಣ್ಣಿಗಿಂತ ತುಸುವೇ ದೊಡ್ಡದಾದ ಮತ್ತು ದಪ್ಪ ಸಿಪ್ಪೆಯ ಈ ಹಣ್ಣು ' ಗಜ ' ಯಾಕಾಗಿದೆಯೆಂಬುದೇ ನನಗೆ ಅರ್ಥವಾಗಿಲ್ಲ. ಅರ್ಥ ಹೇಗೇ ಇರಲಿ, ನಾವು ಅಡುಗೆ ಉಪಯೋಗ ನೋಡಿಕೊಳ್ಳೋಣ.





ಜ್ಯೂಸ್ : ಇದನ್ನೇನು ಬರಿಯೋದು ಅಂತೀರಾ, ತಿಳಿಯದವರೂ ಇರುತ್ತಾರೆ. ಜ್ಯೂಸ್ ತಯಾರಿಯಲ್ಲಿ, ನೀರಿನಲ್ಲಿ ಸಕ್ಕರೆ ಕರಗಿಸಿ ಇಡಬೇಕಾದ್ದು ಮೊದಲನೇ ಸಿದ್ಧತೆ. ಒಂದು ಲೋಟದಲ್ಲಿ ನಿಂಬೇರಸ ಹಿಂಡುವುದು, ಬೀಜಗಳನ್ನು ಆರಿಸಿ ತಗೆದು ಸಕ್ಕರೆ ಕರಗಿದ ನೀರಿಗೆ ಎರೆದು, ರುಚಿ ನೋಡಿ ಬೇಕಿದ್ದರೆ ಇನ್ನಷ್ಟು ನಿಂಬೇರಸ ಎರೆಯಿರಿ. ತಣ್ಣಗೆ ಕುಡಿಯಿರಿ.

ಲಿಂಬೇ ಸಾರು : ಎರಡು ಲೋಟಾ ನೀರನ್ನು ಉಪ್ಪು, ಬೆಲ್ಲ ಹಾಕಿ ಕುದಿಸಿ ಕೆಳಗಿಳಿಸಿ ಲಿಂಬೇರಸ ಹಿಂಡಿ, ಒಗ್ಗರಣೆ ಕೊಡಿ. ಬೆಳ್ಳುಳ್ಳಿ ಜಜ್ಜಿ ಹಾಕಿ, ಕೊತ್ತಂಬರೀ ಸೊಪ್ಪು ಸೇರಿಸಿ, ಇಲ್ಲಾಂದ್ರೆ ಬೇವಿನೆಸಳು ಸಾಕು. ಚಿಟಿಕೆ ಅರಸಿನ ಇರಲಿ. ತೊಗರೀಬೇಳೆ ಸಾರು, ತೊವ್ವೆಗಳಿಗೂ ಲಿಂಬೇರಸ ಎರೆದು ಆಹ್ಲಾದಕರ ಸ್ವಾದ ಪಡೆಯಿರಿ.

ಲಿಂಬೇ ತೊಕ್ಕು : ಶರಬತ್ತು ತಯಾರಿಸಿ ಉಳಿದ ಸಿಪ್ಪೆಗಳನ್ನು ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಸಿಟ್ಟುಕೊಳ್ಳಿ. ಜಾಡಿ ಭರ್ತಿ ಆಗೋ ತನಕ ತುಂಬಿಸುತ್ತಾ ಬನ್ನಿ. ಸಿಪ್ಪೆಗಳೆಲ್ಲಾ ಮೆತ್ತಗಾಯ್ತೇ, ಮಿಕ್ಸೀಗೆ ಹಾಕಿ, ಲಿಂಬೇಗಾತ್ರದ ಹುಣಸೇಹಣ್ಣು, ಬೇಕಿದ್ದರೆ ಇನ್ನಷ್ಟು ಉಪ್ಪು ಸೇರಿಸಿ ನಾಲ್ಕು ಸುತ್ತು ತಿರುಗಿಸಿ. ನೀರು ಹಾಕಬಾರದು. ಮುದ್ದೆಯಾದ ಮಿಶ್ರಣವನ್ನು ತಗೆದಿಡಿ. ಉಪ್ಪಿನಕಾಯಿ ಹುರಿದ ಮಸಾಲೆ ಹುಡಿ ಕೊಂಡು ತನ್ನಿ. ಅದನ್ನು ಈ ಮಿಶ್ರಣಕ್ಕೆ ಅವಶ್ಯವಿದ್ದಷ್ಟು ಅಂದರೆ ಖಾರ ಹಾಗೂ ಪರಿಮಳಕ್ಕೆ ತಕ್ಕಂತೆ ಹಾಕಿಕೊಳ್ಳಿ. ಎಳ್ಳೆಣ್ಣೆಯಲ್ಲಿ ಸಾಸಿವೆ ಹಾಗೂ ಇಂಗು ಹಾಕಿದ ಒಗ್ಗರಣೆ ಕೊಟ್ಟು ಬಿಡಿ. ಲಿಂಬೇ ತೊಕ್ಕು ರೆಡಿ. ಜಾಡಿಯಲ್ಲಿ ತುಂಬಿಸಿ ಇಡಿ.


ಚಿತ್ರಾನ್ನ : ಅವಶ್ಯವಿದ್ದಷ್ಟು ಅನ್ನ ಉದುರುದುರಾಗಿ ಮಾಡಿಕೊಳ್ಳಿ.
ಗಜಲಿಂಬೇರಸ ಒಂದು ಕಪ್ ನಲ್ಲಿ ಹಿಂಡಿ ಇಟ್ಟುಕೊಳ್ಳಿ.
ಒಂದು ಕಪ್ ತೆಂಗಿನ ತುರಿ, ಚಿಟಿಕೆ ಅರಸಿನ, 2 - 3 ಒಣಮೆಣಸು, ಅರ್ಧ ಚಮಚ ಸಾಸಿವೆ, ಉಪ್ಪು, ಬೆಲ್ಲ ಇವಿಷ್ಟನ್ನು ನೀರು ಹಾಕದೆ ತರಿತರಿಯಾಗಿ ರುಬ್ಬಿ ತೆಗೆಯಿರಿ.
ಬಾಣಲೆಯಲ್ಲಿ ಒಗ್ಗರಣೇಗಿಟ್ಟಾಯಿತೇ , ನೆಲಕಡಲೇ ಬೀಜ ಬೀಳಲಿ. ಒಗ್ಗರಣೆ ಚಟಪಟ ಕೇಳಲಿ. ಕರಿಬೇವಿನೆಸಳು ಮರೆಯದಿರಲಿ. ಹಾಗೂ ರುಬ್ಬಿದ ಮಸಾಲೆ, ಲಿಂಬೇರಸ ಹಾಕಿ, ಸೌಟಿನಲ್ಲಿ ಕೈಯಾಡಿಸುತ್ತಾ ಮಾಡಿಟ್ಟ ಅನ್ನ ಸೇರಿಸಿ ಕ್ಷಣಕಾಲ ಮುಚ್ಚಿಟ್ಟು ಕೆಳಗಿಳಿಸಿ. ಚಿತ್ರಾನ್ನ ನಾನಾ ವಿಧವಾಗಿ ಮಾಡಬಹುದಾದ ಪಾಕಶಾಸ್ತ್ರೀಯ ಕಲೆ. ಇದು ನಮ್ಮೂರಿನ ಸಾಂಪ್ರದಾಯಿಕ ಕ್ರಮದ ಚಿತ್ರಾನ್ನ, ಔತಣಕೂಟಗಳಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಸಹವ್ಯಂಜನ.

ಲಿಂಬೇ ಉಪ್ಪಿನಕಾಯಿ : ಗಜಲಿಂಬೆಯನ್ನು ಕತ್ತರಿಸಿ ಹೋಳು ಮಾಡಿಕೊಳ್ಳಿ. ಒಂದು ಗಜಲಿಂಬೆಯಲ್ಲಿ 8 -10 ತುಂಡುಗಳು ಲಭ್ಯ. ಶುಂಠಿ, ಹಸಿಮೆಣಸು, ಮಾಂಙನಾರಿ ( ಮಾವಿನಶುಂಠಿ ) ಇದ್ದರೆ ಹಾಕಬಹುದು. ಉಪ್ಪು ಬೆರೆಸಿ ಜಾಡಿಗೆ ತಂಬಿಸಿ. ಎರಡು ದಿನಕ್ಕೊಮ್ಮೆ ಒಣ ಸೌಟಿನಲ್ಲಿ ತಿರುಗಿಸಿ. ವಾರವಾಗುತ್ತಲೇ ಉಪ್ಪು ಹೀರಿದ ಲಿಂಬೇ ಹೋಳುಗಳು ಮೆತ್ತಗಾಗಿ ಉಪಯೋಗಕ್ಕೆ ಸಿದ್ಧ. ಬೇಕಿದ್ದಲ್ಲಿ ಹುರಿದ ಉಪ್ಪಿನಕಾಯಿ ಹುಡಿ ಸೇರಿಸಿ ಇನ್ನಷ್ಟು ಘರಂ ಮಾಡಿಕೊಳ್ಳಿ. ಬಾಯಿರುಚಿ ಕೆಟ್ಟಿರುವಾಗ, ಜಡ್ಡಾದಾಗ ಇಂತಹ ಉಪ್ಪಿನಕಾಯಿಗಳು ಹಿತವಾಗಿರುತ್ತವೆ.

ಮೆಣಸ್ಕಾಯಿ : ಇದರ ಸಿಪ್ಪೆ ಸ್ವಲ್ಪ ಕಹಿ. ರುಚಿಕರವಾದ ವ್ಯಂಜನ ತಯಾರಿಸಬಹುದು. ನಾಲ್ಕನೇ ಒಂದರಷ್ಟು ಸಿಪ್ಪೆ ಸಾಕು. ಮೆತ್ತಗೆ ಬೇಯಿಸಿ, ನೀರು ಚೆಲ್ಲಿ.
ಒಂದು ಕಪ್ ಕಾಯಿತುರಿ,
3 - 4 ಒಣಮೆಣಸು, ಒಂದು ಚಮಚ ಉದ್ದಿನಬೇಳೆ, 3 ಚಮಚ ಕೊತ್ತಂಬರಿ, 6 ಚಮಚ ಎಳ್ಳು, ಇಂಗು ಸ್ವಲ್ಪ, ಹುರಿಯಿರಿ.
ಕಾಯಿತುರಿ, ಹುರಿದ ಮಸಾಲೆಯನ್ನು ಬೇಯಿಸಿದ ಸಿಪ್ಪೆಯೊಂದಿಗೆ ಅರೆದಿಡಿ.
ಹುಣಸೇರಸ, ಬೆಲ್ಲ, ಉಪ್ಪು, ಅರೆದ ಮಸಾಲೆಗೆ ಅವಶ್ಯವಾದ ನೀರು ಸೇರಿಸಿ ಕುದಿಸಿ. ತೆಳ್ಳಗಾಗಕೂಡದು. ಒಗ್ಗರಣೆ ಕೊಡಿ.
ಕಿತ್ತಳೆ ಸಿಪ್ಪೆಯಿಂದಲೂ ಹೀಗೇ ಮೆಣಸ್ಕಾಯಿ ತಯಾರಿಸಬಹುದು.

ದುಡ್ಲ ಹುಳಿ, ಕಂಚು ಹುಳಿಗಳಿಂದಲೂ ಇದೇ ತೆರನಾದ ಪಾಕ ವೈವಿಧ್ಯಗಳನ್ನು ಮಾಡಬಹುದು.

ಅಜೀರ್ಣದಿಂದ ಹೊಟ್ಟೆನೋವೇ, ಹಾಗಿದ್ದಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಮೆತ್ತಗಾದ ಲಿಂಬೇಸಿಪ್ಪೆಯನ್ನು ಮಜ್ಜಿಗೆಯಲ್ಲಿ ಚೆನ್ನಾಗಿ ಗಿವುಚಿ ಕುಡಿಯಿರಿ.

ಬೆಳಗೆದ್ದಂತೇ ತಲೆಸುತ್ತು ಬಂದಂತಾಗುತ್ತಿದೆಯೇ, ಲಿಂಬೇರಸಕ್ಕೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ.

ಹಲವರಿಗೆ ಬಸ್ ಪ್ರಯಾಣವೆಂದರೆ ವಾಂತಿ ಮಾಡುವ ಹವ್ಯಾಸ, ತಪ್ಪದೇ ಲಿಂಬೇಹಣ್ಣು ಅಥವಾ ಲಿಂಬೇ ಸೊಪ್ಪು ಕೈಯಲ್ಲಿ ಇಟ್ಟುಕೊಳ್ಳಿ. ಆಗಾಗ ಆಘ್ರಾಣಿಸುತ್ತಾ ಇದ್ದಲ್ಲಿ ಸುಖಪ್ರಯಾಣ ಮಾಡಬಹುದು.

ಮನೆ ಹಿತ್ತಲಿನಲ್ಲಿ ಒಂದು ಗಿಡವಿದ್ದರೆ ಸಾಕು, ವರ್ಷಪೂರ್ತಿ ಲಿಂಬೆಗೆ ಕೊರತೆಯಿಲ್ಲ. ನಿರ್ವಹಣೆಗೆ ಏನೂ ಖರ್ಚಿಲ್ಲ. ರೋಗರುಜಿನಗಳ ಬಾಧೆಯೂ ಈ ಸಸ್ಯಕ್ಕಿಲ್ಲ. ಲಿಂಬೇಹಣ್ಣನ್ನು ಸಿಪ್ಪೆಯ ಬಣ್ಣ ಹಸಿರಿನಿಂದ ಹಳದೀ ವರ್ಣಕ್ಕೆ ತಿರುಗುವುದನ್ನು ಗಮನಿಸಿ ಕೀಳಬೇಕು. ಕಿತ್ತ ಕೂಡಲೇ ಗಜಲಿಂಬೆಯನ್ನು ಕತ್ತರಿಸುವುದು ಸರಿಯಲ್ಲ. ಶೀತಲ ಪೆಟ್ಟಿಗೆಯಲ್ಲಿ ಇಡುವ ಅವಶ್ಯಕತೆಯೇನೂ ಇಲ್ಲ.

ವಿಟಾಮಿನ್ Cಯಿಂದ ಸಂಪದ್ಭರಿತವಾಗಿದೆ ನಿಂಬೇರಸ, ಸಿಪ್ಪೆ ನೈಸರ್ಗಿಕ ಆಂಟಿಆಕ್ಸಿಡಾಂಟ್. ಶರೀರದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಕ್ಯಾನ್ಸರ್ ಕಾಯಿಲೆಯನ್ನು ಪ್ರತಿಬಂಧಿಸುವ ವಿಶೇಷ ಗುಣ ಲಿಂಬೇಸಿಪ್ಪೆಯಲ್ಲಿದೆಯೆಂದು ವೈದ್ಯಕೀಯ ಲೇಖನಗಳೂ ಬಂದಿವೆ. ದಿನನಿತ್ಯದ ಊಟ ಉಪಾಹಾರಗಳಲ್ಲಿ ಹಿತವಾಗಿ ಬಳಸಿ ಪ್ರಕೃತಿ ನೀಡಿದ ಸಸ್ಯಸಂಪತ್ತಿನಿಂದ ಆರೋಗ್ಯಭಾಗ್ಯವನ್ನು ಉಳಿಸಿಕೊಳ್ಳೋಣ.

.

Posted via DraftCraft app

Wednesday, 19 December 2012

ನೆಲಹಾಸು







ಹೊತ್ತು ಕಳೆಯುವ ವೇಳೆ
ಹಳೆ ಬಟ್ಟೆಗೆ ಹೊಸ ಕಳೆ
ರಂಗು ರಂಗಿನ ಚಿತ್ತಾರದ ಕಲೆ |

ಬಣ್ಣಗಳ ಹೂವರಳಿಸಿ
ಬನ್ನಿ ಒಳಗೆ ಕಾಲೊರಸಿ |

ಟೇಪಿನಂತೆ ಕತ್ತರಿಸಿ ಬಟ್ಟೆಗೆ
ಸಿಕ್ಕು ಸಿಕ್ಕು ನೆಯಿಗೆ
ಸರಳ ಈ ಹೊಲಿಗೆ |

ಗಂಟಿನೊಳಗೊಂದು ಗಂಟು
ಟೇಪಿಗೊಂದು ತೇಪೆ
ಹಾಕುತ್ತಾ
ವೃತ್ತ ಆಯತ ಬೇಕಾಬಿಟ್ಟಿ 
ಹೊಸೆಯುತ್ತಾ
ಅರ್ಧ ಗಂಟೆಯ ಹೊತ್ತು |




ಮಗಳ ಲಂಗ
ನನ್ನವರ ಲುಂಗಿ
ಹರಿದ ಸೀರೆಯ ಸೆರಗು
ಏನಿದೆ ಏನಿಲ್ಲ ಇದೇ ಒಂದು ಬೆರಗು |

ಆಗಾಗ ತೊಳೆಯುತ್ತಿರಿ
ಆಗುವುದು ಪುನಃ ಮಿರಿಮಿರಿ |

ಹಳತಾಯಿತೇ
ಹರಿದು ಹಾಳಾಯಿತೇ 
ಕಾಸು ಕೊಟ್ಟ ಸರಕಲ್ಲ
ಚಿಂತೆಯೇನೂ ಬೇಕಿಲ್ಲ |

ಹೀಗೂ ಉಂಟೇ ಗುಡಿಕೈಗಾರಿಕೆ
ಹಂಚಿ ನೆಂಟರಿಷ್ಟರಿಗೆ ಒಲವಿನ ಕಾಣಿಕೆ |

ಚಿತ್ರಗಳೊಂದಿಗೆ ಕವನ 
ಆಯಿತು ಕಣ್ಮನ ಪಾವನ |



Posted via DraftCraft app

Thursday, 13 December 2012

ಬಚ್ಚಂಗಾಯ್ ಬಂದಿದೇ ಹಾಯ್ ......






ಮೊನ್ನೆ ದೊಡ್ಡ ಗಾತ್ರದ ಬಚ್ಚಂಗಾಯಿ ಮನೆಗೆ ಬಂದಿತು.   ಅಪ್ಪ, ಮಗಳು ಮಂಗಳೂರಿಗೆ ಗಿರೀಶ್ ಮನೆಯ ಔತಣಕೂಟಕ್ಕೆ ಹೋದೋರು ಬರುವಾಗ ಉಪ್ಪಳ ಪೇಟೆಯಿಂದ ತಂದರು.  

" ಈಗ ತಿನ್ನಲು ಹಸಿವಿಲ್ಲ,  ನಾಳೆ ಹತ್ತು ಗಂಟೆಗೆ..." ಅನ್ನುತ್ತ ಮಗಳು ಕಂಪ್ಯೂಟರ್ ಮುಂದೆ ಕುಕ್ಕರಿಸಿದಳು.

" ಊಟಕ್ಕೇನೇನು ಸ್ಪೆಶಲ್ ಇತ್ತೇ ಅಲ್ಲಿ..." ಕೇಳುತ್ತಿದ್ದಂತೆ

" ಹ್ಞಾಂ,  ಹೋಳಿಗೆ ಕೊಟ್ಟಿದ್ದಾಳೆ ಶೀಲಕ್ಕ..." ಬ್ಯಾಗಿನಿಂದ ಈಗ ಹೋಳಿಗೆ ಪ್ಯಾಕ್ ಹೊರ ಬಂತು.

ಬೆಳಗಾಯಿತು.   ಗಂಟೆ ಹತ್ತೂ ಆಯಿತು.   " ಇಷ್ಟು ದೊಡ್ಡದಾಗಿದೆಯಲ್ಲ,  ಅಪ್ಪನ ಹತ್ರಾನೇ ತುಂಡು ಮಾಡಿ ಕೊಡಲು ಹೇಳು ಆಯ್ತಾ " ಅಂತಂದು ಹಿತ್ತಿಲ ತೋಟದಿಂದ ನೆಲಬಸಳೆ ಚಿವುಟಿ  ತರುವಷ್ಟರಲ್ಲಿ ಅಪ್ಪ ಮಗಳು ಸೇರಿ ಬಚ್ಚಂಗಾಯಿ ಸ್ವಾಹಾ.. ಮಾಡಲು ಪ್ರಾರಂಭಿಸಿದ್ದರು.

" ತುಂಡು ಮಾಡಿ ಆಯ್ತಾ,  ಇನ್ನು ನಾನೇ ಹೋಳು ಮಾಡಿ ತಟ್ಟೆಗೆ ಹಾಕಿ ಕೊಡ್ತೇನೆ "

" ಏನೂ ಬೇಡಾ,  ಹಾಗೇ ತಿಂತೇವೆ "

ನನಗಾಗಿ ಇಟ್ಟಿದ್ದ ತುಂಡುಗಳ ಕೆಂಪಾದ ಭಾಗವನ್ನು ಅಚ್ಚುಕಟ್ಟಾಗಿ ಕತ್ತರಿಸಿ ತಿಂದಾಯ್ತು.                          

" ತಿಂದುಳಿದದ್ದು ಆಚೆ ಎಸಿಯೋದು " ಅಂತೀರಾ,

ಛೆ, ಛೆ ಬೇಡ,  ಲಕ್ಷಣವಾಗಿ ಹಸಿರು ಸಿಪ್ಪೆಯನ್ನು ಚಾಕುವಿನಲ್ಲಿ ಹೆರೆದು ತೆಗೆಯಿರಿ.   ಇನ್ನುಳಿದ ಬಿಳಿ ಭಾಗವನ್ನು ತುರಿಮಣೆಯಲ್ಲಿ ತುರಿದು,  ಉಪ್ಪು ಬೆರೆಸಿ ಅಗತ್ಯವಿದ್ದಷ್ಟು ಮೊಸರು ಎರೆದು ಇಂಗು ಹಾಕಿದ ಬೇವಿನಸೊಪ್ಪಿನ ಒಗ್ಗರಣೆ ಕೊಟ್ಟು ಬಿಟ್ಟರಾಯ್ತು.  ಮೊಸರು ಗೊಜ್ಜು ತಯಾರಾಗಿ ಬಿಟ್ಟಿತು,  ನಾನಂತೂ ಮಾಡದೆ ಬಿಡ್ತೇನಾ,

  " ತುಂಬಾ ಚೆನ್ನಾಗಿದೆ "  ಶಿಫಾರಸೂ ಸಿಕ್ಕಿತು. 

ಸಂಜೆ ವೇಳೆಗೆ ಇನ್ನಷ್ಟು ಬಚ್ಚಗಾಯಿ ಓಡುಗಳು ನನ್ನ ಮುಂದೆ ಕುಳಿತವು.   " ಇದನ್ನೇ ದೋಸೆ ಮಾಡೂದು ಬೇಡ,  ನಂಗೆ ಉದ್ದಿನದೋಸೆಯೇ ಆಗ್ಬೇಕು " ಸುಪ್ರೀಂ ಕೋರ್ಟು ಆರ್ಡ ವಾಣಿ ತೇಲಿ ಬಂದಿತು.

" ಆಯ್ತೂ ..."

ಒಂದು ಬಟ್ಟಲು ತುಂಬಾ ತುರಿದಿಟ್ಟುಕೊಳ್ಳಿ.   
ಎರಡು ಕಪ್ ಅಕ್ಕಿಗೆ ಒಂದು ಕಪ್ ಉದ್ದು ಹಾಕ್ತೀರಾ,  ಅಷ್ಟು ಬೇಡ.  ಅರ್ಧ ಕಪ್ ಉದ್ದು ಸಾಕು.  ಎರಡು ಚಮಚಾ ಮೆಂತ್ಯ ಇರಲಿ.
ಇವನ್ನೆಲ್ಲ ತುರಿದಿಟ್ಟ ಬಚ್ಚಂಗಾಯಿ ತುರಿಯೊಂದಿಗೆ ಸೇರಿಸಿ ನುಣ್ಣಗೆ ಅರೆದು ಮುಚ್ಚಿಡಿ.  ಅರೆಯುವಾಗ ಬೇರೆ ನೀರು ಹಾಕಬೇಕಾಗಿಯೇ ಇಲ್ಲ.  ಮಾರನೇ ದಿನ ಸೊಗಸಾದ ಉದ್ದಿನ ದೋಸೆ ಮಾಡಬಹುದು.   ಕೊತ್ತಂಬರೀ ಸೊಪ್ಪಿನ ಚಟ್ನಿ ಜತೆಗಿರಲಿ.

ಉದ್ದು ಹಾಕದೆಯೂ ಮಾಡಬಹುದು.   ಕೇವಲ  ಅಕ್ಕಿಯೊಂದಿಗೆ  ಇದರ ತುರಿ ಹಾಕಿ  ಅರೆದು  ತೆಳ್ಳವು  ( ನೀರು ದೋಸೆ )  ಎರೆದರಾಯಿತು.  ಹುಳಿ ಬರಿಸುವ ಅಗತ್ಯವಿಲ್ಲ,  ಇದು ದಿಢೀರ್ ದೋಸೆ.

ಇನ್ನಷ್ಟು  ಬಚ್ಚಂಗಾಯಿ ಸಿಪ್ಪೆಗಳು ಬಾಕಿಯಿದ್ದವು.   ಅವನ್ನೂ  ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಪಲ್ಯ ಮಾಡಿಯೂ ಆಯ್ತು.

ಪಲ್ಯಕ್ಕೆ ಬೇಯಿಸುವ ಮೊದಲು ಅರ್ಧ ಕಪ್ ತಗೆದಿರಿಸಿ,  ಎರಡು ಟೊಮ್ಯಾಟೋ,  ಒಂದು ಹಸಿಮೆಣಸು,  ಚಿಕ್ಕ ತುಂಡು ಶುಂಠಿ ಸಣ್ಣಗೆ ಹಚ್ಚಿಟ್ಟು,  ಉಪ್ಪು ಬೆರೆಸಿ ಸಲಾಡ್ ಕೂಡಾ ಮಾಡಿಕೊಳ್ಳಿ.

ಪಾಯಸ,  ಇಡ್ಲಿ,  ಕಡುಬು,  ಗುಳಿಯಪ್ಪ ಇತ್ಯಾದಿಗಳನ್ನು ಮಾಡಬಹುದಾಗಿತ್ತು.   ಬಚ್ಚಂಗಾಯಿ  ಮುಗಿದಿತ್ತು

.



ನಮ್ಮೂರಿನ ಬಚ್ಚಂಗಾಯಿ ಅಖಂಡ ಕರ್ನಾಟಕ ವ್ಯಾಪ್ತಿಯಲ್ಲಿ ಕಲ್ಲಂಗಡಿ ಹಣ್ಣು ಎಂದೂ ಜನಪ್ರಿಯತೆ ಗಳಿಸಿದೆ.  ಸಸ್ಯಶಾಸ್ತ್ರೀಯವಾಗಿ Citrullus lanatus.  ದೊಡ್ಡ ಗಾತ್ರದ ಇದರ ಕೌಟುಂಬಿಕ ವ್ಯಾಪ್ತಿಯೂ Cucurbitaceae  ಸಾಕಷ್ಟು ದೊಡ್ಡದಿದೆ,   ಬೂದುಗುಂಬಳಕಾಯಿ,  ಚೀನೀಕಾಯಿ ಇತ್ಯಾದಿ ...  ಇನ್ನಿತರ ಫಲಗಳಂತೆ ಬಚ್ಚಂಗಾಯಿ ಕೂಡಾ ವಿಟಮಿನ್ C ಯಿಂದ ಸಮೃದ್ಧವಾಗಿದೆ.  ಶೇಕಡಾವಾರು 92 ಪಾಲು ನೀರಿನಂಶ ಇರುವುದರಿಂದ ಆಂಗ್ಲ ಭಾಷೆಯಲ್ಲಿ watermelon ಎಂದೇ ಖ್ಯಾತವಾಗಿದೆ.  6 ಶೇಕಡಾ  ಸಕ್ಕರೆಯೂ ಈ  ಫಲದಲ್ಲಿದೆ.   ಬಿಸಿಲಿನ ತಾಪದಿಂದ ಬಳಲಿದವರಿಗೆ ಇದರ ನೋಟ ಮಾತ್ರದಿಂದಲೇ  ಬಳಲಿಕೆ ದೂರವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ.   ದಕ್ಷಿಣ ಆಫ್ರಿಕಾ ಮೂಲಸ್ಥಾನವಾಗಿರುವ ಈ ಹಣ್ಣು ಅಲ್ಲಿನ ಒಂದು ಕಾಡು ಬೆಳೆ.


ಟಿಪ್ಪಣಿ:  ಓಡು ಎಂಬ ಶಬ್ದಾರ್ಥ =  ಕುಂಬಳಕಾಯಿ ತಿರುಳು,  ಹೋಳು ಕತ್ತರಿಸಿ ತೆಗೆದು ಉಳಿದ ಸಿಪ್ಪೆಯನ್ನು ಓಡು ಎಂದು ಹೇಳುವ ಕ್ರಮ ನಮ್ಮ ಊರಿನ ಆಡುನುಡಿಯಲ್ಲಿದೆ.   ಕುಂಬಳ ಓಡು ಪಲ್ಯಕ್ಕೆಂದೇ ಸಣ್ಣಗೆ ಹಚ್ಚಿಟ್ಟು ಮಾಡುವುದು ಸಾಂಪ್ರದಾಯಿಕ ವಿಧಾನ.  ಕೆಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ತಯಾರಿಸುವುದೂ ಇದೆ.

Posted via DraftCraft app


ಟಿಪ್ಪಣಿ:   24/ 4/ 2016 ರಂದು ಹೊಸ ಚಿತ್ರದೊಂದಿಗೆ ವಿಸ್ತರಿಸಿ ಬರೆದಿದ್ದೇನೆ.

                                                                         ಬಚ್ಚಂಗಾಯ್ ಪಾನಕ


ಬೇಸಿಗೆಯ ಔತಣಕೂಟ,  ಉಪನಯನಕ್ಕೆ ಹೋಗಿದ್ದೆವು.   ಇಲ್ಲೇ ಹತ್ತಿರ,   ಬಾಯಾರು ಶ್ರೀ ಪಂಚಲಿಂಗೇಶ್ವರ ದೇಗುಲದ ಸಭಾಂಗಣದಲ್ಲಿ ಊರ ಮಂದಿ,  ನೆಂಟರಿಷ್ಟರು ಎಲ್ಲರೂ ತುಂಬಿ ತುಳುಕುತ್ತಿದ್ದಂತೆ ಉಪನಯನದ ಧಾರ್ಮಿಕ ವಿಧಿವಿಧಾನಗಳನ್ನು ಅವಲೋಕಿಸುತ್ತ,  ಅಲ್ಲೊಂದು ಸಂಗೀತ ಕಛೇರಿಯೂ ಏರ್ಪಾಡಾಗಿತ್ತು.

ಈ ಎಲ್ಲ ಸಂಭ್ರಮಗಳ ಎಡೆಯಲ್ಲಿ ಮಹಿಳೆಯರ ಪಟ್ಟೇ ಸೀರೆಗಳ ಹಾರಾಟ,  ಮಲ್ಲಿಗೆಯ ಮಾಲೆಗಳ ಮೇಲಾಟ,  ಮಟ ಬಿಸಿಲಿಗೆ ಬೆವರಧಾರೆಯಾಟ,  " ಒಂದು ಆಸರಿಗೆ ಕುಡಿಯದಿದ್ದರಾಗದು. "
" ಎದುರುಗಡೆ ಇತ್ತಲ್ಲ,  ಬರುವಾಗ್ಲೇ ಕುಡಿಯೂದಲ್ವ? "  ಅಂದ್ರು ಗೌರತ್ತೆ.
" ಹೌದಾ, ನಾ ನೋಡ್ಲಿಲ್ಲ...  ಈಗ ಹೋಗಿಕುಡಿದು ಬರೋಣ. "  ಪಾನಕ ಇದ್ದಲ್ಲಿಗೆ ಎದ್ದು ಹೋದೆವು.
" ವಾಹ್... ಬಚ್ಚಂಗಾಯ್ ಪಾನಕ! "  ಎರಡೆರಡು ಲೋಟ ಶರಬತ್ತು ಕುಡಿದು ತಟ್ಟೆಯಲ್ಲಿಡುತ್ತಿದ್ದಂತೆ ನಮ್ಮ ಸೋದರಳಿಯ ವೆಂಕಟೇಶ ಎದುರಾದ.
" ಅತ್ತೇ,  ಶರಬತ್ತು ಕುಡಿದ್ರಾ? "
" ಹ್ಞೂ,  ತುಂಬಾ ಚೆನ್ನಾಗಿತ್ತು,  ಹ್ಯಾಗೇ ಮಾಡಿದ್ದೂ... ನೋಡಿದ್ದೀಯಾ? "   ಅವನೋ ಮುನ್ನಾದಿನವೇ ಹಾಜರಾಗಿದ್ದ,  ಸರ್ವಸುಧರಿಕೆಗಳನ್ನೂ ನಿಭಾಯಿಸಬೇಡ್ವೇ...
ಅದಾ,  ಬಚ್ಚಂಗಾಯ್ ಸಿಪ್ಪೆ,  ಬೀಜ ತೆಗೆದು ಕೆಂಪು ತಿರುಳನ್ನು ಮಿಕ್ಸೀಯಲ್ಲಿ ತಿರುಗಿಸ್ಬೇಕು,  ನೀರು ಹಾಕ್ಬೇಕೂ,   ಸಕ್ರೆಯೂ ಬೀಳ್ಬೇಕೂ..."
" ಅಷ್ಟೇಯಾ...  "
" ಅತ್ತೇ,  ಈ ಪಾನಕಕ್ಕೆ ಕಾಳುಮೆಣಸಿನ ಹುಡಿ ಹಾಕ್ಲೇ ಬೇಕು,  ಉಪ್ಪೂ ಹಾಕ್ಬೇಕು. "
" ಹಾಗ್ಹೇಳು...  "  ಇಲ್ಲಿದೆ ಒಳಗುಟ್ಟು.
" ಶುಂಠಿ ಹಾಕಿದ್ರೂ ಆದೀತು. "
" ಹ್ಞೂಂ... ಕಬ್ಬಿನ ಹಾಲಿಗೆ ಶುಂಠಿ,  ಇದಕ್ಕೆ ಕಾಳುಮೆಣಸು ಅನ್ನೂ. "
"ಬಚ್ಚಂಗಾಯಿ ಶೀತ ಅಲ್ವೇ,  ಕಾಳುಮೆಣಸು ಶೀತಕ್ಕೆ ಪರಿಹಾರ "  ಅಂದ್ರು ಗೌರತ್ತೆ.


                
  


Wednesday, 5 December 2012

" ಮಜ್ಜಿಗೆಯೊಳಗಿನ ಬೆಣ್ಣೆಯಂತೇ ......"



ಸಂಸ್ಕೃತದಲ್ಲಿ ' ಘೃತ ' ಎಂದರೆ ತುಪ್ಪ ಎಂದರ್ಥ. ಇಂಗ್ಲಿಷ್ ನ ghee ಶಬ್ದವೂ ಸಂಸ್ಕೃತದಿಂದಲೇ ಬಂದಿದೆ. ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲೇ ತುಪ್ಪ ಇರಬೇಕಾದರೆ ತುಪ್ಪದ ಇತಿಹಾಸ ವೇದಕಾಲದಿಂದ ಆರಂಭವೆಂದು ಚಿಟಿಕೆ ಹೊಡೆಯುವಷ್ಟರಲ್ಲೇ ತಿಳಿದುಕೊಳ್ಳಬಹುದಾಗಿದೆ. ಇತಿಹಾಸ ತಿಳಿಸುವಂತೆ ವೇದಕಾಲವು ಹೈನುಗಾರಿಕೆಯನ್ನೇ ಪ್ರಧಾನ ವೃತ್ತಿಯನ್ನಾಗಿ ಸ್ವೀಕರಿಸಿತ್ತು. ಇಂತಿಷ್ಟು ಗೋವುಗಳ ಒಡೆಯನೆಂಬುವಲ್ಲಿ ಒಬ್ಬ ವ್ಯಕ್ತಿಯ ಸ್ಥಾನಮಾನ ನಿರ್ಣಯದ ಕಾಲವಾಗಿತ್ತು ಅಂದು. ವೈದಿಕ ಸಾಹಿತ್ಯವೂ ಶ್ರೀಕೃಷ್ಣನನ್ನು ಗೋಪಾಲಕನನ್ನಾಗಿ ಸ್ವೀಕರಿಸಿದೆ.

ದಾಸ ಸಾಹಿತ್ಯದಲ್ಲಿಯೂ ಪುರಂದರದಾಸರು ಲಕ್ಷ್ಮಿಯನ್ನು " ಮಜ್ಜಿಗೆಯೊಳಗಿನ ಬೆಣ್ಣೆಯಂತೇ...." ಎಂದು ಕೊಂಡಾಡಿದ್ದಾರೆ. ಲಕ್ಷ್ಮಿ ಸಮುದ್ರಮಥನದಿಂದ ಬಂದವಳು ಎಂದು ಪುರಾಣಗಳು ಹೇಳುತ್ತವೆ.
ಹಾಲಿನ ಸಮುದ್ರದಲ್ಲಿ ಮಂದರ ಪರ್ವತವನ್ನು ಕಡಗೋಲಾಗಿ ನಿಲ್ಲಿಸಿ, ವಾಸುಕಿ ಎಂಬ ಮಹಾಸರ್ಪವನ್ನು ಅದಕ್ಕೆ ಸುತ್ತಿ ನಡೆಸಿದ ಸಮುದ್ರಮಥನವನ್ನು ನಮ್ಮಂಥ ಜನಸಾಮಾನ್ಯರು ಕಾಣೆವು. ಮೊಸರು ಕಡೆದಾಗ ಮಜ್ಜಿಗೆಯೊಳಗೆ ಬೆಣ್ಣೆ ತೇಲಿ ಬರುವುದೊಂದು ಗೊತ್ತು. ಶ್ರೇಷ್ಠ ದರ್ಜೆಯ ತುಪ್ಪವೂ ಗೊತ್ತು. ಇಂತಹ ಘನವಾದ ತುಪ್ಪವನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯೊಂದಿಗೆ ' ಸಕ್ಕರೆ ತುಪ್ಪ ಕಾಲುವೆ ಹರಿಸಿ...ಶುಕ್ರವಾರದ ಪೂಜೆಯ ವೇಳೆಗೆ...ಬಾರಮ್ಮ' ಎಂದು ಸಮೀಕರಿಸಿದ್ದಾರೆ ನಮ್ಮ ದಾಸವರೇಣ್ಯರು. ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಬೇಕಾದರೂ ಶುಕ್ರವಾರದ ದಿನವೇ ಆಗಬೇಕು ನಮ್ಮ ಸಂಪ್ರದಾಯ ಶರಣರಿಗೆ.

ಇಂತಿಪ್ಪ ಬೆಣ್ಣೆ ಪುರಾಣವನ್ನು ಯಾಕೆ ಹೇಳ್ತಾ ಇದ್ದೀನಂದ್ರೆ ನಾನು ಮದುವೆಯಾಗಿ ಬಂದ ಈ ಮನೆಯಲ್ಲಿ ಕರೆಯುವ ಹಸುಗಳೂ, ಎಮ್ಮೆಗಳೂ ಜೊತೆಗೊಂದು ಆಡು ಕೂಡಾ ಇತ್ತು. ವಸ್ತುಶಃ ಹಾಲಿನ ಹೊಳೆಯೇ ಹರಿಯುತ್ತಿತ್ತು. ಹಸುವಿನ ಹಾಲು, ಎಮ್ಮೆ ಹಾಲು ಒಟ್ಟಿಗೇ ಹಾಕಿ ಕಾಯಿಸುವಂತಿಲ್ಲ. ಪ್ರತ್ಯಪ್ರತ್ಯೇಕವಾಗಿ ಕಾಯಿಸಿ, ಬೇರೆ ಬೇರೆ ಮಜ್ಜಿಗೆ, ಮೊಸರು, ತುಪ್ಪ ಮಾಡಿ ಇಡುವ ಸಂಪ್ರದಾಯ. ದನದ ಹಾಲು, ತುಪ್ಪ ಶ್ರೇಷ್ಠ ದರ್ಜೆಯದೆಂದು, ಪೂಜೆ, ಹೋಮ, ಹವನಗಳಿಗೆ ಮೀಸಲು. ಎಮ್ಮೆ ಹಾಲು ಎರಡನೇ ದರ್ಜೆಯದು. ಆಡಿನ ಹಾಲು ನಮ್ಮತ್ತೆಯವರ ಕಾಫಿ, ಚಹಾಗಳಿಗೆ ಆಗಿ ಉಳಿದದ್ದು ಮುದ್ದಿನ ಬೆಕ್ಕುಗಳಿಗೆ. ಇಷ್ಟೆಲ್ಲಾ ಹಾಲಿನ ಸಮೃದ್ಧಿ ಇರುವಾಗ ನನ್ನತ್ತೆ ಯಾಕಾಗಿ ಆಡನ್ನೂ ಸಾಕುತ್ತಿದ್ದರು ಎಂದು ಹುಬ್ಬೇರಿಸಿ ಪ್ರಶ್ನೆ ಕೇಳಿಯೇ ಕೇಳ್ತೀರಾ. ಹೊಸ ಸೊಸೆಯಾಗಿ ಬಂದಿದ್ದ ನಾನೂ ಮನೆಯೊಳಗೆ ಮುದ್ದಾದ ಆಡನ್ನು ಕಂಡು ಕಣ್ ಕಣ್ ಬಿಟ್ಟಿದ್ದೆ. ಆಗ್ಗಿದಾಗ್ಗೆ ಬಾಧಿಸುತ್ತಿದ್ದ ಅಸ್ತಮಾ ಖಾಯಿಲೆಯ ನಿಯಂತ್ರಣಕ್ಕಾಗಿ ನನ್ನತ್ತೆ ಆಡಿನ ಹಾಲಿನ ಪಥ್ಯ ಮಾಡುತ್ತಿದ್ದರು ಅಷ್ಟೇ.

ಹಾಲು ಮಜ್ಜಿಗೆ ವಹಿವಾಟು ಆಗ ನನಗೆ ತಿಳಿದಿರುವುದಾದರೂ ಹೇಗೆ ? ಎಲ್ಲವನ್ನೂ ಅತ್ತೆಯೇ ಹೇಳಿ ಕೊಟ್ಟಿದ್ದು. ಅಚ್ಚುಕಟ್ಟಾಗಿ ತುಪ್ಪ ಹೀಗೆ ತಯಾರಿಸೋಣ:




ಹಾಲು ಕೆನೆ ಕಟ್ಟುವ ತನಕ ಮಂದಾಗ್ನಿಯಲ್ಲಿ ಕಾಯಿಸಿ. ಕೆನೆ ಕಟ್ಟಿದ ಹಾಲು ಚೆನ್ನಾಗಿ ತಣಿದ ಮೇಲೆ ಮುಚ್ಚಿಡಿ. ಕೆನೆಯೇ ಬೆಣ್ಣೆಯ ಮೂಲ. ಮೊಸರು ಮಾಡಬೇಕಾದರೆ ಹಾಲು ಚೆನ್ನಾಗಿ ತಣಿದಿರಬೇಕು. ಅಗತ್ಯವಿದ್ದಷ್ಟೇ ಮಜ್ಜಿಗೆ ಅಥವಾ ಮೊಸರು ಒಂದು ಚಿಕ್ಕ ಸೌಟಿನಲ್ಲಿ ತಣಿದ ಹಾಲಿಗೆ ಎರೆದರೆ ಮೊಸರು ಎಂಟು ಗಂಟೆಯೊಳಗೆ ಸಿದ್ಧ. ಉಪಯೋಗಕ್ಕೆ ಬೇಕಾದಷ್ಟೇ ಮೊಸರನ್ನು ಪ್ರತ್ಯೇಕವಾಗಿ ಮಾಡಿಕೊಳ್ಳಿ. ಉಳಿದ ಹಾಲನ್ನು ಕೆನೆಸಮೇತವಾಗಿ ಮೊಸರು ಮಾಡಿ.

ಕೈಯಲ್ಲಿ ಹಗ್ಗ ಹಿಡಿದು ಮೊಸರು ಕಡೆಯುವ ಶ್ರಮ ಈಗ ಇಲ್ಲ. ಎಲ್ಲ ಕೆಲಸಗಳಿಗೂ ಯಂತ್ರಗಳಿವೆ. ಮಿಕ್ಸಿಯಲ್ಲೇ ತಿರುಗಿಸಿದರಾಯಿತು. ಸಂಗ್ರಹಿಸಿದ ಬೆಣ್ಣೆಯನ್ನು ಮಜ್ಜಿಗೆಯಲ್ಲೇ ಇಡಬೇಕು. ಬೆಣ್ಣೆಯನ್ನು ಪ್ರತಿದಿನವೂ ಹೊಸ ಮಜ್ಜಿಗೆಗೆ ರವಾನಿಸುತ್ತಿದ್ದರೆ ಮಾತ್ರ ಸುವಾಸನಾಭರಿತ ತುಪ್ಪ ಪಡೆಯಲು ಸಾಧ್ಯ. ನಾಲ್ಕನೇ ದಿನ ಈ ಬೆಣ್ಣೆಮುದ್ದೆಯನ್ನು ಮಜ್ಜಿಗೆಯಿಂದ ತೆಗೆದು ಚೆನ್ನಾಗಿ ತೊಳೆಯಿರಿ. ತೊಳೆಯುವ ಮೊದಲು ಅಂಗೈಯನ್ನು ಬಿಸಿನೀರಿನಲ್ಲಿ ಅದ್ದಿ ತಗೆಯಿರಿ, ಇಲ್ಲಾಂದ್ರೆ ಬೆಣ್ಣೆ ಕೈಗಳಿಗೆ ಹತ್ತಿಕೊಂಡೀತು. ಏಳೆಂಟು ಬಾರಿ ನೀರು ಬದಲಾಯಿಸಿ ತೊಳೆದು ಮಜ್ಜಿಗೆಯ ವಾಸನೆ ಹೋಗಲಾಡಿಸಿ. ಶುಕ್ರವಾರ ಹಾಗೂ ಮಂಗಳವಾರದಂದೇ ದನದ ತುಪ್ಪ ಕಾಯಿಸಬೇಕೆಂಬ ಸಂಪ್ರದಾಯ ಇದೆ. ಈಗ ನಾವು ತರುವ ಪ್ಯಾಕೆಟ್ ಹಾಲು ಇಂತಹ ರೂಲ್ಸ್ ಕೇಳುವುದಿಲ್ಲ ಬಿಡಿ.

ಬೆಣ್ಣೆಯನ್ನು ಉರಿಯಲ್ಲಿಡಿ. ಕುದಿಯುತ್ತಿದ್ದಂತೆ ಉರಿ ತಗ್ಗಿಸಿ. ನೀರಿನಂಶ ಆರಿದೊಡನೆ ಕುದಿಯುವ ಸದ್ದು ನಿಂತು ಸುವಾಸನೆ ಬರುತ್ತಿದ್ದಂತೆ ಕೆಳಗಿಳಿಸಿ, ಆರಲು ಬಿಡಿ. ತಣಿದ ಮೇಲೆ ಶುದ್ಧವಾದ ಒಣ ಜಾಡಿಗೆ ಎರೆಯಿರಿ.




ಇಂತಹ ಘನವಾದ ತುಪ್ಪದಿಂದ ಒಂದು ವಿಶೇಷವಾದ ಖಾದ್ಯ ತಯಾರಿಸೋಣ:
ಅಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೇಹಣ್ಣು ಕಚ್ಛಾವಸ್ತುವಾಗಿ ತಯಾರಿಸುವ ನೆಯ್ಯಪ್ಪಂ ನಮ್ಮ ದೇವಸ್ಥಾನಗಳಲ್ಲಿ ಪ್ರಸಾದರೂಪವಾಗಿ ವಿತರಣೆಯಾಗುವ ಸಿಹಿಭಕ್ಷ್ಯ. ಆ ಸಾಂಪ್ರದಾಯಿಕ ವಿಧಾನದ ಅನುಸರಣೆಯಿಲ್ಲದೇ ಸುಲಭವಾಗಿ ಮಾಡೋಣ.

ಹೇಗೂ ಮುಜಾನೆಗೊಂದು ತಿಂಡಿ ತಯಾರಿಸುತ್ತೀರಿ. ಅದು ನೀರುದೋಸೆಯಾಗಿರಲಿ. ದೋಸೆಹಿಟ್ಟು ಎರಡು ಲೋಟದಷ್ಟು ಉಳಿದಿದೆ, ಅದೇ ಸಾಕು.
7-8 ಖರ್ಜೂರಗಳನ್ನು ಬೀಜ ಬಿಡಿಸಿ ಮಿಕ್ಸಿಯಲ್ಲಿ ಪುಡಿ ಪುಡಿ ಮಾಡಿಕೊಳ್ಳಿ. ಖರ್ಜೂರ ಸಿಹಿಯಾಗಿರುವುದರಿಂದ ಹೆಚ್ಚು ಬೆಲ್ಲ ಬೇಡ.
ಬೆಲ್ಲವನ್ನು ಹುಡಿ ಮಾಡಿ ಬಾಣಲೆಗೆ ಹಾಕಿ, ಸ್ವಲ್ಪ ನೀರುದೋಸೆ ಹಿಟ್ಟನ್ನೇ ಎರೆದು ಬೆಲ್ಲ ಕರಗಿಸಿ. ಮಂದಾಗ್ನಿಯಲ್ಲಿ ಸೌಟಿನಿಂದ ಕೆದಕುತ್ತಾ, ಖರ್ಜೂರದ ಹುಡಿಯನ್ನೂ ಹಾಕಿ, ಉಳಿದ ದೋಸೆಹಿಟ್ಟನ್ನೂ ಎರೆಯಿರಿ.
ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಾ, ತೆಳ್ಳಗಿದ್ದ ಹಿಟ್ಟು ದಪ್ಪವಾದೊಡನೆ ಕೆಳಗಿಳಿಸಿ. ಅಲ್ಲಲ್ಲಿ ದಪ್ಪಗಟ್ಟಿದ ಹಿಟ್ಟನ್ನು ಸೌಟಿನಲ್ಲಿ ಕೆದಕಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ. ಈಗ ಅರೆ ಬೆಂದ ಹಿಟ್ಟು ತಯಾರಾಯಿತು.
ಅಪ್ಪದ ಗುಳಿಗಳಿಗೆ ತುಪ್ಪ ಎರೆದು ಬೆಂಕಿಯ ಮೇಲಿಡಿ. ತುಪ್ಪದ ಶಾಖದಲ್ಲೇ ಇದು ಬೇಯುವ ಕಾರಣ ಗುಳಿಗಳಿಗೆ ಸ್ವಲ್ಪ ತುಪ್ಪದ ಪಸೆ ಮಾಡಿದರೆ ಸಾಲದು, ಚೆನ್ನಾಗಿ ಎರಡು ಚಮಚದಷ್ಟು ತುಪ್ಪ ಬೀಳಲಿ. ಚಿಕ್ಕ ಸೌಟಿನಲ್ಲಿ ತುಪ್ಪದ ಬಿಸಿಯೇರಿದ ಗುಳಿಗಳಿಗೆ ಹಿಟ್ಟಿನ ಮುದ್ದೆಯನ್ನು ಎರೆಯಿರಿ. ಬೇಯುತ್ತಿದ್ದಂತೆ ತಳ ಬಿಟ್ಟು ಬರುವ ಅಪ್ಪಗಳನ್ನು ಕವುಚಿ ಹಾಕಿ. ಎರಡೂ ಬದಿ ಕೆಂಪಗಾದ ಮೇಲೆ ತೆಗೆಯಿರಿ.

ಸಂಜೆಯ ಟೀ, ಕಾಫೀಯೊಂದಿಗೆ ಸವಿಯಿರಿ. ಪ್ರಾಯೋಗಿಕವಾಗಿ ತಯಾರಿಸಿದ ಈ ವಿಧಾನದ ನೆಯ್ಯಪ್ಪಂ ಈಗ ನನ್ನ ಮಗಳ ಅಚ್ಚುಮೆಚ್ಚಿನದು. " ಇನ್ನು ಯಾವಾಗಲೂ ಹೀಗೇ ಮಾಡಮ್ಮ" ಅಂದಿದ್ದಾಳೆ.

ನಮ್ಮಜ್ಜೀ ಕಾಲದಲ್ಲಿ ತುಪ್ಪ ಹಾಗೂ ಜೇನು ಸೇರಿಸಿ ಹಾಲುಹಸುಳೆಗಳಿಗೆ ದಿನಂಪ್ರತಿ ಚಮಚಾದಲ್ಲಿ ಕುಡಿಸುವ ಪದ್ಧತಿ ಇತ್ತು. ಬಸುರಿ ಬಾಣಂತಿಯರಿಗೆ ತುಪ್ಪ ಹಾಕಿಯೇ ಅನ್ನ ಕಲಸಿ ತಿನ್ನುವ ಸಂಪ್ರದಾಯ. ಜಠರಾಗ್ನಿಯನ್ನು ಪ್ರಚೋದಿಸಿ ಜೀರ್ಣಕ್ರಿಯೆ ಸರಾಗವಾಗಿ ನಡೆಸುವ ಶಕ್ತಿ ಇದರಲ್ಲಿದೆ. ಅಡುಗೆಗೆ ಬಳಸುವ ಇತರ ವನಸ್ಪತಿ ಎಣ್ಣೆಗಳು ಹೆಚ್ಚು ತಾಪವನ್ನು ತಾಳಿಕೊಳ್ಳುವ ಶಕ್ತಿ ಹೊಂದಿಲ್ಲ. ದೇವತಾ ಪೂಜಾವಿಧಿಗಳಲ್ಲಿ ಪ್ರಸಾದರೂಪವಾಗಿ ವಿತರಣೆಯಾಗುವ ಪಂಚಾಮೃತದಲ್ಲಿ ಹಾಲು, ಜೇನು, ಸಕ್ಕರೆ, ಮೊಸರುಗಳೊಂದಿಗೆ ತುಪ್ಪವೂ ಇರಬೇಕು. ಹೋಮ ಹವನಗಳಲ್ಲಿ ಅಗ್ನಿಯನ್ನು ಉದ್ದೀಪನಗಳಿಸಲು ಬಳಸುವ ಹಸುವಿನ ತುಪ್ಪದ ಧೂಮವು ವಾತಾವರಣ ಶುದ್ಧಿಕಾರಕವೆಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ, ತನ್ಮೂಲಕ ಓಝೋನ್ ವಲಯದ ರಕ್ಷಣೆ. ಕಲುಷಿತ ಪ್ರಕೃತಿಯನ್ನು ಶುದ್ಧೀಕರಿಸುವ ಶಕ್ತಿ ಈ ತುಪ್ಪಕ್ಕೆ ಇದೆ. ಅಂದಮೇಲೆ ಪ್ರಕೃತಿಯ ಒಂದು ಭಾಗವೇ ಆಗಿರುವ ಮನುಷ್ಯ ಶರೀರಕ್ಕೆ ತುಪ್ಪದ ಸೇವನೆ ಹಿತವೆಂಬುದರಲ್ಲಿ ವಿವಾದಕ್ಕೆಡೆಯಿಲ್ಲ. ಹಸುವಿನ ತುಪ್ಪ ಹಳೆಯದಾದರೂ ಬೆಲೆ ಬಾಳುವಂತಹುದು. ಪ್ರಾಚೀನ ವೈದ್ಯಶಾಸ್ತ್ರವಾಗಿರುವ ಆಯುರ್ವೇದ ಕ್ರಮ ರೀತ್ಯಾ ತಯಾರಾಗುವ ಲೇಹ್ಯಗಳಲ್ಲಿ ತುಪ್ಪ ಒಂದು ಪ್ರಮುಖ ಆಕರ ವಸ್ತು ಎಂಬುದನ್ನು ಮರೆಯದಿರೋಣ.



ಟಿಪ್ಪಣಿ:  27 / 11 / 2016 ರಂದು ಮುಂದುವರಿದ ಬರಹ.


ಮೊಸರನ್ನು ಕಡೆದು ಬೆಣ್ಣೆ ತೆಗೆದಿದೆ,  ತುಪ್ಪವೂ ಆಯ್ತು.   ಮನೆಯಲ್ಲಿ ಮಕ್ಕಳೂ ಇದ್ದರು.   ಸಂಜೆಯ ಟೀ ಹೊತ್ತಿಗೆ ಒಂದು ವಿಶೇಷ ತಿನಿಸು ಆಗಲೇಬೇಕು,  ನೆಯ್ಯಪ್ಪಂ ಮಾಡೋಣ.


ಘಮಘಮಿಸುವ ತುಪ್ಪವೇ ಇಲ್ಲಿ ಮುಖ್ಯವಾಗಿದೆ.


ಒಂದು ಪಾವು ಬೆಳ್ತಿಗೆ ಅಕ್ಕಿ,  ಎರಡು ಗಂಟೆ ನೆನೆದಿರಬೇಕು.

ಅರ್ಧ ಕಡಿ ತೆಂಗಿನ ತುರಿ.

ದೊಡ್ಡ ಅಚ್ಚು ಬೆಲ್ಲ,  ಸಿಹಿಗೆ ಬೇಕಾದಷ್ಟು.

ರುಚಿಗೆ ಉಪ್ಪು.

ಬಾಳೆಗೊನೆಯೂ ಹಣ್ಣಾಗಿದೆ,  ಒಂದು ಬಾಳೆಹಣ್ಣು ನುರಿದು ಇಡುವುದು.


ಅಕ್ಕಿಯನ್ನು ಚೆನ್ನಾಗಿ ತೊಳೆದು,  ಬಾಳೆಹಣ್ಣು,  ತೆಂಗಿನ ತುರಿ, ರುಚಿಗೆ ಉಪ್ಪು ಕೂಡಿಕೊಂಡು ಅರೆಯಿರಿ.

ಬೆಲ್ಲವನ್ನು ದಪ್ಪ ಬಾಣಲೆಯಲ್ಲಿ ಕರಗಿಸಿ,  ಸಾಂದ್ರವಾಗುತ್ತ ಬಂದಾಗ ರುಬ್ಬಿದ ಅಕ್ಕಿಹಿಟ್ಟನ್ನು ಎರೆದು,  ಉರಿ ಸಣ್ಣದಾಗಿಸಿ,   ಒಂದೆರಡು ಬಾರಿ ಸೌಟಾಡಿಸಿ ಕೆಳಗಿಳಿಸಿ.


ಏಲಕ್ಕಿ ಪುಡಿ ಇದ್ದರೆ ಹಾಕಬಹುದು.


ಅಪ್ಪಂ ಕಾವಲಿಯನ್ನು ಚೆನ್ನಾಗಿ ಒರೆಸಿ,  ಗುಳಿಗಳಿಗೆ ಎರಡೆರಡು ಚಮಚ ತುಪ್ಪ ಎರೆದು ಗ್ಯಾಸ್ ಸ್ಟವ್ ಮೇಲಿರಿಸಿ.  ಕಾವಲಿ ಬೆಚ್ಚಗಾದಾಗ ಗುಳಿಗಳಿಗೆ ಹಿಟ್ಟು ತುಂಬಿಸಿ,  ಎರಡೂ ಬದಿ ಬೇಯಿಸಿದಾಗ ರುಚಿಕರವಾದ ನೆಯ್ಯಪ್ಪಂ ಸಿದ್ಧ.


ಸಾಮಾನ್ಯವಾಗಿ ಕೇರಳದ ದೇವಾಲಯಗಳಲ್ಲಿ ಪ್ರಸಾದರೂಪವಾಗಿ ನೆಯ್ಯಪ್ಪಂ ಇರುತ್ತದೆ.   ದೇವತಾಪೂಜಾವಿಧಿಗಳ ಕೆಲವಾರು ಹೋಮಹವನಗಳಲ್ಲೂ ನೆಯ್ಯಪ್ಪಂ ದೇವರಿಗೆ ಮುಖ್ಯ ನೈವೇದ್ಯವಾಗಿರುತ್ತದೆ.   ವಿಶೇಷವಾಗಿ ಕಾಸರಗೋಡು ಮಧೂರು ಕ್ಷೇತ್ರದ ಅಪ್ಪಂ ಪ್ರಸಾದವು ಬಹಳ ಪ್ರಸಿದ್ಧಿಯನ್ನು ಪಡೆದಿರುವಂತದ್ದಾಗಿದೆ.


ತುಪ್ಪದಿಂದ ಮಾಡಿದಂತಹ ಈ ಸಿಹಿಭಕ್ಷ್ಯವು ಕೆಲವಾರು ದಿನ ಕೆಡದೆ ಇರಬೇಕಾದರೆ ತೆಂಗಿನ ತುರಿಯನ್ನು ಹುರಿದುಕೊಳ್ಳುವುದು ಉತ್ತಮ.


ಬಾಳೆಹಣ್ಣು ಹಾಕಿಯೂ,  ಹಾಕದೆಯೂ ಅಪ್ಪಂ ಮಾಡಬಹುದು.  ಬಾಳೆಹಣ್ಣು ಹಾಕಿದಂತಹ ತಿನಿಸು ಪ್ರತ್ಯೇಕವಾಗಿ ಉಣ್ಣಿಯಪ್ಪಂ ಎಂದು ಹೆಸರು ಪಡೆದಿದೆ.


ತುಂಬ ಹಳೆಯಕಾಲದ ಸಿಹಿಭಕ್ಷ್ಯವಾದ ನೆಯ್ಯಪ್ಪಂ ತಯಾರಿಗೆ ಜನಸಾಮಾನ್ಯರ ಬಳಕೆಗೆ ಮಣ್ಣಿನ ಕಾವಲಿಗಳೂ,  ದೇವಾಲಯಗಳಲ್ಲಿ ಕಂಚಿನ ಯಾ ತಾಮ್ರದ ಘನಗಾತ್ರದ ಕಾವಲಿಗಳೂ,  ಮೂರು ಕುಳಿಗಳಿಂದ ಪ್ರಾರಂಭವಾಗುವ ಕಾವಲಿಗಳ ಗುಳಿ ಗಾತ್ರಕ್ಕನುಗುಣವಾಗಿ ಹದಿನೈದು, ಇಪ್ಪಂತ್ತೊಂದರ ಗುಳಿಗಳ ವರೇಗೆ ಯಾ ಮತ್ತೂ ಹೆಚ್ಚು ವಿಸ್ತರಿತವಾಗಿವೆ.   ಗ್ಯಾಸ್ ಸ್ಟವ್ ಮೇಲಿರಿಸಲು ಹಿಂಡಾಲಿಯಂ ಕಾವಲಿ ಉತ್ತಮ.  ಆಧುನಿಕ ಗೃಹಿಣಿಯರಿಗೆ ನಾನ್ ಸ್ಟಿಕ್ ಅಪ್ಪಂ ತವಾ,  ಇಂಡಕ್ಷನ್ ಕುಕ್ಕಿಂಗ್ ಪ್ರಿಯರಿಗೆ ಇಂಡಕ್ಷನ್ ಬೇಸ್ ಇರುವಂತಹ ಅಪ್ಪಂ ತವಾ ಕೂಡಾ ಮಾರುಕಟ್ಟೆಯಲ್ಲಿದೆ!