Pages

Ads 468x60px

Saturday, 10 May 2014

ಚಕ್ಕುಲಿ, ಹೇಗೆ ಸುತ್ತಲಿ......







ಪ್ರೈಮರಿ ಶಾಲೆಯಲ್ಲಿದ್ದ ಮಗಳು ವಾರದ ರಜಾದಿನಗಳಂದು ತಿಂಡಿಗಳ ಅಪೇಕ್ಷೆ ಮುಂದಿಡುವವಳು,  " ಮಕ್ಕಳಿಗೆ ತಿನ್ನಲು ಮನೆಯಲ್ಲೇ ಮಾಡಿದ್ದು ಒಳ್ಳೆಯದು,  ಯಾವಾಗಲೂ ಬೇಕರಿ ತಿಂಡಿ ಒಳ್ಳೇದಲ್ಲ "  ಇದು ಗೌರತ್ತೆಯ ಆರೋಗ್ಯ ಫಾರ್ಮುಲಾ,  ವೆರೈಟಿ ತಿಂಡಿಗಳನ್ನು ತಿನ್ನುವ ಅಪೇಕ್ಷೆ ಅವರದ್ದೂ ಆಗಿತ್ತು ಅನ್ನಿ.   ಹಾಗಾಗಿ ರಜೆಯ ಮುಂಚಿತವಾಗಿ ಐಡಿಯಾ ಮಾಡಿಟ್ಟು ಕರಿದ ತಿಂಡಿಗಳನ್ನು ಡಬ್ಬದಲ್ಲಿ ತುಂಬಿಡುವ ಹವ್ಯಾಸ ರೂಢಿಯಾಗಿದೆ,   ಚಕ್ಕುಲಿ,   ಕೋಡುಬಳೆ,  ನಿಪ್ಪಟ್ಟು,  ಮದ್ದೂರು ವಡೆ,  ತೇಂಙೊಳಲ್,  ಕಾರಕಡ್ಡಿ,  ತುಕ್ಕುಡಿ.....

ಚಕ್ಕುಲಿ ತಯಾರಿಗೆ ಸಾಂಪ್ರದಾಯಿಕವಾಗಿ ಬೇಕಾಗಿರುವುದು ಉದ್ದು ಹಾಗೂ ಅಕ್ಕಿ.  ಒಂದು ಕಪ್ ಉದ್ದು ಹಾಗೂ ಮೂರು ಕಪ್ ಅಕ್ಕಿ.   ಉದ್ದು ಹುರಿದು ನುಣುಪಾದ ಹುಡಿಯಾಗಿರಬೇಕು,  ಅಕ್ಕಿಯೂ ಅಷ್ಟೇ ನುಣ್ಣಗೆ ಹುಡಿಯಾಗಿರಬೇಕು.   ಅಕ್ಕಿಯನ್ನು ಹುರಿದುಕೊಂಡಲ್ಲಿ ಚಕ್ಕುಲಿ ಹೆಚ್ಚು ಗರಿಗರಿಯಾಗಿರುತ್ತದೆ.   ರುಚಿಗೆ ಉಪ್ಪು,  ಖಾರ ಹಾಗೂ ಜೀರಿಗೆ,  ಎಳ್ಳು,  ಬೇಕಿದ್ದರೆ ಬೆಣ್ಣೆ ತುಸು ಹಾಕಿ ಒಂದು ಕಪ್ ನೀರಿನಲ್ಲಿ ಗಟ್ಟಿಯಾಗಿ ಚಪಾತಿ ಹಿಟ್ಟಿನಂತೆ ಕಲಸಿಟ್ಟು ಚಕ್ಕುಲಿ ಒರಲಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿದು ತೆಗೆದರಾಯಿತು.    ಕೆಲವು ಚಕ್ಕಲಿ ಒರಲುಗಳಲ್ಲಿ ಎಳ್ಳು, ಜೀರಿಗೆಗಳು ತೂತಿಗೆ ಅಡ್ಡವಾಗಿ ನಿಂತು ಸರಾಗವಾಗಿ ಚಕ್ಕುಲಿಯ ಎಳೆ ಬಾರದಂತೆ ತಡೆಯೂಡ್ಡುತ್ತವೆ,  ಅಂಥಲ್ಲಿ ಸಾರಿನ ಹುಡಿ,  ಖಾರಾಪುಡಿ ಹಾಕಿಕೊಳ್ಳಿ.   ಅಕ್ಕಿ ಹಾಗೂ ಉದ್ದಿನ ಹುಡಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

  ಕಲಸಿದ ಹಿಟ್ಟು ಹೇಗಿರಬೇಕು? 
 ಅಂಗೈಯಲ್ಲಿ ನೆಲ್ಲಿಗಾತ್ರದಷ್ಟು ಹಿಟ್ಟನ್ನು ಬತ್ತಿಯಂತೆ ಹೊಸೆಯಿರಿ.   ಉದ್ದವಾಗಿ ಬಳ್ಳಿಯಂತೆ ಇಳಿಯುವ ಹಿಟ್ಟು ತುಂಡಾಗದಿದ್ದಲ್ಲಿ ಸರಿಯಾಗಿದೆ ಎಂದೇ ತಿಳಿಯಿರಿ.   ಚಕ್ಕುಲಿ ಒರಲಿನೊಳಗೆ ಹಿಡಿಸುವ ಗಾತ್ರದ ಉಂಡೆ ಮಾಡಿ ಪಾಲಿಥೀನ್ ಹಾಳೆ ಮೇಲೆ ಜಿಡ್ಡು ಸವರಿ ಒತ್ತಿ ಇಟ್ಟುಕೊಳ್ಳಿ. 

ಎಣ್ಣೆ ಬಿಸಿಯಾಗಿದೆಯಾ,  ತಿಳಿಯುವುದು ಹೇಗೆ?
ಚಿಕ್ಕ ಕಡ್ಳೇ ಗಾತ್ರದ ಹಿಟ್ಟನ್ನು ಎಣ್ಣೆಗೆ ಹಾಕಿ ನೋಡಿ,  ಮೇಲೆ ತೇಲಿ ಬಂತೇ,  ಎಣ್ಣೆ ಕಾದಿದೆ.  ಬಾಣಲೆ ದಪ್ಪವಾಗಿರಬೇಕು,  ಅರ್ಧಕ್ಕಿಂತ ಹೆಚ್ಚು ಎಣ್ಣೆ ಎರೆಯಬಾರದು,  ಉರಿ ಕೂಡಾ ಸಮಪ್ರಮಾಣದಲ್ಲಿರಬೇಕು.   ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮಾಡುವಾಗ ಸಾಕಷ್ಟು ಮುಂಜಾಗ್ರತೆ ಅವಶ್ಯ.

ಕಾದ ಎಣ್ಣೆಗೆ ಒಂದೊಂದಾಗಿ ಇಳಿಸಿ.
ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ ಬಿಡಿ.
ಅರ್ಧ ಬೆಂದಾಗ ಮಗುಚಿ ಹಾಕಿ.
ಹೊಂಬಣ್ಣ ಬಂದಾಗ ಕಣ್ಣುಸಟ್ಟುಗದಲ್ಲಿ ತೆಗೆದು ತೂತಿನ ಪಾತ್ರೆಗೆ ಹಾಕಿ.
ಚೆನ್ನಾಗಿ ಆರಿದ ಮೇಲೆ ಡಬ್ಬಾದಲ್ಲಿ ತುಂಬಿಸಿ.
ಮಕ್ಕಳಿಗೆ ಕೊಟ್ಟು ನೀವೂ ತಿನ್ನಿ.





ಮೊದಲ ಬಾರಿ ಚಕ್ಕುಲಿ ಮಾಡಲು ಹೊರಟವರಾಗಿದ್ದರೆ ಹೀಗೆ ಧಿಡೀರ್ ಚಕ್ಕುಲಿ ಪ್ರಯತ್ನಿಸಿ.   

ಧಿಡೀರ್ ಚಕ್ಕುಲಿ 
ಒಂದು ಲೋಟ ಅಕ್ಕಿ ಹಿಟ್ಟು.   ಮುಂಜಾನೆಯ ತಿಂಡಿ ತೆಳ್ಳವು ಆಗಿದ್ದರೆ,  ಉಳಿದ ಹಿಟ್ಟನ್ನು ಉಪಯೋಗಿಸಬಹುದು.    ಹಿಟ್ಟಿನ ನೀರಿನಂಶ ಬಸಿದು ತೆಗೆದರಾಯಿತು.
ಒಂದು ಹಿಡಿ ಅವಲಕ್ಕಿಯನ್ನು ಹುರಿದು ಹುಡಿ ಮಾಡಿ,  ಅಕ್ಕಿಹಿಟ್ಟಿನೊಂದಿಗೆ ಸೇರಿಸಿ.
ಉಪ್ಪು,  ಅಭಿರುಚಿಗೆ ತಕ್ಕಂತೆ ಮಸಾಲೆ ಹುಡಿ ಹಾಕಿ ಕೊಳ್ಳಿ.
ಚಕ್ಕುಲಿ ಒರಲಿನಲ್ಲಿ ಒತ್ತಲು ಬರುವಂತೆ ಗಟ್ಟಿಯಾಗಿ ಕಲಸಿ ಅರ್ಧ ಗಂಟೆ ಮಚ್ಚಿ ಇಡಿ.
ತೆಂಗಿನೆಣ್ಣೆಯಲ್ಲಿ ಕರಿದು ತೆಗೆಯಿರಿ.
ಕೋಡುಬಳೆ ಬೇಕಾದರೂ ಮಾಡಿ.  ಅಡ್ಡಿಯಿಲ್ಲ!



ಗೋಧಿ ಹಿಟ್ಟಿನ ಚಕ್ಕುಲಿ
2 ಕಪ್ ಗೋಧಿ ಹಿಟ್ಟು
ಗೋಧಿ ಹಿಟ್ಟನ್ನು ಒಣ ತಪಲೆಯೊಳಗಿಟ್ಟು ಉಗಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ,  ನೀರಾವಿ ಹಿಟ್ಟಿಗೆ ಬೀಳದಂತೆ ಜಾಗ್ರತೆ ವಹಿಸಿ.
ಹೀಗೂ ಮಾಡಬಹುದು,  ಮೈಕ್ರೋವೇವ್ ಒವನ್ ಒಳಗಿಟ್ಟು ತೆಗೆಯಿರಿ,  3-4 ನಿಮಿಷ ಸಾಕು.
ಆರಿದ ನಂತರ ಹುಡಿಯನ್ನು ಬಿಡಿಸಿಕೊಳ್ಳಿ,   ಎರಡು ಕಪ್ ಹುಡಿಗೆ ಒಂದು ಕಪ್ ನೀರು ಸಾಕು,  ಅಗತ್ಯದ ವಸ್ತುಗಳನ್ನು ಸೇರಿಸಿ,  ಮುದ್ದೆ ಕಟ್ಟಿ ಚಕ್ಕುಲಿ ಸುತ್ತಿ,  ಎಣ್ಣೆಯಲ್ಲಿ ಕರಿಯಿರಿ.   
ಇದೇ ಕ್ರಮದಲ್ಲಿ ಮೈದಾ ಹಿಟ್ಟಿನಿಂದಲೂ ಚಕ್ಕುಲಿ ತಯಾರಿಸಲು ಸಾಧ್ಯವಿದೆ.





ಕಡ್ಲೇ ಹಿಟ್ಟಿನ ಚಕ್ಕುಲಿ
ಒಂದು ಕಪ್ ಕಡ್ಲೇ ಹಿಟ್ಟು
3  ಕಪ್ ಅಕ್ಕಿ ಹಿಟ್ಟು
ಕಡ್ಲೇ ಹಿಟ್ಟನ್ನು ಹುರಿಯುವ ಅವಶ್ಯಕತೆ ಇಲ್ಲ,  ಹಾಗೇನೇ ಕಲಸಿಕೊಂಡರಾಯಿತು.
ಅಗತ್ಯವಿರುವ ಸಾಮಗ್ರಿಗಳನ್ನು ಕೂಡಿಸಿ ಚಕ್ಕುಲಿ ಮಾಡಿಕೊಳ್ಳಿ.  ಇದೂ ಬೇಗನೆ ಮಾಡಿಕೊಳ್ಳುವಂಥದ್ದು.

ಹೆಸರು ಬೇಳೆ ಚಕ್ಕುಲಿ
ಒಂದು ಕಪ್ಪು ಹೆಸರು ಬೇಳೆ
3 ಕಪ್ ಅಕ್ಕಿ ಹುಡಿ
ಇಲ್ಲಿ ಹೆಸರು ಬೇಳೆಯನ್ನು ಬೇಳೆ ಮುಳುಗುವಷ್ಟು 3 ಕಪ್ ನೀರೆರೆದು ಮೆತ್ತಗೆ ಬೇಯಿಸಿ.  ಆರಿದ ನಂತರ ನುಣ್ಣಗೆ ಅರೆಯಿರಿ.  ಹಿಟ್ಟು ಕಲಸುವಾಗ ಬೇರೆ ನೀರು ಸೇರಿಸುವ ಅಗತ್ಯವಿಲ್ಲ.   ಮಿಕ್ಕೆಲ್ಲ ವಿಧಾನ ಇತರ ಚಕ್ಕುಲಿಗಳಂತೆ.

ಹುರಿಗಡಲೆ ಚಕ್ಕುಲಿ
ಒಂದು ಕಪ್ ಹುರಿಗಡಲೆ
3 ಕಪ್ ಅಕ್ಕಿಹುಡಿ
ಇಲ್ಲಿ ಹುರಿಗಡಲೆಯನ್ನು ಹುರಿಯಬೇಕಾಗಿಲ್ಲ,   ನುಣ್ಣಗೆ ಹುಡಿ ಮಾಡಿಕೊಂಡರಾಯಿತು.   





ಬಟಾಟೆ ಚಕ್ಕುಲಿ
2 ಹದ ಗಾತ್ರದ ಬಟಾಟೆ
2 ಕಪ್ ಅಕ್ಕಿಹುಡಿ
ಕಾಲು ಕಪ್ ಹುರಿಗಡಲೆ
ಲಿಂಬೆ ಗಾತ್ರದ ಬೆಣ್ಣೆ
ಬಟಾಟೆ ಮೆತ್ತಗೆ ಬೇಯಿಸಿ.  ಬೆಂದ ಬಟಾಟೆಯನ್ನು ತಣ್ಣೀರಿನಲ್ಲಿ ಹಾಕಿಡಿ,  ಸಿಪ್ಪೆ ತೆಗೆಯಲು ಸುಲಭ.  ಮಿಕ್ಸಿಯಲ್ಲಿ ನೀರು ಹಾಕದೆ ಅರೆದು ತೆಗೆಯಿರಿ.
ಹುರಿಗಡಲೆಯನ್ನು ನುಣ್ಣಗೆ ಹುಡಿ ಮಾಡಿ.
ಅರೆದ ಬಟಾಟೆಗೆ ಉಪ್ಪು,  ಮಸಾಲೆಹುಡಿ,  ಅಕ್ಕಿ ಹುಡಿ,  ಹುರಿಗಡಲೆ ಹುಡಿ,  ಬೆಣ್ಣೆ ಸೇರಿಸಿ,  ಚಪಾತಿ ಮುದ್ದೆಯಂತೆ ಕಲಸಿಕೊಳ್ಳಿ,   ನೀರು ಹಾಕುವ ಅಗತ್ಯ ಬಾರದು.

ಚಕ್ಕುಲಿ ಒರಲು ಇಲ್ಲವೇ,  ಕೋಡುಬಳೆ ಹೊಸೆಯಿರಿ,  ವಡೆ ತಟ್ಟಿಕೊಳ್ಳಿ,  ಪುಟ್ಟ ನೆಲ್ಲಿ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಂಡು ಕರಿಯಿರಿ,  ಉಂಡ್ಳಕಾಳು ಅನ್ನಿ.   ಚಕ್ಕುಲಿಯ ಹಲವು ವಿಧಾನಗಳನ್ನು ತಿಳಿಯುವುದರೊಂದಿಗೆ ಚಕ್ಕುಲಿ ಸುತ್ತುವ ಮೂಲಸೂತ್ರವೂ ತಿಳಿದಂತಾಯಿತು.   ಹೊಸ ಹೊಸ ಕರಿದ ತಿಂಡಿಗಳ ಶೋಧನೆ ಮಾಡಲು ಚಕ್ಕುಲಿ ಸುತ್ತೋಣ.

ಚಕ್ಕುಲಿ ತಯಾರಿ ಒಂದು ಉತ್ತಮ ಗೃಹೊದ್ಯಮವೂ ಹೌದು.   ಇದನ್ನೇ ಜೀವನೋಪಾಯದ ದಾರಿಯಾಗಿ ಆರಿಸಿಕೊಂಡವರು ನಮ್ಮ ನಡುವೆ ಸಾಕಷ್ಟು ಮಂದಿಯಿದ್ದಾರೆ.   




ಇಷ್ಟೆಲ್ಲಾ ಚಕ್ಕುಲಿ ವೈವಿಧ್ಯಗಳನ್ನು ಬರೆದು,  ಫೋಟೋ ತೆಗೆದು ಬ್ಲಾಗ್ ಒಳಗೆ ಅಚ್ಚುಕಟ್ಟಾಗಿ ಸೇರಿಸುತ್ತಾ ಇದ್ದಾಗ  ನನ್ನ ಮಾವ,  ಮಕ್ಕಳ ಅಜ್ಜನ ನೆನಪು ಬಂದೇ ಬಿಟ್ಟಿತು.   ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಆಳುಕಾಳುಗಳ ಉಸ್ತುವಾರಿಯನ್ನೂ ನಿಭಾಯಿಸುತ್ತಿದ್ದ ನನಗೆ ಮಕ್ಕಳಿಗಾಗಿ ತಿಂಡಿತಿನಿಸುಗಳನ್ನು ಮಾಡಿಕೊಡಲು ವ್ಯವಧಾನವೂ ಸಿಗುತ್ತಿರಲಿಲ್ಲ.   ಆ ಹೊತ್ತಿಗೆ ಮಾವನೇ ಮಕ್ಕಳ ಅಪೇಕ್ಷೆಯನ್ನು ಪೇಟೆಯಿಂದ ಕರುಕುರು ತಿಂಡಿಗಳನ್ನು ತಂದು ಕೊಟ್ಟು ಪೂರೈಸುತ್ತಿದ್ದರು.  

  ಮೊದಲ ಬಾರಿ ಚಕ್ಕುಲಿ ತಯಾರಿಸಿದಾಗ ವಯೂಸಹಜವಾಗಿ ಹಲ್ಲುಗಳು ದುರ್ಬಲವಾಗಿದ್ದ ಮಾವ  " ನಾನು ಹೇಗೆ ತಿನ್ನಲೀ " ಅಂದರು.   ಅಜ್ಜನಿಗೆ ತಿನ್ನಲಾಗದ ಚಕ್ಕುಲಿಯನ್ನು ನಾನು ಹೇಗೆ ತಿನ್ನಲಿ ಎಂಬ ವೈಖರಿ ಮಗನೂ ಪ್ರದರ್ಶಿಸಿದ.     ಮೊಸರಿನಲ್ಲಿ ಹಾಕಿಟ್ಟು ಸಂಜೆಯ ಕಾಫಿಯೊಂದಿಗೆ ಚಕ್ಕುಲಿ ಬಂದಿತು.   ಅಜ್ಜ ಮೊಮ್ಮಗ ಬಹುತ್ ಖುಷ್ ಹೋ ಗಯೇ...

Posted via DraftCraft app

Saturday, 3 May 2014

ಎಲೆ ಎಲೆ ಮಾವಿನಹಣ್ಣೇ








ಮಾವಿನಹಣ್ಣೇ ಬಂದೆಯ
ಸಿಹಿ ಸಿಹಿ ಹಣ್ಣೇ ಎಂದೆಯ
ಗೊಜ್ಜೂ ಸಾರೂ ತಿಂದೆಯ
ಸಾಸಮೆ ಮಾಡೂ ಎಂದೆಯ
ರಸಾಯನ ಇರಲೀ ಅಂದೆಯ 
ಮಾಂಬಳ ಎರೆಯಲು ಬಂದೆಯ |

ಭರಣೀ ತೊಳೆದು ಇಟ್ಟೆಯ
ಉಪ್ಪೂ ಬೆರೆಸಿ ಇಟ್ಟಿಯ
ಬಗೆ ಬಗೆ ವ್ಯಂಜನ ತರ್ತೀಯ
ಹಣ್ಣೂ ಉಪ್ಪಾಡೂ ಆಗ್ತಿಯ
ಹಾಗೇ ಗುಳುಂ ತಿಂದೀಯ
ಹ್ಞಾಂ ಗೊರಟೂ ತೆಗೆದಿಟ್ಟೀಯ |

ಕಲ್ಯಾಣಿ ತೋಟದಿಂದ ಬಂದಳು.    ದೂರದ ಪಳ್ಳಿಯಿಂದ ಬಾಂಙ್ ಕೇಳುತ್ತಲೇ ಅವಳ ಮದ್ಯಾಹ್ನದ ಕೆಲಸ ಮುಗಿಯಿತು.   ಇವತ್ತು ಬರುವಾಗಲೇ ಮುಖವರಳಿದೆ.   ನನ್ನನ್ನು ಕಂಡೊಡನೆ  " ಇನ್ನು ಗಂಜಿಯೂಟಕ್ಕೆ ಕೊದ್ದೆಲ್ ಬೇಡಾ ಅಕ್ಕ "
ನನಗೂ ಅವಳ ಮಹದಾನಂದದ ಕಾರಣ ತಿಳಿಯಿತು,  ಅವಳ ಕೈಯಲ್ಲಿದ್ದ ಅಡಿಕೆ ಹಾಳೆಯ ಚೀಲದೊಳಗಿನಿಂದ ಕಾಟ್ಟು ಮಾವಿನಹಣ್ಣುಗಳು ಇಣುಕುತ್ತಿದ್ದುವು.  

" ಹೌದೂ,  ಗಂಜಿಯೂಟಕ್ಕೆ ಮಾವಿನಹಣ್ಣಿನ ಉಪ್ಪು ಮೆಣಸು ಮಾಡಿದರಾಯ್ತಲ್ಲ , ಇದು ಯಾವ ಮರದ ಹಣ್ಣು ?" 
" ಇದು ಚಟ್ಟೆ ಮಾವಿನಹಣ್ಣು... ಇನ್ನೊಂದ್ ನಾಲ್ಕು ದಿನ ಕಳೀಲಿ,  ಗೋಣಿ ಗೋಣಿ ಹಣ್ಣು ಸಿಕ್ಕೀತು " ಅಂದಳು.
ಈ ಮಾವಿನ ಗೊರಟು ಚಪ್ಪಟೆಯಾಗಿರುವುದರಿಂದ ಇದು ನಮ್ಮ ಬಾಯಲ್ಲಿ ಚಟ್ಟೆ ಮಾವಿನಹಣ್ಣು ಅಗ್ಹೋಗಿದೆ.

ಮಿಡಿ ಉಪ್ಪಿನಕಾಯಿ ಹಾಕಿದ ಬೆನ್ನಿಗೇ ಮಾವಿನ ಹಣ್ಣುಗಳ ಕಾಲ ಬಂತೆಂದೇ ಲೆಕ್ಕ.   ಒಂದೊಂದು ಮರದ ಹಣ್ಣೂ ಒಂದೊಂದು ರುಚಿ,  ಪರಿಮಳ.   ಮರದ ಬುಡದಲ್ಲಿ ಬಿದ್ದ ಹಣ್ಣುಗಳನ್ನು ಹೆಕ್ಕಿ ತರುವುದಷ್ಟೇ ಅಲ್ಲ,  ಬಗೆಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸುವುದೇ ಗ್ರಾಮೀಣ ಗೃಹಿಣಿಯರ ಉದ್ಯೋಗ.   ಆಪ್ತೇಷ್ಟರಿಗೆ,  ಮಿತ್ರವರ್ಗದವರಿಗೆ ಹಣ್ಣುಗಳನ್ನು ಹಂಚುವುದೂ ಇದ್ದೇ ಇರುತ್ತದೆ.   ಅದರ ಜೊತೆಜೊತೆಗೆ ಹೆಚ್ಚುವರಿ ಹಣ್ಣುಗಳನ್ನು ಮುಂದಿನ ಮಳೆಗಾಲದ ಉಪಯೋಗಕ್ಕಾಗಿ ಮಾಂಬಳ ಎರೆಯುವಂತಹ ಜವಾಬ್ದಾರಿಯೂ ಇರುತ್ತದೆ.

" ಮಾಂಬಳ ಅಂದ್ರೇನು ?  ಹೇಗೆ ಮಾಡ್ತೀರಾ ?"

ತಟ್ಟೆಯ ಮೇಲೆ ತೆಳ್ಳಗಿನ ಹತ್ತಿಯ ಬಟ್ಟೆ ಹರಡಿಟ್ಟು ಪ್ರತಿದಿನವೂ ಮಾವಿನ ಹಣ್ಣಿನ ರಸವನ್ನು ಎರೆಯುತ್ತಾ,  ನೀರು ಸ್ವಲ್ಪವೂ ಸೇರಿಸಬಾರದು,  ತುಸು ಉಪ್ಪು ಹಾಕಿಕೊಳ್ಳಬಹುದು. ಬಿಸಿಲಿನಲ್ಲಿ ಒಣಗಿಸುತ್ತಾ ದಪ್ಪ ಪದರವಾದೊಡನೆ ತುಂಡು ಮಾಡಿಟ್ಟು ಹಿಂಬದಿಯನ್ನೂ ಚೆನ್ನಾಗಿ ಒಣಗಿಸಿ ತೆಗೆದಿರಿಸಿ ಡಬ್ಬದಲ್ಲಿ ತುಂಬಿಸಿಟ್ಟುಕೊಂಡರಾಯಿತು.   ಇದು ಮಾಂಬಳ.  ಮಳೆಗಾಲದಲ್ಲಿ ಮಾವಿನ ಗೊಜ್ಜು ಪುನಃ ಮಾಡಬಹುದು,  ಹಾಗೇನೇ ಚಾಕ್ಲೇಟ್ ತಿಂದಂತೆ ತಿಂದರೂ ಆದೀತು.   ನಗರವಾಸಿಗಳಿಗೂ ಮಾರ್ಕೆಟ್ ಧಾರಣೆ ಕಡಿಮೆ ಇದ್ದಾಗ ಮಾವಿನಹಣ್ಣುಗಳನ್ನು ಕೊಂಡು ತಂದು ಮಾಂಬಳ ಎರೆಯಬಹುದು.   ಗೃಹಕೃತ್ಯ,  ಆಫೀಸ್ ಕೆಲಸ ಎಂದು ನಿಭಾಯಿಸಲು ಕಷ್ಟ ಎನಿಸಿದರೆ ಮೈಕ್ರೋವೇವ್ ಅವೆನ್ ಇದೆಯಲ್ಲ,  ಅದರಲ್ಲಿಟ್ಟು ಒಣಗಿಸಿ. 

ಮಾವಿನಮರದ ಬುಡದಲ್ಲಿ ಗೋಣಿ ತುಂಬ ದೊರೆಯುವ ಮಾವಿನಹಣ್ಣುಗಳನ್ನು ಮಾಂಬಳ ಎರೆಯಲು ತಟ್ಟೆ ಸಾಲದು,  ದೊಡ್ಡ ಚಾಪೆಯನ್ನು ಬಳಸಬೇಕಾಗುತ್ತದೆ.  ಹಾಗೂ ಈ ಗೃಹೋದ್ಯಮಕ್ಕೆ ಮನೆಯ ಹಿರಿಕಿರಿಯರೂ ಸಹಕರಿಸಿದರೆ ಮಾತ್ರ ಮಾಡಿಕೊಳ್ಳಬಹುದು.   ಈ ಮಾಂಬಳಕ್ಕೂ ಉತ್ತಮ ಮಾರುಕಟ್ಟೆ ಧಾರಣೆಯೂ ಇದೆ,  ವಿದೇಶಗಳಿಗೂ ರಪ್ತು ಆಗುವಂಥ ವಸ್ತು.

ನೀರು ಮಾವಿನಕಾಯಿ:
ಮಾವಿನಕಾಯಿ ಗೊರಟು ಕಟ್ಟಿದ ನಂತರ ಉಪ್ಪು ಬೆರಸಿ ಭರಣಿಯಲ್ಲಿ ಅಥವಾ ಮಣ್ಣಿನ ಮಂಡಗೆಯಲ್ಲಿ ತುಂಬಿಸಿ,  ಮೇಲಿನಿಂದ ಕುದಿಸಿದ ನೀರು ಎರೆದು,   ಆರಿದ ನಂತರ ಭರಣಿಯ ಬಾಯಿ ಬಿಗಿದು ಕಟ್ಟಬೇಕು.  ಉಪ್ಪು ಕಡಿಮೆಯಾಗಬಾರದು,  ಕೆಟ್ಟುಹೋದೀತು. ಉಪ್ಪು ಹೆಚ್ಚಾದ್ರೆ ಏನು ಗತಿ ಎಂಬ ಚಿಂತೆ ಬೇಡ,   ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ಹಾಕಿಟ್ಟಿರಿ,  ಉಪ್ಪು ಬಿಡುತ್ತದೆ.   ಮನೆ ತುಂಬ ಜನ ಇರುವಲ್ಲಿ,  ಆಳುಕಾಳುಗಳೂ ದಿನನಿತ್ಯ ಇರುವ ಸಂದರ್ಭದಲ್ಲಿ,  ತರಕಾರಿ ಏನೂ ಸಿಗದೇ ಇರುವ ಆಷಾಢ ಮಾಸದಲ್ಲಿ,  ಇದು ಮಳೆಗಾಲದ ಅಡುಗೆ ಉಪಯೋಗಕ್ಕಿರುವಂಥಾದ್ದು.  ಇದೆಲ್ಲ ಹಿಂದಿನ ಕಾಲದ ಕಥೆ.   ಈಗಲೂ ಆಸಕ್ತರು ಅವಶ್ಯವಿದ್ದಷ್ಟು ನೀರು ಮಾವಿನಕಾಯಿ ( ನೀರ್ ಕುಕ್ಕು )  ಹಾಕಿಟ್ಟುಕೊಳ್ಳುತ್ತಾರೆ.   ಭರಣಿಯೇನೂ ಬೇಡ,   ಗಾಳಿ ಒಳ ಹೋಗದಂತೆ ಮುಚ್ಚಳವಿರುವ ದೊಡ್ಡ ಪ್ಲಾಸ್ಟಿಕ್ ಜಾಡಿ ಇದ್ದರೆ ಸಾಕು.    

ಫಲಭರಿತ ವೃಕ್ಷದ ಅಡಿಯಿಂದ ಹಣ್ಣುಗಳನ್ನು ಹೆಕ್ಕುತ್ತಿರಬೇಕಾದರೆ,  ಅಡವಿಯಲಿ ಹುಟ್ಟಿ ಬೆಳೆವಂತಹ ವೃಕ್ಷಗಳಿಗೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ ಎಂದ ನಮ್ಮ ಹರಿದಾಸರ ವಾಣಿ ಈ ವನ್ಯವೃಕ್ಷವನ್ನು ಅನ್ವಯಿಸಿ ಹಾಡಿದ್ದಾಗಿರಬಹುದೇನೋ ಎಂದೂ ಅನ್ನಿಸಿಬಿಟ್ಟಿತು.  ಜಾಗತಿಕ ಮಟ್ಟದಲ್ಲಿ ಇದರಷ್ಟು ತುಂಬಾ ಫಲ ನೀಡುವ ಮರ ಬೇರೂಂದಿಲ್ಲ.   ಇದರ ಮೂಲನೆಲೆ ಭಾರತವೇ ಆಗಿರುವುದರಿಂದ ಸಸ್ಯಶಾಸ್ತ್ರಜ್ಞರು Mangifera indica ಎಂದು ನಾಮಕರಣ ಮಾಡಿರುತ್ತಾರೆ.   ವನ್ಯವೃಕ್ಷವಾದ ಈ ಮರದ ಹಣ್ಣನ್ನು ಕಾಟ್ಟು ಮಾವು ಎಂದೇ ನಮ್ಮ ದಕ್ಷ್ಣಿಣ ಕನ್ನಡಿಗರು ಹೇಳುವ ವಾಡಿಕೆ. ಬೃಹತ್ ವೃಕ್ಷವಾಗಿ ನೂರು ಅಡಿ ಮೀರಿ ಬೆಳೆಯುವ ಕಾಟ್ಟು ಮಾವಿನ ಮರದ ಕಾಂಡವೂ 12-14 ಅಡಿ ಸುತ್ತಳತೆ ಹೊಂದಿರುತ್ತದೆ,   20 ಆಡಿ ಸುತ್ತಳತೆ ಇರುವುದೂ ಇದೆ.   ಕಾಳಿದಾಸನ ಕಾವ್ಯದಲ್ಲಿಯೂ ಮಾವಿನ ವರ್ಣನೆ ಇದೆ,  ಮಾವು ನಮ್ಮ ದೇಶದ ರಾಷ್ಟೀಯ ಫಲ ಕೂಡಾ ಹೌದು.

ಒಂದು ಮರದ ಹಣ್ಣಿನ ರುಚಿ,  ಪರಿಮಳ,  ಗಾತ್ರ ಮತ್ತೊಂದು ಮರಕ್ಕೆ ಇಲ್ಲವೇ ಇಲ್ಲ.   ಕೆಲವು ಕಸಿ ಹಣ್ಣಿನಂತೆ ಗುಳಭರಿತವಾಗಿ,  ಗಾತ್ರದಲ್ಲಿ ದೊಡ್ಡ ಹಣ್ಣುಗಳಾಗಿರುತ್ತವೆ.  ಇನ್ನೂ ಹಲವು ಕೇವಲ ಸಿಪ್ಪೆ ಗೊರಟು ಅನ್ನಿಸಿಕೊಳ್ಳುತ್ತವೆ,  ಆದರೂ ತನ್ನ ವಿಶಿಷ್ಟ ಸುವಾಸನೆಯಿಂದ ಗ್ರಾಹಕರನ್ನು ಬರಮಾಡಿಕೊಳ್ಳುತ್ತವೆ.  ಈ ಕಾಟ್ಟು ಮಾವುಗಳ ಗುಣಧರ್ಮಗಳನ್ನು ಬರೆಯುತ್ತಾ ಹೋದರೆ ದೊಡ್ಡ ಪ್ರಬಂಧವೇ ಆದೀತು. 

 ಅಜ್ಜನ ಮನೆಯಲ್ಲಿ ಇದ್ದ ಒಂದು ಮಾವಿನ ಮರ,   ಕಸಿಮಾವಿನಂತೆ ದೊಡ್ಡದು,  ಅದನ್ನು ಕರ್ಪೂರ ಮಾವಿನ ಹಣ್ಣು ಎಂದು ಹೆಸರಿಟ್ಟು ಕೊಂಡಿದ್ದರು.  ನಾವು ಮಕ್ಕಳೆಲ್ಲ ಹೆಕ್ಕಿ ತಂದ ಹಣ್ಣುಗಳಲ್ಲಿ ಕರ್ಪೂರ ಹಣ್ಣನ್ನು ಮಾತ್ರ ಒಳಗಿಟ್ಟು ನಮ್ಮಜ್ಜಿ ಉಳಿದ ಕಾಟಂಗೋಟಿ ಹಣ್ಣುಗಳನ್ನು ಮಾಂಬಳ ತಯಾರಿಗೆ ಹೊರಗಿಡುತ್ತಿದ್ದರು.   ಅಪ್ಪನ ಮನೆಯಲ್ಲೂ ಇಂತಹುದೇ ಒಂದು ಮರ,  ಇದಕ್ಕೂ ಒಂದು ಹೆಸರಿದೆ,  ಒಳ್ಳೇ ಹಣ್ಣಿನ ಮರ.   ಗಾಳಿ ಬೀಸಿದಾಗ ಬೀಳುವ ಒಳ್ಳೇ ಹಣ್ಣನ್ನು ಹೆಕ್ಕಿಕೊಳ್ಳಲು ಹಿರಿಕಿರಿಯರ ದಂಡೇ ಓಡಿ ಬರ್ತಾ ಇತ್ತು.   ನಮ್ಮ ಹಿರಣ್ಯದಲ್ಲೂ ಇಂತಹದ್ದೇ ಇನ್ನೊಂದು ಮರವಿದೆ.   ಅದು ನೀರಿನ ಸುರಂಗದ ಪಕ್ಕ ಇದೆ,  ಇದಕ್ಕೂ ಸುರಂಗದ ಕಸಿ ಮಾವು ಎಂದು ಹೆಸರಿಸಿಕೊಂಡಿದ್ದೇವೆ.   ಈ ಮೂರು ಹಣ್ಣುಗಳೂ ರುಚಿ, ಪರಿಮಳಗಳಲ್ಲಿ ವಿಭಿನ್ನವಾಗಿವೆ.   ಇಂತಹ ಮಾವಿನಲ್ಲಿ ವೈವಿಧ್ಯ ನಮ್ಮ ಪರಂಪರೆಯಿಂದ ಬಂದಿದೆ.   ನಮ್ಮ ಪಶ್ಚಿಮಘಟ್ಟ ಅರಣ್ಯವಲಯದೊಳಗೆ ಅದೆಷ್ಟೋ ಮಾವಿನಮರಗಳು ಇದ್ದಿರಬಹುದು.   ಕಾಡು ಕಡಿದು ನಾಡು ಬೆಳೆಸುವ ಆತುರದಲ್ಲಿ ಅದೆಷ್ಟು ವೃಕ್ಷತಳಿಗಳು ನಾಶವಾಗಿವೆ ?  ಗೊತ್ತಿಲ್ಲ.   ವೃಕ್ಷಬೀಜ ನ್ಯಾಯದ ಹಾಗೆ ಒಮ್ಮೆ ಅಳಿದ ತಳಿಗೆ ಮರುಹುಟ್ಟು ಕೊಡಲಾಗದು.

ಇದೆಲ್ಲ ಇರಲಿ,  ಮಾವಿನ ಹಣ್ಣಿನ ರಸರುಚಿಗಳ ಪಟ್ಟಿಯೇ ದೊಡ್ಡದಿದೆ.   ಕಾಲೇಜ್ ವ್ಯಾಸಂಗ ಮಾಡುತ್ತಿರುವ ನನ್ನ ಮಗಳೂ ಮೊನ್ನೆ ತಾನೂ ಸ್ನೇಹಿತೆಯರೂ ಕೂಡಿ ತಯಾರಿಸಿದ ಮಾವಿನ ಸಾರು..... ನನಗೆ ಮೆಸೆಂಜರ್ ಮೂಲಕ ಫೋಟೋ ಕಳುಹಿಸಿದಳು.    ಕುದಿಸಿ ಒಗ್ಗರಣೆ ಕೊಟ್ಟಿದ್ದು ಸಾರು.   ಕುದಿಸದೇ ಒಗ್ಗರಣೆ ಕೊಟ್ರೆ ಗೊಜ್ಜು.   ಸಾಸಿವೆ,  ಹಸಿಮೆಣಸು ಕಾಯಿತುರಿ ಅರೆದು ಸೇರಿಸಿ,  ನಮ್ಮ ಕಡೆ ಸಾಸಮೆ ಆಯ್ತು,  ಅಚ್ಚಗನ್ನಡದಲ್ಲಿ ಬೇಕಿದ್ರೆ ಮಾವಿನ ಸಾಸಿವೆ ಅನ್ನಿ,   ಏನೇ ಮಾಡುವುದಿದ್ದರೂ ರಾಶಿ ರಾಶಿ ಬೆಲ್ಲ ದಾಸ್ತಾನು ಇಟ್ಟುಕೊಳ್ಳಿ.

ಬೇಸಿಗೆಯ ಕಾಲದಲ್ಲೇ ಆಗಮಿಸುವ ಈ ಮಾವಿನ ಹಣ್ಣಿನ ಶರಬತ್ ಬಿಸಿಲಿನ ತಾಪವನ್ನು ಶರೀರದಿಂದ ಓಡಿಸುವ ಶಕ್ತಿ ಹೊಂದಿದೆ ಹಾಗೂ ಪಚನಾಂಗಗಳ ಕಾರ್ಯಕ್ಷಮತೆಯೂ ವೃದ್ಧಿಸುವುದು,  ಮಜ್ಜಿಗೆ ಎರೆದು ಕುಡಿದು ಲಸ್ಸೀ ಅನ್ನಿ,  ಹಾಲು ಎರೆದು ಕುಡಿದು ಮಿಲ್ಕ್ ಶೇಕ್ ಅನ್ನಿ,  ಒಟ್ಟಿನಲ್ಲಿ ಕುಡಿಯಿರಿ.   ಬಾಯಿರುಚಿಯನ್ನೂ ಹೆಚ್ಚಿಸುವ ಈ ಹಣ್ಣು ಅಡುಗೆಮನೆಗೆ ಬಂತೆಂದರೆ ಅನ್ನದ ತಪಲೆ ಖಾಲಿಯಾಯ್ತೇಕೆ ಎಂದು ಬಾಯ್ಬಿಡದಿರಿ.

ಊಟದ ರುಚಿ ಹೆಚ್ಚಿಸುವ ಮಾವಿನ ಖಾದ್ಯಗಳನ್ನು ಬರೆಯ ಹೊರಟರೆ ಒಂದು ಗ್ರಂಥವೇ ಸಿದ್ಧವಾದೀತು.   
ಮಾವಿನ ಕಾಯಿ ಪಚ್ಚಡಿ:
ಅವಶ್ಯವಿದ್ಷಷ್ಟು ತೆಂಗಿನ ತುರಿ 
ಮಾವಿನಕಾಯಿ ಹೋಳುಗಳು, ಸಿಪ್ಪೆ ತೆಗೆದು ತುರಿದರೆ ಉತ್ತಮ.
ಹುರಿದ ಕಡ್ಲೇಬೇಳೆ
ಒಣಮೆಣಸು ಅಥವಾ ಹಸಿಮೆಣಸು
ರುಚಿಗೆ ಉಪ್ಪು
ಕರಿಬೇವು ಹಾಗೂ ಒಗ್ಗರಣೆ ಸಾಮಗ್ರಿ
ಎಲ್ಲವನ್ನೂ ನೀರು ಹಾಕದೆ ಅರೆದು ಒಗ್ಗರಣೆ ಕೂಡಿ.   ಈ ಥರದ ಪಚ್ಚಡಿಗೆ ನೆಕ್ಕರೆ ಮಾವಿನಕಾಯಿ ಚೆನ್ನಾಗಿರುತ್ತದೆ. ನೆಕ್ಕರೆ ಮಾವಿನಕಾಯಿಗೆ ಹೊಳೆಮಾವು ಅಂತಲೂ ಹೆಸರಿದೆ.   ಸುವಾಸನಾಭರಿತವಾದ ಈ ಪಚ್ಚಡಿ ಒಂದಿದ್ದರೆ ಸಾಕು,  ಉಪ್ಪಿನಕಾಯಿ ಬೇಕಾಗುವುದೇ ಇಲ್ಲ.  

ಶಿರಾ/ಕೇಸರಿಬಾತ್ ಎಂಬ ಸಿಹಿ ಭಕ್ಷ್ಯ ಎಲ್ಲರಿಗೂ ತಿಂದು ಗೊತ್ತು.  ಮಾವಿನಹಣ್ಣಿನ ಕೇಸರಿಬಾತ್ ಅತಿ ವೇಗವಾಗಿ ಈ ಸಮಯದಲ್ಲಿ ಮಾಡಬಹುದು,   ಸಂಜೆಗೊಂದು ತಿನಿಸು ದೊರೆಯಿತು ಅನ್ನಿ.

ಚಿರೋಟಿ ರವೆ ಒಂದು ಕಪ್
ಮಾವಿನಹಣ್ಣಿನ ರಸ 2 ಕಪ್
ಸಕ್ಕರೆ ಒಂದು ಕಪ್
ಚಿಟಿಕೆ ಉಪ್ಪು
ತುಪ್ಪ 4 ಚಮಚ

ಚಿರೋಟಿ ರವೆಯನ್ನು ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಬೇಕು.   ದಪ್ಪ ತಳದ ಬಾಣಲೆ ಅವಶ್ಯ.
ಹುರಿದಾಯಿತೇ,  ಮಾವಿನ ರಸ ಎರೆದು ಬೇಯಿಸಿ.
ಬೆಂದಿತೇ,  ಸಕ್ಕರೆ ಸುರುವಿರಿ,  ಚಿಟಿಕೆ ಉಪ್ಪು ಬೀಳಲಿ.
2 ಚಮಚ ತುಪ್ಪ ಎರೆದು ಸಕ್ಕರೆ ಕರಗಿ ರವೆಯೊಂದಿಗೆ ಕೂಡಿಕೊಳ್ಳುವ ತನಕ ಸೌಟಾಡಿಸಿ.
ದ್ರಾಕ್ಷಿ,  ಗೋಡಂಬಿ ಬೇಕಿದ್ದರೆ ಹಾಕಬಹುದು.





ಮಾವಿನ ಹಣ್ಣಿನ ರಸಂ
10-12 ಮಾವಿನ ಹಣ್ಣುಗಳು,   ಸುಲಿದು ಸಿಪ್ಪೆಯಿಂದಲೂ ರಸ ತೆಗೆಯಿರಿ.
ಸಿಹಿ ಬೇಕಿದ್ದಷ್ಟು ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು
ಮಸಾಲೆ ಸಾಹಿತ್ಯ:
2 ಚಮಚ ಕಡ್ಲೇಬೇಳೆ
2 ಚಮಚ ಕೊತ್ತಂಬರಿ
2 ಚಮಚ ಎಳ್ಳು
1 ಚಮಚ ಜೀರಿಗೆ
ಇಂಗು,  2-3 ಒಣಮೆಣಸು
ತುಸು ಎಣ್ಣೆಯಲ್ಲಿ ಘಮ್ ಎಂಬಂತೆ ಹುರಿದುಕೊಳ್ಳಿ,   ನುಣ್ಣಗೆ ಹುಡಿ ಮಾಡಿಟ್ಕೊಳ್ಳಿ.
ಮಾವಿನ ಹಣ್ಣುಗಳನ್ನು  ಸಿಪ್ಪೆಯ ರಸ ಸಹಿತವಾಗಿ ಬೆಲ್ಲ, ಉಪ್ಪು ಸೇರಿಸಿ ಕುದಿಸಿ.
ಒಂದು ಕುದಿ ಬಂದರೆ ಸಾಕು,  ಮಾಡಿಟ್ಟ ಮಸಾಲೆ ಹುಡಿ ಹಾಕಿ,  ಸೌಟಿನಲ್ಲಿ ತಿರುವಿ ಅವಶ್ಯವಿದ್ದರೆ ನೀರು ಎರೆಯಿರಿ.
ಕರಿಬೇವಿನ ಒಗ್ಗರಣೆ ಕೊಡಿ,  ಈ ರಸಂ ಒಂದೆರಡು ದಿನ ಇಟ್ಟುಕೊಳ್ಳಬಹುದು.
ಮಸಾಲೆ ಅರೆಯುವಾಗ ತೆಂಗಿನ ತುರಿಯೊಂದಿಗೆ ಅರೆದಿರೋ,  ಇದು ಮಾವಿನ ಮೆಣಸ್ಕಾಯಿ ಅನ್ನಿಸಿಕೊಳ್ಳುತ್ತದೆ.   ಒಂಥರಾ ಬದಲಾವಣೆಗಾಗಿ ಕಾಯಿ ತುರಿ ಹಾಕದೇ ರಸಂ ಎಂದು ಹೆಸರು ಕೊಟ್ಟಿದ್ದೇನೆ.




ಒಮ್ಮೆ ಏನಾಯ್ತೂಂದ್ರೆ ಚಿಕ್ಕಮ್ಮ ಮುಂಬೈಯಿಂದ ಊರಿಗೆ ಬಂದರು.   ಅವರಿಗೆ ನಮ್ಮ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ,  ಹೊಸ ಮದುಮಕ್ಕಳನ್ನು ಆಶೀರ್ವದಿಸಲು ನಮ್ಮ ಮನೆಗೇ ಬಂದರು.    ಆಗ ಕಾಟ್ಟು ಮಾವಿನಹಣ್ಣುಗಳ ಕಾಲ.   ನಾನೂ ನನಗೆ ತಿಳಿದಂತೆ ಮಾವಿನಹಣ್ಣುಗಳ ಷಡ್ರಸೋಪಚಾರದಿಂದ ಸತ್ಕರಿಸಿದೆ.   ಹಣ್ಣುಗಳ ಸಾಸಿವೆಗೆ ತೆಂಗಿನಕಾಯಿ ಅರೆದೆ,   ಮಾವಿನಹಣ್ಣುಗಳ ರಸಾಯನಕ್ಕಾಗಿ ತೆಂಗಿನಕಾಯಿ ಹಾಲು ತೆಗೆದೆ. ಅಡುಗೆಯೇನೂ ತಿಳಿದಿರದಿದ್ದ ನನ್ನ ನಳಪಾಕದಿಂದ ಸುಪ್ರೀತರಾದ ಚಿಕ್ಕಮ್ಮ ಮಾವಿನಹಣ್ಣಿನ ಹೊಸರುಚಿಯೊಂದನ್ನು ಹೇಳಿಕೊಟ್ಟರು.

" ನಮ್ಮ ಮುಂಬೈಯಲ್ಲಿ ಹೀಗೆ ಹಣ್ಣಿನ ರಸ ತೆಗೆದು,  ಸಕ್ಕರೆ ಹಾಕಿ ಹಾಲು ಎರೆದ್ರೆ ಆಗ್ಹೋಯ್ತು ಆಮ್ರಸ್ "
" ಹೌದಾ,   ಅದನ್ನು ಸಂಜೆ ಮಾಡುವ ಹಾಗಿದ್ರೆ "
" ಇಲ್ಲಿನ ಹಾಗೆ ತೆಂಗಿನಕಾಯಿ ಹಾಕಿ ಅಲ್ಲಿ ಮಾಡಲಿಕ್ಕಾಗುವುದಿಲ್ಲ,  ಅಷ್ಟು ರೇಟ್ ತೆಂಗಿನಕಾಯಿಗೆ ಗೊತ್ತಾ "
" ಓ,  ಹಾಗೋ,  ನಮ್ಮ ಕೊದಿಲ್ ಮೇಲಾರ ಮಾಡುವುದು ಕಷ್ಟವೇ ...."
" ಅದೆಲ್ಲ ಮಾಡುವ ಹಾಗೇ ಇಲ್ಲ. ಏನಿದ್ರೂ ತೊಗರಿಬೇಳೆ ಬೇಯಿಸಿ,  ತರಕಾರಿ ಹಾಕಿ ಒಂದಿಷ್ಟು ಸಾಂಬಾರ್ ಹುಡಿ ಹಾಕೂದು ಮತ್ತೇನಿಲ್ಲ "

     <><><><><><>

  ಬಾಳೆಲೆ ಮೇಲೆ  " ವಿವಾಹ ಭೋಜನವಿದು.... ವಿಚಿತ್ರ ಭಕ್ಷ್ಯಗಳಿವು....."  ಎಂಬಂತೆ ವಿಧವಿಧವಾದ ವ್ಯಂಜನಗಳು ಬಂದವು.   ಭೋಜನವನ್ನು ಉಣ್ಣಲಿಕ್ಕಾಗಿ ನೆಲದ ಪಂಕ್ತಿಯಲ್ಲಿ ಕುಳಿತಿದ್ದೆ,  ಆಗಲೂ ಮಾವಿನಹಣ್ಣುಗಳ ಕಾಲ,   ಮಾವಿನ ಸಾಸಮೆ ಬಂದಿತು.   ಬಡಿಸುವವರು ಎಲ್ಲರ ಬಾಳೆಲೆಗೂ ಮಾವಿನಹಣ್ಣು ಸಿಗುವಂತೆ ಹಾಕುತ್ತಾ ಹೋದರು.   ನನ್ನ ಪಕ್ಕದಲ್ಲಿ ಕುಳಿತಿದ್ದ ತಂಗಿ ಗಾಯತ್ರಿ ಅಂದಳು  " ಎದುರು ಕಡೆ ಕೂತಿದಾರಲ್ಲ ಆ ಹುಡ್ಗೀರು,  ಮಾವಿನಹಣ್ಣನ್ನು ಪಕ್ಕಕ್ಕೆ ತಳ್ಳಿದ್ದು ನೋಡಕ್ಕಾ "

" ಹೌದಲ್ಲ,  ಅವರಿಗೆ ಹಣ್ಣು ತಿನ್ನ ಬೇಡ ಅಂತ ಹೇಳಿದವರು ಯಾರು ?"  ನನಗೋ ಅಚ್ಚರಿ.

" ಈಗೆಲ್ಲ ಹಾಗೇ,  ಗೊರಟು ಚೀಪಲಿಕ್ಕೆ ಗೊತ್ತಿಲ್ಲ,   ಅವರ ಪ್ರೆಸ್ಟೀಜ್ ಹಾಳಾಗ್ತದೆ..." 

ಇಷ್ಟು ದೊಡ್ಡ ಸಮಾರಂಭದಲ್ಲಿ ಮಾವಿನ ಸಾಸಿವೆಗೆ ಏನಿಲ್ಲಾಂದ್ರೂ ಒಂದ್ ಸಾವಿರ ಹಣ್ಣು ಸಂಗ್ರಹ ಮಾಡಬೇಕಾಗುತ್ತದೆ,   ನೆಂಟರಿಷ್ಟರು,  ಆಪ್ತರೇ ಸಂಗ್ರಹಿಸಿ ತಂದಿರುತ್ತಾರೆ.   ಅದಕ್ಕೆ ಕಿಲೋಗಟ್ಟಲೆ ಬೆಲ್ಲ ಸುರಿದು,  ತೆಂಗಿನಕಾಯಿ ಎಷ್ಟು ಹಾಕಿರ್ತಾರೋ,   ಪಾಕಭಟರ ಶ್ರಮ,  ಇದನ್ನೆಲ್ಲ ನೆನೆದೇ   " ಅಯ್ಯೋ ದೇವ್ರೇ ,  ಹೀಗೂ ಉಂಟೇ... " ಎಂಬ ಉದ್ಗಾರ ನನ್ನಿಂದ ಬಂದಿತು.

ಬರೆಯುತ್ತಾ ಇದ್ದ ಹಾಗೆ ಮಳೆ ಬರುವ ಲಕ್ಷಣ ಕಾಣಿಸ್ತಾ ಇದೆ.   ಟೆರೇಸ್ ಮೇಲೆ ಒಣಗಲಿಟ್ಟ ಮಾಂಬಳ ಮಳೆ ಹನಿ ಬೀಳುವ ಮೊದಲೇ ಒಳಗಿಡಬೇಕು.   ಮತ್ತೊಂದು ವಿಷಯ,  ಮಳೆ ಬಂದ ಮೇಲೆ ಈ ಕಾಟ್ಟು ಮಾವಿನಹಣ್ಣುಗಳ ಮೇಲೆ ಮಮಕಾರ ಕಡಿಮೆಯಾಗುವ ಸಮಯ ಬಂತೆಂದೇ ತಿಳಿಯಿರಿ.  ಅದೇನಪ್ಪಾ ಅಂದ್ರೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಬೀಸಿ ಬರುವ ಗಾಳಿಗೆ ಈ ದೈತ್ಯಗಾತ್ರದ ಮರಗಳ ಹಣ್ಣುಗಳು ಉದುರಿಯೇ ಹೋಗುತ್ತವೆ.   ತರಗೆಲೆ ಮೇಲೆ ಚದುರಿ ಬಿದ್ದ ಹಣ್ಣುಗಳು ಹುಳ ಹುಪ್ಪಟಿಗಳಿಗೆ ಆಹಾರವಾಗಿ ಕೊಳೆತುಹೋಗುವ ಕಾಲ.   ಮಳೆ ನಿಂತ ಮೇಲೆ ಮರದಡಿಗೆ ಬಂದವರಿಗೆ ಈ ದಾರುಣ ದೃಶ್ಯ ವೀಕ್ಷಣೆಗೆ ಲಭ್ಯ.



ಎಂದಿನಂತೆ   " ರಜಾ ಇದೆ "  ಅನ್ನುತ್ತಾ ಮಗಳು ಮನೆಗೆ ಬಂದಳು.   ಅವಳಂತೂ ತಾಜಾ ಹಣ್ಣನ್ನು ಮಾತ್ರ ತಿನ್ನುವವಳು.   ಈ ಬಾರಿ ಮಾಂಬಳ ಅವಳ ಕಣ್ಣಿಗೆ ಬಿದ್ದಿತು.   " ಮನೆಯಲ್ಲಿ ತಿನ್ನೋರು ಯಾರೂ ಇಲ್ಲ ನೋಡು,  ಹೆಕ್ಕಿ ತಂದ ಹಣ್ಣನ್ನು ಮಾಂಬಳ ಮಾಡದೇ ಬಿಸಾಡೋದಿಕ್ಕಾಗುತ್ತಾ... ಬೇಕಿದ್ದರೆ ತಿನ್ನು "  ಅಂದೆ.

" ಒಂದು ತುಂಡು ಕೊಡು ತಿಂತೇನೆ "

" ಪೀಸ್ ಮಾಡ್ಬೇಕಿದ್ರೆ ಪೀಸಕತ್ತಿ ತಾ "

ಚಾಕು ಬಂದಿತು,  ತಟ್ಟೆಯಲ್ಲಿ ಬಟ್ಟೆಯ ಮೇಲೆ ಒಣಗಿದ್ದ ಮಾಂಬಳವನ್ನು ಕತ್ತಿಯ ತುದಿಯಿಂದ ಗೆರೆ ಹಾಕಿ ಎಬ್ಬಿಸಿ ತುಂಡುಗಳಾಯಿತು.   ಅವಳೋ ಒಂದು ಚಿಕ್ಕ ತುಂಡು ತಿಂದಳು.   " ಹುಳಿ ಹುಳಿ..." ಅಂದಳು.

" ಮಾಂಬಳ ತಿನ್ನುವ ಸಮಯ ಈಗ ಅಲ್ಲ,    ಮಾವಿನಹಣ್ಣು ಮುಗಿಯಬೇಕು,   ಮಳೆಗಾಲ ಪ್ರಾರಂಭ ಆಗಬೇಕು..."  ಅವಳ ಅಪ್ಪ ವಿವರಣೆ ಕೊಟ್ಟರು.




ಕಾಟ್ಟು ಮಾವಿನಹಣ್ಣುಗಳ ಕಾಲ ಮುಗಿಯುತ್ತ ಬಂದಿರಲು,   ಮಗಳೂ ಮನೆಯಲ್ಲಿದ್ದಾಳಲ್ಲ,  ಒಂದು ರಸಾಯನ ಮಾಡಿಯೇ ಬಿಡೋಣ.
ರಸಾಯನಕ್ಕೆ ಮಾವಿನಹಣ್ಣಿನ ಸಿಪ್ಪೆ ತೆಳ್ಳಗೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ ಇಟ್ಟುಕೊಳ್ಳಿ.   ಸಿಪ್ಪೆ ತೆಗೆದ ಹಣ್ಣಿನಿಂದ ಚೂರಿಯಲ್ಲಿ ಗೀರು ಹಾಕಿ ಪುಟ್ಟ ಪುಟ್ಟ ಹೋಳು ಮಾಡುವುದೂ ಒಂದು ಕಲೆಗಾರಿಕೆ.   ನುರಿತವರನ್ನು ಕೇಳಿ,  ನೋಡಿ ಕಲಿಯಿರಿ.  ಕೇವಲ ಸಿಪ್ಪೆಗೊರಟಿನ ಹಣ್ಣು ಆಗದು,  ದೊಡ್ಡ ಗಾತ್ರದ ಹಣ್ಣುಗಳು ಯೋಗ್ಯ.  ಗೋಮಾವು ಎಂದು ಕರೆಯಲ್ಪಡುವ ಹಣ್ಣೂ ಆದೀತು.  ಹಣ್ಣುಗಳು ಸಿಹಿಯಾಗಿಯೂ ಇರಬೇಕು.
ತೆಂಗಿನಕಾಯಿ ಹಾಲು ತೆಗೆಯಿರಿ.
ಸಿಹಿಗೆ ಸಕ್ಕರೆ.
ತುಸು ಎಳ್ಳು,  ಹುರಿದು ಜಜ್ಜಿಕೊಳ್ಳಿ.
ಎಲ್ಲವನ್ನೂ  ತಪಲೆಗೆ ಸುರಿದು ಸೌಟಾಡಿಸಿ.  
ಪುಟ್ಟ ತಟ್ಟೆಗೆರೆದು ಊಟದ ಕೊನೆಯಲ್ಲಿ ಕುಡಿಯಿರಿ.



Posted via DraftCraft app

ಟಿಪ್ಪಣಿ:   ಈ ಬರಹ ದಿನಾಂಕ 15,  ಜೂನ್,  2014ರಂದು ಮುಂದುವರಿದದ್ದು...


ಮಾವಿನ ಹಣ್ಣುಗಳ ಕಾಲ ಮುಗಿಯಿತೇ,  ಛೆ,ಛೆ... ಇದೆ ಮುಗಿದಿಲ್ಲ.   ಹತ್ತು ಹಲವಾರು ಮಾಮರಗಳಿರುವಲ್ಲಿ ಹಲಕೆಲವು ಮರಗಳಲ್ಲಿ ಮಳೆ ಬಂದ ಮೇಲೆ ಹಣ್ಣು ಬೀಳಲು ಆರಂಭ.   ಮಳೆ ಬಂದ ನಂತರ ಹುಳಿ ಹಣ್ಣು ಸಿಹಿಯಾಗುವುದೂ ಇದೆ.   ಆದರೆ ಹಸಿ ಹಣ್ಣುಗಳನ್ನು ತಿನ್ನಲು ಧೈರ್ಯ ಬರುವುದಿಲ್ಲ,   ಏನಾದರೂ ರೋಗರುಜಿನಗಳಿಗೆ ದಾರಿ ಮಾಡಿಕೊಟ್ಟಂತಾದೀತೆಂಬ ಭಯ.   ಇದಕ್ಕೂ ನಮ್ಮ ಹಿರಿಯರು ಸೂತ್ರವೊಂದನ್ನು ಮಾಡಿಟ್ಕೊಂಡಿದ್ದಾರೆ,   ' ಬೇಯಿಸಿ ತಿಂದರೆ ಭಯವಿಲ್ಲ '   ಈ ನಿಯಮ ಪ್ರಕಾರ ನಮ್ಮ ಅಡುಗೆ ಮುಂದುವರಿಸೋಣ.

ಮಾವಿನಹಣ್ಣಿನ ಬೋಳು ಹುಳಿ:

.ಚೆನ್ನಾಗಿರುವ ಮಾವಿನಹಣ್ಣುಗಳನ್ನು ಆಯ್ದು,  ತೊಳೆದು,  ತೊಟ್ಟು ತೆಗೆದು ಕತ್ತಿಯಲ್ಲಿ ಗೀರು ಹಾಕಿ ನೋಡಿಕೊಳ್ಳಿ,  ಒಳಗೆ ಹುಳುಹುಪ್ಪಟಿಗಳಿರಬಾರದಲ್ಲ!   ಹಣ್ಣುಗಳು ಮುಳುಗುವಷ್ಟು ನೀರೆರೆದು,  ಉಪ್ಪು ಹಾಕಿ ಬೇಯಿಸಿ.   ಹಸಿಮೆಣಸು ಹಾಕಬಹುದು,   ಮೆಣಸಿನ ಹುಡಿಯೂ ಆದೀತು,  ಒಗ್ಗರಣೆಯ ಮೆಣಸು ಸಾಕು.  ಬೆಲ್ಲ ಹಾಕೂದೇನೂ ಬೇಡ.   ಮಳೆ ಬಂದ ಮೇಲೆ ಮಾಂಬಳ ಎರೆಯುವಂತಿಲ್ಲ,  ಹಸಿ ಹಣ್ಣು ತಿನ್ನುವಂತಿಲ್ಲ.   ಗಂಜಿಯೂಟಕ್ಕೆ ಈ ಬೋಳು ಹುಳಿ ಸೊಗಸಾಗಿರುತ್ತದೆ.




ಮಾವಿನಹಣ್ಣಿನ ಕೊದಿಲ್:
ಒಂದು ಚಿಕ್ಕ ಹಣ್ಣು ಸೌತೆಕಾಯಿ
ಮೂರು ಮಾವಿನಹಣ್ಣು
ತರಕಾರಿ ಹಾಗೂ ಮಾವಿನಹಣ್ಣುಗಳನ್ನು ಉಪ್ಪು ಹಾಕಿ ಬೇಯಿಸಿ.

ಒಂದು ಕಡಿ ತೆಂಗಿನತುರಿ
4 ಒಣಮೆಣಸು
2 ಚಮಚ ಕೊತ್ತಂಬರಿ
1 ಚಮಚ ಉದ್ದಿನಬೇಳೆ
ಜೀರಿಗೆ, ಮೆಂತೆ,  ಇಂಗು ಸ್ವಲ್ಪ

ಎಣ್ಣೆಪಸೆಯಲ್ಲಿ ಹುರಿಯಿರಿ,  ತೆಂಗಿನತುರಿಯೊಂದಿಗೆ ಅರೆಯಿರಿ.  ಬೆಂದ ತರಕಾರಿಗೆ ಕೂಡಿಸಿ,  ಅವಶ್ಯವಿದ್ದಂತೆ ನೀರು,  ಬೇಕಿದ್ದರೆ ಬೆಲ್ಲ ಹಾಕಬಹುದು,  ಕುದಿಸಿ ಬೇವಿನೆಸಳಿನ ಒಗ್ಗರಣೆ ಇರಲಿ.   ಈ ಕೊದಿಲ್ ಅಥವಾ ಕೊದ್ದೆಲ್ ಗೆ ತೊಗರಿಬೇಳೆ ಹಾಕಬೇಕಾಗಿಲ್ಲ.   ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಗಳನ್ನೂ ಇಂತಹ ಅಡುಗೆಯಲ್ಲಿ ಬಳಸಬಹುದಾಗಿದೆ.




Saturday, 26 April 2014

ಮೊಳಕೆ ಕಾಳು, ಏನಾಯ್ತು ಹೇಳು....






ಪ್ರೊಟೀನ್,  ಫೈಬರ್ ಹಾಗೂ ಬಿ ಕಾಂಪ್ಲೆಕ್ಸ್ ವಿಟಮಿನ್ ಸಮೃದ್ಧವಾಗಿರುವ ಬೇಳೆಕಾಳುಗಳನ್ನು ಮೊಳಕೆ ಬರಿಸಿ ತಿನ್ನುವುದು ಬಹಳ ಉತ್ತಮವೆಂದು ಆಹಾರ ತಜ್ಞರ ಹಾಗೂ ವೈದ್ಯರ ನಿರ್ಣಯ.   ಮೊಳಕೆಕಾಳುಗಳನ್ನು ಹಾಗೇನೇ ಎಷ್ಟು ತಿನ್ನಬಹುದು ?   ಒಂದ್ ಹತ್ತು ಕಾಳು ತಿಂದು  " ಸಾಕು,  ಇನ್ನು ನೀನೇ ತಿನ್ನು "  ಅನ್ನುವವರೇ ಎಲ್ಲರೂ.

ಮೊಳಕೆಕಾಳುಗಳ ಉಪ್ಕರಿ ಮಾಡಿಟ್ಟು ನೋಡಿ,   ತಟ್ಟೆ ಎಲ್ಲ ಖಾಲಿ,   " ಇನ್ನೂ ಸ್ವಲ್ಪ ಇದ್ರೆ ಹಾಕು "  ಎಂಬ ಕೇಳಿಕೆಯೂ ಬಂದೀತು.   ಯಾವುದೇ ಧಾನ್ಯವನ್ನೂ ಮೊಳಕೆ ಬರಿಸಬಹುದು,  ಅದರಲ್ಲೂ ಪಚ್ಚೆಹಸರನ್ನು ಮೊಳಕೆ ಬರಿಸಲು ಬಹಳ ಸುಲಭ.

2 ಕಪ್ ಪಚ್ಚೆಹಸರು,  ಮುಂಜಾನೆಯೇ ನೀರಿನಲ್ಲಿ ನೆನೆ ಹಾಕಿ.
ಸಂಜೆ ನೀರು ಬಸಿಯಿರಿ,  ಹತ್ತಿಯ ಬಟ್ಟೆಯಲ್ಲಿ ಗಂಟು ಕಟ್ಟಿ ನೇತಾಡಿಸಿ.
ಮಾರನೇ ದಿನ ಬೆಳಗ್ಗೆ ಮೊಳಕೆಕಾಳುಗಳು ಲಭ್ಯ.
ಊಟದ ಹೊತ್ತಿಗೆ ಕೋಸಂಬರಿ ಮಾಡಿಕೊಳ್ಳಿ.  ರುಚಿಗೆ ಉಪ್ಪು,  ತುಸು ನಿಂಬೇರಸ ಎರೆಯುವಲ್ಲಿಗೆ ಕೋಸಂಬರಿ ಸಿದ್ಧ.

ಉಪ್ಕರಿ:
ತುಸು ನೀರು ಹಾಗೂ ರುಚಿಗೆ ಉಪ್ಪು ಹಾಕಿ ಬೇಯಿಸಿ,  ಹೆಚ್ಚು ಬೇಯಿಸುವ ಅಗತ್ಯವಿಲ್ಲ,   ಒಂದು ಕುದಿ ಬಂದರೆ ಸಾಕು.  ಹೆಚ್ಚು ಬೆಂದಿದ್ದು ಮಕ್ಕಳಿಗೆ ಕೊಡುವಂತಹ ಮಣ್ಣಿಯಂತಾದೀತು.
ಒಗ್ಗರಣೆ ಮಾಡಿಕೊಳ್ಳಿ,   ನೀರುಳ್ಳಿ,  ಹಸಿಮೆಣಸು,  ಕರಿಬೇವು ಇರಲಿ,  ಸಾಸಿವೆ ಚಟಪಟ ಅನ್ನುವಾಗ ಎಲ್ಲವನ್ನೂ ಹಾಕಿ ಬಾಡಿಸಿ,  ಚಿಟಿಕೆ ಅರಸಿನ ಹುಡಿ ಇರಲಿ.
ಈಗ ಬೆಂದ ಪಚ್ಚೆಹಸರನ್ನು ಹಾಕಿ.  ನೀರಿನಂಶ ಆರಲು ಸ್ವಲ್ಪ ಹೊತ್ತು ಚಿಕ್ಕ ಉರಿಯಲ್ಲಿರಲಿ.   ಕೊನೆಗೆ ಒಂದು ಹಿಡಿ ಕಾಯಿತುರಿ ಹಾಕಿ ಕೈಯಾಡಿಸಿ.   ತಟ್ಟೆಯಲ್ಲಿರಿಸಿ ಮಕ್ಕಳನ್ನು ಸಂಜೆಯ ತಿಂಡಿಗೆ ಕರೆಯಿರಿ.

<><><><><><>


ಸೆಕೆ ಸಮಯ,  ಪಚ್ಚೆಹಸರು ತಂಪು ಅಂದ್ಬಿಟ್ಟು ಅಕ್ಕಿಯೊಂದಿಗೆ ಅರೆದು ಮುಂಜಾನೆಗೊಂದು ತಿಂಡಿ ಮಾಡಿಕೊಳ್ಳೋಣಾಂತ ನೀರಿನಲ್ಲಿ ನೆನೆ ಹಾಕಿಟ್ಟು ಆಯ್ತು.  ಅಕ್ಕಿ ಹಾಗೂ ಪಚ್ಚೆಹಸರು ಒಂದೇ ತಪಲೆಯಲ್ಲಿ ನೆನೆ ನೆನೆದು ಹಿಗ್ಗಿದುವು.   ಅದೇನಾಯಿತೋ,  ರಾತ್ರಿ ನಾಲ್ಕು ಹನಿ ಮಳೆ ಬಿದ್ದಿತು,  ವಿದ್ಯುತ್ ಹೋಯಿತು.  

" ಬೆಳಗಾದಾಗ ಅರೆದರಾಯಿತು, "    ಇಲ್ಲ,  ರಾತ್ರಿ ಹೋದ ಕರೆಂಟು ಮಟಮಟ ಮದ್ಯಾಹ್ನ ಬಂತು.

ಅಂತೂ ಕರೆಂಟು ಬಂದಿತು,   ಸಂಜೆಯಾದಾಗ ನೆನೆದ ಕಾಳು ಅಕ್ಕಿಯೊಂದಿಗೆ ಬೆರೆತು ಚೆನ್ನಾಗಿ ಮೊಳಕೆ ಬಂದಿತ್ತು.   ಛೇ, ಛೇ... ಇದನ್ನೇನು ಮಾಡಲೀ ಎಂದು ಚಿಂತಿಸುತ್ತಾ ಪುನಃ ನೀರೆರೆದು ತೊಳೆದು  ಅರೆಯುವ ಯಂತ್ರದೊಳಗೆ ತಳ್ಳಿಯಾಯ್ತು.   

ಈ ಹಿಟ್ಟು ನಾಳೆ ಹುಳಿ ಬಂದೀತು,   ತೆಳ್ಳವು ಎರೆಯಲು ಸಾಧ್ಯವಿಲ್ಲ ಅಂದುಕೊಳ್ಳುತ್ತಾ ಒಂದು ಕಪ್ ರಾಗಿ ಹುಡಿಯನ್ನೂ ಸೇರಿಸಿ ಹಿಟ್ಟು ತೆಗೆದು,  ಉಪ್ಪು ಕೂಡಿಸಿ ಮುಚ್ಚಿಟ್ಟಾಯ್ತು.   ರಾಗಿಯನ್ನೂ ಸೇರಿಸಿದ್ದರಲ್ಲಿ ಎಲ್ಲ ಧಾನ್ಯಗಳೂ ಸೇರಿ ಒಟ್ಟಿಗೆ 3 ಕಪ್ ಆಯ್ತು,   ನೋಡಿ,  ದೋಸೆ ಹೇಗಾಯ್ತು...





ಮೂಂಗ್ ದಾಲ್ ಯಾ ಮೂಂಙ್ ದಾಲ್ ಎಂಬ ಈ ಧಾನ್ಯ ಭಾರತ ಮೂಲದ್ದು ಎಂಬುದು ನಮಗೆ ತಿಳಿದಿರಲಿ.   ಶತಶತಮಾನಗಳಿಂದ ಈ ಧಾನ್ಯವನ್ನು ನಮ್ಮ ಕೃಷಿಕರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.    ಇಂಗ್ಲೀಷಿನ ಮೂಂಗ್ ಎಂಬ ಶಬ್ದವು ದಕ್ಷಿಣ ಭಾರತದ ಪ್ರಾಚೀನ ಭಾಷೆಯಾದ ತುಳುವಿನಿಂದ ಬಂದುದಾಗಿರಬೇಕು.   ದವಸಧಾನ್ಯಗಳ ಮೊಳಕೆಯನ್ನು ಮುಂಙೆ ಎಂದೇ ಹೇಳುವ ರೂಢಿ.  ದಕ್ಷಿಣ ಕನ್ನಡಿಗರು,  ಕೇರಳೀಯರು ಪಚ್ಚೆಹಸರನ್ನು ಜಾಸ್ತಿ ಉಪಯೋಗಿಸುತ್ತಾರೆ.   ಕೇರಳದಲ್ಲಿ ಶಾಲಾಮಕ್ಕಳಿಗೆ ಗಂಜಿಯೂಟದೊಂದಿಗೆ ಪಚ್ಚೆಹಸರನ್ನೂ ಬೇಯಿಸಿ ಕೊಡುತ್ತಾರೆ.   ನನ್ನ ಮಕ್ಕಳೂ ಶಾಲೆಗೆ ಹೋಗುತ್ತಿದ್ದಾಗ ಶಾಲೆಯ ಗಂಜಿಯೂಟವನ್ನು ತಪ್ಪದೇ ಉಂಡು ಮನೆಗೆ ಬರುತ್ತಿದ್ದರು.   ರಜಾದಿನಗಳಲ್ಲೂ   " ಶಾಲೆ ಗಂಜಿ ಮಾಡಮ್ಮಾ"  ಎಂಬ ಡಿಮ್ಯಾಂಡೂ ಇರ್ತಾ ಇತ್ತು.    ರೇಷನ್ ಶಾಪ್ ನಲ್ಲಿ ಮಾತ್ರ ಸಿಗುತ್ತಿದ್ದ ಬೆಳ್ಳಗಿನ ಕುಚ್ಚುಲಕ್ಕಿಯನ್ನು,  ಎರಡು ಬೆಳೆ ಗದ್ದೆ ಬೇಸಾಯ ಇದ್ದರೂ ತರುವಂತಾಗಿತ್ತು. 


ದೋಸೆ ಚೆನ್ನಾಗಿ ಬಂದಿತ್ತಲ್ಲ,  ಇನ್ನೊಮ್ಮೆ ಮಾಡೋಣ ಅಂದ್ಬಿಟ್ಟು ಅಕ್ಕಿ ಹಾಗೂ ಪಚ್ಚೆಹಸರನ್ನು ಬೆಳಗ್ಗೇನೇ ನೆನೆ ಹಾಕಿಟ್ಟು ಸಂಜೆ ಅರೆಯಬೇಕಾದರೆ ಇನ್ನೊಂದು ಐಡಿಯಾ ತಲೆಗೇರಿತು.

  " ಈ ಬಾರಿ ರಾಗಿ ಸೇರಿಸಲಿಕ್ಕಿಲ್ಲ "
" ಬೇರೇನು ಹಾಕ್ತೀರಾ ..."
" ಸ್ವಲ್ಪ ಉದ್ದು,  ಮೆಂತೆ ಸೇರ್ಸೋಣ "

ಕಾಲು ಕಪ್ ಉದ್ದು,  ಒಂದು ಚಮಚ ಮೆಂತೆ ನೀರೆರೆದು ಇಟ್ಟಾಯ್ತೇ,  ಅರ್ಧ ಗಂಟೆ ಬಿಟ್ಟು ಅರೆಯುವ ತಯಾರಿ ನಡೆಯಿತು.
ಬೆಳಗಿನಿಂದ ನೀರಿನಲ್ಲಿದ್ದ 2 ಕಪ್ ಬೆಳ್ತಿಗೆ ಅಕ್ಕಿ + 1 ಕಪ್ ಪಚ್ಚೆ ಹಸರನ್ನು ತೊಳೆದಿಟ್ಟಾಯ್ತು.   ಉದ್ದು ಮೆಂತೆಯೂ ನೀರಿನಿಂದ ಎದ್ದು ಮಿಕ್ಸೀಯೊಳಗೆ ಬಿದ್ದು... ಅರೆದು ಆಯಿತು.
ಎಲ್ಲ ಹಿಟ್ಟುಗಳನ್ನೂ ಒಟ್ಟುಗೂಡಿಸಿ,  ರುಚಿಗೆ ಉಪ್ಪು ಸೇರಿಸಿ,  ತಪಲೆಯನ್ನು ಮುಚ್ಚಿಟ್ಟು ಮಾರನೇ ದಿನ ಎರೆದ ದೋಸೆ,   ವಾಹ್..... ಉದ್ದಿನ ದೋಸೆಯಾ ನಿನ್ನ ಹೆಸರು ?



Posted via DraftCraft app

Saturday, 19 April 2014

ಏನೆಂದುಕೊಂಡ್ರೀ, ಇದು ಬಾಳೇ ದಿಂಡು...






ಸಾಬೂನು ಹುಡಿ ಹಾಕಿ ನೆನೆಸಿಟ್ಟ ಬಟ್ಟೆಗಳನ್ನು ಒಗೆಯುವ ಯಂತ್ರದೊಳಗೆ ತಳ್ಳಿ,  ನೀರನ್ನು ಹರಿಯಬಿಟ್ಟು,  ಸಮಯದ ಹೊಂದಾಣಿಕೆ ಮಾಡಿಕೊಟ್ಟು ಸೀದಾ ಅಡುಗೆಮನೆಗೆ ಬಂದಾಗ ಅನ್ನಕ್ಕೆಂದು ಇಟ್ಟಿದ್ದ ನೀರು ಕುದಿಯುತ್ತಿದೆ.   ಕುಚ್ಚುಲಕ್ಕಿ ತೊಳೆದು ಕುದಿಯುವ ನೀರೊಳಗೆ ಅಕ್ಕಿ ಹಾಕಿ,  ಕುಕ್ಕರ್ ಮುಚ್ಚಿ,  ಇದಕ್ಕೂ ಟೈಮ್ ನೋಡಿಟ್ಟು,   ಇನ್ನು ತರಕಾರಿ ಹಚ್ಚೋಣಾಂತಿದ್ರೆ ಬಟಾಟೆ ಬಿಟ್ರೆ ಬೇರೇನೂ ಇಲ್ಲ.

ಬಟಾಟೆಯ ರಸಂ ಮಾಡಲು ಮನಸ್ಸಿಲ್ಲ,  ಈಗ ಸೆಕೆ ಬೇರೆ,   ತಂಪಾಗಿ ಒಂದು ಸಾರು,  ತಂಬುಳಿ ಮಾಡಿದ್ರೂ ಸಮ,  ಈ ಬಟಾಟೆ ಬೇಡ ಅಂದ್ಬಿಟ್ಟು ಪುನರ್ಪುಳಿ ಸಿಪ್ಪೆ ನೀರಿನಲ್ಲಿ ಹಾಕಿಟ್ಟು,  ತಂಬುಳಿಗೆ ಏನಾದ್ರೂ ಕಾಟಂಗೋಟಿ ಸೊಪ್ಪು ತೋಟದಿಂದ ತರಲು ಚಿಕ್ಕ ಕತ್ತಿಯೊಂದಿಗೆ ತೋಟಕ್ಕೆ ಇಳಿದಾಯ್ತು.   ತೋಟದಲ್ಲಿ ಅತ್ತ ಇತ್ತ ನೋಡುತ್ತಿದ್ದ ಹಾಗೆ ಬಾಳೆಗೊನೆ ಕಣ್ಣಿಗೆ ಬಿತ್ತು.   ಚೆನ್ನಾಗಿ ಬೆಳೆದಿವೆ ಕಾಯಿಗಳು,  ಒಂದು ವಾರದಲ್ಲಿ ಹಣ್ಣಾದೀತು.   ವಾಪಸ್ ಮನೆಗೆ ಬರೋಣವಾಯ್ತು.   ನಮ್ಮೆಜಮಾನ್ರು ಕಂಪ್ಯೂಟರ್ ಮುಂದೆ ಕುಳಿತು ಗಹನವಾದ ಚಿಂತನೆಯಲ್ಲಿದ್ದವರನ್ನು ಎಬ್ಬಿಸಿ ಬಾಳೆಗೊನೆಯ ವಿಚಾರ ಹೇಳಲಾಯಿತು.  " ಗೊನೆ ಕಡಿದು ತಂದರಷ್ಟೇ ಸಾಲದು,  ಬಾಳೆಯ ದಂಡನ್ನೂ ತನ್ನೀ "
" ದಂಡು ಯಾಕೇ ?"
" ತನ್ನೀ,  ಅಡುಗೆಗೆ ಬೇಕಾಗ್ತದೆ "

ಬಾಳೆದಂಡು ತೋಟದಿಂದ ಬರುವಷ್ಟರಲ್ಲಿ ರಸಂ ಮಾಡಬೇಕಾದರೆ ಅಗತ್ಯದ ಸಿದ್ಧತೆ ಮಾಡಿಕೊಳ್ಳಲಾಯಿತು.  
 ಒಂದಿಷ್ಟು ತೊಗರೀಬೇಳೆ ಕುಕ್ಕರ್ ಒಳಗಿರಿಸಲಾಗಿ ಬೆಂದೆನೆಂದು ಕೂಗಿಕೊಂಡಿತು.
ತೆಂಗಿನಕಡಿ ಇದೆಯಾ ಎಂದು ನೋಡಲಾಗಿ ಕಾಯಿತುರಿ ಸಿದ್ಧವಾಯಿತು.
4 ಒಣಮೆಣಸು,  2 ಚಮಚ ಕೊತ್ತಂಬ್ರಿ,  ಒಂದು ಚಮಚ ಕಡ್ಲೆಬೇಳೆ,   ಇಂಗು,  ಜೀರಿಗೆ  ಹುರಿಯಲಾಗಿ,  ಕಾಯಿತುರಿ ಸಹಿತವಾಗಿ ಮಿಕ್ಸೀ ಯಂತ್ರ ತಿರುಗಲಾಗಿ ಮಸಾಲೆ ಸಿದ್ಧವಾದೆನೆಂದಿತು.
ಇಷ್ಟೆಲ್ಲ ಆಗುವಾಗ ಬಾಳೆದಂಡು ಬಂದಿತು.
ಬರೋಬ್ಬರಿ 4 ಅಡಿ ಉದ್ದವಿದ್ದಿತು.
ಇರಲಿ, ಇರಲಿ.
 ದಿನಕ್ಕೊಂದು ಹೊಸರುಚಿಯ ಖಾದ್ಯ ಮಾಡಬೇಡವೇ....

ಬಾಳೆಯ ದಂಡು ಬಂದಿತಲ್ಲ,  ರಸಂ ಸಿದ್ಧತೆಯೂ ಆಗಿತ್ತಲ್ಲ,  ಈ ದಂಡಿನಿಂದ ಅವಶ್ಯವಿದ್ದಷ್ಟು ಉದ್ದದ ತುಂಡನ್ನು ಕತ್ತರಿಸಿ ತೆಗೆಯಲಾಯಿತು.   ಮೆಟ್ಟುಕತ್ತಿಯಲ್ಲಿ ಕುಳಿತು ತುಂಡರಿಸಿ ನೀರಿಗೆ ಹಾಕಿ ಹುಳಿಯೊಂದಿಗೆ,  ಹ್ಞಾ,  ಬೀಂಬುಳಿಗಳನ್ನೂ ಕಟ್ ಮಾಡಿ ಸೇರಿಸಿ,  ರುಚಿಗೆ ಬೇಕಾದ ಉಪ್ಪನ್ನೂ ತರಕಾರಿ ಬೇಯುವಾಗಲೇ ಹಾಕಲಾಗಿ,   ಒಗ್ಗರಣೆ ಕೊಡುವಲ್ಲಿಗೆ ದಂಡು ರಸಂ ರೆಡಿಯಾಯಿತು.





" ಬಾಳೆ ದಂಡು ಅಂದ್ರೇನು ?"

 ಗೊನೆ ಹಾಕಿದ ಬಾಳೆ,  ಬೆಳೆದ ಗೊನೆ ಕಡಿದ ನಂತರ ನಿರುಪಯುಕ್ತ.   ಇದನ್ನು ಹೆಚ್ಚಾಗಿ ಕೃಷಿಕರು ತುಂಡರಿಸಿ ಅಡಿಕೆ ಮರದ ಬುಡಕ್ಕೆ ಅಥವಾ ಬಾಳೆ ಬುಡಕ್ಕೆ ಹಾಕುತ್ತಾರೆ.   ನಾರುಯುಕ್ತವಾಗಿರುವ ಇದು ನೀರನ್ನೂ ಹೀರಿಕೊಂಡು ಅಡಿಕೆ ಮರದ ಬುಡಕ್ಕೆ ನೀರಿಂಗಿಸುವ ಕೆಲಸವನ್ನೂ ಮಾಡುತ್ತದೆ.   ಬಿಸಿಲಿನ ತಾಪದಿಂದ ಬಳಲುವ ಜಾನುವಾರುಗಳಿಗೂ ಇದನ್ನು ಪೂರಕ ಆಹಾರವಾಗಿ ತುಂಬ ಚಿಕ್ಕದಾಗಿ ಕತ್ತರಿಸಿ ಹಾಕುವ ವಾಡಿಕೆಯೂ ಇದೆ.   ಬಾಳೆಯ ಈ ಕಾಂಡದ ನಾರನ್ನು ಬಿಡಿಸಿ ನಾಲ್ಕು ದಿನ ಬಸಿಲಿಗೆ ಒಣಗಿಸಿದಿರೋ,  ಸೊಗಸಾದ ಬಾಳೇ ಹಗ್ಗ ತಯಾರಾಗಿ ಬಿಡುತ್ತದೆ.   ಈ ನಾಜೂಕಿನ ಬಾಳೆ ಬಳ್ಳಿಯಿಂದಲೇ ಮಲ್ಲಿಗೆಯ ಮಾಲೆ ಕಟ್ಟುವವರು ನಾವು.   ಹ್ಞಾಂ,  ಹಲಸಿನ ಹಪ್ಪಳ ಕಟ್ಟಿಡಲೂ ಇದೇ ಬಾಳೇ ಬಳ್ಳಿ ಅವಶ್ಯ.

ಅಡುಗೆಯಲ್ಲಿ ಬಳಸುವ ಬಾಳೆಯ ದಂಡು ಇದೆಯಲ್ಲ,   ಈ ಒಳತಿರುಳು ಸಿಗಬೇಕಾದರೆ ಕಾಂಡದ ಹೊರ ಆವರಣದ ನಾರುಗಳನ್ನು ಎಬ್ಬಿಸಿ ತೆಗೆಯಬೇಕಾಗುತ್ತದೆ.  ಟ್ಯೂಬ್ ಲೈಟ್ ಆಕಾರದಲ್ಲಿ ಹೊಳೆಯುವ ತಿರುಳನ್ನು ಹಲವು ದಿನ ಇಟ್ಟುಕೊಳ್ಳಬಹುದು. ಜೀರ್ಣಾಂಗ ವ್ಯೂಹದ ಅಂಗಗಳು ವ್ಯವಸ್ಥಿತವಾಗಿ ಕಾರ್ಯವೆಸಗುವಲ್ಲಿ ನಾರು ಪದಾರ್ಥಗಳು ಮುಖ್ಯ ಪಾತ್ರ ವಹಿಸುತ್ತವೆ.    ಕರುಳಿನಲ್ಲಿ ಇರಬಹುದಾದ ವಿಸರ್ಜಿತವಾಗಿರದ ತ್ಯಾಜ್ಯಗಳನ್ನು ಹೊರ ಹಾಕುವಲ್ಲಿ ಬಾಳೆದಂಡು ಉಪಯುಕ್ತ.   ಜ್ಯೂಸ್ ಮಾಡಿ ಸೇವಿಸುವುದಕ್ಕಿಂತ ನಾರುಸಹಿತವಾಗಿ ತಿನ್ನುವುದು ಬಹಳ ಒಳ್ಳೆಯದು.  ನಿಯಮಿತವಾದ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲುಗಳ ಬಾಧೆ ಹೋದೀತು.

ಬಾಳೆಹಣ್ಣಿನಂತೆ ಬಾಳೆದಂಡು ಕೂಡಾ ಪೊಟ್ಯಾಷಿಯಂ ಹಾಗೂ ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಿಂದ ಸಮೃದ್ಧವಾಗಿದೆ.   ವಿಟಮಿನ್ ಬಿ ಕಾಂಪ್ಲೆಕ್ಸ್ ಶರೀರದ ಹಿಮೊಗ್ಲೊಬಿನ್ ಹಾಗೂ ಇನ್ಸುಲಿನ್ ಉತ್ಪಾದಕ ಶಕ್ತಿಯನ್ನು ಹೆಚ್ಚಿಸಿ,  ಸೋಂಕು ನಿರೋಧ ಶಕ್ತಿ ವರ್ಧನೆ.   ಪೊಟ್ಯಾಷಿಯಂ ಸ್ನಾಯುಗಳ ಬಲವರ್ಧನೆಗೆ, ರಕ್ತದೊತ್ತಡ ಸ್ಥಿರವಾಗಿರಿಸಲು ಸಹಕಾರಿ,  ಶರೀರದ ಜಲಾಂಶ ರಕ್ಷಕ.   ಬಾಳೆಯ ದಂಡಿನಲ್ಲಿ ಇಂತಹ ಸಂತುಲಿತ ಪೋಷಣೆ ಉಚಿತವಾಗಿ ಲಭ್ಯ.




ಹೌದಲ್ಲ,  ಈ ಬಾಳೆದಂಡಿನಿಂದ ಇನ್ನೂ ಏನೇನು ಮಾಡಬಹುದು ?

ಕೋಮಲವೂ ಮೃದುವೂ ಆಗಿರುವ ಈ ಒಳ ತಿರುಳನ್ನು ತುರಿದು ಅಥವಾ ಚಿಕ್ಕದಾಗಿ ಕತ್ತರಿಸಿ ಸಲಾಡ್,  ಗೊಜ್ಜು ಮಾಡಬಹುದು.  ಟೊಮ್ಯಾಟೋ,  ಶುಂಠಿ,  ಈರುಳ್ಳಿ ಕೂಡಾ ಸೇರಿಸಿದರಾದರೆ ಮನೆ ಮಂದಿಗೆ ಬಾಳೇ ದಂಡು ಇದೆಯೆಂದು ಗೊತ್ತೇ ಆಗಲಾರದು.   ಬೇಯಿಸಿ ಪಲ್ಯ ಮಾಡಿದರೂ ಚೆನ್ನಾಗಿರುತ್ತದೆ.

ಮುಂಜಾನೆಗೊಂದು ತಿಂಡಿ ಅಂತ ಹೊರಡ್ತೀವಲ್ಲ,  2 ಕಪ್ ಅಕ್ಕಿ ನುಣ್ಣಗೆ ಅರೆದು ತೆಳ್ಳವು ಮಾಡ್ತೀವಲ್ಲ,   ಒಂದು ಕಪ್ ಬಾಳೆದಂಡಿನ ಚೂರುಗಳನ್ನೂ ಸೇರಿಸಿ ಅರೆಯಿರಿ,  ಸೊಗಸಾದ ದೋಸೆ ಬಂದಿತು ನೋಡಿ.   ಇಡ್ಲಿ ಮಾಡುತ್ತೀರಾದರೆ ಒಂದು ಕಪ್ ಉದ್ದು + 2 ಕಪ್ ಅಕ್ಕಿ ಜೊತೆಗೆ ಅರ್ಧ ಕಪ್ ಬಾಳೆದಂಡಿನ ಚೂರುಗಳನ್ನು ಕೂಡಿಸಿ ಅರೆಯಿರಿ,  ಮಲ್ಲಿಗೆಯಷ್ಟು ಮೃದುವಾದ ಇಡ್ಲಿಗಳನ್ನು ಪಡೆಯಿರಿ.   ಮಾಡುತ್ತಾ ಮಾಡುತ್ತಾ ಹೊಸ ಹೊಸ ರೆಸಿಪಿಗಳನ್ನು ಕಂಡು ಹಿಡಿಯಿರಿ.   ಹಿತಮಿತವಾಗಿ ಬಳಸಿ ಆರೋಗ್ಯ ಉಳಿಸಿ,  ಒಳ್ಳೆಯದೆಂದು ಅತಿ ಸೇವನೆ ಮಾಡದಿರಿ.

Posted via DraftCraft app

Saturday, 12 April 2014

ಪಮೆಲೋ ಪರಿಮಳ !





" ತೋಟದಲ್ಲಿ ನೀರ ಕಣಿ ಪಕ್ಕ ಕಿತ್ತಳೆ, ಮುಸಂಬಿ ಗಿಡ ಇರೂದು ನೋಡಿದ್ದೀಯಾ " ಕೇಳಿದ್ರು ನಮ್ಮತ್ತಿಗೆ.

" ಹ್ಞೂಂ,  ಅದ್ರಲ್ಲಿ ಒಂದ್ ಗಿಡ ಸತ್ತಿದೆ,   ಯಾವ್ದೂಂತ ನಂಗೇನ್ಗೊತ್ತು?  ನೆಟ್ಟಿದ್ದು ನೀವಲ್ವೇ "

" ಅದನ್ನು ನಾನೇ ಬೀಜ ಹಾಕಿ ಸಸಿ ಮಾಡಿದ್ದು..."

" ಅಂದ್ರೆ ಒಂದಿಪ್ಪತ್ತು ವರ್ಷ ಆಯ್ತೂನ್ನಿ,  ಹಾಗೆಲ್ಲ ಬೀಜ ಬಿತ್ತಿ ಸಸಿ ಮಾಡೋ ಬದಲು ಕಸಿ ಗಿಡ ತರಿಸಿ ನೆಟ್ಟಿದ್ದರೆ ಈಗ ಹಣ್ಣು ಕೊಯ್ಬಹುದಾಗಿತ್ತು "

" ಏನೊ ಶಾಲೆಗೆ ಹೋಗೋ ಪ್ರಾಯದಲ್ಲಿ ಅಷ್ಟೆಲ್ಲಾ ವಿಚಾರ ಯಾರಿಗೆ ಗೊತ್ತಿರ್ತದೆ.... ಅಂದ್ಹಾಗೆ ಚಕೋತ ಕೂಡಾ ನೆಟ್ಬಿಟ್ಟಿದ್ದೇನೆ " ಅಂದ್ರು ಅತ್ತಿಗೆ.

" ಚಕೋತ ಅಂದ್ರೆ ಸಿಹಿ ಕಂಚಿ ಅಲ್ವಾ,   ಅದೂ ನಮ್ಮಪ್ಪನ ಮನೇಲೂ ಇದೆ,  ಭಾರೀ ಗಾತ್ರದ ಹಣ್ಣು,  ತುಂಬಾನೇ ಸಿಹಿ " ಅಂದೆ,   ಈ ಫಲವಿಹೀನ ಗಿಡಗಳ ಬಗ್ಗೆ ಅಷ್ಟೇನೂ ಆಸಕ್ತಿ ಆಗ ವಹಿಸಲಿಲ್ಲ.    ಇಬ್ಬರು ಮಕ್ಕಳಾದ ಮೇಲೆ ಈ ಗಿಡಗಳು ಯಾಕೆ ಹೀಗಿವೆ ಎಂಬ ಕಾಳಜಿ ತಾನಾಗಿಯೇ ಹುಟ್ಟಿತು.   

ಮಾವ ಹಿರಣ್ಯ ಗಣಪತಿ ಭಟ್ಟರು ಎಲ್ಲಾ ಕನ್ನಡ ಪತ್ರಿಕೆಗಳನ್ನು ತರಿಸುತ್ತಿದ್ದರು,  ಅಂಚೆ ಮೂಲಕವೂ ಕೆಲವು ಪತ್ರಿಕೆಗಳು....  ದೊಡ್ಡ ಗ್ರಂಥ ಭಂಡಾರವೂ ಇದ್ದಿತು.  ಅವೆಲ್ಲ ಈಗ ನಮ್ಮ ಊರಿನ ಹೆದ್ದಾರಿ ಶಾಲಾ ಮಿತ್ರಮಂಡಳಿಯ ಲೈಬ್ರರಿಯಲ್ಲಿವೆ.   ಅಂಚೆ ಮೂಲಕ ಬರುತ್ತಿದ್ದ ಅಡಿಕೆ ಪತ್ರಿಕೆ ಎಂಬ ಕೃಷಿ ಸಂಬಂಧಿತ ಮ್ಯಾಗಜೀನ್ ಒಳಗೆ ಒಂದು ಲೇಖನದಲ್ಲಿ   ನೆಟ್ಟು ಸಾಕಷ್ಟು ವರ್ಷಗಳಾದರೂ ಫಲ ಕೊಡದ ಸಸ್ಯಗಳ  ಕಾಂಡದ ಸಿಪ್ಪೆ ಎರಡಿಂಚಿನಷ್ಟು  ಅಗಲವಾಗಿ ಕೆತ್ತಿ ತೆಗೆಯಬೇಕು,  ಅದೂ ಸಪ್ಟಂಬರ -  ಒಕ್ಟೋಬರದಲ್ಲೇ ಆಗಬೇಕು ಎಂಬಂತಹ ಮಾಹಿತಿಯನ್ನು ಯಾರೋ ಬರೆದಿದ್ದರು.   ಗೌರತ್ತೆಯೂ ಈ ಅಭಿಪ್ರಾಯವನ್ನು ಅನುಮೋದಿಸಿದರು.   " ಮೊದಲೆಲ್ಲ ಏನು ಮಾಡ್ತಿದ್ರು ಗೊತ್ತಾ,  ಚಿಕ್ಕ ಮಕ್ಕಳ ಕೈಲಿ ಕತ್ತಿ ಕೊಟ್ಟು ಮರದ ಚಕ್ಕೆ ಏಳ್ಸೋದು... ಮರು ವರ್ಷಾನೇ ಮರ ತುಂಬಾ ಹಣ್ಣು ..."

" ನಮ್ದು ಹುಣಸೇ ಮರಕ್ಕೆ ಇದೇ ಪ್ರಯೋಗ ಮಾಡಿ ಮರ ಸತ್ಹೋಯ್ತು " ಅಂದರು ದೊಡ್ಡತ್ತಿಗೆ.

" ಹೌದೇ,  ಮರದ ಕಾಂಡಕ್ಕೆ ಹೆಚ್ಚು ಪೆಟ್ಟು ಬಿದ್ದಿತೇನೋ...  ಈಗ ಚೆನ್ನಪ್ಪನ ಹತ್ರ ಕೇಳಿ ನೋಡೋಣ "

ಚೆನ್ನಪ್ಪನ ಜೊತೆ ನಮ್ಮೆಜಮಾನ್ರೂ ಸೇರಿ ಚಕೋತಾ ಮರಕ್ಕೆ ಅಂಟಿದ್ದ ಗ್ರಹಚಾರ ಬಿಡಿಸಿದ್ದಾಯ್ತು.






ಎಪ್ರೀಲ್ - ಮೇ ತಿಂಗಳಲ್ಲಿ ಗೊಂಚಲು ಗೊಂಚಲಾಗಿ ಅರಳುವ ಚಕೋತಾ ಹೂಗಳು ಕಡು ಸುವಾಸನೆಯನ್ನೂ ಹೊಂದಿ ದುಂಬಿಗಳನ್ನು ಆಕರ್ಷಿಸುತ್ತವೆ.   ಹೂಗಳು ಸುಗಂಧ ದ್ರವ್ಯ ತಯಾರಿಕೆಯಲ್ಲಿಯೂ ಬಳಸಲ್ಪಡುತ್ತವೆ.   ಹಸಿರು ಬಣ್ಣದ ಕಾಯಿಗಳು ಬಲಿತು ಅರಸಿನ ವರ್ಣಕ್ಕೆ ತಿರುಗಲು ಸುಮಾರು ಏಳೆಂಟು ತಿಂಗಳು ಕಾಯಬೇಕು.   ದೀರ್ಘಕಾಲ ಬದುಕುವಂತಹ ಮರ Rutaceae ಕುಟುಂಬವಾಸಿ,  ಸಿಟ್ರಸ್ ಜಾತಿಯ ಹಣ್ಣುಗಳಲ್ಲೇ ಭಾರೀ ಗಾತ್ರದ ಚಕೋತಾ ವೈಜ್ಞಾನಿಕವಾಗಿ Citrus maxima  (Citrus grandis) ಎನಿಸಿಕೊಂಡಿದೆ.   ಈ ಮರಕ್ಕೆ ರೋಗಬಾಧೆಯೇನೂ ಇಲ್ಲ.  ನಾವು ಅಡಿಕೆ ತೋಟದಲ್ಲಿ ಯಾವುದೇ ಕೀಟನಾಶಕಗಳ ಸ್ಪ್ರೇ ಮಾಡುವವರೂ ಅಲ್ಲ.  ದಪ್ಪ ಸಿಪ್ಪೆಯ ಕವಚವೂ ಈ ಹಣ್ಣಿಗಿದೆ.   ಹಣ್ಣಾಗಿ ಕೆಳ ಬಿದ್ದ ಚಕೋತಾ ಪಕ್ವವಾಗಿರುವುದು.   ದಪ್ಪನೆಯ ಸಿಪ್ಪೆ ತೆಗೆಯಲೂ ಚೆನ್ನಾಗಿ ಮಾಗಿದ ಹಣ್ಣಾಗಿದ್ದರೇನೇ ಸುಲಭ.   

ಅಡಿಕೆ ತೋಟದೊಳಗಿರುವ ನಮ್ಮ ಚಕೋತಾ ಮರದ ಪಕ್ಕದಲ್ಲೇ ಒಂದು ತೆಂಗಿನ ಮರವೂ ಇದೆ.   ಒಂದು ಮಳೆಗಾಲದಲ್ಲಿ ತೆಂಗಿನ ಮಡಲು ಮರದ ಮೇಲೆ ಬಿದ್ದು ಕೆಲವು ಚಕೋತದ ಹೀಚುಗಾಯಿಗಳು ಮಡಲಿನೊಂದಿಗೆ ಧರಾಶಾಯಿಯಾದುವು.   " ಛೆ,  ಹಣ್ಣಾಗಬೇಕಿದ್ದ ಕಾಯಿಗಳಿಗೆ ಈ ಗತಿ ಬಂತಲ್ಲ "  ಎಂದು ಮಡಲಿಗೆ ಹಿಡಿಶಾಪ ಹಾಕಿ,  ಕಾಯಿಗಳನ್ನು ಹೆಕ್ಕಿ ಮನೆಗೆ ತಂದೆ.

ಕ್ರಿಕೆಟ್ ಬಾಲ್ ನಷ್ಟೇ ದೊಡ್ಡಗಿದ್ದ ಈ ಕಾಯಿಯೊಳಗೇನಿದ್ದೀತು ಎಂಬ ಕುತೂಹಲದಿಂದ ಕತ್ತರಿಸಿ ನೋಡಲಾಗಿ,   ಅಬ್ಬಾ,  ಒಳಗಿನ ಪರಿಮಳ!  ಥೇಟ್ ಕಂಚು ಹುಳಿಯ ಕಮ್ಮನೆ ಬಂದಿತು.  " ಸುಮ್ಮನೆ ಅಲ್ಲ ಇದನ್ನು ಸೀ ಕಂಚಿ  (ಸಿಹಿ ಕಂಚಿ ) ಅಂದಿರೋದು "  ಅಂದ್ಕೊಳ್ಳುತ್ತ  ಹಣ್ಣಿನ ತಿರುಳು ಇನ್ನೂ ಮೂಡಿರದ ಕಾಯಿಗಳನ್ನು ಹೋಳುಗಳನ್ನಾಗಿಸಿ ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಸಿಟ್ಟಾಯಿತು.    ಅಜೀರ್ಣ ಸಮಸ್ಯೆ ಬಂದಾಗ ಕಂಚು ಹುಳಿಯ ಸಿಪ್ಪೆ ಉಪ್ಪಿನಲ್ಲಿ ಹಾಕಿಟ್ಟಿದ್ದನ್ನು ತಂಬ್ಳಿ ಮಾಡಿ ಉಣ್ತೀವಲ್ಲ,  ಇದನ್ನೂ ಅದೇ ಥರ ಮಾಡಿಕೊಳ್ಳಲಡ್ಡಿಯಿಲ್ಲ ಎಂದಿತು ಮನಸ್ಸು.

ಹುಣಸೇಬೀಜದಷ್ಟು ದೊಡ್ಡದಾದ ಬೀಜಗಳೂ ಈ ಹಣ್ಣಿನೊಳಗಿವೆ.  ಬೀಜಗಳೇ ಹೊಸ ಸಸ್ಯೋತ್ಪತ್ತಿಗೆ ಆಧಾರ.   ಬೀಜದ ಎಣ್ಣೆಯು ಆಂಟಿ ಓಕ್ಸಿಡೆಂಟ್ ಗುಣವುಳ್ಳದ್ದು ಹಾಗೂ  ಪರಿಸರಸ್ನೇಹಿಯಾದ ಈ ಎಣ್ಣೆ ಕೀಟನಾಶಕ.   ಕೈತೋಟದ ಸಸ್ಯಗಳು ಕೀಟಬಾಧೆಯಿಂದ ರೋಗಗ್ರಸ್ತವಾಗಿವೆಯೇ,  ಚಕೋತಾ ಬೀಜದೆಣ್ಣೆಯನ್ನು ಸಿಂಪಡಿಸಿ.   ಎಣ್ಣೆಯನ್ನು ಗಾಯಗಳಿಗೆ ಹಚ್ಚುವುದೂ ಗುಣಕಾರಿ,   ಗಾಯದ ಕಲೆಗಳನ್ನೂ ಇನ್ನಿಲ್ಲದಂತೆ ನಿವಾರಿಸುವುದು.   ಅಡುಗೆಮನೆಯನ್ನು ಶುಚಿಗೊಳಿಸಲೂ  ಉಪಯುಕ್ತ,  ಚಕೋತಾ ಬೀಜದ ಎಣ್ಣೆ ಬಳಸಿ ಫಂಗಸ್,  ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸಿ ಸುಗಂಧಪೂರಿತ ಅಡುಗೆ ಕೋಣೆ ನಿಮ್ಮದಾಗಿಸಿ.   ಜಜ್ಜಿದ ಎಲೆಗಳನ್ನು ಸ್ನಾನಗೃಹದ ಬಿಸಿನೀರಿಗೆ ಹಾಕಿ,  ಪರಿಮಳದ ನೀರಿನಲ್ಲಿ ಮಿಂದು ಬನ್ನಿ.





ಹಣ್ಣುಗಳನ್ನು ಹಲವು ತಿಂಗಳು ಕಾಪಾಡಿಕೊಳ್ಳಬಹುದು.  ಒಮ್ಮೆ ಏನಾಯ್ತೂಂದ್ರೆ ಚಕೋತಾ ಹಣ್ಣುಗಳಾದವು.  ಹಣ್ಣು ತಿನ್ಬೇಕಾಗಿದ್ದ ಮಗ ದೂರ ದೆಹಲಿಯಲ್ಲಿದ್ದ.  ಅವನು ಬರದೇ ನಾನು ಕೀಳಲಿಲ್ಲ,  ಮರದಿಂದ ಬೀಳಲೂ ಇಲ್ಲ.  ಜನವರಿಯಲ್ಲಿ ಕೀಳಬೇಕಾಗಿದ್ದ ಹಣ್ಣುಗಳು ಮಾರ್ಚ್ ತಿಂಗಳು ಬಂದಾಗ ಮಗ ಮನೆಗೆ ಬಂದ ಹೊತ್ತಿನಲ್ಲಿ ಒಳಗೆ ಬಂದವು.  ಮರದಲ್ಲೇ ಹಣ್ಣಾಗಿದ್ದು ತುಂಬ ಸ್ವಾದಿಷ್ಟವಾಗಿರುತ್ತವೆ ಅನ್ನೂದನ್ನು ಈ ಸಂದರ್ಭದಲ್ಲಿ ತಿಳಿಯುವಂತಾಯಿತು.   ಸಿಪ್ಪೆ ಸುಲಿಯುವಾಗಲೂ ಅಷ್ಟೇ,  ಕೈಗಳಿಗೆ ಅಹಿತಕರವಾಗಿರುವುದಿಲ್ಲ,    ಪಪ್ಪಾಯಿ,  ಅನಾನಸ್ ನಂತಹ ಕೆಲವು ಹಣ್ಣುಗಳ ಸಿಪ್ಪೆ ತೆಗೆಯುತ್ತಿದ್ದ ಹಾಗೆ ಕಿರಕಿರಿಯೆನಿಸುವಷ್ಟು ರಸ ಜಿನುಗಲಾರಂಭಿಸುವುದು ಸಾಮಾನ್ಯ.

ಸಂಧಿವಾತದಿಂದ ಬಳಲುತ್ತಿರುವವರಿಗೆ ಚಕೋತಾ ಹಣ್ಣಿನ ರಸ ಸೇವನೆ ಗಂಟುಗಳನ್ನು ಸಡಿಲಿಸಿ ಹಿತವನ್ನುಂಟು ಮಾಡುವುದು.   ಚಕೋತಾ ಹಣ್ಣಿನ  ಸಿಪ್ಪೆ ಹಾಗೂ ಶುಂಠಿ ಅರೆದ ಮಿಶ್ರಣದ ಲೇಪವನ್ನು ಗಂಟುನೋವಿಗೆ ಹಚ್ಚುವುದು ಸಂಧಿವಾತಕ್ಕೆ ಪರಿಣಾಮಕಾರೀ ಚಿಕಿತ್ಸೆಯೆನಿಸಿದೆ.   ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿ ಪ್ರಬಲವಾಗಿರುವ ಹಣ್ಣು,  ಚರ್ಮ ನೆರಿ ಕಟ್ಟದಂತೆ,  ವಯಸ್ಸಾಗುತ್ತಿರುವುದನ್ನೂ ತಡೆಯುವ ಬಲಾಢ್ಯ ಶಕ್ತಿ ಇದರದ್ದು.

ಹಣ್ಣುಗಳನ್ನು ಹಾಗೇನೇ ತಿನ್ನುವುದೇ ಉತ್ತಮ.  ದೊಡ್ಡ ಹಣ್ಣು,  ಸಿಪ್ಪೆ ಸುಲಿದಿಟ್ಟು,  ತೊಳೆ ತೆಗೆದಿಟ್ಟು ತಟ್ಟೆಯಲ್ಲಿಟ್ಟಿದ್ದು ಮುಗಿದಿಲ್ಲ.   ಚಿಂತೆ ಮಾಡಬೇಕೆಂದಿಲ್ಲ.   ಹಣ್ಣು ಹಾಳಾಗುವುದಿಲ್ಲ,  ರೆಫ್ರಿಜರೇಟರ್ ಏನೂ ಬೇಡ,  ಹಾಗೇ ಮುಚ್ಚಿಡಿ,  ನಾಳೆ ತಿನ್ನಬಹುದು.   ಇನ್ನಿತರ ಹಣ್ಣುಗಳೊಂದಿಗೆ ಸೇರಿಸಿ ಫ್ರುಟ್ ಸಲಾಡ್ ಬೇಕಿದ್ದರೂ ಮಾಡಬಹುದು.    ಬಿಡಿ ಎಸಳುಗಳನ್ನು ಸ್ವಚ್ಛಗೊಳಿಸುವ ಕೆಲಸವೊಂದೇ ಇರೂದು ಇಲ್ಲಿ.  ಸಕ್ರೆ ಕಂಚೀಕಾಯಿ ಎಂದೂ ಹೆಸರಿರುವ ಈ ಹಣ್ಣನ್ನು ಸಕ್ಕರೆ ಬೆರೆಸಿಯೂ ತಿನ್ನಿ.   ಸಕ್ಕರೆ ಹಾಕಿ ಜಾಮ್ ಮಾಡಬಹುದು.   ಮುರಬ್ಬ ಪಾಕ ಮಾಡಿ ಕೆಲವು ತಿಂಗಳು ಜೋಪಾನ ಮಾಡಬಹುದು,  ಈ ಪ್ರಯೋಗಗಳನ್ನು ಇನ್ನೂ ಮಾಡಿಲ್ಲ.    ಏನಿದ್ದರೂ ಹಲಸಿನ ಹಣ್ಣು ಬಿಡಿಸುವ ಶ್ರಮದ ಮುಂದೆ ಇದನ್ನು ಸುಲಿದು ತಿನ್ನುವುದು ಶ್ರಮವೇ ಅಲ್ಲ.

ವಿದೇಶೀಯರು pomelo,  pummelo ಇತ್ಯಾದಿ ಹೆಸರಿರಿಸಿರುವ ಈ ಸಸ್ಯ ಏಷಿಯಾ ಮೂಲದ್ದಾಗಿರುತ್ತದೆ.   ಗುಲಾಬಿ ವರ್ಣವಲ್ಲದೆ ಬಿಳಿ ಬಣ್ಣದ ಹಣ್ಣುಗಳೆಂದು ಎರಡು ಜಾತಿಯಾಗಿ ಚಕೋತಾ ಹಣ್ಣುಗಳು ಕಾಣ ಸಿಗುತ್ತವೆ. ಅಡಿಕೆ ತೋಟದೊಳಗೆ ಸ್ಥಳಾವಕಾಶ ಇರುವಲ್ಲಿ ಹಲವಾರು ಗಿಡಗಳನ್ನು ನೆಟ್ಟು ಸಾಕಿದರೆ ಉಪ ಆದಾಯವನ್ನೂ ಗಳಿಸಬಹುದು.   ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆಯೂ ಇದೆ.   ನೆಂಟರಿಷ್ಟರಿಗೆ,  ಸ್ನೇಹಿತರಿಗೆ ಉಚಿತವಾಗಿ ಹಂಚಲೂ ಬಹುದು.  ಮೊದಲ ಬಾರಿ  " ಚಕೋತಾ ಹಣ್ಣಾಯ್ತು "  ಎಂಬ ಸುದ್ದಿ ತಿಳಿದಾಕ್ಷಣ ನನ್ನತ್ತಿಗೆ ಧಾವಿಸಿ ಬಂದಿದ್ದರು.   ನೆಟ್ಟ ಗಿಡ ಫಲ ಕೊಟ್ಟಿತು ಎಂಬ ಸಂತಸದ ಅನುಭೂತಿಯೇ ಬೇರೆ.   ಅತ್ತಿಗೆ ತಾವೇ ಹಣ್ಣು ಸುಲಿದು ಸಂಭ್ರಮದಿಂದ ಎಲ್ಲರಿಗೂ ಹಂಚಿ,  ಊರಿಗೆ ತೆರಳುವಾಗ ಮನೆಯಲ್ಲಿ ತಿನ್ನಲು ಹಣ್ಣುಗಳನ್ನು ಕೊಂಡೂ ಹೋದರು.







ಈ ಬರಹವನ್ನು ಸಿದ್ಧಪಡಿಸಿ ಮೂರು ತಿಂಗಳ ಮೇಲಾಯಿತು.   ನಿನ್ನೆ ಯಾಕೋ ಮರದ ಬಳಿ ಬಂದು ಇನ್ನೆಷ್ಟು ಹಣ್ಣುಗಳು ಬಾಕಿಯಿವೆ ಎಂದು ಪಕ್ಷಿನೋಟ ಬೀರಿದಾಗ ಮರ ತುಂಬಾ ಗೆಜ್ಜೆ ಕಟ್ಟಿದಂತೆ ಹೂ ಗೊಂಚಲುಗಳು,  ನೆಲದಲ್ಲೂ ಉದುರಿದ ಬಿಳಿ ಬಿಳೀ ಹೂ ಪಕಳೆಗಳು,    ಓಹೋ,  ಹೌದಲ್ಲ,  ವಸಂತ ಕಾಲ ಬಂದಿದೆಯಲ್ಲ.   ಸೌರಮಾನ ಯುಗಾದಿ ವಿಷು ಬಂದಿದೆ.   ಸಸ್ಯಸಂಕುಲವೆಲ್ಲ ಹೊಸ ಸೃಷ್ಟಿಯತ್ತ ಹೊರಟಿವೆ.   ನಾವೂ ಪ್ರಕೃತಿಯ ಈ ಆನಂದದಲ್ಲಿ ಭಾಗಿಯಾಗೋಣ.     ಸೂರ್ಯನ ಪಥ ಎಂದಿಗೂ ಬದಲಾಗುವುದಿಲ್ಲ,   ಮೇಷರಾಶಿಗೆ ಸೂರ್ಯನ ಪ್ರವೇಶದ ಘಳಿಗೆ ಎಂದಿಗೂ ಎಪ್ರಿಲ್ 14ರಂದೇ ಆಗುವಂಥದ್ದು,  ಈ ಸಂಕ್ರಮಣ ಕಾಲವೇ ನಮ್ಮ ಪಂಚಾಂಗದಲ್ಲಿ ಸೌರಮಾನ ಯುಗಾದಿ ವಿಷು ಎಂದೇ ಗುರುತಿಸಿಕೊಂಡಿದೆ.  ಸುಖ ಸಮೃದ್ಧಿಯ ಬದುಕು ನಮ್ಮೆಲ್ಲರದಾಗಲಿ.  ಬ್ಲಾಗ್ ಓದುಗರಿಗೆಲ್ಲರಿಗೂ ಸೌರಮಾನ ಯುಗಾದಿಯ ಶುಭಾಶಯಗಳು.


Posted via DraftCraft app

Thursday, 27 March 2014

ತಾಪವೇಕೆ, ಆಹಾ! ಸೆಕೆ ಸೆಕೆ......







ಹಣ್ಣುಹಂಪಲು,  ಹಸಿ ತರಕಾರಿ,  ಮಜ್ಜಿಗೆನೀರು ಇತ್ಯಾದಿಗಳನ್ನು ಧಾರಾಳವಾಗಿ ಸೇವಿಸುವುದರಿಂದ ಸೆಕೆಯ ತಾಪ ಕಡಿಮೆ ಮಾಡಿಕೊಳ್ಳಬಹುದು.
ಊಟದ ಮೊದಲು ಗಂಜಿನೀರಿಗೆ ಉಪ್ಪು ಸೇರಿಸಿ,  ಮಜ್ಜಿಗೆ ಎರೆದು ಕುಡಿಯಿರಿ.
ಬಚ್ಚಂಗಾಯಿ ಜ್ಯೂಸ್ ಕುಡಿಯಿರಿ.   ಬಿಸಿಲಿಗೆ ಚರ್ಮದ ಕಾಂತಿ ಕುಂದದಂತೆ ತಡೆಗಟ್ಟಿರಿ.   ದೇಹ ನಿರ್ಜಲೀಕೃತವಾಗದಿರಲು ತಾಜಾ ಹಣ್ಣುಗಳ ರಸ ಅತ್ಯುತ್ತಮ,  ರಕ್ತದೊತ್ತಡ ನಿಯಂತ್ರಣ,  ಕಿಡ್ನಿಯ ರಕ್ಷಣೆ ಇತ್ಯಾದಿ ಆರೋಗ್ಯ ಸಂಬಂಧಿ ಪ್ರಯೋಜನಗಳ ಲಾಭ ಪಡೆಯಿರಿ.
ಕಾಫಿ,  ಚಹಾಗಳನ್ನು ಬೇಸಗೆಯಲ್ಲಿ ದೂರವಿರಿಸುವುದು ಉತ್ತಮ.
ಕಬ್ಬಿನ ಹಾಲು ಕುಡಿಯಿರಿ,  ಲಿಂಬೆ ಹಾಗೂ ಶುಂಠಿ ಸೇರಿಸಿದ್ದು ಅತ್ಯುತ್ತಮ.   ಉರಿಉಷ್ಣದಿಂದ ಮೂತ್ರ ವಿಸರ್ಜಿಸಲೂ ಪ್ರಯಾಸವಾಗುತ್ತಿದ್ದರೆ ಈ ಕಬ್ಬಿನ ಹಾಲು ಕೂಡಲೇ ಪರಿಣಾಮಕಾರೀ ಗುಣ ಕೊಡುವುದು.  
ಅನಾನಸ್ ರಸಭರಿತ ಹಣ್ಣು,  ಧಾರಾಳವಾಗಿ ತಿನ್ನಿ.
 ಎಳನೀರು ಅಂದರೆ ಬೊಂಡ ಕುಡಿಯಿರಿ,   ದಿನವೂ ಕುಡಿದರೂ ಒಳ್ಳೆಯದೇ.
ತಾಜಾ ಹಣ್ಣುಗಳನ್ನು ಕೊಂಡು ತಂದು ಮನೆಯಲ್ಲೇ ಜ್ಯೂಸ್ ತಯಾರಿಸಿ ಕುಡಿಯಿರಿ.   ಸಕ್ಕರೆ ಹೆಚ್ಚು ಹಾಕುವ ಅಗತ್ಯವಿಲ್ಲ.   
ತಾಜಾ ತರಿಕಾರಿಗಳು,   ಹಸಿಯಾಗಿ ಸೇವಿಸಲು ಯೋಗ್ಯವಾದಂತಹ ಟೊಮ್ಯಾಟೋ,  ಜ್ಯೂಸ್ ಚೆನ್ನಾಗಿರುತ್ತದೆ. 
ಮುಳ್ಳುಸೌತೆಯನ್ನು ಊಟದೊಂದಿಗೆ ಸಲಾಡ್ ಮಾಡಿಟ್ಟು ತಿನ್ನಿ.
ಮೊಳಕೆ ಕಾಳುಗಳು,  ಪಚ್ಚೆಹಸ್ರು ತುಂಬಾ ತಂಪು. ಮೊಳಕೆ ಬರಿಸಿ ಬೇಯಿಸಿ ತಿನ್ನಬಹುದು,   ಹಸಿಯೂ ಆದೀತು.   ಆದರೆ ಹಸಿಕಾಳುಗಳನ್ನು ಹೆಚ್ಚು ತಿನ್ನಲಾಗುವುದಿಲ್ಲ.
ಹಸಿರು ಸೊಪ್ಪು ತರಕಾರಿಗಳಾದ ಹರಿವೆ, ಬಸಳೆಗಳನ್ನು ಮರೆಯದಿರಿ.
ರಾಗಿ ಅಂಬಲಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.  
ಕೃತಕ ರಾಸಾಯನಿಕಗಳಿಂದ ತುಂಬಿದ ಲಘು ಪಾನೀಯಗಳಿಂದ ದೂರವಿರಿ.

ದಿನದಲ್ಲಿ ಕನಿಷ್ಠ ಒದು ತಂಬಿಗೆ ನೀರು ಅಂದರೆ ಏಳೆಂಟು ಲೋಟಾ ನೀರು ಕುಡಿಯಲೇಬೇಕು.   ದೇಹದಿಂದ ಸತತವಾಗಿ ಬೆವರು,  ಮೂತ್ರಗಳೆಂದು ನೀರು ನಷ್ಟವಾಗುತ್ತಿರುತ್ತದೆ.   ಯಾವಾಗ ನೀರು ಸಾಕಷ್ಟು ಪ್ರಮಾಣದಲ್ಲಿ ಉದರವನ್ನು ಸೇರುವುದಿಲ್ಲವೋ ಆಗಲೇ ಶರೀರದಲ್ಲಿ ಡಿಹೈಡ್ರೇಶನ್ ಪ್ರಾರಂಭ ಎಂಬುದನ್ನು ತಿಳಿಯಿರಿ.   ನೀರಿನ ಕೊರತೆ ಬಂದಾಗ ಅಂಗೋಪಾಂಗಗಳಲ್ಲಿ ತೊಂದರೆ ಕಾಣಿಸುವುದು ನಿಶ್ಚಿತ.   ಶುದ್ಧವಾದ ನೀರು ಕುಡಿಯುತ್ತಾ ಇರುವುದು ಅತ್ಯಾವಶ್ಯಕ.   ನೀರು ಕುಡಿಯುವ ಕ್ರಿಯೆಯನ್ನೂ ಆನಂದಿಸುತ್ತಾ ಕುಡಿಯಿರಿ.

ತಾಮ್ರದ ಬಿಂದಿಗೆಯಲ್ಲಿ ನೀರು ತುಂಬಿಸಿಟ್ಟು 7 -8 ಗಂಟೆ ಬಿಟ್ಟು ಕುಡಿಯಿರಿ.  ಇದು ನಮ್ಮ ಪರಂಪರಾಗತ ಮಿನರಲ್ ವಾಟರ್ ಎಂಬುದು ತಿಳಿದಿರಲಿ.   

ಬೇಸಿಗೆಯ ದೈಹಿಕ ತೊಂದರೆಗಳಾದ ಬೆವರುಸಾಲೆ,   ಮೈ ತುರಿಕೆ ಬಾಧೆಗೊಳಗಾಗಲು ಆಸ್ಪದ ಕೊಡಬೇಡಿ,   ನಿಯಮಿತವಾಗಿ ದಿನಕ್ಕೆರಡು ಬಾರಿ ತಣ್ಣೀರ ಸ್ನಾನ ತಪ್ಪಿಸದಿರಿ.  ಹತ್ತಿಯ ಬಟ್ಟೆಗಳನ್ನೇ ಧರಿಸಿರಿ.

ಸೆಕೆಯನ್ನು ಓಡಿಸಲು ಆಧುನಿಕ ಸವಲತ್ತುಗಳು ಏನೇನೋ ಇವೆ.   ವಿಜ್ಞಾನ ಬಹಳ ಮುಂದುವರಿದಿದೆ ದಿಟ,   ಆದರೆ ನಮ್ಮ ಪರಿಸರದ ರಕ್ಷಣೆಯೂ ನಮ್ಮ ಕೈಯಲ್ಲೇ ಇರುತ್ತದೆ ಎಂಬುದನ್ನೂ ಕಡೆಗಣಿಸದಿರಿ.   ಸುತ್ತಮುತ್ತ ಹಸಿರು ಸಸ್ಯಗಳನ್ನು ಉಳಿಸಿ ಹಾಗೂ ಬೆಳೆಸಿ.   ಮನೆಯ ಮುಂದೆ ಪುಟ್ಟ ಉದ್ಯಾನವಿರಲಿ,   ದಿನವೂ ಗಿಡಸಸ್ಯಗಳಿಗೆ ನೀರುಣಿಸುವ ಆನಂದದಲ್ಲಿ ಭಾಗಿಯಾಗಿ ಸಂತಸ ಪಡೆಯಿರಿ.


Posted via DraftCraft app

Saturday, 22 March 2014

ಮುರಬ್ಬಾ ಹಬ್ಬ







ದೀಪಾವಳಿ ಬರುತ್ತಿದ್ದ ಹಾಗೇ ನೆಲ್ಲಿಕಾಯಿಯೂ ಮಾರುಕಟ್ಟೆಗೆ ಹಾಜರು.   ತುಳಸೀಪೂಜೆಯ ಸಂಭ್ರಮದಲ್ಲಿ ನೆಲ್ಲಿಕಾಯಿಗಳದ್ದೇ ತೋರಣ.   ಗೋಪೂಜೆ,  ಬಲೀಂದ್ರಪೂಜೆ,  ಅಂಗಡಿಪೂಜೆ ( ಲಕ್ಷ್ಮೀಪೂಜೆ ),  ಎಲ್ಲವೂ ಬದುಕು ಸಂಪತ್ಭರಿತವಾಗಿರಲಿ ಎಂದೇ ಹಾರೈಸುವ ಕ್ರಿಯೆಗಳಾಗಿವೆ.   ದೀಪಗಳ ಹಬ್ಬ ಐಶ್ವರ್ಯದ ಸಂಕೇತ.   ಐಶ್ವರ್ಯದ ಅಧಿದೇವತೆ ಲಕ್ಷ್ಮಿಯೊಂದಿಗೆ ನೆಲ್ಲಿಮರವನ್ನೂ ನಮ್ಮ ಹಿರಿಯರು ಸಮೀಕರಿಸಿ ಇಟ್ಟಿದ್ದಾರೆ, ಯಾಕೋ ತಿಳಿಯದು.

ದೀಪಾವಳಿ ಬಂದಿತೇ,  ನಮ್ಮನೆಗೂ ನೆಲ್ಲಿಕಾಯಿ ಬಂದಿತು.   ಮಗಳೂ ಮನೆಯಲ್ಲಿದ್ದಳು.   ಅವಳಿಗಾಗಿ ತಂದಿದ್ದ ನೆಲ್ಲಿಕಾಯಿಯನ್ನು ತಿನ್ನದೇ ಹಾಗೇ ಇಟ್ಟಿದ್ದಳು.

   " ಯಾಕೇ ತಿನ್ಲಿಲ್ಲ?  ತುಂಬಾ ಒಳ್ಳೇದು,  ವಿಟಮಿನ್ ಸಿ ಕಂಡಾಬಟ್ಟೆ ಇದ್ಯಂತೆ "

" ಹೋಗಮ್ಮ,  ಅದನ್ನೇ ತಿಂತಾ ಇರಲು ನಾನೇನು ಪುಟ್ಟು ಮಗುವಾ "  ಅಂದಳು.   " ಬೇಕಿದ್ರೆ ಉಪ್ಪಿನಕಾಯಿ ಹಾಕಿಕೋ "

ಉಪ್ಪಿನಕಾಯಿ ಹಾಕಬಹುದಿತ್ತು,   ಸೌತೆಕಾಯೀದು ಉಪ್ಪಿನಕಾಯಿ ಜಾಡಿ ತುಂಬಾ ಇತ್ತು.   ಒಂದು ಪ್ರತಿ ಮುಗಿಯದೆ ಮತ್ತೊಂದು ಜಾಡಿ ಉಪ್ಪಿನಕಾಯಿ ವ್ಯರ್ಥ ಶ್ರಮ ಅಂದ್ಕೊಂಡು ಸುಮ್ಮನಾಗಬೇಕಾಯಿತು.   ಮಗಳ ಅಪ್ಪನೂ ನೆಲ್ಲಿಕಾಯಿ ತಿನ್ನುವ ಸುದ್ದಿಗೇ ಬರಲಿಲ್ಲ.   ಹಾಗೇ ಟೇಬಲ್ ಮೇಲೆ ಕಂಗಾಲಾಗಿ ಕೂತಿದ್ದ ನೆಲ್ಲಿಕಾಯಿಗಳಿಗೆ ಒಂದು ಗತಿ ಕಾಣಿಸದಿದ್ದರೆ ಹೇಗೆ?   ಮುರಬ್ಬಾ ನೆನಪಿಗೆ ಬಂದಿತು.   ಸಕ್ಕರೆಪಾಕದಲ್ಲಿ ಹಾಕಿಟ್ಟು ತಿನ್ನುವಂತಹದು,  ಮಾಡಿ ನೋಡಿದ್ರೆ ಏನಾದೀತು ?   

ಇದ್ದಿದ್ದು ಒಂದ್ ಹದಿನೈದು ನೆಲ್ಲಿಕಾಯಿಗಳು.   ನೆಲ್ಲಿಕಾಯಿ ಬೇಯಿಸಲು ನೀರು ಕುದಿಯಲಿಟ್ಟಾಯ್ತು,  ನೀರು ಗಳಗಳನೆ ಕುದಿಯಿತೇ,  ಪೇಟೆಯಿಂದ ತಂದ ಆ ನೆಲ್ಲಿಕಾಯಿಗಳನ್ನು ತೊಳೆದು ಕುದಿನೀರಿಗೆ ಹಾಕಿದ್ದಾಯ್ತು.   ಒಂದು ತಪಲೆಯಲ್ಲಿ ಒಂದು ಕಪ್ ಸಕ್ಕರೆಗೆ ನೀರೆರೆದು ಕುದಿಸಿದ್ದರಲ್ಲಿ ಸಕ್ಕರೆಪಾಕ ಆಗ್ಹೋಯ್ತು.   ಬೆಂದ ನೆಲ್ಲಿಕಾಯಿಗಳನ್ನು ಪುನಃ ಈ ದ್ರಾವಣಕ್ಕೆ ಹಾಕಿ ಕುದಿಸುತ್ತಿರಬೇಕಾದರೆ ನಮ್ಮೆಜಮಾನ್ರು ಅಡುಗೆಮನೆಗೆ ಆಗಮಿಸಿದರು.  " ಇದೇನ್ಮಾಡ್ತಾ ಇದ್ದೀ,  ಓ,  ನೆಲ್ಲಿಕಾಯಿ ಹೀಗೂ ಆಗುತ್ತಾ..." ರಾಗ ಎಳೆದರು.

" ಇದು ತಣಿಯಲಿ,  ಆಮೇಲೆ ತಿಂದು ಹೇಳಿ "  ಅನ್ನುತ್ತಾ ಒಲೆಯಲ್ಲಿದ್ದ ತಪಲೆಯನ್ನು ಕೆಳಗಿರಿಸಿ  " ಅದೇನೋ ಚ್ಯವನಪ್ರಾಶ ಅಂತ ತಂದಿಟ್ಕೊಂಡಿದೀರಲ್ಲ,  ಅದ್ರಲ್ಲಿರೂದು ಇದೇ ನೆಲ್ಲಿಕ್ಕಾಯ್ "  ಅಂತಂದು ನಾನೊಂದು ನೆಲ್ಲಿಕಾಯಿಯನ್ನು ತೆಗೆದು ಬಾಯಿಗೆ ಹಾಕ್ಕೊಂಡೆ.

" " ಓ ಹೌದ,  ಹಾಗಿದ್ರೆ ಇನ್ನೂ ಸ್ವಲ್ಪ ಮಾಡಿಡು... ಒಳಗಿನ ಕಾಯಿ ತೆಗೆದಿದ್ದರೆ ಚೆನ್ನಾಗಿತ್ತು "

" ಇದ್ರೆ ತೊಂದರೆ ಎಂಥದು,  ಆಚೆ ಎಸೆದ್ರಾಯ್ತು "

ಸಂಜೆ ಪೇಟೆಯಿಂದ ಬರಬೇಕಾದರೆ ಪುನಃ ನೆಲ್ಲಿಕಾಯಿಗಳು ಆಗಮಿಸಿದುವು.   ಭರ್ತಿ ಎರಡು ಕಿಲೊ ಇದ್ಹಾಂಗಿತ್ತು.   " ಇಷ್ಟು ನೆಲ್ಲಿಕಾಯಿ ಯಾತಕ್ಕೆ ತಂದ್ರಿ,  ಏನು ಮಾಡ್ಲೀ ?"

" ಮಾಡು ಅದನ್ನೇ,  ಸಕ್ಕರೆ ಹಾಕಿದ್ದು ಚೆನ್ನಾಗಿತ್ತು "

" ಹೀಗೋ ಸಂಗತಿ,  ಆದ್ರೆ ಸಕ್ಕರೆ ತರಬೇಕಾಗಿತ್ತು "

" ಈಗ ಇರುವ ಸಕ್ಕರೆಯಲ್ಲಿ ಮಾಡು "

ಡಬ್ಬದಲ್ಲಿರುವ ಸಕ್ಕರೆಯನ್ನೆಲ್ಲ ಸುರುವಿ ಮಾಡಬಹುದಾಗಿತ್ತು,   ಹೀಗೆ ಸುಮ್ ಸುಮ್ನೆ ಸಕ್ಕರೆಪಾಕದಲ್ಲಿ ಹಾಕಿಟ್ಟ ನೆಲ್ಲಿಕಾಯಿಗಳು ಎಷ್ಟು ದಿನಾಂತ ಚೆನ್ನಾಗಿರ್ತವೋ ಅದೂ ಗೊತ್ತಿಲ್ಲ.   ಈ ಮುರಬ್ಬ ಎಷ್ಟಾದರೂ ಉತ್ತರಭಾರತೀಯರ ತಿನಿಸು.   ನಾವು ಮಾಡೋದೇನಿದ್ರೂ ಉಪ್ಪಿನಕಾಯಿ,  ನೆಲ್ಲಿಂಡಿ,  ನೆಲ್ಲಿಸಟ್ಟು,   ನೆಲ್ಲಿಪುಡಿ,  ಹಾಗೇನೇ ಒಣಗಿಸಿ ಇಟ್ಟುಕೊಳ್ಳೂದು.  ಈ ಥರ ಬಿಟ್ರೆ ಬೇರೆ ಪಂಚಾಯ್ತಿ ಇಲ್ಲ.
ಅಂತರಜಾಲಾಟದಲ್ಲಿ ಒಂದು ಹಿಂದಿ ಬ್ಲಾಗ್ ಸಿಕ್ಕಿತು.   ನಾನು ಮಾಡಿದ ವಿಧಾನ ತಪ್ಪಿಲ್ಲ,  ಆರು ತಿಂಗಳು ಇಟ್ಟುಕೊಳ್ಳಬಹುದೆಂದೂ ತಿಳಿಯಿತು.

ಈಗ ಎರಡು ಕಿಲೊ ನೆಲ್ಲಿಕಾಯಿಗಳ ಮುರಬ್ಬ ಮಾಡೋಣ.

ತೊಳೆದ ನೆಲ್ಲಿಕಾಯಿಗಳನ್ನು ಚೂರಿಯಲ್ಲಿ ಗೀರು ಹಾಕಿ ಇಟ್ಟುಕೊಳ್ಳಿ.
ಮುಳುಗುವಷ್ಟು ನೀರೆರೆದು ಕುದಿಸಿ,  ಆರಲು ಬಿಡಿ.
ನೀರು ಬಸಿಯಿರಿ,  ತೂತಿನ ಪಾತ್ರೆಗೆ ಹಾಕಿದರೆ ಉತ್ತಮ.
ಆರು ಕಪ್ ಸಕ್ಕರೆಗೆ ಮುಳುಗುವಷ್ಟು ನೀರೆರೆದು ಕುದಿಸಿ,  ಒಂದೆಳೆ ಪಾಕ ಬರಲಿ.
ಬೆಂದ ನೆಲ್ಲಿಕಾಯಿಗಳನ್ನು ಪಾಕಕ್ಕೆ ಹಾಕಿ ಪುನಃ ಕುದಿಸಿ.
ಸಿಹಿಯೊಂದಿಗೆ ಉಪ್ಪು ಅವಶ್ಯವಿದೆ,  ಒಂದು ಚಮಚ ಉಪ್ಪು ಬೀಳಲಿ.
ಚಿಕ್ಕ ಉರಿಯಲ್ಲಿ 20 - 30 ನಿಮಿಷ ಬೇಯುತ್ತಿರಲಿ.
ಏಲಕ್ಕಿ,  ಇನ್ನಿತರ ಸುವಾಸನಾ ದ್ರವ್ಯಗಳನ್ನೂ ಹಾಕಬಹುದು,  ನಾನು ಹಾಕಿಲ್ಲ.
ಚೆನ್ನಾಗಿ ಆರಿದ ನಂತರ ಶುದ್ಧವಾದ ಒಣ ಜಾಡಿಯಲ್ಲಿ ತುಂಬಿಸಿ.

ಹೀಗೆ ಗಳಗಳನೆ ಕುದಿದ ನೆಲ್ಲಿಕಾಯಿಗಳು ಸಕ್ಕರೆಯನ್ನೂ ಹೀರಿ ಮೃದುವಾಗಿರುತ್ತವೆ, ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದವರಿಗೆ ತಿನ್ನಬಹುದು.   ಬೆಳಗೆದ್ದು ತಿಂಡಿಗೆ ಮೊದಲು ಒಂದು ನೆಲ್ಲಿಕಾಯಿ,  ಊಟದ ಮೊದಲು ಇನ್ನೊಂದು,  ರಾತ್ರಿ ಮಲಗುವ ಮೊದಲು ಮತ್ತೊಂದು.   ಹೀಗೆ ತಿನ್ನುತ್ತಾ ಇರಿ,  ನವತಾರುಣ್ಯ ಗಳಿಸಿರಿ.

                                             
       


ಸಂಸ್ಕೃತದಲ್ಲಿ ಅಮಲಕವಾಗಿರುವ ನೆಲ್ಲಿಕಾಯಿ, ದೇವದಾನವರು ಸಮುದ್ರಮಥನ ಮಾಡುತ್ತಿದ್ದಾಗ  ಅಕಸ್ಮಿಕವಾಗಿ ಭೂಮಿಗೆ ಬಿದ್ದಂತಹ ಅಮೃತಬಿಂದುಗಳಿಂದ ಉಗಮವಾದ ಸಸ್ಯವೆಂದು ಪುರಾಣದಲ್ಲಿನ ಪುರಾಣ ಹೇಳುತ್ತದೆ.   ಅಮೃತ ತುಲ್ಯವಾದ ನೆಲ್ಲಿಕಾಯಿ ಸರ್ವರೋಗ ಪರಿಹಾರಕ,  ಧೀರ್ಘಾಯುಸ್ಸಿನ ಧಾತುಶಕ್ತಿ ಹೊಂದಿರುವಂತಹದೂ ಆಗಿದೆಯೆಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.   ನೆಲ್ಲಿಕಾಯಿ ಮಾತ್ರವಲ್ಲ,  ಇದರ ಹೂ,  ಬೀಜ,  ಎಲೆ,  ಕಾಂಡದ ತೊಗಟೆ, ಬೇರು ಕೂಡಾ ಆಯುರ್ವೇದ ಹಾಗೂ ಯುನಾನೀ ವೈದ್ಯಕೀಯ ಪದ್ಧತಿಯಲ್ಲಿ ಔಷಧಿಯಾಗಿ ಬಳಕೆಯಲ್ಲಿವೆ.   ವಾತ, ಕಫ, ಪಿತ್ತ ಎಂಬಂತಹ ತ್ರಿದೋಷಗಳನ್ನು ಶರೀರದಲ್ಲಿ ಸಮಪ್ರಮಾಣದ ನಿಯಂತ್ರಣ ಮಾಡಬಲ್ಲ ಶಕ್ತಿ ಇದರಲ್ಲಿದೆ.

 ಇತಿಹಾಸ ಕೆದಕಿದಾಗ ಆದಿ ಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರವನ್ನು ಗಮನಿಸಿ.   ದ್ವಾದಶಿಯ ದಿನ ಬಿಕ್ಷೆಗೆಂದು ಬಂದ ಯತಿಗಳಿಗೆ ನೀಡಲು ಮನೆಯೊಳಗೆ ಏನೂ ಇಲ್ಲದ ಬ್ರಾಹ್ಮಣ ಸ್ತ್ರೀ ತನ್ನ ಬಳಿಯಿದ್ದ ಒಣ ನೆಲ್ಲಿಕಾಯಿಯೊಂದನ್ನು ಕೊಟ್ಟಳಂತೆ.   ಆಕೆಯ ಬಡತನ ಕಂಡು ಮಮ್ಮಲ ಮರುಗಿದ ಶಂಕರಾಚಾರ್ಯರು ದೇವಿ ಮಹಾಲಕ್ಷ್ಮಿಯನ್ನು ಕನಕಧಾರಾ ಸ್ತೋತ್ರ ಮುಖೇನ ಪ್ರಾರ್ಥಿಸಿದರು,  ಲಕ್ಷ್ಮಿ ಒಲಿದಳು.   ಈಗಲೂ ಕೇರಳದಲ್ಲಿ ಶಂಕರಾಚಾರ್ಯರಿಗೆ ನೆಲ್ಲಿಕಾಯಿಯ ಬಿಕ್ಷೆ ನೀಡಿದ ಆ ಮನೆತನ ಇದೆ.

ನೆಲ್ಲಿಮರದ ಮೂಲ ನೆಲೆ ಭಾರತವೇ ಆಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.   ಕನ್ನಡ,  ತುಳು ಹಾಗೂ ತಮಿಳು ಭಾಷೆಗಳಲ್ಲಿ ನೆಲ್ಲಿಕಾಯಿ ಎಂದಾದರೆ ಮಲಯಾಳಂನಲ್ಲಿ ನೆಲ್ಲಿಕ್ಕ (നെല്ലിക്ക). ಸಸ್ಯಶಾಸ್ತ್ರೀಯವಾಗಿ phyllanthus emblica ಎಂದಾದರೆ ಆಂಗ್ಲ ಭಾಷೆಯಲ್ಲಿ Indian gooseberry ಆಗಿರುತ್ತದೆ.

ವಾಣಿಜ್ಯ ಉದ್ದೇಶದಿಂದ ನೆಲ್ಲಿಯನ್ನು ಬೆಳೆಸುವುದು ಕಡಿಮೆ.   ತೋಟಗಳಲ್ಲಿ ಅಲ್ಲೊಂದು ಇಲ್ಲೊಂದು ನೆಟ್ಟುಕೊಳ್ಳುವವರಿದ್ದಾರೆ.   ಇದರ ಸಾಕುವಿಕೆಗೆ ಅಂತಹ ಕಟ್ಟುಪಾಡುಗಳೇನೂ ಇಲ್ಲ.   ಕಸಿ ಕಟ್ಟಿದ ಗಿಡ ಬೇಗನೆ ಫಲ ನೀಡುವುದು.   ಹಾಗೇ ಸುಮ್ಮನೆ ಹುಟ್ಟಿದ ಗಿಡ ಫಲಭರಿತವಾಗಲು ವರ್ಷಾನುಗಟ್ಟಳೆ ಕಾಯಬೇಕಾದೀತು.   ವಿಟಮಿನ್ ಸಿ ಅಧಿಕವಾಗಿರುವ ಫಲ,   ಹಸಿ ನೆಲ್ಲಿಕಾಯಿ ತಿನ್ನುವುದಕ್ಕಿಂತ ಬೇಯಿಸಿದ್ದು ಉತ್ತಮ,  ಬೇಯಿಸಿದರೂ,  ಒಣಗಿಸಿ ಪುಡಿ ಮಾಡಿದರೂ ವಿಟಮಿನ್ ನಷ್ಟವಾಗದಿರುವುದೇ ಇದರ ವಿಶೇಷ ಗುಣ.   ಉಪ್ಪಿನಕಾಯಿ,  ಮುರಬ್ಬಗಳಂತೆ ಹಣ್ಣಿನ ಪಾಕದ ಜೆಲ್ಲಿ ಮಾಡಿದರೂ ಚೆನ್ನಾಗಿರುತ್ತದೆ.    ಜೆಲ್ಲಿ ಮಾಡಬೇಕಿದ್ದಲ್ಲಿ ಬೇಯಿಸಿದ ನೆಲ್ಲಿಕಾಯಿಗಳ ಬೀಜ ತೆಗೆದು ಸಕ್ಕರೆ ಪಾಕದಲ್ಲಿ ಕುದಿಸಿ ಇಡುವುದು,  ಹೆಚ್ಚುಕಮ್ಮಿ ಮುರಬ್ಬ ತಯಾರಿಸಿದ ವಿಧಾನವನ್ನೇ ಬಳಸಿದರಾಯಿತು.   ನೆಲ್ಲಿಂಡಿ ಮಾಡಬೇಕಾದಲ್ಲಿ ಬೇಯಿಸಿದ ನೆಲ್ಲಿಕಾಯಿಗಳ ಬೀಜ ತೆಗೆದು ಉಪ್ಪಿನ ದ್ರಾವಣದಲ್ಲಿ ಕುದಿಸಿ ಮುದ್ದೆಗಟ್ಟಿ ಭರಣಿಯಲ್ಲಿ ತುಂಬಿಸಿ ಇಟ್ಟುಕೊಳ್ಳುವುದು,  ಇದರ ಉಪಯೋಗ ಅಜೀರ್ಣವಾದಾಗ ತಂಬುಳಿ ಮಾಡಿ ಉಣ್ಣುವುದು ಅಷ್ಟೇ ಮತ್ತೇನಿಲ್ಲ.  ಹಿಂದಿನ ಕಾಲದವರು ಅಂದರೆ ನನ್ನತ್ತೆ,  ಅಜ್ಜಿ ಈ ಥರ ಮಾಡಿ ಹೊಗೆ ತಾಗುವ ಅಟ್ಟದಲ್ಲಿ ಕೆಡದಂತೆ ಇಟ್ಟುಕೊಳ್ಳುವ ವಾಡಿಕೆ ಇತ್ತು.  

  ಒಣಗಿಸಿದ ನೆಲ್ಲಿ ಪುಡಿಯನ್ನು ತಲೆಗೆ ಪೇಸ್ಟ್ ತರಹ ಸವರಿಕೊಂಡು ಸ್ನಾನ ಮಾಡಿ,   ಹೊಳೆಯುವ ಕಾಂತಿಯುಕ್ತ ಕೂದಲನ್ನು ಪಡೆಯಿರಿ.   ಕೂದಲುದುರುವಿಕೆಯನ್ನೂ ತಡೆಗಟ್ಟಿರಿ.   ಕೇಶವರ್ಧಿನೀ ತೈಲಗಳಲ್ಲಿ ನೆಲ್ಲಿಕಾಯಿಯ ಸಾರವನ್ನೂ ಬಳಸಲಾಗುತ್ತದೆಂಬುದನ್ನೂ ಮರೆಯದಿರಿ.

Posted via DraftCraft app