Pages

Ads 468x60px

Sunday, 15 January 2017

ದೋಸೆಯ ಸುಪ್ರಭಾತ





              




ನಾಳೆ ಭಾನುವಾರ,  ಚೆನ್ನಪ್ಪ ರಜೇ..  ನಮ್ಮಿಬ್ಬರಿಗೆ ಬೇಕಾದಷ್ಟೇ ದೋಸೆ ಹಿಟ್ಟು ಅರೆದಿಟ್ಟರೆ ಮುಂಜಾನೆಯ ತಲೆಬಿಸಿ ಇಲ್ಲ.


ಒಂದು ಪಾವು ಬೆಳ್ತಿಗೆ ಅಕ್ಕಿ ಸಾಕು,  ಡಬ್ಬದಲ್ಲಿ ಮುಗಿಯುತ್ತ ಬಂದಿದೆ,  ಎಲ್ಲವನ್ನೂ ಅಳೆದಾಗ ಇನ್ನೂ ಅರ್ಧ ಪಾವಕ್ಕಿ ಹೆಚ್ಚಿಗೆ ಬಿದ್ದಿತು.   ಚಿಂತೆಯಿಲ್ಲ,  ಮುಗಿದೀತು.


ತೆಂಗಿನಕಾಯಿ ಕಡಿ ಇದೆ,  ಎರಡು ಬಾಳೆಹಣ್ಣು ಬೇಕಾಗಿದೆ.

ಎಲ್ಲವೂ ಸಿದ್ಧವಾಗಿದೆ,   ಅರೆಯುವುದೊಂದೇ ಬಾಕಿ.


ಕಸಪೊರಕೆ ಇಟ್ಟ ಮೂಲೆಯಿಂದ ಇರುವೆಗಳ ಸಾಲು ಸಾಲು ಹೊರಟಿದೆ.

ಎಲ್ಲಿಗೆ ಮೆರವಣಿಗೆ?

ಸಕ್ಕರೆ,  ಬೆಲ್ಲ,  ಹಾಲು,  ಮೊಸರು ಯಾವುದೂ ಆದೀತು.   ತುಪ್ಪ,  ಎಣ್ಣೆ,  ಬೆಣ್ಣೆ ಯಾವುದನ್ನೂ ನಾವು ಬಿಡೋರಲ್ಲ!


ಹೌದಲ್ಲ!   " ಇರುವೆಗೊಂದು ದಾರಿ ಕಾಣಿಸ್ರೀ... "    ಡಬ್ಬದಲ್ಲಿ ಏನೋ ಹುಡಿ ತಂದಿಟ್ಕೊಂಡಿದ್ರು,  ಇರುವೆಗಳ ಸಾಲು ಹೋದ ಜಾಗದಲ್ಲಿ,  ಅಲ್ಲಲ್ಲಿ ಕುಕ್ಕಿ ಹೋದ್ರು ನಮ್ಮೆಜಮಾನ್ರು.


ಈ ಧಾವಂತದೆಡೆಯಲ್ಲಿ ದೋಸೆಹಿಟ್ಟು ಅರೆಯಲಿಕ್ಕುಂಟೇ...   ಅದೇನಿದ್ದರೂ ನಾಳೆಗೇ ಮುಂದಿನ ಕಾರ್ಯಾಚರಣೆ.   ಸಾಧ್ಯವಾದ ಮಟ್ಟಿಗೆ ಇರುವೆಗಳು ಬೀಳದಂತೆ ಎಲ್ಲವನ್ನೂ ಮುಚ್ಚಿಟ್ಟು,  ಎತ್ತಿಟ್ಟು,  ತೆಂಗಿನಕಾಯಿಯನ್ನೂ ಭದ್ರವಾಗಿಟ್ಟೂ ಆಯ್ತು.


ಮುಂಜಾನೆಯ ಹೊತ್ತು,  ಅಡುಗೆಮನೆ ಶಾಂತವಾಗಿದ್ದಿತು.  ಒಮ್ಮೆ ಕಸಪೊರಕೆಯಾಡಿಸಿ ಕೆಲಸ ಪ್ರಾರಂಭಿಸೋಣ.


ಅಕ್ಕಿಯನ್ನು ಚೆನ್ನಾಗಿ ತೊಳೆದು,

ಅರ್ಧ ಕಡಿ ತೆಂಗಿನಕಾಯಿ ತುರಿದು,

ಎರಡು ಬಾಳೆಹಣ್ಣು ನುರಿದು,

ಎಲ್ಲವನ್ನೂ ಒಟ್ಟಿಗೆ ಅರೆದು,

ರುಚಿಗೆ ಉಪ್ಪು ಬಿದ್ದು,

ದೋಸೆಹಿಟ್ಟು ಸಿದ್ಧ.


ತೆಂಗಿನಕಾಯಿ ಚಟ್ಣಿ ಆಗಲೇ ಬೇಕು.  ಕಾಯಿತುರಿ,  ಈರುಳ್ಳಿ, ಶುಂಠಿ, ಹಸಿಮೆಣಸುಗಳ ಸಹಯೋಗದಿಂದ ಟೇಬಲ್ ಮೇಲೆ ಚಟ್ಣಿ ವಿರಾಜಮಾನವಾಯಿತು.


ಹಾಲು ಕುದಿದಿದೆ,

ಡಿಕಾಕ್ಷನ್ ಇದೆ,

ಮೊಸರು ತಯಾರಿದೆ,

ತಡವೇಕೆ ಅಕ್ಕಾ...

ದೋಸೆ ಎರೆಯೋಣ.


ಹ್ಞಾ,  ಇದು ಬಾಳೆಹಣ್ಣು ದೋಸೆ,  ನಿನ್ನೆಯೇ ಅರೆದಿಟ್ಟಿರಬೇಕಾಗಿತ್ತು,  ದಪ್ಪ ಬ್ರೆಡ್ ದೋಸೆ ಆಗಬೇಕಾಗಿತ್ತು.   ಈಗ ಏನು ಮಾಡೋಣಾ...


 ತವಾ,  ನಾನ್ ಸ್ಟಿಕ್ ಆಗಿರೋದ್ರಿಂದ ತುಸು ತೆಳ್ಳಗೆ ನೀರು ದೋಸೆಯ ಥರ ಹಾರಿಸಿ ಎರೆದರೂ ನಡೆದೀತು -  ಎಂಬ ಘನ ಚಿಂತನೆ ಮೂಡಿದ್ದೇ ತಡ,  ದೋಸೆಹಿಟ್ಟು ನೀರುನೀರಾಯಿತು.


ತುಪ್ಪ ಸವರಿದ ತವಾ ಬಿಸಿಯೇರಿತು,  

ಹಿಟ್ಟು ಝೊಂಯ್ ಯೆಂದು ಬಿದ್ದು,

ಕವುಚಿ ಮಗುಚಿ ಎದ್ದಿತು.


ಬಾಳೆಹಣ್ಣಿನ ತೆಳ್ಳವು ಕೂಡಾ ಮಾಡಬಹುದು ಅಂತ ಇವತ್ತೇ ತಿಳಿದದ್ದು ಕಣ್ರೀ...



Saturday, 7 January 2017

ಅನಾನಸ್ ರಸದೂಟ




   




ಮಾವಿನಹಣ್ಣಿನ ಕಾಲದಲ್ಲೇ ಸಿಗುವ ಅನಾನಸ್ ಅಡಿಕೆ ತೋಟದ ಒಂದು ಉಪಬೆಳೆ.    ತೋಟದಂಚಿನಲ್ಲಿ,  ಬೇಲಿಯಂತೆ ನೆಟ್ಟು ಬಿಡಬಹುದಾದ ಅನಾನಸ್ ಹಣ್ಣುಗಳು ಕಾಡುಪ್ರಾಣಿಗಳ ಕಾಟದಿಂದಾಗಿ ಕೃಷಿಕರ ಕೈಗೆ ಸಿಗಲು ಹರಸಾಹಸ ಪಡುವಂತಾಗಿದೆ.   ಆದರೂ ಮನೆ ಮುಂದಿನ ಅಂಗಳದಲ್ಲಿ,  ಹಿತ್ತಲಲ್ಲಿ ಸಾಧ್ಯವಿದ್ದ ಹಾಗೆ ಬಳೆಸಿಕೊಳ್ಳಬಹುದಾಗಿದೆ.  ಉಷ್ಣವಲಯದ ಹಣ್ಣಾಗಿರುವುದರಿಂದ ಹೆಚ್ಚಿನ ನೀರನ್ನು ಬಯಸದು.  ನೀರು, ಗೊಬ್ಬರಗಳ  ವಿಶೇಷ ಆರೈಕೆ ದೊರೆತಲ್ಲಿ ಬೃಹತ್ ಗಾತ್ರದ ಫಲಗಳನ್ನು ನಿರೀಕ್ಷಿಸಬಹುದಾಗಿದೆ.   ಹಲಸಿನ ಕಾಯಿಯಂತೆ ಮುಳ್ಳುಗಳಿಂದ ಕೂಡಿದ ಈ ಹಣ್ಣನ್ನು ಕೇರಳೀಯರು  ' ಫರಂಗಿ ಚಕ್ಕ' ಅಂದಿದ್ದಾರೆ.   ಕೃಷಿಯ ಕ್ರಾಂತಿಯಿಂದಾಗಿ ಅನಾನಸ್ ಹಣ್ಣು ಈಗಂತೂ ವರ್ಷಪೂರ್ತಿ ಲಭ್ಯ.


ಬೇಸಿಗೆಯ ಫಲವಾಗಿರುವುದರಿಂದ ಜ್ಯೂಸ್ ಸವಿಯಲು ಚೆನ್ನ.    " ಅಮ್ಮ,  ನಿನ್ನ ಜ್ಯೂಸು ಗೀಸು ಏನೂ ಬೇಡ,  ಹಾಗೇ ಸುಮ್ಮನೆ ತಿಂತೇವೇ... "  ಅನ್ನುವ ಮಕ್ಕಳು,   ಹಾಗಾಗಿ ಅನಾನಸ್ ಜ್ಯೂಸು ನಾನು ಮಾಡಿಯೇ ಇಲ್ಲ.   ಆದರೂ ಜ್ಯೂಸ್ ಮಾಡೋದು ಹೇಗೇಂತ ತಿಳಿದಿರಬೇಡವೇ?


ಅನಾನಸ್ ಜ್ಯೂಸ್:   ಹುಳಿ ಮಿಶ್ರಿತ ಹಣ್ಣಾಗಿರುವುದರಿಂದ,  ಅವಶ್ಯಕತೆಗೆ ತಕ್ಕಷ್ಟು ಹೋಳುಗಳನ್ನು ಮಿಕ್ಸಿಯಲ್ಲಿ ತಿರುಗಿಸಿ,  ಸಿಹಿಗೆ ಸಕ್ಕರೆ,   ಚಿಟಿಕೆ ಉಪ್ಪು,  ಕಾಳುಮೆಣಸಿನಹುಡಿ ಉದುರಿಸಿ,  ಸಾಕಷ್ಟು ನೀರು ಕೂಡಿಸಿ,  ಬೇಕಿದ್ದರೆ ಐಸ್ ಚೂರುಗಳನ್ನೂ ಹಾಕಿಟ್ಟು ಕುಡಿಯಿರಿ.


ನೆರೆಕರೆಯ ಒಂದು ಮದುವೆಗೆ ಹೋಗಬೇಕಾಗಿ ಬಂದಿತ್ತು.   ಊರಿನ ಹತ್ತೂ ಸಮಸ್ತರು ಸೇರಿದಂತಹ ಸಭೆಯಲ್ಲಿ ನಮಗೂ ಮಗನ ಮದುವೆಯ ಆಮಂತ್ರಣ ಪತ್ರಿಕೆಯ ಬಟವಾಡೆಯೂ ಒಂದು ಉದ್ಧೇಶವಾಗಿತ್ತು.   ಈ ಮದುವೆಯ ಔತಣಕೂಟದಲ್ಲಿ ನನಗಂತೂ ಒಂದು ಹೊಸರುಚಿ ಲಭ್ಯವಾಯಿತು.   ಈ ಮೊದಲು ತಿಂದಿದ್ದೂ ಇಲ್ಲ,  ಅನಾನಸ್ ಪಾಯಸವೂ ಆಗುತ್ತೇಂತ ಗೊತ್ತೂ ಇರಲಿಲ್ಲ ಕಣ್ರೀ...


" ಗೇರುಬೀಜ,  ದ್ರಾಕ್ಷಿ,  ಏಲಕ್ಕಿ ಸುರಿಯಿರಿ,  ಬಾಳೇದಂಡೂ ಪಾಯಸಕ್ಕೆ ಆದೀತು.. "  ಅನ್ನೋರು ನಮ್ಮ ಗೌರತ್ತೆ.   ಆದ್ರೆ ಈ ಪಾಯಸವಂತೂ ಸಿಹಿ ಹುಳಿ ರುಚಿಯಿಂದಾಗಿ,  ಅಮೋಘ ಸುವಾಸನೆಯಿಂದಾಗಿ ತಿಂಡಿಪೋತರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.


ಊಟವಾದ ನಂತರ ಅಡುಗೆಶಾಲೆಗೆ ಹೋಗಿ ಅಡುಗೆ ಮುಖ್ಯಸ್ಥರ ಬಳಿ ಮಾಡೋ ವಿಧಾನವನ್ನು ಕೂಲಂಕುಷವಾಗಿ ತಿಳಿದೂ ಆಯ್ತು.   ನನ್ನ ಹಿತ್ತಲಿನಲ್ಲಿ ಕೆಲವಾರು ಅನಾನಸ್ ಹಣ್ಣುಗಳಿದ್ದುವು.   ಮಳೆಗಾಲ ಅಲ್ವೇ,  ಹಾಗೇ ಸುಮ್ಮನೆ ಹಣ್ಣು ತಿನ್ನುವ ಮಕ್ಕಳೂ ಮನೆಯಲ್ಲಿಲ್ಲ.   ಒಂದು ಪುಟಾಣಿ ಅನಾನಸ್ ಕಿತ್ತು ತಂದಿದ್ದಾಯ್ತು.


ನಮ್ಮ ಅಗತ್ಯವೆಷ್ಟೆಂದು ನೋಡಿಕೊಂಡೇ ಸಿಹಿತಿಂಡಿಗಳನ್ನು ಮಾಡುವ ಅಭ್ಯಾಸ ಉತ್ತಮ,   ನೆಂಟರಿಷ್ಟರು ಇದ್ದರೆ ಲೆಕ್ಕಾಚಾರ ಮಾಡುವುದಕ್ಕಿಲ್ಲ.   ಇರೋರು ನಾವಿಬ್ಬರು,  ಜೊತೆಗೊಬ್ಬ ಚೆನ್ನಪ್ಪ,   ಅಳತೆಯ ಪ್ರಮಾಣ ಒಂದು ಲೀಟರ್ ಸಾಕು.

ಅನಾನಸ್ ನಾಲ್ಕಾರು ಹೋಳುಗಳು ಸಾಕು.  ಮಿಕ್ಸಿಯಲ್ಲಿ ತಿರುವಿ ರಸ ಮಾಡಿದ್ರಾಯ್ತು,   ಜಾಲರಿ ತಟ್ಟೆಯಲ್ಲಿ ಶೋಧಿಸುವ ಅಗತ್ಯವಿಲ್ಲ.


ಒಂದು ತೆಂಗಿನಕಾಯಿ,  ಅರೆದು ಹಾಲು ತಗೆಯಿರಿ.  ದಪ್ಪ ಹಾಲು,  ನೀರು ಹಾಲು ಪ್ರತ್ಯೇಕ ಇರಿಸಿ.

4 - 5  ಚಮಚ ಅಕ್ಕಿಹಿಟ್ಟು.

ಸಿಹಿಗೆ ಬೆಲ್ಲ.   ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಎರಡು ವಿಧ ಪಾಯಸಗಳಿರುತ್ತವೆ,  ಸಕ್ಕರೆಯ ಸಿಹಿ ಹಾಗೂ ಬೆಲ್ಲದ ಸಿಹಿ,  ಈ ಥರ.   ನಾನು ಉಂಡ ಪಾಯಸ ಬೆಲ್ಲ ಹಾಕಿದುದಾಗಿತ್ತು.   ನಾವೂ ಈಗ ಬೆಲ್ಲವನ್ನೇ ಹಾಕೋಣ,   ಅದೂ ಒಂದು ಬಗೆಯ ಕಲರ್ ಕೊಡುತ್ತೆ.


ದಪ್ಪತಳದ ಪಾತ್ರೆ ಒಲೆಗೇರಲಿ.

ಅಕ್ಕಿಹಿಟ್ಟು ನೀರು ಕಾಯಿಹಾಲಿನಲ್ಲಿ ಬೇಯಲಿ.

ತಳ ಹಿಡಿಯದಂತೆ ಸೌಟು ಆಡುತ್ತಿರಲಿ.


ಹಿಟ್ಟು ಬೆಂದಿತು.

ಬೆಲ್ಲ ಹಾಗೂ ಅನಾನಸ್ ರಸ ಎರೆಯಿರಿ.

ಬೆಲ್ಲ ಕರಗಿತು.

ಅನಾನಸ್ ಸುವಾಸನೆ ಬಂದಿತು.

ದಪ್ಪ ಕಾಯಿಹಾಲು ಎರೆಯಿರಿ.

ದ್ರಾಕ್ಷಿ ಗೇರುಬೀಜಗಳನ್ನು ಹಾಕಿದಷ್ಟೂ ಚೆನ್ನ,  ಏಲಕ್ಕಿ ಬೇಡ,  ಅನಾನಸ್ ಸುವಾಸನೆಯ ಮುಂದೆ ಏಲಕ್ಕಿ ಹಾಕಿದ್ರೂ ಗೊತ್ತಾಗದು.


ಶೀಘ್ರಗತಿಯಲ್ಲಿ ಮಾಡಬಹುದಾದ ಈ ಪಾಯಸವನ್ನು ನಾನಂತೂ ಮುಗಿಯುವ ತನಕ ಕುದಿಸಿ ಇಟ್ಕೊಂಡೆ,  ಕೊನೆಯ ಹಂತದಲ್ಲಿ ಪಾಯಸವು ಹಾಲುಬಾಯಿ ಆಗಿಹೋಯಿತು!


ಮುಂದೆ ನಡೆಯಲಿರುವ ಮಗನ ಮದುವೆಯ ಔತಣಕೂಟದಲ್ಲಿ  ' ಅನಾನಸ್ ಪಾಯಸ ಮಾಡ್ಸಿಯೇ ಸಿದ್ಧ. '  ಅಂದ್ಕೊಂಡಿದ್ದೂ ಆಯ್ತು.


 ಮದುವೆಯ ಔತಣಕೂಟದಲ್ಲಿ ಪಾಯಸ ಒಂದಿದ್ದರೆ ಸಾಕೇ,  ಹೋಳಿಗೆ ಇರಲೇಬೇಕು.  ಕಡ್ಲೆಬೇಳೆ, ಹೆಸ್ರಬೇಳೆ,  ತೊಗ್ರಿಬೇಳೆ...  ಮುಗಿಯದ ಬೇಳೆಕಾಳುಗಳ ಪಟ್ಟಿ.


" ಬೆಲೆ ಎಷ್ಟು ಗೊತ್ತೇನಕ್ಕಾ? " ಕೇಳಿದ ನೆರೆಮನೆ ಈಚಣ್ಣನೇ ಉತ್ತರ ಕೊಟ್ಟಿದ್ದು ಹೀಗೆ,  " ಕೇಜೀಗೆ ಇನ್ನೂರು ರುಪಾಯಿ ಕೆಳಗೆ ಯಾವ ಬೇಳೆಕಾಳೂ ಸಿಗಲ್ಲ.. "


ಅಂತೂ ಅನಾನಸು ಪಾಯಸಕ್ಕೆ ಎಲ್ಲರ ಅನುಮೋದನೆ ದೊರೆತು,  ಔತಣದೂಟದಲ್ಲಿ ಜಯಭೇರಿ ಭಾರಿಸಿತು ಎಂದು ಬೇರೆ ಹೇಳಬೇಕಾಗಿಲ್ಲ.   ನಮ್ಮ ಮನೆಯ ಹಿರಿಯ ಸದಸ್ಯೆ ಗೌರತ್ತೆ ಕೂಡಾ  " ಇಲ್ಲಿಯತನಕ  ಅನಾನಸು ಪಾಯಸ ತಿಂದು ಗೊತ್ತೇ ಇಲ್ಲ... " ಅನ್ನುವವರೆಗೆ ಪ್ರಚಾರ ಗಿಟ್ಟಿಸಿಕೊಂಡ ಪಾಯಸ ಇದು.   ಕೆಲವರಂತೂ ಯಾವ ಬಗೆಯ ಪಾಯಸವೆಂದು ತಿಳಿಯದೇ ನನ್ನ ಬಳಿ ಕೇಳಿ ತಿಳಿದುಕೊಂಡರು.


" ಅಕ್ಕ,  ಈ ಮಳೆಗಾಲದ ಹಣ್ಣು,  ಸಾರು ಮಾಡಲಿಕ್ಕೆ ಫಸ್ಟು. " ಎಂದ ಚೆನ್ನಪ್ಪ.

" ಹ್ಞೂ,  ಅದೂ ಮಾಡೋಣ,   ಮಾವಿನಹಣ್ಣು ಸಾರಿನ ಹಾಗೆ ಮಾಡಿದ್ರಾಯ್ತಲ್ಲ. "


ಅನಾನಸ್ ಹೋಳುಗಳನ್ನು ಅರೆದುಕೊಳ್ಳಿ.   ನೀರು, ರುಚಿಗೆ ಉಪ್ಪು,  ಸಿಹಿಗೆ ಬೆಲ್ಲ ಕೂಡಿಸಿ ಕುದಿಸಿ ಒಗ್ಗರಣೆ ಕೊಡುವಲ್ಲಿಗೆ ಸಾರು ಬಂದಿತು.   ಕುದಿಸದೇ ಇಟ್ಕೊಂಡಿರಾ,  ಹಸಿಗೊಜ್ಜು ಅನ್ನಿ.   ಅಂತೂ ಮಾವಿನಹಣ್ಣಿನ ರಸವತ್ತಾದ ಅಡುಗೆಗಳೆಲ್ಲವನ್ನೂ ಅನಾನಸ್ ಒದಗಿಸುವುದನ್ನು ಕಂಡು ಬಾಯಿ ಚಪ್ಪರಿಸುತ್ತಾ ಉಣ್ಣಲು ಕಲಿಯಿರಿ.





ಅನಾನಸ್ ಶಿರಾ:


ಒಂದು ಪಾವು ಚಿರೋಟಿ ರವೆ,  ಹುರಿಯಿರಿ.

ಮಧ್ಯಮ ಗಾತ್ರದ ಅನಾನಸ್,  ಅರ್ಧ ಸಾಕು,  ಹೆಚ್ಚು ಹಾಕಿದ್ರೆ ಹುಳಿಯಾದೀತು.

ಒಂದೂವರೆ ಪಾವು ಸಕ್ಕರೆ.

ಅರ್ಧ ಪಾವು ತುಪ್ಪ.


ಅನಾನಸ್ ಹಣ್ಣುಗಳನ್ನು ಅರೆದು ರಸ ಮಾಡಿದ್ರಾ,


ಒಂದು ಪಾವು ಚಿರೋಟಿ ರವೆ ಬೇಯಲು ಎರಡು ಪಾವು ನೀರು ಬೇಕು,   ಅನಾನಸ್ ರಸ ಹಾಗೂ ಹಾಲು ಕೂಡಿ ಬೇಯಿಸಿದರಾಯಿತು.


ಬೆಂದ ನಂತರ ಸಕ್ಕರೆ ಹಾಕುವುದು.  ಸಕ್ಕರೆ ಕರಗುತ್ತ ಬಂದಂತೆ ತುಪ್ಪವನ್ನೂ ಎರೆಯುತ್ತಾ ಪಾಕ ಬರುವ ತನಕ ಸೌಟಾಡಿಸುತ್ತಾ ಕಾಯಿಸಿ.  ಬಾಣಲೆಯಿಂದ ಏಳುವ ಹಂತ ಬಂದಾಗ ಉಳಿದ ತುಪ್ಪವನ್ನೂ ಎರೆದು ದ್ರಾಕ್ಷಿ,  ಗೇರುಬೀಜಗಳನ್ನು ಉದುರಿಸಿ,  ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ ಬೇಕಾದ ಹಾಗೆ ತೆಗೆದು ತಿನ್ನಿ.


ತುಪ್ಪ ಹಾಗೂ ಸಕ್ಕರೆ ದುಪ್ಪಟ್ಟು ಹಾಕಿದ್ರಾ,   ಕೇಸರಿಬಾತ್ ಬಂದಿತು!


ಅನಾನಸ್ ಮೆಣಸ್ಕಾಯಿ:


ಊಟದೊಂದಿಗೆ ಬಳಸಬಹುದಾದ ಈ ವ್ಯಂಜನ,  ಔತಣಕೂಟಗಳಲ್ಲಿ ಪ್ರಮುಖಸ್ಥಾನ ಪಡೆದಿದೆ.  ಮಾಡೋಣ ಹೀಗೆ, 


2 ಚಮಚ ಕೊತ್ತಂಬರಿ

1 ಚಮಚ ಉದ್ದಿನಬೇಳೆ

4 - 6 ಒಣಮೆಣಸು

3 ಚಮಚ ಎಳ್ಳು

ಹುರಿಯಿರಿ.

ಅರ್ಧ ಕಡಿ ತೆಂಗಿನತುರಿಯೊಂದಿಗೆ ಅರೆಯಿರಿ. ಚಿಟಿಕೆ ಅರಸಿಣ,


ಅನಾನಸ್ ಹೋಳುಗಳನ್ನು ಉಪ್ಪು, ಬೆಲ್ಲದೊಂದಿಗೆ ಬೇಯಿಸಿ,  ಅರೆದ ಮಸಾಲೆ ಹಾಕಿ ಕುದಿಸಿ, ಒಗ್ಗರಣೆ ಕೊಡುವಲ್ಲಿಗೆ ಮೆಣಸ್ಕಾಯಿ ಸಿದ್ಧ.


ಅನಾನಸ್ ಆರೋಗ್ಯದಾಯಕ ಹಣ್ಣೆಂಬುದರಲ್ಲಿ ಸಂಶಯಕ್ಕೆಡೆಯಿಲ್ಲ.   ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವ ಈ ಹಣ್ಣನು ನಿಯಮಿತವಾಗಿ ಸೇವಿಸಿ.   ಸಸ್ಯಶಾಸ್ತ್ರೀಯವಾಗಿ ananas comosus ಎಂಬ ನಾಮಕರಣ ಪಡೆದಿರುವ,  ವಿದೇಶೀ ನೆಲದಿಂದ ಬಂದಂತಹ ಈ ಪೈನ್ಆ್ಯಪಲ್ ನಮ್ಮ ಮಣ್ಣಿನ ಗುಣಧರ್ಮಗಳಿಗೆ ಹೊಂದಿಕೊಂಡು ರಸವತ್ತಾದ ಅಡುಗೆಗಳಿಗೂ ಇದನ್ನು ಬಿಟ್ರೆ ಇನ್ನೊಂದಿಲ್ಲ ಎಂಬಂತೆ ಮೆರೆಯುತ್ತಿದೆ.  



ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ನವಂಬರ್, 2016.



                                                 


Monday, 26 December 2016

ಕ್ರಿಸ್ಮಸ್ ತಿನಿಸು



ರಜೆಯೊಂದಿಗೆ ಮಗಳು ಬಂದಳು.   " ಬೆಂಗಳೂರಿನ ಚಿತ್ರಾನ್ನ ತಿಂದೂ ಸಾಕಾಯ್ತು. "   ಅವಳಿಗಿಷ್ಟವಾದ ತೆಳ್ಳವು ತಯಾರಾಯಿತು.


ಮಾರನೇ ದಿನ ಇನ್ನೊಂದು ವಿಧವಾದ ತೆಳ್ಳವು,  ಮುಳ್ಳುಸೌತೆಯದ್ದು.

" ಹೇಗೇ ಮಾಡಿದ್ದೂ? "


2ಪಾವು ಬೆಳ್ತಿಗೆ ಅಕ್ಕಿ,  ನೀರಿನಲ್ಲಿ ನೆನೆಯಲಿ.

ಒಂದು ಹದಗಾತ್ರದ ಮುಳ್ಳುಸೌತೆ,  ಚಿಕ್ಕದಾದ್ರೆ ಎರಡು ಇರಲಿ.

ಒಂದು ಕಡಿ ತೆಂಗಿನಕಾಯಿ.


ಅಕ್ಕಿಯನ್ನು ಚೆನ್ನಾಗಿ ತೊಳೆದು,

ಮುಳ್ಳುಸೌತೆ ತುರಿ ಮಾಡಿಟ್ಟು,

ತೆಂಗಿನಕಾಯಿ ತುರಿದಿಟ್ಟು

ಎಲ್ಲವನ್ನೂ ಒಟ್ಟಿಗೆ ಅರೆಯಿರಿ.   

ಮುಳ್ಳುಸೌತೆ ಇರುವುದರಿಂದ ಅರೆಯಲಿಕ್ಕೆ ನೀರು ಬೇಕಾಗುವುದಿಲ್ಲ.

ಹಿಟ್ಟು ಹುಳಿ ಬರಬಾರದು,  ಆ ಕೂಡಲೇ ಎರೆಯಿರಿ.   ಈಗ ವಿಪರೀತ ಚಳಿ ಅಲ್ವೇ,   ರಾತ್ರಿ ಮಲಗುವ ಮೊದಲು ಅರೆದಿಟ್ಟರೂ ನಡೆದೀತು.


ತವಾ ಬಿಸಿಯೇರಿದ ಕೂಡಲೇ ತುಪ್ಪ ಸವರಿ,  ದೋಸೆಹಿಟ್ಟನ್ನು ಹಾರಿಸಿ ಎರೆಯಿರಿ,  ಮುಚ್ಚಿ ಬೇಯಿಸಿ.   ಹಿಟ್ಟಿಗೆ ನೀರು ಸಾಲದಿದ್ದರೆ ತುಸು ಎರೆಯಿರಿ.


ಬೆಂದ ದೋಸೆಯ ಮೇಲೆ ಇನ್ನೊಮ್ಮೆ ತುಪ್ಪ ಸವರಿ ಕವುಚಿ ಹಾಕಿ ತೆಗೆದಾಗ ದೋಸೆ ಸಿದ್ಧವಾಗಿದೆ.

ಹೌದಲ್ಲ,  ತೆಂಗಿನಕಾಯಿ ಚಟ್ನಿ  ಆಗಬೇಕಿದೆ.


ತೆಂಗಿನ ತುರಿ

ಹಸಿಮೆಣಸು

ಎರಡೆಸಳು ಬೆಳ್ಳುಳ್ಳಿ 

ರುಚಿಗೆ ಉಪ್ಪು

ಅರೆಯಿರಿ,  ಚಟ್ಣಿ ಆಯ್ತು.

ಬೆಲ್ಲದ ಪಾಕವೂ,  ದಪ್ಪ ಮೊಸರೂ ಇದ್ದಲ್ಲಿ ಮುಂಜಾನೆಯ ಈ ತಿನಿಸು ಇನ್ನೂ ಸೊಗಸು.



ಮಧ್ಯಾಹ್ನದ ಸುಖನಿದ್ರೆ ತೆಗೆದು ಏಳಬೇಕಾದ್ರೆ,  " ಅಮ್ಮ,  ಗೋಳಿಬಜೆ.... " ರಾಗ ತೇಲಿ ಬಂದಿತು.

" ಆಯ್ತು,  ಮಾಡೋಣ. "  ದೋಸೆ ಎರೆದ್ರಾಯ್ತು ಅಂದ್ಕೊಂಡಿದ್ದೆ.   ಗೋಳಿಬಜೆ ಆಗ್ಬೇಕಿದೆ.   ಇದ್ದಿದ್ದೂ ಅಷ್ಟೇ,  ಮೂರು ದೋಸೆಗಾಗುವಷ್ಟು ಹಿಟ್ಟು ಇತ್ತು.


ದೋಸೆಹಿಟ್ಟಿನ ನೀರಿನಂಶವನ್ನೆಲ್ಲ ಬಗ್ಗಿಸಿ ತೆಗೆದಾಯ್ತು.

2 ಚಮಚ ಗರಂ ಮಸಾಲಾ,

ಚಿಟಿಕೆ ಉಪ್ಪು,

ಪುಟ್ಟ ಚಮಚ ಸೋಡಾ ಹುಡಿ,

ದೊಡ್ಡ ಚಮಚ ಸಕ್ಕರೆ,

ಒಂದು ಸೌಟು ಕಡ್ಲೆ ಹುಡಿ

ಎರಡು ಚೆನ್ನಾಗಿ ನುರಿದ ಬಾಳೆಹಣ್ಣು

ಕಲಸುವುದು,  ನೀರು ಬೇಡ.  ಮುದ್ದೆಯಾದ ಹಿಟ್ಟು ಕೈಯಲ್ಲಿ ತೆಗೆದು ಹಾಕುವಂತಿರಬೇಕು.  ಚಪಾತಿ ಹಿಟ್ಟಿನ ಹಾಗೆ ಆದರೂ ಆಗದು.


ಬಾಣಲೆಯಲ್ಲಿ ಎಣ್ಣೆ ಕಾದಿದೆ.  ಕೈಯಲ್ಲಿ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ಸ್ವಲ್ಪವೇ ಎಣ್ಣೆಗೆ ಇಳಿಸುತ್ತಾ ಬನ್ನಿ.  ಎಣ್ಣೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಬಹುದು.


ರುಚಿಕರವಾದ ಹಾಗೂ ಮನೆಯಲ್ಲೇ ಮಾಡಿದ ಈ ಗೋಳಿಬಜೆ ನಮ್ಮ ಇಂದಿನ ಕ್ರಿಸ್ಮಸ್ ತಿನಿಸು.





Saturday, 17 December 2016

ಹಿತ್ತಲ ತರಕಾರಿ







ಬದನೆಕಾಯಿ ತಿಂದೂ ತಿಂದೂ ಸಾಕಾಗಿತ್ತು.   ಮನೆಯಲ್ಲೇ ತರಕಾರಿ ಬೆಳೆ ಇದ್ರೆ ಹೀಗೇನೇ,   ಬಸಳೆ ಚಪ್ಪರ ಇದೆಯಾ,  ಅದನ್ನೇ ಕೊಯ್ಯಿರಿ,  ಇನ್ನು ತೊಂಡೆಯಂತೂ ಕೇಳೋರಿಲ್ಲ ಅನ್ನೋ ಹಾಗಾಗುತ್ತೆ.

ಬದನೆ ಗಿಡಗಳ ಸಾಲಿನ ಪಕ್ಕದಲ್ಲೇ ಅಲಸಂಡೆ ಬೀಜಗಳನ್ನು ಬಿತ್ತಿದ ಚೆನ್ನಪ್ಪ.   ಬೀಜ ಬಿತ್ತಿದ ಎರಡೇ ದಿನದಲ್ಲಿ ಮೊಳಕೆಯೊಡೆದು ಹೊರ ಬಂದ ಸಸಿಗಳು.

" ಅಕ್ಕ,  ಈ ಅಲಸಂಡೆಯಾದ್ರೆ ಇನ್ನು ಇಪ್ಪತೈದು ದಿನದಲ್ಲಿ ಕೊಯ್ಯಬಹುದು...  ದಿನಾ ನೀರು ಹಾಕ್ತಾ ಇರಿ,  ಎರಡು ಸರ್ತಿ ನೀರು ಹಾಕಿದ್ರೆ ಇನ್ನೂ ಒಳ್ಳೆಯದು. "  ಅಂದ ಚೆನ್ನಪ್ಪ.

ಸಂಜೆಯ ಚಹಾ ಕುಡಿದ ನಂತರ ಗಿಡಗಳಿಗೆ ನೀರೆರೆಯುವ ಹವ್ಯಾಸ ನನ್ನದು.  ಬದನೆಯೊಂದಿಗೆ ಇದೊಂದು ಹೆಚ್ಚುವರಿ ಸೇರ್ಪಡೆ.

ಬಳ್ಳಿಗಳು  ಮೇಲೇರುತ್ತಿದ್ದ  ಹಾಗೆ ಆಧಾರಕ್ಕಾಗಿ ಮರದ ಅಡರುಗಳನ್ನು ನೀಡಿ,  ಅಡಿಕೆ ಮರದ ಸಲಕೆಯ ಸಂಪುಟವನ್ನು ಕಟ್ಟಿಯೂ ಆಯ್ತು.    ಬುಡಕ್ಕೆ ಹಸಿರೆಲೆ ಗೊಬ್ಬರವೂ ಬಿದ್ದಿತು.   

" ಸ್ವಲ್ಪ ಗವರ್ಮೆಂಟ್ ಈಟು ( ರಸಗೊಬ್ಬರ )  ತಂದರಾಗುತ್ತಿತ್ತು. "  ಚೆನ್ನಪ್ಪನ ಗೊಣಗಾಟವನ್ನು ಕೇಳುವವರಿಲ್ಲ.
 " ಅಡಿಕೆ ಮರದ ಬುಡಕ್ಕೇ ಇಲ್ಲ,  ಈ ನೆಟ್ಟಿಕಾಯಿಗೆ ಯಾಕೆ? "  ಇದು ನಮ್ಮೆಜಮಾನ್ರ ಕಟ್ಟುನಿಟ್ಟು.

ಏನೇ ಆಗಲಿ,  ಅಲಸಂಡೆ ಕೊಯ್ಯುವ ಕಾಲ ಬಂದಿತು.   ಮೊದಲ ಫಸಲು ಮುಂದಿನ ಬೆಳೆಯ ಬೀಜಗಳಿಗೆ ಮೀಸಲು,  ನಂತರ ಬಿಡುವಿಲ್ಲದ ಹಾಗೆ ಎರಡು ದಿನಗಳ ಅಂತರದಲ್ಲಿ ಕೊಯ್ಯುವ ಕಾಯಕ.   ಸಂಜೆ ನೀರು ಹನಿಸುತ್ತಾ ಕೊಯ್ದು ಇಡುವುದು,   " ನಾಳೆಯ ಅಡುಗೆಗೇನು ಎಂಬ ಚಿಂತೆಯಿಲ್ಲ.  ಅಲಸಂಡೆ ಪಲ್ಯ ಊಟದ ಸೊಗಸು.


                     



ಆಯ್ತು,  ಒಂದೆರಡು ದಿನ ಪಲ್ಯ ಮಾಡಬಹುದು,   " ದಿನಾ ಒಂದೇ ತೆರನಾದ ಪಲ್ಯವೇ... " ಗೊಣಗಾಟ ಕೇಳಬೇಕಾದೀತು,   ಹೇಗೂ ಕುಂಬ್ಳೆಯಲ್ಲಿರುವ ತಂಗಿಗೆ ಆಗಾಗ ಫೋನ್ ಮಾಡುವುದಿದೆ.   ಅವಳೂ  " ಮಜ್ಜಿಗೆಹುಳಿ,  ಜೀರಿಗೆ ಕೂಟು,  ಅವಿಲ್ ಇತ್ಯಾದಿಗಳನ್ನು ಜ್ಞಾಪಕ ಮಾಡಿಕೊಟ್ಟಳು.   ಇವೆಲ್ಲ ಸಾಂಪ್ರದಾಯಿಕ ಖಾದ್ಯಗಳು,  ನಮ್ಮದು ಹೊಸರುಚಿ ಆಗಬೇಡ್ವೇ...

ಬದನೆಯ ಗಿಡಗಳ ಸಾಲಿನಲ್ಲಿ ಹೇರಳವಾಗಿ ಬೆಳೆದು ಇದ್ದಬದ್ದ ಜಾಗವನ್ನೆಲ್ಲ ಆಕ್ರಮಿಸಿ ನಿಂತಿದೆ ಪೊನ್ನಂಗಣೆ ಸೊಪ್ಪು.   ' ಪೊನ್ನಂಗನ್ನಿ ಕೀರೈ ' ಎಂದು ಮಲಯಾಳ ಹಾಗೂ ತಮಿಳಿನಲ್ಲಿ ಹೆಸರಾಗಿರುವ ಈ ಸೊಪ್ಪನ್ನು ನಮ್ಮ ಕನ್ನಡಿಗರು  ' ಹೊನಗನೆ ಸೊಪ್ಪು ಅನ್ನುತ್ತಾರಾದರೆ,  ಇಂಗ್ಲೀಷ್ ನಲ್ಲಿ wild spinach ಎಂದೂ,  ಸಸ್ಯಶಾಸ್ತ್ರಜ್ಞರ ಪ್ರಕಾರ alternanthera sessilis ಎಂದಾಗಿರುತ್ತದೆ.   ವಿಟಮಿನ್ ಗಳ ಗಣಿಯಾಗಿರುವುದಾದರೂ ಪೊನ್ನಂಗಣೆಯು ಸಸ್ಯ ಪ್ರವರ್ಗದಲ್ಲಿ ಒಂದು ಕಳೆಸಸ್ಯವೆಂದು ಪರಿಗಣಿಸಲ್ಪಟ್ಟಿದೆ,  ನಮ್ಮ ಊರಿನಲ್ಲಿ ಇದನ್ನು ಆಹಾರ ಪದಾರ್ಥವೆಂದು ಪರಿಗಣಿಸಿದವರಿಲ್ಲ.   " ಏನೋ ಎಣ್ಣೆ ಮಾಡ್ತಾರೆಂದು ಕೇಳಿ ಗೊತ್ತು.. " ಅಂದಿದ್ದರು ಗೌರತ್ತೆ.

ಪೊನ್ನಂಗಣೆಯ ಹಸಿರು ಎಲೆಗಳೂ,  ಕುಡಿಗಳೂ,  ಅಲಸಂಡೆಯೂ ಸೇರಿದ ಖಾದ್ಯ ಮಾಡೋಣ.

ಒಂದು ಹಿಡಿ ಹಸಿರು ಎಲೆಗಳು ಹಾಗೂ ಕುಡಿಗಳು.  ಎಳೆಯ ದಂಟುಗಳನ್ನೂ ಬಳಸಬಹುದು.   
ಅಲಸಂಡೆಯನ್ನೂ ಕತ್ತರಿಸಿಕೊಳ್ಳಿ.
ಉಪ್ಪು ಹಾಕಿ ಒಟ್ಟಿಗೆ ಬೇಯಿಸಿ.
ತೆಂಗಿನತುರಿ,  ಗಾಂಧಾರಿ ಮೆಣಸು ಕೂಡಿ ಅರೆಯಿರಿ.
ತೆಂಗಿನ ಅರಪ್ಪನ್ನು ಬೆಂದ ತರಕಾರಿಗೆ ಕೂಡಿಸಿ.
ಸಿಹಿಗೆ ಬೆಲ್ಲ,  ಹುಳಿಗೆ ಮಜ್ಜಿಗೆ.   ನಿಮ್ಮ ಆಯ್ಕೆಗನುಸಾರ ಹಾಕಿರಿ.
ಸಾಸಿವೆ,  ಒಣಮೆಣಸಿನಕಾಯಿ ಒಗ್ಗರಣೆ ಇರಲಿ.   " ಸೊಪ್ಪು ತರಕಾರಿಗಳ ಅಡುಗೆಯ ಒಗ್ಗರಣೆಗೆ ಕರಿಬೇವು ಹಾಕೂದೇನೂ ಬೇಡ. "  ಇದು ಗೌರತ್ತೆಯ ಹಿತವಚನ.
ಕುದಿಸಬೇಕೆಂದೇನೂ ಇಲ್ಲ.
ಒಂದು ನಳಪಾಕ ಸಿದ್ಧವಾಯಿತು.
ತಂಪುತಂಪಾದ ಈ ಸವಿರುಚಿಯಂತೂ ರಣಬೇಸಿಗೆಯ ಊಟಕ್ಕೆ ನಮ್ಮಿಬ್ಬರಿಗೂ ಹಿತವಾಯಿತು. 





" ಅದ್ಯಾವುದೂ ಪೊನ್ನಂಗಣೇ...." ರಾಗ ಎಳೆದಳು ಗಾಯತ್ರಿ.   ಅವಳ ಸಮಾಧಾನಕ್ಕಾಗಿ ವಾಟ್ಸಪ್ಪಿನಲ್ಲಿ ಪೊನ್ನಂಗಣೆಯ ಫೊಟೋ ಕಳುಹಿಸಬೇಕಾಯ್ತು.    " ಓ,  ಇದಾ... ಗಂಟು ಗಂಟಿನಲ್ಲಿ ಬಿಳಿ ಬಿಳಿ ಹೂ ... ಗೊತ್ತಾಯ್ತು ಬಿಡು. " ಅಂದಳು.  "ಆದ್ರೂ ಸೊಪ್ಪು ಸಂಗ್ರಹ ಆಗ್ಬೇಕೂ..."
" ಹ್ಞು ಮತ್ತೆ,  ನನ್ನ ಸೊಪ್ಪು,  ಬದನೆ ಹಾಗೂ ಬಸಳೆ ಬುಡದಲ್ಲಿ ವಿಪರೀತ ಸೊಕ್ಕಿವೆ,  ಸ್ವಲ್ಪ ಕುಯಿದ್ರೂ ಸಾಕಾಗುತ್ತೆ " 


ಮಾರನೇ ದಿನ ತೆಂಗಿನತುರಿಯೊಂದಿಗೆ ಈರುಳ್ಳಿ,  ಬೆಳ್ಳುಳ್ಳಿ,  ಕೊತ್ತಂಬ್ರಿ, ಜೀರಿಗೆ,  ಗಾಂಧಾರಿ ಮೆಣಸು,  ಕಾಳುಮೆಣಸು ಕೂಡಿ ಅರೆದಿಟ್ಟು,
ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಅರೆದಿಟ್ಟ ತೆಂಗಿನಕಾಯಿ ಅರಪ್ಪನ್ನು ಒಗ್ಗರಣೆ ಸಿಡಿದಾಗ ಹಾಕಿ, 
ಮಸಾಲೆಯ ಹಸಿವಾಸನೆ ಹೋಗುವ ತನಕ ಹುರಿಯಿರಿ.
ನಂತರ ಬೇಯಿಸಿಟ್ಟ ತರಕಾರಿ ಹಾಗೂ ಸೊಪ್ಪು ಹಾಕಿ ಕುದಿಸಿ.
ನೀರು ಸಾಲದಿದ್ದರೆ ಎರೆಯಿರಿ.
ರುಚಿಗೆ ಬೇಕಿದ್ದಂತೆ ಉಪ್ಪು,  ಬೆಲ್ಲ ಹಾಕುವುದು.
ಈ ನಳಪಾಕವಂತೂ ಅನ್ನ ಹಾಗೂ ಚಪಾತಿಗಳಿಗೆ ಹೇಳಿ ಮಾಡಿಸಿದ ಹಾಗಾಯ್ತು.

ಇಂದಿನ ಅಡುಗೆಯ ರಿಪೋರ್ಟು ಎಂದಿನಂತೆ ತಂಗಿಗೆ ತಲುಪಿತು.
" ಹೌದೂ... ಇದಕ್ಕೇನು ಹೆಸರು ಇಡೋಣಾಂತೀಯ ? "  ನನ್ನ ಪೆದ್ದು ಪ್ರಶ್ನೆ.
" ನೀರುಳ್ಳಿ,  ಬೆಳ್ಳುಳ್ಳಿ ಹುರಿದ ಮಸಾಲೆ...  ಅದೇ ಕೂರ್ಮಾ ಅಂತಾರಲ್ಲ,  ಹಾಗೇ ಅಲಸಂಡೆ ಕೂರ್ಮಾ...  ಅಂದ್ಬಿಡು "  ಅಂದಳು ಗಾಯತ್ರಿ.

ಹೊಸರುಚಿಗಳನ್ನು ಸವಿದಾಯಿತು,   ಈಗ ನಮ್ಮ ಸಾಂಪ್ರದಾಯಿಕ ಶೈಲಿಯ ಅಡುಗೆಯತ್ತ ಕಣ್ಣು ಹಾಯಿಸೋಣ.   ಅಲಸಂಡೆಯನ್ನು ಖಾರದ ಅಡುಗೆಯಲ್ಲಿ ಬಳಸುವುದು ಕಡಿಮೆಯೇ,  ಏನಿದ್ದರೂ ಮಜ್ಜಿಗೆಹುಳಿ,  ಜೀರಿಗೆ ಬೆಂದಿ, ಅವಿಲ್,  ಪಲ್ಯ...ಇತ್ಯಾದಿ ಊಟದೊಂದಿಗೆ ಸವಿಯುವ ರೂಢಿ.

ಹೌದಲ್ಲ,  ಮಜ್ಜಿಗೆಹುಳಿಯಲ್ಲಿ ಮಜ್ಜಿಗೆ ಹಾಗೂ ಹಸಿ ತೆಂಗಿನಕಾಯಿ ಅರಪ್ಪು ಪ್ರಾಮುಖ್ಯತೆ ಪಡೆದಿದ್ದರೆ ಅವಿಲು ಮಜ್ಜಿಗೆಯನ್ನು ಬಯಸದು,  ಜೀರಿಗೆ ಬೆಂದಿಗೂ ಮಜ್ಜಿಗೆ ಬೇಡ.

ಅವಿಲು ಹತ್ತು ಹಲವಾರು ತರಕಾರಿಗಳ ಮಿಶ್ರಣದ ಖಾದ್ಯ.   ವಿದೇಶೀ ತರಕಾರಿಗಳನ್ನು ಉಪಯೋಗಿಸುವಂತಿಲ್ಲ.    ನಮ್ಮ ಮಣ್ಣಿನ ನೆಲದಲ್ಲಿ ಬೆಳೆದಂತಹ ತರಕಾರಿಗಳು,  ಹುಳಿ, ಸಿಹಿ, ಒಗರು, ಕಹಿ ಎಲ್ಲವೂ ಇರುವಂತಹ ತರಕಾರಿಗಳನ್ನು ಆಯ್ದು,  ಬೇಯಿಸಿ.  ಧಾರಾಳವಾಗಿ ತೆಂಗಿನತುರಿ ಬಳಸಿ ಅರೆಯಿರಿ.   ಚಿಟಿಕೆ ಅರಸಿಣ,  ಪುಟ್ಟ ಚಮಚದಲ್ಲಿ ಜೀರಿಗೆ ಅರೆಯುವಾಗ ಹಾಕಿಕೊಳ್ಳಿ.  ಬೇಯಿಸಿಟ್ಟ ತರಕಾರಿಗಳಿಗೆ ಕೂಡಿ ಕುದಿಸಿ,  ಒಗ್ಗರಣೆಗೆ ಕರಿಬೇವು ಮರೆಯದಿರಿ.

 ಜೀರಿಗೆ ಬೆಂದಿ ಹಾಗೂ ಅವಿಲು,  ಏನು ವ್ಯತ್ಯಾಸ?

ಅವಿಲು ಮಾಡೋ ವಿಧಾನ ತಿಳಿದಾಯ್ತು.   ಜೀರಿಗೆ ಬೆಂದಿ ಒಂದೇ ತರಕಾರಿ ಬಳಸಿ ಮಾಡುವಂತಹದು,  ಅದೂ ಎಳೆಯ ತರಕಾರಿಯಾಗಿರಬೇಕು.   ಅಲಸಂಡೆ ಅಂಗಳದಲ್ಲಿ ಇರುವಾಗ ನನ್ನದೂ ಒಂದು ಜೀರಿಗೆಬೆಂದಿ ಆಯಿತು.   ವಿಧಾನ ಎಲ್ಲವೂ ಅವಿಲು ಮಾಡಿದ ಹಾಗೇನೇ ಮತ್ತೇನಿಲ್ಲ.


 
                          


  
    ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  ' ಉತ್ಥಾನ ' ದಲ್ಲಿ ಪ್ರಕಟಿತ ಬರಹ.   ಒಕ್ಟೋಬರ್, 2016.

Saturday, 3 December 2016

ಟೊಮ್ಯಾಟೋ ಕಾಯಿರಸ




               




" ₹2,000 ನೋಟು ಚಿಲ್ರೆ ಮಾಡ್ಸೋಣಾಂತ ಬ್ಯಾಂಕಿಗೆ ಹೋದ್ರೆ ಅಲ್ಲಿ ಚಿಲ್ರೇನೇ ಇಲ್ವಂತೆ,  ಜಗ್ಗಣ್ಣನ ಅಂಗಡಿಯಲ್ಲೂ ಇಲ್ಲ...  ಕೊನೆಗೆ ರಸ್ತೆಬದಿ ತರಕಾರಿ ಸಂತೆ ಇಟ್ಕಂಡು ಕೂತಿರ್ತಾರಲ್ಲ,  ಅವರ ಹತ್ತಿರ ನೂರರ ನೋಟು ಸಿಕ್ತು.. "  ನಮ್ಮವರು ಹೇಳ್ತಾ ಇದ್ದಿದ್ದು ಗಿರೀಶ್ ಬಳಿ,  ಅದೂ ಫೇಸ್ ಬುಕ್ ನ ಮೆಸೆಂಜರ್ ಕಾಲ್ ಮೂಲಕ.


" ಹೆಹೆ.. ಏನು ಕಾಲ ಬಂತು,  ಇದು ಎಲ್ಲಿಗೆ ಮುಟ್ಟುತ್ತೋ... "  ಇತ್ಯಾದಿ ಅರ್ಥಶಾಸ್ತ್ರ ಪುರಾಣವೇನೂ ನಮಗೆ ಬೇಡ,  ತರಕಾರಿ ಸಂತೆಯಿಂದ ರುಪಾಯಿ 120ರ ಮಾಲು ಬಂದಿದೆ,  ಅದನ್ನು ವಿಚಾರಿಸಿಕೊಳ್ಳೋಣ.


ಟೊಮ್ಯಾಟೋ,  ಬಜ್ಜೀ ಮೆಣಸು,  ಕ್ಯಾಪ್ಸಿಕಂ, ನೀರುಳ್ಳಿ,  ಹಸಿಮೆಣಸು,  ಗುಳ್ಳ ಬದನೆ, ಬೀಟ್ರೂಟು,  ಶುಂಠಿ ಮಾತ್ರವಲ್ಲದೆ ದೊಡ್ಡ ಕಟ್ಟು ಕೊತ್ತಂಬರಿ ಸೊಪ್ಪು ಕೂಡಾ ಬಂದಿತ್ತು.   ಎಲ್ಲವನ್ನೂ ತೆಗೆದಿರಿಸಿ,  ತೊಳೆದು ಗೋಣಿತಾಟಿನ ಮೇಲೆ ಹರಡಿ ಇಟ್ಟಾಯ್ತು.    ಕಾಯಿ ಟೊಮ್ಯಾಟೋಗಳನ್ನು ಕಂಡಾಗ ಒಂದು ರಸರುಚಿಯ ನೆನಪಾಯ್ತು.


' ಸುಧಾ '  ವಾರಪತ್ರಿಕಯಲ್ಲಿ ಬಂದಿತ್ತು,  ಮಹಿಳೆಯರಿಗಾಗಿ ಮೀಸಲಾದ  ' ಕಾಮಧೇನು '  ಅಂಕಣದಲ್ಲಿ ಹೊಸರುಚಿಗಳೂ ಇರುತ್ತಿದ್ದುವು.   ನನ್ನಮ್ಮ ಈ ಪುಟವನ್ನು ಜಾಗ್ರತೆಯಾಗಿ ತೆಗೆದಿರಿಸಿಕೊಳ್ಳುತ್ತಿದ್ದರು.   ' ಟೊಮ್ಯಾಟೋ ಕಾಯಿರಸ '  ಎಂದು ಬಂದಿದ್ದ ಒಂದು ಪದಾರ್ಥವನ್ನು ಅಮ್ಮ ಮಾಡಿದ್ದು ರುಚಿಕರವಾಗಿತ್ತು.   ಮುಂದೆ ನಾನೂ ಅಡುಗೆಮನೆಯ ಒಡತಿಯಾದ ನಂತರ ಅಮ್ಮನ ಬಳಿ ವಿಚಾರಿಸ್ಕೊಂಡು ಈ ಅಡುಗೆಯನ್ನು ಮಾಡಿದ್ದಿದೆ.


ಎಲ್ಲೋ ಓದಿದ,  ಎಲ್ಲೋ ನೋಡಿದ ಅಡುಗೆಯನ್ನು ಒಂದೆರಡು ಬಾರಿಯಾದರೂ ಮಾಡಿ ಬಳಕೆಯಾದರೆ ಮಾತ್ರ ಇನ್ನೊಮ್ಮೆ ಮಾಡಲು ತ್ರಾಸವೇನಿಲ್ಲ.   ಈಗ ನಾವು ಟೊಮ್ಯಾಟೋ ಕಾಯಿರಸ ಮಾಡೋಣ.


3 ಕಾಯಿ ಟೊಮ್ಯಾಟೋ,  ಒಂದು ಟೊಮ್ಯಾಟೋ ನಾಲ್ಕು ಹೋಳು ಆದರಾಯಿತು.

2 ಬಜ್ಜಿ ಮೆಣಸು,   ಟೊಮ್ಯಾಟೋ ಹೋಳುಗಳ ಗಾತ್ರಕ್ಕೆ ಹೊಂದಿಕೆಯಾಗುವಂತೆ ಕತ್ತರಿಸುವುದು.

ಒಂದು ಹಿಡಿ ತೊಗರಿಬೇಳೆ ಬೇಯಿಸಿದ್ರಾ,

ಬೆಂದ ಬೇಳೆಗೆ ತರಕಾರಿಗಳನ್ನು ಹಾಕಿ,  ರುಚಿಗೆ ಉಪ್ಪು ಹಾಕಿ ಹದವಾಗಿ ಬೇಯಿಸಿ.


ಅರ್ಧ ಕಡಿ ತೆಂಗಿನ ತುರಿ,  ಕೊತ್ತಂಬರಿಸೊಪ್ಪು,  ಜೀರಿಗೆ ಕೂಡಿ ಅರೆಯಿರಿ.  ಖಾರ ಬೇಕಿದ್ದರೆ ಹಸಿಮೆಣಸು ಹಾಕ್ಕೊಂಡು ಅರೆಯಿರಿ,  ಈಗ ಬೇಯಿಸಲ್ಪಟ್ಟ ಬಜ್ಜಿ ಮೆಣಸು ಖಾರ ಸಾಕಾಗದು.


ತೆಂಗಿನ ತುರಿಯ ಅರಪ್ಪನ್ನು ಬೇಯಿಸಿದ ಸಾಮಗ್ರಿಗಳಿಗೆ ಕೂಡಿಸಿ.  ರುಚಿಗೆ ಉಪ್ಪು,   ಅಗತ್ಯದ ನೀರು ಕೂಡಿಸಿ ಕುದಿಸಿ,  ಒಗ್ಗರಣೆಯ ಅಲಂಕರಣ ಮಾಡುವಲ್ಲಿಗೆ ಟೊಮ್ಯಾಟೋ ಕಾಯಿ ರಸ ಸಿದ್ಧ.  ಅನ್ನಕ್ಕೂ ಸೈ,  ಚಪಾತಿಗೂ ಜೈ.



  
  

      

Tuesday, 22 November 2016

ಆ್ಯಕ್ಸಿಡೆಂಟು ತಂದ ನೋಟು!




ಸುಮ್ನೇ ಫೇಸ್ ಬುಕ್ ನೋಡ್ತಿದ್ದಾಗ ಗಿರೀಶನ ಮೆಸೆಂಜರ್ ಕಾಲ್ ಬಂದಿತು.   " ಮನೆಯಲ್ಲಿ ಇವ್ರಿಲ್ಲ,  ಹೊರಗೆ ಹೋಗಿದ್ದಾರಲ್ಲ. "


" ಚಿಂತಿಲ್ಲ,  ನಾವೀಗ ಉಪ್ಪಳ ಪೇಟೆಯಲ್ಲಿದ್ದೇವೆ,  ಸೀದಾ ಊರಿಗೆ ಹೋಗೂದು...  ನಾಡಿದ್ದು ಮನೆಯಲ್ಲಿ ಒಂದು ಪೂಜೆ, ಹೋಮ ಇಟ್ಕೊಂಡಿದ್ದೇವೆ,  ಎಲ್ರೂ ಬನ್ನಿ. "


" ಹೌದಾ,  ನಾಡಿದ್ದು ತಾರೀಕು ಎಷ್ಟೂ?  17ಕ್ಕೆ ಎರಡು ಕಡೆ ಜೆಂಬ್ರಕ್ಕೆ ಹೋಗ್ಲಿಕ್ಕಿದೆ. "

" ಇದು 18 ಆಗ್ತದೆ,  ಗುರುವಾರ.   ಬನ್ನಿ ಮರೆಯದೆ.."

" ಹ್ಞೂ,  ಈಗಲೇ ಬರೆದು ಇಡ್ತೇನೆ.. " ಅನ್ನುವಲ್ಲಿಗೆ ನಮ್ಮ ಫೇಸ್ ಬುಕ್ ಟಾಕಿಂಗ್ ಮುಗಿಯಿತು.


17ನೇ ತಾರೀಕು ಅಂದ್ರೆ ನಾಳೆ,  ಗಿರೀಶ್ ಹೇಳಿದ್ದು ಒಳ್ಳೆಯದಾಯ್ತು.   ತಾರೀಕು,  ವಾರ ನೆನಪಿಟ್ಟು ಹೋಗಬೇಕಾದ ಕಡೆ ಹೋಗುವುದೇ ಸಮಸ್ಯೆ ಆಗ್ಬಿಟ್ಟಿದೆ.


ನಮ್ಮವರು ಮನೆಗೆ ಬಂದ ಕೂಡಲೇ,   " ನಿಮ್ಮ ಗಿರೀಶಂದು.... " ಎಂದು ಪುನಃ ವರದಿ ಒಪ್ಪಿಸಲಾಯ್ತು.   " ಹಂಗಿದ್ರೆ ನಾಳೆ ಎರಡು ಮನೆ ಸುಧರಿಕೆ ಆಗಿ,  ನಾಡಿದ್ದು ಪುನಃ  ಹೋಗುವ ತಯ್ಯಾರಿ ಆಗ್ಬೇಕೂ... "


ಮಾರನೇ ದಿನ ನಾನು ಪಕ್ಕದ ಮನೆಯಲ್ಲಿರುವ ನಮ್ಮಕ್ಕ ಹಾಗೂ ಭಾವ ಜೊತೆ ತಿಥಿಯೂಟಕ್ಕೆ ಹೋದ್ರೆ ನಮ್ಮೆಜಮಾನ್ರು ಬೈಕ್ ಹತ್ತಿ  ಇನ್ನೊಂದ್ಕಡೆ ಗಣಹೋಮದ ಪೂಜೆಗೆ ಹೋದರು.


ಹೊರಡುವ ಮೊದಲು ಚೆನ್ನಪ್ಪನ ಆತಿಥ್ಯವೂ ಆಗಬೇಕಿತ್ತಲ್ಲ,  ಅವನ ಚಹಾ - ದೋಸೆ,  ಅನ್ನ ಸಾಂಬಾರು,  ಮಜ್ಜಿಗೆ ಉಪ್ಪಿನಕಾಯಿ ಎಲ್ಲವನ್ನೂ ರೂಢಿಗೆ ಮಾಡಿಟ್ಟು,   " ಅಕ್ಕ,  ಎಲ್ಲ ಕಡೆ ಬೀಗ ಸರಿಯಾಗಿ ಹಾಕ್ಕೊಳ್ಳೀ... "  ಹಿತವಚನಕ್ಕೂ ತಲೆದೂಗಿದ್ದಾಯ್ತು.


ನಾಳೆ ಗಿರೀಶ್ ಮನೆಗೆ ಹೋಗುವುದಿದೆ,   ಸುಮಾರು ಇಪ್ಪತ್ತು ವರ್ಷಗಳ ಸ್ನೇಹಿತ ಗಿರೀಶ್,   ಅವನ ಮನೆಗೆ ನಾನು ಈ ತನಕ ಹೋಗಿಯೇ ಇಲ್ಲ,   " ಈ ಬಾರಿ ಹೋಗೋಣ. " ನಮ್ಮವರ ಅಪ್ಪಣೆಯೂ ಆಯ್ತು.


ಸರಿಯಾಗಿ ಹನ್ನೊಂದು ಗಂಟೆಗೆ ಹೊರಟು,  ಚೆನ್ನಪ್ಪನನ್ನು ಮನೆ ನೋಡಿಕೊಳ್ಳಲು ಬಿಟ್ಟು ನಾವು ಹೊರಟೆವು.


" ಎರಡು ಬಾಳೆಗೊನೆ ಇತ್ತೂ,  ಕಾರಿನಲ್ಲಿ ಹಾಕ್ಕೊಂಡ್ರೆ ತರಕಾರಿ ಅಂಗಡಿಗೆ ಕೊಡಬಹುದಿತ್ತು... "


" ಅದೆಲ್ಲ ಈಗ ಬೇಡ,  ಅಂಗಡಿ ವ್ಯವಹಾರ ಚೆನ್ನಪ್ಪನೇ ಮಾಡಲಿ,  ಕಾರಿಗೆ ಬಾಳೆಕಾೖ ಕಲೆ ಆಗುತ್ತೆ..."


ಬರಬೇಕಾದ ದಾರಿಯ ನಕ್ಷೆಯನ್ನು  ಗಿರೀಶ್ ಮೊದಲೇ ಹೇಳಿದ್ದ,   " ಪೆರ್ಲ ರೋಡಿನಲ್ಲಿ ಬನ್ನಿ,  ರಸ್ತೆ ಚೆನ್ನಾಗಿದೆ. "  ಅಲ್ಲಲ್ಲಿ ಸಿಗುವ ಒಳದಾರಿಗಳನ್ನೂ ಸ್ಟಡೀ ಮಾಡಿಟ್ಕೊಂಡಿದ್ದೆವು.   ಯಥಾಪ್ರಕಾರ ಪೊಸಡಿಗುಂಪೆಯ ರಸ್ತೆ,   ಹಿಂದುರುಗಿ ಬರುವಾಗ ಸಂಜೆಯಾದೀತು,   ಸೂರ್ಯಾಸ್ತಮಾನದ ರಸಘಳಿಗೆ... ಕಣ್ತುಂಬ ನೋಡುತ್ತ ಬರಬಹುದು.


ಪೆರ್ಮುದೆ ಜಂಕ್ಷನ್ ಬಂದಿತು,  ಒಂದು ಪುಟ್ಟ ಪೇಟೆ...  ನಾಲ್ಕಾರು ಓಬೀರಾಯನ ಕಾಲದ ಅಂಗಡಿಗಳ ಒಂದು ಸರ್ಕಲ್.   ಎದುರುಗಡೆಯಿಂದ ಒಂದು ಸ್ಕೂಟರ್ ಬಂದು ಕಾರಿಗೆ ಡಿಕ್ಕಿ ಹೊಡೆಯಿತು.  ಢಬಾರ್ ಶಬ್ದದೊಂದಿಗೆ ಕಾರಿನ ಮಿರರ್ ಪ್ಲೇಟ್ ಕಳಚಿತು.   ಬಾಗಿಲು ತೆರೆದು ನಮ್ಮವರು ಹೊರಗಿಳಿದರು.


" ಅದ್ಯಾಕೆ ಹೀಗೆ ಗಾಡಿ ಓಡಿಸ್ತೀಯ,   ಜೀವದ ಮೇಲೆ ಆಸೆ ಇಲ್ವಾ... "  ತರಾಟೆ.  ಐದಾರು ಜನ ಸೇರಿದರು.


ಅವನು   " ನನ್ನನ್ನು ಬಿಟ್ಬಿಡಿ,   ತಪ್ಪಾಯ್ತು... "  ಕಿಸೆಯಿಂದ  ₹2,000 ದ ನೋಟು ತೆಗೆದು ಇವರ ಕೈಲಿಟ್ಟ!


ನಾವು ಕಂಡಿರದ ನೋಟು,  ಒಬ್ಬ ಕೂಲಿ ಕಾರ್ಮಿಕನ ಬಳಿ ಇದೆ...  ನಮ್ಮೆಜಮಾನ್ರು ಅವನಿಗೆ ಸ್ವಲ್ಪ ಬುದ್ದಿ ಹೇಳಿ ಗಾಡಿ ಹತ್ತಿದರು.  


ಸರಾ್ಕರ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿತಷ್ಟೆ,  ನಮ್ಮ ತಿಜೋರಿಯಲ್ಲಿ ಐನೂರು ಸಾವಿರದ ನೋಟುಗಳೇ ಇರಲಿಲ್ಲವಾಗಿ ಚಿಂತಾರಹಿತರಾಗಿದ್ದೆವು.   


ಚೆನ್ನಪ್ಪನೂ ಹಿಂದಿನಂತೆ ರುಪಾಯಿ ಐನೂರು ಕೇಳುವುದನ್ನೇ ಬಿಟ್ಟಿದ್ದಾನೆ,   " ಈಗ ನೂರಕ್ಕಿಂತ ಹೆಚ್ಚು ಕೊಡುವ ಹಾಗಿಲ್ಲ. "  ಅವನೂ ಆಯ್ತೆಂದಿದ್ದ.


ಆದರೂ ಖರ್ಚಿಗೆ ದುಡ್ಡು ಬೇಡ್ವೇ,   ಬ್ಯಾಂಕಿಗೆ ಹೋದಾಗ   ₹2,000 ರ ನೋಟನ್ನು ತಿರಸ್ಕರಿಸಿ,  ₹1,900 ಡ್ರಾ ಮಾಡ್ಕೊಂಡು ಬಂದಿದ್ದರು.


ಇಂತಹ ಪರಿಸ್ಥಿತಿ ಇರುವಾಗ ಅಚಾನಕ್ಕಾಗಿ ದಕ್ಕಿದ ರುಪಾಯಿ ನೋಟು,  ಈ ಬರಹಕ್ಕೆ ಪ್ರೇರಣೆ.


ಅಂತೂ ಒಂದು ತಾಸು ವ್ಯರ್ಥವಾದರೂ ಗಿರೀಶ್ ಮನೆಗೆ ಸಕಾಲಕ್ಕೆ ತಲಪಿದೆವು ಅನ್ನಿ.   ಲಾಯರ್ ಗಿರೀಶ,  "  ಕಾರು ಆ್ಯಕ್ಸಿಡೆಂಟಲ್ಲಿ ಡ್ಯಾಮೇಜ್ ಆಗಿದ್ದಕ್ಕೆ ಇನ್ಶೂರೆನ್ಸ್ ಇದೆಯಲ್ಲ. "  ಅಂದು ಮನ ಹಗುರಾಗಿಸಿದ.


ಒಂದುವೇಳೆ ಬೈಕ್ ಸವಾರನಿಗೆ ಏಟಾಗಿ ನಾವೇ ಅವನನ್ನು ಆಸ್ಪತ್ರೆಗೆ ಒಯ್ಯುವ ಸ್ಥಿತಿ ಬಂದಿದ್ರೆ...


" ನನ್ನ ಬಳಿ ಒಂದು ಮುಕ್ಕಾಲೂ ಇರಲಿಲ್ಲ,  ಏನೋ ಅದೃಷ್ಟ ಒಳ್ಳೆಯದಿತ್ತು,  ದುಡ್ಡು ಬಂತು. "


ಪೂಜೆಗೆ ಹೋಗ್ತಿರೋದ್ರಿಂದ ಬಿಳಿ ಪಂಚೆ,  ಸಿಲ್ಕು ಶರ್ಟ್ ಹಾಕ್ಕೊಂಡಿದ್ರು,  ದುಡ್ಡು ಇಟ್ಟುಕೊಳ್ಳಬಹುದಾದ ವ್ಯವಸ್ಥೆ ಈ ಉಡುಪಿನಲ್ಲಿ ಇಲ್ಲ.   ಅದೂ ಅಲ್ಲದೆ ಪ್ರಯಾಣಿಸುವ ದಾರಿಯೂ ಅಂತಹುದು,  ದುಡ್ಡು ಖರ್ಚಿನ ಸಬ್ಜೆಕ್ಟು ಇಲ್ಲಿಲ್ಲ,   ಹಸಿರು ಮರಗಳು,  ಮುಳಿಹುಲ್ಲಿನ ಬಯಲುಗಳು,  ಮೇಲೆ ನೀಲ ಆಗಸ,  ಡಾಮರು ರಸ್ತೆ.  ಗಾಡಿಯಲ್ಲಿ ಸಾಕಷ್ಟು ಇಂಧನವೂ ಇರುವಾಗ,  ರುಪಾಯಿರಹಿತ ಪಯಣ ನಮ್ಮದಾಗಿತ್ತು!


ಹಿಂದುರುಗಿ ಬರುವಾಗ ಪೊಸಡಿಗುಂಪೆ ಪುನಃ ಎದುರಾಯಿತು,   ಗಂಟೆ ಐದಾಗಿತ್ತಷ್ಟೇ,   ಹಲವು ಸೂರ್ಯಾಸ್ತದ ದೃಶ್ಯಗಳು ಬ್ಲಾಗ್ ಓದುಗರಿಗಾಗಿ... ಚಲಿಸುತ್ತಿರುವ ಕಾರಿನೊಳಗಿಂದ ಸೆರೆ ಹಿಡಿದ ಚಿತ್ರಗಳು,  ಇನ್ನೂ ಅರ್ಧ ಗಂಟೆ ಕಳೆದಿರುತ್ತಿದ್ದರೆ ಇನ್ನೂ ಸೊಗಸಿನ ಚಿತ್ರಗಳು ಲಭ್ಯವಾಗುತ್ತಿತ್ತು.



                                      
 

Monday, 14 November 2016

ಪೊಸಡಿಗುಂಪೆಯ ಪ್ರವಾಸ



" ಅಹ!  ಏನು ಟೈಟಲ್ ಇಟ್ಕಂಡಿದೀಯ,  ಪೊಸಡಿಗುಂಪೆಯ ಬುಡದಲ್ಲೇ ಇದ್ರೂ.. "  ಎಂದ ಮಧು.


" ಇರಲಿ ಬಿಡು,  ಎಲ್ಲರಿಗೂ ಎಲ್ಲಿ ಗೊತ್ತಾಗುತ್ತೇ,  ನಮ್ಮ ಮುಳಿಗದ್ದೆಯಿಂದ ಪೊಸಡಿಗುಂಪೆಯ ದೂರಾ... "


ಅದು ಒಂದು ರಜಾದಿನ,  ಮನೆಯಲ್ಲಿ ಎಲ್ಲರೂ ಇದ್ದೆವು,  ನಾವಿಬ್ಬರೇ ಅಲ್ಲ,  ಮಕ್ಕಳ ಸೇನೆಯೂ ಬೆಂಗಳೂರಿನಿಂದ ಬಂದಿತ್ತು.


ಸಂಜೆಯಾಗುತ್ತಲೂ,  " ಅಮ್ಮ,  ಪೊಸಡಿಗುಂಪೆಗೆ ಹೋಗ್ತಾ ಇದೀವಿ,   ನಿಂಗೇನು ಕೆಲ್ಸ ಮನೆಯಲ್ಲಿ?  ಬಾ... "


" ಸರಿ,  ಬಂದೇ..  ಈ ಸೀರೆ ಬದಲಾಯಿಸಿ... " ಅನ್ನುವಷ್ಟರಲ್ಲಿ,


" ಬ್ಯಾಡಾ ಅತ್ತೆ,  ಈಗಿರೋದೇ ಚೆನ್ನಾಗಿದೆ. "  ಅಂದಳು ಮೈತ್ರಿ.


" ಅಷ್ಟೇ ಈಗ,  ಕಾರಿನಲ್ಲಿ ಕೂತಿದ್ದು ತಿರುಗಾ ಕಾರಿನಲ್ಲೇ ಮನೆಗೆ ಬರೂದು... "  ಅಂದು ಚಪ್ಪಲಿ ಮೆಟ್ಟಿ ಹೊರಟಿದ್ದಾಯ್ತು.


ಬಾಯಾರುಪದವಿನಲ್ಲಿ ಕಾರು ನಿಂತಿತು.   " ಸ್ವಲ್ಪ ಕೆಲ್ಸ ಇದೆ ಬ್ಯಾಂಕಿನಲ್ಲಿ...  ಸಾವಿರ ಐನೂರರ ನೋಟು ಬದಲಾಯಿಸಿ.... " ಅನ್ನುತ್ತ ಅಪ್ಪ ಮಗ ಇಳಿದು ಹೋದರು.


ಸುಮ್ಮನೇ ಹೊರಗೆ ನೋಡುತ್ತಿದ್ದಾಗ,   ನಮ್ಮ ಎದುರುಗಡೆ ಮೂರು ಜನಾ ನಿಂತ್ಕೊಂಡು ಕೈಲಿದ್ದ ವಸ್ತುವನ್ನು ಬಂಗಾರದ ಒಡವೆಯೋಪಾದಿಯಲ್ಲಿ ನಿರುಕಿಸುತ್ತ ಸಂಭ್ರಮಿಸುತ್ತಿದ್ದುದು ಕಂಡು ಬಂತು.


" ಅತ್ತೇ,  ಅವರ ಕೈಲಿ  ₹2000 ನೋಟು! "


" ಹ್ಞಾ, "   ನಾನೂ ಕಣ್ ಕಣ್ ಬಿಟ್ಟು ಅಂದೆ,  " ತೂಕೋ,  ಒರ ತೂದು ಕೊರ್ಪೆ... "   ( ನೋಡುವಾ,  ಒಮ್ಮೆ ನೋಡಿ ಕೊಡುತ್ತೇನೆ )


ನನ್ನ ಕೈಗೆ ಹೊಸ ನೋಟು ಬಂತು.   ಅತ್ತ ಇತ್ತ ತಿರುಗಿಸಿ,  ಬಣ್ಣ, ಗಾತ್ರಗಳ ಅಧ್ಯಯನ ಮಾಡ್ಬಿಟ್ಟು ಪುನಃ ವಾರಸುದಾರರಿಗೆ ಹಿಂದಿರುಗಿಸಿದೆವು.


ಮಗನ ರುಪಾಯಿ ನೋಟು ವಿನಿಮಯ ಆಯ್ತೋ ಗೊತ್ತಿಲ್ಲ,  ನಾವಂತೂ ನೋಟು ಕಂಡಿದ್ದಾಯ್ತು.




                              


ಕೇರಳ ಪ್ರವಾಸೋದ್ಯಮ ಇಲಾಖೆ ಪೊಸಡಿಗುಂಪೆಯನ್ನು ಪ್ರವಾಸೀತಾಣವೆಂದು ಘೋಷಿಸಿ ವರ್ಷಗಳೇ ಕಳೆದಿವೆ.      ಪ್ರಶಾಂತ ವಾತಾವರಣವೂ, ಸ್ವಚ್ಛ ಗಾಳಿಯೂ ಕೂಡಿದ  " ಸ್ವಚ್ಛ ಭಾರತ " ವನ್ನು ಕಾಣಬೇಕಾದರೆ ಪೊಸಡಿಗುಂಪೆಗೆ ಬನ್ನಿ.  ಒಂದು ನಿರ್ದಿಷ್ಟ ಜಾಗದಲ್ಲಿ ಕಾರು ನಿಲ್ಲಿಸಿ ಇಳಿದೆವು.


ನನಗೇನೂ ತಿರುಗಾಟ ಬೇಕಿಲ್ಲ,  ಅಪ್ಪನ ಮನೆಗೆ ಹೋಗಬೇಕಾದರೂ ಇದೇ ದಾರಿ.   ನನ್ನಪ್ಪನೂ ಕಿಲೋಮೀಟರ್ ಲೆಕ್ಕದಲ್ಲಿ ಡೀಸಲ್ ತುಂಬ ಉಳಿತಾಯ ಆಗುತ್ತೇಂತ ಈ ರಸ್ತೆಯಲ್ಲೇ ಹಿರಣ್ಯಕ್ಕೆ ಬರುತ್ತಿದ್ದರು,  ಅಪ್ಪ ಹಿಂದಿರುಗುವಾಗ ನನ್ನದೂ ಒಂದು ತವರುಮನೆಯ ಪಯಣ ಇದ್ದೇ ಇರುತ್ತಿತ್ತು.


ನಿರ್ಜನ ದಾರಿ,   ಸೂರ್ಯಾಸ್ತದ ವೇಳೆ,  ಮಂಜು ಮುಸುಕಿದ ಆಗಸ,  ಪಶ್ಚಿಮದ ಅರಬೀಸಮುದ್ರದಾಳಕ್ಕೆ ಇಳಿಯುತ್ತಿರುವ ಸೂರ್ಯ,  ಕೆಂಪು ಬೆಳಕಿನ ಚೆಂಡಿನಂತೆ,  ಕಿತ್ತಳೆ ಹಣ್ಣಿನಂತೆ... ಛೆಛೇ,  ವರ್ಣಿಸಲು ನಮ್ಮಿಂದಾಗದು.   ಚಂದದ ಸೂರ್ಯನನ್ನು ನೋಡಲು ಆಗುಂಬೆಗೆ ಹೋಗಬೇಕೆಂದೇನೂ ಇಲ್ಲ,  ಪೊಸಡಿಗುಂಪೆಗೆ ಬಂದರಾಯಿತು.   ಒಂದು ಬದಿಯಲ್ಲಿ ಸಮುದ್ರದ ಭೋರ್ಗರೆತ,  ಮತ್ತೊಂದೆಡೆ ಬೆಟ್ಟಗಳ ಸಾಲು.  ನೆಲ ತುಂಬ ಮುಳಿಹುಲ್ಲು.  ಕುಳಿತಿರಲು ಕಪ್ಪನೆಯ ಬಂಡೆಕಲ್ಲುಗಳು.   ಕಲ್ಲ ಮೇಲೆ ಅರಳಿರುವ  ಹೂ!    ಪೊಸಡಿಗುಂಪೆಗೆ ಬಂದ ಲೆಕ್ಕದಲ್ಲಿ ನನ್ನ ಕೈಗೆ ಒಂದು ಹೂ ಗೊಂಚಲು ಬಂದಿತು,  ಕಪ್ಪಗಿನ ಪಾರೆ ಕಲ್ಲುಗಳ ಮೇಲೆ ಅರಳುವ ಇದು ಪಾರೆ ಹೂ ಎಂದೇ ಖ್ಯಾತಿ ಪಡೆದಿದೆ.


ದೀಪಾವಳಿಯ ಸಮಯದಲ್ಲೇ ಈ ಹೂ ಪಾರೆಕಲ್ಲುಗಳ ಮೇಲೆ ಅರಳಿರುತ್ತದೆ,  ಬಣ್ಣವಿಲ್ಲ,  ಸುವಾಸನೆಯೂ ಇಲ್ಲ,  ನೀರೆರೆದು ಸಲಹಿದವರೂ ಇಲ್ಲ.   ದೀಪಾವಳಿಯ ಹಬ್ಬಕ್ಕೆ ಈ ಹೂವು ಪ್ರಕೃತಿಯ ವಿಶೇಷ ಕೊಡುಗೆ.


 



ಟಿಪ್ಪಣಿ:  17/9/2020 ರಂದು ಸೇರಿಸಿದ್ದು.


ಇದರ ಸಸ್ಯಶಾಸ್ತ್ರೀಯ ಹೆಸರು Polycarpaea corymbosa ಎಂದಾಗಿದ್ದು ಕಪ್ಪು ಕಲ್ಲು ಬಂಡೆಗಳ ಮೇಲೆ ಅಂಟಿಕೊಂಡಂತೆಇರುವಂತದು.  ಫೇಸ್ಬುಕ್ ಮಿತ್ರರೂ ಕುಟುಂಬ ಬಂಧುವರ್ಗದವರೂ ಆದ ಡಾ. ಶ್ರೀನಿವಾಸ ಶೇಂತಾರ್ ವೈಜ್ಞಾನಿಕ ಹೆಸರನ್ನುತೋರಿಸಿಕೊಟ್ಟರು.

ಎಲ್ಲ ಭಾರತೀಯ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಶೋಭಿಸುತ್ತಿರುವ ಈ ಸಸ್ಯ ಕನ್ನಡದಲ್ಲಿ ಪಾದೆ ಮುಳ್ಳಿನ ಗಿಡ.  ದೀಪಾವಳಿಯ ಜನಪದ ಆಚರಣೆಯಲ್ಲಿ ಬಳಸುವ ವಾಡಿಕೆ ಇದೆ.  ಅಪ್ಟಟ ಭಾರತದ ಸಸ್ಯ ಇದಾಗಿದ್ದು ಆಂಗ್ಲಬಾಷಾಶಾಸ್ತ್ರ oldman’s cap ಅಂದಿದೆ.