Pages

Ads 468x60px

Thursday, 1 July 2021

ಬಣ್ಣದ ಪಪ್ಪಾಯಿ

 



ವರ್ಷಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಮಂಗಳೂರಿಗೆ ಹೋಗಬೇಕಾಗಿ ಬಂದಿತ್ತು.  ಆಗ ಕೋವಿಡ್ ಕೊರೋನಾ ಲಾಕ್ಡೌನ್ಕ್ವಾರೆಂಟೈನ್ ಮಾಸ್ಕ್ ಇತ್ಯಾದಿ ಹೊಸ ಪದ ಸಮೂಹಗಳು ಬಂದಿದ್ದಿಲ್ಲ.   ಚಿಕ್ಕಪ್ಪ ಮುಳ್ಳಂಕೊಚ್ಚಿ ಗಣಪತಿ ಭಟ್ಟರೇ ಮಂಗಳೂರಿನ ಸೀನಿಯರ್ ವೈದ್ಯರಾಗಿರುವಾಗ ಅವರ ಮನೆಗೇ ಹೋದೆವು.   

ನಮಗೆ ಅತಿಥಿ ಸತ್ಕಾರ ನೀಡಿದ್ದು ಡಾಕ್ಟರ ಮಗಳು ಸಂಧ್ಯಾ.

ತಟ್ಟೆಯಲ್ಲಿದ್ದ ಕೆಂಪು ಬಪ್ಪಂಗಾಯಿ ಹೋಳುಗಳು ನನ್ನನ್ನು ಆಕರ್ಷಿಸಿ ಬಿಟ್ಟಿತು.   ಮನೆಯಲ್ಲಿದ್ದ ಕೆಂಪು ಜಾತಿಯದು ಅಳಿದೇಹೋಗಿತ್ತು.   " ಸಂಧ್ಯಾ,  ಇದರ ಬೀಜ ಇದ್ರೆ ಕೊಟ್ಟಿರು,  ಗಿಡ ಮಾಡಿಕೊಳ್ತೇನೆ.. "  


ಹೊರಡುವಾಗ ಬಪ್ಪಂಗಾಯಿ ಬೀಜಗಳು ನನ್ನ ಕೈಚೀಲ ಸೇರಿದುವು.  ಆಗ ಜನವರಿ ಮೊದಲ ವಾರ,  ತೋಟಕ್ಕೆ ಇನ್ನೂ ನೀರು ಹಾಯಿಸಲು ಆರಂಭ ಆಗಿಲ್ಲ,  " ಈ ಬೀಜಗಳನ್ನು ಹೇಗೆ ಸಸಿ ಮಾಡಿಕೊಳ್ಳಲಿ? "  ಮನೆಯ ಸದಸ್ಯರು ಯಾರೂ ಕ್ಯಾರೇ ಅನ್ನಲಿಲ್ಲ.  ಕೊನೆಗೆ ಬಚ್ಚಲು ಮನೆಯ ಹಿಂದೆ ನೀರು ಹರಿದು ಹೋಗುತ್ತಿರುವಲ್ಲಿ ಸೂಕ್ತ ಸ್ಥಳದ ಆಯ್ಕೆ ಮಾಡಿ ಬೀಜಗಳನ್ನು ಹಾಕಲಾಯಿತು.  ಮೇಲಿನಿಂದ ಅಡಿಕೆ ಸಿಪ್ಪೆ ಹರಡಲಾಯಿತು.   ನೀರು ಚಿಮುಕಿಸಿದ್ದೂ ಆಯಿತು.  ಎರಡು ದಿನಕ್ಕೊಮ್ಮೆ ವೀಕ್ಷಣೆ.   ಒಂದು ದಿನ ಮೊಳಕೆಯೊಡೆದ ಕುಡಿ...   ಮುಂದೆ ಹತ್ತಾರು ದಿನಗಳಲ್ಲಿ ಹಲವು ಗಿಡಗಳು ಮೇಲೆದ್ದುವು.


ಅದೇ ಸಮಯದಲ್ಲಿ ಆಧುನಿಕ ಬಾತ್ ರೂಂ ನಿರ್ಮಾಣವಾಗುತ್ತಲಿತ್ತು,  ಸೋಲಾರ್ ಬಿಸಿನೀರು ಅಳವಡಿಸಿದ ನಂತರ ಯಾರೊಬ್ಬರೂ ಹಳೆಯ ಬಚ್ಚಲುಮನೆಗೆ ಕಾಲೇ ಇಡದೆ ನನ್ನ ಪಪ್ಪಾಯಿ ಗಿಡಗಳಿಗೆ ನೀರಿಲ್ಲವಾಯಿತು,   ಆ ವೇಳೆಗೆ ಕೊರೋನಾ ಲಾಕ್ ಡೌನ್ ಎಂದು ಇದ್ದನೊಬ್ಬ ಚೆನ್ನಪ್ಪನೂ ಮಾಯವಾಗಿದ್ದ.   ಚಿಂತಿಲ್ಲ,  ಇನ್ನೇನು ಮಳೆಗಾಲ ಬರಲಿದೆ,   ಅಲ್ಲದೆ ಆಗೊಮ್ಮೆಈಗೊಮ್ಮೆ  ಮಳೆ ಹನಿ ಬೀಳುತ್ತಲಿದೆ.


ಮಳೆಗಾಲ ಶುರುವಾಯಿತು,  ಒಮ್ಮೆ ಪಪ್ಪಾಯಿ ಗಿಡದ ಬಳಿ ಬಂದಾಗ ಸುತ್ತಮುತ್ತ ಕಳೆ ಗಿಡಗಳ ಆವರಣ. ಕತ್ತಿ ಹಿಡಿದು ಕಳೆಗಳನ್ನು ಸವರಬೇಕಾಯಿತು.   ಏಳೆಂಟು ಪಪ್ಪಾಯಿ ಗಿಡಗಳು ಒಟ್ಟಿಗೆ ಬೆಳೆಯುತ್ತಲಿವೆ.  ಬಲಿಷ್ಟವಾಗಿದ್ದ ಒಂದು ಗಿಡವನ್ನು ಬಿಟ್ಟು ಉಳಿದೆಲ್ಲ ಗಿಡಗಳನ್ನು ಕಿತ್ತು ನಮ್ಮೆಜಮಾನ್ರ ಕೈಯಲಿಟ್ಟು  " ಕೆಂಪು ಬಪ್ಪಂಗಾಯಿ ಗಿಡ,  ನಾಗಬನಕ್ಕೆ ಹೋಗುವ ದಾರಿಯಲ್ಲಿ ಹೊಸ ಕೆಂಪುಮಣ್ಣು ಹಾಕಿರುವಲ್ಲಿ ನೆಡಿಸಿ.. “   ನನ್ನ ಅಪ್ಪಣೆಯಂತೆ ನೆಟ್ಟರೋ ಬಿಟ್ಟರೋ ತಿಳಿಯದು.


ಪಪ್ಪಾಯಿ ಹೂ ಬಿಟ್ಟಿತು,  ಹೆಣ್ಣು ಹೂ.  ಬಪ್ಪಂಗಾಯಿ ಗಿಡದಲ್ಲಿ ಎರಡು ವಿಧ,  ಹೆಣ್ಣು ಮತ್ತು ಗಂಡು.  ಒಂದು ವೇಳೆ ಗಂಡು ಗಿಡವಾಗಿದ್ದರೆ ಕಡಿದು ಹಾಕಬೇಕಾಗಿತ್ತು.


ಪಪ್ಪಾಯಿ ಹೂ ಗಂಡೋ ಹೆಣ್ಣೋ ತಿಳಿಯುವುದು ಹೇಗೆ?

ಗಂಡು ಹೂವು ಗೊಂಚಲು ಗೊಂಚಲಾಗಿ ಅರಳುತ್ತದೆ.   ಅದರಲ್ಲಿ ಪಪ್ಪಾಯಿ ಆಗುತ್ತದಾದರೂ ಆ ಕಾಯಿಗಳನ್ನು ಕೊಯ್ದವರನ್ನು ನಾನು ಕಂಡಿಲ್ಲ.   ಹೆಣ್ಣು ಗಿಡದಲ್ಲಿ ಒಂದೊಂದೇ ಹೂ ಅರಳುತ್ತೆ.



ಮೊದ ಮೊದಲು ಅರಳಿದ ಹೂಗಳೆಲ್ಲ ಬಿದ್ದೇ ಹೋದವು.  ಚಿಕ್ಕ ಗಿಡ ಅಲ್ವೇ,  ಗೊಬ್ಬರದ ಹಂಗಿಲ್ಲದೆ ಒಂದು ಹೂ ಕಾಯಾಗಿ ನಿಂತಿತು.  ಡಿಸೆಂಬರ್ ತನಕ ಮಳೆಗಾಲ ನಮ್ಮದು,   ಆ ತರುವಾಯ ತೋಟಕ್ಕೆ ನೀರು ಹಾಯಿಸುವ ಸಮಯ.  ಅಂತೂ ಇಂತೂ ಪಪ್ಪಾಯಿ ಗಿಡ ಬೆಳೆದು ಒಂದೇ ಒಂದು ಫಲ ಕೊಟ್ಟಿತು.   ಪುಟ್ಟ ಗಿಡ ಅಲ್ವೇ,   ಅರಳಿದ ಹೂಗಳೆಲ್ಲ ಕಾಯಿ ಆಗಿ ಬಲಿತಿದ್ರೆ ಗಿಡ ಭಾರ ತಾಳಲಾರದೆ ಬಿದ್ದೇ ಹೋಗುತ್ತಲಿತ್ತು,  ಇದು ಪ್ರಕೃತಿಯ ಸಮತೋಲನಕ್ಕೆ ಒಂದು ಉದಾಹರಣೆ ಎಂದು ತಿಳಿಯಿರಿ.


ಲಾಕ್ಡೌನ್ ಎಂದು ಮಗನೂ ಮನೆಗೆ ಬಂದ ಸಮಯಕ್ಕೆ ಕೊಯ್ಯುವಂತಾಯಿತು,  ಕೊಕ್ಕೆ ದೋಟಿ ಕತ್ತಿಗಳ ಹಂಗಿಲ್ಲದೆ ಕೈಯಲ್ಲೇ ಕೊಯ್ಯುವ ಭಾಗ್ಯ ನನ್ನದು.


ತೋಟದಲ್ಲಿ ಕೆಂಪು ಹಲಸು,  ಕೆಂಪು ಚಕೋತಾ, ಕೆಂಪು ಪೇರಳೆ,  ಕೆಂಪು ನಕ್ಷತ್ರ ಹಣ್ಣು ಹಾಗೂ ಕೆಂಪು ಚೆರ್ರಿಗಳೊಂದಿಗೆ ಈಗ ಕೆಂಪು ಪಪ್ಪಾಯಿ ಸೇರಿಕೊಂಡಿತು.


ಪಪ್ಪಾಯಿ ಗಾತ್ರದಲ್ಲಿ ದೊಡ್ಡದಾಗಿದ್ದುದರಿಂದ  ತಿಂದುಳಿದ  ಹೋಳುಗಳನ್ನು ಫ್ರಿಜ್ ಒಳಗಿಟ್ಟು ಸಂಜೆ ಮಿಲ್ಕ್ ಶೇಕ್ ಮತ್ತು  ಜ್ಯೂಸ್ ಎಂದು ಕುಡಿಯಲಾಯಿತು.


ಹೋಳುಗಳನ್ನು ಮಿಕ್ಸಿಯಲ್ಲಿ ತುಂಬಿ, ಸಿಹಿಗೆ ತಕ್ಕಷ್ಟು ಸಕ್ಕರೆ ಹಾಕಿ ರೊಂಯ್ ಎಂದು ತಿರುಗಿಸಿ,

ಸೂಕ್ತ ಪ್ರಮಾಣದಲ್ಲಿ ಹಾಲು ಎರೆಯುವಲ್ಲಿಗೆ ಮಿಲ್ಕ್ ಶೇಕ್ ಆಯ್ತು,

ಹಾಲು ಸೇರದವರು ನೀರು ಹಾಕ್ಕೊಳ್ಳಿ,  ಪಪ್ಪಾಯಿ ಜ್ಯೂಸ್ ಕುಡಿಯಿರಿ.




Sunday, 13 June 2021

ಅಂಬಟೆಯ ಸೂಪ್


 


" ಮಧೂ,  ಈಗ ಅಂಬಟೆ ಕೊಯ್ದು ಉಪ್ಪಿನಕಾಯಿ ಹಾಕಬಹುದಿತ್ತು...  ಕೆಲಸದವರು ಅಂತ ಹೇಳಿಕೊಳ್ಳಲಿಕ್ಕೆ ಯಾರೂ ಇಲ್ಲ,  ಹೇಗೆ ಕೊಯ್ಯುವುದು? "  ನನ್ನ ಪೇಚಾಟ.


" ನಾನೇ ಇದೀನಲ್ಲ ಕೊಯ್ಯಲಿಕ್ಕೆ.  "  ಅಂದವನೇ ಪಕ್ಕದ ದೊಡ್ಡಮ್ಮನ ಮನೆಯಿಂದ ಉದ್ದ ದೋಟಿ ಇಸ್ಕೊಂಡು ಬಂದ.  ಕೊಯ್ಯಲಿಕ್ಕೆ ಗೈಡ್ ಆಗಿ ಅವನಪ್ಪನೇ ನಿಂತರು.   ಅಂಬಟೆಯ ಮರ ಎಷ್ಟೇ ದೊಡ್ಡದಾಗಿದ್ದರೂ, ಯಾರೂ ಮರ ಹತ್ತುವಂತಿಲ್ಲ,  ಮರ ತುಂಬ ಮೆದು.  ಈಗ ಮಳೆಯೂ ಬೇರೆ.   ಅಪ್ಪ ಹೇಳಿದಂತೆ ಮಧು ದೋಟಿಯಿಂದ ಪುಟ್ಟ ಪುಟ್ಟ ಗೆಲ್ಲುಗಳನ್ನು ಮುರಿದು ಬೀಳಿಸುವಲ್ಲಿಗೆ ಸಾಕಷ್ಟು ಅಂಬಟೆಗಳು ಲಭ್ಯವಾದುವು.


" ಅಮ್ಮ,  ಆಯ್ತಲ್ಲ ಅಂಬಟೆ, ಉಪ್ಪಿನಕಾಯಿ ಹಾಕು.  ನಾನು ಲಾಕ್ ಡೌನ್ ಅಂತ ಮನೆಗೆ ಬಂದಿದ್ದಕ್ಕಾಯ್ತು,  ಪಪ್ಪಾಯಿಯೂ, ಮಾವಿನಕಾಯಿಯೂ,  ಅಂಬಟೆಯೂ,  ಹಲಸಿನಕಾಯಿಯೂ...  ಹ್ಹಹ್ಹ..."


ಉಪ್ಪಿನಕಾಯಿ ಹಾಕೋಣ,  ಈಗ ಮೊದಲು ಎರಡು ಅಂಬಟೆ ತಿನ್ನು,  ಮೈತ್ರಿಯೂ ಶ್ರೀದೇವಿಯೂ ಇರಬೇಕಾಗಿತ್ತು ತಿನ್ನಲಿಕ್ಕೆ,  ಕಟ್ಕಟ್ ಮಾಡಿ ಉಪ್ಪು ಮೆಣಸು ಹಾಕಿ ತಿಂತಿದ್ರು. "


" ಮೈತ್ರಿ ನಾಳೆ ಮಂಜೇಶ್ವರದಿಂದ ಬರ್ತಾಳೆ..  ತಿಂತಾಳೆ ಬಿಡು. "


ಉಪ್ಪಿನಕಾಯಿ ಹಾಕುವ ಮೊದಲು ಏನೋ ಒಂದು ಅಡುಗೆಯೂ ಮಾಡೋಣ.  ಚಟ್ಣಿ ಮುಂಜಾನೆಯ ತಿಂಡಿಗೂ,  ಊಟಕ್ಕೂ ಆಗುತ್ತೆ.  ಮಾಡುವ ಕ್ರಮ ಹಿಂದೆ ಬರೆದಿದ್ದೇನೆ.   ಹುಡುಕಿ ಓದಿರಿ.


 ಮಾವಿನಕಾಯಿಯಂತೇ ಹುಳಿ ಇರುವುದರಿಂದ ಸಾರು 

ಯಾ ಅಪ್ಪೆ ಸಾರು ಮಾಡಿದ್ರಾದೀತು.  ಮೊದಲಾಗಿ ಅಂಬಟೆ ಹಾಗೂ ನಮ್ಮ ಆಯ್ಕೆಯ ಮಸಾಲೆಗಳನ್ನು ಬೇಯಿಸಬೇಕಾಗಿದೆ. ನಂತರ ರುಚಿಗೆ ಉಪ್ಪು ಹಾಗೂ ಬೆಲ್ಲ ಹಾಕಿ,  ನೀರನ್ನೂ ಎರೆದು ಕುದಿಸಿ ಒಗ್ಗರಣೆ ಕೊಟ್ಟರಾಯಿತು.


ಮೂರು ಯಾ ನಾಲ್ಕು ಅಂಬಟೆ ಮಿಡಿ ಹೋಳುಗಳು

ನಾಲ್ಕಾರು ಕಾಳುಮೆಣಸು,  ಸೂಪ್ ಅಂದ್ರೆ ಕಾಳುಮೆಣಸು ಇರಲೇಬೇಕು.

ಶುಂಠಿ ಹಾಗೂ ಬೆಳ್ಳುಳ್ಳಿ,

ಹಸಿಮೆಣಸು,

ಎಲ್ಲವನ್ನೂ ನೀರೆರೆದು ಬೇಯಿಸಿ.

ಆರಿದ ನಂತರ ನೀರು ಬಸಿದು ಅರೆಯಿರಿ.

ನಂತರ ಬೇಯಿಸಿದ ನೀರನ್ನು ಕೂಡಿಸಿ,  ಉಪ್ಪು ಹಾಗೂ ಅವಶ್ಯಕತೆಗನುಸಾರ ನೀರೆರೆದು ಕುದಿಸಿ.  ಕುದಿದಾಗ ನೆಲ್ಲಿಕಾಯಿ ಗಾತ್ರದ ಬೆಣ್ಣೆ ಹಾಕಿ.  ತುಪ್ಪವೂ ಆದೀತು.

ಬಿಸಿ ಬಿಸಿ ಸೂಪ್ ಸವಿಯುತ್ತ ಅನ್ನ ಉಣ್ಣಿರಿ.



Thursday, 3 June 2021

ಬಸ್ಸಾರು

 


" ಮಧೂ,  ಹಾಲು ತರುವಾಗ ಹಾಗೇ ತರಕಾರೀನೂ ತಾ.. "

" ಅಮ್ಮ,  ಇವತ್ತು ಸಂಡೇ, ನಾಳೆ ಬಳಿಗ್ಗೇನೇ ತರಕಾರಿ ತಂದು ಕೊಟ್ಟರಾಯಿತಲ್ಲ. "


ನಾಳೆ ಎಂಬ ಮಂಡೇ ಬಂದಿತು.  ಮನೆಯೇ ಕಾರ್ಯಾಲಯ ಆಗಿರುವಾಗ,  ಬಿಡುವಿಲ್ಲದ ಸೂಚನೆಯೂ ದೊರೆಯಿತು.

ಮನೆ ಹಿತ್ತಲ ಸೊಪ್ಪೇ ಗತಿ.  


ತಪಾಸಣೆಗೆ ಹೊರಟೆ,  ತಪಾಸಿಸುವುದೇನು?  ಎಲ್ಲೆಲ್ಲೂ ಹಸಿರು.    ನೆಲಬಸಳೆ ಕುಡಿ,  ಪಕ್ಕದಲ್ಲೇ ಕುಡಿಯೊಡೆದ ಅಂಬಟೆಯ ಚಿಗರುಗಳು,  ಎಳೆಯ ಕರಿಬೇವಿನೆಸಳುಗಳು,  ನೆಲದಿಂದ ತಲೆಯೆತ್ತುತ್ತಿರುವ ಕಾಡು ಕೆಸುವಿನೆಲೆ,  ಚಕ್ರಮುನಿಯ ಚಿಗುರು,  ನುಗ್ಗೇಸೊಪ್ಪು,  ಸುವಾಸನೆಯ ನೆರುಗಳ ಸೊಪ್ಪು ಎಲ್ಲವೂ ಕೂಡಿದಾಗ ಬಟ್ಟಲು ತುಂಬಿತು.


ಮಾಡೂದೇನು?


ಬೆಂಗಳೂರು ಸೇರಿರುವ ಮಗಳು,  " ರಾಗಿ ಮುದ್ದೆಯೂ ಬಸ್ಸಾರೂ ಚೆನ್ನಾಗಿರುತ್ತೆ "  ಅಂದಿದ್ದು ನೆನಪಾಗಿ ಇಷ್ಟು ಸೊಪ್ಪುಸದೆ ಕೊಯ್ಯುವಂತಾಯಿತು.   "ಎಲ್ಲವನ್ನೂ ಬೇಯಿಸಿ ಅರೆಯಬೇಕು. "  ಎಂದು ಮಾಡುವ ವಿಧಾನವನ್ನೂ ತಿಳಿಸಿಕೊಟ್ಟಿದ್ದಳು.  


ಈಗ ಸೊಸೆಯೂ ಮನೆಯಲ್ಲಿದ್ದಾಳೆ,   ಬೆಂಗಳೂರೇ ಅವಳ ತವರು ಮನೆ,  ಹೇಗೂ ಬಸ್ಸಾರು ತಿಳಿದಿದ್ದೀತು.


" ಮೈತ್ರೀ,  ತರಕಾರಿ ಏನೂ ಇಲ್ಲ,  ಈ ಸೊಪ್ಪಿನ ಬಸ್ಸಾರು ಮಾಡುವ ಕ್ರಮ... "

" ಅಯ್ಯೋ, ಅದಕ್ಕೇನಂತೆ..  ಯೂಟ್ಯೂಬು ನೋಡಿದ್ರಾಯ್ತು.. "


ಸೊಪ್ಪುಗಳನ್ನು ಹೆಚ್ಚಿಟ್ಟು,  ಅವಶ್ಯವಿದ್ದಷ್ಟು ತೊಗರಿಬೇಳೆ ಬೇಯಿಸುವುದು.  ಅತಿಯಾಗಿ ಬೇಯಿಸಬೇಕಿಲ್ಲ,  ಅರೆಯುವುದಿದೆ.  ಬೇಯಿಸಿದ ನೀರು ಬಸಿದು ಇಡುವುದು.  ಬೇಳೆ ಆರಲಿ.


ಬೇಳೆ ಬೇಯಿಸಿದ ನೀರಿನಲ್ಲಿ ಸೊಪ್ಪು ಬೇಯಿಸಿ.  ಬೇಳೆ ಸೊಪ್ಪು ಒಟ್ಟಿಗೆ ಬೇಯಿಸುವಂತಿಲ್ಲ,  ಸೊಪ್ಪು ತುಂಬ ಇದ್ದರೆ ಜೊತೆಗೊಂದು ಪಲ್ಯವನ್ನೂ ಮಾಡಬಹುದು.


ಸೊಪ್ಪು ಬೇಗನೆ ಬೆಂದಿತು,  ಬೇಯುವಾಗ ಉಪ್ಪು,  ಹುಣಸೆಯ ಹುಳಿ ಹಾಕತಕ್ಕದ್ದು.   ಇದ್ದವರು ಒಂದು ಟೊಮ್ಯಾಟೋ, ಹಸಿಮೆಣಸು ಕೂಡಾ ಹಾಕುವುದು. ನನ್ನದು ಒಂದೇ ಮೆಣಸು.


ಒಂದು ಹಿಡಿ ತೆಂಗಿನ ತುರಿ ಇರಲೇಬೇಕು.

2 ನೀರುಳ್ಳಿ ಕತ್ತರಿಸಿ,

1 ಬೆಳ್ಳುಳ್ಳಿ ಗೆಡ್ಡೆ ಬಿಡಿಸಿ,

ಅರ್ಧ ಇಂಚು ಶುಂಠಿ,  ಸಿಪ್ಪೆ ಹೆರೆಯಿರಿ.

ಇಷ್ಟೇನಾ ಅಂದ್ಬಿಟ್ಟು ಶಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕದಿರಿ.

ಏಳೆಂಟು ಕಾಳುಮೆಣಸು,  ಗುಂಡುಕಲ್ಲಿನಲ್ಲಿ ಜಜ್ಜಿ,

ಬೆಂದ ಸೊಪ್ಪಿನ ನೀರು ಪ್ರತ್ಯೇಕಿಸಿ,

ತೆಂಗಿನ ತುರಿ, ನೀರುಳ್ಳಿ ಬೆಳ್ಳುಳ್ಳಿ ಶುಂಠಿ ಕಾಳುಮೆಣಸು ಕೂಡಿ ಸೊಪ್ಪು ಹಾಗೂ ಬೇಳೆ ನುಣ್ಣಗೆ ಅರೆಯಿರಿ.


ಬಾಣಲೆಯಲ್ಲಿ ಒಗ್ಗರಣೆಗಿಟ್ಟು ಸಾಸಿವೆ ಸಿಡಿಸಿ ಕರಿಬೇವು ಹಾಕಿರಿ.

ಅರೆದಂತಹ ಸೊಪ್ಪಿನ ಮಸಾಲೆ ಸುರಿಯಿರಿ.

ಬೇಳೆ ಬೇಯಿಸಿದ ನೀರು,  ಸೊಪ್ಪಿನ ನೀರು ಎರೆಯಿರಿ.

ಈಗ ನನಗೆ ಮೈತ್ರಿಯ ನೆರವು ಬೇಕಾಯಿತು.

" ಮೈತ್ರೀ,  ಇದಕ್ಕೆ ನೀರು ಸಾಕೋ ಬೇಕೋ? "

" ಇದು ಸಾಂಬಾರ್ ತರಹ ಇರಬೇಕು, ಚಟ್ನಿಯ ಹಾಗೆ ಗಟ್ಟ ಮುದ್ದೆ ಆಗಬಾರದು. "


" ಸ್ವಲ್ಪ ರಸಂಪುಡಿ,  ಅರಸಿನ ಹುಡಿ ಬೀಳ್ಬೇಕು..  " ಎಂದು ಅವಳೇ ವಿವಿಧ ಹುಡಿಗಳನ್ನು ಹಾಕಿ, ನೀರನ್ನೂ ಎರೆದು,  ತುಸು ಉಪ್ಪು ಬೀಳಿಸಿ ಕುದಿಯಲಿಟ್ಟಳು.

" ಬೆಲ್ಲ ಬೇಡ. "

" ಸರಿ,  ಉಪ್ಪು ಹುಳಿ ಮೆಣಸು ಇದ್ದರಾಯಿತು. "


ನನಗಂತೂ ಈ ಹೊಸ ವ್ಯಂಜನ ಇಷ್ಟವಾಯಿತು.   ರಾತ್ರಿಯ ಚಪಾತಿಗೂ ಹಿತ.  ಬೇಳೆಕಾಳುಗಳ ಪ್ರೊಟೀನ್,  ಸೊಪ್ಪುಗಳ ಖನಿಜಾಂಶಗಳೂ ಕೂಡಿ ಸಂಯುಕ್ತ ಆಹಾರ ಪದಾರ್ಥ ಈ ಬಸ್ಸಾರು.   ತಂಬುಳಿಗಿಂತ ಒಂದು ಕೈ ಮೇಲೆ ಅನ್ನಿ ಬಸ್ಸಾರು. 


ಯಾವುದೇ ಬೇಳೆಕಾಳುಗಳೂ ಆದೀತು,  ಸೊಪ್ಪುಗಳೂ ಅಷ್ಟೇ,   ಹಿತ್ತಲ ಕಾಡುಬೆಳೆಗಳನ್ನೇ ಆಯ್ದು ಕೊಳ್ಳುವ ಜಾಣತನ ನಮ್ಮಲ್ಲಿದ್ದರಾಯಿತು.   ಇನ್ನೊಮ್ಮೆ ಹಲಸಿನ ಬೇಳೆಯ ಬಸ್ಸಾರು ಮಾಡಬೇಕೆಂದಿದೆ.  ಈಗ ದಿನವೂ ಹಲಸು ತಿನ್ನುವ ಯೋಗ,  ಬೇಳೆಗಳನ್ನು ಸಂಗ್ರಹಿಸಿ ಇಡುವ ಕಾಲ.