Pages

Ads 468x60px

Saturday, 29 November 2014

ಬೆಳೆ ಹೇರಳ, ಇದು ಪೇರಳೆ...








ಪೇರಳೆ ಮರ ಅಡಿಕೆ ತೋಟದೊಳಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದೇನೂ ನಾವು ಬಿತ್ತಿ ನೆಟ್ಟಿದ್ದೂ ಅಲ್ಲ. ಹಕ್ಕಿಪಕ್ಷಿಗಳು ಎಲ್ಲಿಂದಲೋ ಹೊತ್ತು ತರುತ್ತವೆ. ಯಾವಾಗಲೂ ತೇವಾಂಶವಿರುವ ತೋಟದಲ್ಲಿ ಬೀಜ ಮೊಳೆತು ಸಸಿಯಾಗಲು ತಡವಿಲ್ಲ. ಹಾಗೇ ಸುಮ್ಮನೆ ಮೇಲೆದ್ದು ಮರವಾದ ಈ ಪೇರಳೆಯಲ್ಲಿ ಜಾತಿಗಳೆಷ್ಟು, ಬಣ್ಣಗಳ ಸೊಗಸೇನು, ರುಚಿಯಲ್ಲಿರುವ ಭಿನ್ನತೆ ಇವುಗಳನ್ನೆಲ್ಲ ತಿಳಿಯಬೇಕಾದರೆ ತೋಟದ ಸುತ್ತ ತಿರುಗಾಡಿ, ಕಂಡ ಪೇರಳೆಗಳನ್ನು ಕೊಯ್ದು, ಅಲ್ಲೇ ಕಚ್ಚಿ ತಿಂದು ಸವಿದರೇನೇ ತಿಳಿದೀತು.

ಕೃಷಿಕರ ಬದುಕಿಗೆ ಸಮೀಪವರ್ತಿ ಸಸ್ಯ ಇದು. ಬೆಳೆಸಲು ಕಷ್ಟವಿಲ್ಲ, ರೆಂಬೆಕೊಂಬೆಗಳು ಬಲು ಗಟ್ಟಿಯಾಗಿರುವ ಪೇರಳೆ ಮರಕ್ಕೆ ರೋಗಬಾಧೆಯಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಬೇಡಿಕೆ ಇರುವ ಪೇರಳೆ ಹಣ್ಣಿನ ಕೃಷಿಯಲ್ಲಿ ನಮ್ಮ ಕೃಷಿಕರು ಆಸಕ್ತಿ ವಹಿಸಿದಂತಿಲ್ಲ. ಸದಾ ಕಾಲವೂ ಹಸಿರೆಲೆಗಳಿಂದ ನಳನಳಿಸುತ್ತಿರುತ್ತದೆ ಪೇರಳೆ ಮರ.

ಬೇರು ಕಸಿಯಿಂದ ಪೇರಳೆ ಗಿಡಗಳನ್ನು ಅಭಿವೃದ್ಧಿ ಪಡಿಸಬಹುದು. ಇದು ನನಗೆ ತಾನಾಗಿಯೇ ತಿಳಿಯಿತು. ಹೇಗೇ ಅಂತೀರಾ?

ವರ್ಷಗಳ ಹಿಂದೆ ತೋಟದೊಳಗೆ ಇದ್ದ ಕೆಂಪು ಪೇರಳೆ ಮರವನ್ನು ಕಾರ್ಮಿಕರ ಕೊಡಲಿಯೇಟಿನಿಂದ ಸಂಹರಿಸಲಾಯಿತು. ಮನೆಯ ಹಿಂಭಾಗದಲ್ಲಿ ಏನೇನೋ ಕೃಷಿ ಸಲಕರಣೆಗಳನ್ನು ಇಟ್ಟುಕೊಳ್ಳುವುದಿದೆ. ಮಳೆಗಾಲದಲ್ಲಿ ಅದಕ್ಕೂ ರಕ್ಷಣೆ ಬೇಕಲ್ಲ, ಒಂದು ಗೂಡಿನಂತಹ ಮನೆ ಪೇರಳೆಯ ಮರದ ಕತ್ತರಿಸಲ್ಪಟ್ಟ ಕಾಂಡದಿಂದಲೇ ಸಿದ್ಧವಾಯಿತು. ಅಡಿಕೆ ಮರದ ಕಾಂಡ ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ, ಆದರೆ ಅದನ್ನು ಪ್ರತಿವರ್ಷವೂ ಬದಲಿಸಬೇಕಾಗುತ್ತದೆ. ಗಟ್ಟಿಮುಟ್ಟಾದ ಪೇರಳೆಯ ಕಾಂಡಕ್ಕೆ ಆ ಸಮಸ್ಯೆಯಿಲ್ಲ.
ಕೆಂಪು ತಿರುಳಿನ ಪೇರಳೆ ಹಣ್ಣುಗಳು ತಿನ್ನಲು ಸಿಗುತ್ತಿರಲಿಲ್ಲ, ಕಾರಣ ಮರವೂ ಅಡಿಕೆ ಮರಕ್ಕೆ ಸವಾಲೊಡ್ಡುವಂತೆ ಎತ್ತರ ಬೆಳೆದಿತ್ತು. ಮರ ಹೋದರೇನಂತೆ, ತೋಟದೊಳಗಿನ ತೇವಾಂಶದಿಂದಲೇ ಬೇರಿನಿಂದ ಅಸಂಖ್ಯ ಗಿಡಗಳು ಮೇಲೆದ್ದಿವೆ. ಎಲ್ಲವೂ ಇರಲಿ.

ತುಸು ಗಟ್ಟಿಯಾಗಿರುವ ಕಾಯಿಯನ್ನೇ ಮಕ್ಕಳು ಇಷ್ಟ ಪಟ್ಟು ತಿನ್ನುವಂತಹುದು. ಅದಕ್ಕೆ ಉಪ್ಪಿನ ಹುಡಿ ಉದುರಿಸಿ ತಿಂದಾಗ ಸ್ವರ್ಗಕ್ಕೆ ಮೂರೇ ಗೇಣು! ಹಣ್ಣಾದಾಗ ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುವ ಪೇರಳೆ ಮೆತ್ತಗಾಗಿ ಬಿಡುತ್ತದೆ. ಸಿಹಿ ರುಚಿಯೂ, ಸುವಾಸನೆಯೂ ಈ ಹಂತದಲ್ಲಿ ಅಧಿಕ. ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್, ಜಾಮ್ ಹೀಗೆ ಏನೇನೋ ಮಾಡಿ ಸವಿಯಬಹುದು. ಐಸ್ ಕ್ರೀಂ, ಫ್ರುಟ್ ಸಲಾಡ್ ಗಳಿಗೂ ಪೇರಳೆ ಹಣ್ಣು ಉಪಯುಕ್ತ. ಸಂಸ್ಕರಿಸಿ ಒಣಗಿಸಲಾದ ಪೇರಳೆ ಹಣ್ಣಿನ ಹುಡಿಯನ್ನು ಐಸ್ ಕ್ರೀಂ ಉದ್ಯಮದಲ್ಲಿ ಬಳಸಲಾಗುತ್ತಿದೆ. ಈ ಐಸ್ ಕ್ರೀಂ ಸ್ವಾದಭರಿತವೂ ಸುವಾಸನಾಯುಕ್ತವೂ ಆಗಿರುತ್ತದೆ. ಏನೇ ಮಾಡುವುದಿದ್ದರೂ ಬೀಜಗಳನ್ನೂ, ಸಿಪ್ಪೆಯನ್ನೂ ತೆಗೆಯುವ ಅವಶ್ಯಕತೆ ಇದೆ.

ಚಿಗುರೆಲೆಗಳ ಕಷಾಯ ಶರೀರದ ನಿತ್ರಾಣವನ್ನು ತೊಲಗಿಸುವುದು. ಮಹಿಳೆಯರ ಮಾಸಿಕ ರಜಸ್ರಾವದ ಏರುಪೇರುಗಳನ್ನು ಸುಸ್ಥಿತಿಗೆ ತರುವುದು. ಪ್ರಸವಾನಂತರ ಶರೀರ ಸುಸ್ಥಿತಿಗೆ ಮರಳಲು ಸಹಾಯಕ, ಇದನ್ನು ಹಿಂದಿನ ಕಾಲದ ಸೊಲಗಿತ್ತಿಯರು ಅರಿತಿದ್ದರು.
ಅತಿಸಾರದಿಂದ ಬಳಲುತ್ತಿದ್ದರೂ ಈ ಕಷಾಯದಿಂದ ಪರಿಹಾರ. ಕಾಲೆರಾ ಎಂಬಂತಹ ವಾಂತಿಭೇದಿ ಖಾಯಿಲೆ ಇದೆಯಲ್ಲ, ಪೇರಳೆ ಕಷಾಯದಿಂದಲೇ ನಿಯಂತ್ರಣ ಸಾಧ್ಯವಿದೆ.   ಚಿಗುರೆಲೆಗಳನ್ನು ಅಗಿಯುವುದರಿಂದ ಗಂಟಲ ಕಿರಿಕಿರಿ, ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸಬಹುದಲ್ಲದೆ, ಹಲ್ಲಿನ ವಸಡುಗಳ ರಕ್ತಸ್ರಾವ, ಬಾಯಿಹುಣ್ಣು ಇತ್ಯಾದಿಗಳನ್ನೂ ಸಮರ್ಥವಾಗಿ ತಡೆಗಟ್ಟಬಹುದಾಗಿದೆ. ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಬಾಯಿ ಮುಕ್ಕುಳಿಸುತ್ತಿದ್ದರೂ ನಡೆದೀತು.

ಕಷಾಯ ಹೇಗೆ ಮಾಡ್ತೀರಾ ?
ಪೇರಳೆಯ ಚಿಗುರೆಲೆಗಳನ್ನು ಕಾಂಡ ಸಹಿತವಾಗಿ ಚಿವುಟಿ ತಂದಿರಾ ?
ತಪಲೆಗೆ 3 ಲೋಟ ನೀರೆರೆದು ಸೊಪ್ಪುಗಳನ್ನು ಕುದಿಸಿ, ಕಾಂಡದ ಭಾಗವನ್ನು ಗುಂಡುಕಲ್ಲಿನಲ್ಲಿ ಜಜ್ಜಿದರೆ ಉತ್ತಮ. ಕುದಿದ ನೀರು ಆರುತ್ತಾ ಬರುವಾಗ ನಾಲ್ಕು ಕಾಳು ಜೀರಿಗೆ , ರುಚಿಗೆ ಬೆಲ್ಲ ಹಾಕಿಕೊಳ್ಳಿ. ಸಕ್ಕರೆ ಬೇಡ. ಬತ್ತಿದ ನೀರು ಒಂದು ಲೋಟದಷ್ಟು ಆದಾಗ ಕಷಾಯ ಕುಡಿಯಲು ಹಿತವಾಗುವಂತೆ ಹಾಲು ಎರೆದು ಇನ್ನೊಂದು ಕುದಿ ಬಂದಾಗ ಕೆಳಗಿಳಿಸಿ. ಜಾಲರಿ ಸೌಟಿನಲ್ಲಿ ಕಷಾಯ ಶೋಧಿಸಿ ಕುಡಿಯಬೇಕಾದವರಿಗೆ ಕೊಡಿ.

ತಂಬುಳಿ:
ಬೇಯಿಸಿದ ಚಿಗುರೆಲೆ, ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಬಾಡಿಸಿದರೂ ಆದೀತು. ತೆಂಗಿನ ತುರಿ, ಸಿಹಿ ಮಜ್ಜಿಗೆ, ತುಸು ಜೀರಿಗೆ, ರುಚಿಗೆ ಉಪ್ಪು, ಬೆಲ್ಲ ಕೂಡಿಸಿ ನುಣ್ಣಗೆ ಅರೆಯಿರಿ. ಸಾಕಷ್ಟು ತೆಳ್ಳಗಾಗಿಸಿ ಅನ್ನದೊಂದಿಗೆ ಸವಿಯಿರಿ.

ಈ ಪೇರಳೆಯು ಸಸ್ಯಶಾಸ್ತ್ರೀಯವಾಗಿ Psidium guajava ಅನ್ನಿಸಿಕೊಂಡಿದೆ. Myrtaceae ಕುಟುಂಬವಾಸಿ ಸಸ್ಯ. ದಕ್ಷಿಣ ಅಮೆರಿಕಾ ಮೂಲದ ಉಷ್ಣ ವಲಯದ ಬೆಳೆಯಾಗಿರುವ ಪೇರಳೆ ನಮ್ಮ ದೇಶದ ಹವಾಮಾನಕ್ಕೆ ಸೂಕ್ತವಾಗಿಯೇ ಹೊಂದಿಕೊಂಡಿದೆ ಎಂದರೂ ತಪ್ಪಾಗಲಾರದು.






Friday, 21 November 2014

ದೋಸೆ ಎರೆಯೋಣ...





ಮಗಳು ಮನೆಯಲ್ಲಿದ್ದಳು. ಅವಳಿಗೆ ಹಿತವಾಗುವಂತಹ ಅಡುಗೆಯನ್ನೇ ಮಾಡಿ, ಬಿಡುವಾದಾಗ ಇಂಟರ್ನೆಟ್ ವ್ಯವಹಾರಗಳು, ನನಗೆ ತಿಳಿಯಬೇಕಾಗಿರುವುದನ್ನು ಅಂಗಲಾಚಿ ಕಲಿಯುವ ವಿಧಿ ನನ್ನದು. ಹಾಗೇ ಸಂಜೆಯಾಗುತ್ತಾ ಬಂದಿತ್ತು. ನಾಳೆಯೂ ಮನೆಯಲ್ಲಿರ್ತಾಳೆ ಅಂದ್ಕೊಂಡಿದ್ದೆ, ಬೆಳ್ಳಂಬೆಳಗ್ಗೆ ಹೊರಡುವವಳು ಎಂದು ತಿಳಿದಾಗ ಬೇಗನೇ ಅಡುಗೆಕೋಣೆಗೆ ದೌಡಾಯಿಸಿ ದೋಸೆಗೆ ಅಕ್ಕಿ, ಉದ್ದು ನೆನೆ ಹಾಕಿದೆನಾ... ಬಿಡುವಿಲ್ಲದ ಕೆಲಸ ಅಡುಗೆಮನೆಯಲ್ಲಿ ಕಾದಿತ್ತು. ಅತ್ತಇತ್ತ ಚದುರಿದ್ದ ಪಾತ್ರೆಪರಿಕರಗಳು, ತೊಳೆಯದಿದ್ದ ಚಹಾ ಬಟ್ಟಲುಗಳು ಒಂದೇ ಎರಡೇ, ಅಂತೂ ಇವನ್ನೆಲ್ಲ ಸುಧರಿಸಿ, ಊಟದ ತಯ್ಯಾರಿಯೂ, ರಾತ್ರಿ ಪಾಳಿಯ ಸ್ನಾನವೂ, ದೇವರಮನೆಯಲ್ಲಿ ಜ್ಯೋತಿ ಬೆಳಗಿ, ಉಂಡು ಎದ್ದು ದೋಸೆಗೆ ಅರೆಯಲು ಹೊರಟಾಗ ಕಂಡಿದ್ದೇನು ?

ನೆನೆ ಹಾಕಿದ ಒಂದು ಕಪ್ ಉದ್ದು, ಮೆಂತೆ. ಹ್ಞೂ, ಚೆನ್ನಾಗಿ ನೆನೆದಿದೆ. 2 ಕಪ್ ಬೆಳ್ತಿಗೆ ಅಕ್ಕಿ , ಇದೂ ನೆನೆದಿದೆ, ಆದ್ರೆ ಒಂದು ಕಪ್ ಕುಚ್ಚುಲಕ್ಕಿ, " ನೀರು ಬಿದ್ದೇ ಇಲ್ಲ ನನ್ಮೇಲೆ " ಎಂದು ಅಣಕಿಸಿತು. ಅದೂ ರೇಷನ್ ಅಕ್ಕಿ, ಓಣಂ ಬಾಬ್ತು ಬಂದಿತ್ತು. ದೋಸೆ ಚೆನ್ನಾಗಿ ಬರಲಿ ಅಂತ ನಾನಿದ್ರೆ ಈಗ ಏನು ಮಾಡಲಿ ? ಇಡ್ಲಿ ಮಾಡಬಹುದಿತ್ತು, ಬೇಗ ಹೋಗಬೇಕಾದವಳಿಗೆ ದೋಸೆಯೇ ಚೆನ್ನ ಎಂಬ ನಿರ್ಧಾರಕ್ಕೆ ಬಂದು ದೋಸೆ ಹಿಟ್ಟು ತಯಾರಾಯಿತು.

ಅರೆದ ಹಿಟ್ಟು ಎಲ್ಲರಿಗೂ ಸಾಕಾಗುವಂತಿಲ್ಲ, ಮೈದಾ ಸೇರಿಸುವಂತಿಲ್ಲ, ಮಗಳಿಗಾಗದು ಮೈದಾ. ರಾಗೀ ಹುಡಿ, ಅದೂ ಮುಗಿದಿದೆ. ಉಸ್ಸಪ್ಪ ... ಇಲ್ಲೊಂದು ಸಜ್ಜಿಗೆಯ ಪ್ಯಾಕ್ ಇದೆ. ಅಳೆದು ನೋಡೂದೇನೂ ಬೇಡ, ಒಂದು ಕಪ್ ಇದ್ದೀತು. ಸಜ್ಜಿಗೆಯನ್ನು ತಪಲೆಗೆ ಸುರಿದು ನೆನೆಯುವಂತೆ ನೀರೆರೆದು ಇಟ್ಟಾಯ್ತು.

ಬೆಳ್ಳಂಜಾವ ಎಬ್ಬಿಸಿದ್ದು ಮಗಳು. ದೋಸೆಗೊಂದು ಚಟ್ನಿ, ತೆಂಗಿನತುರಿಯಿಂದ ಸಿದ್ಧವಾಯಿತು. ದೋಸೆ ಹಿಟ್ಟಿಗೆ ನೆನೆದ ಸಜ್ಜೆಗೆಯೂ ಬೆರೆಯಿತು. ಗರಿಗರಿ ದೋಸೆ ಎದ್ದು ಬಂದಿತು. ಮುಂಜಾನೆಗೊಂದು ತಿಂಡಿ ತಿಂದು ಮಗಳು ಹೊರಟಳು, ಮೂಡಬಿದ್ರೆ ತಲಪಲು ಮೂರು ಬಸ್ ಬದಲಿಸಬೇಕಾಗಿದೆ. ಏನೇ ಆದ್ರೂ ಬೆಳಗಿನ ಆಹಾರ ಲಘುವಾಗಿರಕೂಡದು, ಪುಷ್ಟಿದಾಯಕವಾಗಿರಬೇಕು.





ಆಯಾಸವಾಗಿದೆ, ಆದರೂ ನಾಳೆಗೊಂದು ತಿಂಡಿಯ ವ್ಯವಸ್ಥೆ ಆಗಲೇಬೇಕಾಗಿದೆ. ದೋಸೆಯನ್ನೇ ಬಯಸುವವರಿಗೆ ಹೀಗೊಂದು ಪೇಪರ್ ದೋಸೆ ತಯಾರಿಸೋಣ.

ಒಂದೂವರೆ ಕಪ್ ಬೆಳ್ತಿಗೆ ಅಕ್ಕಿ
ಒಂದು ಕಪ್ ಚಿರೋಟಿ ರವೆ ( ಬಾಂಬೇ ಸಜ್ಜಿಗೆ )
ಒದು ಕಪ್ ಅವಲಕ್ಕಿ
ಒಂದು ಲೋಟ ಸಿಹಿ ಮಜ್ಜಿಗೆ
ರುಚಿಗೆ ಉಪ್ಪು

ಎಲ್ಲವನ್ನೂ ಪ್ರತ್ಯಪ್ರತೇಕವಾಗಿ ನೀರಿನಲ್ಲಿ ನೆನೆಸಿಡಿ.
ಸಂಜೆಯಾಗುತ್ತಲೇ ಅಕ್ಕಿಯನ್ನು ಚೆನ್ನಾಗಿ ತೊಳೆದು ಮಜ್ಜಿಗೆ ಎರೆದು ಅರೆಯಿರಿ.
ನೆನೆದ ಚಿರೋಟಿರವೆಯನ್ನು ಪುನಃ ಅರೆಯುವ ಅವಶ್ಯಕತೆಯಿಲ್ಲ, ನೆನೆದ ಅವಲಕ್ಕಿಯನ್ನು ನುಣ್ಣಗಾದ ಅಕ್ಕಿ ಹಿಟ್ಟಿಗೆ ಸೇರಿಸಿ ಇನ್ನೊಮ್ಮೆ ಅರೆದು ತೆಗೆಯಿರಿ. ಹಿಟ್ಟುಗಳನ್ನು ಒಟ್ಟಿಗೆ ಕೂಡಿಸಿ ಉಪ್ಪು ಬೆರೆಸಿ ಮುಚ್ಚಿಡಿ, ಮುಂಜಾನೆ ದೋಸೆ ಹೀಗೆ ಎರೆಯಿರಿ, " ವಾರೆವ್ಹಾ.... ಮಸಾಲೆ ದೋಸೆ ನಾಚಿ ಓಡಿತು " ಅನ್ನಿರಿ.

ಚಳಿಹವೆ ಇದ್ದಾಗ ಇಂತಹ ದೋಸೆ ಮಾಡಬಹುದು. ಸೆಕೆ ಸಮಯದಲ್ಲಿ ಮಜ್ಜಿಗೆ ಎರೆದ ಹಿಟ್ಟು ಹುಳಿಹುಳಿಯಾಗಿ ತಿನ್ನಲು ಪ್ರಯಾಸ ಪಡಬೇಕಾದೀತು. ಹವಾಮಾನ, ಸಮಯದ ಹೊಂದಾಣಿಕೆ ತಿಳಿದಿದ್ದರೆ ಮಾತ್ರ ಇಂತಹ ದೋಸೆ ತಯಾರಿಸಲು ಸಾಧ್ಯ. ಮನೆಯ ದೋಸೆ ತಿನ್ನಬೇಕೆಂಬ ಆಸೆಯಾದಾಗ ಬ್ರಹ್ಮಚಾರಿಗಳ ಬಿಡಾರದಲ್ಲೂ ಈ ದೋಸೆ ಮಾಡಿಕೊಳ್ಳಲು ಸಾಧ್ಯವಿದೆ, ಅಕ್ಕಿ ಅರೆಯುವ ಯಂತ್ರ ಇಲ್ವೇ, ಅಕ್ಕಿಹುಡಿ ತನ್ನಿ, ಮಾಡಿಕೊಂಡು ತಿನ್ನಿ.

ನಿಮ್ಮ ಮಜ್ಜಿಗೆ ಫ್ರಿಜ್ ಎಂಬ ಶೀತಲಪೆಟ್ಟಿಗೆಯಲ್ಲಿರುವಂತಾದ್ದೇ ಆಗಿದ್ದರೆ ದೋಸೆಗೆ ಬಳಸುವ ಮೊದಲು ಕೋಣೆಯ ತಾಪಮಾನಕ್ಕೆ (room temperature ) ಬಂದಿಳಿದಿರಬೇಕು. ಇಲ್ಲದಿದ್ದರೆ ಮಜ್ಜಿಗೆ ಬಳಸಿ ಮಾಡುವ ತಿಂಡಿಗಳು ಚೆನ್ನಾಗಿ ಬರುವ ಸಾಧ್ಯತೆ ಕಡಿಮೆ.



Thursday, 13 November 2014

ಮುದ್ದಿನ ಕಂದ







ಅಜ್ಜ ಅಜ್ಜಿಯ ಮುದ್ದಿನ ಕಂದ
ಪುಟ್ಟನಿಗೆಂದು
ಕಾಶೀಯಾತ್ರೆಗೆ ಹೋಗಿ ತಂದ
ಬಣ್ಣ ಬಣ್ಣದ ಜೋಕಾಲಿ|

" ಏನೋ ಪುಟ್ಟಾ, 
ಇದೇನು ನಿನ್ನ ಉಚ್ಚಾಲು ?"|

" ಹೋಗೇ ಅತ್ತೇ,
ಇದು ಉಚ್ಚಾಲು ಅಲ್ಲ
ಅನ್ನೀ ಜೋಕಾಲಿ "|

" ಉಯ್ಯಾಲೆ ಆಡೋಣ ಬನ್ನಿ
ತೂಗು ತೊಟ್ಟಿಲ ಅನ್ನಿ "|

Posted via DraftCraft app

Saturday, 8 November 2014

ಒಡೆದ ಹಾಲು




ಹಾಲು  ಕಾಯಿಸಲಿಟ್ಟು,  ಅಡುಗೆಮನೆಯ ಒಳಗೆ ಅತ್ತಿತ್ತ ಹರಡಿದ್ದ ಪಾತ್ರೆಪರಡಿಗಳನ್ನು ಯಥಾಸ್ಥಾನದಲ್ಲಿಟ್ಟು,  ತೊಳೆಯಬೇಕಾಗಿದ್ದ ಲೋಟ, ತಟ್ಟೆಗಳನ್ನು ಸಿಂಕಿಗೆ ಹಾಕಿ,   ಒದ್ದೆಬಟ್ಟೆಯಲ್ಲಿ ಚೆಲ್ಲಿದ್ದ ನೀರು,  ಇನ್ನೂ ಏನೇನೋ ಇರ್ತವೆ,  ಎಲ್ಲವನ್ನೂ ಒರೆಸುತ್ತಾ ಬಂದಂತೆ ಹಾಲು ಕುದಿಯಲಾರಂಭಿಸಿತು.   ಎಷ್ಟಾದ್ರೂ ಪ್ಯಾಕೆಟ್ ಹಾಲು,  ತಂದ ಕೂಡಲೇ ಕಾಯಿಸಿ ಇಡುವ ಪದ್ಧತಿ.   ಹಾಲನ್ನು ಒಲೆ ಮೇಲೆ ಇಟ್ಟು ಅತ್ತಿತ್ತ ಹೋಗೋ ಹಾಗಿಲ್ಲ.   ಟೀವಿ ನೋಡ್ತಾ ಕೂತ್ಬಿಟ್ರೆ ಮುಗೀತು,  ಮತ್ತೆ ಇಹಲೋಕದ ಪರಿವೆಯೇ ಇಲ್ಲ,  ಅಲ್ಲಿಂದ ಹಾಲು ಸೀದ ವಾಸನೆ ಬಂದಾಗಲೇ ಭೂಮಿಗಿಳಿದು ಬರ್ತೀವಿ,  ಏನು ಮಡೋದು,  ನಮ್ಮ ಜೀವನಶೈಲಿಯೇ ಹಾಗಾಗಿದೆ.

" ಹ್ಞಾ,  ಹಾಲು ಕುದಿ ಬಂದಿದೆ,   ಚಿಕ್ಕ ಉರಿಯಲ್ಲಿರಲಿ.   ದಪ್ಪ ಕೆನೆಕಟ್ಟದಿದ್ದರೆ ಬೆಣ್ಣೆ ಬರಬೇಕಲ್ಲ "  ಅಂದುಕೊಳ್ಳುತ್ತ ತಟ್ಟೆ ಲೋಟಗಳನ್ನು ತೊಳೆದಿರಿಸಿ ಆಯ್ತು.   ಇನ್ನು ಅನ್ನ ಬಿಸಿ ಮಾಡಿಕೊಳ್ಳೋಣ ಅಂತ ನೋಡಿದ್ರೆ ಒಲೆಯಲ್ಲಿದ್ದ ಹಾಲು ಒಡೆದು ಹೋಗಿದೆ.   ಭರ್ತಿ ಒಂದು ಲೀಟರಿತ್ತು.  ನಾಳೆ ರಜಾದಿನ,  ಮಕ್ಕಳಿಬ್ಬರೂ ಮನೆಯಲ್ಲಿರ್ತಾರೆ ಅಂತಿದ್ರೆ ಕಾಫಿಗೇನ್ಮಾಡ್ಲಿ,  ಮೊಸರಿನ ಕಥೆಯೇನು ಚಿಂತೆ ಒಂದೆಡೆಯಾದರೆ,  ಈ ಒಡೆದ ಹಾಲನ್ನೇನ್ಮಾಡ್ಲಿ ಎಂಬ ಚಿಂತೆ ಇನ್ನೊಂದೆಡೆ.

" ಪ್ಯಾಕೆಟ್ ಬಿಚ್ಚೋ ಮೊದಲು ನೋಡ್ಬೇಕಾಗಿತ್ತು... ವಾಪಸ್ ಮಾಡಿ ಬೇರೆ ತರ್ತಿದ್ದೆ,  ಈಗ ರಾತ್ರಿ ಪುನಃ ಹೋಗಿ ಬೇರೆ ಹಾಲು ತರಲು ನನ್ನಿಂದಾಗದು "

" ಹಾಗಿದ್ರೆ ಈ ಹಾಲನ್ನೇ ಕುಡಿಯೋಣ ಅಂತೀರಾ "

" ನಂಗೆ ಬೇಡ,  ನೀನೇ ಕುಡಿ "

ನಾವು ಚಿಕ್ಕವರಿದ್ದಾಗ ಯಾರಿಗೆ ಏನೇ ಕಾಯಿಲೆಕಸಾಲೆ ಬರಲಿ,  ನನ್ನಮ್ಮ ಹಾಲನ್ನು ಹಾಗೇ ಕುಡಿಯಲು ಕೊಡ್ತಿರಲಿಲ್ಲ.   ಬಿಸಿಹಾಲಿಗೆ ಲಿಂಬೆರಸ ಹಿಂಡಿ ಅದರ ತಿಳಿನೀರಿಗೆ ಗ್ಲುಕೋಸ್ ಹಾಕಿ ಕೊಡ್ತಾ ಇದ್ದರು,  ಹಾಲಿನ ಕಣಗಳು ಲ್ಯಾಕ್ಟೋಸ್ ಆಗಿ ಪರಿವರ್ತಿತವಾಗುವುದರಿಂದ ಜೀರ್ಣ ಆಗಲು ಸುಲಭ ವಿಧಾನ.   ಇದೂ ಈಗ ಹಾಗೇನೇ ಅಲ್ವೇ,  ಲಿಂಬೆರಸ ಹಾಕದೇ ಹಾಲು ಒಡೆದಿದೆ ಅಷ್ಟೇ ಅಂದ್ಕೊಂಡು ನಾನೇ ವೇ ನೀರು ( whey water ) ಕುಡಿದಾಯ್ತು. ಎಲ್ಲವನ್ನೂ ಗುಳುಂಕರಿಸಲು ಸಾಧ್ಯವಿಲ್ಲ,   ಉಳಿದ ವೇ ನೀರು ಒಂದು ಬಾಟ್ಲಿಯೊಳಗೆ ಭದ್ರವಾಯಿತು.   ನಾಳೆ ಕಾಫಿ,  ಚಹಾ ಬದಲಾಗಿ ವೇ ನೀರನ್ನೇ ಕುಡಿದರಾಯಿತು.   ಬೇಕಿದ್ರೆ ಸಕ್ರೆ ಹಾಕೋಣಾ...





ಒಂದು ಶುಭ್ರವಾದ ಬಟ್ಟೆಯಲ್ಲಿ ಒಡೆದ ಹಾಲನ್ನು ಸೋಸಿ,  ವೇ ನೀರು ತೆಗೆದಿರಿಸಿ,  ಬಟ್ಟೆಯನ್ನು ಗಂಟು ಕಟ್ಟಿ ನೇತಾಡಿಸಿ,  " ಉಸ್ಸಪ್ಪಾ... ಒಂದ್ಕೆಲ್ಸ ಮುಗೀತು,  ನಾಳೆ ಶ್ರೀಖಂಡ ಮಾಡಿ ದೋಸೆ ಜೊತೆ ತಿನ್ನೂದು...."





ಬೆಳಗ್ಗೆ ದೋಸೆ ಎರೆಯುವ ಮೊದಲೇ ಗಂಟು ಬಿಡಿಸಿದಾಗ,  ಪನೀರ್ ಸಿದ್ಧವಾಗಿತ್ತು.   ತೆಗೆದು ಒಂದು ತಟ್ಟೆಗೆ ಹಾಕಿ ಆಯ್ತು.  ಅದಕ್ಕೆ ರುಚಿಗೆ ಬೇಕಾದ ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ,  ಪರಿಮಳ ಹಾಗೂ ಬಣ್ಣ ಬರಲು ಬಾದಾಮ್ ಮಾಲ್ಟ್ ಕೂಡಿಸಿ,  ಚೆನ್ನಾಗಿ ಚಮಚಾದಲ್ಲಿ ಕಲಸಿ....." ವ್ಹಾವ್,  ವ್ಹಾವ್ ದೋಸೆ ಜೊತೆ ನಾನೂ ರೆಡಿ "  ಅನ್ನೋದೇ ಈ ಶ್ರೀಖಂಡ!






ಪನೀರ್ ಬಳಸಿಕೊಂಡು ರಸಗುಲ್ಲಾ,  ಜಾಮೂನ್,  ಜಿಲೇಬಿಗಳನ್ನೂ ಮಾಡಬಹುದಾಗಿದೆ.   ಜಿಲೇಬಿಯನ್ನು ಹಿಂದೊಮ್ಮೆ ಟೀವಿ ಮಾಧ್ಯಮದಲ್ಲಿ ನೋಡಿಕೊಂಡು ಮಾಡಿದ್ದು,  ಚೆನ್ನಾಗಿಯೇ ಬಂದಿತ್ತು.    ಇನ್ನೂ ಏನೇನೋ ತಿಂಡಿಗಳನ್ನು ಮಾಡಬಹುದು.    ಉತ್ತರ ಭಾರತೀಯರು ಪನೀರ್ ಖಾದ್ಯ ತಯಾರಿಯಲ್ಲಿ ಪ್ರವೀಣರು.

ಸೂಚನೆ:  ಒಡೆದ ಹಾಲು ಕೆಟ್ಟ ವಾಸನೆ ಬರುತ್ತಿದೆಯಾದರೆ ಯಾವ ಸಿಹಿಯನ್ನೂ ಮಾಡಲಾಗದು.  ಚೆಲ್ಲುವುದೊಂದೇ ದಾರಿ.




Posted via DraftCraft app

Friday, 31 October 2014

ಕನ್ನಡಕ್ಕೆ ಕೊಡುಗೆ - iPhone 6







" ಅಮ್ಮಾ,  ಐಫೋನ್6 ಬೇಗ ಬರುತ್ತೇ..."
" ಬರೂದೆಲ್ಲ ಬರಲೀ,   ಐಪಾಡ್ ಇದೆಯಲ್ಲ,  ಅದೇ ಸಾಕೂ ನಂಗೇ..."
" ಅಯ್ಯೋ,  ಅದು ಹಳೇದಾಯ್ತು,  ಈಗ ನೀನು ಏನ್ಮಾಡ್ಬೇಕೂ ಗೊತ್ತಾ.. "
" ಏನೂ "
" ಐಫೋನ್6 ಬಂದ ಕೊಡಲೇ ಅದನ್ನೇ ಉಪಯೋಗಿಸು "
" ಆಯ್ತಪ್ಪಾ ಆಯ್ತು,   ನನ್ನ ಕನ್ನಡ ಅದ್ರಲ್ಲಿ ಹೇಗೋ ಏನು ಕಥೆಯೋ..."
" ಎಲ್ಲ ಆಗುತ್ತೇ,  ಇದು ಮಾಮೂಲಿ ಫೋನ್ ಗಿಂತ ದೊಡ್ಡದು ತಿಳೀತಾ... ನಿನ್ನ ಬ್ಲಾಗಿಂಗ್ ಇನ್ನೂ ಚೆನ್ನಾಗಿ ಮಾಡ್ತೀಯ "
" ಹೌದ!  ನೋಡುವಾ ಮೊದಲು ಬರಲೀ "

ನಮ್ಮ ಮೆಸೆಂಜರ್ ಸಂಭಾಷಣೆ ನಡೆದು ವಾರವಾಗುವಷ್ಟರಲ್ಲಿ ಐಫೋನ್6 ಮನೆಗೆ ಬಂದೂ ಆಯಿತು.
ಏನೇ ಬರೆಯಬೇಕಿದ್ದರೂ ಸುಂದರವಾದ ಚಿತ್ರಗಳೇ ನನ್ನ ಸ್ಪೂರ್ತಿ.   ನಾಲ್ಕಾರು ಹೂಗಳ ಚಿತ್ರಗಳನ್ನು ಕ್ಲಿಕ್ಕಿಸಿ ಅದರ ಸೊಗಸನ್ನು ಸವಿಯುತ್ತಾ ನನಗೆ ಬೇಕಾಗಿದ್ದ ಫೊಟೋ ಎಡಿಟಿಂಗ್ apps ಗಳನ್ನೂ install ಮಾಡಿಟ್ಟು,  ಒಂದೆರಡು ಫೊಟೋಗಳನ್ನು ಫೇಸ್ ಬುಕ್ಕಲ್ಲಿ ತೋರಿಸಿ ಸಂಭ್ರಮಿಸಿದ್ದೂ ಆಯಿತು.

ಬೆಳಗಾಗುತ್ಲೂ ನಮ್ಮಜಮಾನ್ರು  " ನೋಡೇ ನಿನ್ ಕನ್ನಡ,  ಎಲ್ಲಿ ಬೇಕಾದ್ರೂ ಬರೆಯಬಹುದು "  ಅನ್ನೋದೇ.  ನನಗೋ ಮುಂಜಾನೆಯ ಮನೆಗೆಲಸದ ಒತ್ತಡ.  ಒಂದು ಹಂತದ ವಿರಾಮದ ವೇಳೆಯಲ್ಲಿ ಐಫೋನ್ ಹಿಡಿದು ಪರಿಶೀಲಿಸ ಹೊರಟರೆ ......

ಅರೆ ಇದೇನಚ್ಚರಿ
ಕೇಳೇ ನೀಳವೇಣೀ
ಕುಣಿದು ಕುಣಿದು ಬಾರೆ
ನಲಿದೂ ನಲಿದು ಬಾರೆ
ಬಂತೂ ಕನ್ನಡ ಅಕ್ಷರಮಾಲೆ
ಅನ್ನುವಂದದಿ  
ಕಮೆಂಟು ಬರೆದೆ
ಕಾಪೀ ಪೇಸ್ಟೂ ಕಿರಿಕಿರಿ ಇಲ್ಲದೆ.

ಫೇಸ್ ಬುಕ್ ಕಮೆಂಟು ಛಾಪಿಸಲು ಕನ್ನಡ ಕೀ ಬೋರ್ಡ್ ಎದುರು ಬಂದು ಕುಣಿಯಿತು.
ಟ್ವೀಟ್ ಹಕ್ಕಿ ಕನ್ನಡದ ಗರಿ ಬಿಡಿಸಿ ಬರೆಯಿತು.
ನೋಟ್ ಪ್ಯಾಡ್ ಬಿಡಿಸಿದೆನಾ,  ಇಲ್ಲೂ ಕನ್ನಡ ಡಿಂಢಿಮ.   
ಪೊಟೋ ಎಡಿಟಿಂಗ್ ಕಡೆ ತಿರುಗಿದೆನಾ,  " ಬಂದೇ ಅಕ್ಕಾ,  ಕನ್ನಡದ ಕುಂಚ ಹಿಡಿದು ನಿಂದೇ "  ಅಂದಿತು ಕನ್ನಡ ಕೀಲಿ ಮಣೆ.

 ಈ ಕೀ ಬೋರ್ಡ್ ನನಗೆ ಹೊಸತಲ್ಲ, ಹಿಂದೆಯೂ ಬಳಸುತ್ತಾ ಇದ್ದ ಐಪಾಡ್ ಕೀ ಬೋರ್ಡ್ ಇದೇ ಆಗಿತ್ತು.   ಅದನ್ನು install ಅಂದರೆ ಸ್ಥಾಪಿಸಿಕೊಳ್ಳಲು ಶುಲ್ಕ ಕಟ್ಟಬೇಕಾಗಿತ್ತು.   ಇಲ್ಲಿ ಆ ತೊಂದರೆಯಿಲ್ಲ.  ಇದು ಸಂಪೂರ್ಣ ಉಚಿತ ಕೊಡುಗೆ.   ಇದೊಂದೇ ಕೀ ಬೋರ್ಡ್ ಮಾತ್ರವಲ್ಲ,  ಬೇರೆ ಬೇರೆ ವಿನ್ಯಾಸದ ಕನ್ನಡ ಕೀಲಿಮಣೆಗಳು ಸಂಪೂರ್ಣ ಉಚಿತವಾಗಿ apps store ನಲ್ಲಿ ಲಭ್ಯವಿವೆ.   ಜಯ ಭಾರತ ಜನನಿಯ ತನುಜಾತೆ,  ಜಯಹೇ ಕರ್ನಾಟಕ ಮಾತೆ ... ಎಂದುಲಿಯಿತು ಮನ.   ಇದುವರೆಗೆ ಐಪಾಡ್ ಗೆ ಅಲಭ್ಯವಾಗಿದ್ದ ಕನ್ನಡಕ್ಕೆ ಸಂಬಂಧಿಸಿದ ಅದೆಷ್ಟೋ apps ಇಲ್ಲಿ ಉಚಿತವಾಗಿ ಲಭ್ಯವಿವೆ.   ಕನ್ನಡದ ಪುಸ್ತಕಗಳನ್ನೂ ಓದಬಹುದು. ಅವಶ್ಯವೆನಿಸಿದಲ್ಲಿ ಇಂಗ್ಲೀಷ್ ಕೂಡಾ ಛಾಪಿಸಿಕೊಳ್ಳಲೂ ಅಡ್ಡಿಯಿಲ್ಲ.   ಕನ್ನಡ ಮಾತ್ರವಲ್ಲ ಹತ್ತುಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಈ ಕೀ ಬೋರ್ಡ್.

ಆಸಕ್ತರಿಗೆ ಕನ್ನಡ ಬರಹದ apps ಹೀಗೆ ಪಡೆಯಬಹುದು
http://appshopper.com/utilities/kannada-keyboard








Posted via DraftCraft app

Saturday, 25 October 2014

ನಮ್ಮೂರ ಕೋಡುಬಳೆ




ಮಗಳು ಪ್ರೈಮರಿ ಶಾಲೆಯಿಂದ ಹೈಸ್ಕೂಲಿಗೆ ಹೋಗಲು ಅಣಿಯಾಗಿದ್ದಳು.   ಅವಳಣ್ಣನ ಹುಕುಂ ಪ್ರಕಾರ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿಗೇ ಸೇರಿಯಾಗಿತ್ತು,  ಅದೂ ವಿಟ್ಲದಲ್ಲಿತ್ತು.   ಅವಳಣ್ಣ ಕನ್ನಡ ಶಾಲೆಯಲ್ಲಿ ಓದಿ,  ಕಾಲೇಜಿಗೆ ಸೇರಿದ ತಕ್ಷಣ ಹೇಳಿದ್ದು,   " ಇಂಗ್ಲೀಷಿನಲ್ಲಿ ಹೇಳುವ ಪಾಠಗಳು ಅರ್ಥವಾಗುವುದಿಲ್ಲ ".   ನಾವೂ ಕನ್ನಡವನ್ನೇ ಕಲಿತು ಕಾಲೇಜಿಗೆ ಹೋದವರಲ್ವೇ,   ಸಮಸ್ಯೆ ಅರ್ಥ ಮಾಡಿಕೊಂಡು ಪಾಠಪ್ರವಚನಗಳನ್ನು ಹೇಳಿಕೊಡಲು ನಾನೇ ಸಿದ್ಧಳಾಗಬೇಕಾಯಿತು.   ಯಾವಾಗ ಅಮ್ಮನೇ ಪಾಠ ಹೇಳಿಕೊಡಲು ಬಂದಳೋ,  ಅವನ ಹಿಂಜರಿಕೆ ತೊಲಗಿತು.

ತನಗಾದ ಕಷ್ಟ ತಂಗಿಗಾಗಬಾರದು ಎಂದೇ ಅವಳಣ್ಣ ಈ ಥರ ಅಪ್ಪಣೆ ಕೊಡಿಸಿದ್ದು.   ಅವಳೇನೋ ಹೈಸ್ಕೂಲ್ ಸೇರಿದಳು.   ದಿನ ಬೆಳಗಾದರೆ ಏಳು ಗಂಟೆಯ ಬಸ್ ಹಿಡಿದು ವಿಟ್ಲದ ಶಾಲೆ ತಲಪಬೇಕಿತ್ತು.   ಇದುವರೆಗೆ ಹೋಗುತ್ತಿದ್ದ ಮುಳಿಗದ್ದೆಯ ಹೆದ್ದಾರಿ ಶಾಲೆ ಮನೆಯಿಂದ ಕೂಗಳತೆ ದೂರದಲ್ಲಿದ್ದಿತು,   ಸಾವಕಾಶದಿಂದ ಒಂಭತ್ತು ಗಂಟೆಯ ನಂತರ ಮನೆ ಬಿಟ್ಟರೂ ಸಾಕಾಗುತ್ತಿತ್ತು.   

ಏಳು ಗಂಟೆಗೆ ಹೊರಡಬೇಕಾಗಿದ್ದರೆ ನಾನು ಐದು ಗಂಟೆಗೂ ಮುಂಚಿತವಾಗಿ ಎದ್ದು ತಿಂಡಿ ತಯಾರಿ, ಟಿಫಿನ್ ಬಾಕ್ಸ್,  ಸ್ನಾನದ ವ್ಯವಸ್ಥೆ,  ಯೂನಿಫಾರ್ಮ್,  ಓರಣವಾಗಿ ತಲೆ ಕೂದಲಿನ ಶೃಂಗಾರ.... ಒಂದೇ ಎರಡೇ ?   ಈ ಮಾದರಿಯ ಪಡಿಪಾಟಲು ಎಲ್ಲರ ಮನೇಲೂ ಇದ್ದಿದ್ದೇ ಅನ್ನಿ,  ಆಯ್ತು ಅಂತಾ ಉಸ್ಸೆಂದು ಕುಳಿತು ಗಂಟೆ ನೋಡಿದ್ರೆ ಇನ್ನೂ ಆರೂ ಮುಕ್ಕಾಲು.   ಏನಾಯ್ತೀಗ,  ಒಂದು ಹಂತದ ಮನೆಕೆಲಸವೆಲ್ಲ ಇವಳನ್ನು ಸ್ಕೂಲಿಗೆ ಕಳಿಸೋ ಹೊತ್ತಿಗೆ ಮುಕ್ತಾಯ.   ಟೀವಿ ನೋಡಲಡ್ಡಿಯಿಲ್ಲ,   ಮಗಳು ತಮಿಳುಪ್ರಿಯೆ.   ಕಲೈನಾರ್ ಚಾನಲ್ ಏನನ್ನೋ ಬೊಬ್ಬಿರಿಯುತ್ತಿತ್ತು.   ನಾನೂ ವಾಹಿನಿ ಬದಲಾಯಿಸದೆ ಹಾಗೇ ಕೂತಿದ್ದೆನಾ...

" ವಣಕ್ಕಂ "  ಅನ್ನುತ್ತಾ ಒಬ್ಬ ಮಧ್ಯವಯಸ್ಕ ಮಹಿಳೆ ಬಂದಳು.  " ಮಂಗಳ ಉಲಗಂ.... ಇದು ಮಂಗಳ ಉಲಗಂ.... " ಎಂದು ರಾಗ ಪ್ರಾರಂಭವಾಯಿತೇ, ಏನೋ ಕುತೂಹಲ,   ಅಡುಗೆ ಮನೆಯೂ ಎದುರಾಯಿತು.  ಅಡುಗೆ ಕಾರ್ಯಕ್ರಮ ನೋಡದಿದ್ದರೆ ಹೇಗೆ ?  ಅಡುಗೆ ಮಾಡಲು ತಲೆ ಹಣ್ಣಾದ ಇನ್ನೊಬ್ಬ ಮಹಿಳೆ ಬಂದು ನಿಂತರು.   ಆಕೆ ತಮಿಳಿನಲ್ಲೇ ವಾಗ್ದಾಳಿ ಮುಂದುವರಿಸಿದರೂ ನಮ್ಮ ದಕ್ಷಿಣ ಕನ್ನಡಿತಿ ಈಕೆ ಎಂದೇ ಮನ ತೀರ್ಪು ಕೊಟ್ಟಿತು.





" ಕೋಡುಬಳೆಯನ್ನು ಮಾಡುವ ವಿಧಾನ ತೋರಿಸಲಿದ್ದೇನೆ " ಅನ್ನುತ್ತಾ,  " ಕೋಡುಬಳೆ ಶಬ್ದ ಮೂಲತಃ ಕನ್ನಡದ್ದು ಹಾಗೂ ಇದು ಕರ್ನಾಟಕದ ತಿಂಡಿ "  ಅಂದು ಉದ್ದವಾಗಿ ಬತ್ತಿಯಂತೆ ಹೊಸೆದ ಹಿಟ್ಟಿನ ಎರಡು ತುದಿಗಳನ್ನು ಜೋಡಿಸಿ ಬಳೆಯ ಆಕಾರ ನೀಡುವಲ್ಲಿಗೆ   " ಇದು ಕೋಡುಬಳೆ " ಅಂದರು.

 ಓ, ಕೋಡುಬಳೆಯ ವ್ಯುತ್ಪತ್ತಿ ತಿಳಿದಂಗಾಯ್ತು.   ಆಕಾಶದಲ್ಲಿ ಕಾಮನಬಿಲ್ಲು ಮೂಡಿದಾಗ ನಾವೂ ಅನ್ನುವುದಿದೆ,  " ಆ ಕೋಡಿಯಿಂದ ಈ ಕೋಡಿವರೆಗೆ ಕಾಮನಬಿಲ್ಲು ಹೊಳೆಯುತ್ತಿತ್ತು ". ನರೇಂದ್ರ ಮೋದಿ ನಮ್ಮೂರಿಗೆ ಬಂದ್ರು ಅಂತಿಟ್ಕೊಳ್ಳಿ,  ಇತರರೊಂದಿಗೆ ಈ ಸುದ್ದಿ ಹಂಚಿಕೊಳ್ಳುವಾಗ  " ರಸ್ತೆಯಲ್ಲಿ ಏನು ಜನಾ,  ಆ ಕೋಡಿಂದ ಈ ಕೋಡಿವರೆಗೆ ವಾಹನಗಳ ಸಾಲು ಸಾಲು ".    ಈಗೀಗ ಹಳೇ ಧಾಟಿಯಲ್ಲಿ ಕನ್ನಡ ಮಾತು ಕೇಳುವುದೇ ದುರ್ಲಭ,  ಈಗಿನ ಮಕ್ಕಳಂತೂ ಭಾಷೆಯ ಹಂಗಿಲ್ಲದೆ ವ್ಯವಹರಿಸುವವರು.

ಆಕೆ ಕೇವಲ ಐದು ನಿಮಿಷದಲ್ಲಿ ಕೋಡುಬಳೆ ಮಾಡಿಟ್ಟು ಹೋದರು.   ನನಗೂ ಪ್ರತಿದಿನದ ವೀಕ್ಷಣೆಗೆ ಪುಟ್ಟ ಕಾರ್ಯಕ್ರಮವೂ ಸಿಕ್ಕಿತು.  ಆಗ ನಾನೇನೂ ಇಂಟರ್ನೆಟ್ ಹವ್ಯಾಸಿಯಾಗಿರಲಿಲ್ಲ.    ಕಂಪ್ಯೂಟರ್ ಇದ್ದ ಕಡೆ ತಲೆ ಹಾಕ್ತಾನೇ ಇರಲಿಲ್ಲ.  ಮಕ್ಕಳು ದಿನವಿಡೀ ವೀಡಿಯೋ ಗೇಮ್ಸ್ ಗಳಲ್ಲೇ ಮಗ್ನರಾಗಿರುತ್ತಿದುದರಿಂದ ಇದೂ ಒಂದು ಮಕ್ಕಳಾಟಿಕೆಯ ಸಾಧನ ಎಂದೇ ನನ್ನ ತೀರ್ಮಾನವಾಗಿತ್ತು.  

ಈಗ ನಾವೂ ಸಂಪ್ರದಾಯಬದ್ಧವಾದ ಕೋಡುಬಳೆ ತಯಾರಿಸೋಣ.
ಅಕ್ಕಿ ಹುಡಿ 3 ಕಪ್.
ಹಸಿ ತೆಂಗಿನ ತುರಿ ಒಂದು ಕಪ್,  ಒಣಕಲು ಕೊಬ್ಬರಿ ಆಗದು.
ತುಸು ಜೀರಿಗೆ,  ಸುವಾಸನೆಗೆ ತಕ್ಕಷ್ಟು.
2-3 ಹಸಿಮೆಣಸು,  ಗಾಂಧಾರಿ ಮೆಣಸು ಕೂಡಾ ಆದೀತು.
ರುಚಿಗೆ ಉಪ್ಪು.
ಕರಿಯಲು ತೆಂಗಿನೆಣ್ಣೆ ಯಾ ಅಡುಗೆ ಎಣ್ಣೆ,  ತೆಂಗಿನೆಣ್ಣೆ ಅತ್ಯುತ್ತಮ.

ಇನ್ನೇನು ಮಾಡಬೇಕು ?
ತೆಂಗಿನತುರಿ,  ಜೀರಿಗೆ,  ಮೆಣಸು, ಉಪ್ಪು ಇಷ್ಟನ್ನೂ ನೀರು ಹಾಕದೆ ಅರೆಯಿರಿ,   ಅರೆದ ಅರಪ್ಪನ್ನು ಅಕ್ಕಿಹುಡಿಯೊಂದಿಗೆ ಕಲಸಿರಿ.   ಅವಶ್ಯವಿದ್ದಷ್ಟೇ ನೀರು ಕೂಡಿಸಿ ಚಪಾತಿ ಹಿಟ್ಟಿನ ಥರ ಮಾಡಿಟ್ಟು ಅರ್ಧ ಘಂಟೆ ಮುಚ್ಚಿಡಿ.

ನೆಲ್ಲಿ ಗಾತ್ರದ ಹಿಟ್ಟನ್ನು ಅಂಗೈಯಲ್ಲಿ ತೆಗೆದು ಬತ್ತಿಯಂತೆ ಹೊಸೆಯಿರಿ.  ಅಂಗೈಯಿಂದ ತುಂಡಾಗಿ ಬೀಳದಿದ್ದಲ್ಲಿ ಕಲಸಿದ ಪ್ರಮಾಣ ಸರಿಯಾಗಿದೆ ಎಂದೇ ತಿಳಿಯಿರಿ.   ತುಂಡಾಗುತ್ತಿದೆಯಾದಲ್ಲಿ ಸ್ವಲ್ಪ ಅಕ್ಕಿಹುಡಿ ಸೇರಿಸಿ ಪುನಃ ಕಲಸಿ,   ಗೋಧಿಹುಡಿ ಒಂದೆರಡು ಚಮಚ ಸೇರಿಸಿದರೂ ಆದೀತು.

ಉರುಟಾಗಿ ಬಳೆಗಳಂತೆ ಜೋಡಿಸಿ ಇಟ್ಕೊಂಡಿರಾ,  ಈಗ ಬಾಣಲೆ ಒಲೆಗೇರಿಸಿ.
ಎಣ್ಣೆ ಬಿಸಿಯಾಯಿತೇ,  ಮಾಡಿಟ್ಟ ಕೋಡುಬಳೆಗಳು ಎಣ್ಣೆಗಿಳಿಯಲಿ.
ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ,  ಹೊಂಬಣ್ಣ ಬಂದಾಗ ತೆಗೆಯಿರಿ.
ಬಿಸಿಯಾರಿತೇ, ತಟ್ಟೆಯಲ್ಲಿ ಹಾಕಿಟ್ಟು ಬಿಸಿ ಚಹಾದೊಂದಿಗೆ ತಿನ್ನಿ.
ಉಳಿದುದನ್ನು ಜಾಡಿಯಲ್ಲಿ ತುಂಬಿಸಿ,  ನಾಳೆ ತಿನ್ನಬಹುದು.
ಸಾಧ್ಯವಿದ್ದರೆ ವಾರಕ್ಕಾಗುವಷ್ಟು ಮಾಡಿಟ್ಕೊಳ್ಳಿ,  ಕೆಡುವುದಿಲ್ಲ.



Posted via DraftCraft app

Saturday, 18 October 2014

ಕೊಂಡಾಟದ ಅಡುಗೆ




ಸೌತೆ, ಕುಂಬಳ, ಸಿಹಿಗುಂಬಳದಂತಹ ತರಕಾರಿಗಳನ್ನು ಹೋಳು ಮಾಡುವಾಗ ತಿರುಳಿನಂಶ ತಗೆದು ಅಡುಗೆ ಮಾಡಿ   ಆಯ್ತೇ,   ತಿರುಳಿನಿಂದಲೂ ತೆಂಗಿನ ತುರಿ, ಸಾಸಿವೆ,  ಹಸಿಮೆಣಸಿನೊಂದಿಗೆ ಅರೆದು ಕಡೆದ ಮಜ್ಜಿಗೆ ಎರೆದು ಇಂತಹ ಸಹವ್ಯಂಜನ ತಯಾರಿಸಿ.   ಮುಳ್ಳುಸೌತೆ ತಿರುಳಿನಿಂದ ತಯಾರಿಸಿದ್ದು ಕೊಂಡಾಟ ಎಂಬ ಹೆಸರನ್ನು ಪಡೆದಿದೆ.   ಇನ್ನಿತರ ತರಕಾರೀ ತಿರುಳುಗಳಿಗೆ ಈ ಭಾಗ್ಯವಿಲ್ಲ,   ಸಾಸಿವೆ ಅಂದ್ಬಿಟ್ರಾಯ್ತು.

ಗೆಡ್ಡೆ ತರಕಾರಿ ಸ್ವಲ್ಪ ಇದೆ, ಪಲ್ಯ ಯಾ ರಸಂಗೆ ಸಾಲದು,  ಏನು ಮಾಡೋಣ?
ಹಳ್ಳಿಗಳಲ್ಲಿ ಮುಂಡಿಗೆಡ್ಡೆ ಏನೇನೋ ಅಡುಗೆ ಮಾಡಿದರೂ ತುಸು ಉಳಿಯುವಂತಹುದು.   ಈ ಚಿಕ್ಕ ತುಂಡನ್ನು ಇನ್ನಷ್ಟು ಚಿಕ್ಕದಾಗಿ ಕತ್ತರಿಸಿ,  ಮೇಲೆ ಹೇಳಿದ ಸಾಮಗ್ರಿಗಳೊಂದಿಗೆ ಅರೆದು ಮಜ್ಜಿಗೆ ಎರೆದು ಅನ್ನದೊಂದಿಗೆ ಸವಿಯಿರಿ.  ಕ್ಯಾರೆಟ್,  ಬೀಟ್ರೂಟುಗಳೂ ಆದೀತು. 

ಕೇವಲ ಒಂದೇ ಒಂದು ಬೆಂಡೆಕಾಯಿ ಇದೆ.   ಏನು ಮಾಡೋಣ?
ತೆಳ್ಳಗೆ ಕತ್ತರಿಸಿ,   ಜಿಡ್ಡು ಸವರಿದ ಬಾಣಲೆಯಲ್ಲಿ ಹುರಿದುಕೊಳ್ಳಿ,  ಹಸಿವಾಸನೆ ಹೋಗಿ ಗರಿಗರಿ ಆಯ್ತೇ,  ಕೆಳಗಿಡಿ.  ತೆಂಗಿನ ತುರಿ,  ಸಾಸಿವೆ ಮಜ್ಜಿಗೆಯಲ್ಲಿ ಅರೆದು ಸೇರಿಸಿ.   ರುಚಿಗೆ ಉಪ್ಪು,  ಬೆಲ್ಲವನ್ನೂ ಬೇಕಿದ್ದರೆ ಹಾಕಬಹುದು.  ಇದು ಬೆಂಡೆ ಸಾಸಿವೆ.  ಇದ್ಯಾವುದನ್ನೂ ಕುದಿಸಲಿಕ್ಕಿಲ್ಲ.  





ಕಿತ್ತಳೆ ಹಣ್ಣು ತಿಂದಾಯ್ತು.   ಸಿಪ್ಪೆಯಿಂದ ಅಚ್ಚುಕಟ್ಟಾದ ಗೊಜ್ಜು ಮಾಡೋಣ.
ಹಣ್ಣಾದ ಸಿಪ್ಪೆ ತುಂಡನ್ನು ಚಿಕ್ಕದಾಗಿ ಕತ್ತರಿಸಿ,  ಮಿಕ್ಸೀಗೆ ಹಾಕಿದ್ರೂ ಆದೀತು.
ಒಂದು ಲೋಟ ನೀರು
ರುಚಿಗೆ ತಕ್ಕಂತೆ ಉಪ್ಪು,  ಹುಳಿ,  ಬೆಲ್ಲ.
ಹುಳಿಗೆ ಬೀಂಬುಳಿಯೂ ಆದೀತು.
ಒಂದು ತಪಲೆಗೆ ಎಲ್ಲವನ್ನೂ ಹಾಕಿಕೊಳ್ಳಿ,  ಕುದಿಸಿ,  ಒಗ್ಗರಣೆ ಕೊಡಿ.







ಹೀರೇಕಾಯಿ ಸಿಪ್ಪೆ, ನಾರು ತೆಗೆದು ಪಲ್ಯವೋ ಸಾಂಬಾರೋ ಮಾಡಿ ತಿನ್ನುವುದು ಇದ್ದೇ ಇದೆ.  ಉಳಿಕೆಯಾದ ನಾರು ಸಿಪ್ಪೆಗಳನ್ನು ತಿಪ್ಪೆಗೆಸೆಯಬೇಕಾಗಿಲ್ಲ.  ಇವನ್ನು ಪುನಃ ಕತ್ತರಿಸಿ ಒಂದಿಷ್ಟು ನೀರೆರೆದು ಬೇಯಿಸಿ.  ಬೇಯುವಾಗ ಒಂದು ಹಸಿಮೆಣಸು ಅಥವಾ ಒಣಮೆಣಸೂ ಬೇಯಲಿ,  ಎರಡೆಸಳು ಬೆಳ್ಳುಳ್ಳಿ ಹಾಕಿಕೊಳ್ಳಿ.   ಬೆಂದ ಸಾಮಗ್ರಿಗಳನ್ನು ನೀರಿನಿಂದ ತೆಗೆಯಿರಿ.   ಒಂದು ಹಿಡಿ ಕಾಯಿತುರಿ,  ಉಪ್ಪು,  ಹುಳಿ, ( ಇದ್ದರೆ ಒಂದು ಬೀಂಬುಳಿ ) ಗಳೊಂದಿಗೆ ಅರೆದು ತೆಗೆಯಿರಿ.  ಪಚ್ಚಡಿ ಎಂದು ಕರೆಯಿರಿ.





ಒಂದೇ ಬಟಾಟೆ ಇದೆ.  ಏನು ಮಾಡೋಣ?
ಬಟಾಟೆಯನ್ನು ಮೆತ್ತಗೆ ಬೇಯಿಸಿ ತಣಿದ ಮೇಲೆ ಸಿಪ್ಪೆ ತೆಗೆದು ಚೆನ್ನಾಗಿ ನುರಿದು ಇಡಿ.
2 ಪುನರ್ಪುಳಿ ಹಣ್ಣಿನ ಒಣ ಸಿಪ್ಪೆ
ಚಿಕ್ಕ ತುಂಡು ಶುಂಠಿ
ಒಂದು ಹಸಿಮೆಣಸು
ನೀರು ಹಾಗೂ ಉಪ್ಪು, ಬೆಲ್ಲ ಹಾಕಿ ಕುದಿಸಿ ಮುಚ್ಚಿ ಇಡಿ.
ತಣಿದ ನಂತರ ಮಿಕ್ಸಿಗೆ ಹಾಕಿ ತಿರುಗಿಸಿ ಬಟಾಟೆ ಪುಡಿಯೊಂದಿಗೆ ಸೇರಿಸಿ ಕೋಕಂ ಬಟಾಟೆ ಬಜ್ಜಿ ಅಂದು ಬಿಡಿ.  ಒಗ್ಗರಣೆ ಕೊಟ್ಟು ಬಿಡಿ.



ಮೊಳಕೆ ಕಾಳು ಬೇಯಿಸಿಟ್ಟಿದ್ದು ಸ್ವಲ್ಪ ಮಿಕ್ಕಿದೆ,  ಏನು ಮಾಡೋಣ?

ಒಂದು ಚಿಕ್ಕ ಬೀಟ್ ರೂಟ್.   ತುಂಡು ಮಾಡಿ,  
2 ಪುನರ್ಪುಳಿ ಹಣ್ಣಿನ ಒಣ ಸಿಪ್ಪೆ
ಚಿಕ್ಕ ತುಂಡು ಶುಂಠಿ
ಒಂದು ಹಸಿಮೆಣಸು
ನೀರು ಹಾಗೂ ಉಪ್ಪು ಹಾಕಿ ಬೇಯಿಸಿ.
ಬೇಯಿಸಿಟ್ಟ ಮೊಳಕೆ ಕಾಳು ಸ್ವಲ್ಪ ( ಬೇಳೆಕಾಳು ಯಾವುದೂ ಆದೀತು,  ಹಲಸಿನ ಬೇಳೆಯೂ ಅಡ್ಡಿಯಿಲ್ಲ )
ತಣಿದ ನಂತರ ಮಿಕ್ಸಿಗೆ ಹಾಕಿ ತಿರುಗಿಸಿ,  ಒಗ್ಗರಣೆ ಕೊಡಿ.
ಸಿಹಿ ಬೇಕಿದ್ರೆ ಸಕ್ಕರೆ ಅಥವಾ ಬೆಲ್ಲ ಹಾಕಿಕೊಳ್ಳಿ.
 ಬೀಟ್ ರೂಟ್ ಗೊಜ್ಜು ಅಂತ ಹೆಸರಿಟ್ಟು ಅನ್ನ,  ಚಪಾತಿಗಳೊಂದಿಗೆ ಸವಿಯಿರಿ.   ಕೆಂಪು ಕೆಂಪಾದ ಈ ಗೊಜ್ಜು ಮಕ್ಕಳಿಗೂ ಇಷ್ಟವಾದೀತು.




ಒಂದು ಬದನೆ ಇದೆ,   ಏನು ಮಾಡೋಣಾ?
ಹಿಂದೆ ಅಡುಗೆಮನೆಯಲ್ಲಿ ಕಟ್ಟಿಗೆಯ ಒಲೆ ಇದ್ದ ಕಾಲದಲ್ಲಿ ಬದನೆಯನ್ನು ಒಲೆಯ ಬಿಸಿ ಕೆಂಡದಲ್ಲಿ ಸುಟ್ಟು ಬದನೆ ಗೊಜ್ಜು ಮಾಡ್ತಿದ್ದರು.   ಈಗ ಕುಕ್ಕರ್ ಒಳಗಿಟ್ಟು ಬೇಯಿಸಿ ತೆಗೆಯಿರಿ.   ಮೈಕ್ರೋವೇವ್ ಕೂಡಾ ಆದೀತು.   ಆರಿದ ನಂತರ ಸಿಪ್ಪೆ ತೆಗೆದು ಗಿವುಚಿ ಇಡಿ.  ಉಪ್ಪು,  ಹುಳಿ, ಬೆಲ್ಲಗಳ ದ್ರಾವಣ ಮಾಡಿಟ್ಟು ಬದನೆಗೆ ಬೆರೆಸಿ,  ಬೆಳ್ಳುಳ್ಳಿಯ ಒಗ್ಗರಣೆ ಕೊಡಿ.




ಲಿಂಬೆಹಣ್ಣಿನ ಶರಬತ್ತು ಮಾಡಿ ಉಳಿದ ಲಿಂಬೆ ಸಿಪ್ಪೆ ಇದೆಯಲ್ಲ,  ಇದನ್ನೂ ಅಡುಗೆಯಲ್ಲಿ ಉಪಯೋಗಿಸೋಣ.
ನಾಲ್ಕು ಪುನರ್ಪುಳಿ ಹಣ್ಣಿನ ಒಣಸಿಪ್ಪೆ ಹಾಗೂ ಲಿಂಬೆ ಕಡಿಯನ್ನು ಬೇಯಿಸಿ.
2 ಒಣಮೆಣಸು,  
1 ಚಮಚ ಕಡ್ಲೇ ಬೇಳೆ
2 ಚಮಚ ಕೊತ್ತಂಬರಿ
2 ಚಮಚ ಎಳ್ಳು
ತುಸು ಎಣ್ಣೆಪಸೆಯಲ್ಲಿ ಹುರಿಯಿರಿ.
ಬೇಯಿಸಿಟ್ಟ ಸಿಪ್ಪೆಗಳೊಂದಿಗೆ ನುಣ್ಣಗೆ ಅರೆಯಿರಿ.
ರುಚಿಗೆ ಉಪ್ಪು, ಬೆಲ್ಲ ಕೂಡಿಸಿ ಅವಶ್ಯವಿದ್ದ ಹಾಗೆ ನೀರೆರೆದು ಕುದಿಸಿ.   ಒಗ್ಗರಣೆ ಬೇಡ,  ಒಂದೆರಡು ಚಮಚ ತುಪ್ಪ ಎರೆದು ಬಿಡಿ.  ಈ ಗೊಜ್ಜು ಅಥವಾ ಸೂಪ್ ಊಟದೊಂದಿಗೆ ಕುಡಿಯಿರಿ,   ಅನ್ನದೊಂದಿಗೆ ಸುರಿಯಿರಿ.




ನೆಲಬಸಳೆ ಸಾಸಿವೆ
ನೆಲಬಸಳೆ ಕುಡಿಗಳನ್ನು ಕೈಯಲ್ಲಿ ಹಿಡಿಸುವಷ್ಟು ಚಿವುಟಿ ತನ್ನಿ.   ಹೂವರಳಿದ ಗಿಡದಿಂದ ಬೇಡ,  ಅದು ಬೆಳೆದಿರುತ್ತದೆ.   ಚಿಕ್ಕದಾಗಿ ಕತ್ತರಿಸಿ ತುಸು ಉಪ್ಪು ಹಾಕಿ ಬೇಯಿಸಿ.  ಮೈಕ್ರೋವೇವ್ ಉಪಯೋಗಿಸುವುದಾದರೆ ನೀರೆರೆಯುವುದೂ ಬೇಡ.  ಒಂದು ಹಿಡಿ ಕಾಯಿತುರಿಗೆ ತುಸು ಸಾಸಿವೆ,  ಒಂದೆರಡು ಗಾಂಧಾರಿ ಮೆಣಸು ಸೇರಿಸಿ ಅರೆಯಿರಿ.  ಅರೆಯುವಾಗ ನೀರು ಬೇಡ,  ಮಜ್ಜಿಗೆ ಹಾಕಿಕೊಳ್ಳಿ.   ಅರೆದ ಮಿಶ್ರಣವನ್ನು ಬೆಂದ ಸೊಪ್ಪು ತರಕಾರಿಗೆ ಕೂಡಿಸಿ,  ಕುದಿಸುವುದೂ ಬೇಡ,   ಸಿಹಿಗೆ ಬೆಲ್ಲ ಇರಲಿ,  ಒಗ್ಗರಣೆಯೇನೂ ಬೇಡ.


Posted via DraftCraft app