Pages

Ads 468x60px

Monday, 25 January 2021

ನಕ್ಷತ್ರ ಹಣ್ಣು



ವರ್ಷಗಳ ಹಿಂದೆ ಪಕ್ಕದಮನೆಯಿಂದ ನಕ್ಷತ್ರ ಹಣ್ಣುಗಳು ದೊರೆತಾಗ,  ಹಣ್ಣು ತಿನ್ನುವಾಗ ಒಳಗೆ ಸಿಕ್ಕ ಬೀಜಗಳನ್ನು ಜೋಪಾನವಾಗಿ ನೀರೆರೆದು ಸಲಹಿದಾಗ ಮೂರೇ ವರ್ಷದಲ್ಲಿ ನಕ್ಶತ್ರ ಹಣ್ಣುಗಳನ್ನು ನನ್ನದೇ ಗಿಡದಿಂದ ಕೊಯ್ಜು ತಿನ್ನುವ ಯೋಗ.


ಈ ವರ್ಷ ಮಕ್ಕಳೆಲ್ಲರೂ ಮನೆಯಲ್ಲಿದ್ದಾಗ ಗಿಡ ತುಂಬ ಹಣ್ಣು ದೊರೆಯುವ ಅಂದಾಜಿನಲ್ಲಿದ್ದಾಗಲೇ ಮಗಳು ಅಳಿಯ ಬೆಂಗಳೂರಿಗೆ ತೆರಳಿಯಾಗಿತ್ತು.  


" ಏನ್ಮಾಡಿದ್ರೀ..  "

" ಮಾಡೂದೇನು,  ಹೇಳದೇ ಕೇಳದೇ ಭಾರೀ ಮಳೆ ಸುರಿಯಿತು.  ಬೆಳಗೆದ್ದು ನೋಡಿದ್ರೆ ಹೆಚ್ಚಿನ ಹಣ್ಣುಗಳು ನೆಲದಲ್ಲಿ ಹೊರಳುತ್ತಿವೆ.  ಮರದಲ್ಲಿ ಫಳಫಳನೆ ಮಿಂಚುತ್ತಿದ್ದ ಹಣ್ಣುಗಳ ಗತಿ ಕಂಡು ಬೇಜಾರಾಯ್ತು.   ಬಿದ್ದ ಹಣ್ಣುಗಳಲ್ಲಿ ಚೆನ್ನಾಗಿದ್ದುದನ್ನು ಆಯ್ದು ತಂದಾಗ ತಿನ್ನಲು ನಮ್ಮೆಜಮಾನ್ರು ಹಾಜರಾದರು.

" ಹಣ್ಣು ಭಲೇ ಸಿಹಿ ಉಂಟಲ್ಲ... "

" ತಿನ್ನಿ..  ಬಿದ್ದು ಹಾಳಾಗ್ತಾ ಉಂಟು. "


ಮಾರನೇ ಮುಂಜಾನೆ ನೋಡಿದಾಗ ಮರದಲ್ಲಿ ಅಳಿದುಳಿದ ಹಣ್ಣುಗಳು ಗಾತ್ರದಲ್ಲಿ ದೊಡ್ಡಾಗಿವೆ!  ಒಂದು ಮಳೆಯ ಪ್ರಭಾವವೇ ಅಂತಹುದು.   ನಾವು ಕೊಡಗಟ್ಟಲೆ ನೀರು ಹುಯ್ದರೂ ಮರ ಸ್ವೀಕರಿಸದು,  ವರ್ಷಧಾರೆಯ ಹನಿ ಸಿಕ್ಕರೂ ಸಾಕು, ಸಸ್ಯಗಳು ಧನ್ಯತೆಯಿಂದ ತಲೆದೂಗದಿರದೇ..





ಹಣ್ಣುಗಳೆಲ್ಲ ನನ್ನ ಬುಟ್ಟಿಯೊಳಗೆ ಸೇರಿದುವು.

ಇದನ್ನೆಲ್ಲ ಏನ್ಮಾಡ್ಲಿ?

ಉತ್ತರ ಸಿಕ್ಕಿಯೇ ಬಿಟ್ಟಿತು,  ಉಪ್ಪಿನಕಾಯಿ ಹಾಕುವುದು.  ಒಂದೆರಡು ವಾರದ ಖರ್ಚಿಗೆ ಸಾಕು.  ಮಧು ಬೆಂಗಳೂರಿಗೆ ಹೋಗುವಾಗ ಇದ್ದರೆ ಜಾಡಿಯಲ್ಲಿ ತುಂಬಿಸಿ ಕೊಡಬಹುದು.


ಉಪ್ಪಿನಕಾಯಿ ಹಾಕಲು ಬೇಕಾದ ಸಾಮಗ್ರಿಗಳೆಲ್ಲ ಇವೆ.

ಉಪ್ಪು ಮೆಣಸು ಸಾಸಿವೆ ಮೆಂತೆ ಇತ್ಯಾದಿ ರೇಷನ್ ಸಾಮಗ್ರಿಗಳ ವ್ಯಾಪ್ತಿಯಲ್ಲಿ ಸಿಗುತ್ತಲಿರುವಾಗ,

ಹಿತ್ತಲಲ್ಲಿ ಬೆಳೆದ ಮಾವಿನಶುಂಠಿಯೂ ಹಸಿ ಅರಸಿಣವೂ ಗೋಣಿಚೀಲದಲ್ಲಿರುವಾಗ..


ನಕ್ಷತ್ರಹಣ್ಣುಗಳ ಬೀಜ ಬೇರ್ಪಡಿಸಿ ಹೋಳು ಮಾಡಲಾಯಿತು.  ಹದಿನೈದರಿಂದ ಇಪ್ಪತ್ತು ಹಣ್ಣು ಸಾಕು.

ಸೂಕ್ತವಾಗುವಷ್ಟು ಮಾಂಙನಾರಿ ಚೂರು ಚೂರಾಯಿತು.

ತುಸು ಪುಡಿಯುಪ್ಪು  ಬೆರೆಸಿ ಒಲೆಯ ಮೇಲಿಟ್ಟು ಬೆಚ್ಚಗೆ ಮಾಡುವುದು,  ಬೇಯುವುದೇನೂ ಬೇಡ,  ನೀರು ತಾಕಿಸಲೇ ಬಾರದು.  ಬೀಂಬುಳಿ ದಾರೆಹುಳಿಗಳಂತೆ ಶೇಕಡಾ 80ಕ್ಕೂ ಮೇಲ್ಪಟ್ಟು ನೀರು ಈ ಹುಳಿ ಹಾಗೂ ಸಿಹಿ ಮಿಶ್ರಿತ ಹಣ್ಣಿನಲ್ಲಿರುವಾಗ ನೀರಿನ ಹಂಗು ಇದಕ್ಕಿಲ್ಲ.


ಮಸಾಲೆ ಏನೇನು ಹಾಕೋಣ?

ಕಡಲೆ ಗಾತ್ರದ ಇಂಗು,  ಪುಟ್ಟ ಚಮಚ ಮೆಂತೆ ಬಾಣಲೆಗೆ ಬಿತ್ತು.   ನಾನ್ ಸ್ಟಿಕ್ ಕಡಾಯಿ ಎಣ್ಣೆ ಬಯಸದು.

ಒಂದೂವರೆ ಚಮಚ ಸಾಸಿವೆ,  ಸೌಟಾಡಿಸುತ್ತ ಸಾಸಿವೆ ಸಿಡಿಯುವುದನ್ನು ಗಮನಿಸುತ್ತಿದ್ದಂತೆ,

ಒಂದೂವರೆ ಚಮಚ ಮೆಣಸಿನ ಹುಡಿ ಬೀಳಿಸಿ,

ಒಂದೆಸಳು ಕರಿಬೇವು ಉದುರುವಲ್ಲಿಗೆ ಸ್ಟವ್ ಆರಿಸಿ.


ಆರಿದ ನಂತರ  ಶುದ್ಧೀಕರಿಸಲ್ಪಟ್ಟ ಮಿಕ್ಸಿಯಲ್ಲಿ ಹುಡಿ ಮಾಡುವುದು.

ಹುಡಿ ಮಾಡುವಾಗಲೇ ಪುಡಿಯುಪ್ಪು ಸೇರಿಸುವುದು ಸೂಕ್ತ.   ಕೈಯಲ್ಲಿ ಬೆರೆಸಬೇಕಿಲ್ಲ.

ಹಸಿ ಅರಸಿಣ ಇತ್ತಲ್ಲ,  ಆದನ್ನೇ ನಾಲ್ಕು ಚೂರು ಮಿಕ್ಸಿಗೆ ಹಾಕಲಾಯಿತು.

ನಂತರ ಈ ತಾಜಾ ಮಸಾಲೆಯನ್ನು ನಕ್ಷತ್ರ ಹಾಗೂ ಮಾವಿನಶುಂಠಿ ಮಿಶ್ರಣಕ್ಕೆ ಬೆರೆಸಿ ಮುಚ್ಚಿ ಇಡುವುದು.

 ಹೇಗಾಯ್ತೂ ಎಂದು ರುಚಿ ನೋಡದಿದ್ದರೆ ಹೇಗೆ?

 ಉಪ್ಪು ಕಡಿಮೆ ಎಂದೆನಿಸಿದರೆ ತುಸು ಉಪ್ಪು ಬೆರೆಸುವುದು ಅಷ್ಟೇ.  ಮೊದಲೇ ತುಂಬಾ ಉಪ್ಪು ಹಾಕಲೇ ಬಾರದು.

ಈ ಉಪ್ಪಿನಕಾಯಿಯನ್ನು ಮಾಡಿದ ಕೂಡಲೇ ಉಪಯೋಗಿಸಬಹುದಾಗಿದೆ.


ನಂತರ ನಾಲ್ಕಾರು ದಿನಗಳಲ್ಲಿ ಮಕರಸಂಕ್ರಾಂತಿ ಬಂದಿದೆ.   ಹಿರಣ್ಯ ಶ್ರೀದೇವಿ ಕ್ಷೇತ್ರದಲ್ಲಿ ಭೋಜನದ ಉಸ್ತುವಾರಿ ನನ್ನದೇ ಆಗಿರುವಾಗ,  ನಕ್ಷತ್ರಹಣ್ಣಿನ ಉಪ್ಪಿನಕಾಯಿ ಎಲ್ಲರ ಬಾಯಿಚಪಲಕ್ಕೆ ತುತ್ತಾಗಿದ್ದು ಸುಳ್ಳಲ್ಲ ಕಣ್ರೀ...






ನಕ್ಷತ್ರ ಹಣ್ಣು ಎಂಬ ಮಧ್ಯಮ ಗಾತ್ರದ ಹಣ್ಣಿನ ಮರವು ಆಂಗ್ಲ ಭಾಷಾ ಶಾಸ್ತ್ರದ ರೀತ್ಯಾ ವಾಟರ್ ರೋಸ್ ಅ್ಯಪಲ್ ಆಗಿರುತ್ತದೆ.  ಜಾವಾ ಆ್ಯಪಲ್,  ವ್ಯಾಕ್ಸ್ ಜಂಬೊ ಇನ್ನೂ ಹಲವು ನಾಮಕರಣಗಳು.   ಅಂಡಮಾನ್ ದ್ವೀಪ ಸಮೂಹದಲ್ಲಿ ನಕ್ಷತ್ರ ಹಣ್ಣಿನ ಬೆಳೆ ವಿಶೇಷವಾಗಿರುವುದರಿಂದಲೇ ಕೇರಳೀಯರು ನಕ್ಷತ್ರ ಹಣ್ಣು ಬೆಳೆಯುವಲ್ಲಿ ಮೊದಲಿಗರಾಗಿದ್ದಾರೆ. ಕೇರಳದಲ್ಲಿ ನಕ್ಷತ್ರ ಹಣ್ಣನ್ನು ಚಂಬಕ್ಕ ಎನ್ನಲಾಗುತ್ತದೆ.  


ಸಸ್ಯವಿಜ್ಞಾನದಲ್ಲಿ ನಕ್ಷತ್ರ ಹಣ್ಣು syzygium samarangense.



ಮಧು ಹಾಗೂ ಮೈತ್ರಿ ಸಂಕ್ರಾಂತಿಯ ತರುವಾಯ ಬೆಂಗಳೂರಿಗೆ ಹೊರಡುವಾಗ ಉಪ್ಪಿನಕಾಯಿ ಮುಗಿದಿತ್ತು.  ಮರದಲ್ಲಿ ಉಳಿದ ಹಣ್ಣುಗಳು ಕಾರು ಸೇರಿದವು.   ನನಗೂ ಸಮಧಾನ ಆಯ್ತು ಅನ್ನಿ.


" ಅಮ್ಮ,  ನಕ್ಷತ್ರ ಹಣ್ಣು ಬೆಂಗಳೂರು ಬರಬೇಕಾದ್ರೇ ತಿಂದು ಮುಗಿಯಿತು.  ಏನ್ ರುಚಿ ಗೊತ್ತಾ..  ಈ ಹಣ್ಣಿದ್ರೆ ಕುಡಿಯಲಿಕ್ಕೆ ನೀರೂ ಬೇಡ,   ಆಸರು ಆಗಲೇ ಇಲ್ಲ. " ಎಂದ ಮಧು.




Sunday, 17 January 2021

ಸಾದಾ ದೋಸೆ

 


ಮಧು ಊರಿಗೆ ಬಂದಾಗ ನನಗಾಗಿ ತಂದಂತಹ ಅಡುಗೆಯ ವಿವಿಧ ವಸ್ತುಗಳಲ್ಲಿ ದೋಸೆ ಹಿಟ್ಟು ಕೂಡಾ ಇತ್ತು.  ಯಾವುದೋ ಒಂದುಪ್ರತಿಷ್ಠಿತ ಬ್ರಾಂಡ್ ನೇಮ್ ಕೂಡಾ ಅದರದ್ದು.   " ಅಮ್ಮ,  ಈ ದ್ವಾಸೆ ಹಿಟ್ಟು ನಾವು ಹೋದ ನಂತರ ಉಪಯೋಗಿಸು..  ನನಗೆ ತಿನ್ನಲಿಕ್ಕೆ ನೀನೇ ಅರೆದು ಮಾಡ್ತೀಯಲ್ಲ ಅದನ್ನೇ ಮಾಡು.. "

"ಸರಿ ಬಿಡು.. "


ಅವನು ಹೋದ ನಂತರವೇ ನಾವು ಬೆಂಗಳೂರಿನ ದೋಸೆ ಹಿಟ್ಟಿನಿಂದ  ದೋಸೆ ಎರೆದು ತಿಂದೆವೂ ಅನ್ನಿ.   ಒಳ್ಳೆಯ ಬಣ್ಣವೂ,  ತೆಳ್ಳಗೆ ಪೇಪರ್ ದೋಸೆಯೂ ಆಯ್ತು.  ಆದರೆ ದೋಸೆ ಮಾತ್ರ ಹೊಟ್ಟೆ ತುಂಬಿದ ತೃಪ್ತಿ ಕೊಡದೇ ಮುಗಿಯಿತು.


 ಇದೇನು ಹೀಗೆ ಎಂದು ಅವನನ್ನೇ ಕೇಳಬೇಕಾಯ್ತು.

" ಅದೂ ವಿಷಯ ಅನ್ನು..  ಅದಕ್ಕೆ ಆಲೂ ಮಸಾಲಾ,  ಸಾಗೂ, ಕೋಕನಟ್ ಚಟ್ನಿ,  ದಪ್ಪ ಮೊಸರು  ಇದ್ರೇನೇ ಹೊಟ್ಟೆ ತುಂಬಿಸಿಕೊಡುತ್ತೆ.. " ಅಂದ ಮಗ.

" ದಿನಾ ಆಲೂ ಬಾಜಿ ಮಾಡಬೇಕೂ ಅನ್ನು,   ನಮ್ಮ ಉದ್ದಿನ ದೋಸೆಗೆ ಈ ರಗಳೆಯಿಲ್ಲ.  ಕಾಯಿ ಚಟ್ಣಿ,  ಬೆಲ್ಲದ ಪಾಕ ಇದ್ರೆ ಧಾರಾಳ ಸಾಕು. "

“ ನಮ್ಮ ಸಿಂಪಲ್ ದೋಸೆ ಮಾಡೂದು ಹೇಗೆ? “


" ಇಬ್ಬರಿಗೆ ಒಂದು ಲೋಟ ಅಕ್ಕಿ ಸಾಕು.  ಬೆಳ್ತಿಗೆ ಅಕ್ಕಿ ಆದರಾಯಿತು."

" ಉದ್ದು ಎಷ್ಟೂ? "

"ಅರ್ಧ ಲೋಟ ಇರಲಿ,  ಹತ್ತು ಕಾಳು ಮೆಂತೆಯೂ ಇರಲಿ,  ದೋಸೆಗೆ ಒಳ್ಳೆಯ ಕಲರ್ ಬರುತ್ತೆ. "


"ಅಮ್ಮ,  ಈಗ ವಿಷಯ ಏನೂ ಅಂದರೆ ಇಲ್ಲಿ ವಿಪರೀತ ಚಳಿ,   ದೋಸೆ ಹಿಟ್ಟು ಹುಳಿ ಬರುವ ಟೆಕ್ನಿಕ್ ಹೇಳಿ ಕೊಡು. "


" ಹಾಗಂತೀಯ,  ಅಕ್ಕಿಗೆ ಕುದಿಯುವ ನೀರು ಎರೆದು ಮುಚ್ಚಿ ಇಡು.  ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ಮೂರೂ ನಾಲಕ್ಕು ಬಾರಿ ತೊಳೆದು ಅರೆಯಲಿಕ್ಕೆ ಉಪಯೋಗಿಸು. "


“ಅಮ್ಮ, ನೀರು ಕುದೀತಾ ಇದೆ, ಅದಕ್ಕೇ ಅಕ್ಕಿ ಹಾಕಿ ಬಿಡ್ತೇನೆ.."

" ಹಾಗೆ ಮಾಡಬೇಡ,  ಕುದಿಯುವ ನೀರನ್ನು ಅಕ್ಕಿಗೆ ಎರೆ..  "


 " ಹಾಗಾದ್ರೆ ಉದ್ದು ಕೂಡಾ ಬಿಸಿ ನೀರಿಗೆ ಹಾಕ್ಲಾ? "

"ಬೇಡ,  ಉದ್ದನ್ನು ತಣ್ಣೀರಿನಲ್ಲಿ ಒಂದೇ ಬಾರಿ ತೊಳೆದು ಪುನಃ ನೀರೆರೆದು ಇಡ್ತೀಯಲ್ಲ, ಆ ನೀರನ್ನು ಚೆಲ್ಲಬಾರದು.  ಅರೆಯಲಿಕ್ಕೆ ಉದ್ದಿನ ನೀರು ಸಾಕು.  ಉದ್ದು ಅರ್ಧ ಗಂಟೆ ನೆನೆದರೆ ಸಾಕು. "


" ಈಗಲೇ ಗಂಟೆ ಏಳು ಆಯ್ತು.  ಇನ್ನು ಅಕ್ಕಿ ಉದ್ದು ... "

" ಚಿಂತೆಯಿಲ್ಲ.  ನಾನು ಹೇಳಿದಷ್ಟು ಮಾಡಿ ಎಂಟು ಗಂಟೆಯೊಳಗೆ ಅರೆದಿಡು.  ನುಣ್ಣಗೆ ಆಗಬೇಕು.  ಉಪ್ಪು ಹಾಕಿ ಬೆಚ್ಚಗಿನ ಜಾಗದಲ್ಲಿ ಇಡು.   ಫ್ರಿಜ್ ಒಳಗೆ ಇಡೂದಲ್ಲ ತಿಳೀತಾ. "


"ಸಂಜೆ ನಾಲ್ಕು ಗಂಟೆಗೇ ಅರೆದಿಟ್ಟರೆ ಉತ್ತಮ.  ಹೇಗೂ ವರ್ಕ್ ಫ್ರಂ ಹೋಮ್ ಅಲ್ವೇ? "

" ಸರಿ, ಮುಂದಿನ ಸಾರಿ ಹಾಗೇ ಮಾಡ್ತೇನೆ. "


ಮಾರನೇ ದಿನ ಮಂಜಾನೆ ನಾನು ತಿಂಡಿ ತಿನ್ನುತ್ತಿರಬೇಕಾದರೆ ವಾಟ್ಸಪ್ ನಲ್ಲಿ  ಮಧು ಮಾಡಿದಂತಹ ದೋಸೆಯ ಚಿತ್ರಗಳು ಬಂದುವು.

" ವಾ... ಆಲೂ ಬಾಜಿಯೂ ಮಾಡಿದ್ದೀ.."

" ಬಾಜಿ ಮೈತ್ರಿ ಮಾಡಿದ್ಳು..  ನಮ್ದು ಮಸಾಲೆ ದೋಸೆಯೇ ಆಗ್ಹೋಯ್ತು..  ಹಹ...  ಸಂಜೆಗೂ ನಾಲ್ಕೈದು ದೋಸೆ ಆಗುವಷ್ಟು ಹಿಟ್ಟುಉಳಿದಿದೆ. "




 



Monday, 4 January 2021

ಪೈನಾಪಲ್ ಉಪ್ಪಿನಕಾಯಿ

 



ಒಂದು
 ಪುಟ್ಟ ಚಮಚ ಮೆಂತೆ, 

ಕಡ್ಲೆಕಾಳಿನಷ್ಟು ಇಂಗು,  

ಹಸಿ ಅರಸಿನದ ನಾಲ್ಕಾರು ಚೂರುಗಳು

ತುಸು ಎಣ್ಣೆ ಪಸೆಯಲ್ಲಿ ಹುರಿಯಲು ಇಡುವುದು

ಒಂದು ದೊಡ್ಡ ಚಮಚ ಸಾಸಿವೆಯನ್ನೂ ಹಾಕಿ 

ಪರಿಮಳ ಬರುತ್ತ ಇದ್ದಂತೆ ಒಂದು ಪುಟ್ಟ ಚಮಚ ಜೀರಿಗೆ ಬೀಳಲಿ.

ಕೊನೆಗೆ ನಾಲ್ಕೈದು ಕರಿಬೇವಿನೆಲೆ ಹಾಕಿ ಸ್ಟವ್ ಆರಿಸಿ.


ಈ ಸಾಮಗ್ರಿಗಳನ್ನು ಮಿಕ್ಸಿಯ ಪುಟ್ಟ ಜಾರಿನಲ್ಲಿ ಹುಡಿ ಮಾಡಿಕೊಳ್ಳಲು ಕಷ್ಟವೇನಿಲ್ಲ.

ಜಾರ್ ಶುಭ್ರವಾಗಿಯೂ ಮಡಿ ಮಡಿಯಾಗಿ ಇರಬೇಕಾದ್ದು ಅವಶ್ಯ.


ಮೆಣಸು ಹಾಕುವುದಕ್ಕಿಲ್ವೇ...

ಎಲ್ಲಾದ್ರೂ ಉಂಟೇ..  ಸಾಸಿವೆ ಅಳೆದ ಚಮಚದಲ್ಲಿ ಒಂದೂವರೆ ಚಮಚ ಮೆಣಸಿನ ಹುಡಿ ಅಳೆಯಲ್ಪಡಲಿ.

ಅದನ್ನೂ ಉಳಿದ ಸಾಮಗ್ರಿಗಳೊಡನೆ ಮಿಕ್ಸಿಯಲ್ಲಿ ತಿರುಗಿಸುವುದು.

ಈಗ ಉಪ್ಪಿನಕಾಯಿ ಮಸಾಲೆ ಸಿದ್ಧ.


ಉಪ್ಪೂ?

ರುಚಿಗೆ ತಕ್ಕಂತೆ ಉಪ್ಪು ಎಂದು ಬರೆದರೆ ತಪ್ಪಾದೀತು,   ಮೆಣಸಿನ ಖಾರಕ್ಕೆ ಹಾಗೂ ಪೈನಾಪಲ್ ಹುಳಿಗೆ ಹೊಂದಿಕೆಯಾಗುವಂತೆ ಉಪ್ಪು ಹಾಕಬೇಕಾಗುತ್ತದೆ.

ಮೊದಲಾಗಿ ಒಂದೂವರೆ ಚಮಚ ಹುಡಿಯುಪ್ಪು ಮಸಾಲೆಗೆ ಬೆರೆಸುವುದು.


ಪೈನಾಪಲ್ ಹೋಳುಗಳನ್ನು ಚಿಕ್ಕದಾಗಿ ಕತ್ತರಿಸಿ.

ನಾನ್ ಸ್ಟಿಕ್ ಬಾಣಲೆಗೆ ಹಾಕಿಟ್ಟು ಒಲೆಯ ಮೇಲಿಟ್ಟು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಬಿಸಿಯೇರಲು ಬಿಡಿ.  ಬೇಯಬೇಕಿಲ್ಲ.

ನಂತರ ಕೆಳಗಿಳಿಸಿ,  ಸಿದ್ಧಗೊಳಿಸಿದ ಉಪ್ಪಿನಕಾಯಿ ಮಸಾಲೆ ಬೆರೆಸಿ.

 

ಉಪ್ಪು ಇನ್ನೂ ಬೇಕೆನಿಸಿದರೆ ಈಗ ಸೇರಿಸುವುದು.

ರುಚಿಕರವಾದ ಪೈನಾಪಲ್ ಉಪ್ಪಿನಕಾಯಿ ತಿನ್ನಲು ಸಿದ್ಧವಾಗಿದೆ.


ಅಂದ ಹಾಗೆ ಈ ಉಪ್ಪಿನಕಾಯಿ ಮಾಡಿದ್ಯಾಕೇ?  ಹಾಗೇನೇ ತಿನ್ನಬಹುದಿತ್ತಲ್ಲ?


ಅದೇ ವಿಷಯ.  ಮಕ್ಕಳ ಬಳಗ ಬೆಂಗಳೂರಿನಿಂದ ಬಂದಿದೆ.  ಹೊರ ಚಾವಡಿ ಆಫೀಸ್ ರೂಂ ಆಗಿ ಪರಿವರ್ತಿತವಾಗಿದೆ.  ಮನೆಯೇ ಕಾರ್ಯಾಲಯ ಅನ್ನಿ.  ತರಕಾರಿಗಳೂ ಹಣ್ಣುಗಳೂ ಬರುತ್ತಲಿವೆ.   ಹೀಗೆ ಬಂದ ಪೈನಾಪಲ್ ಯಾರಿಗೂ ರುಚಿಸದೆ ಹೋಯಿತು.  ಎಷ್ಟಾದರೂ ಅಂಗಡಿ ಸರಕು...


ಯಾರಿಗೂ ಬೇಡವಾದ ಹತ್ತೂ ಹನ್ನೆರಡು ಪೈನಾಪಲ್ ಹೋಳುಗಳು ಅಡುಗೆಯ ರಸಾಯನಶಾಸ್ತ್ರದಲ್ಲಿ ಈ ರೂಪಕ್ಕಿಳಿದಿದೆ.  ಎಲ್ಲರಮನವನ್ನೂ ಗೆದ್ದಿದೆ.