Pages

Ads 468x60px

Sunday, 5 September 2021

ಕಡಲೆ ಉಸುಲಿ


 


ಏನಾಗಿತ್ತೂ ಅಂದರೆ ರೇಷನ್ ಶಾಪ್ ಉಚಿತ ಕಿಟ್ ಸವಲತ್ತುಗಳಲ್ಲಿ ಕಡಲೆಕಾಳು ಹಾಗೇ ಉಳಿದಿದೆ.   ಮೊದಲಾಗಿದ್ದರೆ ಇಂತಹ ಉಳಿಕೆ ಸಾಮಗ್ರಿಗಳು ಕೆಲಸಗಿತ್ತಿಯರ ಪಾಲು.   ಕೊರೋನಾ ಕಾರಣ ಹಾಗೂ ನಮ್ಮ ಕೇರಳ ರಾಜ್ಯದ ಸರ್ವಸಮಾನತೆಯ ಧರ್ಮದಿಂದಾಗಿ ಕಾರ್ಮಿಕರೇ ಇಲ್ಲವಾಗಿದ್ದಾರೆ.  ಹೋಗಲಿ ನಮಗೇಕೆ ಬೇಡದ ರಗಳೆ,  ಈಗ ಕಡಲೆಕಾಳು ಅಡುಗೆಮನೆಯಲ್ಲಿ ಯಾವ ರೂಪಾಂತರ ಹೊಂದಿತೆಂದು ನೋಡೋಣ.


ಇಂತಹ ಕಾಳುಗಳ ಅಡುಗೆಯೆಂದರೆ ದಿನ ಮುಂಚಿತವಾಗಿ ನೀರೆರೆದು ಇಡಬೇಕಾಗಿತ್ತು.  ನೆನಪಾಗದೇ ಹೋಯಿತು,  ಈಗ ನನ್ನ ಆಸಕ್ತಿಯ ತಾಣ ಫೇಸ್ ಬುಕ್ ಇತ್ಯಾದಿ ಮಾತ್ರವಲ್ಲದೆ ಕ್ಲಬ್ ಹೌಸ್ ಕೂಡಾ ಸೇರಿದೆ.  ಕ್ಲಬ್ ಚಟುವಟಿಕೆಗಳ ಕುರಿತು ಇನ್ನೊಮ್ಮೆ ಬರೆಯಲಿದ್ದೇನೆ.


ಕಡಲೆಕಾಳು ನೆನೆಯಬೇಕಾಗಿತ್ತು,  ಈಗ ರೈಸ್ ಕುಕ್ಕರಲ್ಲಿ ನೀರು ಬಿಸಿ ಬಿಸಿಯಾಗಿ ಇರುವುದರಿಂದ  ಒಂದು ಲೋಟ ಕಡಲೆಕಾಳನ್ನು ತೊಳೆದು ಹಾಕಿ ಮುಚ್ಚಿ ಇಡಲಾಯಿತು.  ಬೇಯದಂತೆ ಪ್ಲಗ್ ತೆಗೆಯಲಾಯಿತು.  ಇಂಡಕ್ಷನ್ ಸ್ಟವ್ ಹಾಳಾಗಿದೆ ಕಣ್ರೀ,  ಅಗತ್ಯಕ್ಕಿರಲಿ ಎಂದು ನೀರು ಕುದಿಸಲು ಈ ರೈಸ್ ಕುಕ್ಕರ್,   ಇಲ್ಲಾಂದ್ರೆ ಗ್ಯಾಸ್ ನಾಲ್ಕೇ ದಿನದಲ್ಲಿ ಮುಗಿದೀತು.


ಅಡುಗೆ ಆಯ್ತು,  ಊಟವೂ ಮುಗಿಯಿತು,  ಒಂದರೆ ತಾಸು ಮಲಗಿ ಎದ್ದೂ ಆಯ್ತು.   ಸಂಜೆಗೇನು ತಿಂಡಿ ಎಂದು ಚಿಂತಿಸುತ್ತಲೇ ಒಳಬಂದಾಗ ರೈಸ್ ಕುಕ್ಕರ್ ಒಳಗಿದ್ದ ಕಡಲೆಕಾಳು ಕೈ ಬೀಸಿ ಕರೆಯಿತು.


ಮುಚ್ಚಳ ತೆರೆದಾಗ,  ಬಿಸಿ ನೀರಿನಲ್ಲಿ ಮಿಂದ ಕಾಳುಗಳು ಹಿಗ್ಗಿ ಉಬ್ಬಿವೆ,  ಪರವಾಯಿಲ್ಲ.  ನೀರು ಸಹಿತವಾಗಿ ಕಡಲೆಕಾಳು ಕುಕ್ಕರ್ ಸೇರಿ,  ಗ್ಯಾಸ್ ಒಲೆಯೇರಿ,  ಮೂರು ಸೀಟಿ ಹಾಕಿಸ್ಕೊಂಡಿತು,  ಆರಲಿ.    ಅಂದ ಹಾಗೆ ರುಚಿಗೆ ಬೇಕಾದ ಉಪ್ಪು ಹಾಕಿಯೇ ಬೇಯಿಸುವುದು.


ಒಂದು ದೊಡ್ಡ ನೀರುಳ್ಳಿ ಹೆಚ್ಚಿ ಇಡುವುದು.

ಪಲ್ಯಕ್ಕಾಗಿ ಕಾಯಿ ತುರಿಯುವಾಗ ಸ್ವಲ್ಪ ತೆಂಗಿನ ತುರಿ ತೆಗೆದಿರಿಸಿದ್ದು ಒಳ್ಳೆಯದೇ ಆಯಿತು.


ಕುಕ್ಕರ್ ತಣಿದಿದೆ.  ಕಾಳು ಬೆಂದಿದೆ.

ಒಂದೊಂದೇ ಕಾಳು ಬಾಯಿಗೆಸೆದು ತಿನ್ನಲು ಮಕ್ಕಳು ಮನೆಯಲ್ಲಿಲ್ಲ,  ನಮ್ಮ ತಿನಿಸು ಹೇಗಿರಬೇಕು?


ಮಿಕ್ಸಿಯ ಪುಟ್ಟ ಜಾರ್ ಒಳಗೆ ಮೂರು ಸೌಟು ಕಡಲೆಕಾಳು ತುಂಬಿ,  ಒಂದೇ ಬಾರಿ ಟೊರ್ರ್ ಅನ್ನಿಸಿ,

ಅಂತೆಯೇ ನೀರುಳ್ಳಿ ಚೂರುಗಳೂ ಮಿಕ್ಸಿಯಲ್ಲಿ ಇನ್ನಷ್ಟು ಚಿಕ್ಕ ಚೂರುಗಳಾಗಿ,

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,

ಸಾಸಿವೆ ಸಿಡಿಸಿ,

ಕರಿಬೇವು ಬೀಳಿಸಿ,

ನೀರುಳ್ಳಿ, ಕಾಯಿತುರಿ ಬೀಳಿಸಿ,  ಸೌಟಾಡಿಸಿ,

ಚಿಟಿಕೆ ಅರಸಿಣ,

ರುಚಿಗೆ ಸಕ್ಕರೆ ಬೆರೆಸಿ,

ಕಡಲೆಕಾಳಿನ ಮುದ್ದೆಯನ್ನು ಸೇರಿಸಿ.

ಇಲ್ಲಿಗೆ ನಮ್ಮಈ ಸಂಜೆಯ ತಿನಿಸು ಆಗಿಯೇ ಹೋಯ್ತು.

ತಟ್ಟೆಗೆ ಹಾಕಿಕೊಂಡು ಚಹಾಪಾನದೊಂದಿಗೆ ಉಸುಲಿ ತಿಂದು ಮುಗಿಯಿತು.


ಇಂತಹ ಕಾಳುಗಳ ಸೇವನೆ ಆರೋಗ್ಯ ದೃಷ್ಟಿಯಿಂದಲೂ ಉತ್ತಮ.   ವೈದ್ಯರು ಕೊಡುವ ಮಲ್ಟಿ ವಿಟಮಿನ್ ಟಾನಿಕ್ ಇದರ ಮುಂದೆ ಏನೂ ಅಲ್ಲ.  ಪ್ರೊಟೀನ್ ಸಮೃದ್ಧಿಯಿಂದ ಕೂಡಿರುವ ಕಾಳುಗಳನ್ನು ದಿನವೂ ಸೇವಿಸುತ್ತಲಿರಬೇಕು,  ರೋಗರುಜಿನಗಳು ಕಣ್ಮುಂದೆ ಹಾಯದಂತೆ ಬದುಕಲು ಕಲಿಯೋಣ.


ಇದೇ ಮಾದರಿಯಲ್ಲಿ ಹಾಗೇನೇ ತಿನ್ನಲು ಕಷ್ಟವೆನಿಸುವ ಇನ್ನಿತರ ಕಾಳುಗಳ ಉಸುಲಿ ಮಾಡಬಹುದಾಗಿದೆ.

ನಿಮ್ಮ ರುಚಿಯ ಆಯ್ಕೆಗನುಸಾರ ಮಸಾಲೆ ಪುಡಿಗಳನ್ನು ಹಾಕಿರಿ.


ಬೇಯಿಸಿದ ಎಲ್ಲ ಕಡಲೆಕಾಳುಗಳು ಉಸುಲಿಯಾಗಿ ಮಾರ್ಪಟ್ಟಿಲ್ಲ,  ಉಳಿದ ಕಾಳುಗಳು ರಾತ್ರಿಯ ಫಳಾರಕ್ಕೆ ಪರೋಟಾ ಆಗಿವೆ.   ನನ್ನ ರಾತ್ರಿಯ ರೊಟ್ಟಿ ಹೇಗಾಯ್ತು?


ಚಪಾತಿ ಹಿಟ್ಟು ಎಂದಿನಂತೆ ಮಾಡಿ ಇಡುವುದು.

ಕಡಲೆಕಾಳುಗಳು ಮಿಕ್ಸಿಯಲ್ಲಿ ಹುಡಿ ಆಗಲಿ.

ಮಧು ಬೆಂಗಳೂರಿನಿಂದ ತಂದಿದ್ದ ಆರ್ಗಾನಿಕ್ ಬೆಲ್ಲದ ಹುಡಿ ಇದ್ದಿತು.  ಎರಡು ಚಮಚ ಬೆಲ್ಲದ ಹುಡಿಯನ್ನು ಬೆರೆಸಿ, ನನಗೆ ಬೇಕಿದ್ದ ಎರಡು ಉಂಡೆ, ಅಂದರೆ ಹೂರಣ ಮಾಡಿಕೊಳ್ಳಲಾಯಿತು.  ಈ ಹೂರಣ ತುಂಬಿ ಲಟ್ಟಿಸಿ,  ಬೆಣ್ಣೆ ಹಾಕಿ ರೊಟ್ಟಿ ಬೇಯಿಸಲಾಯಿತು.


ತಾಜಾ ತುಪ್ಪ ಮೇಲಿನಿಂದ ಎರೆದು ತಿಂದಾಯ್ತು.

ಅರೆ!  ಇನ್ನೂ ಸ್ವಲ್ಪ ಬೆಲ್ಲ ಹಾಕಿರುತ್ತಿದ್ದರೆ ಹೋಳಿಗೆ ಯಾ ಒಬ್ಬಟ್ಟು ಅನ್ನಬಹುದಾಗಿತ್ತು ಕಣ್ರೀ...  





Saturday, 28 August 2021

ಬಣ್ಣದ ಜಾಮ್





  

ತಿಂಗಳ ಹಿಂದೆ ಮನೆಹಿತ್ತಲು ಸ್ವಚ್ಛತಾ ಅಭಿಯಾನದಲ್ಲಿ ಎರಡು ಅನಾನಸ್ ಸಿಕ್ಕಿತ್ತು.   ಕೊನೆಯ ಹಣ್ಣುಗಳು ನನ್ನ ನಿರ್ಲಕ್ಷ್ಯದಿಂದ ಹಾಗೇ ಬಿದ್ದುಕೊಂಡಿವೆ.  ಇವತ್ತು ಅಡುಗೆ ವ್ಯವಹಾರ ಬೇಗನೆ  ಮುಗಿಯಿತು.  ಅನ್ನ, ದಾಲ್, ಪಲ್ಯ ಇಷ್ಟೇ ಮಾಡಿದ್ದು.   ಈ ಪೈನಾಪಲ್ ಯೋಗ್ಯತೆ ಹೇಗಿದೆಯೆಂದು ನೋಡೋಣ.


ಮೊದಲಾಗಿ ಅದರ ಕಿರೀಟ ತೆಗೆದಾಯ್ತು,  ಚೆನ್ನಾಗಿಯೇ ಇದೆಯೆಂಬ ಸೂಚನೆ ದೊರೆಯಿತು.   ಮೆಟ್ಟುಕತ್ತಿಯಲ್ಲಿ ಕತ್ತರಿಸಿ ಹೋಳು ಮಾಡಿದ್ದೂ ಆಯ್ತು.  ಥಟ್ ಎಂದು ಹೊಸ ಐಡಿಯಾ ಬಂದಿತು.   ಪಲ್ಯಕ್ಕಾಗಿ ಕತ್ತರಿಸಿದ ಬೀಟ್ರೂಟು ಸ್ವಲ್ಪ ಉಳಿದಿದೆ,  ಅದನ್ನೂ ಇದನ್ನೂ ಸೇರಿಸಿ ಜಾಮ್ ಮಾಡಬಹುದಲ್ಲ...


ಇನ್ನು ತಡ ಮಾಡುವುದಕ್ಕಿಲ್ಲ.  ಪೈನಾಪಲ್ ಹೋಳುಗಳೊಂದಿಗೆ ನಾಲ್ಕಾರು ಚಮಚದಷ್ಟು ಬೀಟ್ರೂಟು ಮಿಕ್ಸಿಯಲ್ಲಿ ರೊಂಯ್ರೊಂಯ್ ಎಂದು ತಿರುಗಲಾಗಿ ಕೆಂಪು ವರ್ಣದ ದ್ರಾವಣವಾಗಿ...


ಸೋಸಿದರೆ ಉತ್ತಮ,  ಜಾಲರಿ ತಟ್ಟೆಗಳಲ್ಲಿ ರಸ ಕೆಳಗಿಳಿಯಲಾರದು.   ನಾನು ತೆಂಗಿನ ಹಾಲು ಸೋಸುವುದು ಅಡುಗೆ ಗಣಪಣ್ಣ ಹೇಳಿಕೊಟ್ಟ ವಿಧಾನದಲ್ಲಿ.  ಇಲ್ಲಿಯೂ ಅದೇ ತಂತ್ರ ಉತ್ತಮ.


ಸೊಳ್ಳೆ ಪರದೆಯಂತಹ ನೈಲಾನ್ ಚೀಲ,  " ಕಾಯಿಹಾಲು ಹಿಂಡಲೂ ಸುಲಭ,  ತೊಳೆದು ಒಣಗಿಸಲೂ ರಗಳೆಯಿಲ್ಲ. " ಅಂದಿದ್ದ ಗಣಪಣ್ಣ.   ದೊಡ್ಡ ರಂಧ್ರಗಳಿರುವ ಕಾಟನ್ ಬಟ್ಟೆಯೂ ಆದೀತು.   ಒಟ್ಟಿನಲ್ಲಿ ರಸ ಸುಸೂತ್ರವಾಗಿ ಸಂಗ್ರಹಿಸಲು ಬಂದರಾಯಿತು.


ರಸ ತೆಗೆದಿರಿಸಿ ಚರಟ ಬೇರ್ಪಡಿಸಿ ಆಯಿತು.  ಚರಟ ಹೆಚ್ಚೇನಿಲ್ಲ,  ಪುಟ್ಟ ಲಿಂಬೇ ಗಾತ್ರದಷ್ಟೇ ಸಿಕ್ಕಿದ್ದು.

ಇನ್ನು ಅಳೆಯುವುದು,  ಎರಡು ಲೋಟ ರಸ ದಕ್ಕಿದೆ.  

ಎರಡು ಲೋಟ ಸಕ್ಕರೆ ಅಳೆಯಿರಿ.  

ದಪ್ಪ ತಳದ ಪಾತ್ರೆಗೆ ಹಾಕಿಟ್ಟು,  ಗ್ಯಾಸ್ ಉರಿಯ ಮೇಲಿರಿಸುವುದು,  ಮರದ ಸಟ್ಟುಗದಲ್ಲಿ ಕೈಯಾಡಿಸಿ,

ಊಟದ ಸಮಯ,  ಮಂದಾಗ್ನಿಯಲ್ಲಿರಲಿ.

ಊಟ ಮುಗಿಸಿ,  ಪಾತ್ರೆಪರಡಿಗಳನ್ನು ತೊಳೆದಿರಿಸಿ,  ಟೇಬಲ್ ಒರೆಸಿ..


ಇನ್ನೇನು ಮಲಗುವ ಸಮಯ,  ನನ್ನ ಜಾಮ್ ಏನಾಯಿತು ಎಂದು ನೋಡುವುದಕ್ಕಿಲ್ಲವೇ,  ಆಹ... ಜೇನಿನಂತಹ ದ್ರಾವಣ.  ಸ್ಟವ್ ಆರಿಸುವುದು ಸೂಕ್ತ.  ಆರಿದ ನಂತರ ಜಾಡಿಯಲ್ಲಿ ತುಂಬಿಸೋಣ.


ಮನೆಯಲ್ಲಿ ಮಕ್ಕಳ ಪರಿವಾರ ಇರುತ್ತಿದ್ದರೆ ಎರಡೇ ದಿನದಲ್ಲಿ ಖಾಲಿ ಮಾಡ್ತಿದ್ರು.   ಏನು ಮಾಡೋಣ,  ಎಲ್ಲರಿಗೂ ಫೋಟೊ ಕಳಿಸಿದ್ದಾಯಿತು.


ಇನ್ನೇನು ಕೃಷ್ಣಜನ್ಮಾಷ್ಟಮಿ ಬರಲಿದೆ,   ಬ್ಲಾಗ್ ಓದುಗರಿಗೆ ಬಣ್ಣದ ಜಾಮ್ ವತಿಯಿಂದ ಶುಭಾಶಯಗಳು.






Saturday, 21 August 2021

ಓಣಂ ಪಾಯಸ

 



ಶ್ರಾವಣದ ಮೊದಲ ಹಬ್ಬ,  ನಾಗಪಂಚಮಿ.  ಹಬ್ಬದ ದಿನದಂದು ಪಾಯಸ ಇರಲೇಬೇಕು,  ಮಗನೂ ಮನೆಯಲ್ಲಿರುವಾಗ,  ಓಣಂಹಬ್ಬಕ್ಕಾಗಿ ರೇಷನ್ ಕಿಟ್ ಕೂಡಾ ತಂದು ಕೊಟ್ಟಿದ್ದಾನೆ. ಹಬ್ಬದ ಸಲುವಾಗಿ ರೇಷನ್ ಸಾಮಗ್ರಿಗಳು ಏನೇನಿವೆ?

ಸಕ್ಕರೆ ಒಂದು ಕಿಲೊ ಬಂದಿದೆ,  ನಾವು ಪಾಯಸಕ್ಕೆ ಬೆಲ್ಲ ಬಳಸುವವರು.

ಒಂದು ಕಿಲೋ ಪಾಯಸಕ್ಕೆಂದೇ ಕೆಂಪು ಸಣ್ಣಕ್ಕಿ ಬಂದಿದೆ,  ಇದನ್ನೇ ಪಾಯಸ ಮಾಡಿ ನೋಡಿದ್ರಾದೀತು.

ಗೇರುಬೀಜ ಒಂದು ಪ್ಯಾಕೆಟ್ಟು,

ಏಲಕ್ಕಿ ಒಂದು ಪ್ಯಾಕ್.  ಈ ಏಲಕ್ಕಿಯನ್ನು ಮುಗಿಸಲಿಕ್ಕೆ ದಿನಾ ಬಿಸಿನೀರನ್ನೇ ಕುಡಿಯುವವರಿದ್ದರೆ ಜಜ್ಜಿ ಹಾಕಬಹುದಿತ್ತು.  ನಾವು ಸುರಂಗದ ನೀರನ್ನು ಹಾಗೇನೇ ಕುಡಿಯುವವರಾಗಿದ್ದೇವೆ.

ಮತ್ತೇನಪಾ ಅಂದರೆ ಶರ್ಕರವರಟಿ ಇದ್ದಿತು,  ಅದೂ ಒಂದು ಪ್ಯಾಕ್.  " ನಂಗೆ ತುಂಬ ಇಷ್ಟ.. " ಮಧು ಅತ್ತ ಇತ್ತ ಹೋಗುತ್ತ ಬರುತ್ತ ತಿಂದು ಮುಗಿಸಿದ.  ಶರ್ಕರವರಟಿ ಅಂದರೆ ನೇಂದ್ರ ಬಾಳೆಕಾಯಿಯ ಸಿಹಿ ಚಿಪ್ಸ್ ಎಂದು ತಿಳಿಯಿರಿ.

ಒಂದು ಪುಟ್ಟ ಜಾಡಿ ತುಪ್ಪವೂ ಬಂದಿದೆ.  ನಾಲ್ಕು ದಿನಕ್ಕೊಂದಾವರ್ತಿ ಬೆಣ್ಣೆ ಕಾಯಿಸಿ ತುಪ್ಪ ಮಾಡಿಕೊಳ್ಳುವವರು ನಾವಾದರೂ, ಪಾಯಸದ ಗೋಡಂಬಿ ದ್ರಾಕ್ಷಿಗಳನ್ನು ಇದೇ ತುಪ್ಪದಲ್ಲಿ ಹುರಿಯೋಣ.


ಈಗ ಪಾಯಸದ ಸಂಗತಿ ಹೇಗೆಂದು ತಿಳಿಯೋಣ.

ರೇಷನ್ ಏಲಕ್ಕಿ ಪ್ಯಾಕ್ ಬಿಡಿಸಬೇಕೆಂದಿಲ್ಲ,  ಅಡುಗೆಮನೆಯ ಡಬ್ಬದಲ್ಲಿ ಏಲಕ್ಕಿ ಇರುವಾಗ,  ನಾವು ಅಡಿಕೆ ಬೆಳೆಗಾರರೂ ಆಗಿರುವಾಗ ತೋಟದ ಮಿಶ್ರಬೆಳೆಯಾಗಿ ಸಾಕಷ್ಟು ಏಲಕ್ಕಿಯೂ ಸಿಗುತ್ತದೆ.   ಈಗ ಕೊರೋನಾ ಕಾರಣದಿಂದ ತೋಟದಲ್ಲಿ ಕಾರ್ಮಿಕರಿಲ್ಲ.   ಏಲಕ್ಕಿ ತೋಟದಲ್ಲಿ ಇದ್ದರೂ ತರಲು ಜನವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಹಸಿ ತೆಂಗಿನಕಾಯಿ ತುರಿದು, ಅರೆದು,  ಅರೆಯುವಾಗಲೇ ಸುವಾಸನೆ ಬರುವಷ್ಟು ಏಲಕ್ಕಿ ಹಾಕಿದರೆ ಉತ್ತಮ.   ದಪ್ಪ ಕಾಯಿಹಾಲನ್ನು ತೆಗೆದು ಇರಿಸುವುದು.   ಇದನ್ನು ಕೊನೆಯ ಹಂತದಲ್ಲಿ ಪಾಯಸಕ್ಕೆ ಎರೆಯುವುದಾಗಿದೆ.

ಕಾಯಿ ಚರಟಕ್ಕೆ ಪುನಃ ನೀರೆರೆದು ಹಾಲು ತೆಗೆಯಿರಿ.  ಇದು ತೆಳ್ಳಗಿನ ಕಾಯಿಹಾಲು.


ಪಾಯಸದ ಕೆಂಪಕ್ಕಿ ತೊಳೆಯಿರಿ.  ಒಂದು ಲೋಟ ಅಕ್ಕಿಗೆ ಅಂದಾಜು ನಾಲ್ಕು ಲೋಟ ನೀರೆರೆದು ಕುಕ್ಕರಿನಲ್ಲಿ ಬೇಯಿಸಿ,  ಮೂರುಸೀಟಿ ಹಾಕಲಿ.   ಅಕ್ಕಿ ಮೃದುವಾಗಿ ಬೆಂದರಾಯಿತು.

ಒತ್ತಡ ಇಳಿದ ನಂತರ ಮುಚ್ಚಳ ತೆರೆದು ಒಂದು ಅಚ್ಚು ಬೆಲ್ಲ ಹಾಕಿರಿ.  ಪುಡಿ ಮಾಡಿ ಹಾಕಿದ್ರೆ ಉತ್ತಮ.  ಎರಡು ಉಪ್ಪಿನ ಕಲ್ಲೂಬೀಳಲಿ.  ಬೆಲ್ಲ ನಿಧಾನ ಗತಿಯಲ್ಲಿ ಕರಗುತ್ತಿರಲಿ.  ತೆಳ್ಳಗಿನ ಕಾಯಿಹಾಲು ಈಗ ಎರೆಯಿರಿ.

ತುಪ್ಪದಲ್ಲಿ ಗೇರುಬೀಜ ಹೊಂಬಣ್ಣ ಬರುವ ತನಕ ಹುರಿಯಿರಿ.  ಮೇಲಿನಿಂದ ಒಣದ್ರಾಕ್ಷಿ ಉದುರಿಸಿ.

ಏಲಕ್ಕಿ ದ್ರಾಕ್ಷಿ ಗೇರುಬೀಜಗಳನ್ನು ಇಷ್ಟೇ ಹಾಕಬೇಕು ಎಂಬ ಲೆಕ್ಕಾಚಾರ ನಡೆಯದು.   ಇದ್ದಂತೆ ಬಳಸಿದರಾಯಿತು.

  ಹಿತ್ತಲಲ್ಲಿ ಅರಸಿನದ ಗಿಡ ಇದೆಯಾದರೆ ಒಂದು ಎಲೆ ಚಿವುಟಿ ತನ್ನಿ,  ಕುದಿಯುವ ಪಾಯಸಕ್ಕೆ ಹಾಕಿದರೆ ಅದೂ ಒಂದು ಸೊಗಸಾದ ಸುವಾಸನೆಯನ್ನು ಪಾಯಸಕ್ಕೆ ಕೊಡಬಲ್ಲುದು.   ಅಕ್ಕಿ ಪಾಯಸಕ್ಕೆ ಮಾತ್ರ ಅರಸಿನ ಎಲೆ ಹಾಕುವ ವಾಡಿಕೆ.


ಬೆಲ್ಲ ಕರಗಿ ಪಾಯಸದೊಂದಿಗೆ ಬೆರೆತಾಗ ಬೆಲ್ಲವೂ ಪರಿಮಳ ಬೀರಿತೇ,  ದಪ್ಪ ಕಾಯಿ ಹಾಲು ಎರೆಯುವ ಸಮಯ,  ಎರೆಯಿರಿ.  

ಅರೆಯುವಾಗ ಏಲಕ್ಕಿ ಹಾಕಲಿಲ್ಲವೇ,  ಈಗ ಹುಡಿ ಮಾಡಿ ಉದುರಿಸಿ.

ದ್ರಾಕ್ಷಿ ಗೋಡಂಬಿಗಳು ತುಪ್ಪ ಸಹಿತವಾಗಿ ಬೀಳಲಿ.

ಸಣ್ಣ ಕುದಿ ಬಂದಾಗ ಇಳಿಸಿ.  ಪಾಯಸಕ್ಕೆ ಬೆಲ್ಲದ ಸಿಹಿ ಸಾಕಾಗಲಿಲ್ಲವೇ,  ಸಕ್ಕರೆ ಹಾಕುವುದು.

ನಮ್ಮ ಓಣಂ ಪಾಯಸ ಆಯ್ತು.

ನಾಗಪಂಚಮಿ ಹಾಗೂ ಸಂಕ್ರಾಂತಿಯ ಲೆಕ್ಕಾಚಾರದಲ್ಲಿ ನಾನಂತೂ ಎರಡು ಬಾರಿ ಪಾಯಸ ಸವಿದಾಯ್ತು

ಇನ್ನೊಮ್ಮೆ ಪಾಯಸ ಮಾಡಬಹುದಾದಷ್ಟು ಕೆಂಪು ಸಣ್ಣಕ್ಕಿ ಉಳಿದಿದೆ.