Pages

Ads 468x60px

Friday, 7 July 2023

ಕತೆ ಕೇಳು ಪುಟ್ಟಕ್ಕ

 



ಕಾಗೆಯೂ ಗುಬ್ಬಿಯೂ ಪುರ್ರ್ ಪುರ್ರನೆ ಹಾರಾಡುತ್ತ ಇದ್ದಾಗ ಕಾಗೆಗೆ ಹಸಿವು ಆಯಿತು.  “ ಗುಬ್ಬಕ್ಕ,  ಇಲ್ಲೇ ಹತ್ತಿರ ಜಗ್ಗಣ್ಣನ ಅಂಗಡಿಯಿದೆ,  ಅಲ್ಲಿ ಬಿಸ್ಕತ್ತು,  ಚಾಕಲೇಟು ಸಿಗುತ್ತಾ ನೋಡುವ..” ಅಂದಿತು ಕಾಗೆ.


 ಜಗ್ಗಣ್ಣನ ಅಂಗಡಿಗೆ ಬಂದಾಗ ಕಾಗೆಗೆ ತಿನ್ನಲು ಏನೂ ಸಿಗಲಿಲ್ಲ.   ಗುಬ್ಬಿಯು ಅಂಗಳದಲ್ಲಿ ಅಲ್ಲಲ್ಲಿ ಬಿದ್ದಿದ್ದ ಅಕ್ಕಿ ಕಾಳು,  ರಾಗಿ ಕಾಳು, ಜೋಳದ ಕಾಳು,  ಗೋಧಿ ಕಡಿಗಳನ್ನು ಕೊಕ್ಕಿನಲ್ಲಿ ಕುಕ್ಕೀ ಕುಕ್ಕಿ, ಹೆಕ್ಕಿ ತಿಂದು ಹೊಟ್ಟೆ ತುಂಬಿಸಿ ಕೊಂಡಿತು.   “ ಗುಬ್ಬೀ,  ಕುಡಿಯಲು ನೀರು ಸಿಗುತ್ತಾ ನೋಡು.. “


“ ನೀರು ಈಗ ಪ್ಲಾಸ್ಟಿಕ್ ಬಾಟಲುಗಳಲ್ಲಿ ಹಾಕಿಡೂದು, ನಮಗೆ ತೋಡಿನ ನೀರೇ ಗತಿ… “ ಎಂದಿತು ಕೀವ್ ಕೀವ್ ಗುಬ್ಬಿ.


ಮಳೆಗಾಲ ಅಲ್ವೇ,  ಹಿರಣ್ಯ ದೇಗುಲದ ತೀರ್ಥಧಾರೆ ಜಳಜಳನೆ ಹರಿದು ಬೀಳುವುದ ಕಂಡು ಹಕ್ಕಿಗಳೆರಡೂ ಪುರ್ ಪುರ್ರನೆ ರೆಕ್ಕೆ ಬಡಿಯುತ್ತ ಹಾರಿ ಬಂದುವು,  ಅದೆಲ್ಲಿತ್ತೊ ದೇಗುಲದ ಕಾವಲು ನಾಯಿ ತುಂಟಿ,  “ ಇದು ದೇವರ ನೀರು,  ಮುಟ್ಟಬೇಡಿ.. “ ಎಂದು ಬೌ.. ಬೌ.. ಬೊಗಳಿತು.

“ಆಯ್ತಲ್ಲ, ಹಾಗಿದ್ರೆ ನಾವು ಎಲ್ಲಿಗೆ ಹೋಗೋಣಾ ಅಂತೀಯಾ? “ ಕೇಳಿತು ಕಾವ್ ಕಾವ್ ಕಾಗೆ.


“ ತೋಟದ ಬದಿಗೆ ತೋಡಿನಲ್ಲಿ ನೀರಿದೆ.. ಅದನ್ನು ಕುಡಿಯಿರಿ.. “ ಉತ್ತರಿಸಿದ ತುಂಟಿ ಹಸುಗಳನ್ನು ಅಟ್ಟಲು ಓಡಿತು.


ಕಾಗೆಯೂ ಗುಬ್ಬಿಯೂ ತೋಡಿನತ್ತ ಪುರ್ ಪುರ್ ಎಂದು ಹಾರಿದುವು.


ಅಲ್ಲಿ ನೋಡಿದ್ರೇ ಬೆಳ್ಳ… ಪ್ರವಾಹದಂತೆ ಕೆಂಪು ನೀರು ಹರಿದು ಹೋಗುತ್ತಲಿದೆ.   


“ ಕಾಗಕ್ಕಾ,  ಈ ನೀರು ಕುಡಿಯಲು ಇಳಿದರೆ ನಾನು ಬೆೊಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಸಮುದ್ರ ಸೇರಿಯೇನು… “ ಎಂದಳು ಗುಬ್ಬಕ್ಕ.


“ ಹೌದಲ್ವೇ, ಈ ನೀರು ನಮಗೆ  ಬೇಡ.. “ ಪುನಃ ರೆಕ್ಕೆ ಬಡಿದು ಪುರ್ ಎಂದು ಹಾರಲು ಹೊರಟ ಹಕ್ಕಿಗಳಿಗೆ ಅಲ್ಲೊಂದು ಬಾವಿ ಕಾಣಿಸಿತು.  ಬಾವಿಕಟ್ಟೆ ಮೇಲೆ ಫಳಫಳಿಸುವ ಚೆಂಬು,  ಚೆಂಬು ತುಂಬ ನೀರು.   “ ಆಹ!  ಇದಲ್ಲವೇ ನಮ್ಮ ಭಾಗ್ಯ.. “


ಆ ಸಮಯದಲ್ಲಿ ಅದೆಲ್ಲಿದ್ದಳೋ ನಮ್ಮ ಪುಟ್ಟಕ್ಕ,  ಓಡಿ ಓಡಿ ಬಂದಳು.   “ ಅಮ್ಮ ಬಾ,  ಅಪ್ಪ ಬಾ..  ಕಾಗೆ ನಮ್ಮ ಬಾವಿ ನೀರು ಕುಡಿಯಲು ಬಂದಿದೆ… “


ಅಪ್ಪ ಅಮ್ಮ ಇಬ್ಬರೂ ಓಡೋಡಿ ಬಂದರು.   “ ಪಾಪ.. ಕಾಗೆ ನೀರು ಕುಡಿಯಲಿ. “ ಎಂದನು ಅಪ್ಪ.


“ ಕಾಗೆ ನೀರು ಕುಡಿದ್ರೆ ಚೆಂಬು ಬಾವಿಯೊಳಗಿದ್ದೀತು, ಇದಾಗದು.. “ ಎಂದಳು ಅಮ್ಮ.


ಚೆಂಬನ್ನು ನೆಲದ ಮೇಲಿರಿಸಿದ ಅಪ್ಪ.  ಹಕ್ಕಿಗಳೆರಡೂ ನೀರನ್ನು ಕುಡಿದು ಆನಂದದಿಂದ ಆಕಾಶದಲ್ಲಿ ಹಾರುತ್ತ ಮುಂದೆ ಸಾಗಿದುವು.   ಪುಟ್ಟಕ್ಕ,  ತನ್ನ ಅಪ್ಪ ಅಮ್ಮನ ಜೊತೆಗೂಡಿ ಮನೆಗೆ ತೆರಳಿದಳು.






ಕತೆ ಮುಗಿಯಿತು.   

ಮನೆಗೊಂದು ಪುಟ್ಟ ಮಗು ಬಂದಿದೆ.  ದಿನದ ಹೆಚ್ಚಿನ ಸಮಯವನ್ನು ನಿದ್ರೆಗೇ ಮೀಸಲಿಡುವ ಮಗು,  ಎಚ್ಚರದಲ್ಲಿದ್ದಾಗ ಎಲ್ಲವನ್ನೂಗಮನಿಸಲಾರಂಭಿಸುತ್ತದೆ.  ತನ್ನ ಸುತ್ತಮುತ್ತ, ಪ್ರೀತಿಪಾತ್ರರನ್ನು ಪಕ್ಕ ಸಳೆಯುತ್ತದೆ.  ಈ ಸಮಯದಲ್ಲಿ ನಾವು ಮಗುವಿನೊಂದಿಗೆ ಸಂವಹನ ಪ್ರಾರಂಭಿಸಲೇ ಬೇಕು.   ಹಾಗಂತ ನಾವು ವಾಚಾಳಿಗಳಲ್ಲ,  ಅದಕ್ಕಾಗಿ ನಾನು ಆಯ್ದು ಕೊಂಡಿದ್ದು ಕತೆ ಹೇಳುವ ಸಲ್ಲಾಪ.   ಸರಳ ಭಾಷೆಯಲ್ಲಿ,  ಮಗುವಿನ ಬಾಲ ಭಾಷೆಯಲ್ಲಿ,  ಕಣ್ಣರಳಿಸಿ,  ಹಾವ ಭಾವಗಳೊಂದಿಗೆ, ಧ್ವನಿಯ ಏರಿಳಿತದೊಂದಿಗೆ ಹೇಳಬೇಕಾಗುತ್ತದೆ.  ಪುಸ್ತಕ ಓದಿದಂತೆ ಹೇಳಿದರಾಗದು.

ನಮ್ಮ ಮಗುವಿಗೆ ಅರ್ಥವಾಗುವುದು ಮುಖ್ಯವಲ್ಲ.   ನೀವು ನಂಬ್ತೀರೋ ಗೊತ್ತಿಲ್ಲ,  ಕತೆ ಕೇಳುತ್ತ ಕೇಳುತ್ತ ಅದೂ ಒಂದು ದಿನ ನಾಲಿಗೆ ಹೊರಳಿಸಿ ಒಂದಕ್ಷರ ಉಚ್ಚರಿಸಿಯೇ ಬಿಟ್ಟಿತು!   ಹಹ…



Monday, 12 June 2023

ರಾಗಿ ಅವಲಕ್ಕಿ




 ಹೀಗೂ ಅವಲಕ್ಕಿ ಮಾಡ್ತಾರೇಂತ ತಿಳಿದೇ ಇರಲಿಲ್ಲ,  ಮನೆಗೆ ಮಂಡಕ್ಕಿ, ಜೋಳಾಪುರಿ ಗೋಣಿಯಲ್ಲಿ ಹೊತ್ತು ತಂದು ಸೇರಿನಲ್ಲಿ ಅಳೆದು ಕೊಡುವ ತಿರುಗಾಟದ ಮಾರಾಟಗಾರನೇ ಈ ರಾಗಿ ಅವಲಕ್ಕಿ ತಂದದ್ದು.   ಅವನೂ ರಸ್ತೆಯಿಂದ ಇಳಿದು ನಮ್ಮ ಮನೆ ತನಕ ಬರುತ್ತಾನಲ್ಲ ಎಂಬ ದಾಕ್ಷಿಣ್ಯಕ್ಕೆ ನಾವೂ ಕೊಳ್ಳುತ್ತಿದ್ದೆವು.  ಈ ಬಾರಿ ರಾಗಿ ಅವಲಕ್ಕಿ ತಂದ. 


“ ಈ ರಾಗಿ ಅವಲಕ್ಕಿ ಏನು ಮಾಡಲೀ…”

“ ನೀನು ಏನೂ ಮಾಡೂದು ಬ್ಯಾಡ,  ಹಾಗೇ ಹಾಲು ಎರೆದು ತಿಂತೇನೆ.. “

“ ಆಯಿತು,  ಹಾಗಾದರೆ… “  ಆದರೂ ಚಪಲ ಬಿಡಬೇಕಲ್ಲ,  ಏನೋ ಒಂದು ಸವಿರುಚಿ ಮಾಡದಿದ್ದರೆ ಹೇಗೆ?


ನಮ್ಮ ಕಡಂಬಿಲ ಸರಸ್ವತಿ ರಾಗಿ ಅವಲಕ್ಕಿ ಕಂಡಂತಿಲ್ಲ,  ಇದು ಉತ್ತರ ಕರ್ನಾಟಕದ ಸ್ಪೆಶಲ್ ಆಗಿರಲೇ ಬೇಕು.   ಶಾಂತಾದೇವಿ ಮಾಳವಾಡ ಬರೆದ ಪುಸ್ತಕದಲ್ಲಿ ಅವಲಕ್ಕಿ ಚೂಡಾ ಎಂಬ ತಿನಿಸು ಓದಿದ ಹಾಗಿದೆ,  ಶೇಂಗಾ, ಪುಟಾಣಿ,  ಕರಿಬೇವು, ಕಾರಾಪುಡಿ, ಒಣಕೊಬ್ಬರಿ, ಎಣ್ಣೆ ಇತ್ಯಾದಿ ಅವಶ್ಯವಿದೆ.   


ಏನೇನೋ ಪರಿಕರಗಳನ್ನು ಹಾಕಬೇಕಿದೆ ಎಂದು ಸುಮ್ಮನಿದ್ದರಾದೀತೇ…  ಸಂಜೆ ಹಾಲು ತರಲು ಹೋಗುವಾಗ ನನ್ನ ಪಟ್ಟಿಯೂ ಹೋಯಿತು.  ನೆಲಕಡಲೆ ಬಂದಿತು.


ಬಂದಂತಹ ನೆಲಕಡಲೆಯನ್ನು ಹುರಿದು ಡಬ್ಬದಲ್ಲಿ ಇಟ್ಟೂ ಆಯ್ತು,   ಇನ್ನು ಹಾಳಾಗುವ ಭಯವಿಲ್ಲ.

ಹುರಿಗಡಲೆ ಪುಡಿ ಮಾಡಿಟ್ಟದ್ದು ಇತ್ತು,  ಅದನ್ನೇ ಒಂದು ಚಮಚ ಹಾಕೋಣ,  ಒಣಕೂಬ್ಬರಿಯ ಉಸಾಬರಿ ಬೇಡ.

ಎಳ್ಳು ಹುರಿದು ಜಜ್ಜಿ ಇಟ್ಟಿದ್ದೂ ಇದೆ.  ಅದೂ ಒಂದು ಚಮಚ ಇರಲಿ,

ಕಾರದ ಪುಡಿ ಹಾಕುವಲ್ಲಿ ಉಪ್ಪಿನಕಾಯಿ ಮಸಾಲೆ ಹಾಕೋಣ,  ಅರಸಿನ ಪುಡಿಯೂ ಇರಲಿ.

ಉಪ್ಪು,  ಸಕ್ಕರೆ ಇದೆ.


ಒಗ್ಗರಣೆಗಿಡೋಣ,  ನಮ್ಮದು ತೆಂಗಿನೆಣ್ಣೆ,  ಸಾಸಿವೆ ಸಿಡಿಯುತ್ತಲೇ ಕರಿಬೇವು ಹಾಕತಕ್ಕದ್ದು,  ಮೇಲೆ ಹೇಳಿದಂತಹ ಪರಿಕರಗಳನ್ನುಒಂದೊಂದಾಗಿ ಹಾಕೋಣ.  ಎಲ್ಲವೂ ರುಚಿಗೆ ಸೂಕ್ತ ಪ್ರಮಾಣದಲ್ಲಿರಲಿ,  ಅಷ್ಟಕ್ಕೂ ನಾನು ಬಳಸಿದ್ದು ಮೂರು ಕುಡ್ತೆ ರಾಗಿ ಅವಲಕ್ಕಿ.


ಸ್ಟವ್ ಆರಿಸಿ.,  ಅವಲಕ್ಕಿ ಬೆರೆಸಿ..  ವ್ಹಾ.. ವ್ಹಾ.. ಅನ್ನುತ್ತ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಸವಿಯಿರಿ.  ಬೇಯಿಸಿದ ನೇಂದ್ರ ಬಾಳೆಹಣ್ಣು ಇತ್ತು ಕಣ್ರೀ…. ಒಳ್ಳೆಯ  ಹೊಂದಾಣಿಕೆ ಆಯ್ತು ಅನ್ನಿ.


ಉಳಿದದ್ದು ಡಬ್ಬದೊಳಗೆ ಹೋಯಿತು,  ಒಂದು ಚಮಚವೂ…,  ಬೇಕಾದಾಗ ಬಾಯಾಡಿಸಲಿಕ್ಕಾಯಿತು.


ಹೌದೂ,  ರಾಗಿ ಅವಲಕ್ಕಿ ಎಲ್ಲಿಂದ ತರೋಣ?


ಆಸಕ್ತಿ ಇರುವವರು ಮಾಮೂಲಿ ಪೇಪರ್ ಅವಲಕ್ಕಿಯಿಂದಲೇ ಸೇರುಗಟ್ಟಳೆ ಮಾಡಿಟ್ಕೊಳ್ಳಿ,   ಈ ಮಳೆಗಾಲಕ್ಕೆ ಸೂಕ್ತ ಕರುಕುರು ತಿನಿಸು.



Friday, 19 May 2023

ಕಾಯಿಹಾಲು ಮೇಲಾರ

 


ಬೇಸಿಗೆಯ ಈ ದಿನಗಳಲ್ಲಿ ಅಡುಗೆಮನೆಯಲ್ಲಿ ಅದೂ ಇದೂ ಅಂತ ಗುರುಟುತ್ತಾ ಇರಲು ನನ್ನಿಂದಾಗದು.  ಬೇಗನೆ ಅನ್ನ ಹಾಗೂತೆಳ್ಳಗಿನ ಸಾರು ಮಾಡಿಟ್ಟರೂ ನಡೀತದೆ.   ಈ ವರ್ಷ ನಮ್ಮಲ್ಲಿ ಕಾಟುಮಾವಿನ ಹಣ್ಣಿನ ಕಾರ್ಬಾರ್ ಇಲ್ಲ.  ತಂಪಿನ ಅಡುಗೆ ಮಾವಿನಹಣ್ಣು ಇಲ್ಲದೆ ಮಾಡುವುದಾದರೂ ಹೇಗೆ?   ಮಾಡಬಹುದು ತಂಬುಳಿ,  ಅದನ್ನು ನಾನೊಬ್ಬಳೇ ಉಣ್ಣಬೇಕಾದೀತು.


ಮಜ್ಜಿಗೆ ಹುಳಿ ಮಾಡೋಣಾಂದ್ರೂ ಮಜ್ಜಿಗೆ ಕುಡಿದೇ ಮುಗಿದಿದೆ,  ಇನ್ನು ಮಜ್ಜಿಗೆಯಿಂದ ಹುಳಿ ಮಾಡುವುದಾದರೂ ಹೇಗೆ?   ಮಜ್ಜಿಗೆಹುಳಿಯೂ ರುಚಿಕಟ್ಟಾಗಿ ಇರಬೇಡವೇ,  ಅದಕ್ಕೆ ತಾಜಾ ಸಿಹಿ ಮಜ್ಜಿಗೆಯೇ ಆಗಬೇಕು.  ತೆಂಗಿನಕಾಯಿ ಕೂಡಾ ಹಂಗೇನೆ,  ಆಗ ತಾನೇ ಸುಲಿದ ಹಸಿ ತೆಂಗಿನಕಾಯಿ ಇರಬೇಕು,  ವಾರದ ಹಿಂದೆ ಫ್ರಿಜ್ ಒಳಗಿಟ್ಟ ಕಾಯಿ ಆಗದು.  ತೆಂಗಿನಕಾಯಿ ನುಣ್ಣಗಾದಷ್ಟೂ ಸಾಲದು.

ನೆನಪಾಯ್ತು ,  ಅಪ್ಪ ಹೇಳಿದಂತಹ ಕತೆ…


ನಮ್ಮ ಸೀಮೆಯಲ್ಲಿ ಹಿಂದೆ ರಾಜರ ಕಾಲ,  ಅರಸುಗಳಿಗೆ ದಿನವೂ ಮಜ್ಜಿಗೆ ಹುಳಿ ಊಟಕ್ಕೆ ಇರಲೇಬೇಕು.   ಅಡುಗೆಗೆ ಬಾಣಸಿಗನೂ ಇರುತ್ತಾನೆ ಅನ್ನಿ.  ದಿನವೂ ಊಟ ಮಾಡುವಾಗ ರಾಜರು,  “ ಮೇಲಾರದ ತೆಂಗಿನಕಾಯಿ ನುಣ್ಣಗಾಗಲಿಲ್ಲ..” ಅನ್ನುತ್ತಿದ್ದರಂತೆ.  ಕಾಯಿ ಅರಪ್ಪನ್ನು ತಂದು ತೋರಿಸಲಿಕ್ಕೆ ಆರ್ಡರ್ ಆಯಿತು.  ಬಾಣಸಿಗ ಅರೆಯುವ ಕಲ್ಲಿನಲ್ಲಿ ಅರೆದ ಅರಪ್ಪನ್ನು ತಂದು ತೋರಿಸುವುದೂ,  ರಾಜರು, “ ಇನ್ನೂ ಸ್ವಲ್ಪ… ಬೆಣ್ಣೆಯಂತೆ ಆಗಲಿ. “  ಎಂದೆನ್ನುವುದೂ ನಡೆಯಿತು.    ಬಾಣಸಿಗನಿಗೂ ತಾಳ್ಮೆ ಎಂಬುದಿದೆಯಲ್ಲ.   ಒಂದು ದಿನ ಬೆಣ್ಣೆ ಮುದ್ದೆಯನ್ನೇ ತಂದು ಎದುರಿಗಿಟ್ಟನಂತೆ…


ಇದು ನಡೆದ ಕತೆಯೋ ಒಂದೂ ನನಗೆ ತಿಳಿಯದು.  ಒಟ್ಟಿನಲ್ಲಿ ಮೇಲೋಗರಕ್ಕೆ ತೆಂಗಿನಕಾಯಿ ಬೆಣ್ಣೆಯಂತೆ ನುಣ್ಣಗಾಗಬೇಕು.  ಇದು ತಾತ್ಪರ್ಯ ಅಷ್ಟೇ.


ಅದಕ್ಕಾಗಿ ಏನು ಮಾಡೋಣಾ?


ತಾಜಾ ತರಕಾರಿ,  ಯಾವುದೂ ಆದೀತು.  ಬೀನ್ಸ್,  ಸೌತೇಕಾಯಿ, ತೊಂಡೆಕಾಯಿಯೂ ಅಡ್ಡಿಯಿಲ್ಲ.

ಯಾವುದಾದರೂ ಕಾಳು,  ತೊಗರಿಬೇಳೆ ಹೊರತುಪಡಿಸಿ,  ಅಲಸಂದೆ ಕಾಳು,  ಕಾಬೂಲಿ ಚನಾ, ಚೆನ್ನಾಗಿರುತ್ತದೆ.


ಒಂದು ತೆಂಗಿನ ಕಡಿ ತುರಿದು ಅರೆದು ಹಾಲು ತೆಗೆದಿರಿಸಿಟ್ಟು ಆಯ್ತು.  ಇಲ್ಲಿ ಬೆಣ್ಣೆಯಂತೆ ನುಣ್ಣಗಾಗುವ ಸಮಸ್ಯೆ ಇಲ್ಲ.  ನಮ್ಮ ಮಿಕ್ಸಿಗೆ ಬೆಣ್ಣೆಯಂತೆ ಅರೆಯುವ ಸಾಮರ್ಥ್ಯ ಇದ್ದರಲ್ಲವೇ..,  ಮಜ್ಜಿಗೆ ಹೇಗೂ ಇಲ್ಲ.


ತರಕಾರಿ, ಕಾಳುಗಳನ್ನು ಬೇಯಿಸಿ.  ಎರಡು ಹಸಿಮೆಣಸು ಸಿಗಿದು ಹಾಕತಕ್ಕದ್ದು, ರುಚಿಗೆ ಉಪ್ಪು.

ನಂತರ ಕಾಯಿಹಾಲು ಎರೆಯಿರಿ.  ಒಂದು ಕುದಿ ಬರಲಿ. ಒಂದೆಸಳು ಕರಿಬೇವು ಹಾಕಲೇಬೇಕು.  ಬೇಕಿದ್ದರೆ ಒಂದು ಚಮಚ ತೆಂಗಿನೆಣ್ಣೆಎರೆಯಿರಿ.

ಬಿಸಿಬಿಸಿಯಾಗಿ ಅನ್ನದೊಂದಿಗೆ ಉಣ್ಣಿರಿ,  ಕಾಯಿಹಾಲಿನ ರುಚಿಯೂ, ಹಸಿಮೆಣಸಿನ ಪರಿಮಳವೂ ಸೇರಿ ಊಟ ಸ್ವಾದಭರಿತವಾಗಿರುತ್ತದೆ.  ಬೇಸಿಗೆಗೆ ಹೇಳಿ ಮಾಡಿಸಿದಂತಹ ಅಡುಗೆ ಅನ್ನಿ.