Pages

Ads 468x60px

Friday, 12 June 2020

ಪೈನಾಪಲ್ ಪೋಡಿ



ಧೋರೆಂದು ಮಳೆ ಬರುತ್ತಾ ಇದೆ.


"ಈ ಹಲಸಿನ ಹಣ್ಣು ಎಷ್ಟೇ ಚೆನ್ನಾಗಿದ್ರೂ,  ಚಳಿ ಹವೆ ಬೇರೆ.. ನಂಗೆ ಬೇಡ. "  ಎಂದರು ಗೌರತ್ತೆ.


" ಸಂಜೆಯ ಹೊತ್ತು ಬಿಸಿ ಬಿಸಿಯಾಗಿ ಹಲಸಿನ ಹಣ್ಣಿನ ಪೋಡಿ ಮಾಡೋಣ. "  


ಬೇಕಾದಂತಹ ಎಣ್ಣೆ,  ಕಡ್ಲೇ ಹಿಟ್ಟು,  ಅಕ್ಕಿಹಿಟ್ಟು,  ಗೋಧಿಹಿಟ್ಟು ಇತ್ಯಾದಿಗಳೆಲ್ಲ ಇವೆ ಹಾಗೂ ಯಾವುದೇ ಮಸಾಲಾ ಸಾಮಗ್ರಿಗಳು ಈ ಹಣ್ಣುಗಳ ಪೋಡಿಗೆ ಬೇಡ.


ಹಿಟ್ಟುಗಳನ್ನೆಲ್ಲ ಒಂದೇ ಅಳತೆಯಲ್ಲಿ ಕೂಡಿಸಿ,  ರುಚಿಗನುಸಾರ ಉಪ್ಪು ಬೆರೆಸಿ,  ನೀರೆರೆದು ದ್ರವರೂಪಕ್ಕೆ ತಂದಾಯ್ತು.

ಹಿಟ್ಟು ತೆಳ್ಳಗಾಗಕೂಡದು,  ಅತಿಯಾಗಿ ದಪ್ಪವೂ ಆಗಬಾರದು.

ಹಲಸಿನ ಹಣ್ಣನ್ನು ಈ ಹಿಟ್ಟಿನಲ್ಲಿ ಮುಳುಗಿಸಿ,  ಬಿಸಿಯಾದ ಎಣ್ಣೆಗೆ ಹಾಕಿ , ಎರಡೂ ಬದಿ ಕೆಂಪಾದ ನಂತರ ಎಣ್ಣೆಯಿಂದ ತೆಗೆದು..

ಬಿಸಿ ಇರುವಾಗಲೇ  ಆಹ.. ಆಹ ಅನ್ನುತ್ತ ತಿನ್ನುವುದು.


ಸಾಮಾನ್ಯವಾಗಿ ಹೋಟಲ್ ಗಳಲ್ಲಿ ಪೋಡಿ ಸಿಗುವುದಾದರೂ ಅಲ್ಲಿ ಮೈದಾ ಹಿಟ್ಟಿನಿಂದ ಪೋಡಿಗಳನ್ನು ಮಾಡುತ್ತಾರೆ.  ಮೈದಾ ನಮಗೆ ಬೇಡ.


ನನ್ನ ಅಳತೆಯಲ್ಲಿ ಒಂದು ಲೋಟ ಹಿಟ್ಟು ಇದೆ,  ಬೇಕಾಗಿರುವುದು ಏಳೆಂಟು ಪೋಡಿ..

" ಹಿಟ್ಟು ಉಳಿದ್ರೆ ಏನು ಮಾಡೂದು? "

" ಫ್ರಿಜ್  ಒಳಗೆ ಅನಾನಸ್ ಇಟ್ಕೊಂಡಿದ್ದೀಯಲ್ಲ,  ಅದನ್ನು ಪೋಡಿ ಮಾಡಿದರೇನಾದೀತು? "  ಗೌರತ್ತೆ ಮರು ಪ್ರಶ್ನೆ ಎಸೆದರು.

" ಹೌದಲ್ವೇ.."

ಈ ಪ್ರಕಾರವಾಗಿ ಪೈನಾಪಲ್ ಪೋಡಿ ಎದ್ದು ಬಂದಿತು.

ಈ ಸಂಜೆಯ ತಿನಿಸು ಸರಳವಾಗಿ ತಿಂದು ಮುಗಿಯಿತು.







Sunday, 7 June 2020

ಗಂಜೆ ದೋಸೆ




ನಮ್ಮ ನಾಯಿಮರಿ ಏನೇ ಕಸರತ್ತು ಮಾಡಿದ್ರೂ ಅನ್ನ 
ತಿನ್ನಲು ಕಲಿಯಲಿಲ್ಲ,  ಅಥವಾ ನಮಗೆ ತಿಳಿಯಲಿಲ್ಲ.  ಗರಿಗರಿಯಾದ ದೋಸೆಗಳೇ ಅದರ ಆಹಾರ.

ಒಂದು ದಿನ ನನಗೂ ಹಟ ಬಂದಿತು.  ನಾಯಿಗೆ ಅನ್ನ ತಿನ್ನಿಸಿಯೇ ಸಿದ್ಧ.
ಒಂದಷ್ಟು ಕುಚ್ಚುಲಕ್ಕಿ ಅನ್ನ ಮಿಕ್ಸಿಯಲ್ಲಿ ಗಿರಗಿರ ತಿರುಗಿಕು. 
ಅದಕ್ಕೆ ಹೊಂದುವಷ್ಟು ಅಕ್ಕಿ ಹಿಟ್ಟು ಹಾಗೂ ಗೊಧಿ ಹಿಟ್ಟು ಬೆರೆಸಿ, ದೋಸೆ ಎರೆಯಲಾಯಿತು.  ಅನ್ನದ ದೋಸೆ ನೋಡಿ ನನ್ನ ಬಾಯಲ್ಲೂ ನೀರು ಬಂದಿದ್ದು ಸುಳ್ಳಲ್ಲ ಕಣ್ರೀ..

" ಚಿಂತೆಯಿಲ್ಲ,  ನಾಳೆ ಎಲ್ಲರಿಗೂ ಸಾಕಾಗುವಷ್ಟು ದೋಸೆ ಮಾಡು.. " ಎಂದರು ಗೌರತ್ತೆ.

2 ಲೋಟ ಬೆಳ್ತಿಗೆ ಅಕ್ಕಿ ತೊಳೆದು ನೀರೆರೆದು ಇಡುವುದು.
ಒಂದು ಲೋಟ ಅನ್ನ ಮೊದಲು ಅರೆಯಿರಿ.
 ಅಕ್ಕಿಯನ್ನೂ ನುಣ್ಣಗೆ ಅರೆದು,
ರುಚಿಗೆ ಉಪ್ಪು,
ಒಂದು ಲೋಟ ಗೋಧಿ ಹಿಟ್ಟನ್ನೂ ಸೇರಿಸಿ,
ಅವಶ್ಯವಿದ್ದ ಹಾಗೆ ನೀರು ಎರೆದು ,
ದೋಸೆ ಹಿಟ್ಟಿನ ಸಾಂದ್ರತೆಗೆ ತನ್ನಿ.
ನೀರು ದೋಸೆ ಹಿಟ್ಟಿನಂತೆ ನೀರ್ ನೀರಾಗಕೂಡದು.
ದೋಸೆ ಎರೆಯಿರಿ,  ಲಘುವಾಗಿ ಹರಡಿ,
ಗರಿಗರಿಯಾಗಿ ಎಬ್ಬಿಸಿ.

ತೆಂಗಿನ ಚಟ್ಣಿ,  ಬೆಲ್ಲದ ಪಾಕದೊಂದಿಗೆ ಸವಿಯಿರಿ.

ದೋಸೆ ಹಿಟ್ಟು ಮಿಕ್ಕಿದ್ದನ್ನು ತೆಗೆದಿರಿಸಿ,  ಉಳಿದ ಚಟ್ಣಿಯನ್ನೂ ಬೆರೆಸಿ ತಂಪುಪೆಟ್ಟಿಗೆಯಲ್ಲಿ ಇಟ್ಟಾಯ್ತು.
ನನ್ನ ಶೇಖರಣಾ ವಿಧಾನ ಕಂಡು ಗೌರತ್ತೆಗೂ ನಗು..
ಸಂಜೆ ಚಟ್ನಿಯೂ ಕೂಡಿದಂತಹ ದೋಸೆ ಈ ಥರ ಎದ್ದು ಬಂದಿತು.

ಆಹಾ... ದೋಸೆಯೇ,  ಏನು ನಿನ್ನ ಹೆಸರು?
ಚಟ್ನಿ ದೋಸೆಯೆನ್ನಲೇ,  ಗಂಜಿ ದೋಸೆಯೆನ್ನಲೇ...
ತಿಳಿಯದಾಗಿದೆ.

ಚಟ್ನಿ ಮಾಡಿದ್ದು ಹೇಗೇ?

ತೆಂಗಿನ ತುರಿ 4 ಚಮಚ
ದೊಡ್ಡ ನೀರುಳ್ಳಿ
2 ಹಸಿಮೆಣಸು
ಚಿಕ್ಕ ತುಂಡು ಶುಂಠಿ
ಅಗತ್ಯದ ಉಪ್ಪು,  ಹುಣಸೆ ಬೀಜದ ಗಾತ್ರದ ಹುಳಿ.
ನೀರು ಹಾಕದೇ ಅರೆಯಿರಿ,  ನೀರುಳ್ಳಿಯ ನೀರು ಅರೆಯಲು ಸಾಕು.

ಮಿಕ್ಕ ಅನ್ನದ ಸದ್ಬಳಕೆ ಮಾಡಲು ನಾಯಿ ತಿಳಿಸಿ ಕೊಟ್ಟಿತು.








Wednesday, 3 June 2020

ಉಪ್ಪು ಸೊಳೆ ದೋಸೆ





ದಿನವೂ ನನ್ನ ಹಲಸಿನಕಾಯಿ ತಿಂಡಿಗಳನ್ನು ಫೇಸ್ ಬುಕ್,  ಇನ್ ಸ್ಟಾಗ್ರಾಮ್, ಬ್ಲಾಗ್, ಟ್ವಿಟರುಗಳಲ್ಲಿ ನೋಡುತ್ತ ಈ ಲಾಕ್ ಡೌನ್ ಕಾಲದಲ್ಲಿ ಊರಿಗೆ ಬರಲಾಗದೆ ಬೆಂಗಳೂರಿನಲ್ಲೇ ಇರಬೇಕಾಗಿ ಬಂದಂತಹ ನಮ್ಮ ಮಧು ಒಂದು ದಿನ ತಡೆಯಲಾಗದೆ ಮಂಗಳೂರು ಸ್ಟೋರ್ ಕಡೆ ಹೋಗಿ ಉಪ್ಪು ಸೊಳೆಯ ಪ್ಯಾಕ್ ಹಿಡಿದು ಕೊಂಡು ಬಂದ.

ನನಗೆ ಕಾಲ್ ಮಾಡಿದ,  " ಅಮ್ಮ.."
" ನಾಳೆ ದೋಸೆ ಏನ್ಮಾಡ್ತೀಯ?  ಸುಮ್ಮನೇ ತೆಳ್ಳವು ಎರೆದು ಬೆಲ್ಲಸುಳಿ ಹಾಕ್ಕೊಂಡು ತಿನ್ನಿ ಇಬ್ರೂ.. "
" ತೆಳ್ಳವು ಏನೂ ಬೇಡ,  ನಾನೀಗ ಉಪ್ಪು ಸೊಳೆ ತಂದಿಟ್ಟಿದ್ದೇನೆ,  ಅದನ್ನು ಹೇಗೆ ದೋಸೆ ಮಾಡೂದೂಂತ ಬರೆದು ಕಳಿಸು.. "
" ಉಪ್ಪು ಸೊಳೆಯ ರೊಟ್ಟಿ ಮಾಡೂದಲ್ವ...  ಅದೆಲ್ಲ ರಗಳೆಯ ಕೆಲಸ,  ಬಾಳೆ ಎಲೆ,  ರೊಟ್ಟಿಮಣೆ ಅಂತ ಹರಗಣ.. "
" ಇದು ಫ್ರೆಶ್ ಬಂದಿದ್ದು,   ಹಾಗಾದ್ರೆ ದೋಸೆ ಇಲ್ವಾ.. “
" ಆಯ್ತಪ್ಪ, ರೊಟ್ಟಿ ಬೇಡ, ದೋಸೆ ಮಾಡು... ಮೊದಲು ಅಕ್ಕಿ ನೀರಿಗೆ ಹಾಕು,  ಸೊಳೆ ಉಪ್ಪು ಬಿಡಲಿಕ್ಕೆ ನೀರು ಎರೆದು ಇಡು.
ಅಕ್ಕಿ ಒಂದು ಲೋಟ,  ಸೊಳೆಯೂ ಒಂದು ಲೋಟ ಆಯ್ತಾ,  ಮಾಡುವ ಕ್ರಮ ಈಗ್ಲೇ ಬರೆದು ಕಳಿಸ್ತೇನೆ..."



1 ಲೋಟ ಅಕ್ಕಿ
ತೊಳೆದು ನೀರು ಹಾಕಿ 4 ಗಂಟೆ ಇಡಬೇಕು.
ಎರಡು ಹಿಡಿ ಆಗುವಷ್ಟು ಸೊಳೆಯನ್ನು ಉಪ್ಪು ಬಿಡಿಸಲು ನೀರೆರೆದು ಇಡಬೇಕು.
ಸೊಳೆಯನ್ನು ಉದ್ದಗೆ ಸಿಗಿಯಲು ಬರುತ್ತದೆ,  ತುಂಡು ತುಂಡು ಮಾಡಿ ಲೋಟ ಭರ್ತಿ ಮಾಡಿ ಇಡುವುದು.  ಒತ್ತಿ ಒತ್ತಿ ಇಡಬೇಕು.
ಒಂದೇ ಲೆಕ್ಕದ ಅಳತೆ ಆಯಿತು.

 ಮೊದಲು ಸೊಳೆಯನ್ನು ನೀರು ಹಾಕದೆ ತಿರುಗಿಸಿ ನೋಡುವುದು.  ಹುಡಿ ಅಥವಾ ಪೇಸ್ಟ್ ತರ ಆದರೆ ಸಾಕು.
ಅದಕ್ಕೇ ತೊಳೆದ ಅಕ್ಕಿ ಹಾಕಿ ಅರೆಯುವುದು. 
ತಿರುಗಲು ಬೇಕಾದಷ್ಟೇ ನೀರು ಎರೆದರೆ ಸಾಕು.

ಉಪ್ಪು ಸೊಳೆಯಲ್ಲವೇ,  ಪುನಃ ಉಪ್ಪು ಹಾಕಬೇಡ.
ಅಂದಾಜು ಒಂದು ನಿಮಿಷದಲ್ಲಿ ನುಣ್ಣಗಾದೀತು.

ಹಿಟ್ಟು ತೆಗೆದು ತಪಲೆಗೆ ಹಾಕುವುದು.
ಉದ್ದಿನ ದೋಸೆ ಯಾ ಇಡ್ಲಿ ಹಿಟ್ಟಿನ ಹಾಗಿರಬೇಕು, 
ಹಿಟ್ಟು ನೀರಾಗಿದೇ ಅಂತಾದರೆ ಒಂದೆರಡು ಚಮಚ  ಅಕ್ಕಿ ಹುಡಿ ಬೆರೆಸುವುದು.

ದೋಸೆ ಎರೆಯುವಾಗ ಕಾವಲಿ ಎಣ್ಣೆಣ್ಣೆ ಆಗಿರಬಾರದು.  
ಜಿಡ್ಡು ಇದ್ದರೆ  ಮೊದಲೇ ಒರೆಸಿ ತೆಗೆದು ಗ್ಯಾಸ್ ಮೇಲೆ ಇಡುವುದು.

ಕಾವಲಿ ಕಾದಾಗ ನೀರು ಸಿಡಿಸಿ ನೋಡಿ, ನಂತರ ಪೇಪರ್ ದೋಸೆ ಎರೆಯುವುದು.
ದೋಸೆಗೆ ತುಪ್ಪ ಸವರ ಬಾರದು,  ಪುನಃ ಜಿಡ್ಡು ತೆಗೆಯುವ ಕೆಲಸ ಬೇಡ.
ತಿನ್ನುವಾಗ ದೋಸೆಗೆ ತುಪ್ಪ ಎಣ್ಣೆ ಹಾಕಬಹುದು 
ಇದು oil free ದೋಸೆ.

ರವೆ ಎರೆದು ತಿನ್ನುವುದು.

ಮಗನಿಗಾಗಿ ಬರೆದ ದೋಸೆಯ ವಿಧಾನ ಇಲ್ಲಿ ಬಂದಿದೆ.  ದೋಸೆ ಹಾಗೂ ಉಪ್ಪುಸೊಳೆಯ ಫೋಟೋ ಅವನೇ ಕಳಿಸಿದ್ದು.



Sunday, 31 May 2020

ಕೆಂಪು ಹಣ್ಣಿನ ಪಲ್ಯ







" ಕೆಂಪು ಹಲಸಿನ ಮರದ ಹಣ್ಣು ಕೆಳಗಡೆ ಇದ್ದದ್ದು ಹಂದಿ ತಿಂದ್ಬಿಟ್ಟಿದೆ. "
" ಅಯ್ಯೋ.. "
"  ಅದೇನೂ ಬೆಳೆದಿರಲಿಲ್ಲ,  ನಾನು ದಿನಾ ನೋಡ್ತೀನಲ್ಲ,  ಮೇಲೆ ಇರುವುದು ನಮ್ಮ ಕೊಕ್ಕೆಗೂ ಸಿಗುವಂತದ್ದಲ್ಲ,  ಇದೇ ಕೊನೆಯದು."  ಎನ್ನುತ್ತ ನಮ್ಮೆಜಮಾನ್ರು ತಂದ ಹಣ್ಣನ್ನು ಮೆಟ್ಟುಕತ್ತಿಯಲ್ಲಿ ಹೋಳಾಗಿಸಿ,   ಸೀಳುಗಳನ್ನಾಗಿಸಿ ಇಟ್ಟರು.

ಲಾಕ್ ಡೌನ್ ಸ್ಟೇ ಹೋಂ ಎಂಬ ಈ ಸಮಯದಲ್ಲಿ ತೋಟದೊಳಗೆ ಕಾರ್ಮಿಕರಿಲ್ಲ.  ಮನೆಗೆ ಬಂದು ಪಟ್ಟಾಂಗ ಹೊಡೆಯುವವರೂಇಲ್ಲ.  ಹಣ್ಣನ್ನು ಹಂಚಿ ತಿನ್ನುವುದಕ್ಕೂ ಇಲ್ಲ.  ಘನ ಗಾತ್ರವಿರದಿದ್ದರೂ ನಾವೇ ತಿಂದು ಮುಗಿಸುವ ಹಣ್ಣಲ್ಲ.

" ಹಂದಿಗೂ ಹೊಟ್ಟೇಪಾಡು ಆಗ್ಬೇಕಲ್ಲ..  ನನಗೆ ಹಣ್ಣಿನ ಪಲ್ಯ ಮಾಡಿ ಇಟ್ಬಿಡು,  ರಾತ್ತಿಯ ತನಕ ಬೇಕಾದಷ್ಟಾಯಿತು.. " ಎಂದರುಗೌರತ್ತೆ.

ಗೌರತ್ತೆಯೇನೋ ಪಲ್ಯ ಅಂದ್ರು,  ಎಲ್ಲ ಹಲಸುಗಳೂ ಒಂದೇ ಥರ ಅಲ್ಲ.   ಏನೂ ಒಂದು ಹಲಸಿನಹಣ್ಣು ಬೇಯಿಸಿ ಇಟ್ಟಂತೆ ಆಗಬಾರದು.   ಈ ಕೆಂಪು ಹಲಸಿನ ಪಲ್ಯ ಇದುವರೆಗೂ ಮಾಡಿಲ್ಲ.   ಈ ಬಾರಿ ಮಾಡೋಣ.

ಆಯ್ದು ಇಟ್ಟ ಹಲಸಿನ ಹಣ್ಣಿನ ಸೊಳೆಗಳು.  ಎಷ್ಟೂ?
ನಮಗೆ ಬೇಕಿದ್ದಷ್ಟು,  ಚಿಕ್ಕ ಗಾತ್ರದಲ್ಲಿ ಹೆಚ್ಚಿಟ್ಟುಕೊಳ್ಳಿ.  
ಗೌರತ್ತೆ ಹಾಗೇನೇ ಕೈಯಲ್ಲಿ ಸಿಗಿದು ಇಟ್ಟಿದ್ರು.
ಹಾಗೂ ಆದೀತು,  ಹೇಗೂ ಆದೀತು.

ನಾನ್ ಸ್ಟಿಕ್ ಬಾಣಲೆಯನ್ನು ಒಲೆಗೇರಿಸಿ.
3 ಚಮಚ ತೆಂಗಿನೆಣ್ಣೆ ಎರೆಯಿರಿ.
ಸಾಸಿವೆ,
ಉದ್ದಿನಬೇಳೆ,
ಒಂದು ಒಣಮೆಣಸನ್ನು ನಾಲ್ಕಾಗಿ ಮುರಿದು ಹಾಕಿ.
ಸಾಸಿವೆ ಸಿಡಿದ ನಂತರ ಕರಿಬೇವು,
ನಂತರ  ಹಲಸಿನಹಣ್ಣಿನ ಹೋಳುಗಳನ್ನು ಹಾಕಿ,  ಸೌಟಾಡಿಸಿ.
ನೀರು ಎರೆಯಬೇಕಿಲ್ಲ,  ಎರೆಯಲೂ ಬಾರದು.
ಕೇವಲ ಸಿಹಿ ಇದ್ದರಾಗದು,  ಪುಡಿಯುಪ್ಪು ರುಚಿಗೆ ಸೂಕ್ತ ಪ್ರಮಾಣದಲ್ಲಿ ಬೆರೆಸಿ.
ಅರ್ಧ ಚಮಚ ಮೆಣಸಿನ ಹುಡಿ, ಕಾಲು ಚಮಚ ಅರಸಿಣ ಹುಡಿ ಬೆರೆಸತಕ್ಕದ್ದು.
ಒಂದು ಹಿಡಿ ತೆಂಗಿನತುರಿ ಹಾಕಿ ಸೌಟಾಡಿಸುತ್ತ ಇದ್ದಂತೆ ಬೆಂದ ಸುವಾಸನೆ ಬಂದಿತು.
ಸ್ಟವ್ ನಂದಿಸಿ.  ಮುಚ್ಚಿ ಇರಿಸಿ.

 ಈ ಪಲ್ಯವು ಸಂಜೆಯ ಚಹಾ ಸೇವನೆಯೊಂದಿಗೆ ಮೆಲ್ಲಲು ಸೂಕ್ತ ತಿನಿಸು.

ಯಾಕೆ ತಡ?  ಇವತ್ತೇ ಹಲಸಿನ ಹಣ್ಣಿನ ಬೇಟೆಗಾಗಿ ಹೊರಡಿ ಮತ್ತೇ,  ಲಾಕ್ ಡೌನ್ ಅಂತ ಮನೆಯೊಳಗೇ ಇದ್ದರಾದೀತೇ...






Saturday, 23 May 2020

ಹಣ್ಣಿನ ಪಾಯಸ





" ಯಾವ ಹಣ್ಣೂ.. "
ಕೇಳಬೇಕಾಗಿಯೇ ಇಲ್ಲ, ಈಗ ತೋಟದಲ್ಲಿ ಉಚಿತವಾಗಿ ಸಿಗುವ ಫಲವಸ್ತು, ಹಲಸಿನಹಣ್ಣು. ಮನೆಯೊಳಗೂ ಹೊರಗೂ ನಾವೇ ಇರುವ ಲಾಕ್ ಡೌನ್ ಕಾಲದಲ್ಲಿ ನಮ್ಮ ಹಲಸಿನ ಆಸೆ ತಣಿಸುವಷ್ಟು ಹಲಸಿನ ಮರದಿಂದ ಕೆಂಪು ರಂಗಿನ ಸೊಳೆ ತುಂಬಿದ ಹಣ್ಣು ಮನೆಗೆ ಬಂದಿತು.

ನಮ್ಮ ಯಜಮಾನರೇ ತಂದಂತಹ ಹಣ್ಣನ್ನು ಸದುಪಯೋಗ ಪಡಿಸಲೇ ಬೇಕು. ಮೊದಲಾಗಿ ತುಸು ಬಿಡಿ ಸೊಳೆಗಳಿಂದ ಪಾಯಸ ಮಾಡೋಣ.

" ಹಸಿ ಹಸೀ ಹಣ್ಣು ತಿನ್ನುವುದಕ್ಕಿಂತ ಬೆಲ್ಲ, ತೆಂಗಿನಕಾಯಿ ಹಾಕಿದ ಪಾಯಸ ಆರೋಗ್ಯಕ್ಕೆ ಹಿತ. " ಎಂದರು ಗೌರತ್ತೆ.

ಹಲಸಿನ ಸೊಳೆ ಬಿಡಿಸಿ ಹೆಚ್ಚಿಟ್ಟು ಕೊಳ್ಳುವುದು, ಒಂದು ಲೋಟ ತುಂಬ ಇರಲಿ.
ಒಂದು ಹಸಿ ತೆಂಗಿನಕಾಯಿ ಸುಲಿದು, ಒಡೆದು ತುರಿ ಮಾಡಿಟ್ಟು ಅರೆದು ಕಾಯಿಹಾಲು ತೆಗೆದಿರಿಸುವುದು, ನೀರು ಹಾಲು, ದಪ್ಪ ಹಾಲು ಪ್ರತ್ಯೇಕ ತೆಗೆದಿರಿಸುವುದು.
3 ಚಮಚ ಅಕ್ಕಿ ಹುಡಿ, ಒಂದು ಲೋಟ ನೀರೆರೆದು ಗಂಟುಗಳಿರದಂತೆ ಕಲಸಿ ಇಡಬೇಕು.
ದಪ್ಪ ತಳದ ತಪಲೆಯಲ್ಲಿ, ಕುಕ್ಕರ್ ಕೂಡಾ ಆದೀತು, ನೀರು ಕಾಯಿಹಾಲು ಎರೆದು, ಹೆಚ್ಚಿಟ್ಟ ಹಲಸಿನ ಹಣ್ಣಿನ ಚೂರುಗಳನ್ನು ಹಾಕಿ ಬೇಯಿಸಿ.
ಬೇಗನೇ ಬೇಯುವ ಹಲಸಿನ ಹಣ್ಣಿನ ಸುವಾಸನೆ ಬಂದಾಗ ಅಕ್ಕಿ ಹಿಟ್ಟನ್ನೂ ಎರೆಯಿರಿ.
ಈಗ ತಳ ಹಿಡಿಯದಂತೆ ಸೌಟಾಡಿಸುತ್ತ ಇರಬೇಕು.
ಅಕ್ಕಿ ಹಿಟ್ಟು ಬೆಂದಂತೆ ದಪ್ಪ ಸಾಂದ್ರತೆ ಬರುವುದು.
ಈಗ 2 ಅಚ್ಚು ಬೆಲ್ಲ ಗುದ್ದಿ ಪುಡಿ ಮಾಡಿ ಹಾಕುವುದು, ಬೆಲ್ಲ ಕರಗಲಿ.
ನೀರು ಕಾಯಿಹಾಲು ಉಳಿದಿದ್ದರೆ ಈಗ ಎರೆಯಿರಿ.
ಬೆಲ್ಲ ಕರಗಿ ಅಕ್ಕಿ ಹಿಟ್ಟು ಹಲಸಿನೊಂದಿಗೆ ಬೆರೆತಿದೆ ಎಂದಾಗ,
ದಪ್ಪ ಕಾಯಿಹಾಲು ಎರೆಯುವುದು.
ಎಲ್ಲ ಹಲಸಿನ ಹಣ್ಣುಗಳೂ ಒಂದೇ ತೆರನಾದ ಸುವಾಸನೆ ಬೀರುವುದಿಲ್ಲ, ಪರಿಮಳ ಸಾಲದು ಎಂದಿದ್ದರೆ ತುಸು ಏಲಕ್ಕಿ ಗುದ್ದಿ ಹಾಕಬಹುದಾಗಿದೆ.
ಹಲಸಿನ ಹಣ್ಣಿನ ಯಾವುದೇ ಸಿಹಿ ತಿನಿಸು ಇರಲಿ, ಹುರಿದ ಎಳ್ಳು ಹಾಕಲೇಬೇಕು. ಹಲಸಿನ ಹಣ್ಣಿನ ಪಾಯಸಕ್ಕೆ ಒಂದು ಪರಿಪೂರ್ಣತೆ ಹುರಿದು ಜಜ್ಜಿದ ಎಳ್ಳು ಹಾಕುವಲ್ಲಿಗೆ ಬಂದಿತೆಂದು ತಿಳಿಯಿರಿ.
ಇದು ಹಲಸಿನ ಹಣ್ಣು ಇರುವಾಗ ಬೇಗನೆ ಮಾಡಬಹುದಾದ ಪಾಯಸ.


ಗೌರತ್ತೆ ಹೇಳಿದಂತೆ ಹಲಸಿನ ಹಣ್ಣು ಎಷ್ಟೇ ರುಚಿಕರವಾಗಿದ್ದರೂ ಹಸಿ ಹಸಿಯಾಗಿ ತಿನ್ನಲು ಯೋಗ್ಯವಲ್ಲ. ಬೇಯಿಸಿ, ತುಪ್ಪ ಯಾ ತೆಂಗಿನೆಣ್ಣಿ, ತೆಂಗಿನಕಾಯಿ, ಬೆಲ್ಲ ಇತ್ಯಾದಿಗಳ ಸಂಮಿಶ್ರಣದ ಪಾಕದಿಂದ ಹದವರಿತು ತಿನ್ನುವ ಜಾಣರು ನಾವಾಗಿರಬೇಕು. ಇಂತಹ ಹಲಸಿನ ಅಡುಗೆಯ ಸೇವನೆಯಿಂದ ಹಸಿವು ಎಂದರೇನು ಎಂದೇ ತಿಳಿಯಲಾರದು. ಆಗಾಗ್ಗೆ ಏನಾದರೂ ಕುರುಕಲು ತಿಂಡಿ ಡಬ್ಬದಿಂದ ತೆಗೆದು ತಿನ್ನುತ್ತ ಇರೋಣ ಎಂದೂ ಅನಿಸದು.






Saturday, 16 May 2020

ಪೈನಾಪಲ್ ಕರ್ರಿ




ದಿನವೂ ಮಕ್ಕಳೊಂದಿಗೆ ಸರಸ ಸಂಭಾಷಣೆ,
ಈ ಬಾರಿ ಮಗಳು ಬೆಂಗಳೂರಿನಿಂದ ಕರೆದಳು.
" ಅಮ್ಮ, ಅನನಾಸ್ ಹಣ್ಣಿನ ಮೆಣಸ್ಕಾಯಿ ಮಾಡೂದು ಹೇಗೆ? "

ನಾನು ಫೋನ್ ಕಿವಿಗಿಟ್ಟು ಮಾಡುವ ವಿಧಾನ ಒದರುತ್ತ ಹೋದಾಗ, ಸ್ವಲ್ಪ ಹೊತ್ತು ಕೇಳಿಸ್ಕೊಂಡ ಮಗಳು, “ ಅಮ್ಮ, ನೀನು ವಾಟ್ಸಪ್ ನಲ್ಲಿ ಬರೆದು ಕಳಿಸ್ತೀಯಾ.. " ಅಂದಳು.

" ಹಂಗಂತೀಯ, ಸರಿ ಬಿಡು.. “

ಮಗಳಿಗಾಗಿ ಬರೆದ ಮೆಣಸ್ಕಾಯಿ ಸಾಹಿತ್ಯ ಬ್ಲಾಗ್ ಪ್ರವೇಶಿಸಿ ಬಿಟ್ಟಿದೆ.




ಅನನಾಸ್ ಹೋಳು ಚಿಕ್ಕ ಚೂರು ಆಗಿರಲಿ

ಮಸಾಲೆ
ತೆಂಗಿನತುರಿ 4 ಚಮಚ
ಎಳ್ಳು 3 ಚಮಚ ಎಣ್ಣೆ ಹಾಕದೆ ಹುರಿಯುವುದು
ಎಳ್ಳು ತೆಗೆದಿಟ್ಟು
ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ
ಕ್ರಮವಾಗಿ ಉದ್ದಿನಬೇಳೆ 1 ಚಮಚ
ಮೆಣಸು 3
ಜೀರಿಗೆ ಅರ್ಧ ಚಮಚ
ಇಂಗು ಉದ್ದಿನಕಾಳಿನಷ್ಟು
ಕರಿಬೇವು
ಚಿಟಿಕೆ ಅರಸಿನ ಹಾಕಿ
ಮೇಲಿನಿಂದ 3 ಚಮಚ ಕಾಯಿತುರಿ ಹಾಕಿ ಬಾಡಿಸುವುದು.

ಆರಿದ ನಂತರ ಎಳ್ಳು ಸಹಿತವಾಗಿ ನುಣ್ಣಗೆ ಅರೆಯುವುದು. ನೀರು ಹಾಕಿ ಅರೆಯಬೇಕು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಕರಿಬೇವು, ಹಸಿಮೆಣಸು ಹಾಕಿ ಬಾಡಿದ ನಂತರ ಅನನಾಸ್ ಹೋಳು ಹಾಕುವುದು.
ನೀರೆರೆದು ಮೆತ್ತಗೆ ಬೇಯಿಸಿ.
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ ದೋಡ್ಡ ಲಿಂಬೆಯಷ್ಟು ಇರಲಿ
ನೆಲ್ಲಿ ಗಾತ್ರದ ಹುಣಸೆ ಹುಳಿಯ ರಸ ಎರೆಯಬೇಕು.

ಈಗ ಮಸಾಲೆ ಹಾಕುವ ಸಮಯ.
ಎಲ್ಲವನ್ನೂ ಬೆರೆಸಿ, ನೀರು ಎರೆದು ಹದ ಮಾಡಿ ಕುದಿಸಬೇಕು.
ಸಾರಿನ ಹಾಗೆ ಆಗಬಾರದು,  ದಪ್ಪ ಸಾಂದ್ರತೆಯಿರಬೇಕು.
ಆಯಿತು ಪೈನಾಪಲ್ ಕರ್ರಿ
ಇದನ್ನು ಮುಗಿಯುವ ತನಕ ಉಪಯೋಗಿಸುವುದು.
ದಿನವೂ ಕುದಿಸಿ ಇಡಬೇಕು.



Thursday, 7 May 2020

ಪೈನಾಪಲ್ ಪಾನಕ




ಹಣ್ಣುಗಳ ಕಾಲ ಅಲ್ವೇ, ತಿಂಡಿತೀರ್ಥ ಆದ ನಂತರ ಒಂದು ಪೈನಾಪಲ್ ಕತ್ತರಿಸಿ ಇಟ್ಟಾಯ್ತು, ಹತ್ತು ಗಂಟೆಯ ಚಹಾಪಾನದೊಂದಿಗೆ ಹಣ್ಣು. ಬಿಸಿಲ ತಾಪಕ್ಕೆ ಒಳ್ಳೆಯದು. ಸ್ವಲ್ಪ ತಿಂದು ಮುಗಿಯಿತು.

ಉಳಿದ ಹಣ್ಣಿನ ಹೋಳುಗಳನ್ನು ಮಿಕ್ಸಿಯ ಜಾರಿನೊಳಗೆ ತುಂಬಿ,
ಸುಸೂತ್ರವಾಗಿ ತಿರುಗಲು ಬೇಕಾದಷ್ಟೇ ನೀರು ತುಂಬಿ,
ಚಿಕ್ಕ ಚೂರು ಶುಂಠಿ ಸಿಪ್ಪೆ ತೆಗೆದು, ಜಜ್ಜಿ,
ಪುಡಿ ಮಾಡಿದ ಲಿಂಬೆ ಗಾತ್ರದ ಬೆಲ್ಲ,
ಸುರುಚಿಗೋಸ್ಕರ ಉಪ್ಪು ಇರಲಿ,
ತಿರುಗಿಸಿ,
ಜಾಲರಿ ಸೌಟಿನಲ್ಲಿ ಶೋಧಿಸಿ.
ಇನ್ನೂ ಒಂದು ಲೋಟ ನೀರು ಎರೆದು ಚರಟ ಮಾತ್ರ ಉಳಿಯುವಂತೆ ಶೋಧಿಸಿಕೊಳ್ಳಿ.

ಅನನಾಸ್ ನಾರುಯುಕ್ತ ಹಣ್ಣು ಆದರೂ ಜಾಲರಿ ಸೌಟಿನಲ್ಲಿ ಕೇವಲ ಎರಡು ಚಮಚದಷ್ಟು ಚರಟ ಉಳಿಯಿತು.

ಅನಾನಸ್ ರಸ ದಪ್ಪ ಯಾ ಸಾಂದ್ರವಾಗಿದ್ದರೆ ಕುಡಿಯಲು ಯೋಗ್ಯವಾಗುವಂತೆ ನೀರು ಬೆರೆಸುವುದು ಉತ್ತಮ.

ಹಣ್ಣುಗಳ ರಸಕ್ಕೆ ಸಿಹಿ ಸೇರಿಸದೇ ಕುಡಿಯುವುದು ಬಹಳ ಉತ್ತಮ.

ತಂಪಾಗಿಸಿ, ಲೋಟಗಳಿಗೆ ತುಂಬಿಸಿ ಕುಡಿಯಿರಿ, ಹಾಯಾಗಿರಿ.

ರಸಭರಿತ ಹಣ್ಣುಗಳು ಮೂಳೆಗಳ ಬಲವರ್ಧಕ, ಸ್ನಾಯುಗಳ ಶಕ್ತಿವರ್ಧಕ. ಕ್ಯಾಲ್ಸಿಯಂ ಇನ್ನಿತರ ಖನಿಜಾಂಶಗಳನ್ನು ನೈಸರ್ಗಿಕವಾಗಿಯೇ ಪಡೆಯಿರಿ, ಔಷಧಾಲಯಗಳ ಮಾತ್ರೆಗಳು ಸುಮ್ಮನೆ ಅನ್ನಿರಿ.