Pages

Ads 468x60px

Saturday, 25 March 2023

ಬಚ್ಚಂಗಾಯ್ ಉಪ್ಪಿನಕಾಯ್

 


ಬಚ್ಚಂಗಾಯಿ ಹೋಳು ಮಾಡುತ್ತ ಇದ್ದ ಹಾಗೆ, ಥಟ್ ಎಂದು ಆಲೋಚನೆಯೊಂದು ಹುಟ್ಟಿತು.  ಈ ಬಾರಿ ಬಚ್ಚಂಗಾಯಿ ಸಿಪ್ಪೆಯಿಂದ ಉಪ್ಪಿನಕಾಯಿ ಹಾಕಿದರೆ ಹೇಗೆ?


“ ಅಡ್ಡಿಯಿಲ್ಲ, ಹೇಗೆ ಹಾಕಿದ್ರೀ.. ?  


ಜಾಡಿ ಹಿಡಿಸುವಷ್ಟೇನೂ ಹೆಚ್ಚಿ ಹಾಕಿಲ್ಲ,  ನಮಗಿಬ್ಬರಿಗೆ ಎರಡು ಹೊತ್ತಿನ ಊಟಕ್ಕೆ ಸಾಕಾಗುವಷ್ಟು ಹೆಚ್ಚಿದ್ದು ಅಷ್ಟೇ.  ಅದರಲ್ಲಿಯ ಹಸಿರು ಸಿಪ್ಪೆ ಹೆರೆದು ತೆಗೆಯಬೇಕು,  ನಂತರ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ…


ಉಪ್ಪಿನಕಾಯಿ ಹಸಿ ಹೊರಡಿ (ಮಸಾಲೆ) ಹಾಗೂ ಹುರಿದ ಹೊರಡಿಗಳೆರಡೂ ಅಡುಗೆ ಮನೆಯೊಳಗೆ ಇತ್ತು,  ಬಿಡುವಿದ್ದಾಗ ಮಾಡಿಇಟ್ಕೊಂಡಿದ್ದು ಕಣ್ರೀ..


ಎರಡೂ ವಿಧದ ಮಸಾಲೆಗಳನ್ನು ಒಂದೊಂದು ಚಮಚ ಬೆರೆಸಿ ಹೊಂದಿಸುವಲ್ಲಿಗೆ ಉಪ್ಪಿನಕಾಯಿ ಸಿದ್ಧವಾಗಿ ಬಿಟ್ಟಿತು.  


ನಮ್ಮ ಮನೆ ಯಜಮಾನರಂತೂ ಈ ಉಪ್ಪಿನಕಾಯಿ ತಿಂದು ಪುಟ್ಟ ಭಾಷಣ ಬಿಗಿದರು.  “ ಹೌದೂ,   ದೊಡ್ಡ ಸಮಾರಂಭ ಇರುವಾಗ ಬಚ್ಚಂಗಾಯಿ ಜ್ಯೂಸು ಮಾಡುವುದು,  ಸಿಪ್ಪೆ ಅತ್ತ ಬಿಸಾಡುವುದು.  ಊಟದ ಸಮಯಕ್ಕೆ ಬೇರೇನೋ ಉಪ್ಪಿನಕಾಯಿ..  ಮೇಲೋಗರಕ್ಕೆ ಇನ್ಯಾವುದೋ ತರಕಾರಿ,  ನೋಡೋಣ,  ಮುಂದಿನ ಬಾರಿ ಅಡುಗೆಯವರ ಬಳಿ ಹೇಳಬೇಕು,  ತರಕಾರಿ ಹೆಚ್ಚುವ ಸುಧರಿಕೆಯವರು ಬಚ್ಚಂಗಾಯಿ ಕೊಚ್ಚಿ ಕೊಡಲಿಕ್ಕಾಗದು ಎಂದೇನೂ ಹೇಳುವವರಲ್ಲ. “


“ ಮೇಲೋಗರ ಆಗದಿದ್ರೆ ಬೇಡ,  ಪಲ್ಯ ಆದರೂ 

ಮಾಡಬಹುದು.





 

Tuesday, 14 March 2023

ಕಾಯಿ ನೀರಿನ ದೋಸೆ

 











ಬೆಳಗ್ಗೆ ತೆಂಗಿನಕಾಯಿ ಒಡೆದ ನೀರನ್ನು ಗ್ಲಾಸಿನಲ್ಲಿ ತೆಗೆದಿಟ್ಟು, ಅರ್ಧ ಚಮಚ ಸಕ್ಕರೆ ಬೆರೆಸಿ,  ಸಂಜೆ ದೋಸೆಗೆ ಅರೆಯುವಾಗ ಸೇರಿಸತಕ್ಕದ್ದು.   ಈ ಐಡಿಯಾವನ್ನು ಇಡ್ಲಿ,  ಪಾಲಪ್ಪಂ,  ಇತ್ಯಾದಿ ಹುಳಿ ಬರಬೇಕಾದ ಹಿಟ್ಟುಗಳಿಗೆ ಉಪಯೋಗಿಸಬಹುದು.  ಚಳಿಗಾಲದಲ್ಲಿ ಉಪಯುಕ್ತ ಎಂದು ತಿಳಿಯಿರಿ.

ಇಂದಿನ ಕಾಯಿ ನೀರು ಮಾರನೇ ದಿನಕ್ಕೆ ಆಗದು,  ಹುಳಿ ವಾಸನೆ ಬಂದೀತು.


ದೋಸೆಯ ಅಳತೆ


1 ಲೋಟ ಬೆಳ್ತಿಗೆ ಅಕ್ಕಿ

1 ಲೋಟ ಕುಚ್ಚುಲಕ್ಕಿ,  ರಾಜಮುಡಿ ಅಕ್ಕಿ ಬೇಗನೆ ನುಣ್ಣಗೆ ಆಗುತ್ತದೆ.  ರೇಶನ್ ಶಾಪಿನ ಬೆಳ್ತಿಗೆ ಅಕ್ಕಿಯೂ ಬೇಗನೆ ನುಣ್ಣಗೆಆಗುತ್ತದೆ,  ಈ ಎರಡೂ ಪ್ರತಿ ಅಕ್ಕಿಗಳನ್ನು ಒಟ್ಟಿಗೇ ತೊಳೆದು ನೆನೆಯಲು ಹಾಕಿರಿಸಬಹುದು.   ಈ ವಿಧಾನ ನಮ್ಮ ಪಾರಂಪರಿಕ ಕ್ರಮಎಂದು ತಿಳಿದಿರಲಿ.   ಸಂಜೆ ರುಬ್ಬುವ ಕಲ್ಲಿನಲ್ಲಿ  ಅರೆಯಬೇಕಾದರೆ ಮುಂಜಾನೆಯೇ ಕುಚ್ಚುಲಕ್ಕಿ ಬೆಳ್ತಿಗೆ ಅಕ್ಕಿಗಳನ್ನು ನೆನೆಯಲುಹಾಕಿ,  ಕಲ್ಲು ಜಳ್ಳು ಸೋಸಿ ಇಡಬೇಕಾಗಿತ್ತು,  ಈಗ ನಾವು ದಿಢೀರ್ ಯುಗದಲ್ಲಿದ್ದೇವೆ ಅಷ್ಟೇ.


ಬೇಳೆಕಾಳುಗಳು ಎಷ್ಟು?


ನಮ್ಮ ಉದ್ದೇಶ ಮೆಂತೆ ದೋಸೆಯ ತಯಾರಿಕೆ

2 ಚಮಚ ಮೆಂತೆ

3 ಚಮಚ ಉದ್ದಿನಬೇಳೆ

2 ಚಮಚ ಪಂಚರಂಗೀ ಬೇಳೆ

ಹೌದೂ, ಪಂಚರಂಗಿ ಬೇಳೆ ಅಂದ್ರೇನು?

ಐದು ವಿವಿಧ ಬೇಳೆಗಳ ಮಿಶ್ರಣ ಅಷ್ಟೇ.

ನಿಮ್ಮೂರಿನಲ್ಲಿ ಸಿಗುವುದಿಲ್ಲವೇ,  ಅಡುಗೆಮನೆ ಡಬ್ಬದಲ್ಲಿ ಇರುವ ಬೇಳೆಗಳನ್ನೇ ಬಳಸಿದರಾಯ್ತು.  ತೊಗರಿ,  ಹೆಸ್ರು,  ಹುರುಳಿ,  ಕಡಲೆ ಇತ್ಯಾದಿ…


ಮಾಮೂಲಿಯಾಗಿ ನಾವು ಮೆಂತೆ ದೋಸೆಗೆ ತುಸು ತೆಂಗಿನತುರಿ ಹಾಕುವುದಿದೆ.  ಇದಕ್ಕೂ ಹಾಕೋಣ.


ನೆನೆದ ಬೇಳೆಗಳನ್ನು ತೆಂಗಿನ ತುರಿ ಹಾಗೂ ತೆಂಗಿನನೀರು ಸೇರಿಸಿ ನುಣ್ಣಗೆ ಅರೆಯಿರಿ.  ಮಜ್ಜಿಗೆಯ ಬದಲು ಕಾಯಿನೀರು ಎಂದುತಿಳಿಯಿರಿ.  ಮಜ್ಜಿಗೆ ಕುಡಿದೇ ಮುಗಿಯುತ್ತೆ,  ಇನ್ನು ದೋಸೆಗೆ ಎಲ್ಲಿಂದ ತರೋಣ?


ನಂತರ ಅಕ್ಕಿಯನ್ನೂ ಅರೆದು ಸೇರಿಸಿ. ಹಿಟ್ಟಿಗೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಇಡತಕ್ಕದ್ದು.  ಹುದುಗು ಬರಲು 8 ಗಂಟೆಯ ಅವಧಿಇರಲೇ ಬೇಕು.  ಹಿಟ್ಟು ದೋಸೆ ಹಿಟ್ಟಿನ ಸಾಂದ್ರತೆಯಲ್ಲಿ ಇರತಕ್ಕದ್ದು.


ಮೂರು ನಾಲಕ್ಕು ಬಾರಿ ಮಾಡಿ ದೋಸೆ ಸವಿದಾಯ್ತು.   ಮೊನ್ನೆ ಮಧು ಬಂದಿದ್ದಾಗ ಪುನಃ ಮಾಡಿ ಅವನಿಗೂ ರುಚಿ ಹಿಡಿಸಿದ್ದಾಯ್ತು.  


ಈಗ ಬಿರು ಬೇಸಿಗೆಯ ಕಾಲ ಬಂದಿದೆ.  ಅಡುಗೆಮನೆಯಲ್ಲಿ ರಾಗಿ ಹುರಿಟ್ಟು ತರಿಸಿ ಇಟ್ಟಿದ್ದೇನೆ.   ಮುಂಜಾನೆ ಯಾವುದೇ ವಿಧಾನದ ದೋಸೆ ಮಾಡಿರಲಿ,  ಸಂಜೆಯ ಹೊತ್ತು ಒಂದೆರಡು ಚಮಚ ರಾಗಿ ಹುರಿಟ್ಟು ಸೇರಿಸಿ ದೋಸೆ ಹೊಯ್ಯುವ ರೂಢಿ ನನ್ನದು.  ನಮ್ಮವರೂ ಈ ಕ್ರಮದ ದೋಸೆಯನ್ನು ಇಷ್ಟ ಪಟ್ಟು ತಿನ್ನುವವರು.   ಇನ್ನು ತುಂಟಿಯೂ ಕುಣಿದು ಕುಪ್ಪಳಿಸಿ ದೋಸೆ ನುಂಗುವವಳು…  ಇದು ಬೇಸಿಗೆಯ ಮಜಾ ಅನ್ನಿ.






Wednesday, 1 March 2023

ಕಸದಿಂದ ರಸ



 ಬೇಸಿಗೆ ಬಂತಲ್ವೇ,  ಬಚ್ಚಂಗಾಯಿ ಮಾಮೂಲು,  ತಿನ್ನುವುದಕ್ಕಿಂತ ಹೆಚ್ಚು ಕಸ ವಿಲೇವಾರಿಯದ್ದೇ ಸಮಸ್ಯೆ ಆಗ್ಬಿಟ್ಟಿದೆ.


ಬೆಳಗಿನ ತಿಂಡಿಯ ನಂತರ ಹತ್ತು ಗಂಟೆಯ ಹೊತ್ತಿಗೆ ತಿನ್ನಲಿಕ್ಕಾಗಿ ಬಚ್ಚಂಗಾಯಿ ಹೋಳುಗಳು ತಯಾರಾದುವು.  ಪಕ್ಕದಲ್ಲಿ ಮಧ್ಯಾಹ್ನದ ಅಡುಗೆಗಾಗಿ ಸೌತೆಕಾಯಿ ಕಾಯುತ್ತಲಿತ್ತು.  ಸೌತೆಯೊಂದಿಗೆ ಬಚ್ಚಂಗಾಯಿ ಸಿಪ್ಪೆ ತರಕಾರಿ ಹೋಳುಗಳಾಗಿ ಮಾರ್ಪಟ್ಟಿತು.  


ತೊಗರಿ ಬೇಳೆ ಬೇಯಿಸಿದ್ದಾಯ್ತ,  ತರಕಾರಿ ಹೋಳುಗಳು ನಂತರ ಬೇಯಲಿ,  ಕುಕ್ಕರ್ ಒಂದು ಸೀಟಿ ಹಾಕಿದ ನಂತರ ಒತ್ತಡ ಇಳಿಸುತ್ತ ಬನ್ನಿ,  ನಂತರ ಮುಚ್ಚಳ ತೆರೆಯಿರಿ.  ಈಗ ಒಂದು ನೀರುಳ್ಳಿ ಹೆಚ್ಚಿ ಹಾಕಿರಿ.


ನಮ್ಮ ತೆಂಗಿನ ತುರಿಯೂ ಸಿದ್ಧವಿದೆ.   ಇನ್ನೇಕೆ ತಡ,  ಮಸಾಲೆ ಹುಡಿ ತಿಂಗಳಿಗಾಗುವಷ್ಟು ಮಾಡಿ ಇಡುವ ರೂಢಿ ನನ್ನದು.  

ತೆಂಗಿನತುರಿ, ಮಸಾಲೆ,  ಹುಳಿ ಇತ್ಯಾದಿಗಳನ್ನು ಅರೆದು ಬೇಯಿಸಿದ ಸಾಮಗ್ರಿಗೆ ಕೂಡಿ,  ರುಚಿಗನುಸಾರ ಬೆಲ್ಲ, ಉಪ್ಪು ಹಾಕಿ.  ಅವಶ್ಯಕತೆಗೆ ತಕ್ಕಷ್ಟು ನೀರೆರೆದು ಕುದಿಸಿ,  ಬೆಳ್ಳುಳ್ಳಿ ಹಾಗೂ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ನಮ್ಮ ಅಡುಗೆ,  ಕಸದಿಂದ ರಸ ಸಿದ್ಧವಾಗಿದೆ.





  

Friday, 17 February 2023

ತುಂಟಿ ಬಾವಿಗೆ ಬಿದ್ದಳು

 

“  ಒಂದು ನಾಯಿ ಇರಲೇ ಬೇಕು.."

" ಯಾಕೆ ಸುಮ್ಮನೆ,  ನಾಯಿ ಬೆಕ್ಕು ಇಂತಾದ್ದೆಲ್ಲ ನಂಗೆ ಇನ್ನು ಬೇಡ... "

" ಹೋಗ್ಲಿ ಬಿಡಿ,  ಅತ್ತೆಗೆ ನಾಯಿ ಬೇಡಾಂದ್ರೆ ತರೂದು ಬೇಡ.."  ಎಂದಳು ಮೈತ್ರಿ.


" ನಾವೆಲ್ಲ ಬೆಂಗಳೂರಿಗೆ ಹೋದ್ಮೇಲೆ ನೀನೂ ಅಪ್ಪನೂ ಇಬ್ಬರೇ ಇರ್ತೀರ,  ಜೊತೆಗೆ ನಾಯಿ ಇದ್ದರೆ ಉತ್ತಮ..  ಯಾರು ಬಂದ್ರೂನೂ ಬೊಗಳುತ್ತೆ... ಇದೀಗ ಪುಟ್ಟ ಮರಿ,  ಹೊಂದಿಸಿ ಕೊಳ್ಳಲು ಸುಲಭ." ತರಲು ನಿಶ್ಚಯಿಸಿದ್ದ ಮಗ ಹೀಗಂದ.   " ರಸ್ತೆಯಲ್ಲಿ ಅನಾಥವಾಗಿ ಬಿದ್ದುಕೊಂಡಿದ್ದ ನಾಯಿಮರಿಯನ್ನು ನನ್ನ ಮಾವ ಉಳಿಸಿದ್ದಾರೆ... " ಎಂದು ಮಂಜೇಶ್ವರದ ಮಾವನ ಮನೆಯಲ್ಲಿನಾಯಿ ಸುರಕ್ಷಿತವಾಗಿರುವುದನ್ನೂ ತಿಳಿಸಿದ.


" ಹಾಗಿದ್ರೆ ಅವರೇ ಸಾಕಿಕೊಳ್ಳಲಿ ಬಿಡು.. "

" ಅವರ ಬಳಿ ದೊಡ್ಡ ಜಾತಿಯ ಎರಡು ನಾಯಿ ಉಂಟಲ್ಲ...  ಇದನ್ನು ನಾನು ತರ್ತೇನೆ ಅಂತ ಹೇಳಿಯೂ ಆಗಿದೆ..."

" ಹಾಗೆ ವಿಷಯ ಅನ್ನು.. "  ಹೆಣ್ಣುನಾಯಿಯೆಂಬ ಅಸಡ್ಡೆಗೊಳಗಾಗಿ ರಸ್ತೆಯಲ್ಲಿ ಇದ್ದಂತಹ ನಾಯಿಮರಿ  ಮಾನವೀಯಕರುಣೆಯಿಂದ ಉಳಿದಿದೆ.  ನಾನೇಕೆ ಬೇಡ ಅನ್ನಲಿ...    ಮೈತ್ರಿಯೇ ನಾಯಿಗೆ ತುಂಟಿ ಎಂಬ ನಾಮಕರಣ ಮಾಡಿಟ್ಚು ಬೆಂಗಳೂರಿಗೆ ಹೋದಳು.


ಮರಿ ನಾಯಿ ದೊಡ್ಡದಾಯಿತು.   "ತುಂಟಿ.. ತುಂಟಿ.. " ಅಂದರೆ ಸಾಕು ಎಲ್ಲಿದ್ದರೂ ಓಡಿ ಬರುತ್ತೆ.  ನಮ್ಮವರು  ಹಲವು ಆಟಪಾಠಗಳನ್ನು ಕಲಿಸುವ ಮೇಸ್ಟ್ರು.   ಚೆಂಡು ದೂರ ಎಸೆದ್ರೂ ಓಡಿ ಹೋಗಿ ತರುತ್ತೆ.  ಅಂತೂ ನಮಗೂ ಹೊತ್ತು ಕಳೆಯಲು ಸುಲಭ ಸಾಧನ.

ಮನೆಯಲ್ಲಿ ಟೀವಿ ಅದೂ ಇದೂ ಅಂತ ಇದ್ರೂನೂ ನಾವಿಬ್ಬರೂ ಟೀವಿಯನ್ನು ಓಲೈಸುತ್ತ ಕುಳಿತಿರುವವರಲ್ಲ.  ಟೀವಿ ಮಾಧ್ಯಮ ಬಹಳ ಹಳೆಯದಾಯ್ತು.


ತುಂಟಿ ಹಾಲು ಕುಡಿದು ದೊಡ್ಡದಾಯಿತು,  ಅದೇಕೋ ತಿಳಿಯದು, ಬಟ್ಟಲಿಗೆ ಅನ್ನ ಹಾಕಿದ್ದನ್ನು ತಿನ್ನಲೊಪ್ಪದು.   ಒಂದು ದಿನ ಪುಲಾವ್ ಮಾಡಿದ್ದನ್ನು ಹಾಕಿದಾಗ ಗಬಗಬನೆ ತಿಂದಿತು.  " ಎಲ ಇದರ... ನಿನಗೆ ದಿನಾ ಪುಲಾವ್ ಆಗ್ಬೇಕೂ ಅಂತೀಯಾ.. ಸುಮ್ಮನಿರು,  ನನ್ನಿಂದಾಗದು. "


ರೇಶನ್ ಶಾಪಿನಿಂದ ನಾಲ್ಕು ಪ್ಯಾಕೇಟು ಗೋಧಿ ಹುಡಿ ಬಂದಿತು.   ಚಪಾತಿ ಮಾಡದೇ ವಿಧಿಯಿಲ್ಲ,  ತುಂಟಿಗೂ ಹಾಕಲಾಗಿ  ಕುಣಿಕುಣಿದು ತಿಂದಳು.

" ನಾಯಿಗೆ ದಿನಾ ಚಪಾತಿ ಕೊಟ್ಟರಾಯಿತು..." ಎಂದರು ನಮ್ಮವರು.  "ಗೋಧಿ ಹುಡಿಯೂ ಮುಗಿಯುತ್ತೆ..."

ದಿನವೂ ಸಂಜೆ ಹಿಟ್ಟು ಕಲಸಿಟ್ಟು,  ಚಪಾತಿ ಮಾಡಿಟ್ಟು,  ನಾಯಿಗೂ ಆಯ್ತು,  ನನಗೂ ರಾತ್ರಿ ಅನ್ನದ ಬದಲು ಚಪಾತಿ ತಿನ್ನುವ ರೂಢಿ ಆರಂಭವಾದದ್ದು ಇಲ್ಲಿಂದಲೇ... ಎಲ್ಲವೂ ನಾಯಿ ಮಹಿಮೆ ಅನ್ನಿ.


ನಾಯಿಗೆ ಹಲವು ಚಟುವಟಿಕೆಗಳನ್ನು ಕಲಿಸುವ ಮೇಸ್ಟ್ರು,  ಈಗ ತೋಟಕ್ಕೆ ಧಾಳಿಯಿಡುವ ಹಸುಗಳನ್ನು ಓಡಿಸಲು ಕಲಿಸಲು ಮುಂದಾದರು.


ತುಂಟಿಯೂ ಬೊಗಳುತ್ತ ಓಡಿ ಓಡಿ ಹಸುಗಳನ್ನು ಓಡಿಸಲು ಸಿದ್ಧಳಾದಳು.  ನಮ್ಮವರೂ ಖುಷಿ ಪಟ್ಟರು.  ಅಂತೂ ನಾಯಿ ತಂದಿದ್ದು ಸಾರ್ಥಕ ಆಯ್ತು.  ನಾಯಿ ಪುಟ್ಟದಲ್ವೇ,  ಗಜಗಾಮಿನಿಯರಂತಿದ್ದ ಹಸುಗಳು ಕ್ಯಾರೇ ಮಾಡಲಿಲ್ಲ,  ಆದರೂ ತುಂಟಿ ಬಿಡಲೊಲ್ಲದು,  ಬೊಗಳುತ್ತ ಅಟ್ಟುವ ಪ್ರಯತ್ನ ಮಾಡುತಿತ್ತು.   ನಮಗೂ ಹಸುಗಳು ಇಲ್ಲವೇ ಆಡುಗಳು ಬಂದಿವೆ ಎಂದು ತಿಳಿಯುತಲಿತ್ತು. 


 ಒಂದು ಮುಂಜಾನೆ ತುಂಟಿಗೆ ಚಪಾತಿ ಹಾಕೋಣ ಅಂತ ಹೊರ ಬಂದ್ರೆ ನಾಯಿ ಕಾಣಿಸದು.  ಪಕ್ಕದ ಮನೆ ಹೇಮಕ್ಕ ಅಂದಿದ್ದು ನೆನಪಾಯ್ತು,  " ದಿನಾ ಬೆಳಗ್ಗೆ ನಮ್ಮ ಮನೆಗೆ ಬರುತ್ತೆ,  ನಾನೂ ಬಿಸ್ಕತ್ ಕೊಡುವುದಿದೆ.."  


ಹೆಚ್ಚೇನೂ ಚಿಂತಿಸದೆ ನನ್ನ ಇನ್ನಿತರ ಮನೆಕಲಸಗಳ ಬಗ್ಗೆ ಗಮನ ಹರಿಸಿದೆ.  ಮಧ್ಯಾಹ್ನ ಆದ್ರೂ ತುಂಟಿ ನಾಪತ್ತೆ.    " ನಾಯಿಎಲ್ಹೋಯ್ತು?  ಸ್ವಲ್ಪ ನೋಡ್ತೀರಾ..." ಎಂದು ನಮ್ಮವರ ಮುಂದೆ ಒದರಿದ್ದು ಗೋರ್ಕಲ್ಲ ಮೇಲೆ ನೀರೆರೆದ ಹಾಗಾಯ್ತು.   " ಅದು ನಾಯಿಯಲ್ಲವೇ,  ಎಲ್ಲೋ ತಿರುಗಾಟಕ್ಕೆ ಹೋಗಿರಬೇಕು."   

"ಸರಿ ಹಾಗಿದ್ರೆ.."  ಚಿಂತೆಗಿಟ್ಟುಕೊಂಡಿತು.  ತುಂಟಿಯು ನಾಯಿಗಳ ಜೊತೆಗೂಡಿ ತಿರುಗುವುದೆಂದರೇನು,  ಬಸಿರಾಗಿ ಬಂದೀತು.   ನಾಳೆಯೇ ಮಗನಿಗೊಂದು ಫೋನ್ ಮಾಡಿ ಹೇಳುವುದು,  ಈ ಕೂಡಲೇ ವೆಟರಿನರಿ ಡಾಕ್ಟರರನ್ನು ಭೇಟಿಯಾಗತಕ್ಕದ್ದು,  ಸುಮ್ಮನೇ ನಾಯಿ ತಂದರಾಗಲಿಲ್ಲ.


ಸಂಜೆ ಆಯ್ತು,  ನಮ್ಮವರಿಗೊಂದು ಫೋನ್ ಬಂದಿತು,  ಇವರೂ ಆತುರಾತುರವಾಗಿ ಕಾರಿನಲ್ಲಿ ಹೋದರು.  ಮತ್ತೊಂದರ್ಧ ಗಂಟೆಯಲ್ಲಿ ಮನೆಗೆ ಬಂದರು,  ಜೊತೆಯಲ್ಲಿ ತುಂಟಿ!


" ಏನಾಯಿತು? "

" ಮೊದಲು ನಾಯಿಗೆ ತಿನ್ನಲಿಕ್ಕೆ ಕುಡಿಯಲಿಕ್ಕೆ ಕೊಡು..  ಪಾಪ ಬೆಳಗಿನಿಂದ ಉಪವಾಸ.."

" ಹ್ಞಾಂ,  ಎಲ್ಲಿಗೆ ಹೋಗಿದ್ದು ತುಂಟಿ? "

" ಬಾವಿಗೆ ಬಿದ್ದಿತ್ತು, ಇಲ್ಲೇ ನಮ್ಮ ಆಯುರ್ವೇದ ಡಾಕ್ಟರ ಮನೆ ಬಾವಿಗೆ..."

" ಅಯ್ಯೋ ದೇವ್ರೇ..."

" ಡಾಕ್ಟರೂ ಕ್ಲಿನಿಕ್ಕಿಗೆ ಹೋಗಿರ್ತಾರೆ.  ಅವರಿಗೆ ಮಧ್ಯಾಹ್ನವೇ ಯಾರೋ ಸುದ್ದಿ ತಿಳಿಸಿದ್ದರಂತೆ,  ನಿಮ್ಮ ಬಾವಿಯೊಳಗೆ ನಾಯಿ ಅಂತ.   ಸಂಜೆ ಬಂದು ನೋಡ್ತಾರೇ.. ಇದು ತುಂಟಿ "

" ಮತ್ತೇ.."

"ಅವರೂ ಮೇಲೆತ್ತಲು ತುಂಬ ಪ್ರಯತ್ನ ಪಟ್ಟರಂತೆ,  ಕೈಲಾಗದ ಮೇಲೆ ಕತ್ತಲಾಗುತ್ತ ಬಂತಲ್ಲ ಅಂತ ನನಗೆ ಸುದ್ದಿ ತಿಳಿಸಿದ್ರು. "

" ಹಾಗೇ ಮೇಲೆ ಹೋಗುವಾಗ ಬಾಲಕೃಷ್ಣ ಶೆಟ್ಟಿ ಸಿಕ್ಕಿದ. ಅವನು ಇದ್ದದ್ದು ನಮ್ಮ ಪುಣ್ಯ."

" ಅವನ ಸಾಹಸದಿಂದ ನಾಯಿ ಮೇಲೆ ಬಂತು.." ವೀಡಿಯೋ ತೆಗೆದಿದ್ದೇನೆ ಆ ಮೇಲೆ ನೋಡು.  ಈಗ ತುಂಟಿಗೇನಾದ್ರೂ ಕೊಡು.."

" ಕೊಟ್ಟಾಯ್ತು,  ಒಂದು ಲೋಟ ಹಾಲು,  ಮೂರು ಚಪಾತಿ..."


ವೀಡಿಯೋ ಚಿತ್ರಣ ಮೊಬೈಲಲ್ಲಿ ತೇಲಿ ಬಂತು,  ಸಂಜೆಗತ್ತಲ ಚಿತ್ರಣ.

ಆ ವೇಳೆಗೆ ಬಾಲಕೃಷ್ಣನೇ ಅಲ್ಲಿಗೆ ಬಂದ.  " ಭಾಗ್ಯದ ನಾಯಿ ಇದು,  ಹಗ್ಗ  ಕಟ್ಟಿ ಬಾವಿಗೆ ಇಳಿದು,  ಬುಟ್ಟಿಯಲ್ಲಿ ನಾಯಿಯನ್ನು ಕೂರಿಸಿ ಮೇಲೆ ಕಳಿಸಲಿಕ್ಕೆ ಏನೂ ಕಷ್ಟ ಆಗಲಿಲ್ಲ,  ಹಂಗೆ ಬಾವಿಯಲ್ಲಿ ನೀರು ಹೇಳುವಷ್ಟೇನೂ ಇಲ್ಲ.  

ಪುನಃ ಹಗ್ಗದ ಸಹಾಯದಿಂದ ನಾನು ಮೇಲೆ ಹತ್ತ ಬೇಕಲ್ಲ,  ಕೈ ರಟ್ಟೆಯೇ ಸೋತು ಹೋಯ್ತು..."


" ಹೌದೂ,  ನಾಯಿ ಬಾವಿಗೆ ಬಿದ್ದಿದ್ದಾದರೂ ಹೇಗೆ? "  ಇದೊಂದು ಪ್ರಶ್ನೆ ನಮ್ಮನ್ನು ಕಾಡದಿರಲಿಲ್ಲ.  ಸಾಮಾನ್ಯವಾಗಿ ಹಸುಗಳನ್ನುಮೇಯಲು ಮುಂಜಾನೆಯೇ ಬಿಡುತ್ತಾರೆ,  ಹಾಗೆ ಬೆಳಗಾಗಬೇಕಾದರೆ ಹಸುಗಳು ತೋಟಕ್ಕೆ ಧಾಳಿಯಿಟ್ಟಿವೆ.  ಹಸುಗಳನ್ನು ಓಡಿಸುವ ರಭಸದಲ್ಲಿ ನಾಯಿಗೆ ಎದುರಿನ ಬಾವಿ ಕಾಣದೇ ಹೋಗಿದೆ..  ಇಂತಹ ಒಂದು ತೀರ್ಮಾನಕ್ಕೆ  ಬರಬೇಕಾಯಿತು.

ತುಂಟಿಯ ಸ್ವಭಾವದಲ್ಲೂ ಬದಲಾವಣೆ ಬಂದಿದೆ,  ಈಗ ಯಾವುದೇ ಪಶುಪ್ರಾಣಿ ಬಂದರೂ ಓಂದೆರಡು ಬಾರಿ ಬೊಗಳಿ ಸುಮ್ಮನಿದ್ದು ಬಿಡುತ್ತೆ. 




ಟಿಪ್ಪಣಿ:  ಫೆಬ್ರವರಿ ತಿಂಗಳ ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾದ ಲಲಿತ ಪ್ರಬಂಧ.