Pages

Ads 468x60px

Thursday, 23 April 2020

ಬೇಸಿಗೆಯ ಪಾನಕ





ಈಗ ಏನೇನೋ ಹಣ್ಣುಗಳ ಕಾಲ, ಗೇರು, ಮಾವು, ಹಲಸು ಮೊದಲಿನಿಂದಲೂ ಇದ್ದಿದ್ದೇ.. ಎಲ್ಲೆಂದರಲ್ಲಿ ಕಾಣ ಸಿಗುವ ಹಲಕೆಲವು ಹಣ್ಣುಗಳ ಹೆಸರೇ ಗೊತ್ತಿರುವುದಿಲ್ಲ.

ಟೇಬಲ್ ಮೇಲೆ ನಕ್ಷತ್ರ ಹಣ್ಣು.
 " ಹಾಗೇ ಇಟ್ಟು ಹಾಳು ಮಾಡಬೇಡ. "
" ಆಯ್ತು, ಏನೋ ಒಂದು ಮಾಡ್ತೇನೆ..."
" ಏನೋ ಒಂದೂಂತ ಮಾಡ್ಬೇಡ, ಚಂದಕೆ ಶರಬತ್ತು ಮಾಡು.. " ಗೌರತ್ತೆಯ ತೀರ್ಮಾನ ಬಂದಿತು. " ಸ್ವಲ್ಪ ಕಾಳುಮೆಣಸಿನ ಹುಡಿ ಹಾಕಿದ್ರೆ ಒಳ್ಳೇದು."

"ಆಯ್ತು, ಕಾಳುಮೆಣಸು ಹಾಕಿದ್ರೆ ಅದು ಪಾನಕ ಎಂದಾಗುತ್ತೆ.. ಬೆಲ್ಲ ಹಾಕ್ಬೇಕು. "
" ಬೆಲ್ಲವೋ ಸಕ್ಕರೆಯೋ ಏನೋ ಒಂದು ಮಾಡು. "

ಈಗ ಹಣ್ಣಿನ ಪಾನಕ ಮಾಡೋಣ.
ಅಂದಾಜು 25 ನಕ್ಷತ್ರ ಹಣ್ಣುಗಳನ್ನು ತೊಳೆಯಿರಿ.
ನಾಲ್ಕು ತುಂಡು ಮಾಡಿ ಬೀಜ ಇದ್ದರೆ ತೆಗೆಯಿರಿ.
ಹುಳ, ಕ್ರಿಮಿ ಇದೆಯೋ ಎಂದು ಪರಿಶೀಲಿಸುವುದೂ ಅಗತ್ಯ.
ಮಿಕ್ಸಿಯಲ್ಲಿ  ತಿರುಗಿಸಿ.
ಸುಸೂತ್ರವಾಗಿ ತಿರುಗಲು ಅವಶ್ಯವಿರುವ ನೀರು ಎರೆಯಿರಿ.
ಕುದಿಸಿ ತಣಿಸಿದ ನೀರು ಉತ್ತಮ, ನನ್ನ ಬಳಿ ಲಾವಂಚ, ಸೊಗದೇ ಬೇರಿನ ಕೆಂಬಣ್ಣದ ಸುವಾಸನಾಯುಕ್ತ ನೀರು ಇದ್ದಿತು, ಅದನ್ನೇ ಹಾಕಿದ್ದು.

ನಂತರ ತೆಂಗಿನಕಾಯಿ ಹಾಲು ಹಿಂಡುವಂತೆ ಇದನ್ನೂ ಸೋಸಿಕೊಳ್ಳಿ, ಗುಲಾಬಿ ವರ್ಣದ ರಸ ದೊರೆಯಿತು., ಚರಟ ಎಸೆಯಿರಿ.

ಒಂದು ಲಿಂಬೆಯ ರಸ ಯಾ ಪುನರ್ಪುಳಿಯ ದ್ರಾವಣ ಇದ್ದರೆ ಒಂದು ಸೌಟು, ನಕ್ಷತ್ರ ಹಣ್ಣಿನ ಹುಳಿ ಏನೂ ಸಾಲದು. ಹುಣಸೇ ಹಣ್ಣಿನ ರಸವೂ ಆದೀತು.

ಒಂದು ಅಚ್ಚು ಬೆಲ್ಲ ಅಂದರೆ ಕಿತ್ತಳೆ ಗಾತ್ರದ್ದು ಇರಬೇಕು.
ನೀರೆರೆದು ಕುದಿಸಿ, ಕರಗಿಸಿ, ಒಂದು ಚಮಚ ಕಾಳುಮೆಣಸಿನ ಹುಡಿ ಹಾಕಿ.

ಬೆಲ್ಲದ ನೀರನ್ನು ಶೋಧಿಸಿ ಆರಲು ಬಿಡಿ, ತುಸು ಉಪ್ಪು ಹಾಕಿದರೆ ಒಳ್ಳೆಯ ರುಚಿ.

ಬೆಲ್ಲದ ನೀರು, ಹಣ್ಣಿನ ರಸ, ಲಿಂಬೆ ರಸ ಸೇರಿಸಿ.
ಬೇಕಿದ್ದರೆ ತುಸು ನೀರು ಸೇರಿಸಬಹುದು, ನಾನು ಹಾಕಿಲ್ಲ.
ನಾಲ್ಕು ದೊಡ್ಡ ಲೋಟ ಪಾನಕ ಆಯ್ತು, ಬೆಲ್ಲದ ಬಣ್ಣ, ನಾರುಬೇರುಗಳ ಬಣ್ಣವೆಲ್ಲ ಸೇರಿ ಕಡು ಬಣ್ಣ ಬಂದಿತು.
ತಣ್ಣಗಾಗಲು ತಂಪುಪೆಟ್ಟಿಗೆಯಲ್ಲಿಟ್ಟು ಸಂಜೆಯ ಹೊತ್ತು ಕುಡಿಯಿರಿ.


ಸಸ್ಯಶಾಸ್ತ್ರದಲ್ಲಿ Syzygium samarangense ಎಂದಿರುವ ಇದು ಮರವಾಗಿ ಬೆಳೆಯುವ ಸಸ್ಯವಾಗಿದೆ. ಮರ ತುಂಬ ಹಣ್ಣು ತುಂಬಿ ತೊನೆದಾಡುವ ದೃಶ್ಯವೇ ನಯನಾಕರ್ಷಕ. ನೋಟದಿಂದಲೇ ದಾಹ ದೂರ.

ಬೇಸಿಗೆಯ ಹಣ್ಣು, ನೀರು ಅಧಿಕವಾಗಿರುವ ನಕ್ಷತ್ರ ಹಣ್ಣಿನಲ್ಲಿ ಜೀವ ಪೋಷಕ ದ್ರವ್ಯಗಳೂ ಹೇರಳವಾಗಿ ಲಭ್ಯ. ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ಇಂತಹ ಹಣ್ಣುಗಳನ್ನು ತಿಂದು ಬೇಸಿಗೆಯ ದಾಹವನ್ನು ತಡೆಯಬಹುದು, ತನ್ಮೂಲಕ ಡಿಹೃಡ್ರೇಶನ್ ಯಾ ನಿರ್ಜಲೀಕರಣ ನಿವಾರಕ ಹಣ್ಣು ಇದೆಂದು ತಿಳಿದಿರಲಿ.
ಕ್ಯಾಲ್ಸಿಯಂ, ಕಬ್ಬಿಣ, ಪೊಟಾಶಿಯಂ ಇತ್ಯಾದಿ ಇರುವುದರಿಂದ ವಯಸ್ಸಾದವರಿಗೆ ಸ್ನಾಯುಗಳ ಬಲವರ್ಧನೆಯಿಂದ ನರಗಳ ನಿಶ್ಶಕ್ತಿ ದೂರವಾದೀತು.
ವಿಟಮಿನ್ ಎ ಇರುವ ಹಣ್ಣು, ಕಣ್ಣುಗಳ ಕಾಂತಿ ವರ್ಧನೆ.
ನಿಯಮಿತ ಸೇವನೆಯಿಂದ ಕಿಡ್ನಿಯ ಕಲ್ಲುಗಳ ಬಾಧೆ ಇರದು. ಲಿವರ್ ಕೂಡಾ ಸಶಕ್ತ.
ವಿಟಮಿನ್ ಬಿ, ಮೆಟಾಬಾಲಿಸಂ ಕಾಪಾಡುವಲ್ಲಿ ಶಕ್ತ, ನಿಸ್ಸಂದೇಹವಾಗಿಯೂ ಇದು ಒಂದು ಅ್ಯಂಟಿ ಓಕ್ಸಿಡೆಂಟ್ ಆಗಿರುತ್ತದೆ.
ಹಣ್ಣುಗಳನ್ನು ಹಾಗೇನೇ ತಿನ್ನಿ, ಜ್ಯೂಸ್ ಮಾಡಿ ಕುಡಿಯಿರಿ.
ಚಟ್ನಿ, ಸೂಪ್, ಸಲಾಡ್ ಗೊಜ್ಜುಗಳಿಗೆ ಬಳಸಿರಿ.
ಹೇಗೂ ಒಂದು ವಿಧವಾಗಿ ತಿನ್ನಿ.
ಆಸಕ್ತರು ಹೂಸರುಚಿಗಳನ್ನು ತಯಾರಿಸಿ ಸವಿಯಿರಿ, ನಮಗೂ ಹಂಚಿರಿ.

" ನಾಳೆ ಜಾಮ್ ಮಾಡಿ ನೋಡಬಹುದಲ್ಲ.. " ಅಂದರು ಗೌರತ್ತೆ.

" ಹೌದಲ್ಲ, ದೋಸೆ, ಚಪಾತಿಗೆ ಒಳ್ಳೆಯ ಕೂಟು. "

An apple a day, keeps the doctor away ಎಂಬ ಆಂಗ್ಲ ನುಡಿ ಇಂತಹ ಹಣ್ಣುಗಳಿಗೆ ಅನ್ವಯಿಸುವಂತದ್ದು. water rose apple ಎಂಬ ಹೆಸರು ಇದರದ್ದು.
ಬೀಜಗಳಿಂದ ಪುನರುತ್ಪಾದನೆ, ಬೀಜ ಬಿತ್ತಿ ಮೊಳಕೆಯೊಡೆದು. ಸಸಿಯನ್ನು ಚಿನ್ನಾಗಿ ಆರೈಕೆ ಮಾಡಿದಲ್ಲಿ ಮೂರು ವರ್ಷಗಳಲ್ಲಿ ಫಲವೃಷ್ಟಿ.
ತೇವಾಂಶ ಅಧಿಕವಿರುವಲ್ಲಿ ನೆಡುವುದು ಉತ್ತಮ.
ನಮ್ಮ ಆಸುಪಾಸಿನಲ್ಲಿ ಬೆಳೆಯುವ ಹಲವಾರು ಜಾತಿಯ ಹಣ್ಣುಗಳಿವೆ, ದಾರೆಹುಳಿಯೂ ಅವುಗಳಲ್ಲೊಂದು. ಆಂಗ್ಲ ಭಾಷೆಯಲ್ಲಿ ಇದು star apple. ಗೇರು ಹಣ್ಣನ್ನು ಇಂಗ್ಲೀಷ್ ಭಾಷಾಶಾಸ್ತ್ರ cashew apple ಅಂದಿದೆ. ಅನಾನಸ್ ಹಣ್ಣು pine-apple ಎಂದೆನಿಸಿದೆ.



Friday, 17 April 2020

ಬೋಳು ಸಾಂಬಾರ್






ಇವತ್ತು ತರಕಾರಿ ಏನೇನಿವೆ?
ಒಂದು ಹಿಡಿಯಷ್ಟು ಬೀನ್ಸ್ ಉಳಿದಿದೆ,
ನೀರುಳ್ಳಿ ಇದೆ,
ಟೊಮ್ಯಾಟೋ ಇದೆ.. ಸಾಂಬಾರ್ ಮಾಡಬಹುದು.

ಮಾಡಿಟ್ಟ ಸಾಂಬಾರ್ ಹುಡಿ ಮುಗಿಯುತ್ತ ಬಂದಿದೆ, ಪುನಃ ಮಾಡೋಣಾಂದ್ರೆ ಒಣಮೆಣಸು ಮುಗಿದಿದೆ.
ಟೇಬಲ್ ಮೇಲೆ ಬರೆದಿಟ್ಟ ಜೀನಸು ವಗೈರೆ ಮಾಲುಗಳ ಪಟ್ಟಿ ಇಟ್ಟಲ್ಲೇ ಇದೆ, ಯಾಕೋ ಬಂದಿಲ್ಲ.

" ಯಾಕ್ರೀ ತಂದಿಲ್ಲ..." ಕೇಳುವಂತಿಲ್ಲ, ಕೊರೋನಾ ಕಾಲ.

ತೊಗರಿಬೇಳೆ ಡಬ್ಬವೂ ಈಗ ಸಾಂಬಾರ್ ಮಾಡ್ಬಿಟ್ರೆ ಖಾಲಿ ಆದ ಹಾಗೆ, ಆಗಲಿ.

 ಇದ್ದಂತಹ ತೊಗರಿಬೇಳೆಯು ಕುಕ್ಕರಿನಲ್ಲಿ 3 ಸೀಟಿ ಕೂಗಿಕೊಂಡಿತು.

ಬೀನ್ಸ್, ಟೊಮ್ಯಾಟೋ ನೀರುಳ್ಳಿಗಳು ಕತ್ತರಿಸಲ್ಪಟ್ಟು, ನಾಲ್ಕಾರು ಬೆಳ್ಳುಳ್ಳಿ ಎಸಳುಗಳೂ ಸುಲಿಯಲ್ಪಟ್ಟು,
ಬೆರೆತಿದೆ ಉಪ್ಪು ರುಚಿಗೆ ತಕ್ಕಷ್ಟು,
ಪುನಃ ಕುಕ್ಕರ್ ಒಳಗೆ ತುಂಬಲ್ಪಟ್ಟು,
ಒಂದು ಸೀಟಿ ಕೂಗಲ್ಪಟ್ಟು,

ಕೆಳಗಿಳಿಸಿ, ಮೆಲ್ಲನೆ ಒತ್ತಡ ಇಳಿಸಿ.

ಇದೀಗ ತೆಂಗಿನತುರಿಯ ಸರದಿ,
ನೀರಿನ ಹಂಗಿಲ್ಲದೆ,
ಹಿಡಿಯಷ್ಟು ತುರಿ ತಿರುತಿರುಗಿ
ಬೇಯಿಸಿಟ್ಟ ಸಾಮಗ್ರಿ
ಬಾಯ್ದೆರೆದು ಕೂಡಿದಾಗ
ಇನ್ನೊಂದು ಕುದಿ ಕುದಿಸಿ
ಕೆಳಗಿಳಿಸಿ.

" ಊಟಕ್ಕಾಯ್ತೇ.. "
" ಆಯ್ತು.. "

ಒಗ್ಗರಣೆಗೆ ಸಮಯವಿಲ್ಲ, ಒಂದು ಚಮಚ ತುಪ್ಪ ಎರೆಯುವಲ್ಲಿಗೆ ಒಗ್ಗರಣೆ ಶಾಸ್ತ್ರ ಮುಕ್ತಾಯ.

ಮಸಾಲಾರಹಿತ ಸಾಂಬಾರ್ ಸಿದ್ಧವಾಯಿತು.

"ನಿನ್ನ ಅಂಬೊಡೆಗೂ ಹೀಗೇ ಸಾಂಬಾರ್ ಮಾಡಬೇಕಾಗಿತ್ತು.. " ಅನ್ನೋದೇ ಗೌರತ್ತೆ.



Friday, 10 April 2020

ವಡಾ ಸಾಂಬಾರ್




ಎಲ್ಲಿಗೂ ಹೋಗೋ ಹಾಗಿಲ್ಲ, ಮನೆಯೇ ಮಂತ್ರಾಲಯ ಆಗ್ಬಿಟ್ಟಿದೆ.

ಮುಂಜಾನೆ ಮಾಡಿದ್ದ ಅವಲಕ್ಕಿ ಸಜ್ಜಿಗೆ ಯಾಕೋ ರುಚಿಯಾಗಿಲ್ಲ ಅಂದ್ರು.
ನನಗೇನೋ ರುಚಿಯಾಗಿಯೇ ಇತ್ತು.
" ನೀನು ಅವಲಕ್ಕಿಗೆ ಹಾಕಿದ ಮಸಾಲೆ ಜಾಸ್ತಿ ಆಯ್ತೂಂತ ಕಾಣುತ್ತೆ.. " ಎಂದರು ಗೌರತ್ತೆ.
"ಇರಬಹುದೇನೋ.. "

ಮನೆಯೊಳಗೆ ನಾವೇ, ಹೊರಕೆಲಸಕ್ಕೇಂತ ಯಾರೂ ಇಲ್ಲದ ಕೊರೋನಾ ಕಾಲ, ಮಕ್ಕಳೂ ಅವರ ಪಾಡಿಗೆ ಬೆಂಗಳೂರಿನಲ್ಲಿ ಇದಾರೆ, ದಿನಾ ಮಕ್ಕಳಿಗೆ ಅಡುಗೆ ಹೇಳ್ಕೊಡೋದೇ ಆಯ್ತು.

ತೋಟಕ್ಕೆ ನೀರು ಹಾಕೋದು, ಬಿದ್ದ ಅಡಿಕೆ ತರೂದು ಇತ್ಯಾದಿ ಕೈಕೆಲಸಗಳ ಹೊಣೆ ಇರುವಾಗ ಹಸಿದುಕೊಂಡು ಇರಬಾರದು ಎಂಬ ಘನ ಚಿಂತನೆಯೊಂದಿಗೆ 10 ಗಂಟೆಯ ಚಹಾ ಸಮಯದ ಹೊತ್ತಿಗೆ ಸವಿರುಚಿಯೊಂದು ಸಿದ್ಧವಾಯಿತು.

" ಏನು ಮಾಡಿದ್ರೀ? "
" ಉದ್ದಿನ ವಡೆ ಕಣ್ರೇ... " ಹೇಗೂ ಹೋಟಲ್ ತಿಂಡಿ ಹುಡುಕುತ್ತ ತಿರುಕಾಡುವ ಕಾಲ ಅಲ್ಲ, ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳೋಣ.

ಒಂದು ಲೋಟ ಉದ್ದು ತೊಳೆದು, ಮುಳುಗುವಷ್ಟು ನೀರು ಎರೆಯಿರಿ. ಅರ್ಧ ಗಂಟೆಯಲ್ಲಿ ಉದ್ದು ನೀರನ್ನೆಲ್ಲ ಹೀರಿರುತ್ತದೆ.
ಈಗ ಅರೆಯುವ ಸಮಯ.
ಬೇರೆ ನೀರು ಹಾಕೋ ಹಾಗಿಲ್ಲ.
ಶುಂಠಿ ಹಸಿಮೆಣಸು ಇತ್ಯಾದಿಯಾಗಿ ಯಾವುದೂ ಇರಲಿಲ್ಲ.. " ಅದಿಲ್ಲ ಇದಿಲ್ಲ " ಎಂದು ಗೊಣಗುವ ಹಾಗೂ ಇಲ್ಲ.
ಅರೆಯುವಾಗ ಉದ್ದಿನ ಗಾತ್ರದ ಇಂಗು ಹಾಗೂ ಕರಿಬೇವಿನೆಸಳು ಬಿಟ್ರೆ ಬೇರೇನೂ ಇಲ್ಲ.
ಹಿಟ್ಟು ರುಬ್ಬಿದ ನಂತರ ಒಂದು ಚಮಚ ಅಕ್ಕಿ ಹುಡಿ ಯಾ ಚಿರೋಟಿ ರವೆ ಸೇರಿಸಿ.
ಉಪ್ಪು ಮಿತವಾಗಿ ಹಾಕ್ಬೇಕು, ತುಸು ಜಾಸ್ತಿ ಆದ್ರೂನೂ ವಡೆಯ ರುಚಿ ಹೋಯ್ತು ಅನ್ನಿ.

ಮಿಕ್ಸಿಯಲ್ಲಿ ರುಬ್ಬಿದ ಹಿಟ್ಟನ್ನು ಕೈ ಒದ್ದೆ ಮಾಡಿಕೊಂಡು ತೆಗೆಯಿರಿ, ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
ದೋಸೆ ಇಡ್ಲಿಗಳಿಗೆ ರುಬ್ಬುವಂತೆ ನುಣ್ಣಗಾಗುವ ಅಗತ್ಯವಿಲ್ಲ.

" ಎಲ್ಲ ಹಿಟ್ಟನ್ನೂ ಒಂದೇ ಬಾರಿ ವಡೆ ಮಾಡಿ ಇಡ್ಬೇಡ, ಲೆಕ್ಕ ಮಾಡಿ ನಾಲ್ಕು ಸಾಕು.."

ಗೌರತ್ತೆ ಅಂದಿದ್ದು ಸರಿಯೇ, ಉಳಿದ ಹಿಟ್ಟನ್ನು ಫ್ರಿಜ್ ಒಳಗೆ ಕಾದಿರಿಸಲಾಯಿತು.

ಪ್ಲಾಸ್ಟಿಕ್ ಹಾಳೆ ಮೇಲೆ ತುಸು ಎಣ್ಣೆ ಸವರಿ, ಅಂಗೈಯನ್ನು ಒದ್ದೆ ಮಾಡಿಕೊಂಡು ವಡೆಯ ಹಿಟ್ಟನ್ನು ಹಾಳೆ ಮೇಲೆ ಇರಿಸಿ, ಕೈ ಬೆರಳಿನಲ್ಲಿ ಅಗಲವಾಗಿ ತೂತು ಕೊರೆಯಿರಿ.

ಈ ವೇಳೆಗೆ ಬಾಣಲೆಯ ಎಣ್ಣಿ ಬಿಸಿಯಾಗಿದೆ, ಒಂದೇ ಬಾರಿ ನಾಲ್ಕು ವಡೆ ಬೇಯಿಸುವಷ್ಟು ಎಣ್ಣೆ ಇಟ್ಟಿದ್ದೀರಾ,
ಎರಡೂ ಬದಿ ಕೆಂಪಗಾಗುವಂತೆ ಬೇಯಲಿ.

ನಂತರ ತೂತಿನ ತಟ್ಟೆಗೆ ಹಾಕಿ, ಬಿಸಿ ಇರುವಾಗಲೇ ತಣ್ಣೀರಿನಲ್ಲಿ ಮುಳುಗಿಸಿ ತೆಗೆಯಿರಿ.
ಸಾಂಬಾರ್ ಹೇಗೂ ಮಾಡಿರುತ್ತೇವಲ್ಲ, ಒಂದು ಸೌಟು ಸಾಂಬಾರ್ ಸುರಿದು ತಿನ್ನಿ.
ಮೊಸರು ಎರೆದು ತಿನ್ನಲು ಇನ್ನೂ ರುಚಿ. ಈ ಬೇಸಿಗೆಗೆ ಮೊಸರು ಸೂಕ್ತ ಆಹಾರ.







Thursday, 2 April 2020

ಸಾಂಬಾರ್ ಹುಡಿ




" ಅಂಗಡಿ ಪಟ್ಟಿ ಮೈಲುದ್ದ ಬರೆಯಬೇಡ, ತಂದ ಹಾಲನ್ನು ಮಜ್ಜಿಗೆ ಮಾಡಿ ಹಾಳು ಮಾಡಬೇಡ..."

" ಆಯಿತು, ಅಗತ್ಯದ ಅಕ್ಕಿ, ಅವಲಕ್ಕಿ ತನ್ನಿ.. ನಾಯಿಗೆ ಹಾಕಲಿಕ್ಕೆ ಸ್ವಲ್ಪ ಜಾಸ್ತಿ ಅವಲಕ್ಕಿ ತನ್ನಿ... "

ಜೀನಸು ಅಂಗಡಿಯಿಂದ ಅವಶ್ಯವಿದ್ದ ಮಾಲುಗಳೆಲ್ಲ ಬಂದವು. ಇನ್ನು ಚಿಂತೆಯಿಲ್ಲ. ತರಕಾರಿ ಮುಗಿದ್ರೆ ತರಲಿಕ್ಕೆ ಹೇಳುವ ಹಾಗೂ ಇಲ್ಲ. ತೆಂಗಿನಕಾಯಿ ಅರೆದು ತಂಬ್ಳಿ ಮಾಡಿಟ್ಟರೂ ನಡೀತದೆ.

ಅಡುಗೆಯ ಸಮಯ, ಸಾಂಬಾರ್ ಮಾಡಲಿಕ್ಕೆ ಮೆಣಸು ಕೊತ್ತಂಬರಿ ಹುರಿಯಬೇಕಾಗಿದೆ. ತಲೆಯೊಳಗೆ ದೊಡ್ಡ ಲೈಟ್ ಮಿಂಚಿತು, ಎರಡು ದಿನಕ್ಕಾಗುವಷ್ಟು ಹುರಿದು ಪುಡಿ ಮಾಡಿಟ್ಕೊಳ್ಳೋಣ.

ಹೇಗೆ?

2 ಒಣ ಮೆಣಸು ಹಾಕ್ತೀರ, 4 ಮೆಣಸು ಹಾಕ್ಕೊಳ್ಳಿ.
1 ಚಮಚ ಉದ್ದಿನಬೇಳೆ ಬದಲಾಗಿ 2 ಚಮಚ.
ಒಂದೂವರೆ ಚಮಚ ಕೊತ್ತಂಬರಿಯಾಗಿದ್ರೆ 3 ಚಮಚ.
ಇದೇ ಮಾದರಿಯಲ್ಲಿ ಜೀರಿಗೆ, ಮೆಂತೆ, ಇಂಗು..
2 ಎಸಳು ಕರಬೇವು ಹಾಕ್ಕೂಂಡು,
ಎಣ್ಣೆಪಸೆಯಲ್ಲಿ ಘಂ ಎಂಬಂತೆ ಹುರಿಯಿರಿ.
ಚೆನ್ನಾಗಿ ಆರಿದ ನಂತರ ಮಿಕ್ಸಿಯಲ್ಲಿ ಗುದ್ದಿರಿ.

ನಂತರ ಎಷ್ಟು ಚಮಚ ಹುಡಿ ದೊರೆಯಿತು? ಅಳೆಯಿರಿ.
8 ಚಮಚ ಸಾಂಬಾರ್ ಹುಡಿ ಸಿಕ್ತು ಕಣ್ರೀ..

ಸರಿ, ಮುಂದಿನ ಅಡುಗೆಗೆ ನಾಲ್ಕು ಚಮಚ ಹುಡಿ ತೆಗೆದಿರಿಸುವುದು. ಅಂಗಡಿಯಿಂದ ಸಾಂಬಾರಿನ ಹುಡಿ ಇನ್ನು ಮುಂದೆ ತರಬೇಕಾಗಿಯೇ ಇಲ್ಲ ಅನ್ಮಿ.

ನಾನು ನುಣುಪಾದ ಹುಡಿ ಮಾಡಿಲ್ಲ, ಏನೇ ಸಾಂಬಾರು ಮಾಡುವುದಿದ್ದರೂ ತೆಂಗಿನತುರಿ ಅರೆದೇ ಸಿದ್ಧ ಅನ್ನುವ ಮಂದಿ ನಮ್ಮ ಕರಾವಳಿ ರಾಜ್ಯದಲ್ಲಿ ಇರುವಾಗ ನಾನೂ ಅದಕ್ಕೆ ಹೊರತಲ್ಲ. ಹೇಗೂ ಇನ್ನೊಮ್ಮೆ ತೆಂಗಿನೊಂದಿಗೆ ಅರೆಯುವುದಿದೆ. ನಮ್ಮ ಅಡುಗೆ ಗಣಪಣ್ಣನೂ ವಿಶೇಷ ಅಡುಗೆಗೆ ಬಂದಾಗ ಹೀಗೇ ಮಸಾಲೆ ಮಾಡಿ ಇಟ್ಟಿರ್ತಾನೆ.
ತೆಂಗಿನ ತುರಿ ಬಳಸದೇ ಸಾಂಬಾರ್ ತಯಾರಕರು ನುಣ್ಣಗೆ ಪುಡಿ ಮಾಡಿಕೊಳ್ಳತಕ್ಕದ್ದು.

ನಾಳೆ ಮಜ್ಜಿಗೆ ಹುಳಿ ಮಾಡು.. ನಿನ್ನ ಹುಡಿ ಉಳಿತಾಯ... " ಗೌರತ್ತೆಯ ಸಲಹೆ ಸಿಕ್ಕಿತು. " ನಾಡಿದ್ದು ಹುಳಿಮೆಣಸು, ಅದಕ್ಕೂ ಸಾಂಬಾರ್ ಹುಡಿ ಬೇಡ... "
" ಅದರ ನಾಡಿದ್ದು ಸೋರೆಕಾಯಿ ಬೋಳುಹುಳಿ ಮಾಡಿದ್ರಾಯ್ತು ಅನ್ನಿ... "

" ಸಾರಿನ ಹುಡಿ ಮಾಡಿ ಇಟ್ಕೋ..  ದಿನಾ ಒಂದು ಸಾರು ಆಗಲೇ ಬೇಕಲ್ಲ... "

ಸರಿ, ಬಿಡುವಾದಾಗ ಸಾರಿನ ಹುಡಿ ತಯಾರಿ ಆಯ್ತು. ಇದನ್ನು ಒಂದು ವಾರಕ್ಕೆ ಆಗುವಷ್ಟು ಮಾಡಿ ಇಟ್ಕೊಳ್ಳಿ.

2 ಒಣಮೆಣಸು ಹಾಕುವಲ್ಲಿ 12 ಮೆಣಸು
1 ಚಮಚ ಕೊತ್ತಂಬರಿ ಬೇಕಾಗಿದ್ರೆ 6 ಚಮಚ
ಜೀರಿಗೆ ಮೆಂತೆ ಇಂಗು ಇದೇ ಅನುಪಾತದಲ್ಲಿ ಹಾಕಿ
ಸಾರಿನ ಹುಡಿ ಅಲ್ವೇ, ಸಾಸಿವೆ ಕೂಡಾ ಹಾಕ್ಬೇಕು, ಒಟ್ಟಿನಲ್ಲಿ ತುಸು ತುಸು ಹಾಕುವಂತಹ ಸಾಮಗ್ರಿಗಳು, ಒಂದು ಚಮಚ ಸಾಕು.
ಒಂದೆಸಳು ಕರಿಬೇವು ಇರಲಿ
ಎಣ್ಣೆಪಸೆಯಲ್ಲಿ ಹುರಿಯಿರಿ.
ಹುರಿದಾಯ್ತು ಅನ್ನುವ ಹಂತದಲ್ಲಿ ಕರಿಬೇವು ಬೀಳಲಿ.
ಕಾಳುಮೆಣಸು ಇದ್ದರೆ ಒಂದು ಚಮಚದಷ್ಟು ಸೇರಿಸಿ.
ಈಗಿನ ಕೊರೋನಾ ಹವಾಮಾನಕ್ಕೆ ಸೂಕ್ತ.
ಕೊನೆಗೆ ಅರ್ಧ ಚಮಚ ಅರಸಿಣ ಹುಡಿ ಬೆರೆಸಿ ಕೆಳಗಿಳಿಸಿ.
ಆರಿದ ನಂತರ ನುಣ್ಣಗೆ ಹುಡಿ ಮಾಡಿ , 6 ದಿನಕ್ಕೆ ಎಷ್ಟು ಚಮಚ ಹುಡಿ ಬೇಕಾದೀತೆಂದು ಅಳೆದು ಡಬ್ಬದಲ್ಲಿ ಚಮಚ ಲೆಕ್ಕಾಚಾರದೊಂದಿಗೆ ಶೇಖರಿಸಿ.

ತೊಗರಿಬೇಳೆ ಸಾರು ಯಾ ಇನ್ಯಾವುದೇ ತಿಳಿಸಾರು, ನೀರುಳ್ಳಿ ಸಾರು, ಬೆಳ್ಳುಳ್ಳಿ ಸಾರು, ಟೊಮ್ಯಾಟೋ ಸಾರು... ಘಮಘಮಿಸುವಂತಹ ಸಾರಿನ ಹುಡಿ ನಮ್ಮದಾಗಿದೆ.





Sunday, 22 March 2020

ನೆರುಗಳ ಸೊಪ್ಪಿನ ರಸಂ







ಈಗ ಕೊರೋನಾ ಹಾವಳಿಯ ಗದ್ದಲ. ನಾವು ಅಡುಗೆ ಮನೆಯಿಂದಾನೆ ಶರೀರದ ರೋಗನಿರೋಧಕ ಶಕ್ತಿ ವರ್ಧನೆ ಹೇಗಪ್ಪಾ ಎಂದು ಚಿಂತಿಸುವಂತಾಗಿದೆ.

" ಮಾರುಕಟ್ಟೆಗೆ ಹೋಗಿ ತರಕಾರಿ ತನ್ರೀ " ಎಂದು ಹೇಳುವಂತಿಲ್ಲ.

" ಇರುವುದರಲ್ಲೇ ನಿಭಾಯಿಸು.. "

 ಹಿತ್ತಲ ಗಿಡಬಳ್ಳಿಗಳ ಅವಲೋಕನೆ... ಯಾವುದಾದೀತು?

" ಏನೂ ಇಲ್ವೇ.. ನೆರುಗಳ ಸೊಪ್ಪು ತಾ... ಅದೇ ಸಾಕು, ಆರೋಗ್ಯಕ್ಕೂ ಒಳ್ಳೆಯದು. " ಗೌರತ್ತೆ ಅಂದರು.

" ನೀವೇ ತನ್ನಿ, ನಾನು ತೆಂಗಿನಕಾಯಿ ಸುಲಿದು ಒಡೆದು ತುರಿದು ಇಡ್ತೇನೆ. "

ಗೌರತ್ತೆ ನೆರುಗಳದ ಎರಡು ಕೊಂಬೆ ಮುರಿದು ತಂದರು. " ಒಳ್ಳೆಯ ಸೊಪ್ಪು ನಾನೇ ಆಯ್ದು ಕೊಡ್ತೇನೆ.." ಎಂದು ಕನ್ನಡಕ ಮೂಗಿಗೇರಿಸಿ " ಏನು ಪರೀಮಳ.. ದಶಮುಲಾರಿಷ್ಠಕ್ಕೂ ಇದರ ಬೇರು ಹಾಕಲಿಕ್ಕುಂಟು.." ಬಿಡಿ ಎಲೆಗಳನ್ನು ಒಂದು ಲೋಟದಲ್ಲಿ ತುಂಬಿಸಿ ಇಟ್ಟರು ಗೌರತ್ತೆ.

ತನ್ನದೇ ತಾಜಾ ಪರಿಮಳ ಹೊಂದಿರುವ ನೆರುಗಳ ಸೊಪ್ಪಿನ ಅಡುಗೆಗೆ ಇನ್ಯಾವುದೇ ಮಸಾಲಾ ಸಾಮಗ್ರಿಗಳ ಅವಶ್ಯಕತೆಯಿಲ್ಲ.

ಹೇಗೆ ಮಾಡಿದ್ದು?

ಅರ್ಧ ಕಡಿ ತೆಂಗಿನತುರಿ
ನೆನೆಸಿಟ್ಟ ಒಣಮೆಣಸು
ಹಸಿ ಅರಸಿಣ ಅಥವಾ ಅರಸಿಣ ಹುಡಿ
ಹುಣಸೆಯ ಹುಳಿ
ರುಚಿಗೆ ತಕ್ಕಂತೆ ಉಪ್ಪು
ನುಣ್ಣಗೆ ಅರೆಯಿರಿ.

ಒಂದು ಲೋಟ ನೀರು ಕುದಿಸಿ.
ನೀರು ಕುದಿಯುವಾಗ ನೆರುಗಳ ಸೊಪ್ಪು ಹಾಕಿ.
ಅರೆದಿಟ್ಟ ತೆಂಗಿನ ಅರಪ್ಪು ಬೀಳಲಿ.
ಸಾರಿನಂತೆ ತೆಳುವಾಗಲು ನೀರು ಎರೆಯಿರಿ.
ರುಚಿಕರವಾಗಲು ಬೆಲ್ಲವನ್ನೂ ಹೊಂದಿಕೆಯಾಗುವಂತೆ ಹಾಕಬಹುದಾಗಿದೆ.
ಚಿನ್ನಾಗಿ ಕುದಿಯಲಿ, ನೆರುಗಳ ಸೊಪ್ಪಿನ ಸಾರ ನಮ್ಮ ರಸಂ ಯಾ ಸಾರು ಎನ್ನುವಂತಿರಬೇಕು.
ಒಂದು ಪುಟ್ಟ ಒಗ್ಗರಣೆ ಇರಲಿ.

ಸೊಪ್ಪಿನೂಟದೊಂದಿಗೆ ನಮ್ಮ ಈ ಭಾನುವಾರದೂಟ ಸಂಪನ್ನವಾಯಿತು.

" ತುಪ್ಪದಲ್ಲಿ ಉಂಡಷ್ಟೇ ಶಕ್ತಿ ಕೊಡುತ್ತಂತೆ ಈ ನೆರುಗಳ.." ಗೌರತ್ತೆಯ ರಿಮಾರ್ಕು.

ಹಣ್ಣು ಸೌತೆ ಇದ್ದರೆ ಹಾಕಬಹುದಾಗಿತ್ತು. ಆಗ ಇದು ಸೌತೆಯ ಹುಳಿಮೆಣಸು ಎಂದೆನ್ನಿಸಿಕೊಂಡೀತು.

ಏನೇ ಆಗಲಿ ಕೊರೋನಾ ಗದ್ದಲದಿಂದಾಗಿ ನಾವು ಪ್ರಕೃತಿ ಸಹಜ ಜೀವನದತ್ತ ಮರಳೋಣ.
ಮನೆಯೊಳಗಿನ ಗಂಜಿಯೂಟವೇ ಹಿತವೆಂದು ತಿಳಿಯುವ ಕಾಲ ಬಂದಿದೆ.

ಪುಟ್ಟ ಮರದಂತೆ ಬೆಳೆಯುವ ಈ ಸಸ್ಯ ಸಂಕುಲದ ತವರು ನಮ್ಮ ಭಾರತ, ಆಯುರ್ವೇದ ಔಷಧಿ ಸಸ್ಯವಾದ ಇದು ಅಗ್ನಿಮಂಥ ಎಂಬ ಹೆಸರನ್ನು ಹೊಂದಿದೆ. ಬಾಟನಿ ತಜ್ಞರು ಪ್ರಮ್ನಾ ಇಂಟಗ್ರಿಫೋಲಿಯಾ - premnaintegrifolia ಎಂದಿದ್ದಾರೆ.

ಬೇರು ಕಸಿಯಿಂದ ಹೊಸ ಗಿಡ ಉತ್ಪಾದಿಸಬಹುದು. ನರ್ಸರಿಗಳಲ್ಲಿ ಸಿಗುವ ಸಾಧ್ಯತೆಯಿದೆ. ಕುಂಡಗಳಲ್ಲಿ ನೆಟ್ಟು ಸಲಹಬಹುದು.

" ತುಪ್ಪದಲ್ಲಿ ಹುರಿದು,  ತೆಂಗಿನ ತುರಿಯೊಂದಿಗೆ ಅರೆದು,ಮಜ್ಜಿಗೆ ಎರೆದು ತಂಬುಳಿ ಮಾಡಲಿಕ್ಕೂ ಆಗುತ್ತದೆ. " ಗೌರತ್ತೆ ಅಂದರು.

"ಇನ್ನೇನೇನು ಮಾಡಬಹುದು? ಹೇಳಿರಲ್ಲ.. "

" ಬೇರೆಂತದು, ಕೊತ್ತಂಬರಿ ಸೊಪ್ಪಿನ ಹಾಗೆ ಎಲ್ಲ ಅಡುಗೆಗೂ ಹಾಕಿಕೊಳ್ಳಿ.."




Wednesday, 18 March 2020

ಶ್ಯಾವಿಗೆ ಪಾಯಸ







ಸಂಕ್ರಾಂತಿ ಬಂತೆಂದರೆ ಹಬ್ಬದಡುಗೆ, ಪಾಯಸವೊಂದು ಇರಲೇಬೇಕು.

ಹಿರಣ್ಯದ ದುರ್ಗಾಪರಮೇಶ್ವರಿ ದೇಗುಲದಲ್ಲಿ ಮುಂಜಾನೆಯೇ ಪೂಜಾದಿಗಳು ಆರಂಭ, ನನ್ನದು ಮದ್ಯಾಹ್ನದ ಅಡುಗೆಯ ಸುವ್ಯವಸ್ಥೆಯ ಕಾರುಭಾರು.

ನಾಲ್ಕಾರು ಮಂದಿಗೆ ಬಡಿಸಲು ಸಾಕಾಗುವಷ್ಟು ಪಾಯಸ ಮಾಡಬೇಕಿದೆ. ಅನ್ನಸಂತರ್ಪಣೆಯ ಭೂರಿಭೋಜನ ರಾತ್ರಿ ಆಗಮಿಸುವ ಭಕ್ತಾದಿಗಳಿಗೆ, ಅಮ್ಮನ ದರ್ಶನಕ್ಕೆ ಬಂದವರು ಹಾಗೇನೇ ಉಪವಾಸ ತೆರಳಬಾರದೆಂದು ಈ ಕ್ರಮ ನಡೆದುಕೊಂಡು ಬಂದಿದೆ. ಗಣಪಣ್ಣನ ಉಸ್ತುವಾರಿಯಲ್ಲಿ ಅನ್ನದಾನದ ದೊಡ್ಡ ಅಡುಗೆ.

ಪಾಯಸಕ್ಕಾಗಿ ಒಂದು ತೆಂಗಿನಕಾಯಿ, ತುರಿದು, ಅರೆದು ಹಾಲು ತೆಗೆದಿರಿಸುವುದು. ನೀರು ಕಾಯಿಹಾಲು ಕೂಡಾ ತೆಗೆದಿರಿಸುವುದು.

ಒಂದು ಲೋಟ ಶ್ಯಾವಿಗೆ, ನಾನ್ ಸ್ಟಿಕ್ ಬಾಣಲೆಯಲ್ಲಿ ನಸು ಬಣ್ಣ ಬರುವಂತೆ ಹುರಿಯಿರಿ, ತುಪ್ಪ ಹಾಕಿ ಹುರಿಯುವ ಅಗತ್ಯವಿಲ್ಲ, ಕರಟಬಾರದು ಅಷ್ಟೇ. ಶ್ಯಾವಿಗೆಗೆ ತನ್ನದೇ ಸುವಾಸನೆ ಏನೂ ಇಲ್ಲ. ಏಲಕ್ಕಿಯಂತಹ ಸುವಾಸನಾ ದ್ರವ್ಯಗಳನ್ನು ಹಾಕಿದ್ರೇನೇ ಘಮಘಮಿಸುವ ಪಾಯಸ ನಮ್ಮದು.

ಅದೇನೇ ಪದಾರ್ಥ ಮಾಡುವುದಿದ್ದರೂ ಕುಕ್ಕರ್ ನನ್ನ ಆಯ್ಕೆ, ರಗಳೆಯಿಲ್ಲದೆ ಬೇಯಿಸಿ ಕೊಡುತ್ತೆ.

ನೀರು ಕಾಯಿಹಾಲು ಎರೆದು ಕುಕ್ಕರ್ ಒಲೆಗೇರಿತೇ, ಹುರಿದ ಶ್ಯಾವಿಗೆ ಸುರಿಯಿರಿ, ಕುದಿಯುವ ತನಕ ಬಿಡದೆ ಸೌಟಾಡಿಸಿ, ನಂತರ ಕುಕ್ಕರ್ ಮುಚ್ಚಿ ಒಂದು ಸೀಟಿ ಕೂಗಿಸಿ.

ಒತ್ತಡ ಇಳಿದ ನಂತರ ಮುಚ್ಚಳ ತೆರೆಯಿರಿ, ಬೆಂದಿದೆ.

ಒಂದೂವರೆ ಲೋಟ ಸಕ್ಕರೆ ಅಳೆದು ಹಾಕಿರಿ, ಸಕ್ಕರೆ ಕರಗುತ್ತಿರಲಿ.

ಗೋಡಂಬಿ ದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿಯಿರಿ.
ಏಲಕ್ಕಿ ಪುಡಿ ಮಾಡಿಟ್ಟಾಯ್ತೇ,
ಆಯಿತು.

ಈಗ ದಪ್ಪ ಕಾಯಿಹಾಲು ಎರೆದು ಕುದಿಸಿ.
ಏಲಕ್ಕಿ ಹಾಕುವ ಸಮಯ,
ಕೆಳಗಿಳಿಸಿ, ದ್ರಾಕ್ಷಿ ಗೋಡಂಬಿಗಳನ್ನು ಹಾಕುವುದು, ಇಷ್ಟೇ ಹಾಕಬೇಕೆಂಬ ಅಳತೆ ಪ್ರಮಾಣ ಇದಕ್ಕಿಲ್ಲ, ಅಡುಗೆಮನೆಯ ಡಬ್ಬದಲ್ಲಿ ಇದ್ದಂತೆ ಬಳಸಿರಿ.

ಊಟದ ಹೊತ್ತಿಗೆ ಪಾಯಸ ತಣಿಯಿತೇ, ದಪ್ಪ ಹಲ್ವದಂತಾಯ್ತೇ,
ಚಿಂತಿಸದಿರಿ...
ಡೈರಿ ಹಾಲು ಇದೆಯಲ್ಲ,
ಬಿಸಿ ಹಾಲು ಎರೆದು ಪಾಯಸದ ಹದಕ್ಕೆ ತರುವುದು.

ತೆಂಗಿನ ಹಾಲು, ಡೈರಿ ಹಾಲು ಕೂಡಿದ ಪಾಯಸದ ರುಚಿ ಕುಡಿದವರಿಗೇ ಗೊತ್ತು ಕಣ್ರೀ...


Tuesday, 10 March 2020

ಖರ್ಜೂರದ ಬನ್ಸ್




ಹಿರಣ್ಯದ ದೇಗುಲದ ಕಾಮಗಾರಿ ಕೆಲಸದ ಆರಂಭಕ್ಕೆ ಮುಂಚಿತವಾಗಿ ಕಾರ್ಯನಿಮಿತ್ತ ಕೊಲ್ಲೂರಿಗೆ ಹೋಗಬೇಕಾಗಿ ಬಂದಿತ್ತು.

" ಐದು ಗಂಟೆಗೇ ಹೊರಡಬೇಕು, ತಿಂಡಿತೀರ್ಥ ದಾರಿಮಧ್ಯೆ ಹೋಟಲ್ ಸಿಕ್ಕಾಗ, ತಿಳಿಯಿತಲ್ಲ. "

ಪ್ರಶ್ನಿಸುವಂತಿಲ್ಲ, ದೇವರ ಕೆಲಸ ಅಲ್ವೇ, ಕೊಲ್ಲೂರಿಗೆ ಹೋಗಿ ಬಂದು ಅಭ್ಯಾಸ ಆಗ್ಬಿಟ್ಟಿದೆ ಅನ್ನಿ.

ಹೋಗುತ್ತಾ ವಿಟ್ಲದಲ್ಲಿ ಬಾಲಕೃಷ್ಣ ಶೆಟ್ಟಿ ಸೇರಿಕೊಂಡ. ಸಾರಥಿ ಸೀಟು ಅವನದಾಯಿತು. ಮಂಗಳೂರು ಸಮೀಪ ಸತ್ಯನಾರಾಯಣ ಭಟ್ರೂ ಹತ್ತಿದಾಗ ಕಾರು ಹೌಸ್ ಫುಲ್ ಆಯ್ತು.

ಮುಂಜಾನೆಯ ತಿಂಡಿಗಾಗಿ ಪಡುಬಿದ್ರಿಯಲ್ಲಿ ಕಾರು ನಿಂತಿತು, ಆಗಲೇ ಗಂಟೆ ಹತ್ತು ದಾಟಿತ್ತು.

ಹೋಟಲ್ ಒಳಗೆ ಟೇಬಲ್ ಮುಂದೆ ಆಸೀನರಾದಾಗ, " ನಂಗೆ ಮನೇಲಿ ದಿನಾ ಮಾಡುವ ದೋಸೆ ಇಡ್ಲಿ ಬೇಡ..."

ನನಗಾಗಿ ಎರಡು ಪ್ಲೇಟು ಬನ್ಸ್ ಹಾಗೂ ಗರಿಗರಿ ಉದ್ದಿನ ವಡೆ ಬಂದಿತು.

ಮಕ್ಕಳೆಲ್ಲ ಬೆಂಗಳೂರು ಸೇರಿದ ನಂತರ ಎಣ್ಣೆಯಲ್ಲಿ ಕರಿದ ತಿಂಡಿ ಮನೆಯಲ್ಲಿ ಮಾಡುವ ರೂಢಿ ತಪ್ಪಿ ಹೋಗಿದೆ. ಬನ್ಸ್ ತಿನ್ನುವಾಗ ಮನೆಯ ಪುಟ್ಟ ನಾಯಿಮರಿಯ ನೆನಪಾಗಿ, ನಾಯಿಗಾಗಿ ಬನ್ಸ್ ಮಾಡಬೇಕೆಂಬ ವಾಂಛಲ್ಯ ಹುಟ್ಟಿತು. ಅನ್ನ ತಿನ್ನಲೊಲ್ಲದ ನಾಯಿಗಾಗಿ ಮೂರು ಹೊತ್ತೂ ದೋಸೆ ತೆಳ್ಳವು ಎರೆಯಬೇಕಾದ ಪಾಡು ನನ್ನದು. ಒಂದು ಡಬ್ಬ ತುಂಬ ಬನ್ಸ್ ಮಾಡಿಟ್ಟುಕೊಳ್ಳೋಣ.

ಹೋಟಲ್ ಬನ್ಸ್ ಚೆನ್ನಾಗಿತ್ತು, ಬಾಳೆಹಣ್ಣಿನ ಪರಿಮಳ ಬರುತ್ತಲೂ ಇತ್ತು.





ಬಿಡುವು ದೊರೆತಾಗ ಬನ್ಸ್ ನೆನಪಾಯ್ತು, ಆದ್ರೆ ಬಾಳೆಹಣ್ಣು ಇರಲಿಲ್ಲ. ಖರ್ಜೂರ ಇದೆ, ಅದನ್ನೇ ಪ್ರಯೋಗ ಮಾಡೋಣ. ಹೊಸರುಚಿ ಸಿಕ್ಕಿದ ಹಾಗೂ ಆಯ್ತು.

ಖರ್ಜೂರದ ಬನ್ಸ್ ಮಾಡಿದ್ದು ಹೇಗೆ?

15 ಖರ್ಜೂರಗಳ ಬೀಜ ಬಿಡಿಸಿ, ಮುಳುಗುವಷ್ಟು ಕುದಿ ನೀರು ಎರೆದು ಮುಚ್ಚಿ ಇರಿಸುವುದು.
ಅರ್ಧ ಗಂಟಿಯ ನಂತರ ಕೈಯಲ್ಲೇ ಹಿಸುಕಿ ಮೆತ್ತಗಾಗಿಸಿ.
2 - 3 ಚಮಚದಷ್ಟು ಹುಡಿ ಮಾಡಿದ ಬೆಲ್ಲ,
ರುಚಿಗೆ ಸೂಕ್ತವಾಗುವಷ್ಟು ಉಪ್ಪು,
ಸುವಾಸನೆಗೆ ಜೀರಿಗೆ,
ಅಲಂಕರಣಕ್ಕಾಗಿ ಎಳ್ಳು,
ಅರ್ಧ ಲೋಟ ಮೊಸರು
ಎಲ್ಲವೂ ಖರ್ಜೂರದೊಂದಿಗೆ ಸೇರಲಿ.

ಈಗ 3 ಲೋಟ ಗೋಧಿಹುಡಿ ಅಳೆಯಿರಿ.
1 ಲೋಟ ತಣ್ಣೀರು ಪಕ್ಕದಲ್ಲಿರಲಿ.

ಖರ್ಜೂರದ ಮಿಶ್ರಣವನ್ನು ಗೋಧಿಹುಡಿಗೆ ಬೆರೆಸಿಕೊಳ್ಳಿ.
ಕಲಸಿ, ನೀರು ತುಸು ತುಸುವೇ ಹಾಕುತ್ತ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ತನ್ನಿ. ಚೆನ್ನಾಗಿ ನಾದಿ, ಮುಚ್ಚಿ ಇರಿಸಿ.

ಸಂಜೆಯ ತಿನಿಸು ಆಗಬೇಕಿದ್ದರೆ ಮುಂಜಾನೆ ಕಲಸಿ ಇಟ್ಟರಾಯಿತು. ಮುಂಜಾನೆಗೊಂದು ತಿಂಡಿ ನಿಮ್ಮದಾಗಬೇಕಿದ್ದರೆ ರಾತ್ರಿ ಕಲಸಿ ಇಟ್ಟರೆ ಸರಿ ಹೋದೀತು.
ನಾನು ಸೋಡಾ ಹುಡಿ ಯಾ ಬೇಕಿಗ್ ಪೌಡರ್ ಬಳಸಿಲ್ಲ.

ದೊಡ್ಡ ಲಿಂಬೆಗಾತ್ರದ ಉಂಡೆ ಮಾಡಿ ಇಟ್ಕೊಳ್ಳಿ,
ಗೋಧಿಹುಡಿಯಲ್ಲಿ ಹೊರಳಿಸಿ,
ಲಟ್ಟಣಿಗೆಯಲ್ಲಿ ಮೆತ್ತಗೆ ಆಡಿಸಿ,
ತೆಳ್ಳಗೆ ಮಾಡೇಕಿಲ್ಲ,
ಅಂಗೈಯಲ್ಲಿ ತಟ್ಟಿದರೂ ಸಾಕು.


ಈ ಹೊತ್ತಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿಯಾಗುತ್ತಲಿರಬೇಕು.
ಒಂದೊಂದೇ ಬನ್ಸ್ ಕರಿದು ತೆಗೆಯಿರಿ.

ಸೂಕ್ತವಾಗುವಂತಹ ಚಟ್ಣಯಲ್ಲಿ ಹೊರಳಿಸಿ ತಿನ್ನಿ.
ಮಕ್ಕಳಿಗೆ ಪ್ರಿಯವಾದ ತಿಂಡಿ ಇದು, ತುಸು ಜಾಸ್ತಿ ಮಾಡಿದ್ರೂ ತೊಂದರೆಯಿಲ್ಲ. ನಮ್ಮ ನಾಯಿಮರಿಯಂತೂ ಕುಣಿಕುಣಿದು ತಿಂದಿತು.

ಇನ್ನೂ ನಾಲ್ಕು ಉಂಡೆಗಳ ಹಿಟ್ಟು ಇದೆ, ತೆಳ್ಳಗೆ ಲಟ್ಟಿಸಿ ಚಪಾತಿಯಂತೆ ಬೇಯಿಸೋಣ. ಎಣ್ಣೆಯಲ್ಲಿ ಕರಿದ ತಿಂಡಿ ಬೇಕಿಲ್ಲದವರಿಗೆ ಖರ್ಜೂರದ ಪರೋಟಾ ಎಂದು ತಿನ್ನಲಡ್ಡಿಯಿಲ್ಲ.